ತಿರುವು ಮುರುವು
ಲಕ್ಷ್ಮೀಕಾಂತ ಇಟ್ನಾಳ
ಈ ಬೆಟ್ಟ, ಪರ್ವತ, ಮುಗಿಲು ಮೋಡಗಳು
ಮಳೆ, ಝರಿ,ತೊರೆ, ಸಾಗರ, ಹೊಲ, ಊರು, ಕೇರಿಗಳ
ಸಜೀವ ಸೂತ್ರದ ಸುಂದರ ತೋಟ,
ಕ್ಷಣ ಕ್ಷಣವೂ ಅರಳುವ ಜಗದ ನೋಟ
ಅಗಣಿತ ರೂಪ, ಪರಿಮಳದ ಈ ಸುಮಧುರ ಹೂ ಜಲ್ಲೆ
ಕುಸುರಿ ಜರಿಬಣ್ಣಗಳ ಕಾಮನಬಿಲ್ಲು,
ಚಿತ್ರ ಚಿತ್ತಾರಗಳು ಸಂಜೆಗೆಂಪಿನಲ್ಲೂ
ನೀಲಬಾನಿನಲ್ಲಿ ಸೂರ್ಯ ರಶ್ಮಿಗಳ ಪ್ರಣತಿ
ಚುಕ್ಕಿ ಚಂದ್ರಮಗಳ ನಾಡಿನ ಗಗನ ಭರತಿ
ಅದರಡಿಯಲ್ಲೆ ಸಡಗರದ ಬದುಕಿನ ಜನ, ಜಾನುವಾರು,
ವನ, ಕಾಡು ಮೇಡು, ಗಾಳಿ,ಹಕ್ಕಿ, ಜಲಚರ ತರಹೇವಾರು
ಹೀಗೊಂದು ಸ್ವಪ್ನಲೋಕದ ಪರಿವೇ ಇರಲಿಲ್ಲ!
ನನ್ನ ಲೋಕವೇ ಬೇರೆ!
ಬೆವರು, ದುರ್ಗಂಧಗಳ, ಏಕತಾನತೆಯ ಶೂದ್ರ ಬದುಕು,
ತೊಟ್ಟುಕೊಂಡವರ ಮಾನ ಕಾಯುವುದು,
ಬದುಕೇ ಹೀಗೇನೊ ಎಂದು ಬಗೆದಿದ್ದೆ!

ತಿರುವು ಮುರುವು ಹಾಕಿಕೊಂಡ ಅಂಗಿಯೊಂದು
ಬೆರಗಿನಿಂದ ಮೊದಲ ಬಾರಿ
ಹೊರಜಗವನ್ನು ಕಂಡು ದಂಗಾಗಿತ್ತು!
ಹೊಲಮನೆಯಿಂದ ನಗರಕ್ಕೊಮ್ಮೆ ಕರೆದೊಯ್ದಾಗ.
ಗರಬಡಿದಿದ್ದಳು ಅವ್ವ,
ತಾಸುಗಟ್ಟಲೆ, ಸಾಲು ಸಾಲು ಮನೆ, ಅಂತಸ್ತುಗಳು,
ಬಾಯಿಂದ ಹೊರಟ ಒಂದೇ ಮಾತು,
“ಎಲ್ಲಾ ಪರಮಾತ್ಮನ ಆಟ”!
ಹೊಲಗಳೆಲ್ಲ ಮಾಯ,
ಕೇಳಿದ್ದಳು,
“ಹೌದು, ಇವರೆಲ್ಲಾ, ಹೊಟ್ಟೀಗೆ ಏನ್ ತಿಂತಾರ”!
ತನ್ನದೇ ಮರದ ಹಸಿರೆಲೆ, ಹೂವು, ಹಣ್ಣು , ಗಂಧಗಳ
ಭಾಗ್ಯ ಇಲ್ಲದಿರುವ
ಬೆವರಿನ ಬೇರುಗಳು!
ತಿರುವಿ ಹಾಕದ ಮುಖಗಳು ಇನ್ನೆಷ್ಟೊ!






Thumba chennagide
nice..very nice..!
ಧನ್ಯವಾದ ಎಮ್ ಎಮ್ ಶೇಖ ಜಿ, ಸ್ಮಿತಾ ಜಿ ತಮ್ಮ ಮೆಚ್ಚುಗೆಗಳಿಗೆ.
ಚೆನ್ನಾಗಿದೆ.
nice sir
ಮೆಚ್ಚುಗೆಗೆ ಧನ್ಯವಾದ ಅಕ್ಕಿಮಂಗಲ ಮಂಜುನಾಥ ಹಾಗೂ ಕುಸುಮಾ ಜಿ
ತಿರುವು ಮುರುವು ಹಾಕಿಕೊಂಡ ಅಂಗಿಯೊಂದು
ಬೆರಗಿನಿಂದ ಮೊದಲ ಬಾರಿ
ಹೊರಜಗವನ್ನು ಕಂಡು ದಂಗಾಗಿತ್ತು!
nice line