ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಸೊಳ್ಳೆ ನನಗೆ ಒಳ್ಳೆ ಫ್ರೆಂಡು ಆಗ್ಯಾದ…

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.

ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ‌ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…

ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ‌ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ‌ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ‌ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ…

7

ಮೊನ್ನೆ ಬಾತರೂಮನಲ್ಲೂ ಅಷ್ಟೆ ಕೆಂಪು ಕಣಜ ಅದೆ ನಾವೆಲ್ಲ ಕಡತರಹುಳ ಅಂತಿವೆಲ್ಲ ಎಷ್ಟೊಂದು ಚಂದ ಗೂಡು ಕಟ್ಟುತ್ತಿತ್ತು. ಕಿಡಿಕಿಯಿಂದ ಒಳಗೆ ಬಂದು ಲೈಟಿನ ಮೇಲೆ ತಾನು ಬಾಯಲ್ಲಿ ಹೊತ್ತು ತಂದ ಮಣ್ಣು ಕಸವನ್ನು ಬಾಯಿ ಮೂಲಕ ಹೊರ ಹಾಕಿ. ಹಿಂದೊಮ್ಮೆ ಕಟ್ಟಿದ್ದಾಗ ಅಪ್ಪ ಕಿತ್ತಿ ಹಾಕಿದ್ದಕ್ಕೆ ಬೇಜಾರಾಗಿತ್ತು. “ಅದಕ್ಕೂ ಬದುಕು ಇಲ್ಲೇನು?. ಇಷ್ಟು ದೊಡ್ಡ ಮನೇಲಿ ಅದಕ್ಕೊಂದು ಪುಟ್ಟ ಜಾಗ ಕೊಡಕಾಗಲ್ವೇನು?” ಎಂದು ಜಗಳಾಡಿದ್ದೆ. ನಾಲ್ಕು ದಿನದಿಂದ ನಾನು ತಾಸು ಗಟ್ಟಲೆ ಟ್ವಾಯಲೆಟ್ ನಲ್ಲಿ ಇರೋದನ್ನು ನೋಡಿ ಅನುಮಾನಗೊಂಡು “ಯಾಕ ಸಮು, ತಾಸುಗಟ್ಟಲೆ ಒಳಗೆ ಹೊದರೆ ಹೊರಗೆ ಬರಲ್ಲ ಅಮ್ಮ ಹೇಳುತ್ತಿದ್ದಾರೆ….ನಿಜನಾ?” ಅಂದಾಗ ಏನೂ ಮಾತಾಡಕಾಗಲಿಲ್ಲ. ನಾನು ಸುಮ್ಮನಿದ್ದನ್ನು ನೋಡಿ “ಏನಾದ್ರೂ ತೊಂದರೆ ಆಗ್ತಿದಿಯಾ…? ಹೇಳಲಾರದ ಸಮಸ್ಯೆ ಇದೆಯಾ..? ಡಾಕ್ಟರ್ ಹತ್ರ ಹೋಗೋಣ ಅವರ ಮುಂದೆ ಹೇಳುವಂತಿ” ಎಂದು ಕೇಳಿದಾಗ ಬಿದ್ದು ಬಿದ್ದು ಬಿದ್ದು ನಕ್ಕು “ಅಂತಾದ್ದು ಏನೂ ಇಲ್ಲ, ಎಷ್ಟು ಗಾಬರಿ ಆಗಿರಿ” ಎಂದು ನಡೆದುದ್ದನ್ನೆಲ್ಲ ಹೇಳಿದ್ದೆ. “ಅಪ್ಪ, ಅದು ಎಷ್ಟು ಚಂದ ಕಟ್ಟುತ್ತಂತಿ….ದಿನಾ ಬೆಳ್ಳಿಗೆ ನಾನು ಒಳಗೆ ಹೋದಾಗನ ಬರುತ್ತದೆ. ಇಷ್ಟಿಷ್ಟು ಬಾಯಲ್ಲಿ ಹೊತ್ತು ತಂದು ಕೆಸರಿನಂತ ವಸ್ತುವನ್ನು ಬಾಯಲ್ಲಿ ಬಿಟ್ಟು ಗುಡ್ಡೆ ಹಾಕುತ್ತದೆ.. ಅಪ್ಪ ಇವತ್ತು ಎಷ್ಟು ದೊಡ್ಡದು ಮಾಡಿದೆ ಗೊತ್ತಾ? ನನಗೆ ಒಳ್ಳೆ ಫ್ರೆಂಡು ಆಗ್ಯಾದ” ಎಂದ.

“ಅದೆಂಗೆ ಫ್ರೆಂಡ್ ಆಗುತ್ತಾ ಅದೇನು ನಿನ್ನ ಹತ್ರ ಮಾತಾಡುತ್ತಾ..ಅಂದೆ ಅಪ್ಪ ಕೇಳಿದ್ದ”…..ಹೌದು ನೋಡಿ ಈಗ ಸೊಳ್ಳೆ ಮೂಲಕ ನಿಜ ಅನಸ್ತಿದೆ. ನಾನು ಅಪ್ಪಗ “ನೀವು ಕೂತಾಗ ಬಾರದ್ದು ನಾನು ಕುಳಿತಾಗನ ಯಾಕ ಬರಬೇಕು. ಅದರರ್ಥ..ನಾನು ಒಳ್ಳೆಯವನು ಏನೂ ಮಾಡಲ್ಲ ಅಂತಾನಾ… ಅಲ್ವೇ? ದಿನಾಲೂ ನನ್ನ ನೋಡುತ್ತೆ…ಒಂದು ರೌಂಡು ಸುತ್ತುತ್ತೆ…ಅದರ ಪಾಡಿಗೆ ಅದು ಕಟ್ಟುತ್ತಾ ಕುಳಿತುಕೊಂಡಿರುತ್ತೆ.. ಆಗಾಗ ನನ್ನ ಕಡೆ ನೋಡಿ ತನ್ನ ಹಿಂಬದಿಯನ್ನು ಅಲ್ಲಾಡಸಿ ಅಲ್ಲಾಡಿಸಿ ತೋರಿಸುತ್ತಿರುತ್ತದೆ..ಗೊತ್ತಾ” ಎಂದೆ. “ನೀನು ಏನು ಹೇಳ್ತಿಯೋ? ಏನೊ? ಅದು ನಿನಗ ಚಂದ. ಆಯ್ತು ಆಯ್ತು ಬೇಡ ಅಂದ್ರೆ ಎಲ್ಲಿ ಕೇಳತಿಯಾ? ಅದು ಒಳ್ಳೆಯದಲ್ಲೊ” ಎಂದಿದ್ರು “ಕೀಟಪ್ರೀತಿ ಬೇಕಪ್ಪ” ಎಂದು ಮಮತೆ ತೋರಿದ್ದೆ.

ಮರುದಿನ ಬೆಳಿಗ್ಗೆ ಹೋದಾಗ ಗೂಡು ದೊಡ್ಡದಾಗಿತ್ತು.. ಅರ್ಧ ತಾಸು ಕುಳಿತಾಗ ಅದರೊಳಗಿಂದ ಐದಾರು ಮರಿ ಕಣಜಗಳು ಹೊರಬಂದು ಹಾರಾಡ ಹತ್ತಿದವು. ನಾನೇನೊ ಏನು ಮಾಡತಿವೆ ನೋಡೋಣ ಎಂದು ನೋಡುತ್ತಾ ಕುಳಿತಿದ್ದೆ… ಅದರಲ್ಲಿಯ ಒಂದು ಹುಳ ನನ್ನ ನೋಡಿತೊ ಅಥವಾ ನಾನು ನೀರಿನೊಂದಿಗೆ ಆಡುವಾಗ ಅದರ ಮೇಲೆ ನೀರು ಬಿದ್ದವೊ ಗೊತ್ತಾಗಲಿಲ್ಲ…ಯೋಚಿಸುವ ಮನ್ನವೆ ಬಂದು ಕಚ್ಚೆಬಿಟ್ಟಿತು. ಎಂತಹ ನೋವು ‘ಅಮ್ಮಾ…’ ಎಂದು ಚೀರಿ ಹಾಗೆ ಓಡಿ ಬಂದಿದ್ದೆ… ಆರ್ಕಿಮಿಡಿಸ್ ಬಂದ ಹಾಗೆ…ಅಕ್ಕ ನನ್ನ ಗೊಮ್ಮಟನ ಅವತಾರ ನೋಡಿ ‘ಶೇಮ್ ಶೇಮ್ ಪಪ್ಪಿ ಶೇಮ್ ಶೇಮ್ ಶೇಮ್ ಪಪ್ಪಿ ಶೇಮ್’ ಎಂದು ಕೂಗಿದ್ದಲ್ಲದೆ ಮೊಬೈಲ್‌ನಲ್ಲಿ ಫೊಟೊ ಹೊಡೆದುಬಿಟ್ಟಿದ್ದಳು. ನಾನು ಅದು ಕಡಿದದ್ದಕ್ಕೆ ತತ್ತರಸ್ತಿದ್ದರೆ ಅವಳು ನನ್ನ ಅವತಾರ ನೋಡಿ ನಗುತ್ತಿದ್ದಳು, ‘ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ’ ಅನ್ನುವಾಂಗ…. ಅಪ್ಪಗ ಹೇಳಿದೆ “ ನನ್ನ ಮಾತು ಕೇಳಿದ್ಯಾ? ಅನುಭವಿಸಪಾ?’ ಎಂದು ಬಯ್ದ. ಅಮ್ಮಗೂ ಹೇಳಿದಾಗ ಬೈಯಲು ಬಂದಳು. ‘ನೀನು ಬೈತಿಯಾ? ಅಕ್ಕಗ ಆದ್ರ ರಮಸ್ತಿರಿ, ನನಗಾದ್ರ ಬೈತಿರಿ..ಊಂ..ಊ೦’ ಎಂದು ಅತ್ತಿದ್ದೆ. ಅಮ್ಮ ‘ಇಲ್ಲ ಬಿಡು ಸಮು, ಕೆಸರು ಹಚ್ಚಿಕೊ ಇಲ್ಲ ಒಳ್ಳೆಣ್ಣೆ ಹಚ್ಚಿಕೊ” ಎಂದು ರಮಿಸಿದ್ದಳು. ನೋವು ಅಂತ ಅಳುತ್ತಾ ಕುಳಿತಾಗ “ಅದು ಆಂಟಿ ಬ್ಯಾಟಿಕ್ ಇದ್ದಂಗ ಏನೂ ಸಮಸ್ಯೆ ಆಗಲ್ಲ ಒಂದು ಇಂಜೆಕ್ಷನ್ ಪವರ್” ಅಂತ ಹೇಳಿ ನಕ್ಕಿದ್ಲು.
“ಹಾಂಗಾದ್ರ ಆಸ್ಪತ್ರಗೆ ಹೋಗೋದ ಬ್ಯಾಡ ಇಂತವುಗಳಿ೦ದ ಕಚ್ಚಿಸಿಕೊಂಡು ಬಿಟ್ರಾ ದವಾಖಾನಿಗೆ ಹೋಗೋದ ತಪ್ಪುತ್ತದ” ಎಂದಾಗ ನನ್ನ ಮಾತಿಗೆ ನಕ್ಕಿದ್ದರು. ‘ಆದರೂ ನಿನ್ನ ಫ್ರೆಂಡು ಭಾರಿ ಬಿಡು ನಿನ್ನ ಕಚ್ಚದೆ ಬಿಡಲಿಲ್ಲ’ ಎಂದು ಆಗಾಗ ಎಲ್ಲರೂ ರೇಗಿಸುತ್ತಿದ್ದರು.

ಮನೆಮುಂದೆ ಜೇನು ಇಟ್ಟಾಗಲೂ ಗಿಡಕ್ಕೆ ಮರೆಮಾಡಿ ಉಳಿಸಿಕೊಂಡಿದ್ದೆ.. ಅವುಗಳೊಂದಿಗೂ ‘ಎಷ್ಟೆಲ್ಲ ಮಾತಾಡಬೇಕು ನಿಮ್ಮ ಜೀವನ ಹೇಗೆ ನಡಸ್ತಿರಿ’ ಅಂತ ಕೇಳಬೇಕೆನಿಸಿದ್ರೂ ಯಾವವು ಮಾತಾಡಿರಲಿಲ್ಲ. ಆದರೂ ಚಂದನೆಯ ಗೂಡನ್ನು ಕಟ್ಟೋದನ್ನು ಕಣ್ಣಾರೆ ಕಂಡು ನಿತ್ಯ ಸಂತೋಷ ಪಡತಿದ್ದೆ. ನಾನೇ ಏನೇನೊ ಕಲ್ಪಿಸಿಕೊಂಡು ಖುಷಿ ಪಡತ್ತಿದ್ದೆ. ನೋಡಿದಾದ ಮೇಲೆ ಅದಕ್ಕೆ ಅಡ್ಡವಾಗಿ ಬಟ್ಟೆ ಹಾಕಿ ಬರುತ್ತಿದ್ದರಿಂದ ಯಾರಿಗೂ ಕಾಣುತ್ತಿರಲಿಲ್ಲ. ಅಷ್ಟು ಚಂದವಾಗಿ ಯಾರಿಗೂ ಕಾಣದೆ ಇಟ್ಟಿದ್ದ ಜೇನನ್ನು ಯಾರೊ ನೋಡಿ ಬಿಟ್ಟಿದ್ದರು, ನಾನು ಶಾಲೆಗೆ ಹೋಗಿ ಬರೊದ್ರೊಳಗೆ ಎಲ್ಲರು ಮನೆಯವರಿಗೆ ಹಿಡಿ ಶಾಪ ಹಾಕಿ ಬೈತಿದ್ರು, ಏನೆಂದು ನೋಡಿದಾಗ ಜೇನು ಅವರಿಗೆಲ್ಲ ಕಡಿದು ಗಾಯ ಮಾಡಿತ್ತು. “ಮನಿಮುಂದ ಹಸಿರು ಕಾಣಲಿ, ಮನಸ್ಸು ತಂಪಿರಲಿ ಎಂದು ನಮ್ಮ ಅನುಕೂಲಕ್ಕಾಗಿ ಗಿಡ ಬೆಳೆಸಿದ್ದು” ಎಂದು ಅಪ್ಪ ವಾದಸ್ತಿದ್ರು.
“ಗಿಡ ಬೆಳಸ್ರಿ ಆದ್ರ ಓಣ್ಯಾಗ ಜೇನು ಬೆಳಸಿದ್ರ ಕಚ್ಚೊಲ್ಲೇನ್ರಿ?” ಎಂದು ಜಗಳ ತೆಗೆದಿದ್ದರು.

“ನೀವು ಇಲ್ಯಾಕ ಬರಕ ಹೋಗಿದ್ರಿ..ನಾನು ಇಷ್ಟು ಜೇನು ಇಟ್ಟಿದ್ದ ನೊಡಿಯೇ ಇಲ್ಲ. ಇದ್ರ ನಮ್ಮ ಮನೇಲಿ ಇರುತಿತ್ತು. ಕೈ ಹಾಕಿ ಬಿಡಿಸಿ ಅಂತ ಹೇಳಿದ್ದೆನಾ..ಬಿಡಸಾಕ ಹೋಗಿರಿ ಕಡಿಸಿಕೊಂಡಿರಿ” ಎಂದು ಬಯ್ಯುತ್ತಿದ್ದ.
ನಾನು ಬಂದ ಮೇಲೆ “ನಿನ್ನದೆನೊ ಕಿತಾಪತಿ?” ಎಂದು ಕೇಳಿದಾಗ ಬಾಯಿ ಬಿಟ್ಟೆ.
ಚೆನ್ನಾಗಿ ಬೈದರು. ನಾನು “ಜೇನು ಎಲ್ಲರಿಗೂ ಕಚ್ಚಿವೆ, ನಿಮಗೆ ಕಚ್ಚಿವೆನಾ? ಎಂದೆ
“ಇಲ್ಲಲ”
“ಅವು ಎದ್ದಾಗ ಎಲ್ಲಿದ್ದೀರಿ?”
“ಅಲ್ಲೆ ಇದ್ವಿ”
“ಅವುಗಳೊಂದಿಗೆ ಮಾತಾಡಿ ಅವುಗಳಗೆ ಜಾಗ ಕೊಟ್ಟಿದ್ದೆ. ನೀವು ಒಳ್ಳೆಯವರು ನಮಗೇನೂ ತೊಂದರೆ ಕೊಡಬಾರದು. ಆರಾಮಾಗಿರಿ” ಅಂತ ಹೇಳಿದ್ದೆ ಎಂದಾಗ
“ಹೌದಲ್ಲ..ಏನು ಆಶ್ಚರ್ಯ, ನಮ್ಮ ಮುಂದೆ ಅವು ಓಡಾಡುತ್ತಿದ್ದರೂ ನಮಗೆ ಕಚ್ಚಲೆ ಇಲ್ಲ” ಎಂದು ಅಚ್ಚರಿಪಟ್ಟಿದ್ದರು.

ನನಗೆ ಗೆಳೆಯರಿಗಿಂತ ಪ್ರಾಣಿ,ಪಕ್ಷಿ, ಕೀಟ ಪ್ರಪಂಚನೆ ಇಷ್ಟ. ಅವುಗಳ ನೋಡತಾ ಕಾಲ ಕಳಿಯೋದಂದ್ರ ಖುಷಿ. ಒಂದು ಸಾರಿ ಮೀನಿನ ಜೊತೆ ಮಾತಡಬೇಕೆಂದು ಪ್ರಯತ್ನಿಸಿದೆ ಆಗಲಿಲ್ಲ. ಗೆಳೆಯರು ಕಟ್ಟಿಗೆ ಗಾಳ ಮಾಡಿ ಅದಕ್ಕ ಮಳೆಹುಳ ಚುಚ್ಚಿ ನೀರಲ್ಲಿ ಬಿಡತಾರಲ್ಲ ಹಾಗೆ ಮಾಡಿ ಮಾತಾಡಸೋಕೆ ಪ್ರಯತ್ನ ಮಾಡಿದೆ. ಪಾಪ ಮಳೆ ಹುಳ ಒದ್ದಾಡತಿದ್ರೂ ಅದನ್ನು ತಂತಿಗೆ ಚುಚ್ಚಿದ್ದೆ. ಅದನ್ನು ನೀರಾಗ ಬಿಟ್ಟಾಗ ಅದನ್ನು ತಿನ್ನಲು ಬಂದ ಮೀನು ಸಿಕ್ಕಿಬಿದ್ದು ಎತ್ತಿದಾಗ ಗಾಳಕ್ಕೆ ಸಿಕ್ಕಿಬಿದ್ದು ‘ವಿಲಿವಿಲಿ’ ಒದ್ದಾಡುತ್ತಿದ್ದುದನ್ನು ನೋಡಿ ‘ಅಯ್ಯೊ ತಪ್ಪು ಮಾಡಿಬಿಟ್ಟೆ’ ಎನಿಸಿತ್ತು. ಮನೆಯಲ್ಲಿ ಹೋಗಿ ಹೇಳಿ ಬಯಸಿಕೊಂಡಿದ್ದೆ ಕೂಡಾ. “ಅಯ್ಯೊ ಮುಂಡೆಗ೦ಡ ಮೀನನ್ನ ಮುಟ್ಟಿ ಕುಲಗೆಟ್ಟುಬಿಟ್ಟೆಯಲ್ಲೊ…ಇವನನ್ನ ಹೊರಗ ನೀರು ಹಾಕಿ, ಸ್ನಾನಮಾಡ್ಸಿ ಒಳಗ ಕರಕೊಳ್ರೊ” ಎಂದು ಅಜ್ಜಿ ಚೀರಾಡಿದ್ದಳು. “ಅಜ್ಜಿ ಮುಟ್ಟಿಲ್ಲ ಅಷ್ಟ ತಿಂದು ಕೂಡಾ ಬಂದಿದ್ದಾನೆ” ಎಂದು ಹೇಳಿ ಅಕ್ಕ ರಂಪ ಮಾಡಿಸಿದ್ದಳು. ಅಳುತ್ತಾ ನಾನು ಕುಳಿತಾಗ “ನಿನಗೆ ಜ್ವರ ಬಂದಾಗ ಕೊಡುವ ಔಷಧ ಮೀನೆಣ್ಣಿದು” ಎಂದು ತೋರಿಸಿ ಮತ್ತೆ ರೇಗಿಸಿದ್ದಳು.

ಇನ್ನೂ ನಮ್ಮ ಓಣಿಯ ಮಕ್ಕಳಿಗೆಲ್ಲ ತೊಂಡೆಕಾಟನ ರೇಗಿಸುವುದೆಂದರೆ ಖುಷಿ. ಉಡುವಿನಂತಹ ಒಂದು ಬಗೆಯ ಸಣ್ಣ ಪ್ರಾಣಿ, ಓತಿಕಾಟಕ್ಕೆ ನಮ್ಮ ಕಡೆ ತೊಂಡೆಕಾಟ ಎಂದು ಕರಿಯುತ್ತಾರೆ. ಬಣ್ಣಬದಲಿಸುವ ಊಸರವಳ್ಳಿಯ ಜಾತಿಯದಾದರೂ ಅದರಷ್ಟು ಡೇಂಜರ್ ಅಲ್ಲ. ನಾನು ಹಾಗೆ ಮಾಡುವುದು ಬೇಡ ಅನ್ನುತ್ತಿದ್ದರೂ ಕೇಳುತ್ತಿರಲಿಲ್ಲ. ಆ ತೊಂಡಕಾಟಗಳನ್ನು ಹಿಡಿದು ಅದನ್ನು ಕಟ್ಟಿ ಅದರ ಬಾಯೊಳಗೆ ಯಾರೊ ಸೇದಿ ಬಿಟ್ಟ ಚುಟ್ಟಾ ಬಿಡಿಯನ್ನು ಹಚ್ಚಿ ಇಟ್ಟರೆ ಅದು ಉಸಿರು ತೆಗೆದಕೊಂಡು ಹೊಗೆ ಬಿಡುತ್ತಿತ್ತು. ‘ಅದು ನೋಡ್ರೋ ಹೇಗೆ ಸೇದುತಿದೆ’ ಎಂದು ಖುಷಿ ಪಡತಿದ್ರು. ಅದು ಭಯದಿಂದ ಏದುಸಿರು ಬಿಡುತ್ತಿದ್ದಕ್ಕೆ ಭಯವಾಗುತ್ತಿತ್ತೊ ಗೊತ್ತಿರಲಿಲ್ಲ. ಇನ್ನು ಈ ಚಿಟ್ಟೆಗಳನ್ನು ಕಂಡ್ರೆ ಅವರಿಗೆ ಚೆಲ್ಲಾಟ. ನಾನು ಬಣ್ಣಗಳನ್ನು ನೋಡಿ ಸಂಭ್ರಮಸ್ತಿದ್ರೆ ಅವರು ಅದರ ರೆಕ್ಕೆಗಳನ್ನು ಕಿತ್ತಿ ಸಂಭ್ರಮಿಸೋರು. ‘ಚಿಟ್ಟೆ ಚಿಟ್ಟೆ ಎಲ್ಲಿಗೆ ಹೊಂಟೆ ನಾನು ಬರುವೆ ನಿನ್ನ ಜೊತೆ ನನಗೂ ನಿನ್ನ ರಂಗಿನ೦ಗಿ ಉಡಿಸು’ ಅಂತ ಅದರ ಹಿಂದೆ ಒಡುತಿದ್ರೆ ಅವರೆಲ್ಲ ಗಿಡ ಕಿತ್ತಿಕೊಂಡು ಬಂದು ಅದನ್ನ ಸಾಯಸಲಿಕ್ಕೆ ಯತ್ನಿಸೋರು.

ಹಾವುರಾಣಿನೂ ಅಷ್ಟೆ, ಅದನ್ನು ಮುಟ್ಟಿದರೆ ದುಡ್ಡು ಸಿಗುತ್ತೆ ಅಂತ ಹೇಳುತ್ತಿದ್ದರು. ಹಾವುರಾಣಿ ಅಂದ್ರೆ ಏನೂ ಅಂತ ಸೈನ್ಸ್ ಸರ್ ಹೇಳಿದ ಮೇಲೆ ಗೊತ್ತಾಗಿದ್ದು. ಡಾರ್ವಿನ್ ಸಿದ್ದಾಂತದ ಪ್ರಕಾರ ಅದು ಹಾವಿನ ಜಾತಿಯ ಕಾಲುಗಳನ್ನು ಉಳಿಸಿಕೊಂಡಿರುವ ಏಕೈಕ ಜೀವಿ ಎಂದು. ಆದರೆ ಅದು ಹಾನಿಕಾರಕವಲ್ಲವಂತೆ. ಅದೇನೊ ಗೊತ್ತಿಲ್ಲ ದುಡ್ಡ ಸಿಗುವ ಆಸೆಗಾಗಿ ಅದನ್ನು ಮಟ್ಟಲು ಎಲ್ಲರೂ ಯತ್ನಿಸುತ್ತಿದ್ದೆವು. ನಾನು ಮಾತಾಡಿದ್ರೆ ಸ್ವಲ್ಪ ಜಾಸ್ತಿಯೆ ಸಿಗುವ ಹಾಗೆ ಮಾಡಪ್ಪ ನನ್ನಪ್ಪನ ಕಷ್ಟಗಳು ತೀರಲಿ ಎಂದು ಕೇಳಿಕೊಂತಿದ್ದೆ. ದುಡ್ಡೆನೊ ಸಿಕ್ಕವು ಒಮ್ಮೆ ಅದು ಮನೆಯೊಳಗೆ..ಏನು ಮಾಡೊದು?

ಏನೆಲ್ಲಾ ಪ್ರಾಣಿಗಳ ಜೊತೆ ಎಷ್ಟು ಮಾತಾಡಲಿಕ್ಕ ಪ್ರಯತ್ನಿಸಿದರೂ ನನ್ನ ಅರ್ಥ ಮಾಡಿಕೊಳ್ಳಿಕ್ಕೆ ಪ್ರಯತ್ನಿಸಿದ್ದು ಒಂದು ಪುಟ್ಟ ನಾಯಿ. ಆಕಸ್ಮಿಕವಾಗಿ ತಪ್ಪಿಸಿಕೊಂಡು ಹಸಿವಿನಿಂದ ಕಂಗೆಟ್ಟಿದ್ದ ನಾಯಿಗೆ ಸ್ವಲ್ಪ ಹಾಲು ಬ್ರೆಡ್ ಹಾಕಿದ್ದೆ ಎಷ್ಟು ನನ್ನನ್ನ ಹಚ್ಚಿಗೊಂಡು ಬಿಟ್ಟಿತ್ತು. ನಾನು ಕರದು ಕೂಡಲೇ ಓಡಿ ಬರೋದು. ಬಾಲ್ ಒಗೆದು ಕೂಡಲೆ ಚಂಡು ತೆಗೆದುಕೊಂಡು ಬರೋದು, ಥ್ಯಾಂಕ್ಸ ಕೊಡೊದು. ಕಣ್ಣು ಮುಚ್ಚು ಅಂದ್ರ ಮುಚ್ಚಿಕೊಳ್ಳೊದು. ‘ನಾನು ಓದುವುದು ಇದೆ, ನೀನು ರೆಸ್ಟು ಮಾಡು’ ಅಂದ್ರ ನನ್ನ ನೋಡುತ್ತಾ ದೂರ ಹೋಗಿ ಮಲಗಿಕೊಳ್ಳೊದು. ಎಲ್ಲೆಲ್ಲೋ ಮಲಮೂತ್ರ ಮಾಡತಿರಬೇಕಾದ್ರೆ ಒಮ್ಮೆ ಬಯ್ದು ಇಲ್ಲೆ ಮಲಮೂತ್ರ ಮಾಡಬೇಕೆಂದು ತೋರಿಸಿ ಬಂದಿದ್ದೆ. ಪಾಪ! ಅಂದಿನಿ೦ದ ಅದು ಹಾಗೆ ಮಾಡತಿತ್ತು. ನಾವು ಶಾಲೆಗೆ ಹೋದಾಗ ಓಣಿಯ ಹುಡುಗರ ಕಟಕಟಿಗೆ ದೂರ ಎಲ್ಲೋ ಹೋಗಿರುತ್ತಿತ್ತು.

ನಾವು ಶಾಲಿಯಿಂದ ಬಂದೋಡನೆ ಮತ್ತೆ ಖುಷಿಖುಷಿಯಾಗಿ ಓಡಿ ಕಾಲಲ್ಲಿ ಬಂದು ಚಿನ್ನಾಟ ಆಡುತ್ತಿತ್ತು. ಹಾಲು ಕುಡಿಯುವಾಗ ಸಣ್ಣ ಪಾತ್ರೆಯಲ್ಲಿ ಅದಕ್ಕೂ ಹಾಕಿದ್ರೆ ‘ಲೋಚಕ್..ಲಫಚಕ್..’ ಎಂದು ನೆಕ್ಕೋದು, ’ಕರ್ ಕರ್’ ಎಂದು ಬೀಸ್ಕೋಟ್ ತಿನ್ನೋದು..ರೊಟ್ಟಿ ಹಾಕಿದಾಗ ನಾವು ತಿನ್ನುವ ಹಾಗೆ ‘ಕಟಕ್ ಕಟಕ್; ಅಂತ ಕಡಕೋತ ತಿನ್ನುತ್ತಿತ್ತು. ಆದರೆ ನಾಯಿ ಸಾಕೋದು ಅಜ್ಜಿಗೆ ಒಂದಿಷ್ಟು ಇಷ್ಟವಿರಲಿಲ್ಲ. ನಮ್ಮನ್ನ ಪೂರ್ತಿಯಾಗಿ ಹಚ್ಚಿಕೊಂಡಿದ್ದ ನಾಯಿಯನ್ನು ಅಗಲಿಸಿದ್ದು ಅಜ್ಜಿ. ತನ್ನ ಮಡಿ ಹಾಳಾಗುತ್ತ ಅನ್ನೊ ಒಂದೆ ಕಾರಣಕ್ಕೆ ಯಾರಿಗೋ ಹೇಳಿ ಎಲ್ಲೋ ದೂರ ಬಿಟ್ಟು ಬರಿಸಿದ್ದಳು. ಆ ನಾಯಿ ಇಲ್ಲದೆ ವಾರನುಗಟ್ಟಲೆ ನಾವು ಊಟ ಸಹಿತ ಮಾಡಿರಲಿಲ್ಲ. ಅದು ಒದರತಾ ಏನೇ ಹೇಳಲು ಪ್ರಯತ್ನಿಸುತ್ತಿದ್ದುದು ಬಿಟ್ಟರೆ ಮಾತಾಡಿರಲಿಲ್ಲ. ಆದರೆ ಕನಸಿನಲ್ಲೂ ಅಂದಾಜಿಸದ, ಯಾವುದಕ್ಕೂ ಲೆಕ್ಕಕ್ಕೆ ತೆಗೆದುಕೊಳ್ಳದ, ಪೀಡೆ ಎಂದು ಭಾವಿಸಿದ್ದ ಈ ಸೊಳ್ಳೆ ಏನೆಲ್ಲ ಚೆಂದಾಗಿ ಮಾತಾಡತಾ ಇದೆ. ನಗಸ್ತಾ ಇದೆ. ತುಂಟತನ ಮಾಡತಿದೆ. ಗಂಭೀರವಾಗತಿದೆ. ಅದು ಏನೋ ಹೇಳಲು ಪ್ರಯತ್ನಸ್ತಿದೆ. ಎಷು ಚಂದ ಅಲ್ಲ! ಆದರೂ ಏನೋ ಹೇಳತಿರಬೇಕಾದ್ರೆ ಏನಾದ್ರೂ ಅಡ್ಡ ಬರತಿವೆ. ಇರಲಿ ಇವತ್ತು ಬಿಡುವು ಮಾಡಿಕೊಳ್ಳೊಣ ಎಂದು ಅಂದುಕೊಳ್ಳುತ್ತಿರುವಾಗಲೆ ಮನೆ ಬಂದಿತ್ತು…

‍ಲೇಖಕರು avadhi

March 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: