
ದೀಪಾ ಗೋನಾಳ
ಹೆಂಗಸರು ಏನ ಬರೀಬೇಕು? ಏನನ್ನ ಬರಿಬಾರ್ದು, ಏನ ಬರಿಲೇಬಾರದು? ಯಾವ ಯಾವ ಪದಕ್ಕೆ ನಿಷೇಧ, ನಿಷೇಧದ ಪದಗಳು ಸಂಸ್ಕೃತದ್ದೊ ಇಂಗ್ಲಿಷಿನದ್ದೊ ಸೆರಗೊದ್ದು ಕವಿತೆಯೊಳಗೆ ಬರಬಹುದು!(?) ಮಡಿವಂತಿಕೆ ಬರವಣಿಗೆಯಲ್ಲು ಕಾಯ್ದುಕೊಳ್ಳಬೇಕು! ಏನೇನೆಲ್ಲ ಕೇಳಿ ಆಗಿದೆ ಅದನ್ನೆಲ್ಲ ಮುರಿದು ಮುಂದೆ ಹೋಗಿಯೂ ಆಗಿದೆ. ಆದರೂ ಅಪಸ್ವರಗಳಂತೂ ನಿಂತಿಲ್ಲ ಅವು ನಿಲ್ಲುವತ್ತವೆಂಬ ನಿರೀಕ್ಷೆಗಳು ಇಲ್ಲ ಬಿಡಿ.
ಈಗ ನಾನೇನು ಹೇಳೊಕೆ ಹೊರಟಿದಿನಿ ಅಂದ್ರೆ, ಇಂತ ಮಡಿವಂತರ ಮುಖಕ್ಕೆ ಬಡಿವಂತೆ ಪ್ರತಿಭಾ ನಂದಕುಮಾರ್ ಮೇಡಮ್ ತುಂಬ ದಿನಗಳಿಂದ ತಮ್ಮ ಕವಿತೆ ಮತ್ತು ಬರಹಗಳ ಬಾಣದಿಂದ ಚುಚ್ಚುತ್ತಲೇ ಬಂದಿದಾರೆ. ಮೊನ್ನೆಯಷ್ಟೆ “ಅವನ ಮುಖ ಮರೆತು ಹೋಗಿದೆ” ಕವನಗಳಿಗೆ ಬಿಡುಗಡೆ ಕೊಟ್ಟು ನಿರಾಳವಾದ ಅವರು ಆ ಮುಖ ನಮ್ಮೊಳಗೊಮ್ಮೆ ಹುಡುಕುವಂತೆ ಮಾಡಿಟ್ಟಿದ್ದಾರೆ. ಪೂರಾ ಮೂವತ್ಮೂರು ಕವಿತೆಗಳನ್ನ ಎರಡ ಸಲ ಓದಿದೆ. ಅಬ್ಬಾ!!
ಕಾವಿನ ಕವನಗಳೆಂಬ ಹಣೆಬರಹ ಹೊತ್ತುಬಂದ ಅವುಗಳ ತುಂಬ ಮನುಷ್ಯನ ಕಾವು ಎದೆಗೆ ತಾಗುತ್ತದೆ. ಕವನಗಳ ತುಂಬ ಬಿಡುಬೀಸಾಗಿ ನಡೆದು ಬಂದ ಮೇಲೆ ಕೆಲವೊಂದು ಪುಟಗಳು ಕಿವಿ ಮಡಚಿಕೊಂಡು ಹಾಗೆ ಕಾದು ಕುಳಿತಿರುತ್ತವೆ ಮತ್ತೊಮ್ಮೆ ಬಂದು ಓದೇ ಓದುತ್ತೇವೆಂಬ ನಂಬುಗೆಯಲ್ಲಿ. ಅವುಗಳನ್ನ ನಾನು ಕಾವಿನ ಜೊತೆಗೆ ಕಾಡುವ ಕವಿತೆಗಳು ಎನ್ನುತ್ತೇನೆ.

ಕವಿತೆಗಳ ಉದ್ದಕ್ಕೂ ಎಲೆ, ಮೊಲೆ, ಒಲೆ, ಕಾಮ, ಯೋನಿ, ಕಾಳಗ, ದೇಹ, ಮನಸ್ಸು.. ನೀವು ತೀರಾ ಖಾಸಗಿ ಪದಗಳು ಎನ್ನುವಂತ ಸಕಲವು ಇಲ್ಲಿ ಓದುಗನ ಪಾಲಿಗೆ ಪಕ್ಕಾ ಕವಿತೆಯ ಪದಾರ್ಥಗಳಾಗಿ ಎದುರುಗೊಳ್ಳುತ್ತವೆ. ನೀವು ಓದುಗರಾಗಿ ಪಕ್ವವಾಗಿದ್ದರೆ ಮಾತ್ರ ಈ ಪುಸ್ತಕ ಹಿಡಿಯಬೇಕು ಅನ್ನುವುದು ನನ್ನ ಪರ್ಸನಲ್ ಅಡ್ವೈಸ್. ಇನ್ನೂ ಹೆಚ್ಚು ಹೇಳುತ್ತ ಹೋಗುವುದು ಬೇಡ ಕವಿತೆಗೆ ಅದು ನಿಷಿದ್ಧ, ಕವಿತೆ ಎಂದರೇನೆ ಹೇಳುವುದನ್ನ ಉಳಿಸಿಕೊಂಡು ಓದುಗನ ಪಾಲಿಗೆ ಬಿಟ್ಟುಬಿಡುವುದು.
ಕವಿತೆಗಳನ್ನ ಮುದ್ದು ಕಥೆಗಾರ ಜಯಂತ್ ಸರ್ ಗೆ ಅರ್ಪಿಸಿದ್ದು ಇಷ್ಟವಾಯಿತು. ಪ್ರೀತಿಯ ಬರಹಗಾರ ಎ ಕೆ ಆರ್ ರನ್ನು ನೆನಪಿದ್ದು ಅಚ್ಚೊತ್ತಿತು. Rajendra Prasad ರ ಬೆನ್ನುಡಿ ನೆನಪಿನಲ್ಲುಳಿಯುವಂತದ್ದು.
ಅನಾರ್ಕಲಿಯ ಸೇಫ್ಟಿ ಪಿನ್ನು ಕವಿತೆಯೊಳಗೆ ನುಗ್ಗಿದ್ದು ಕಾಡಿತು. ಶನಿ, ಬೆಕ್ಕು, ನಾಯಿ, ಹುಲಿಯುಗುರು, heartless path , I can see his bum, ಮೀನು- ಮತ್ಸ್ಯೆಕನ್ಯ, ಇವೆಲ್ಲ ಕವಿತೆಯೊಳಗೆ ನೆಲೆ ನಿಂತದ್ದು ಖುಷಿ ಕೊಟ್ಟಿತು.
ಇನ್ನು ಇದೆ, ಪು.ತಿ.ನ ಬೋದಿಲೇರ್,ಹೋಶಾಂಗ್ ರು ಕವನಗಳ ಮೆರಗು ಹೆಚ್ಚಿಸಿದ್ದಾರೆ.
ಹೆಚ್ಚೇನಿಲ್ಲ ಓದು ನನ್ನ ನಿತ್ಯದ ಒತ್ತಡ,ಜಂಜಾಟಗಳಿಂದ ಆಚೆ ತರುವುದರ ಜೊತೆಗೆ ನಾನು ಮಗಳು, ಹೆಂಡತಿ ಅಮ್ಮ, ಅಧಿಕಾರಿಣಿ, ಅನ್ನುವ ಯಂತ್ರವಾಗಿಸದೆ ಮನುಷ್ಯಳಾಗೆ ಉಳಿಯಲು ಸಹಕರಿಸುತ್ತಿದೆ. ತುಂಬ ಬೆಚ್ಚಗಿನ ಓದು ಒದಗಿಸಿದ ಪ್ರತಿಭಾ ನಂದಕುಮಾರ ಮೇಡಮ್ಮಗೆ ಅಭಿನಂದನೆಗಳು..
0 ಪ್ರತಿಕ್ರಿಯೆಗಳು