ಧಿಕ್ಕಾರ, ಧಿಕ್ಕಾರ….'ವರ್ಲ್ಡ ಮ್ಯಾರೇಜ ಡೇ'ಗೆ ಧಿಕ್ಕಾರ !!!

ಪ್ರಶಾಂತ್ ಅಡೂರ್

“ರ್ರಿ, ಮೊನ್ನೆ ಸಂಡೇ, ವರ್ಲ್ಡ ಮ್ಯಾರೇಜ್ ಡೇ ಇತ್ತಂತ, ನೀವೇನ ಹೇಳಲೇಲಾ ನನಗ” ಅಂತ ಇವತ್ತ ಎದ್ದ ಕೂಡಲೇನ ಕ್ಯಾಮಾರಿಲೆ ನನ್ನ ಹೆಂಡತಿ ರಾಗ ಶುರು ಮಾಡಿದ್ಲು. ಅವನೌನ ಇಕಿಗೆ ಯಾರ ಇದನ್ನ ಬ್ಯಾಟಾ ಹಚ್ಚಿಕೊಟ್ಟರಪಾ ಅಂತ ನಂಗ ತಲಿ ಕೆಟ್ಟತ. ಒಟ್ಟ ನನ್ನ ಹೆಂಡತಿಗೆ ಹಿಂತಾವ ಏನರ ನೆವಾ ಸಿಕ್ಕರ ಸಾಕ, ಕಾರಣ ಇಲ್ಲಾ ಕಂತ ಇಲ್ಲಾ ಗಿಫ್ಟ ವಸೂಲ ಮಾಡಲಿಕ್ಕೆ ನಿಂತ ಬಿಡ್ತಾಳ.
“ಏ, ಅದ ನಮಗ ಸಂಬಂಧ ಇಲ್ಲಲೇ, ಅಮೇರಿಕಾದವರಿಗೆ ಇಷ್ಟ, ನಂಬದ ಮೊನ್ನೆ ನವೆಂಬರದಾಗ ಅನಿವರ್ಸರಿ ಆಗೇದ ಅಲಾ, ಅದ ನಮ್ಮ ಮ್ಯಾರೇಜ ಡೇ” ಅಂದೆ.
“ಏ, ಅದ ಹೆಂಗರಿ, ನಮ್ಮ ಅನಿವರ್ಸರಿ ನಮ್ಮಿಬ್ಬರದ ಇಷ್ಟ. ‘ವರ್ಲ್ಡ ಮ್ಯಾರೇಜ್ ಡೇ’ ಅಂದರ ಜಗತ್ತಿನಾಗ ಲಗ್ನಾದವರಿಗೆ ಎಲ್ಲಾರಿಗೂ ಸಂಬಂಧ, ಅದರಾಗ ನಾವು ಬರತೇವಿ, ನಂಬದು ಸೆಲೆಬ್ರೇಟ್ ಮಾಡಬೇಕಿತ್ತ. ನೀವ ಗಿಫ್ಟ ಕೊಡಸಬೇಕಾಗತದ ಅಂತ ಹೇಳಲ್ಲಾ ಹೌದಲ್ಲ?” ಅಂತ ಅಂದ್ಲು. ಏನ ಮೊದ್ಲ ಗೊತ್ತ ಇದ್ದರ ಇಕಿ ಪುರಿ,ಶಾವಿಗಿ ಪಾಯಸಾ ಮಾಡೋರಗತೆನ ಕೇಳಿದ್ಲು.
” ಲೇ, ಹುಚ್ಚಿ. ಅಮೇರಿಕಾದಾಗ ಮಂದಿ ಒಂದ ಬಿಟ್ಟ ನಾಲ್ಕೈದ ಲಗ್ನಾ ಮಾಡ್ಕೋತಾರ ಹಿಂಗಾಗಿ ಅವರಿಗೆ ಎಲ್ಲಾ ಅನಿವರ್ಸರಿ ನೆನಪ ಇಟಗೋಳ್ಳಿಕ್ಕೆ ಆಗಂಗಿಲ್ಲಾಂತ ವರ್ಷಕ್ಕ ಒಂದ ಸರತೆ ಜನರಲ್ಲಾಗಿ ‘ಮ್ಯಾರೇಜ್ ಡೇ’ ಮಾಡ್ಕೋತಾರ. ನಮ್ಮ ಹಣೇಬರಹದಾಗ ಹಂಗ ಇಲ್ಲಾ, ನಮಗ ನಾವ ಸಾಯೊ ತನಕ ಒಂದ ಹೆಂಡತಿ, ಒಂದ ಅನಿವರ್ಸರಿ, ಒಂದ ಮ್ಯಾರೇಜ್ ಡೇ” ಅಂತಾ ನಾ ತಿಳಿಸಿ ಹೇಳಿದೆ.

“ಅಯ್ಯ, ಮಾಡ್ಕೋರಿ ನಿಮಗ್ಯಾರ ಬ್ಯಾಡ ಅಂದಾರ. ನಿಮ್ಮ ಮಾರಿಗೆ ಯಾರರ ಇನ್ನೊಂದ ಕನ್ಯಾ ಕೊಟ್ಟರ, ನಿಮಗ ಸಾಕೋ ತಾಕತ್ತ ಇದ್ದರ, ಒಂದ ಯಾಕ ಹತ್ತ ಮಾಡ್ಕೋರಿ. ನಾನು ನನ್ನ ಮಕ್ಕಳು ಎಲ್ಲರ ನೀರಿಲ್ಲದ ಭಾವಿ ನೋಡ್ಕೋತೇವಿ” ಅಂತ ಒದರಲಿಕತ್ತಳು.
“ಏ, ಸವಕಾಶ ಮಾತಾಡ್ಲೇ, ಆಜು-ಬಾಜುದವರ ಎಲ್ಲರ ಇವರ ಮನ್ಯಾಗ ಡೊಮೆಸ್ಟಿಕ್ ವೈಲನ್ಸ್ ನಡದದ ಅಂತ ಪೋಲಿಸ್ ಕಂಪ್ಲೇಂಟ್ ಕೊಟ್ಟ ಗಿಟ್ಟಾರ. ನೋಡಿಲ್ಲೆ, ಮಂದಿ ‘ವರ್ಲ್ಡ ಮ್ಯಾರೇಜ್ ಡೇ’ ನರ ಮಾಡ್ಕೊವಲ್ಲರಾಕ ಇಲ್ಲಾ ‘ಶ್ರಾದ್ಧ’ನರ ಮಾಡ್ಕೋವಲ್ಲರಾಕ, ನಮಗ್ಯಾಕ ಅದರ ಉಸಾಬರಿ, ಸುಮ್ಮನ ನಾವೇಕ ಜಗಳಾಡಿ ಇದ್ದದರಾಗ ಛಂದ ಇದ್ದ ಸಂಸಾರ ಹಾಳ ಮಾಡ್ಕೋಬೇಕ?” ಅಂತ ನಾನ ಒಂದ ಸ್ವಲ್ಪ ಸಮಾಧಾನ ತೊಗೊಂಡ ಹೇಳಿದೆ.
“ಅಲ್ಲಾ, ಅದಿರಲಿ, ನಿನಗ ಯಾರ ಹೇಳಿದರಲೇ ಹೋದ ಸಂಡೇ ‘ವರ್ಲ್ಡ ಮ್ಯಾರೇಜ್ ಡೇ’ ಇತ್ತು ಅಂತ” ಅಂತ ನಾ ಕೇಳಿದರ ಮೊನ್ನೆ ಅಮೇರಿಕಾದಿಂದ ಅವರ ಮಾಮಾ ಫೊನ ಮಾಡಿದ್ನಂತ, ಅವಂಗ ಅವನ ಹೆಂಡತಿಗೆ ಅಲ್ಲಿ ಮಂದಿ ‘ವರ್ಲ್ಡ ಮ್ಯಾರೇಜ್ ಡೇ’ ದಿವಸ ಕರದ ಸನ್ಮಾನ ಮಾಡಿದರಂತ. ಯಾಕಪಾ ಅಂದರ ಅವರ ಊರಾಗ ಅದೊಂದ ಪೇರ್ ಒಟ್ಟ ಡೈವರ್ಸ ಮಾಡಲಾರದ ಇಪ್ಪತ್ತ ಮೂರ ವರ್ಷದಿಂದ ಸೇಮ ಪಾರ್ಟನರ ಜೊತಿ ಇದ್ದದ್ದಂತ.
ಏನ್ಮಾಡ್ತೀರಿ. ಇಲ್ಲೆ ನಮ್ಮಪ್ಪ ನಲವತ್ತ ವರ್ಷದಿಂದ ಒಬ್ಬಕಿ ಜೋಡಿನ ಇದ್ದಾನ ಅವಂಗ ಮಾತಾಡ್ಸೋರ ಇಲ್ಲಾ, ನಮ್ಮಜ್ಜ ಅರವತ್ತ ವರ್ಷ ನಮ್ಮಜ್ಜಿ ಜೊಡಿ ಸಂಸಾರ ಮಾಡಿ ಸಾಕ ಸಾಕಾಗಿ ಕಡಿಕೆ ಅವನ ತಲಿಕೆಟ್ಟ ಅಕಿನ್ನ ಬಿಟ್ಟ ಸ್ವರ್ಗಕ್ಕ ಹೋದಾ. ನಾನೂ ಹಂಗ ಹಿಂಗ ಗುದ್ಯಾಡ್ಕೋತ ಹನ್ನೇರಡ ವರ್ಷ ಕಳದೇನಿ. ಇಲ್ಲ ನಮಗ ಯಾರು ಸನ್ಮಾನ ಮಾಡೋದ ಹೋತ ನಮ್ಮ ಬಗ್ಗೆ ಕೇಳೋರ ಇಲ್ಲಾ. ಅಲ್ಲೆ ನೋಡಿದರ ಗಂಡಾ-ಹೆಂಡತಿ ಕೂಡಿ ಒಂದ ಇಪ್ಪತ್ತ ವರ್ಷ ಇದ್ದರ ಅದೊಂದ ದೊಡ್ಡ ಸಾಧನೆನ.
ಹಿಂಗಾಗಿ ಅವರ ವರ್ಷಕ್ಕೊಮ್ಮೆ ‘ವರ್ಲ್ಡ ಮ್ಯಾರೇಜ್ ಡೇ’ ಅಂತ ಸೆಲೆಬ್ರೇಟ ಮಾಡಿ, ಡೇಟ ಬಾರ ಆಗಿದ್ದ ದಂಪತ್ತ ಹುಡಕಿ ಸನ್ಮಾನ ಮಾಡ್ತಾರ. ಅದ ಗಂಡಗ ಸನ್ಮಾನನೋ ಇಲ್ಲಾ ನೀ ಹೆಂತಾ ಹುಚ್ಚ, ಎಷ್ಟ ವರ್ಷಗಟ್ಟಲೇ ಒಂದ ಕಟಗೊಂಡ ಒದ್ಯಾಡಲಿಕತ್ತಿ, ಅಕಿನ್ನ ಬಿಟ್ಟ ಇನ್ನೊಂದ ಮಾಡ್ಕೋಳಿಕ್ಕೆ ದಮ್ಮ ಇಲ್ಲೇನ ಅಂತ ಅಸಂಯ್ಯ ಮಾಡತಾರೊ ಆ ದೇವರಿಗೆ ಗೊತ್ತ.
ಹೋಗಲಿ ಬಿಡ್ರಿ ಅವರ ಏನರ ಹಾಳಗುಂಡಿ ಬಿಳವಲ್ಲರಾಕ, ಅನ್ನಂಗ ಇನ್ನೊಂದ ಹೇಳೋದ ಮರತೆ ಮೊನ್ನೆ ನಮ್ಮ ಬೆಂಗಳೂರಾಗೂ ಯಾವದೊ ಒಂದ ಸುಡಗಾಡ ರಿಸಾರ್ಟನಾಗ ‘ವರ್ಲ್ಡ ಮ್ಯಾರೇಜ್ ಡೇ’ ಪಾರ್ಟೀ ಇಟಗೊಂಡಿದ್ದರಂತ, ಅವರು ವಯಸ್ಸಾದ ಒಂದಿಷ್ಟ ಪೇರಗೊಳಿಗೆ ಸನ್ಮಾನ, ಒಂದಿಷ್ಟ ಗಂಡಾ-ಹೆಂಡತಿಗೊಳಿಗೆ ಜೋಡಿ-ಜೋಡಿ ಕಾಂಪಿಟೇಶನ್ ಇಟಗೊಂಡ ತಮ್ಮಷ್ಟಕ್ಕ ತಾವ ಎಂಜಾಯ ಮಾಡಲಿಕತ್ತಿದ್ದರಂತ, ಒಮ್ಮಿಂದೊಮ್ಮೇಲೆ ಗೇಟನಾಗ ಗದ್ಲಾ ಶುರು ಆದಂಗ ಆತಂತ. ಏನಪಾ ಅಂತ ನೋಡಿದರ ವಯಸ್ಸಿಗೆ ಬಂದರೂ ಕನ್ಯಾ ಸಿಗಲಾರದ ಹುಚ್ಚ ಹಿಡದಂಗ ಅಡ್ದ್ಯಾಡೊ ಒಂದ ಏಳ ಎಂಟ ಹುಡುಗುರು ಗೇಟನಾಗ ‘ವರ್ಲ್ಡ ಮ್ಯಾರೇಜ್ ಡೇ’ಗೆ ಧಿಕ್ಕಾರ ಅಂತ ಕರೆ ಮಸಿ ಅರಬಿ ಹಿಡ್ಕೊಂಡ ಒದರಲಿಕತ್ತಿದ್ದರಂತ. ಪಾಪ, ಆ ಹುಡಗರಿಗೆ ವಯಸ್ಸಾದರು ಕನ್ಯಾ ಸಿಗವಲ್ವು, ಇಲ್ಲೆ ಅವರ ಮುಂದ ಅವರಿಗೆ ಹೊಟ್ಟಿ ಕಿಚ್ಚ ಆಗೋಹಂಗ ಈ ಲಗ್ನಾದವರು ಮ್ಯಾರೇಜ್ ಡೇ ಮಾಡ್ಕೊಂಡರ ಅವರಿಗೆ ಹೆಂಗ ಅನಸಬೇಕ ನೀವ ಹೇಳರಿ.

ಆದರ ಒಂದ ಮಜಾ ನೋಡ್ರಿ ಇಲ್ಲೆ, ನನ್ನಂಗ ಲಗ್ನ ಆದೊಂಗ ಯಾಕರ ಮದುವಿ ಆದೇಪಾ, ಹೆಂತಾ ಛಲೊ ಒಬ್ಬವನ ಆರಾಮ ಇರಬಹುದಿತ್ತಲಾ ಅನಸಿರತದ, ಅತ್ಲಾಗ ಕನ್ಯಾ ಸಿಗಲಾರದಂವಾ, ಯಾವಾಗ ಕನ್ಯಾ ಸಿಗತದೋ ಯಾವಾಗ ಮದುವಿ ಆಗ್ತೇನೋ ಅಂತ ಅಗದಿ ಆತ್ಮಹತ್ಯೆ ಮಾಡ್ಕೋಳೋರು ಕೆರಿ ಕಟ್ಟಿಗೆ ತುದಿಗಾಲ ಮ್ಯಾಲೆ ನಿಂತಂಗ ನಿಂತಿರ್ತಾನ.
“ಲೇ, ಹಂಗ್ಯಾಕ ಹುಚ್ಚರಂಗ ಕನ್ಯಾ-ಕನ್ಯಾ ಅಂತ ಬಡ್ಕೋತಿ, ಲಗ್ನ ಮಾಡ್ಕೋಂಡ ನೀ ಸಾಧಸೋದು ಅಷ್ಟರಾಗ ಅದ, ನಾವ ಒಬ್ಬರ ಅನುಭವಸಲಿಕತ್ತೇವಿ ಕಾಣಂಗಿಲ್ಲಾ” ಅಂತ ಅಂದರ
“ಮಗನ ನಿಂದ ಲಗ್ನ ಆಗೇದ ಅದಕ್ಕ ಈಗ ಹಿಂಗ ಅಂತಿ, ಇದ ಮಾತ ಮದುವಿ ಮಾಡ್ಕೊಳೊಕಿಂತ ಮೊದ್ಲ ಹೇಳ್ಬೇಕಿತ್ತ” ಅಂತಾರ. ಅದು ಖರೇನ, ಕೆಟ್ಟ ಮ್ಯಾಲೆ ಬುದ್ಧಿ ಬರೋದ ಅಲಾ. ಇರಲಿ ಯಾರ ಹಣೇಬರಹದಾಗ ಅನುಭವಿಸೋದ ಬರದದ ಅವರಿಗೆ ಕನ್ಯಾ ಸಿಕ್ಕ ಮದುವಿ ಆಗವಲ್ತಾಕ.
ಏನೋ ನನ್ನ ಹೆಂಡತಿ ಮುಂಜಾನೆ ಎದ್ದ ‘ವರ್ಲ್ಡ ಮ್ಯಾರೇಜ್ ಡೇ’ ವಿಷಯ ತಗದ್ಲು ಅಂತ ಇಷ್ಟ ಹೇಳಬೇಕಾತ. ಇಲ್ಲಾಂದರ ನಾ ಅಂತು ಕನಸಿನಾಗೂ ಈ ವಿಷಯ ತಗೆಂಗಿಲ್ಲಾ.
ಮತ್ತ ನಿಮಗೇಲ್ಲಾ ಅಂದರ ಲಗ್ನಾದೊರಿಗೆಲ್ಲಾ ‘ಹ್ಯಾಪಿ ಮ್ಯಾರೇಜ್ ಡೇ’. ವಿಶ್ ಮಾಡೋದ ಸ್ವಲ್ಪ ಲೇಟಾತು ಆದರು ಮರತಿಲ್ಲ, ಹಂಗ ನೋಡಿದ್ರ ಜಗತ್ತಿನಾಗ ಹ್ಯಾಪಿ ಮ್ಯಾರೇಜ ಅಂತ ಇರಂಗಿಲ್ಲಾ ಆದ್ರು ಹೆಂಡತಿನ್ನ ಹ್ಯಾಪಿ ಇಡಲಿಕ್ಕರ ಹಿಂತಾವೇಲ್ಲಾ ‘ಡೇ’ ಸೆಲೆಬ್ರೇಟ ಮಾಡ್ಕೋತ ಇರಬೇಕು ಇಲ್ಲಾಂದರ ಅಕಿ ನಂಬದ ಯಾವ ‘ಡೇ’ ಸೆಲೆಬ್ರೇಟ ಮಾಡ್ತಾಳ ಅಂತ ನಾ ಏನ ನಿಮಗ ಬಾಯಿಬಿಟ್ಟ ಹೇಳ ಬೇಕಾಗಿಲ್ಲಲಾ?
 
 

‍ಲೇಖಕರು avadhi

February 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

14 ಪ್ರತಿಕ್ರಿಯೆಗಳು

  1. umesh desai

    ಅವಧಿಗೂ ನಿಮ್ಮ “ಪುರಪ್ರವೇಶ” ಆತ..??
    ಥಣ್ಣಾಗಾತು ಬಿಡ್ರಿ..!!

    ಪ್ರತಿಕ್ರಿಯೆ
  2. sumanth

    wow.. nice write up, discouraging though for bachelors like me. but fact of life is n’t it. really humorous article. nice to read such shorter versions of yours. we enjoy, regret cant write in kannada.

    ಪ್ರತಿಕ್ರಿಯೆ
  3. AKHEEL

    ತುಂಬಾ ಚೆನ್ನಾಗಿದೆ ಸರ್, ನಿಮ್ಮ ಸಾಂಸಾರಿಕ ಹಾಸ್ಯ ಪ್ರಜ್ಞೆ ಮೆಚ್ಚುವಂಥದ್ದು. ಹೀಗೆ ಬರಿತಾ ಇರಿ. ತಮಗೂ ನಮ್ಮ ಪರವಾಗಿ happy marriage day,ಶುಭವಾಗಲಿ
    ಅಖೀಲಾ-ಧಾರವಾಡ

    ಪ್ರತಿಕ್ರಿಯೆ
  4. Prasad V Murthy

    ಸಕ್ಕತ್ತಾಗಿ ಬರ್ದೀರಿ ಪ್ರಶಾಂತ್ ಸರ್ರಾ.. ನಿಮ್ಮೊಳಗಿನ ಹಾಸ್ಯ ಪ್ರಜ್ಞೆ ಢಾಳಾಗಿ ವ್ಯಕ್ತವಾಗದೆ ಬಿಡ್ರಿ. 🙂
    – ಪ್ರಸಾದ್.ಡಿ.ವಿ.

    ಪ್ರತಿಕ್ರಿಯೆ
  5. ramesh

    Very funny article sir, nice to see you here also. You rock, thanks to avadhi for sharing with us. short and sweet. loved it with my wife
    RAMESH.J

    ಪ್ರತಿಕ್ರಿಯೆ
  6. chetan

    hello sir, nice article. hats off to you creativity. I did know that world marriage day exists. but checked in google after reading your article and was surprised to find that it does exists. anyway very happy marriage day to you. you are the only one who is using marriage also as inspiration for your articles…ha..ha..
    chetan.K-b’lore

    ಪ್ರತಿಕ್ರಿಯೆ
  7. Geetha T. R

    ನಕ್ಕೂ ನಕ್ಕೂ ಸಾಕಾತ್,ಚೊಲೊ ಅದ, ಪ್ರಶಾಂತಾ…!!!!

    ಪ್ರತಿಕ್ರಿಯೆ
  8. Veena Hangal

    Very nice..!
    Its true that every teenager is so eager to get married and after an year of their marriage, they get enlightenment over their mistake…True..and you have written it so dramatically..
    – Veena D Hangal

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: