ದೊರೆಯಾಗಲೊಲ್ಲದ ದೊರೆಸ್ವಾಮಿ

ನಾಗೇಶ ಹೆಗಡೆ

ಅವರು ಹೆಸರಿಗಷ್ಟೇ ದೊರೆಸ್ವಾಮಿ. ದೊರೆತನಕ್ಕೂ ದೂರ, ಸ್ವಾಮಿತ್ವಕ್ಕೂ ಪ್ರತಿರೋಧ.

ನಾನು ಪತ್ರಕರ್ತ ಆಗಲೆಂದು ಬೆಂಗಳೂರಿಗೆ ಬಂದಾಗ ಈ ವಿಶಿಷ್ಟ ಪತ್ರ-ಕರ್ತರ ಪರಿಚಯವಾಯಿತು. ಇವರು ಆಗಾಗ ‘ವಾಚಕರ ವಾಣಿ’ಗೆ ಪತ್ರ ಬರೆಯುತ್ತಿದ್ದರು. ಕುಸಿಯುತ್ತಿರುವ ನೈತಿಕತೆ, ಹೆಚ್ಚುತ್ತಿರುವ ಅಸಮಾನತೆ, ಆಳುವ ವರ್ಗದ ಸ್ವಾರ್ಥಪರ ಧೋರಣೆ, ಅಧಿಕಾರಿಗಳ ನಿರ್ಲಕ್ಷ್ಯ -ಹೀಗೆ ಎಚ್ಚರಿಕೆಯ ಕಾರ್ಡ್‌ ಅವರಿಂದ ಪ್ರಜಾವಾಣಿಗೆ ಬರುತ್ತಿತ್ತು.

ಒಮ್ಮೆ ನನಗೂ ಒಂದು ಕಾರ್ಡ್‌ ಹಾಕಿದರು. ಪರಿಸರ ರಕ್ಷಣೆ ಕುರಿತು ಗಾಂಧೀ ಭವನದಲ್ಲಿ ಮೀಟಿಂಗ್‌ ಮಾಡಬೇಕು, ಬನ್ನಿ ಅಂತ.
ಡ್ಯೂಟಿ ಮುಗಿಸಿ, ಎಂದಿನಂತೆ ಸೈಕಲ್‌ ಮೇಲೆ ಅವರಿದ್ದಲ್ಲಿಗೆ ಹೋದೆ. ನೋಡಿದರೆ, ಅವರು ಅಷ್ಟೆತ್ತರ ನಾನು ಇಷ್ಟೆತ್ತರ. ಅವರಿಗೆ ೬೦, ನನಗೆ ೩೦. ನನ್ನ ಬರಹಗಳನ್ನೆಲ್ಲ ಓದಿಕೊಂಡಿದ್ದ ಅವರು ಬೆನ್ನ ಮೇಲೆ ಕೈ ಇಟ್ಟು ‘ಹೀಗೆ ಲೇಖನ ಬರೆದರೆ, ವರದಿ ಮಾಡಿದರೆ ಸಾಲದು; ಜನರನ್ನು ಎಬ್ಬಿಸೋಕೆ ಬೇರೆ ತಂತ್ರ ಹೂಡಬೇಕು, ಸತ್ಯಾಗ್ರಹ ಮಾಡಬೇಕು; ಸುದ್ದಿ ಮಾಡಬೇಕು’ ಎಂದರು.

‘ಸುದ್ದಿ- ಅದನ್ನು ನಾವು ಹ್ಯಾಗೆ ಮಾಡೋಕೆ ಸಾಧ್ಯ? ಸುದ್ದಿಯನ್ನು ವರದಿ ಮಾಡೋದಷ್ಟೇ ನಮ್ಮ ಕೆಲಸ’ ಎಂದು ನಾನು ವಾದಿಸಿದ್ದೆ.
‘ಒಂದು ಕರಪತ್ರ ಬರೆದುಕೊಡಿ’ ಎಂದು ನನಗೆ ಆದೇಶ ನೀಡಿದರು. ಸ್ವಾತಂತ್ರ್ಯ ಹೋರಾಟದ, ಎಮರ್ಜೆನ್ಸಿ ಕಾಲದ ಭೂಗತ ಚಳವಳಿಗಳ ತಮ್ಮ ಅನುಭವವನ್ನು ವಿವರಿಸಿದರು. ಕರಪತ್ರದ ವಿಷಯವನ್ನೂ ಸೂಚಿಸಿದರು.

‘ವಿದ್ಯುತ್‌ ಶಕ್ತಿಯ ಹೆಸರಿನಲ್ಲಿ ಪ್ರಕೃತಿಯ ಧ್ವಂಸ ಕಾರ್ಯ ನಡೀತಿದೆ. ಅದರ ಬಗ್ಗೆ ನಾಗರಿಕರು ಚರ್ಚೆ ಮಾಡಬೇಕು. ಗಾಂಧೀಭವನದಲ್ಲಿ ಸಭೆಗೆ ಬನ್ನಿ’ ಎಂಬ ಆಮಂತ್ರಣ ಕರಪತ್ರ. ಅದರಲ್ಲಿ ಏನೇನು ಮುಖ್ಯಾಂಶ ಇರಬೇಕು ಎಂಬುದನ್ನೂ ತಿಳಿಸಿದರು. ಕರಪತ್ರವನ್ನು ಯಾರದೋ ನೆರವಿನಿಂದ ಮುದ್ರಿಸಿ ಹೇಗೋ ಹಂಚಿರಬೇಕು. ಸಭೆ ಸೇರಿತು. ಸಾಕಷ್ಟು ಸಂಖ್ಯೆಯಲ್ಲಿ ಸರ್ಕಾರೇತರ ಸಂಸ್ಥೆ (NGO)ಗಳೂ ಪಾಲ್ಗೊಂಡಿದ್ದವು. ರಾಜ್ಯದ ಎಲ್ಲೆಲ್ಲಿ ನಿಸರ್ಗ ಸಂಪತ್ತಿನ ಕೊಳ್ಳೆ ಆಗುತ್ತಿದೆ, ಹೇಗೆ ಅಲ್ಲೆಲ್ಲ ಜನಜಾಗೃತಿ ಮಾಡಬೇಕು ಯಾರು ಯಾರು ಹೇಗೆ ಹೇಗೆ ಸಂಘಟನೆಗೆ ಕೈಜೋಡಿಸಬೇಕು ಇತ್ಯಾದಿ ಚರ್ಚೆ.

ನನ್ನ ಪಾಲಿಗೆ ಪರಿಸರ ಸಾಹಿತ್ಯವನ್ನು ಒದಗಿಸುವ, ಲೋಗೋ, ಭಿತ್ತಿಚಿತ್ರಗಳ ವಿನ್ಯಾಸದ, ಕರಪತ್ರ ಹೊರಡಿಸುವ ಕೆಲಸ ಬಂತು.
ಅಲ್ಲಿಂದ ಆರಂಭವಾಯಿತು ‘ಪರಿಸರವಾದ’ ಎಂಬ ನಮ್ಮ ಹೊಸ ಇಸಂ. ನನ್ನ ಹೊಸ ‘ಗೆರಿಲ್ಲಾ’ ಜರ್ನಲಿಸಂ. ಕಡಲತೀರದಲ್ಲಿ ಶಿವರಾಮ ಕಾರಂತರು, ಬೆಂಗಳೂರಿನ ಜನಸಾಗರದಲ್ಲಿ ದೊರೆಸ್ವಾಮಿಯವರು ನಮ್ಮ ಹೊಸ ಚಳವಳಿಯ ಎರಡು ಮುಖ್ಯ ಆಧಾರಸ್ತಂಭಗಳಾಗಿದ್ದವು. ಆಮೇಲಿಂದ ದೊರೆಸ್ವಾಮಿಯವರು ಅನೇಕ ಬಗೆಯ ಪರಿಸರ ಪ್ರತಿಭಟನೆಗಳಲ್ಲಿ ನಾಡಿನುದ್ದಕ್ಕೂ ಓಡಾಡಿದರು. ಅದೆಷ್ಟೊ ಬಾರಿ ಎನ್‌ಆರ್‌ ಕಾಲೊನಿಯಲ್ಲಿದ್ದ ತಮ್ಮ ಮನೆಗೆ ನನ್ನನ್ನು ಕರೆಸಿಕೊಂಡು ಅಂದಂದಿನ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದರು.
ಕೈಗಾ ಚಳವಳಿಯ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ವನ್ಯಸಂಪತ್ತು ಅವರನ್ನು ಮೂಕವಿಸ್ಮಿತರನ್ನಾಗಿಸಿತ್ತು. ಅನೇಕ ಹಳ್ಳಿಗಳಲ್ಲಿ ಸಂಚರಿಸಿದರು.

ನನ್ನ ಊರಾದ ಬಕ್ಕೆಮನೆಗೂ ನನ್ನ ಜೊತೆ ಬಂದಿದ್ದರು. ನಮ್ಮ ತಂದೆಯವರೂ ಸ್ವಾತಂತ್ರ್ಯ ಹೋರಾಟಗಾರ ಆಗಿದ್ದರಿಂದ ಬಾಂಧವ್ಯ ಬೆಸೆಯಿತು. ಮೂರು ದಿನ ಕಾಡುಮೇಡು ಸಂಚರಿಸಿದರು. ಹಳ್ಳ ದಾಟುವಾಗ ಬಿದ್ದು ಗಾಯಗೊಂಡರೂ ಕಾಡು ಸುತ್ತುವ ಅವರ ಉತ್ಸಾಹವೇನೂ ಕಡಿಮೆ ಆಗಿರಲಿಲ್ಲ. ಆಗ ಅಘನಾಶಿನಿಗೂ ಡ್ಯಾಮ್‌ ಕಟ್ಟು ವ ಸೂಚನೆ ಇತ್ತು. “ಇಂಥ ಹಸುರು ನಾಡನ್ನು ಮುಳುಗಿಸಿ ಅದ್ಯಾರ ಅಭಿವೃದ್ಧಿ ಸಾಧಿಸ್ತಾರಂತೆ ಇವರು; ಈ ಊರು ಮುಳುಗುವುದೇ ಆದರೆ ನಾನೂ ಇರ್ತೇನೆ ನಿಮ್ಮ ಜೊತೆಗೆ -ನಮ್ಮನ್ನೆಲ್ಲ ಮುಳುಗಿಸಲಿ ನೋಡೋಣ” ಅಂದರು.

ಇತ್ತ ಬೆಂಗಳೂರಿನ ಗಾಂಧೀಭವನದಲ್ಲಿ ಅವರ ನೇತೃತ್ವದಲ್ಲಿ ನಮ್ಮ ಚಿಂತನ ಗೋಷ್ಠಿ ತಿಂಗಳಿಗೊಮ್ಮೆ ನಡೆಯುತ್ತಲೇ ಇತ್ತು. IIScಯಿಂದ ಪ್ರೊ ಮಾಧವ ಗಾಡಗೀಳ, ಡಾ. ರಾಮಚಂದ್ರ ಗುಹಾ, ಡಿಕೆ ಸುಬ್ರಹ್ಮಣ್ಯ, ಅಪರೂಪಕ್ಕೆ ಎಕೆಎನ್‌ ರೆಡ್ಡಿ ಕೂಡ ಭಾಗವಹಿಸಿ ನಮಗೆಲ್ಲ ಇಕಾಲಜಿ-ಎನರ್ಜಿ ಪಾಠ ಹೇಳುತ್ತಿದ್ದರು.

ಡಾ. ಕುಸುಮಾ ಸೊರಬ, ಡಾ. ಎಸ್‌ ಆರ್‌. ಹಿರೇಮಠ, ಆಲ್ಮಿತ್ರಾ ಪಟೇಲ್‌, ಅಪರೂಪಕ್ಕೆ ಪ್ರೊ. ನಂಜುಂಡಸ್ವಾಮಿ ಕೂಡ ಬರುತ್ತಿದ್ದರು. ಶರಾವತಿ ಟೇಲ್‌ರೇಸ್‌, ಕೊಜೆಂಟ್ರಿಕ್ಸ್‌, ನೀಲಗಿರಿ ನೆಡುತೋಪುಗಳ ವಿರುದ್ಧದ ಕಿತ್ತಿಕೊ ಹಚ್ಚಿಕೊ ಚಳವಳಿ, ಕೈಗಾ ಚಳವಳಿಯ ಸೂತ್ರಧಾರ “ಅವಿನಾಶ” (ಅಣುಶಕ್ತಿ ವಿರೋಧಿ ನಾಗರಿಕ ಶಕ್ತಿ) ಇವಕ್ಕೆಲ್ಲ ಮೂಲ ಪೋಷಕಾಂಶ ಇಲ್ಲೇ ಸಿಗುತ್ತಿತ್ತು. ದೊರೆಸ್ವಾಮಿಯವರೇ ಬಹುತೇಕ ಸಂದರ್ಭಗಳಲ್ಲಿ ನಮ್ಮ ಮುಖವಾಣಿ ಆಗಿರುತ್ತಿದ್ದರು.

ಚಳವಳಿಗಳ ಕಾಲ ಮುಗಿಯುತ್ತ ಬಂದಂತೆ (ಕಾರ್ಮಿಕ ಚಳವಳಿ, ಪರಿಸರ ಚಳವಳಿ, ರೈತ ಚಳವಳಿ, ಗ್ರಾಹಕ ಚಳವಳಿ, ವಿದ್ಯಾರ್ಥಿ ಚಳವಳಿ ಇತ್ಯಾದಿಗಳೆಲ್ಲ ಮುಗಿಯುತ್ತ ಬಂದಂತೆ) ನಾವೆಲ್ಲ ನಮ್ಮನಮ್ಮ ಗೂಡು ಸೇರಿಕೊಂಡರೂ ದೊರೆಸ್ವಾಮಿ ಹೊಸ ಕ್ಷೇತ್ರಗಳನ್ನು ಹುಡುಕುತ್ತಲೇ ಇದ್ದರೇನೊ. ಫ್ಯಾಶನ್‌ ಶೋ ವಿರುದ್ಧ, ಜಪಾನೀ ಟೌನ್‌ಶಿಪ್‌ ವಿರುದ್ಧ, ಬಳ್ಳಾರಿಯ ಗಣಿಗಾರಿಕೆಯ ವಿರುದ್ಧ, ಭೂಕಬಳಿಕೆಯ ವಿರುದ್ಧ, ಕೆರೆ ಕಬಳಿಕೆ ವಿರುದ್ಧ, ತಿಪ್ಪೆ ಮಾಫಿಯಾಗಳ ವಿರುದ್ಧ, ಸಿಎಎ ವಿರುದ್ಧ ಅವರು ಧ್ವನಿ ಎತ್ತುತ್ತಲೇ ಇದ್ದರು.

ನಾವಿಬ್ಬರೂ ಅಪರೂಪಕ್ಕೆ ವೇದಿಕೆಯ ಮೇಲೆ ಸೇರಿದಾಗಲೂ ನಮ್ಮ ಹಳೇ ಚಳವಳಿಗಳನ್ನು ಮತ್ತು ನಮ್ಮ ಊರಿನಲ್ಲಿ ಗುಡ್ಡ ಬೆಟ್ಟಗಳನ್ನು ಏರಿಳಿದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದರು. ಗುಡ್ಡ ಬೆಟ್ಟಗಳ ರಕ್ಷಣೆಗೆಂದೇ ಪರಿಸರ ಚಳವಳಿ ಪ್ರಾರಂಭಿಸಲು ನಮಗೆಲ್ಲ ಪ್ರೇರಣೆ ಕೊಟ್ಟ ಇವರು ಒಂದು ಬೆಟ್ಟದ ವಿರುದ್ಧ ಚಳವಳಿ ಮಾಡಿದ್ದು ನನಗೆ ಮರೆಯಲಾಗದ ಘಟನೆ. ಅದು ಏಳು ವರ್ಷಗಳ ಹಿಂದೆ ಘಟಿಸಿದ್ದು..

ಆಗ ಇವರು ಬೆಂಗಳೂರಿನಿಂದ ಬೂದಿಗೆರೆಗೆ ಯಾರದೋ ಕಾರಿನಲ್ಲಿ ಹೋಗುತ್ತಿದ್ದರು. ಮಂಡೂರಿನ ಮೂಲಕ ಹೋಗುತ್ತಿದ್ದಾಗ ಘೋರ ದುರ್ನಾತ ಕಿಲೊಮೀಟರ್‌ಗಟ್ಟಲೆ ಬರ್ತಾನೇ ಇತ್ತು. ಇವರು ಕಾರು ನಿಲ್ಲಿಸಲು ಹೇಳಿ ಕೆಳಗಿಳಿದು ‘ಇದ್ಯಾವ ಊರು?, ಎಲ್ಲಿಂದ ಬರ್ತಾ ಇದೆ ದುರ್ವಾಸನೆ?’ ಎಂದು ಅದ್ಯಾರನ್ನೋ ಕೇಳಿದರು.

‘ಓ ಅಲ್ಲಿಂದ ಬರ್ತಾ ಇದೆ’ ಅಂತ ಯಾರೋ ಒಬ್ಬ ದೂರಕ್ಕೆ ಕೈತೋರಿಸಿ ಹೇಳಿದ. ಅದ್ಯಾವ ಬೆಟ್ಟ ಎಂದು ಕೇಳಿದರೆ ‘ಅದು ಬೆಂಗಳೂರಿನ ಕಸದ ಬೆಟ್ಟ’ ಎಂಬ ಉತ್ತರ ಬಂತು. ಎಚ್‌.ಎಸ್‌. ದೊರೆಸ್ವಾಮಿಯವರು ಹಾಗೇ ಮೂಗು ಮುಚ್ಚಿ, ಕಾರು ಹತ್ತಿ ಹೋಗಬಹುದಿತ್ತು. ಬದಲಿಗೆ ಅಲ್ಲಿದ್ದ ನಾಲ್ಕಾರು ಜನರನ್ನು ತರಾಟೆಗೆ ತಗೊಂಡರು.

‘ನಿಮಗೆ ಬುದ್ಧಿಗಿದ್ದಿ ಇದೆಯೇನ್ರೀ? ಯಾಕೆ ಈ ದುರ್ನಾತದಲ್ಲಿ ಬದುಕ್ತಾ ಇದೀರಾ? ಯಾರು ನಿಮ್ಮೂರಿನ ಮುಖಂಡ, ಕರೀರಿ ಅವರನ್ನ!’ ಅಂತ ಒತ್ತಾಯಿಸಿದರು. ಅವರೆದುರು ಅರ್ಧ ಗಂಟೆಯಲ್ಲಿ ಒಂದು ಪಂಚಾಯ್ತಿ ಸೇರಿತು. ಆ ಬೆಟ್ಟದ ವಿರುದ್ಧ ಹೋರಾಡುವಂತೆ ದೊರೆಸ್ವಾಮಿ ಅಲ್ಲಿನ ಜನರಿಗೆ ತಾಕೀತು ಮಾಡಿದರು. ಊರಿನ ಮುಂದಾಳುಗಳನ್ನು ಬೆಂಗಳೂರಿಗೆ ಕರೆಸಿ, ಒಂದಿಬ್ಬರು ವಕೀಲರ ಪರಿಚಯ ಮಾಡಿಸಿ ನಗರ ಪಾಲಿಕೆಯ ವಿರುದ್ಧ ದಾವೆ ಹೂಡಲು ಪ್ರೇರಣೆ ಕೊಟ್ಟರು. ವಿಚಾರಣೆಗೆ ವರ್ಷಗಟ್ಟಲೆ ಕಾಯುವುದು ಬೇಡ, ನೇರ ಪ್ರತಿಭಟನೆ ಮಾಡಿರೆಂದು ಸಲಹೆ ಕೊಟ್ಟರು.

ಕೆಲವು ದಿನಗಳ ನಂತರ ಪರಿಸರ ತಜ್ಞರೊಂದಿಗೆ ಮತ್ತೆ ಮಂಡೂರಿಗೆ ಹೋದರು. ಶಾಂತಿಯುತ ಆದರೆ ಬೆಂಗಳೂರಿನವರ ಗಮನ ಸೆಳೆಯಬಲ್ಲ ಪ್ರತಿಭಟನೆಯ ನಾನಾ ವಿಧಾನಗಳ ಬಗ್ಗೆ ಹೇಳಿದರು. ಮಾಲಿನ್ಯ ನಿಯಂತ್ರಣ ಅಧಿಕಾರಿಗಳು, ಜನಪ್ರತಿನಿಧಿಗಳು, ವಿಜ್ಞಾನಿಗಳು ಮತ್ತು ಮಾಧ್ಯಮಗಳು ಮಂಡೂರಿನತ್ತ ಬರುವಂತೆ ಮಾಡುವುದು ಹೇಗೆ ಎಂದು ಪಾಠ ಹೇಳಿದರು. ಹೇಳಿದ್ದಷ್ಟೇ ಅಲ್ಲ, ಮಂಡೂರಿನಲ್ಲಿ ಮುಂದೆ ನಡೆದ ಬಹುತೇಕ ಎಲ್ಲ ಪ್ರತಿಭಟನೆಗಳಲ್ಲಿ, ಸಮೀಕ್ಷೆಗಳಲ್ಲಿ, ವಿಚಾರಣೆಗಳಲ್ಲೂ ಹಾಜರಿದ್ದು, ಹೋರಾಟದ ಚೈತನ್ಯ ಬತ್ತದಂತೆ ನೋಡಿಕೊಂಡರು.

ಬೆಂಗಳೂರು ಮಹಾನಗರಪಾಲಿಕೆ ಮಣಿಯಿತು. ಅದೇ ವರ್ಷ (೨೦೧೪ರ) ಡಿಸೆಂಬರ್‌ ೧ರೊಳಗೆ ಮಂಡೂರಿನಲ್ಲಿ ತಿಪ್ಪೆ ಸುರಿತವನ್ನು ನಿಲ್ಲಿಸುವುದಾಗಿ ಘೋಷಿಸಿತು. ನಿಲ್ಲಿಸಲೇಬೇಕೆಂಬ ಅದೆಂಥ ಒತ್ತಡ ಸೃಷ್ಟಿಯಾಯಿತೆಂದರೆ ಒಂದು ವಾರ ಮೊದಲೇ ಕಸದ ಲಾರಿಗಳ ಸಂಚಾರವನ್ನು ನಿರ್ಬಂಧಿಸಲಾಯಿತು.

ಡಿಸೆಂಬರ್‌ ೧ರಂದು ಊರಿನ ಜನರು ಹಬ್ಬ ಆಚರಿಸಿ, ಸಿಹಿ ಹಂಚಿದರು. ‘ನಮ್ಮ ಹಿತ್ತಿಲಲ್ಲಿ ನಿಮ್ಮ ಕಸ ಹಾಕಬೇಡಿ’ (Not In My Backyard ನಿಂಬಿ) ಹೆಸರಿನ ಚಳವಳಿ ಯುರೋಪ್‌ ಅಮೆರಿಕಗಳಲ್ಲಿ ಅನೇಕ ದಶಕಗಳಿಂದ ಚಾಲ್ತಿಯಲ್ಲಿದೆ. ಅಂಥ ಚಳವಳಿಗೆ ಬೆಂಗಳೂರಿನ ಸರಹದ್ದಿನಲ್ಲೂ ಚಾಲನೆ ಕೊಟ್ಟ ಶ್ರೇಯ ದೊರೆಸ್ವಾಮಿಯವರದ್ದು. ಎತ್ತರದ ಮನುಷ್ಯ.

ಎತ್ತರದಲ್ಲಿದ್ದವರ ತಪ್ಪು ನಡೆಗಳನ್ನು ಪ್ರಶ್ನಿಸುತ್ತಲೇ ನಡೆದ ಗಟ್ಟಿಗ.

‍ಲೇಖಕರು Avadhi

May 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. km vasundhara

    ಮಾದರಿ ವ್ಯಕ್ತಿತ್ವ ಕುರಿತ ಮಾದರಿ ಬರಹ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: