ನಂದಿನಿ ಹೆದ್ದುರ್ಗ ಓದಿದ ‘ಒಂದು ನಾಟಕದ ಕೊನೆಯ ಅಂಕ’‌

ನಂದಿನಿ ಹೆದ್ದುರ್ಗ

ನಮ್ಮ ಸಾವನ್ನು ನಾವೇ ಕಣ್ಣಾರೆ ನೋಡುವಂತಾದರೆ!?

ಹೀಗೊಂದು ಪ್ರಶ್ನೆ ಎದ್ದರೆ ಓದಿದವರು ಭ್ರಮೆ ಎಂದುಕೊಂಡಾರು. ಅಥವಾ ಸಾವಿನ ನಿಜಾರ್ಥವೇ ತಿಳಿಯದವಳು ಅಂತಲೂ. ಇನ್ನೂ ಒಂದು ಹೆಜ್ಜೆ ಮುಂದುವರೆದು ‘ಸಿನೆಮಾ ನೋಡಿನೋಡಿ ಈ ಕಥೆ’ ಅಂದುಕೊಳ್ಳುವ ಸಾಧ್ಯತೆಯೂ ಇದೆ.

ಆದರೆ…ಇದು…ನಮ್ಮ ಸಾವನ್ನು ನಾವೇ ಕಣ್ಣಾರೆ‌ ನೋಡುವುದು ಇಲ್ಲಿ ಸಾಧ್ಯವಾಗಿದೆ.

‘ಒಂದು ನಾಟಕದ ಕೊನೆಯ ಅಂಕ’ ವಿಷ್ಣುಭಟ್ ರ ಚೊಚ್ಚಲ ಕಥಾಸಂಕಲನ. ಪರಿಚಯವಾದಂದಿನಿಂದಲೂ ಆತ್ಮೀಯ ಮತ್ತು ಸಭ್ಯ ಸ್ನೇಹಿತರ ಪಟ್ಟಿಯಲ್ಲಿ ಮೊದಲಿಗರಾಗಿರುವ ವಿಷ್ಣುವಿಗೆ ಕಥೆಯಾಗುವ ವಿಷಯವೇ ಸಾವು.

ಪ್ರೇಮ, ದಾಂಪತ್ಯ, ಸ್ನೇಹ, ಆಸ್ತಿ, ಸೋದರ ಸಂಬಂದ ಹೀಗೆ ಬದುಕಿನ ಸಕಲ ಸಹಜ ಸಂಗತಿಗಳ ಅಂತ್ಯ ಇವರ ಕಥೆಯಲ್ಲಿ ಸಾವಿನೊಂದಿಗೇ ಆಗುತ್ತವೆ. ಅಚ್ಚರಿ ಅಂದರೆ ಒಬ್ಬ ಮನುಷ್ಯ ತನ್ನ ಯೌವನದ ದಿನಗಳಲ್ಲಿ ಈ ಮಟ್ಟಿಗೆ ದೇಹ ಆತ್ಮಗಳ ಕುರಿತು ಧ್ಯಾನಿಸಬಹುದಾ? ಸಾವು ಯಾರನ್ನಾದರೂ ಇಷ್ಟೊಂದು ಕಾಡಬಹುದಾ? ಈ ಸಂಕಲನದ ಹೆಸರೇ ಸಾವಿನ ಸೂಚಕವಾಗಿದೆ.

ಒಂದು ನಾಟಕದ ಕೊನೆಯ ಅಂಕ‌.

ಜೀವನವೇ ಒಂದು ನಾಟಕ. ಹುಟ್ಟು ಸಾವಿನ ನಡುವೆ ನಡೆಯುವ ಈ‌ ನಾಟಕದ ಲ್ಲಿ ಪ್ರತಿ ವ್ಯಕ್ತಿಯೂ ಅವರವರ ಜೀವನದ ಪ್ರಮುಖ ಪಾತ್ರ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ. ಈ ನಾಟಕದ ಕೊನೆಯ ಅಂಕವೇ ಸಾವು. ಆ ಕೊನೆಯ ಅಂಕದ ಕೊನೆಯ ದೃಶ್ಯಗಳು ಈ ಸಂಕಲನದ ಹೈಲೈಟ್.

ಒಂದಿಡೀ ಸಂಕಲನದ ಕಥೆಗಳೂ ಸಾವನ್ನೇ ಧ್ಯಾನಿಸುವುದು ಎಂದರೆ ಅದು ಸುಲಭವಲ್ಲ. ಆದರೆ.. ಇಲ್ಲಿನ ಸಾವು ನಿಜಜೀವನದ ಸಾವಿನಂಥಲ್ಲ. ಈ ಕಥೆಗಳಲ್ಲಿ ಆತ್ಮ ದೇಹದಿಂದ ಬಿಡುಗಡೆ ಆಗುವುದನ್ನು ಸಾಯುವ ವ್ಯಕ್ತಿ ಬಹುತೇಕ ಅನುಭವಿಸ್ತಾನೆ. ಇಲ್ಲಿನ ಕಥಾನಾಯಕ ಮುಖ್ಯಪಾತ್ರಗಳ ಆತ್ಮ.

ದೇಹ ಮತ್ತು ಆತ್ಮದ ತೀವ್ರ ಧ್ಯಾನಸ್ಥ ಸ್ಥಿತಿಯಲ್ಲಿ ಬರೆದಂತೆ ಅನಿಸುವ ಈ ಕಥೆಗಳು ಮಾಯಾ ವಾಸ್ತವದ ಕಥೆಗಳಂತೆ ಅನಿಸಿದರೂ ಕಥೆ ಮುಗಿಯುವ ಹೊತ್ತಿಗೆ ಆ ಭಾವದಿಂದ ಮುಕ್ತವಾಗುತ್ತೇವೆ. ಹಾಗಾದರೆ ಇವು ದೆವ್ವದ ಕಥೆಗಳಿರಬಹುದಾ ಅಂದರೆ ಬಿಲ್ಕುಲ್ ಅಲ್ಲ.

ಪರಂಧಾಮ ಎನ್ನುವ ಕಥೆಯಲ್ಲಿ ಸಾವನ್ನು ನಿರ್ಧರಿಸಿಕೊಂಡ, ನಿಶ್ಚಯಿಸಿಕೊಂಡ ವ್ಯಕ್ತಿಯೊಬ್ಬ ಬಂಧು ಮಿತ್ರರ ಸಮ್ಮುಖದಲ್ಲಿ ತನ್ನ ಮುಕ್ತಿ ಗಾಗಿ ಎಲ್ಲರೂ ಪ್ರಾರ್ಥಿಸಿ ಎಂದು ಕೇಳಿಕೊಳ್ಳುತ್ತ ಸಾಯುವ ಚಿತ್ರಣವಿದೆ. ಇಲ್ಲಿ ಸಾಯುವ ಪಾತ್ರ ಸಾವಿಗೂ ಮುನ್ನ ಹೇಳುವ ಮಾತುಗಳು ಬಹಳ ತಾತ್ವಿಕವಾಗಿವೆ.

‘ಸಾವನ್ನು ಯಾರೂ ಪ್ರೀತಿಸುವುದಿಲ್ಲ. ಕರೆಯುವುದೂ ಇಲ್ಲ. ನನಗಿನ್ನೂ ಸಾವೆಂಬುದು ಏನೆಂಬುದೇ ಅರ್ಥವಾಗಿಲ್ಲ. ಸತ್ತಮೇಲೆ ದೇಹವಿಲ್ಲವಾಗುವುದನ್ನು ನೋಡಿದ್ದೇನೆ. ಹಾಗೇ ದೇಹತ್ಯಾಗ‌ ಮಾಡುತ್ತಿದ್ದೇನೆ. ಪ್ರಾಣವನ್ನು ದೇಹದಿಂದ ಬೇರ್ಪಡಿಸುವುದಷ್ಟೇ. ಆಮೇಲೂ ಈ ಪ್ರಾಣ ನಿಮ್ಮ ‌ಜೊತೆಗೆ ಇರಲೂಬಹುದು. ಇದನ್ನು ಸಂತೋಷದಿಂದಲೇ ಮಾಡುತ್ತಿದ್ದೇನೆ’

ತೀರಿಹೋದ ಗೆಳೆಯರನ್ನು ಭೆಟ್ಟಿಮಾಡುವ ಕನಸು ಕಂಡು ಅವರು ಒತ್ತಾಯಪೂರ್ವಕವಾಗಿ ಕರೆದೊಯ್ದಂತೆ ಕನಸು ಮುಂದುವರೆದು ಏಳುವ ವೇಳೆಗೆ ಜೀವ ಹೋಗಿರುವ ಕಥೆ, ಕನ್ನಡಿಯಲ್ಲಿ ಮುಖವೇ ಕಾಣದವನ ಕಥೆ. ಇಚ್ಛಾಮರಣಿಯ ಕಥೆ, ಉರಿದು ಹೋದ ಮನೆಯ ಆತ್ಮದ ಕಥೆ.. ಹೀಗೆ ಸಾವೇ ಆದವರ ಥರೇವಾರಿ ಕಥೆಗಳು.

ವಾಲಿಮೋಕ್ಷ ಕಥೆಯಲ್ಲಿ ಯಕ್ಷಗಾನದ ಹುಚ್ಚು ಹತ್ತಿಸಿಕೊಂಡು ತಾನೇ ವಾಲಿಯ ಮುಖ್ಯಪಾತ್ರ ನಿರ್ವಹಿಸಿ ರಾಮನ ಬಾಣಕ್ಕೆ ಪಾತ್ರದಲ್ಲಿ ಬಲಿಯಾದ ಕಥಾನಾಯಕ ಮಾರನೇ ದಿನ ‘ನಿದ್ರೆಯಲ್ಲಿಯೂ  ರಾಮಾ ರಾಮಾ ಎನ್ನುತ್ತಿದ್ದರು. ಮಧ್ಯದಲ್ಲೊಮ್ಮೆ ಗಟ್ಟಿಯಾಗಿ ರಾಮಾರಾಮಾರಾಮಾ ಎಂದಾಗ ಮಗ ಹತ್ತಿರ ಬಂದು ಏನಾಯಿತೆಂದು‌ ನೋಡಿದ. ಅವರ ದೇಹ ತಣ್ಣಗಾಗಿತ್ತು. ಕಿಬ್ಬೊಟ್ಟೆಯಲ್ಲಿ ಬಾಣ ಚುಚ್ಚಿದ ಗುರುತಿತ್ತು’

ಇಂತಹ ತಣ್ಣನೆಯ ಚಿತ್ರಣಗಳು ಒಮ್ಮೆಗೆ ಜೀವವನ್ನು ಅಲ್ಲಾಡಿಸಿದರೂ ಹಿಡಿದಿಡುತ್ತವೆ. ವಿಷ್ಣು ಭಟ್ ಕಥೆಗಳ ಪಾತ್ರಗಳಿಗೆ ಕೊಡುವ ಹೆಸರುಗಳು ಕಥೆಗಳಂತೇ ವಿಶೇಷ. ಯಮುನಾಪುರಿ (ಯಮನ ಪುರಿ), ನಳಧರ್ಮ, ಅಪರಾಜಿತ, ಅಹಲ್ಯಾ, ಶಂಖತೀರ್ಥ, ಧ್ಯಾನತೀರ್ಥ, ಸೂರ್ಯತೇಜ, ಭಾನುಪ್ರಭೆ… ಈ ಹೆಸರುಗಳನ್ನು ಕಲ್ಪಿಸುವಾಗಲೇ ಮನಸ್ಸು ಒಂದು ವಿಚಿತ್ರ ಲೋಕವನ್ನು ಸೃಷ್ಟಿಸಿಕೊಳ್ಳುತ್ತದೆ.

ಬಹಳ ನಿಧಾನಗತಿಯ ಓದುಗಳಾದ ನಾನು ಈ ಕಥೆಗಳನ್ನು ಹಿಡಿದ ನಿಲುಮೆಯಲ್ಲೇ ಓದಿ ಮುಗಿಸಿದೆ.

ಗೋಮಿನಿ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕ ಕ್ಕೆ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರ ಮುನ್ನುಡಿ ‌ಮತ್ತು ಕಥಾಕೂಟದ ಅಡ್ಮಿನ್ ಕತೆಗಾರ ಕುಂಟಿನಿಯವರ ಬೆನ್ನುಡಿಯಿದೆ. ಪುಸ್ತಕದ ಮುಖಬೆಲೆ ನೂರು ರೂಪಾಯಿ.

ಪುಸ್ತಕಕ್ಕಾಗಿ 9986692342ಸಂಪರ್ಕಿಸಬಹುದು.

ಮತ್ತೊಂದು ಗುಟ್ಟಿನ ಸಂಗತಿ.

ಸಂಕಲನ ಓದಿ ಮುಗಿಸಿ ಊಟಕ್ಕೆ ತಟ್ಟೆ ಹಾಕಿ ಕೂತಾಗ ಪಕ್ಕದಲ್ಲಿ ಯಾರೋ ನನ್ನನ್ನೇ ನಿಟ್ಟಿಸಿ ನೋಡುತ್ತಿರುವಂತೆ ಅನಿಸಿ ಮೈ ತಣ್ಣಗಾಗಿ ಬದುಕಿದ್ದೀನಾ ಅಂತೊಮ್ಮೆ ಚಿವುಟಿ ನೋಡಿಕೊಂಡೆ!! ಪ್ರತಿಸಾವಿನ ಹಿಂದೆ ಬದುಕಿನ ನಾಟಕವಿದೆ ಎನ್ನುವ ವಿಷ್ಣು ಭಟ್ ರ ಈ ಕಥೆ ಓದಿದ ಮೇಲೆ ಒಂದೇ ಒಂದು ಪ್ರಶ್ನೆ ಓದಿದ ನನ್ನೊಳಗೆ ಹುಟ್ಟಿದೆ.

‘ವಿಷ್ಣು..ನೀವು ನೀವೇನಾ?’

‍ಲೇಖಕರು Admin

December 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vishnu

    ನಿಮ್ಮ ಓದಿನ ಪ್ರೀತಿಗೆ, ಇಲ್ಲಿ ಬರೆದು ಹರಸಿದ್ದಕ್ಕೆ ವಂದನೆ ನಂದಿನಿಯವರೆ. ಅವರಿಗೆ ಥ್ಯಾಂಕ್ಸ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: