ಕಡಲು
ಶಾಂತಿ ಕೆ.ಅಪ್ಪಣ್ಣ

ಬುದ್ಬುಧಿಸಿ ಕದಕದಿಸಿ
ತೇಲಿ ಬರುವ ತೆರೆ..
ಓಡಿ ಬರುವ ಮಕ್ಕಳ ಹಿಂಡು ..
ಒಂದರ ಹಿಂದೊಂದು …
ಕಾಲು ತಬ್ಬಿ ಜೀಕುವಾಗ..
ಅಂಗಾಲಲಿ ಗುಳುಗುಳು ಕಚಗುಳಿ..
ಕಾಲಕೆಳಗೆ ಜಾರುವ ಮರಳು.
ಹೋರು ಗಾಳಿಗೆ ಜಾರುವ
ಅಹಂಕಾರದ ಪರದೆ..
ಕಣ್ಣು ಚಾಚಿದಷ್ಟೂ ನೀಲ ನಿರ್ಭರ ನೀರು…
ರಂಗರಳಿಸಿ ನಿಂತ ನಿರ್ಜರ ಮುಗಿಲು..
ತೀರವನಪ್ಪಿ ಮುದ್ದಿಸಿದಷ್ಟೂ..
ಮುಗಿಯದ ದಾಹ..
ಬಂದಿದ್ದನೆಲ್ಲ ಆಚೆ ತಳ್ಳುವ..
ನಿರ್ವಿಕಾರ ವೈರಾಗ್ಯ..
ಒಮ್ಮೊಮ್ಮೆ ಧ್ಯಾನಸ್ಥ ನೇತ್ರ ಬುದ್ದ..
ಮರುನಿಮಿಷ ಪ್ರಮತ್ತ ಪ್ರಮದೆ ..
ಭರತ ..ಇಳಿತ..ಮೊರೆತ..
ವಿನೋದಿನಿ..ವಿಲಾಸಿನಿ..
ಹುಡುಗಿ ತುಳುಕಿಸುವ ಅನಿರೀಕ್ಷಿತ
ನಗುವಿನಂತೆ..
ಅರ್ಥವಾದಷ್ಟೂ ಅಸ್ಪಷ್ಟ ನಿಲುವು..
ನಿಗೂಢ ಅಂತರಾಳ..
ಎದೆಯೊಳಗಿನ ಗುಟ್ಟು…
ಬಿಚ್ಚಿದಷ್ಟೂ ಬಿಗುವು..
ಕಂಡಷ್ಟೇ ಸೊಬಗು..
ಒಳಗಿಳಿದಷ್ಟೂ ಅಗಾಧ ಆಳ!
ಅಂತ ಕಾಣದ ಚೆಲುವು..!
ಎಷ್ಟು ಓದಿದರೂ ಮುಗಿಯದ ಕವಿತೆ…
ನನ್ನೊಳಗೆ ನಿನ್ನೊಳಗೆ..
ಎಲ್ಲರೊಳಗೊಂದು ಕಡಲು..
ಅಬ್ಬರಿಸುವ, ಅಳುವ,
ಉಕ್ಕುವ..ಉನ್ಮಾದಿನಿ ಕಡಲು.
ಒಳಗಿಳಿದಷ್ಟೂ ಅಗಾಧ ಆಳ ..
ಅಂತ ಕಾಣದ ಚೆಲುವು…
ದಾರಿ ದಾರಿಗೂ ಕವಲು..
ತೆರೆದಷ್ಟೂ ಬಾಗಿಲು..






nannologu ninnolagu
ellaralogondu kadalu
nice kavithe
ತೆರೆಗಳೆಂದರೆ ಓಡಿಬರುವ ಮಕ್ಕಳ ಹಿಂಡು…ತುಂಬಾ ಚೆನ್ನಾಗಿದೆ.
ಇಷ್ಟವಾಯಿತು ಕಡಲ ಅಲೆಯಂತ ಕವನ…
ಕವಿತೆ ಚೆನ್ನಾಗಿದೆ, ಹೀಗೆ ಮುಂದುವರಿಯಲಿ ನಿಮ್ಮ ಕಾವ್ಯ ಕೃಷಿ ಹೀಗೇ ಮುಂದುವರಿಯಲಿ…
-ರಮೇಶ್ ಹಿರೇಜಂಬೂರು
ಕಡಲಿನ ಪ್ರತಿಮೆಯಿಟ್ಟು ಬದುಕಿನ ಅನೇಕ ಮುಖಗಳನ್ನು ಹೆಕ್ಕಿದ್ದೀರಿ. ನಿಮ್ಮಲ್ಲಿನ ಸೃಷ್ಠಿಶೀಲತೆ ಬೆರಗುಗೊಳಿಸುವಂತದ್ದು. ಚೆಂದದ ಕವಿತೆ, ಅಭಿನಂದನೆಗಳು.
ತೀರವನಪ್ಪಿ ಮುದ್ದಿಸಿದಷ್ಟೂ..
ಮುಗಿಯದ ದಾಹ..
ಬಂದಿದ್ದನೆಲ್ಲ ಆಚೆ ತಳ್ಳುವ..
ನಿರ್ವಿಕಾರ ವೈರಾಗ್ಯ..
ಈ ಪ್ರತಿಮೆ ಬಹಳ ಹಿಡಿಸಿತು.
– ಪ್ರಸಾದ್.ಡಿ.ವಿ.
ಈ ಕವಿತೆ ಚೆನ್ನಾಗಿದೆ. ಕಡಲಿನ ತೀರದ ದಾಹವೇ ಅಲೆಗಳು…ಅದರ ಉಸಿರು…!