ಕಲ್ಲೇಶ್ ಕುಂಬಾರ್ ಓದಿದ ‘ದೀಡೆಕರೆ ಜಮೀನು’

ಕಲ್ಲೇಶ್ ಕುಂಬಾರ್ ಹಾರೂಗೇರಿ

ಕಥೆಗಾರರಲ್ಲಿ ಕಥೆ ಹುಟ್ಟುವ ಪರಿಯೇ ವಿಸ್ಮಯವಾದದ್ದು. ಅದು ಹೀಗೆ ಹುಟ್ಟಿ, ಹೀಗೇ ಬೆಳೆದು ಕಥೆಯ ರೂಪ ಪಡೆಯಬಹುದು ಎಂದು ಹೇಳಲಾಗದು. ಹಾಗೆ ನೋಡಿದರೆ ಕಥೆಗಾರನ ಭಾವಕೋಶದಲ್ಲಿ ನಡೆಯುವ ಮಂಥನಕ್ಕೆ ಕಥೆಯ ರೂಪ ಅಥವಾ ಆಕಾರ ಇರುವುದಿಲ್ಲ. ಮನಸ್ಸಿನಲ್ಲಿ ನಡೆಯುವ ವಿಚಾರವೊಂದು ರೂಪ ಪಡೆಯುವ ಮುನ್ನ ಮರು ರೂಪ ಪಡೆದು, ಅದು ಮಾಸುತ್ತಲೇ ಅದರೊಳಗಿಂದ ಮತ್ತೊಂದು ರೂಪ ಮೂಡಿ – ಹೀಗೆ ಮುರಿದು ಕಟ್ಟುವ ಮಂಥನ ನಡೆದು ‘ಕಥೆ’ ಎಂಬ ಹೊರಗಿನ ಅಭಿವ್ಯಕ್ತಿಯಾಗುತ್ತದೆ. ಪ್ರಸ್ತುತ ಈ ಮಾತಿಗೆ ಸಾಕ್ಷಿಯಾಗಿ ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ‘ದೀಡೆಕರೆ ಜಮೀನು’ ಎಂಬ ಕಥಾಸಂಕಲನದಲ್ಲಿನ ಕಥೆಗಳಿವೆ. ಈ ಕಥೆಗಳಲ್ಲಿ ಮಲ್ಲಿಕಾರ್ಜುನ
ಶೆಲ್ಲಿಕೇರಿಯವರು ತಮ್ಮ ಅನುಭವಗಳನ್ನು ವಾಸ್ತವದ ಪ್ರತಿಕೃತಿಯಾಗಿ ತಂದಿರುವುದಿಲ್ಲ! ಬದಲಿಗೆ ತಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ಅನುಭವಗಳನ್ನು ಕಥೆಯ ಅಗತ್ಯತೆಗೆ ಅನುಗುಣವಾಗಿ ಮರುಸೃಷ್ಟಿ ಮಾಡಿರುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.

ಈ ಕಥಾಸಂಕಲನದಲ್ಲಿ ಓದುಗನನ್ನು ಆರ್ದ್ರವಾಗಿ ತಟ್ಟುವ ‘ಭಜಿ ಅಂಗಡಿ ಮಲ್ಲಕ್ಕ’ ಎಂಬ ಕಥೆಯೊಂದಿದೆ. ಈ ಕಥೆಯು, ಗ್ರಾಮಲೋಕದಲ್ಲಿ ಅನೂಚಾನವಾಗಿ ಜಾರಿಯಲ್ಲಿರುವ ಪರಸ್ಪರ ದ್ವೇಷ, ಅಸೂಯೆ, ಮಾನವೀಯ ಪಾತಳಿಯ ಮೇಲಿನ ಸಂಬಂಧಗಳು, ರಾಜಕೀಯ ಜಿದ್ದಾಜಿದ್ದಿ, ನೈತಿಕತೆಯ ನೆಲೆಯ ಮೇಲೆ ನಡೆದುಕೊಂಡು ಬಂದಿರುವ ಮಠ ಮಾನ್ಯಗಳಲ್ಲಿನ ಗುರು ಪರಂಪರೆಯ ಮನಸ್ಥಿತಿ ಮತ್ತು ಅವರ ಮೇಲಿನ ಭಕ್ತಗಣದ ನಂಬಿಕೆ- ಇವೆಲ್ಲವುಗಳ ಕುರಿತಾಗಿ ಮಾತನಾಡುತ್ತದೆ.

ಈ ಕಥೆಯ ಮುಖ್ಯಪಾತ್ರ ವಿಧವೆ, ಭಜಿ ಅಂಗಡಿ ಮಲ್ಲಕ್ಕನ ದಯನೀಯ ಬದುಕನ್ನು ಕೇಂದ್ರವಾಗಿರಿಸಿಕೊಂಡು ರುದ್ರಾಪುರ ಎಂಬ ಊರಿನ ಒಳಿತು ಕೆಡುಕುಗಳ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ಯಶಸ್ವಿಯಾಗಿದ್ದಾರೆ. ಇಲ್ಲಿ, ಮಾನವೀಯ ಸಂಬಂಧಗಳ ನೆಲೆಯಲ್ಲಿ ಲೋಕವನ್ನು ನೋಡುವ ಮಠದ ಪೀಠಾಧಿಪತಿ ಶಿವಯ್ಯಜ್ಜ, ಮಲ್ಲಕ್ಕನ ಆಸರೆಗೆ ನಿಲ್ಲುವುದು ಒಂದು ಕಡೆಯಾದರೆ, ಹೆಣ್ಣನ್ನು ಭೋಗದ ವಸ್ತುವಾಗಿ ಕಾಣುವ ಮೂಲಿಮನಿ ಸಂಗಪ್ಪ, ಅದೇ ಮಲ್ಲಕ್ಕನ ದೇಹವನ್ನು ಭೋಗಿಸಲಾಗದ ಕಾರಣವಾಗಿ ಆಕೆಯ ಬದುಕನ್ನೇ ಸರ್ವನಾಶ ಮಾಡಲು ನಿಲ್ಲುವುದು ಕಾಮಪ್ರೇರಿತ ಕ್ರೌರ್ಯವೇ ಆಗಿದೆ! ಈ ಎರಡು ಹಳಿಗಳ ಮೇಲೆ ನಿಂತು ಮಲ್ಲಕ್ಕ, ತಾನು ದಾಟಿ ಬಂದ ಬದುಕಿನ ತಳವನ್ನು ಶೋಧಿಸತೊಡಗಿದಾಗ ಅಲ್ಲೂ ಸಹ ಆಕೆ ಗಂಡಿನ ದೆಸೆಯಿಂದಾಗಿ ದೌರ್ಜನ್ಯಕ್ಕೆ ಒಳಗಾದ ಬಗೆ ಕಾಣಿಸುತ್ತ ಹೋಗುತ್ತದೆ.

ಹಾಗೆ ನೋಡಿದರೆ, ಪುರುಷ ಪ್ರಧಾನವಾದ ಈ ವ್ಯವಸ್ಥೆಯಲ್ಲಿ ಹೆಣ್ಣು, ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಅದೆಷ್ಟು ಪರದಾಡಬೇಕು ಎಂಬುದನ್ನು ಇಡೀ ಕಥೆ ಸಾಕ್ಷೀಕರಿಸುತ್ತದೆ. ಮಲ್ಲಕ್ಕನಂಥ ಎಷ್ಟೋ ಜನ ಹೆಣ್ಣು ಮಕ್ಕಳು ವಾಸ್ತವದಲ್ಲಿ ಈ ವ್ಯವಸ್ಥೆಯೊಳಗೆ ಪುರುಷನ ದಬ್ಬಾಳಿಕೆಯನ್ನು ಮೀರಿ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿರುವುದನ್ನು ಕಥೆ ನೆನಪಿಸುತ್ತದೆ. ಆದರೆ, ಕಥೆಯ ಅಂತ್ಯ ಮಾತ್ರ ಮುಂದೆ ಇನ್ನೇನೋ ಇದೆ ಎನ್ನುವಾಗಲೇ ಸಂಗಪ್ಪನ ಬಂಧನದ ಸುದ್ದಿಯೊಂದಿಗೆ ಮುಗಿದು ಹೋಗುತ್ತದೆ. ಇದರ ಹೊರತಾಗಿಯೂ ಈ ಸಂದರ್ಭದಲ್ಲಿ ಅನೈತಿಕ
ವ್ಯವಹಾರಗಳಲ್ಲಿ ಮುಳುಗಿ ಹೋಗಿರುವ ಮಠಾಧೀಶರ ಮನೋಧೋರಣೆಯ ಕುರಿತಾಗಿಯೂ ಕಥೆ ಯೋಚಿಸುವಂತೆ ಮಾಡುತ್ತದೆ.

ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ವರ್ತಮಾನ ಸಂದರ್ಭದ ವಿದ್ಯಮಾನಗಳ ವಿಚಾರಗಳನ್ನು ಕಥೆಯಲ್ಲಿ ತರುವಾಗ ಅದರ ಅಗತ್ಯತೆಗೆ ಒದಗುವಂತೆ ಹೇಗೆ ಮರುಸೃಷ್ಟಿ ಮಾಡುತ್ತಾರೆ ಎಂಬುದಕ್ಕೆ ‘ತಲ್ಲಣ’ ಎಂಬ ಕಥೆ ಉದಾಹರಣೆಯಂತಿದೆ. ಕೊರಾನಾ ಕಾಲಘಟ್ಟದಲ್ಲಿ ಶ್ರಮಿಕ ವರ್ಗದ ಜನರ ಬದುಕಿನಲ್ಲುಂಟಾದ ಸ್ಥಿತ್ಯಂತರಗಳನ್ನು ಈ ಕಥೆ ಅನಾವರಣಗೊಳಿಸುತ್ತದೆ. ಹಾಗೆಯೇ, ಮನುಷ್ಯ ಬದುಕಿನೊಂದಿಗೆ ಇನ್ನಿಲ್ಲದಂಗೆ ಆಟವಾಡಿದ ಕೊರಾನಾ ಎಂಬ ಈ ರೋಗ ಇಡಿಯಾಗಿ ವಿಶ್ವವನ್ನೇ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶತಶತಮಾನಗಳ ಕಾಲ ಹೇಗೆಲ್ಲ ಹಿಂದುಳಿಯುವಂತೆ ಮಾಡಿದೆ ಎಂದು ಯೋಚಿಸುವಂತೆ ಮಾಡುತ್ತದೆ.

ಇಲ್ಲಿ, ದುಡಿಯಲೆಂದು ರಾಜ್ಯದ ಗಡಿಯನ್ನು ದಾಟಿ ರತ್ನಾಗಿರಿಯೆಂಬ ನಗರಕ್ಕೆ ಹೋದ ಕುಟುಂಬವೊಂದು ಕೊರಾನಾ ಕಾರಣವಾಗಿ ಎದುರಿಸಿದ ಸಂದಿಗ್ಧವು ಆ ಸಂದರ್ಭದ ವಾಸ್ತವ ಸಂಗತಿಗಳನ್ನು ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಊರಗೌಡ ಶಂಕರೇಗೌಡನ ಮಾತು ಮೀರಿ ಹೆಚ್ಚಿನ ಪಗಾರದ ಆಶೆಗಾಗಿ ರತ್ನಾಗಿರಿಗೆ ದುಡಿಯಲು ಹೋದ ವೀರಭದ್ರನ ಕುಟುಂಬವು ಅಲ್ಲಿ ಇರಲಾಗದೆ, ಸ್ವಂತ ಊರಿಗೆ ಮರಳಲಾಗದೆ ಅತಂತ್ರ ಸ್ಥಿತಿ ತಲುಪುವುದು ಒಂದು ತೆರದಲಿ ಬದುಕಿನ ಸಂದಿಗ್ಧವೇ ಎಂದೆನಿಸುತ್ತದೆ! ಅಲ್ಲದೇ, ಕೊರಾನಾ ರೋಗದೊಂದಿಗೆ ಬೆಸೆದುಕೊಳ್ಳುವ ವೀರಭದ್ರನ ಕುಟುಂಬದ ಮೇಲಿನ ಶಂಕರೇಗೌಡನ ದ್ವೇಷ ಅವರನ್ನೆಲ್ಲ ಹಾದಿ ಹೆಣವಾಗಿಸಿ ಬಿಡುವಂಥ ಮಾನವೀಯತೆಯನ್ನು ಆ
ಸಂದರ್ಭ ತೆರೆಯುವಂತೆ ಮಾಡುವುದು ದುರಂತವೇ ಸರಿ!

ವೀರಭದ್ರನ ಕುಟುಂಬವು ನಡೆದು ಊರು ಸೇರುವಾಗ ದಾರಿ ಮಧ್ಯದಲ್ಲಿ ಮಗ ಶಿವಲಿಂಗನ ಸಾವಾಗುವ ಕ್ರಿಯೆಯು ಬದುಕು ಅದದೇ ಒದಗಿ ಬಂದಂತೆ ಮುನ್ನಡೆಯಬೇಕು ಎಂಬ ಅರ್ಥವನ್ನು ಧ್ವನಿಸುತ್ತದೆ. ಕಡೆಗೂ ಕೊರಾನಾ ರೋಗದ ಅಟ್ಟಹಾಸವನ್ನು ಮೀರಿ ಶಂಕರೇಗೌಡನ ದ್ವೇಷವೇ ವಿಪರೀತ ಮೆರೆಯುವುದರಿಂದ, ಎಲ್ಲ ಅಡೆತಡೆಗಳನ್ನು ಮೀರಿ ಊರಿಗೆ ಬಂದ ವೀರಭದ್ರನ ಕುಟುಂಬವು ಮನೆಗೆ ಬರದಂಗಾಗುತ್ತದೆ! ಆತನ ಮಗ ಬಸನಿಂಗಗೌಡನ ಆಳಿನ ಹೊಡೆತಕ್ಕೆ ಸಿಕ್ಕು ರಕ್ತದ ಮಡುವಿನಲ್ಲಿ ಬೀಳುವಂತಾಗುವುದು ಮನುಷ್ಯನ ಕ್ರೌರ್ಯವನ್ನು ಮೀರಿದ ಸಾವಿಗೆ ಕಾರಣವಾಗುವ ಇನ್ನೊಂದು ರೋಗವಿಲ್ಲ ಎಂದೆನಿಬಿಡುತ್ತದೆ. ಕಥೆ ಓದಿ ಮುಗಿಸಿದ ಮೇಲೂ ಓದುಗನ ಮನದೊಳಗೆ ವಿಭಿನ್ನ ನೆಲೆಯಲ್ಲಿ
ಬೆಳೆಯುತ್ತಲೇ ಹೋಗುತ್ತದೆ. ಇದು ಯಶಸ್ವಿ ಕಥೆಯೊಂದರ ಗುಣವೂ ಹೌದು.

ಈ ಕಥಾಸಂಕಲನದಲ್ಲಿ ‘ಭಜಿ ಅಂಗಡಿ ಮಲ್ಲಕ್ಕ’ ಕಥೆಯ ವಸ್ತುವಿಗೆ ವಿರುದ್ಧವಾದ ವಿಚಾರವನ್ನು ಹೊಂದಿರುವ ‘ತಪ್ದಂಡ’ ಎಂಬ ಕಥೆಯೊಂದಿದೆ. ಗ್ರಾಮಜಗತ್ತಿನೊಳಗೆ ರೂಪುಗೊಂಡಿರಬಹುದಾದ ಪರಸ್ಪರ ಸ್ನೇಹ, ಪ್ರೀತಿ, ಸಹೃದಯತೆಯಂಥ ಮಾನವೀಯ ಸಂಬಂಧಗಳೊಂದಿಗೇನೆ ಅನೂಚಾನವಾಗಿ ಜಾರಿಯಲ್ಲಿರುವ ಪರಸ್ಪರ ದ್ವೇಷ, ಅಸೂಯೆ, ಅಮಾನವೀಯ ನೆಲೆಯ ಮೇಲಿನ ಜಗಳ- ಕದನಗಳು ಹಾಗೂ ಇವೆಲ್ಲವುಗಳನ್ನು ಸಮಚಿತ್ತದಿಂದ ನಿಭಾಯಿಸುವುದಕ್ಕೆಂದೇ ಹಿರಿಯರ ಸಾರಥ್ಯದಲ್ಲಿನ ನ್ಯಾಯ ಪಂಚಾಯಿತಿ ಎಂಬ ನ್ಯಾಯಪರವಾದ ಯಂತ್ರ- ಇವೆಲ್ಲ ಒಂದಕ್ಕೊಂದು ಹೇಗೆ ಥಳಕು ಹಾಕಿಕೊಂಡಿರುತ್ತವೆ ಎಂಬುದನ್ನು ಈ ಕಥೆ ಸಾದ್ಯಂತವಾಗಿ ವಿವರಿಸುತ್ತದೆ.

ಇಲ್ಲಿ, ಒಳಿತು ಕೆಡುಕುಗಳಿಗೆ ಪ್ರತಿಮೆಯಂತಿರುವ ವಾಸಣ್ಣ ಮತ್ತು ಚಂದ್ರಕಾಂತ ಎಂಬ ಎರಡು ಪಾತ್ರಗಳು, ಇಡಿಯಾಗಿ ಈ ದೇಶದ ಗ್ರಾಮಗಳಲ್ಲಿ ಏನಕೇನ ಕಾರಣವಾಗಿ ಮನುಷ್ಯನಿಗೆ ಒದಗಿ ಬರುವ ‘ಕೇಡು’ ಹೇಗೆ ಪ್ರತಿಷ್ಠೆಯ ವಿಚಾರವಾಗಿ ಆತನ ಬದುಕನ್ನು ಅಸಹನೀಯವಾಗಿ ಮಾಡುತ್ತದೆ ಎಂಬುದಕ್ಕೆ ಪ್ರತಿಮೆಯಂತಿದೆ! ವಾಸಣ್ಣ ಸಂಭಾವಿತ ಮನುಷ್ಯನಾದರೆ, ಚಂದ್ರಕಾಂತನು ಕೇಡಿನ ಸ್ವಭಾವವನ್ನು ಅಳವಡಿಸಿಕೊಂಡಿರುವಂಥ ಮನುಷ್ಯ! ಆದರೆ, ಕೇಡಿನ ಸಹವಾಸದಲ್ಲಿ ಬದುಕಬೇಕಾಗಿರುವುದು ಸಂಭಾವಿತ ಮನುಷ್ಯನ ಅನಿವಾರ್ಯತೆಯೂ ಹೌದು! ಆ ಕೇಡಿನ ನೆರಳಲ್ಲಿಯೇ ಬದುಕು ಕಟ್ಟಿಕೊಳ್ಳುವಾಗ ಸುಭಾಷ್ ಹಾಗೂ ಮುರಿಗೆಪ್ಪಜ್ಜನಂಥ ಸಹೃದಯಿಗಳು ಸಹಾಯಕ್ಕೆ ಬರುವುದು ಸಹಜವಾಗಿದೆ. ಇದೆಲ್ಲ ಗ್ರಾಮಲೋಕದಲ್ಲಿನ ಸಂಬಂಧಗಳು ಅದೆಷ್ಟು ಸಂಕೀರ್ಣವಾಗಿರುತ್ತವೆ ಎಂಬುದನ್ನು ಅರಿವಿಗೆ ತರುತ್ತದೆ. ಹಾಗೆಯೇ, ಸ್ಥಳೀಯವಾದ ಹಳ್ಳಿಯೊಳಗಿನ ಒಂದು ವಿಚಾರಕ್ಕೆ ಸಂಬಂಧಿಸಿದ ನ್ಯಾಯ ಪಂಚಾಯಿತಿಯ ಹಿರಿಯರು ನಡೆದುಕೊಳ್ಳುವ ಬಗೆಯ ಕುರಿತಾಗಿ ಓದುವಾಗ ವಾಸ್ತವದಲ್ಲಿನ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಯೋಚಿಸುವಂತೆ ಮಾಡುತ್ತದೆ.

ಈ ಕಥಾಸಂಕಲನದ ಹಿರಿಮೆಯೆಂದರೆ, ಇಲ್ಲಿ ‘ಮಹಾಪೂರ’ ಎಂಬ ಶೀರ್ಷಿಕೆಯ ಕಥೆಯೊಂದಿದೆ. ಇದು ಈ ಸಂಕಲನದಲ್ಲಿನ ಅತ್ಯಂತ ಮಹತ್ವಾಕಾಂಕ್ಷಿ ಕಥೆ ಎನ್ನಬೇಕು. ಈ ಕಥೆಯ ವಿಚಾರದಲ್ಲಿ ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ಗಹನವಾದ ಆಲೋಚನಾಕ್ರಮವನ್ನು ಕಂಡು ಯಾರಿಗಾದರೂ ಅಚ್ಚರಿಯಾಗದೇ ಇರಲಾರದು. ಏಕೆಂದರೆ, ಈ ಕಥೆಯಲ್ಲಿ ಕಥೆಗಾರ ಹೇಳಲೇಬೇಕಾದ ಸಂಗತಿಯನ್ನು ಅದೆಷ್ಟು ಸೂಕ್ಷ್ಮವಾಗಿ, ಅದೊಂದು ಕುಸುರಿ ಕಲೆಯಂತೆ ಹಿಡಿದಿಟ್ಟಿದ್ದಾರೆಯೆಂದರೆ, ಇಂಥ ವಿಚಾರವೊಂದನ್ನು ಅಷ್ಟೇ ಗಾಢವಾಗಿ ಅನುಭವಿಸಿದವರಿಂದ ಮಾತ್ರ ಕಥೆಯೊಳಗೆ ತರಲು ಸಾಧ್ಯ. ಇಲ್ಲಿ, ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ಅದನ್ನು ಸಾಧ್ಯವಾಗಿಸಿದ್ದಾರೆ.

ಏಕೆಂದರೆ ವಾಸ್ತವದಲ್ಲಿ ಪ್ರಕೃತಿ ವಿಕೋಪದಿಂದುಂಟಾದ ಈ ‘ಮಹಾಪೂರ’ದಂಥ ಮನುಷ್ಯ ಬದುಕನ್ನು ನಾಶಮಾಡುವಂಥ ಕ್ರಿಯೆಯಿಂದ ಸಾಕಷ್ಟು ಆಘಾತ ಅನುಭವಿಸಿದವರು ನೂರಾರು ಎಕರೆ ಜಮೀನನ್ನು ಹೊಂದಿ, ಅತ್ತ ಹಳ್ಳಿಯೂ ಅಲ್ಲದ; ಇತ್ತ ದೊಡ್ಡ ಊರೂ ಅಲ್ಲದ ಗ್ರಾಮವೊಂದರಲ್ಲಿ ವಾಡೆಯಂಥ ಮನೆಯನ್ನು ಕಟ್ಟಿಕೊಂಡು ದರ್ಪದಿಂದ ಬಾಳೇವು ಮಾಡುತ್ತಿದ್ದ ದೊಡ್ಡ ದೊಡ್ಡ ಜಮೀನ್ದಾರರು ವಿನಃ ಸಣ್ಣಪುಟ್ಟ ರೈತರಂತೂ ಖಂಡಿತ ಅಲ್ಲ! ಈ ಮಹಾಪೂರ ತಂದೊಡ್ಡಿದ ಘೋರ ಸಂಕಟದಿಂದ ತಮ್ಮೆಲ್ಲ ಜಮೀನು, ದನಕರುಗಳು, ವಾಡೆಯಂಥ ಮನೆ, ಆ
ವಾಡೆಯಂಥ ಮನೆಯಲ್ಲಿನ ನೂರಾರು ಚೀಲು ಕಾಳುಕಡಿಯೊಂದಿಗೆ ತಮ್ಮ ಅಧಿಕಾರದ ದರ್ಪವನ್ನೂ ಸಹ ಮಹಾಪೂರಕ್ಕೆ ತರ್ಪಣಗೈದು, ಕೇವಲ.. ಕೇವಲ.. ಸಾಮಾನ್ಯ ವ್ಯಕ್ತಿಗಳಂತೆ ಸರ್ಕಾರ ನಿರ್ಮಿಸಿದ ಗಂಜಿ ಕೇಂದ್ರಗಳಲ್ಲಿ ಆಸರೆ ಪಡೆಯುವಂತಾದದ್ದು ಮಾತ್ರ ಯಾರ ಗಮನಕ್ಕೂ ಬಾರದಂಥ ವಿಚಾರವಾದದ್ದು ಮಾತ್ರ ದುರಂತವೇ ಸರಿ! ಇದನ್ನು ಮೀರಿ ಆ ಸಂದರ್ಭದಲ್ಲಿ ಸರ್ಕಾರಕ್ಕೆ, ಅಧಿಕಾರಿಗಳಿಗೆ ಮತ್ತು ಮಾಧ್ಯಮಗಳಿಗೆ ಢಾಳಾಗಿ ಕಾಣಿಸಿದ್ದು ಮಾತ್ರ ಸಣ್ಣಪುಟ್ಟ ರೈತರ ಸಂಕಷ್ಟಗಳಷ್ಟೇ ಎನ್ನಬಹುದು! ಆದಾಗ್ಯೂ, ತೊರೆದು ಜೀವಿಸಬಹುದೆ ತಮ್ಮ ಆಸ್ತಿ, ಅಂತಸ್ತು,
ಅಧಿಕಾರವನ್ನೆಲ್ಲ..!?- ಎಂಬಂಥ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದ್ದ ಜಮೀನ್ದಾರರ ಯಾತನೆ ಮಾತ್ರ ಕಾಣಿಸದೇ ಹೋದದ್ದು ನಿಜಕ್ಕೂ ಶೋಚನೀಯ.

ಇಷ್ಟಾಗಿಯೂ ಈ ಕಥೆಯಲ್ಲಿ ಎಂ ಎಲ್ ಎ ದೇಸಾಯಿ ಮತ್ತು ಅವರ ಮಗನ ನಡುವೆ ಸಂಭವಿಸಿದ ಪ್ರಸಂಗವೊಂದರ ಮೂಲಕ ಈ ಎಲ್ಲವನ್ನೂ ಕಾಣಿಸುವಲ್ಲಿ ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ಯಶಸ್ವಿಯಾಗಿದ್ದಾರೆ. ಕಥೆ ಎಂದರೇನು?, ಕಥೆಯ ವಸ್ತು ಹೇಗಿರಬೇಕು?, ಕಥೆಗಾರನ ಅನುಭವಗಳು ಹೇಗಿರಬೇಕು?, ಕಥೆಗಾರನ ತಾತ್ವಿಕತೆ ಎಂದರೇನು?- ಎಂಬುದಕ್ಕೆಲ್ಲ ಈ ಕಥೆ ಉತ್ತರವೆಂಬಂತಿದೆ. ಕಥೆ ಮುಗಿದ ಮೇಲೂ ಓದುಗನ ಎದೆಯೊಳಗೆ ಬೆಳೆಯುತ್ತಲೇ ಹೋಗುತ್ತದೆ.

ಹಾಗೆ ನೋಡಿದರೆ ಕಥೆಗಾರನೊಳಗೆ ಕಥೆ ಸುಮ್ಮನೆ ಹುಟ್ಟುವುದಿಲ್ಲ. ಕಥೆಗಾರ ಲೋಕ ನೋಡುವ ಕಲೆಯನ್ನು ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಇಲ್ಲದಿರೆ ಕಥೆಗಾರನಿಗೆ ಉಳಿಗಾಲವಿಲ್ಲ. ಕಥೆಯಲ್ಲಿ ಹೇಳಬೇಕಾಗಿರುವ ಮುಖ್ಯ ವಿಚಾರವನ್ನು ಕಥೆಯುದ್ದಕ್ಕೂ ತುಸು ತುಸುವೇ ಬಿಟ್ಟುಕೊಡುತ್ತ ಬಂದು ಕೊನೆಯಲ್ಲಿ ತಾರ್ಕಿಕವಾದ ಅಂತಿಮ ವಿಚಾರಕ್ಕೆ ಓದುಗನನ್ನು ತಂದು ನಿಲ್ಲಿಸುವುದೇ ಕಥೆಗಾರನ ಉದ್ದೇಶವಾಗಿದೆ.

ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ತಮ್ಮ ಕಥೆಗಳಲ್ಲಿ ಸ್ಥಳೀಯ ವಿದ್ಯಮಾನಗಳನ್ನು ರಾಜ್ಯ, ರಾಷ್ಟ್ರ ಮತ್ತು ಜಾಗತಿಕ ವಿದ್ಯಮಾನಗಳೊಂದಿಗೆ ಸಮೀಕರಿಸಿ ಹೇಳುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಈ ಮಾತಿಗೆ ಸಾಕ್ಷಿಯಾಗಿ ಈ ಕಥಾಸಂಕಲನದಲ್ಲಿ ‘ಆಲದ ಮರ’ ಎಂಬ ಕಥೆಯೊಂದಿದೆ. ಈ ಕಥೆಯಲ್ಲಿ ಬರುವ ರುದ್ರಾಪುರ ಎಂಬ ಗ್ರಾಮದಲ್ಲಿ ಏನಕೇನ ಕಾರಣಗಳಿಂದಾಗಿ ಗ್ರಾಮ ಮಟ್ಟದಲ್ಲಿನ ರಾಜಕೀಯ ವಿದ್ಯಮಾನಗಳಲ್ಲಿ ಉಂಟಾಗುವ ಸ್ಥಿತ್ಯಂತರಗಳನ್ನು ವರ್ತಮಾನ ಸಂದರ್ಭದಲ್ಲಿನ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಉಂಟಾಗುತ್ತಿರುವ ರಾಜಕೀಯ ಬೆಳವಣಿಗೆಗಳೊಂದಿಗೆ ಸಮೀಕರಿಸಿ ಹೇಳಿರುವ ಪರಿ ಅನನ್ಯವಾಗಿದೆ. ಹಾಗೆಯೇ, ಇಲ್ಲಿ ಬರುವ ಆಲದ ಮರ,
ಗ್ರಾಮ ಸಂಸ್ಕೃತಿಯಲ್ಲಿನ ಭಾವನಾತ್ಮಕ ಸಂಬಂಧಗಳೊಂದಿಗೆ ರೂಪಕದಂತಿದ್ದರೆ, ಕಥೆಯ ಮುಖ್ಯಪಾತ್ರ, ಸ್ವಾತಂತ್ರ್ಯ ಹೋರಾಟಗಾರ ಪರಪ್ಪಜ್ಜ, ಅನೈತಿಕ ರಾಜಕಾರಣವನ್ನು ವಿರೋಧಿಸುವ ಪ್ರಾಮಾಣಿಕ ಮನಸ್ಥಿತಿಗಳಿಗೆ ಪ್ರತಿಮೆಯಂತೆ ಕಂಡು ಬರುತ್ತಾನೆ.

ಇನ್ನು, ಆ ಗ್ರಾಮದ ಜನರೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಸೆದುಕೊಂಡಿರುವ ಆಲದ ಮರವನ್ನು ಕುಡಿದು ಹಾಕಬೇಕು ಎಂಬ ಪಂಚಾಯಿತಿ ಚೇರಮನ್ ಪಂಚಾಕ್ಷರಿಯ ಕುತ್ಸಿತತನದ ಇಚ್ಛಾಶಕ್ತಿಯನ್ನು ಊರ ಜನರೆಲ್ಲ ವಿರೋಧಿಸುವುದರೊಂದಿಗೆ ತೆರೆದುಕೊಳ್ಳುವ ಕಥೆ, ಕ್ರಮೇಣವಾಗಿ ಪರಪ್ಪಜ್ಜ ದಾಟಿ ಬಂದ ಬದುಕಿನ ತಳವನ್ನು ಶೋಧಿಸುತ್ತಲೇ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿನ ರೋಚಕ ಘಟನೆಗಳನ್ನು ಅನಾವರಣ ಮಾಡುತ್ತ ಹೋಗುತ್ತದೆ. ಜೊತೆಗೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತಶಾಹಿಗಳು ಮತ್ತು ಅಧಿಕಾರಶಾಹಿಗಳು ತಮಗಿರುವ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಜನರ ಆಶಯಗಳನ್ನು ಹೇಗೆಲ್ಲ ಹೊಸಕಿ ಹಾಕುತ್ತಾರೆ ಎಂಬುದನ್ನು ಓದುಗನ ಅರಿವಿಗೆ ತರುತ್ತದೆ.

ಹಾಗೆಯೇ, ಪರಪ್ಪಜ್ಜನ ಆಸರೆಯಲ್ಲಿಯೇ ಬದುಕನ್ನು ರೂಪಿಸಿಕೊಂಡ ಶಂಕರ, ವಿಶ್ವನಾಥ ಮತ್ತು ಪಂಚಾಕ್ಷರಿ- ಈ ಮೂವರು ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ಥಂಭಗಳಂತಿರುವ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಪ್ರತಿನಿಧಿಸುತ್ತಾರೆ. ಇಲ್ಲಿ ಶಂಕರನು ಪರಪ್ಪಜ್ಜನಿಗೆ ಆಸರೆಯಾಗಿ ನಿಲ್ಲುವುದರ ಮೂಲಕ ಆತನ ಆಶೋತ್ತರಗಳನ್ನು ಕಾರ್ಯರೂಪಕ್ಕೆ ತರಲು ಸಹಕರಿಸಿದರೆ, ಊರ ಚೇರಮನ್ ಪಂಚಾಕ್ಷರಿಯ ರಾಜಕೀಯ ದುರಾಲೋಚನೆಯ ಕಾರಣವಾಗಿ ಆಲದ ಮರವನ್ನು ಕುಡಿದು ಹಾಕುವ ಸಂದರ್ಭ ನಿರ್ಮಾಣವಾದಾಗ ಅದನ್ನು ಉಳಿಸಲು ನ್ಯಾಯಾಲಯದಿಂದ ತಡೆಯಾಜ್ಞೆ ತರುವುದರ ಮೂಲಕ ವಕೀಲ ವಿಶ್ವನಾಥನು ಪ್ರಜಾಪ್ರಭುತ್ವದ ಆಶೋತ್ತರಗಳನ್ನು ಎತ್ತಿ ಹಿಡಿಯುತ್ತಾನೆ. ಇಡಿಯಾಗಿ ಕಥೆ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುತ್ತದೆ. ಇನ್ನು, ಈ ಕಥಾಸಂಕಲನದ ಶೀರ್ಷಿಕೆಯೂ ಆಗಿರುವ ‘ದೀಡೆಕರೆ ಜಮೀನು’ ಕಥೆ, ಕೈಗಾರಿಕಾಕರಣ ಪ್ರಕ್ರಿಯೆಯು ಸಣ್ಣ ಸಣ್ಣ ರೈತರ ಭೂಮಿಯನ್ನು ಕಬಳಿಸಿಕೊಂಡು ಅವರ ಬದುಕನ್ನು ಹೇಗೆಲ್ಲ ದಯನೀಯ ಸ್ಥಿತಿಗೆ ತಂದಿಟ್ಟಿದೆ ಎಂಬುದನ್ನು ಅನಾವರಣಗೊಳಿಸುತ್ತದೆ. ಇದರೊಂದಿಗೆ ಅಂಥ ರೈತರ ನೋವು, ಸಂಕಟ, ಹತಾಶೆ ಮತ್ತು ಅಸಹಾಯಕತೆಗಳನ್ನು ಮುಂದಿಟ್ಟುಕೊಂಡು ಬಂಡವಾಳಶಾಹಿಗಳು ಅದಾವ ಪರಿಯಲ್ಲಿ ಅವರನ್ನು ಆಟವಾಡಿಸುತ್ತಾರೆ ಎಂಬುದನ್ನು ವಿವರಿಸುತ್ತದೆ.

ಹಾಗೆ ನೋಡಿದರೆ, ಇಡೀ ಕಥೆಯನ್ನು ಸ್ವಾತಂತ್ರ್ಯಪೂರ್ವದಲ್ಲಿನ ಗಾಂಧೀಯವರ ಅನುಯಾಯಿಯಾದ ವಿನೋಬಾ ಭಾವೆಯವರ ‘ಭೂದಾನ ಚಳುವಳಿ’ಯ ಘಟನೆಯೊಂದಿಗೆ ಈ ಸಂದರ್ಭದಲ್ಲಿನ ಜಮೀನಿನ ವಿಚಾರದಲ್ಲಿನ ಸಣ್ಣ ರೈತನೊಬ್ಬನ ಅಸಹಾಯಕತೆಯನ್ನು ಸಮೀಕರಿಸಿ ಹೇಳಿರುವ ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ಮುಂದೊಮ್ಮೆ ಅನ್ನ ಬೆಳೆಯಲು ಭೂಮಿಯೇ ಇಲ್ಲದಾಗಬಹುದಾದ ಸಾಧ್ಯತೆಯ ಕುರಿತಾಗಿ ಆತಂಕವನ್ನು ವ್ಯಕ್ತಪಡಿಸುತ್ತಾರೆ. ಆ ಮೂಲಕ ಅಂಥ ಆತಂಕವನ್ನು ರೈತ ಮಾದೇವನಲ್ಲಿ ಸೃಷ್ಟಿಸುವುದಕ್ಕೆ ಕಾರಣನಾದ
ಪ್ರಕಾಶಗೌಡನಂಥವರು ವಾಸ್ತವದಲ್ಲಿ ಈ ವ್ಯವಸ್ಥೆಯಲ್ಲಿರುವುದು ದುರಂತವೇ ಸರಿ ಎನ್ನಬೇಕು. ಸರಳ ಬದುಕಿನಲ್ಲಿ, ಸಹಬಾಳ್ವೆಯಲ್ಲಿ ಮತ್ತು ಸಹೃದಯತೆಯಲ್ಲಿ ನಂಬಿಕೆಯನ್ನಿಟ್ಟುಕೊಂಡಿದ್ದ ಭೀಮನಗೌಡರಿಗೆ ದೇಶ ಸ್ವಾತಂತ್ರ್ಯ ಹೊಂದಬೇಕಾಗಿರುವುದರಲ್ಲಿ ಸಹಜವಾಗಿಯೇ ಆಸಕ್ತಿ, ಪ್ರೇಮ ಮತ್ತು ನಂಬಿಕೆ ಎಲ್ಲವೂ ಇದೆ. ಈ ಕಾರಣವಾಗಿಯೇ ವಿನೋಬಾ ಭಾವೆಯವರ ಸಂಪರ್ಕಕ್ಕೆ ಬಂದ ಅವರು ಭೂದಾನ ಚಳವಳಿಯಿಂದ ಪ್ರೇರಿತರಾಗಿ ತಮ್ಮ ರುದ್ರಾಪುರ ಗ್ರಾಮದ ಭೂಮಿ ಇಲ್ಲದ ಬಡವರಿಗೆ ನೂರೆಕರೆ ಭೂಮಿಯನ್ನು ದಾನವಾಗಿ ನೀಡುತ್ತಾರೆ. ಹಾಗೆ ಭೂಮಿ ಪಡೆದವರಲ್ಲಿ ಮಾದೇವನ ಅಜ್ಜನೂ ಒಬ್ಬ. ಆದರೆ, ಕಾಲಾಂತರದಲ್ಲಿ ಅನ್ನ ಬೆಳೆಯಲೆಂದು ಕೊಟ್ಟ ಭೂಮಿಯ ಮೇಲೆ ಭೀಮನಗೌಡರ ಮೊಮ್ಮಗನ ಕಣ್ಣು ಬೀಳುವುದಕ್ಕೆ ನೇರವಾಗಿ ಕೈಗಾರಿಕಾ ಕ್ರಾಂತಿಯೇ ಕಾರಣವಾಗುತ್ತದೆ! ಕಥೆಯೊಳಗೆ.

ಈ ಕ್ರಿಯೆ ಪರೋಕ್ಷವಾಗಿ ಮನುಕುಲದ ನಾಶವನ್ನು ಸಂಕೇತಿಸುತ್ತದೆ. ಹೀಗೆ ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ತಮ್ಮ ಆಲೋಚನೆಗಳನ್ನು ಕಥೆಯೊಳಗೆ ಅರ್ಥಪೂರ್ಣವಾಗಿ ಮಂಡಿಸುತ್ತಾರೆ. ಈ ಕಥಾಸಂಕಲನದಲ್ಲಿ ಓದುಗರನ್ನು ಚಿಂತನೆಗೀಡು ಮಾಡುವ ‘ಋಣಮುಕ್ತ’ ಎನ್ನುವ ಇನ್ನೊಂದು ಕಥೆಯಿದೆ. ಈ ಕಥೆ, ಗ್ರಾಮಲೋಕದಲ್ಲಿ ಅನೂಚಾನವಾಗಿ ಜಾರಿಯಲ್ಲಿರುವ ಫ್ಯೂಡಲ್ ಸಂಸ್ಕೃತಿಯು ದುಡಿಯುವ ವರ್ಗದ ಜನರನ್ನು ನಿರಂತರವಾಗಿ ಆರ್ಥಿಕ, ಸಾಮಾಜಿಕ ಮತ್ತು ಲೈಂಗಿಕವಾಗಿ ಶೋಷನೆಗೊಳಪಡಿಸುತ್ತ ಬಂದಿದೆ ಎಂಬ ಘೋರ ಸತ್ಯವನ್ನು ಅನಾವರಣಗೊಳಿಸುತ್ತದೆ.

ಇಲ್ಲಿ, ಅಂಥ ಜನರ ನೋವು, ಸಂಕಟ, ಹತಾಶೆ ಮತ್ತು ಆಕ್ರೋಶಗಳೆಲ್ಲವೂ ಮಡುಗಟ್ಟಿವೆ! ಈ ಕಥೆಯಲ್ಲಿ ದುಡಿಯುವ ವರ್ಗದ ಜನರನ್ನು ಪ್ರತಿನಿಧಿಸುವ ಸಹದೇವನನ್ನು ದುಡಿಸಿಕೊಳ್ಳುವ ಸಗರಪ್ಪ ಸಾವ್ಕಾರನು ಫ್ಯೂಡಲ್ಸಂ ಸ್ಕೃತಿ ಮೆರೆಯುವ ‘ಕೇಡು’ ಮತ್ತು ‘ಕ್ರೌರ್ಯ’ವನ್ನು ಸಂಕೇತಿಸುತ್ತಾನೆ. ಆದರೆ, ಆತನ ಸ್ವಭಾವಕ್ಕೆ ವಿರುದ್ಧವಾದ ಸಹದೇವನನ್ನು ಅನುಕಂಪದಿಂದ ಕಾಣುವ ಸಗರಪ್ಪ ಸಾವ್ಕಾರನ ಹೆಂಡತಿ ಸಾವಿತ್ರಿಯು ಅದೇ ಫ್ಯೂಡಲ್ ಸಂಸ್ಕೃತಿಯ ಆಳದಲ್ಲಿ ಇದ್ದಿರಬಹುದಾದ ಅಂತಃಕರಣದ ಪಾತಳಿಯ ಮೇಲಿನ ಹೆಣ್ಣಿನ ಮನಸ್ಥಿತಿಗೆ ರೂಪಕದಂತಿದ್ದಾಳೆ. ಅಂತೆಯೇ, ಶಾಂತಾಳ ಮೇಲೆ ಅತ್ಯಾಚಾರವೆಸಗುವ ತನ್ನ ಸ್ವಂತ ಗಂಡ ಸಗರಪ್ಪನ ಧೋರಣೆಯನ್ನು ಖಂಡಿಸುವ ನಿಟ್ಟಿನಲ್ಲಿ ನೈತಿಕವಾಗಿ ಸಗರಪ್ಪನ ಪರ ನಿಲ್ಲುವುದು ಒಂದು ತೆರದಲಿ ಊಳಿಗಮಾನ್ಯ ವ್ಯವಸ್ಥೆಯ ಪರೀಧಿಯನ್ನು ಹೆಣ್ಣುಕುಲ ದಾಟಲೇಬೇಕಾದ ಅನಿವಾರ್ಯತೆಯನ್ನು ಬಿಂಬಿಸುತ್ತದೆ! ಇದರ ಹೊರತಾಗಿಯೂ ಇನ್ನೊಂದು ಕಡೆಗೆ ಊಳಿಗಮಾನ್ಯ ವ್ಯವಸ್ಥೆಯಲ್ಲಿದ್ದುಕೊಂಡೂ ಅದರ ಕ್ರೌರ್ಯವನ್ನು ವಿರೋಧಿಸುವ ಮನಸ್ಥಿತಿಯಲ್ಲಿ ಹೆಣ್ಣು ಇದ್ದಾಳೆ ಎಂಬುದನ್ನು ಕಥೆ ಸೂಚ್ಯವಾಗಿ ಹೇಳುತ್ತದೆ. ಕಥೆಯ ಕೊನೆ ಮಾತ್ರ ಸಿನಿಮೀಯ ರೀತಿಯಲ್ಲಿ ಸಗರಪ್ಪನ ಅಂತ್ಯವನ್ನು ಕಟ್ಟಿಕೊಡುತ್ತದೆ. ಆದರೆ ಅದು ಜೈವಿಕವಾದ ಅಂತ್ಯವಾಗಿರದೆ, ಫ್ಯೂಡಲ್ ಸಂಸ್ಕೃತಿಯ ಚಹರೆಯಿಂದ ಕಳಚಿಕೊಳ್ಳುವ ಸಂಕೇತವಾಗಿದೆ ಎಂಬ ಅರ್ಥವನ್ನು ಕಥೆ ಧ್ವನಿಸುತ್ತದೆ.

ಹಾಗೆ ನೋಡಿದರೆ ಈ ಕಥಾಸಂಕಲನದಲ್ಲಿನ ಕಥೆಗಳು ಅದೆಷ್ಟು ಉತ್ಕೃಷ್ಟವಾಗಿವೆಯೆಂದರೆ ಓದುಗನನ್ನು ಅನೂಹ್ಯವಾದ ಲೋಕವೊಂದಕ್ಕೆ ಸ್ವಯಂ ತಾವೇ ಕೈಹಿಡಿದು ಕರೆದೊಯ್ಯುತ್ತವೆ. ಆ ಲೋಕವೆಂಬ ಸಾಮಾಜಿಕ ಮತ್ತು ರಾಜಕೀಯ ಪರಿಸರದ ಇಂಚಿಂಚೂ ಪರಿಚಯವನ್ನು ಮಾಡಿಕೊಡುತ್ತವಷ್ಟೇ ಅಲ್ಲ… ಅವೆಲ್ಲ ನಮ್ಮದೇ ಬದುಕಿನ ಅನುಭವಗಳು ಎಂಬ ಭ್ರಮೆಯನ್ನು ಹುಟ್ಟಿಸುತ್ತವೆ. ಅಷ್ಟರಮಟ್ಟಿಗೆ ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ಪ್ರಯತ್ನ ಸಾರ್ಥಕವಾಗಿದೆ.

ಆದಾಗ್ಯೂ, ಇಲ್ಲಿನ ಕಥೆಗಳು ಸೊಗಸಾದ ಸಂಕಲನದ ರೂಪದಲ್ಲಿ ಓದುಗರ ಎದುರಿಗೆ ಬಂದಿರುವುದರ ಹಿಂದಿನ ಧೀ ಶಕ್ತಿ ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ಬಾಳ ಸಂಗಾತಿ ಶ್ರೀಮತಿ. ತ್ರಿವೇಣಿಯವರು ಎಂದರೆ ಅತಿಶಯೋಕ್ತಿಯಾಗಲಾರದು. ಇಲ್ಲಿನ ಪ್ರತಿಯೊಂದು ಕಥೆಯ ಮೋದಲ ಓದುಗರು ಸಹ ಅವರೇ ಹೌದು. ಈ ಎಲ್ಲ ಕಥೆಗಳನ್ನು ಸಂಕಲನದ ರೂಪದಲ್ಲಿ ತರುಬೇಕೆಂಬ ಮಹದಾಸೆಯನ್ನು ಹೊಂದಿದ್ದ ಅವರ ಅಕಾಲಿಕವಾದ ಅಗಲಿಕೆಯ ನೋವಿನ ನಡುವೆಯೇ ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ಇಲ್ಲಿನ ಕಥೆಗಳನ್ನು ಸಂಕಲನದ ರೂಪದಲ್ಲಿ ತರುವುದರ ಮೂಲಕ ತಮ್ಮ ಬಾಳ ಸಂಗಾತಿಯ ನೆನಪನ್ನು ಹಸಿರಾಗಿಸಿದ್ದಾರೆ. ಈ ಕಥಾಸಂಕಲನದ ವಿಚಾರದಲ್ಲಿ ಇದೊಂದು ಸಂಗತಿ
ಮಾತ್ರ ಓದುಗನ ಎದೆಯನ್ನು ಆರ್ದ್ರಗೊಳಿಸದೇ ಇರದು!

‍ಲೇಖಕರು avadhi

February 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: