ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಪ್ತಿ ಭದ್ರಾವತಿ ಹೊಸ ಕವಿತೆ: ಡೇರೆ

ದೀಪ್ತಿ ಭದ್ರಾವತಿ

ನೀವು ಹೀಗೆ ಸದಾ ಬಾಗಿಲು ಮುಚ್ಚಿಕೊಂಡರೆ
ಕೊಳೆಯುತ್ತವೆ
ನಮ್ಮ ಬುಟ್ಟಿಯಲಿ ಪೇರಿಸಿಟ್ಟ ಸಾಲು ಸಾಲು
ಹಣ್ಣುಗಳು
ಅಲೆಮಾರಿಯ ಕನಸಿನಂತೆ

ಆವಿಯಾಗುತ್ತವೆ
ರಾತ್ರಿ ಇಡೀ ಕಣ್ಮುಚ್ಚದೆ ಕಟ್ಟಿದ
ಹೂ ಮಾಲೆಗಳು
ಬಿಕರಿಗಿಟ್ಟ ಬಾಣಂತಿಯ
ಎದೆ ಹಾಲಿನ ಹಾಗೆ

ನಿಲ್ಲುತ್ತವೆ
ಊದಿದ ಬಲೂನುಗಳಲಿ ಸಿಲುಕಿಕೊಂಡ
ನಮ್ಮ ಉಸಿರುಗಳು ಜಾತ್ರೆ ಮುಗಿಸಿದ
ಡೇರೆಗಳಂತೆ

ಅಲೆವ ನೂರು ಪಾದಗಳಲಿ
ಪಾಲು ಕೇಳುವ ಸದ್ದೊಂದು
ಗಂಟಲ ತುದಿವರೆಗೆ
ಬಂದು ಮಡುಗಟ್ಟುತ್ತದೆ

ತಿರುಗುತ್ತೇವೆ.
ನಿಮ್ಮ ಓಣಿಗಳಲಿ ಕಳೆದ ನಮ್ಮ
ಕನಸಗಳ ಅರಸುತ್ತ
ಹಿಯಾಳಿಸಿ ನಗುವ ಈ ಖಾಲಿ
ರಸ್ತೆಗಳು ನಮ್ಮ ಪೋರರ
ಕಣ್ಣುಗಳಂತೆ ಕಾಣಿಸುತ್ತವೆ.

ಎದುರು ನಿಲ್ಲುತ್ತದೆ
ಜಡಿದ ಚಿಲಕದ ನಡುವೆ
ನುಚ್ಚು ನೂರಾದ ನಾವೆಯೊಂದು
ಕಸುವು ಚೆಲ್ಲಿದ ಕುಂಚದವನಂತೆ

ತಕರಾರುಗಳಿಲ್ಲ
ನೀವು ಬೆಚ್ಚಗಿರಿ, ಕ್ಷೇಮವಾಗಿರಿ
ಆಗೀಗ ಹೊರ ಬಂದು ಕುಸಿದು ಹೋಗುವ
ನಮ್ಮ ಛಾವಣಿಗಳ
ಕಡೆಗಣ್ಣಿನಲ್ಲೊಮ್ಮೆ
ದಯವಿಟ್ಟು ನೋಡಿ ಬನ್ನಿ

‍ಲೇಖಕರು nalike

6 August, 2020

3 Comments

  1. Smitha Amrithraj.

    ತಟ್ಟುವ ಕವಿತೆ ದೀಪ್ತಿ.

  2. T S SHRAVANA KUMARI

    ಇಷ್ಟವಾಯಿತು

  3. Kotresh T A M Kotri

    ತುಂಬಾ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading