ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವಗಣತಿದಾರ ಮುದುಕಿಯೇ

ಮೂಲ: ಗ್ಯಾಬ್ರಿಯಲ್ ಮಿಷ್ಟ್ರಲ್
ಕನ್ನಡಕ್ಕೆ : ದೇವೂ ಮಾಕೊಂಡ

ಸಾವಿನ ಹಾಡು

ಸಾವಗಣತಿದಾರ ಮುದುಕಿಯೇ,
ಮೋಸದ ಸಾವೇ,
ನಿನ್ನದೇ ದಾರಿಯಲ್ಲಿ ನೀ ಸಾಗುವಾಗ
ನನ್ನ ಪುಟ್ಟ ಕಂದನ ದಾರಿಗೆ
ಅಡ್ಡ ಬರಬೇಡ

ನವಜಾತ ಶಿಶುಗಳ ಬೆನ್ನಟ್ಟಿ
ಹೊರಟವಳೇ,
ಹಾಲಿನ ವಾಸನೆ ಹುಡುಕುವವಳೇ
ಇಗೋ ತೆಗೆದುಕೋ
ಉಪ್ಪನ್ನಾದರೂ
ಅಥವಾ
ಜೋಳದ ಹಿಟ್ಟನ್ನಾದರೂ
ಆದರೆ ನನ್ನ ಎದೆ ಹಾಲಿನ
ಮೂಲವನ್ನು ಹುಡುಕಬೇಡ

ಲೋಕದ ತಾಯ್ತನಕ್ಕೆ
ವಿರೋಧಿಯಾದವಳೇ
ಕಡಲ ತೀರಗಳಲ್ಲಿ
ಹಾದಿ ಬೀದಿಗಳಲ್ಲಿ
ಜನರ ಸೆಳೆಯುವ
ಗುಂಪುಸಾವಿನ ನಾಯಕಿಯೇ
ನನ್ನ ಮಗುವಿನ ಬಳಿಗೆ ಬರಬೇಡ

ಆ ದಿವ್ಯಸ್ಥಾನದಿಂದ ಪಡೆದ ಮಗುವನು
ಅವನೊಂದಿಗೆ ಅರಳುವ ಆ ಹೂವನ್ನು
ಮರೆತು ಬಿಡು,
ಆ ನೆನಪುಗಳ ಕಳೆದುಬಿಡು
ಓ ಸಾವೇ

ಗಾಳಿ, ಉಪ್ಪು ಮತ್ತು ಮರಳುಗಳು
ನಿನ್ನ ದಾರಿಯನ್ನು ಹಿಡಿದು ನಿಲ್ಲಿಸಲಿ
ಮೂಡಣ ಪಡುವಣ ದಿಕ್ಕುಗಳ ಅರಿಯದಂತೆ
ಮಾಡಲಿ ಸಾವೇ

ಸಾವೇ
ಕೊನೆಗೂ ತಾಯಿ ಯಾರು
ಮಗು ಯಾವುದು?
ಗುರುತಿಸಲಾಗದೆ
ಸಾಗರದ ಮೀನುಗಳಂತೆ
ವ್ಯಥೆ ಪಡುವಂತಾಗು ನೀನು

ಕೊನೆಯ ದಿನ
ಕೊನೆಯ ಗಳಿಗೆಯಲ್ಲಿ
ನೀ ಎದುರು ಬಂದಾಗ
ನನ್ನ ಮಾತ್ರ ಕರೆದುಕೊಂಡು ಹೋಗು
ಮಗುವನ್ನಲ್ಲ

ಸಾವಗಣತಿದಾರ ಮುದುಕಿಯೇ!

‍ಲೇಖಕರು Admin

9 September, 2026

1 Comment

  1. Devoo Makond

    Thank you

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading