ನವೀನ್ ತೇಜಸ್ವಿ ಅವರ ಕೃತಿ ‘ಬಂಗಾರಕಡ್ಡಿ ಡೇರೆಹೂವು’
ಅಮೂಲ್ಯ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಲಕ್ಷ್ಮಣ್ ಕೊಡಸೆ ಅವರ ಬರಹ ಇಲ್ಲಿದೆ.
-ಲಕ್ಷ್ಮಣ್ ಕೊಡಸೆ
ಕುವೆಂಪು ಅವರ ಎರಡೂ ಕಾದಂಬರಿಗಳಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪವಾಗುವ ಒಂದು ಸಮುದಾಯ ಹಳೇಪೈಕ ಎಂಬುದು. ಇವರಿಗೆ ದೀವರು ಎಂಬ ಹೆಸರೂ ಇದೆ ಎಂಬ ಒಂದು ಸಾಲಿನ ವಿವರವನ್ನು ಆವರಣದಲ್ಲಿ ತಮ್ಮ `ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ನೀಡುತ್ತಾರೆ. `ಕಾನೂರು ಹೆಗ್ಗಡತಿ’ಯಲ್ಲಿ ಬರುವ ಹಳೇಪೈಕದ ತಿಮ್ಮ ಕಾದಂಬರಿಯ ಪ್ರಮುಖ ಪಾತ್ರ ಚಂದ್ರೇಗೌಡರ ಒಕ್ಕಲು. ಅವರಿಗೆ ಬೈನೆ ಮರದಿಂದ ಕಳ್ಳು ಇಳಿಸಿ ನಿತ್ಯ ಸಂಜೆ ಅದಕ್ಕಾಗಿ ಇರುವ ಕಳ್ಳುಗೊತ್ತಿನಲ್ಲಿ ಕಾಯಿಸಿ ಬಿಸಿ ಮಾಡಿಕೊಡುತ್ತಿದ್ದವನು. ಹಳೇಪೈಕದ ತಿಮ್ಮನಿಗೂ ಅಲ್ಲಿನ ಒಕ್ಕಲಿಗ ಜಮೀನ್ದಾರ ಗೌಡರಿಗೆ ಇರುವಂತೆ ಶಿಕಾರಿಯ ತಲುಬು. ಗೌಡರ ಮನೆಗಳಲ್ಲಿ ತೋಟಾ ಕೋವಿಗಳಿದ್ದರೆ ತಿಮ್ಮನ ಬಳಿ ಜೋಡು ನಳಿಗೆ ಕೇಪಿನ ಕೋವಿ ಇದೆ. ಒಕ್ಕಲಾಗಿದ್ದರೂ ಸ್ವಲ್ಪಮಟ್ಟಿನ ಸ್ವಂತ ಜಮೀನು ಇದ್ದ ಕಾರಣ ತಿಮ್ಮ, ಗೌಡರ ಮನೆಯ ಜೀತದ ಆಳುಗಳಂತೆ ಇದ್ದವನಲ್ಲ. ಚಂದ್ರೇಗೌಡರಿಗೆ ನಿತ್ಯ ಸಂಜೆ ಕಳ್ಳು ಕಾಯಿಸಿ ಕೊಡುವುದಲ್ಲದೆ, ಅವರ ಮನೆಯ ದೆಯ್ಯದ ಹರಕೆಯಲ್ಲಿ ಕುರಿಯನ್ನು ಕಡಿಯುವುದಕ್ಕೆ ನಿಯೋಜಿತನಾದವನು. ಗೌಡರ ಅತಿಥಿಗಳ ರಾತ್ರಿ ಉಳಿದುಕೊಂಡಾಗ ಅವರಿಗೂ ಕಳ್ಳುಗೊತ್ತಿನಲ್ಲಿ ಕಳ್ಳು ಪೂರೈಸುವವನು. ಚಂದ್ರೇಗೌಡರು ಕುಟುಂಬ ಸಹಿತ ಯಾತ್ರೆಗೆ ಹೋದಾಗ ಸೇರೆಗಾರರ ಉಸ್ತುವಾರಿಯಲ್ಲಿ ಮನೆಯ ಕೆಲಸಗಳು ನಡೆಯುತ್ತಿದ್ದಾಗ ರಾತ್ರಿ ಅಡಕೆ ಸುಲಿಯುವಾಗ ಸೇರೆಗಾರ ರಂಗಪ್ಪಸೆಟ್ಟಿ, ಅವರ ಗೆಳತಿ ಗಂಗೆಗೆ ತಿಮ್ಮನೇ ಕಳ್ಳಿನ ಸೇವೆಯನ್ನು ನೀಡಿದ್ದರ ಪ್ರಸ್ತಾಪ ಸಂಕ್ಷಿಪ್ತವಾಗಿ ಬಂದಿದೆ.
`ಮಲೆಗಳಲ್ಲಿ ಮದುಮಗಳು’ ಕೃತಿಯಲ್ಲಿ ಹಳೇಪೈಕದವರ ಬಗ್ಗೆ ಹೆಚ್ಚಿನ ವಿವರಗಳಿವೆ. ಸಿಂಬಾವಿಯ ಸೇಸನಾಯ್ಕ, ಅವನ ಮಗ ಹಮೀರ, ಅವನ ದಾಯಾದಿ ಮಕ್ಕಳು ರಂಗ, ಪುಟ್ಟ, ಸೇಸನಾಯ್ಕನ ಮನೆಯಲ್ಲಿದ್ದ ಕಾಡಿ, ಸೇಸನಾಯ್ಕನ ಭಾವ ಸೀತೂರಿನ ತಿಮ್ಮನಾಯ್ಕನ ಪಾತ್ರಗಳಿವೆ. ವಿಧವೆ ಕಾಡಿಯ ಕಳ್ಳಬಸಿರಿನ ಘಟನೆ, ಅದಕ್ಕೆ ಕಾರಣರಾದವರ ಪತ್ತೆಗೆ ಸೇಸನಾಯ್ಕನ ಮನೆಯಲ್ಲಿ ನಡೆಯುವ ಸೀಮೆ ಮುಖಂಡರ ಸಭೆಯ ಪ್ರಸ್ತಾಪ, ಕಳ್ಳಬಸಿರಿಗೆ ಕಾರಣರಾದವರು ಎಂಬ ಗುಮಾನಿಯಲ್ಲಿ ಜನಾಂಗದ ಮುಖಂಡರಲ್ಲಿ ಒಬ್ಬನಾದ ಸೇಸನಾಯ್ಕನೂ ಇರಬಹುದೆಂಬ ಸೂಚನೆ- ಇಂಥ ವಿವರಗಳು ಸಣ್ಣದಾಗಿ ಬಂದಿವೆ. ಹಳೇಪೈಕದವರು ಸ್ವಂತ ಜಮೀನು ಹೊಂದುವುದರ ಬಗ್ಗೆ ಒಕ್ಕಲಿಗ ಗೌಡರಲ್ಲಿ ತೀವ್ರ ಅಸಮಾಧಾನ ಇರುವ ಸೂಚನೆ ಇದೆ. ಗೌಡರು ತಮ್ಮ ಮದುವೆಗಳಲ್ಲಿ ಮದುಮಗನನ್ನು ಕುದುರೆಯ ಮೇಲೆ ಮರವಣಿಗೆಯಲ್ಲಿ ಕರೆದೊಯ್ದು, ಮದುವೆಯಾದ ನವದಂಪತಿಯನ್ನು ದಂಡಿಗೆಯಲ್ಲಿ (ಪಲ್ಲಕ್ಕಿ) ಒಯ್ಯುವುದನ್ನು ಹಳೇಪೈಕದವರು ಅನುಕರಿಸಬಾರದು ಎಂದು ಕಟ್ಟು ಹಾಕುವುದರ ಪ್ರಸ್ತಾಪವೂ ಇದೆ. `ನಮ್ಮ ಕುದುರೆ, ನಮ್ಮ ದಂಡಿಗೆ, ನಮ್ಮ ಬೋವಿಗಳು- ಇದನ್ನೆಲ್ಲ ಕೇಳುವುದಕ್ಕೆ ಈ ಗೌಡಮಕ್ಕಳು ಯಾರು’ ಎಂದು ಗುಟುರು ಹಾಕಿದ ಸೇಸನಾಯ್ಕ ತನ್ನ ಮಗ ಹಮೀರನ ಮದುವೆಗೆ ಸಾಬರ ಕುದುರೆಯನ್ನು ಗೊತ್ತು ಮಾಡುವ ಪ್ರಸ್ತಾಪವೂ ಇದೆ. ಹಮೀರನೊಟ್ಟಿಗೆ ವಸೂಲಿ ಸಾಬರು ನಡೆಸುವ ಸರಸ ಮಾತುಕತೆಯಲ್ಲಿ ಇನ್ನಷ್ಟು ವಿವರಗಳು ಇವೆ.

ಹಳೇಪೈಕರ ಇನ್ನೊಂದು ಪಾತ್ರ ಯಂಕಿಯದು. ವಿಧವೆಯಾಗಿದ್ದು ಒಂಟಿ ಬಾಳು ನಡೆಸುತ್ತಿದ್ದ ಅವಳ ಬಗ್ಗೆ ನೀಡುವ ವಿವರಗಳು ಸ್ವಾರಸ್ಯಕರವಾಗಿವೆ. ಸೂಲಗಿತ್ತಿಯಾಗಿಯೂ ಕೆಲಸ ಮಾಡುತ್ತಿದ್ದ ಯಂಕಿ, ಮುಕುಂದಯ್ಯ ಮದುವೆಮನೆಯಿಂದ ಚಿನ್ನಮ್ಮನನ್ನು ಹಾರಿಸಿಕೊಂಡು ಬಂದು ಹುಲಿಕಲ್ಲು ನೆತ್ತಿಯ ಮೇಲಿನ ಕಲ್ಲುಮಂಟಪದಲ್ಲಿ ಅಡಗಿಸಿ ಇಡುವ ಹುನ್ನಾರಕ್ಕೆ ಪರೋಕ್ಷವಾಗಿ ಯಂಕಿಯ ಸಹಾನುಭೂತಿಯ ನೆರವು ಸಿಗುವುದನ್ನು ಸಹೃದಯತೆಯಿಂದ ವಿವರಿಸಲಾಗಿದೆ.
ಹಳೇಪೈಕರ ಬಗ್ಗೆ ತಿರಸ್ಕಾರ ಭಾವ ವ್ಯಕ್ತವಾಗುವಂಥ ಪದಬಳಕೆಯೂ ಇದೆ. ಗೌಡರ ದಬ್ಬಾಳಿಕೆಗೆ ಬಗ್ಗದೆ ನಮ್ಮ ದಂಡಿಗೆ, ನಮ್ಮ ಕುದುರೆ ಎಂದು ಸ್ವಂತಿಕೆಯನ್ನು ಮೆರೆಯುವ ಸಿಂಬಾವಿ ಸೇಸನಾಯ್ಕನನ್ನು `ಸೊಕ್ಕಿದ ಗೂಳಿ’ ಎಂದು ಬಣ್ಣಿಸಿ ಅದು ಗುಟುರು ಹಾಕುವುದನ್ನು ಸೂಚಿಸಲಾಗಿದೆ. ಅದರಂತೆಯೇ ಹೂವಳ್ಳಿ ವೆಂಕಟನಾಯಕರ ಮನೆಯ ದೆಯ್ಯದ ಹರಕೆಯ ಔತಣದ ವಿವರ ನೀಡುವಾಗ `ಹಂದಿಯ ಹಸಿಗೆಗೆ ಬಂದ ಹಳೇಪೈಕದವರಂತೂ ಅನಿವಾರ್ಯ ಅತಿಥಿಗಳಷ್ಟೆ’ ಎಂದು ಹೇಳಲಾಗಿದೆ.
ಕುವೆಂಪು ಅವರಲ್ಲಿ ಪ್ರಸ್ತಾಪವಾಗಿ ಬರುವ ಹಳೇಪೈಕರ ಬದುಕಿನ ವಿವರಗಳು ಸಾಗರದ ನಾ.ಡಿಸೋಜ ಅವರ ಕಥೆ ಕಾದಂಬರಿಗಳಲ್ಲಿ ಮುಳುಗಡೆಯ ಹಿನ್ನೆಲೆಯಲ್ಲಿ ಆಂಶಿಕವಾಗಿ ಪ್ರಸ್ತಾಪವಾಗಿವೆ. ನಾ.ಡಿಸೋಜ ದೀವರ ಜೀವನ ವಿಧಾನದ ಕುರಿತಾಗಿ ಲೇಖನಗಳನ್ನು ಬರೆದು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಿದೆ. ಐವತ್ತರ ದಶಕದಲ್ಲಿ ತಾಲ್ಲೂಕು ಕೇಂದ್ರ ಸಾಗರಕ್ಕೆ ಅಪರೂಪಕ್ಕೆ ಬರುತ್ತಿದ್ದ ದೀವರನ್ನು ಸಾಗರದ `ನಾಗರಿಕ’ರ ಹಂಗಿಸಿ ಅಪಮಾನಗೊಳಿಸುತ್ತಿದ್ದುದು ಸಹಜವಾಗಿದ್ದುದು ನಾ.ಡಿಸೋಜ ಕಥೆಗಳಲ್ಲಿ ಪ್ರಸ್ತಾಪವಿದೆ. ಕಾಗೋಡು ಸತ್ಯಾಗ್ರಹಕ್ಕೆ ನೆಪವಾಗಿದ್ದ `ಕೊಳಗ’ ನಾ.ಡಿಸೋಜ ಅವರ ಕಾದಂಬರಿಯೊಂದರ ಕೇಂದ್ರ ವಸ್ತು. ಈಚಿನ ಲೇಖಕಿ ಎಚ್.ಎಸ್.ಅನುಪಮಾ ತಮ್ಮ `ಕದಳಿಯ ಬೆರಗು’ ಕಾದಂಬರಿಯ ಒಂದು ಅಧ್ಯಾಯದಲ್ಲಿ ದೀವರ ಭೂಮಿ ಹುಣ್ಣಿಮೆ ಆಚರಣೆಯ ವಿವರಗಳನ್ನು ಪ್ರಾಸಂಗಿಕವಾಗಿ ದಾಖಲಿಸಿದ್ದಾರೆ. ಸಾಗರ- ಸೊರಬ ಸೀಮೆಯ ಬರಹಗಾರರು ತಮ್ಮ ಬರಹಗಳಲ್ಲಿ ದೀವರ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಸೊರಬದ ದೇವರಾಜ ಅವರ ಒಂದು ಕಾದಂಬರಿ ದೀವರ ಬದುಕನ್ನೇ ಆಧರಿಸಿದ್ದು.
ಹೊಸ ಪೀಳಿಗೆಯ ಬರಹಗಾರ ನವೀನ್ ತೇಜಸ್ವಿಯ `ಬಂಗಾರಕಡ್ಡಿ ಡೇರೆಹೂವು’ ದೀವರ ಹೆಣ್ಣುಮಕ್ಕಳನ್ನು ಮುಖ್ಯಪಾತ್ರಗಳಾಗಿ ಇಟ್ಟುಕೊಂಡು ಬರೆದ ಹತ್ತು ಕಥೆಗಳ ಸಂಕಲನ. ಮಲೆನಾಡಿನಲ್ಲಿ ಮುಂಗಾರಿನ ನಂತರ ಅರಳುವ ಹೂವುಗಳ ಹೆಸರುಗಳು ಕಥೆಗಳ ಶೀರ್ಷಿಕೆಯಾಗಿವೆ. ಸೊರಬ ಸೀಮೆಯ ಬಡ ದೀವರ ಬದುಕನ್ನು ಸಾವಧಾನದಲ್ಲಿ ಚಿತ್ರಿಸಿದ ಇಲ್ಲಿನ ಕಥೆಗಳಿಗೆ `ಬಂಗಾರಕಡ್ಡಿ ಡೇರೆಹೂವು’, `ಸುರಗಿ’, `ಚೆಂಡು’, `ಅಬ್ಬಲಿಗೆ’, `ಕಾಗದದಾಳೆ ಹೂವು’, `ಆಡುಮುತ್ತಲು’, `ಗ್ವಾಟೆ ಹೂ’, `ಗುಲಾಬಿ’, `ಬಾಳೆಹೂ’, `ಸೇವಂತಿಗೆ’ ಎಂದು ಹೆಸರಿಡಲಾಗಿದೆ. ಕಥೆಗಳಲ್ಲಿ ಹೂವುಗಳು ಪ್ರಾಸಂಗಿಕವಾಗಿ ಬರುತ್ತವೆ.
ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮಷ್ಟಕ್ಕೆ ಬೇಸಾಯದಲ್ಲಿ ತೊಡಗಿದ್ದು ಜಮೀನ್ದಾರ ಒಡೆಯರ ಒಕ್ಕಲುಗಳಾಗಿದ್ದ ದೀವರು ಸ್ವಂತ ಜಮೀನು ಹೊಂದಿದ್ದು ಕಡಿಮೆ. ಅಲ್ಲಲ್ಲಿ ಸ್ವಂತ ಜಮೀನು ಹೊಂದಿದ್ದವರು ಪ್ರಬಲರಾಗಿದ್ದ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಜಮೀನ್ದಾರರು ಎದುರು ತಗ್ಗಿ ಕುಗ್ಗಿ ವರ್ತಿಸುವುದೇ ಅವರ ಸಹಜ ಸ್ವಭಾವ ಎಂಬಂತೆ ಇಪ್ಪತ್ತನೆಯ ಶತಮಾನದ ಮೊದಲ ಕೆಲವು ದಶಕಗಳ ಸಾಹಿತ್ಯ ಕೃತಿಗಳಲ್ಲಿ ವರ್ಣಿತವಾಗಿದೆ. ಒಡೆಯರಿಗೆ ನೀಡುವ ಗೇಣಿ ಬತ್ತದ ಅಳತೆಗೆ ಬಳಸುತ್ತಿದ್ದ `ಕೊಳಗ’ದ ಗಾತ್ರವೇ ವಿವಾದದ ಕೇಂದ್ರವಾಗಿ ಗೇಣಿ ಒಕ್ಕಲುಗಳಿಗೆ ನ್ಯಾಯ ಒದಗಿಸಲು 1951ರ ಏಪಿಲ್ 18ರಂದು ಆರಂಭವಾದ ದೀವರ ಸಂಘಟಿತ ಹೋರಾಟ ಮುಂದೆ ಕಾಗೋಡು ಸತ್ಯಾಗ್ರಹವೆಂಬ ಐತಿಹಾಸಿಕ ಘಟನೆಗೆ ನೆಪವಾಗಿತ್ತು. ಸ್ವಾತಂತ್ರ್ಯ ಬಂದ ನಾಲ್ಕನೇ ವರ್ಷದಲ್ಲಿ ಗೇಣಿ ರೈತರ ಪರವಾಗಿ ಶಾಂತವೇರಿ ಗೋಪಾಲಗೌಡರ ನೇತೃತ್ವದಲ್ಲಿ ಆರಂಭವಾದ ಸತ್ಯಾಗ್ರಹ ರಾಮಮನೋಹರ ಲೋಹಿಯಾ ಅವರನ್ನೂ ಹೋರಾಟಕ್ಕೆ ಸೆಳೆಯುವಷ್ಟು ಪ್ರಖರವಾಗಿತ್ತು. ಗೇಣಿದಾರರ ಪರವಾಗಿ ಸೋಷಲಿಸ್ಟ್ ಪಕ್ಷದ ಗೋಪಾಲಗೌಡರು ಹೋರಾಟದ ರಂಗಕ್ಕೆ ಪ್ರವೇಶ ಮಾಡುವ ಮೊದಲು ಗೇಣಿ ರೈತರನ್ನು ಸಂಘಟಿಸಿದ್ದವರು ವಡ್ನಾಲದ ಎಚ್.ಗಣಪತಿಯಪ್ಪ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದ್ದ ಗಣಪತಿಯಪ್ಪ ದೀವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಯತ್ನಿಸಿದ್ದ ಧೀಮಂತರು.
ಶಿವಮೊಗ್ಗ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಾಡಂಚಿನಲ್ಲಿ ಬೇಸಾಯವೇ ಪ್ರಮುಖ ಕಸುಬಾಗಿ ನೆಲೆಸಿರುವ ದೀವರ ಸಮುದಾಯ ಬುಡಕಟ್ಟು ಸ್ವರೂಪವನ್ನು ಹೊಂದಿರುವುದನ್ನು ಈಗಿನ ಸಂಶೋಧಕರು ಕ್ಷೇತ್ರಕಾರ್ಯಗಳನ್ನು ಆಧರಿಸಿ ಪ್ರತಿಪಾದಿಸಿದ್ದಾರೆ. ಅಂಥ ವಿದ್ವಾಂಸರಲ್ಲಿ ಡಾ. ಮೋಹನ್ ಚಂದ್ರಗುತ್ತಿ ಅವರು ಒಬ್ಬರು. `ಕರ್ನಾಟಕದಲ್ಲಿ ದೀವರು’ ಎಂಬ ಸಂಶೋಧನಾ ಕೃತಿಯನ್ನು ಮಡೇನೂರು ಗಣಪತಿರಾವ್ ಎಂಬುವರು ಬರೆದಿದ್ದಾರೆ. ದೀವರ ಸಾಂಸ್ಕೃತಿಕ ಚಹರೆಯಾದ ಹಸೆಚಿತ್ತಾರ ಕಲೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ಸಮುದಾಯದ ಸುಶಿಕ್ಷಿತ ಕಲಾವಿದರಿಂದ ನಡೆಯುತ್ತಿವೆ. ಹಸೆಚಿತ್ತಾರಕ್ಕೆ ಭೌಗೋಳಿಕ ಸೂಚ್ಯಂಕದ ರಾಷ್ಟ್ರೀಯ ಮಾನ್ಯತೆಯನ್ನು (ಜಿಐ ಟ್ಯಾಗ್) ಪಡೆಯುವುದರಲ್ಲಿ ಶಿಕ್ಷಕ, ಹಸೆಚಿತ್ತಾರ ಕಲಾವಿದ ರವಿರಾಜ ಸಾಗರ್ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದಾರೆ.
ಕಳೆದ ಶತಮಾನದ ಉತ್ತರಾರ್ಧದಲ್ಲಿ ಬರವಣಿಗೆಯ ಕ್ಷೇತ್ರದಲ್ಲಿ ಪ್ರವೇಶಿಸಿದ ದೀವರ ಸಮುದಾಯದ ಬರಹಗಾರರು ಅಲ್ಲಲ್ಲಿ ದೀವರ ಸಮಾಜದ ಸಾಂಸ್ಕೃತಿಕ ನಡವಳಿಕೆಗಳನ್ನು ಕ್ವಚಿತ್ತಾಗಿ ಚಿತ್ರಿಸಿದ್ದುಂಟು. ದೀವರ ಸಹಜ ಆಡುನುಡಿ, ಜೀವನ ವಿಧಾನ, ಸಾಮಾಜಿಕ ಪರಿಸ್ಥಿತಿಗನ್ನು ಅತ್ಯಂತ ಕಲಾತ್ಮಕವಾಗಿ ಚಿತ್ರಿಸಿರುವುದು ಹೊಸಪೀಳಿಗೆಯ ಲೇಖಕ ನವೀನ್ ತೇಜಸ್ವಿ. ಇಪ್ಪತ್ತೊಂದನೇ ಶತಮಾನದ ಹದಿಹರೆಯದ ಜೆನ್ ಜೀ ಪೀಳಿಗೆಯ ಪ್ರತಿನಿಧಿಯಂತೆ `ಬಂಗಾರಕಡ್ಡಿ ಡೇರೆ ಹೂವು’ ಕಥಾ ಸಂಕಲನದಲ್ಲಿ ದೀವರ ಅಸ್ಮಿತೆಯನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಮೂಲಕ ದೀವರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಚಹರೆಗಳನ್ನು ವಿಶಿಷ್ಟವಾಗಿ ದಾಖಲಿಸಿದ್ದಾರೆ.
ಈಗಿನ ಬರಹಗಾರರು ಪತ್ರಿಕೆಗಳಲ್ಲಿ ಮೊದಲು ಪ್ರಕಟಿಸುವ ಉದ್ದೇಶದಿಂದ ಅವುಗಳ ನಿರ್ದಿಷ್ಟ ಪದಮಿತಿಗೆ ಒಳಪಡುವಂತೆ ಕಥೆಯ ವಸ್ತು ವಿನ್ಯಾಸವನ್ನು ಸಂಕುಚಿತಗೊಳಿಸುವುದಕ್ಕೆ ನವೀನ್ ತೇಜಸ್ವಿ ಹೋಗಿಲ್ಲ. ಅವರು ಪತ್ರಿಕೆಗಳಲ್ಲಿ ಪ್ರಕಟಿಸುವ ಉದ್ದೇಶದಿಂದ ಕಥೆಗಳನ್ನು ಬರೆದಂತಿಲ್ಲ. ಆದ್ದರಿಂದಲೇ ಇಲ್ಲಿನ ಕಥೆಗಳು ಅಶ್ವತ್ಥರ ಕಥೆಗಳನ್ನು ನೆನಪಿಸುವಂತೆ ದೀರ್ಘವಾಗಿವೆ. ವಿವರಗಳು ಆಕರ್ಷಕವಾಗಿವೆ. ಪ್ರತಿ ಕಥೆಯ ವಿನ್ಯಾಸ ಸ್ವಾರಸ್ಯಕರವಾಗಿವೆ. ಬಿಡಿ ಬಿಡಿಯಾಗಿ ಓದಿದರೆ ಪ್ರತ್ಯೇಕ ಕಥೆಗಳಂತೆ ಕಂಡರೂ ಒಂದೇ ಪ್ರಾದೇಶಿಕ ಹಿನ್ನೆಲೆಯಲ್ಲಿ ನಡೆದ ಘಟನಾವಳಿಗಳು, ಕೆಲವು ಪಾತ್ರಗಳು ಬೇರೆ ಬೇರೆ ಕಥೆಗಳಲ್ಲಿ ಬರುವ ಕಾರಣ ಒಟ್ಟಾಗಿ ಓದಿದರೆ ಕಾದಂಬರಿಯ ಅನುಭೂತಿಯನ್ನು ನೀಡುವಷ್ಟು ಸೊಗಸಾಗಿದೆ.
ಹೆಗ್ಗಡೆಯವರ ತೋಟದಲ್ಲಿ ಕೂಲಿಗಳಾಗಿ ಕೆಲಸ ಮಾಡುತ್ತಿದ್ದರೂ ಇಲ್ಲಿನ ದೀವರ ಮಹಿಳೆಯರು ಪರಿಶ್ರಮಿಗಳು, ಆತ್ಮಾಭಿಮಾನ ಉಳ್ಳವರು. ದುಡಿಯುವ ಸಹಜೀವಿಗಳಲ್ಲಿ ಸ್ನೇಹಪರರು. ಸಂಘಟನೆಯಲ್ಲಿ ವಿಶ್ವಾಸ ಇಟ್ಟುಕೊಂಡವರು. ಬೆಳಗಿನ ಜಾವವೇ ಎದ್ದು ಮನೆಕೆಲಸ, ಮಕ್ಕಳ ಚಾಕರಿ, ಗಂಡನ ಅಗತ್ಯಗಳನ್ನು ಪೂರೈಸಿ ಮಧ್ಯಾಹ್ನಕ್ಕೆ ಬುತ್ತಿ ಕಟ್ಟಿಕೊಂಡು ಕೆಲಸಕ್ಕೆ ಹೊರಡುವ ಧಾವಂತದ ಸಣ್ಣ ಸಣ್ಣ ವಿವರಗಳನ್ನೂ ಸ್ವಾರಸ್ಯಕರವಾಗಿ ಚಿತ್ರಿಸಿರುವುದು ಕಥೆಗಳ ವಿಶೇಷವಾಗಿದೆ. ಕಾಲೇಜು ಹುಡುಗಿ ಗುಲಾಬಿ ಕಾಲೇಜಿನ ಆಹಾರ ಮೇಳಕ್ಕೆ ಮಾಡಿಕೊಂಡು ಹೋಗುವ ಕೋಳಿಕಜ್ಜಾಯ, ನಾಟಿ ಕೋಳಿ ಸಾರಿನ ಪ್ರಸಂಗದಲ್ಲಿ ತೋರುವ ದಿಟ್ಟತನ, ಆಹಾರದ ಹಕ್ಕನ್ನು ಸಮರ್ಥಿಸಿಕೊಳ್ಳುವುದರಲ್ಲಿ ತೋರುವ ಕೆಚ್ಚು ಬಹುತೇಕ ಎಲ್ಲ ದೀವರ ಹೆಣ್ಣುಮಕ್ಕಳ ಪಾತ್ರಗಳಲ್ಲಿ ಚಿತ್ರಿತವಾಗಿದೆ.
ರಜೆಯ ದಿನಗಳಲ್ಲಿ ಹೆಗ್ಗಡೆಯವರ ತೋಟದಲ್ಲಿ ಕೆಲಸ ಮಾಡಿ ಕಾಲೇಜು ಓದಿಗೆ ಹಣ ಹೊಂದಿಸಿಕೊಳ್ಳುವ ಇಲ್ಲಿನ ಕೆಲವು ಯುವಕರ ಪಾತ್ರಗಳು, ಗುಲಾಬಿಯಂತೆಯೇ ಹದಿಹರೆಯದ ಯುವಪೀಳಿಗೆಯ ಪ್ರತಿನಿಧಿಗಳಾಗಿದ್ದಾರೆ. ಯುವಕರು ಕಾಲೇಜು ಮೆಟ್ಟಿಲು ಹತ್ತಿದ್ದರೂ ಹಳ್ಳದಲ್ಲಿ ಕಾರೇಡಿ ಹಿಡಿಯುವ, ಗಾಳ ಹಾಕಿ ಮೀನು ಹಿಡಿಯುವ ಸಾಹಸಗಳಲ್ಲಿ ಆಸಕ್ತಿ ತೋರುವ ಚಿತ್ರಣಗಳೂ ವಿಶಿಷ್ಟವಾಗಿವೆ.
ಇಲ್ಲಿನ ಕಥೆಗಳಲ್ಲಿ ಎದ್ದು ಕಾಣುವ ವಿಶೇಷ ಸೊರಬ ಸೀಮೆಯ ದೀವರ ಆಡು ಮಾತು. `ಗಂಡ ಬರ್ನಲ್ಲನೆ ತಂಗಿ?’ `ಕೆಲ್ಸ ಬಿಟ್ಟು ಎಲ್ಲಿ ಬರಕಾಕತೆ ಯವ’, ಇತ್ಯಾದಿ ವಾಕ್ಯಗಳು ದೀವರ ಆಡುಮಾತಿನ ಸೊಗಡನ್ನು ಸಂಕಲನದ ಎಲ್ಲ ಕಥೆಗಳಲ್ಲಿ ತುಂಬಿವೆ. ಭಾಷೆಯ ವಿಶಿಷ್ಟ ಸೊಗಸು `ಬಂಗಾರಕಡ್ಡಿ ಡೇರೆ ಹೂವನ್ನು’ ಅನನ್ಯ ಪರಿಮಳದ ಪುಷ್ಪವಾಗಿಸಿದೆ.






0 Comments