ನಂದಿನಿ ಹೆದ್ದುರ್ಗ
ನಿಮಗೆ ನನ್ನ ಹಳೆಪದ್ಯ ನೀಲಿ
ಗೊತ್ತಲ್ಲಾ’ನಿತ್ಯ ಅಂಗಳಕೆ ಬಂದು ಚೀಂವುಗುಟ್ಟಿ
ಹಾರಾಡಿ ತನ್ನ ನೋಡೆಂದು ಕರೆವ
ಆ ಪುಟ್ಟ ಹಕ್ಕಿಯ ರೆಕ್ಕೆ ನೀಲಿ’
ಹೌದು ಇದೇ ಪದ್ಯ …
ಮತ್ತು
ಅದೇ ಆ ನೀಲಿ ಹಕ್ಕಿ
ಈಗಲೂ ಸಂಜೆಬೆಳಗು ನನ್ನ
ಅಂಗಳದಲ್ಲಾಡುತ್ತದೆ.
ಬೆಳಗು ಎಲ್ಲಿಂದಲೋ ಹೆಕ್ಕಿ ತಂದ
ಸಂಭ್ರಮಗಳ ಆ ಹಳದಿ
ಹೂಹರೆಗೆ ಹಚ್ಚಿ ರೆಕ್ಕೆ ಬಿಚ್ಚಿ
ಚುಟುಪುಟು ತೂಗಾಡಿ
ಸುತ್ತಿಗೂ ನೀಲಬೆಳಗು ಹರಡಿ
ಹಾರುತ್ತದೆ ಹತ್ತಿರದ
ಪುಟ್ಟ ಬೆಟ್ಟದ ತುದಿಗೆ
ಇಳಿಹೊತ್ತಿಗೆ ಮರಳಿ
ಬೆಳಗನ್ನು ಸಂಜೆಗೆ ಮುಡಿಸಿ
ತಲೆಕೆಳಕಾಗಿ
ಆ ಹೂಕೊಳದೊಳಗೆ
ಮುಖ ತೂರುತ್ತದೆ
ಮೊದಲೇ ಹೂಕುಡುಕ ಹಕ್ಕಿ

ಇರುಳು ಆಳಕ್ಕಿಳಿದು ಜಗಕೆ ಜೊಂಪು
ಗಾಢವಾದಾಗಲೆಲ್ಲ
ಗುನುಗೊಂದು ಮೈದಡವಿ
ಕರೆಯುತ್ತದೆ
ಎದ್ದು ನೋಡಿದರೆ
ದಿನದ ಕೊನೆಯ
ಹಾಡನ್ನು ತೆಳುಹರೆಗೆ ತೂಗು
ಬಿಟ್ಟಿದೆ ಆ ನೀಲಿ ಹಕ್ಕಿ
ಚಿಗುರು ಒಗರಿನ
ಮೊಗ್ಗಿನೊಳಗೆಲ್ಲ
ಮೆಲ್ಲಮೆಲ್ಲನೆ
ಮಣ್ಣು
ಅಂಬೆಗಾಲಿಡುತ್ತಿದೆ
ಹಿನ್ನೆಲೆಯ ಸಂಗೀತ ಅದು
ಹಕ್ಕಿ ಇಳಿಬಿಟ್ಟ ಕೊನೆ ಹಾಡಿಗೆ.
ನಡುರಾತ್ರಿಯಲ್ಲಿ
ಎದೆಯ ತೇವ ನಭಕೆ
ಆವಿಯಾಗುವ ಸದ್ದು ಕೇಳುವ
ಅಭ್ಯಾಸವಿದ್ದರೆ
ಆತ್ಮದ
ಅಂತಸ್ಥದೊಳಪದರು
ಸಣ್ಣಗೆ ಕಂಪಿಸುವುದ
ಆಲಿಸಬಹುದು ನೀವು
ಮಣ್ಣು ಮತ್ತು ಹಾಡಿನ
ಮೆಲು ಮಾತು ಅದು
ಹಾಡು ಮತ್ತು ಮಣ್ಣು
ನಿದ್ದೆ ಹೋಗುವುದನ್ನೇ
ಕಾದ ಆ ಪುಟ್ಟ ಹಕ್ಕಿ
ಬೆಳುದಿಂಗಳಿಗೆ
ತನ್ನ ಗಾಢ ನೀಲಿ ರೆಕ್ಕೆಯ
ಹರವಿ
ಗೂಡಿನೊಳಗೆ
ಧ್ಯಾನಿಸುತ್ತಿದೆ
ನಾಳೆಗಾಗಿ ಮತ್ತೊಂದು ಹೊಸ ಹಾಡನ್ನು
ಸಿಂಗರಿಸಲು ರಾಗದಿಂದ ತನ್ನ ಹಳೆ ಗೂಡನ್ನು.






0 Comments