ಡೈಲಿ ಬುಕ್ : ಎಸ್ ಎಸ್ ಕಾವೇರಿ ಬರೆದ ’ಕರಗದ ನಗು’

ಕತೆಗಾರ್ತಿ – ಕಾವೇರಿ ಎಸ್ ಎಸ್

ಪುಸ್ತಕದ ವಿವರಗಳು


ಪ್ರಕಾರ – ಕಥಾ ಸಂಕಲನ
ಬೆಲೆ- 65 ರೂ.
ಮುಖಪುಟ ಚಿತ್ರ: ನಿಖಿಲ್ ಪೂರ್ಣ
ವಿನ್ಯಾಸ: ಶರತ್ ಎಚ್.ಕೆ.
ಪ್ರಕಾಶಕರು – ‘ಪ್ರಜೋದಯ’ ಪ್ರಕಾಶನ
 

ಸಂಕಲನದ ಒಂದು ಕಥೆ

ಕರಗದ ನಗು

‘ಅವ್ವ ಅವ್ವ… ಎದ್ದೇಳೆ ಹೊಟ್ಟೆ ಹಸಿತೈತೆ…’ ಮೀನಾಕ್ಷಿ ಸಿದ್ದವ್ವನ ಕೈ ಹಿಡಿದು ಗೋಗರೆಯಹತ್ತಿದಳು.

ಮಧ್ಯಾಹ್ನಕ್ಕೆ ಕೆಲ್ಸ ಮುಗ್ಸಿ ಬಂದಿದ್ದ ಸಿದ್ದವ್ವ, ‘ಬೆಳಿಗ್ಗೇದು ಹಿಟ್ಟೈತಲ್ಲ ತಿನ್ನೋಗು’ ಅಂತೇಳಿ ತನ್ನ ಜೊತೆಗಾರರ ಜೊತೆ ಎಲೆ ಜಗಿಯುತ್ತಾ ಸತ್ತ ಸಂಕ್ರಜ್ಜನ ವಿಚಾರ ಮಾತನಾಡುತ್ತಾ ಜಗಲಿಯ ಮೇಲೆ ಕುಳಿತಳು.
‘ಹೇ… ಹೋಗವ್ವ ಅದುನ್ಯಾರು ತಿಂತಾರೆ. ಬಾ ಮಾಡ್ಬಾ… ಏನಾದ್ರು. ಸಂಜೆ ಅತ್ತೆ ಮನೀಗೆ ಹೋಗುವ. ನಾಳೆ ಭಾನುವಾರ ಜಾತ್ರೈತಲ್ಲ’ ಅಂತ ಪಿಸುಗುಟ್ಟಿದಳು ಮೀನಾಕ್ಷಿ.
‘ನಾನೆಲ್ಲೂ ಕರ್ಕಹೋಗಕ್ಕಿಲ್ಲ, ನಂಗೆ ಸುಸ್ತಾಗೈತೆ. ನೀನೇ ಏನಾದ್ರೂ ಮಾಡ್ಕೋ ಹೋಗು’ ಅಂತ ತನ್ನಪಾಡಿಗೆ ಸುಮ್ಮನಾದಳು ಸಿದ್ದವ್ವ.
‘ನಾನು ಮನೇಗಿದ್ರೆ ನನ್ಮೇಲೆ ಎಲ್ಲನೂ ಬಿಟ್ಟು ನೀ ರಾಣಿಯಂಗಿತರ್ೀಯ. ನನ್ನ ಏನ್ ಮಾಡ್ಬೇಕು ಅಂದ್ಕೊಂಡಿದ್ದೀಯ…’ ಅಂತ ಮೀನಾಕ್ಷಿ ಅಳು ಮೋರೆ ಮಾಡಿಕೊಂಡಳು.
ಗಂಟೆ ಮೂರಾಗಿದ್ದರಿಂದ ಸಿದ್ದವ್ವನ ಜೊತೆಗಾರರಲ್ಲಿ ಕೆಲವರು ಅವರವರ ಮನೆ ಹತ್ರ ಹೋಗ್ಬತ್ತೀವಿ ಅಂತ ಹೊರಟುಹೋದರು.
ಸಿದ್ದವ್ವ ಹಾಗೆ ಗೋಡೆಗೆ ಒರಗಿ, ‘ಏನಾದ್ರೂ ಮಾಡ್ಕ. ನಂಗೇನು ಹೇಳ್ಬೇಡ’ ಅಂದಳು. ಮೀನಾಕ್ಷಿ ಅಳುತ್ತಾ ಕಣ್ಣು ಮುಚ್ಚಿದಳು. ಅಳುವ ನಾಟಕವಾಡುತ್ತಿದ್ದ ಮೀನಾಕ್ಷಿ ಕಣ್ಣೀರು ಬರದಿದ್ದರೂ ಅಲ್ಲೇ ಪಕ್ಕದಲ್ಲಿದ್ದ ಚೆಂಬಲ್ಲಿ ನೀರು ತೆಗೆದುಕೊಂಡು ಸಿದ್ದವ್ವನಿಗೆ ಕಾಣದಂತೆ ಕಣ್ಣಿಗೆ ಹಾಕಿಕೊಂಡಳು. ಅದು ಕೆನ್ನೆ ಮೇಲೆ ಇಳಿಯದಿದ್ದನ್ನು ನೋಡಿ, ಬೇಕಂತಲೇ ಕತ್ತನ್ನು ಆ ಕಡೆ ಈ ಕಡೆ ಅಲ್ಲಾಡಿಸಿದಳು. ಸಿದ್ದವ್ವ ಇತ್ತ ಕಡೆ ನೋಡದಿದ್ದನ್ನು ಗಮನಿಸಿ ಮತ್ತೆರಡು ಹನಿ ನೀರನ್ನು ಕಣ್ಣೊಳಗೆ ಬಿಟ್ಟುಕೊಳ್ಳುತ್ತಾ ಅಳುವಂತೆ ನಟಿಸುತ್ತಿದ್ದಳು.
ಓರೆಗಣ್ಣಲ್ಲಿ ಅವಳಾಟ ನೋಡಿದ ಸಿದ್ದವ್ವ ಮುಸಿಮುಸಿ ನಗುತ್ತಾ, ‘ನಿನ್ನಾಟೆಲ್ಲ ಗೊತ್ತು ನಡಿ ನಡಿ ಒಳಿಕೆ’ ಅಂತ ಮೀನಾಕ್ಷಿಗೆ ಹೇಳಿದಳು.
‘ಹೌದೌದು ನಾನು ಅಳೋದೆಲ್ಲ ಸುಳ್ಳು. ಹೋಗ್ ನಾನೇನೂ ಮಾಡಕ್ಕಿಲ್ಲ. ಬೇಕಾದ್ರೆ ನೀನೇ ಮಾಡ್ಕೊ, ನನ್ನ ಮಾತಿಗೆಳೆಯೋ ಪೂಸಿ ಹೊಡೆಯೋ ನಾಟ್ಕ ಗೀಟ್ಕ ಆಡ್ಬೇಡ ನನ್ ಜೊತೆ’ ಅಂತ ಚಾಪೆ ಮೇಲೆ ಹೊರಳಿಕೊಂಡಳು ಮೀನಾಕ್ಷಿ.
ತನ್ನ ಮಾತಿಗೆ ಕಿವಿಗೊಡದೆ ಎಲೆ ಅಡಿಕೆ ಚೀಲವನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾ ಸಂಕ್ರಜ್ಜನ ಮನೆ ಕಡೆಗೆ ಹೆಜ್ಜೆ ಹಾಕುವುದಕ್ಕೆ ಅಣಿಯಾಗುತ್ತಿದ್ದ ಸಿದ್ದವ್ವನ ನೋಡಿದ ಮೀನಾಕ್ಷಿ ತಾನೂ ಎದ್ದು ಅವಳಿಂದೆಯೇ ಸುಮ್ಮನೆ ನಡೆಯತೊಡಗಿದಳು. ಅವಳಿಗೆ ಗೊತ್ತಿತ್ತು, ಸಿದ್ದವ್ವ ನಂಜೊತೆ ಮಾತಾಡದೇ ಇರಲಾರಳು ಅಂತ.

ಸಪ್ಪೆ ಮುಖ ಮಾಡಿಕೊಂಡಿದ್ದ ಮಗಳನ್ನು ನೋಡಿ ಸಿದ್ದವ್ವನಿಗೆ ಬೇಜಾರಾದರೂ ತೋರಿಸಿಕೊಳ್ಳದೆ, ‘ಯಾವಾಗ್ಲೂ ಹೊಟ್ಟೆದೇ ಚಿಂತೆ ನಿಂಗೆ. ಸಾವಿನ್ಮನೆಗೆ ಬಂದು ಅಂಗಂತರಾ…’ ಒಣಗಿ ಗೆಡ್ಡೆಗಟ್ಟಿದ್ದ ಸುಣ್ಣದ ಡಬ್ಬಿಯೊಳಗೆ ಕೈ ಬೆರಳ ತೂರಿಸುತ್ತಾ ಮಗಳ ಮುಖವನ್ನೊಮ್ಮೆ ದುರುಗುಟ್ಟಿ ನೋಡಿದಳು ಸಿದ್ದವ್ವ.
ಸಿದ್ದವ್ವ ಮುಖ ಗಂಟಿಕ್ಕಿದ್ದನ್ನು ನೋಡಿ ಮೀನಾಕ್ಷಿ ಥೂ ಇವ್ಳ… ಸತ್ತೋನ್ ಸತ್ತ. ಇರೋರ್ಗಾದ್ರೂ ನೆಮ್ದಿ ಇಲ್ಲ. ಇವ್ನುನ್ನೇನು ನಾ ಸಾಯು ಅಂದಿದ್ನ? ವಯಸ್ಸಾದ್ಮೇಕೆ ಎಲ್ಲರೂ ಸಾಯೋದೇ ಅಲ್ವಾ? ಇವ್ರೆಲ್ಲ ಯಾಕಿಂಗಾಡ್ತಾವ್ರೆ ಅಂತ. ನಿನ್ನೆಯಿಂದ ಹೊಟ್ಟೆಗೆ ಹಿಟ್ಕಾಣಿಸಿಲ್ಲ. ಅದೂ ಇದೂ ಅಂತ ಇಲ್ಲೇ ಕುಂತೀವಿ. ನಂಗೆ ಮೊದ್ಲೇ ಹಸ್ವ ತಡೆಯೋಕ್ಕಾಗಲ್ಲ. ಅದು ಗೊತ್ತಿದ್ದೂ ಅವ್ವ ಹಿಂಗಂತಳಲ್ಲ. ಇಲ್ಲೇ ಕೂತ್ರೆ ನಾನೂ ಹೆಣಾಗ್ತೀನಿ ಎಂದು ಎದ್ದು ಮನೆಕಡೆ ಹೊರಡಲು ಅಣಿಯಾದಳು.
ಸಿದ್ದವ್ವ ಮೀನಾಕ್ಷಿ ಕೊಸರಾಡೋದನ್ನ ನೋಡೋಕ್ಕಾಗ್ದೆ, ‘ಲೇ… ಬಿಕ್ನಾಸಿ ಸುಮ್ಕಿರು ಹೋತೋಟ್ಟು. ಬಂದು ಬೇಸಾಕ್ತೀನಿ’ ಅಂತ ನಿಧಾನಕ್ಕೇಳಿ ಹೆಣದ ಮುಂದೆ ಅಳುತ್ತಿದ್ದ ಸಂಬಂಧಿಕರ ಮಧ್ಯೆ ಕಳೆದುಹೋದಳು.

ಇತ್ತ ಮೀನಾಕ್ಷಿ ಅಷ್ಟೇಳಿದ್ರೂ ಎದ್ದೋದ್ರೆ ಸರಿಯಾಗಕ್ಕಿಲ್ಲ ಅಂತ ಅಲ್ಲಿಂದೆದ್ದು ಒಂದು ಮೂಲೆಗೆ ಬಂದು ಅಕ್ಕಪಕ್ಕದವರೊಂದಿಗೆ ಏನೇನೋ ಮಾತಿಗೆ ಕುಳಿತವಳಿಗೆ ನೇರವಾಗಿ ಕಟ್ಟಿ ಕೂರಿಸಿದ್ದ ಹೆಣದ ಮುಖ ಕಾಣಿಸುತ್ತಿತ್ತು. ಸಂಕ್ರಜ್ಜ ಕ್ಷಮಿಸುಬಿಡು, ನಂಗೇನು ನಿನ್ಮ್ಯಾಗೆ ಕೋಪಿಲ್ಲ. ಏನ್ ಮಾಡ್ಲಿ ನನ್ ಸಂಕ್ಟ ನಂಗೆ ಅಂತ ಸತ್ತ ಸಂಕ್ರಜ್ಜನಿಗೆ ಪೆಚ್ಚುಮೋರೆ ಹಾಕಿ ಹೇಳಿದಳು. ಅಯ್ಯೋ ಕೂಸೇ ನನ್ಕಷ್ಟ ಕೇಳೋರ್ಯಾರು? ಅಂತ ಸಂಕ್ರಜ್ಜ ನಕ್ಕಂತಾಯ್ತು. ಅಯ್ಯೋ! ಇದೇನು ಹೆಣುದ್ ಮುಂದೆ ನಾ ಹಿಂಗೆಲ್ಲ ಆಡ್ತಿದ್ದೀನಲ್ಲ. ಪಾಪ ಸಂಕ್ರಜ್ಜ! ನನ್ನ ನೋಡಿ ಎಷ್ಟು ಶಾಪ ಹಾಕ್ಕೊಂತಿದ್ದಾನೋ ಏನೋ? ನಾನೆಂಥ ಹೊಟ್ಟೆಬಾಕಿ, ಅವರೆಲ್ಲ ನೋವಲ್ಲಿರುವಾಗ ನನಗೆ ಹೊಟ್ಟೆ ಚಿಂತೆ! ಹಾಳಾದ್ದು ಹೊಟ್ಟೆ ತೆಗೆದಿಡೋ ಹಂಗಿದ್ದಿದ್ರೆ ತೆಗೆದಿಟ್ಟಿತರ್ಿದ್ದೆ ಎಂದುಕೊಂಡಳು. ಅಲ್ಲಾ ಸತ್ತಿರೋನು ಮುದುಕ. ಎಲ್ಲವನ್ನೂ ಅನುಭವಿಸಿ, ಮೊಮ್ಮಕ್ಕಳನ್ನು ಕಂಡು ಖುಷಿಯಿಂದಿದ್ದು ಬದುಕಿನ ಎಲ್ಲಾ ಅನುಭವಗಳ್ನ ಬಾಚಿಬಳಿದು ತಿಂದುಂಡು ಈಗ ನಿರಾಧಾರಿಯಾಗಿ ತನ್ನ ದೇಹ ತ್ಯಜಿಸಿದ್ದಾನೆ. ಆದ್ರೆ ಇವ್ರೆಲ್ಲ ಯಾಕಿಂಗೆ ಬಾಯಿ ಬಡ್ಕೊಂತಿದ್ದಾರೆ ಅಂತ? ಏನೋ ಹುಡುಗನಾಗಿದ್ರೆ ಪರವಾಗಿಲ್ಲ ಎಲ್ರಿಗೂ ನೋವಿರುತ್ತೆ. ಆದ್ರೆ ಸತ್ತೋನು 102 ವರ್ಷದ ಮುದ್ಕ. ಅವ್ನು ಇನ್ನೂ ಬದುಕಬೇಕಿತ್ತು ಅಂತ ಬಯಸೋದು ತಪ್ಪಲ್ವಾ? ಅಥವಾ ಸಂಕ್ರಜ್ಜ ಬದುಕಿ ಏನ್ ಸಾಧಿಸ್ಬೇಕಿತ್ತು ಅಂತೀನಿ. ನಾನೇನಾದ್ರೂ ಅವ್ವನಿಗೆ ಹಿಂಗಂದ್ರೆ ನನ್ಗತಿ ಅಷ್ಟೇ ಎನ್ನುತ್ತಾ ಬೆಚ್ಚಿಬಿದ್ದಳು ಮೀನಾಕ್ಷಿ.
ಅವಳ ಮನಸ್ಸಿನೊಳಗೆ ಕೊರೆಯುತ್ತಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಸುಮ್ಮನೆ ಮಂಕಾಗಿ ಕೂತಿದ್ದವಳು, ಅಲ್ಲಾ ಆ ಯಪ್ಪ ಹುಟ್ದಾಗಿಂದ ಇಲ್ಲೀವರ್ಗೂ ಮಾಡ್ದ ಎಲ್ಲವನ್ನೂ ಹೇಳ್ಕೊಳ್ತ ಅಳ್ತಾರಲ್ಲ ಯಾಕೆ? ಯಾರಾದ್ರೂ ನೆಂಟರಿಸ್ಟ್ರು ಬಂದ್ರೆ ಮತ್ತದೇ ಕೂಗಾಟ, ಕಿರುಚಾಟ. ಆದ್ರೂ ನಾನು ಹಿಂಗೆಲ್ಲ ಯೋಚಿಸ್ತಿರೋದು ಸರಿನಾ? ಯಾಕೆ ತಪ್ಪು ಅಂತೀನಿ? ಎಲ್ರೂ ಮನ್ಸಾಗೆ ಆಲೋಚನೆ ಒಂದೇ ರೀತಿ ಇರುತ್ತ? ಗೊತ್ತಿಲ್ಲ. ಆದ್ರೆ ನಾನು ಯೋಚ್ನೆ ಮಾಡೋದು ತಪ್ಪು ಅನ್ನೋದು ತಪ್ಪು ಅಂತ ಅವಳವಳೇ ಉಲ್ಟಾ ಪ್ರಶ್ನೆಗಳನ್ನು ಹಾಕಿಕೊಳ್ಳತೊಡಗಿದಳು. ಯಾರ್ಯಾರು ಹೇಗ್ಹೇಗೆ ಅಳುತ್ತಾರೆ ಎಂಬುದನ್ನು ತಲೆಯಲ್ಲಿ ಫೀಡ್ ಮಾಡಿಕೊಳ್ಳುತ್ತಾ ಮೀನಾಕ್ಷಿ ಮೂಲೆಯಲ್ಲಿ ಮುದುರಿ ಕೂತಿದ್ದಳು.
‘ಅಯ್ಯೋ ಯಪ್ಪಾ… ಹೋದ್ಯಲ್ಲೋ ಈಟ್ಬೇಗ… ನನ್ನ ನೋಡ್ದಲೇ ಹೋದ್ಯಲ್ಲೋ ಯಪ್ಪಾ… ಇನ್ಯಾರುನ್ನೋ ಅಪ್ಪಾ ಅಂದ್ಲಿ… ಯಪ್ಪಾ…’ ಅನ್ನೋ ಶಬ್ದ ಕೇಳಿಬಂದ ಕಡೆ ಕಣ್ಣಾಯಿಸಿದಳು ಮೀನಾಕ್ಷಿ. ಅಯ್ಯೋ ದ್ಯಾವ್ರೇ ಈ ಯಮ್ಮುಂದೊಳ್ಳೆ ಕಥೆಯಾಯ್ತು. ನಾ ಸಾಯ್ತೀನಿ ಅಂತ ಸಂಕ್ರಜ್ಜ ಮೊದ್ಲೇ ಡಂಗೂರ ಹೊಡ್ಸಿ ಸತ್ತಿದ್ರೆ ಸರಿಯಾಗ್ತಿತ್ತೇನೋ ಈಕೆಗೆ. ಈ ಮುದುಕಪ್ಪ ಸತ್ತಿದ್ಕೇ ಹಿಂಗಾಡ್ತಿದ್ದಾಳಲ್ಲ. ನಾನೇನಾದ್ರೂ ಇಲ್ಲೇ ಸತ್ರೆ ಹೆಂಗೆ ಅಳ್ಬಹುದು! ಅಂತ ನೆನಪಿಸಿಕೊಂಡು ನಗು ತಡೆಯಲಾರದೇ ಬಾಯಿಗೆ ಬಟ್ಟೆ ತುರುಕಿಕೊಂಡಳು. ಛೇ! ಇಂಥ ಸಂದರ್ಭದಲ್ಲೂ ನಾ ನಗೋದ ಯಾರಾದ್ರು ನೋಡುದ್ರೆ ಏನ್ ಅಂದಾರು. ಸಾವು, ನೋವು ಅಂತ ಎಲ್ಲೇ ಹೋದ್ರು ಈ ನಗು ಅನ್ನೋದು ನಂಗೆ ಬಿಡಾಂಗಿಲ್ಲ. ಅಲ್ಲಾ ನಿನ್ನೆಯಿಂದ ನೋಡ್ತೀವ್ನಿ. ಈಟೊಂದು ಅತ್ತೂ ಅತ್ತೂ ಸುಸ್ತಾಗವ್ರೆ. ಆದ್ರೂ ಅಳ್ತಿದ್ದಾರಲ್ಲ ಎಂದು ಸುತ್ತಲಿರುವ ಎಲ್ರು ಮುಖ ಗಮನಿಸಿದಳು.
ಎಲ್ರೂ ಒಂದೊಂದು ಸ್ಥಿತಿಯಲ್ಲಿ ಅಳುತ್ತಾ ಕೂತಿದ್ದರು. ಒಬ್ರು ಏನೋ ಯೋಚಿಸ್ತಿದ್ರೆ, ಕೆಲವರು ಸಂಬಂಧಿಕರು ಅಳೋದ್ನ ನೋಡಿ ತಾವೂ ಅಳುತ್ತಿದ್ದರು. ಕಣ್ಣಲ್ಲಿ ಕೆಲವರಿಗೆ ನೀರಿದ್ದರೆ ಇನ್ನು ಕೆಲವರಿಗೆ ನೀರಿರದೆ ತಮ್ಮ ಸೀರೆಯ ಸೆರಗನ್ನು ಬಾಯಿಗೆ ಮುಚ್ಚಿಡಿದು ಕುಳಿತಿದ್ದರು. ಮುಂದೆ ಕೂತವರು ಅತ್ತೂ ಅತ್ತೂ ಸುಸ್ತಾಗಿ ಬರೀ ಹೂಂ… ಹೂಂ… ಅಂತಿದ್ದರೆ, ಹಿಂದೆ ಕೂತವರು ಹೂಂ… ಹೂಂ… ಬರದೇ ಮಂಕಾಗಿದ್ದರು. ಅವರಿಂದಿದ್ದವರು ಏನೋ ಚಿಂತಿಸುತ್ತಾ, ತಮ್ಮ ಪಕ್ಕದವರೊಂದಿಗೆ ಅದು ಇದು ಮಾತಾಡುತ್ತಾ, ಯಾರ್ಯಾರಿಗೆ ಬೈಯಬೇಕೋ ಬೈದುಕೊಳ್ಳುತ್ತಾ, ಸಾವಿಗೆ ಬಂದವರಲ್ಲಿ ಯಾರ್ಯಾರು ನಮ್ಮ ಮಾತಾಡಿಸ್ಲಿಲ್ಲ ಅಂತ ಅವರವರೇ ಗುಸುಗುಸು ಅಂತಿದ್ದರು. ಕೆಲವರು ಗುಂಪುಗೂಡಿ ಮುಂದಿನ ಕಾರ್ಯದ ಬಗ್ಗೆ ಚಿಂತಿಸುತ್ತಿದ್ದರು. ಪಾಪ ಅತ್ತೂ ಕರೆದು ಸುಸ್ತಾಗಿದ್ದವರು, ಸಂಬಂಧಿಕರು ಬರುತ್ತಲೇ ಗೋಳಾಡಿಕೊಂಡು ಬಂದರೆ ತಕ್ಷಣ ಒಳ್ಳೆ ಕಿಕ್ ಕೊಟ್ಟ ಹಾಗೆ ಉಸಿರಿಲ್ಲದಿದ್ದರೂ ಉಸ್ ಉಸ್… ಅನ್ನುವವರನ್ನು ಕಂಡು ಚಿಂತಿಸುತ್ತಾ ಕೂತಿದ್ದ ಮೀನಾಕ್ಷಿಗೆ ಕುಂತಲ್ಲೇ ಕೂತು ಕೂತು ಮಂಪರು ಹತ್ತಿತು.
ಸಿದ್ದವ್ವ ಸಾವಿನ ಮನೆಯಲ್ಲಿ ಕುಳಿತು ತೂಕಡಿಸುತ್ತಿದ್ದ ಮೀನಾಕ್ಷಿ ನೋಡಿ, ‘ಥೂ ದರಿದ್ರ ಯಾಕಾಗಿ ಹುಟ್ಬಿಟ್ಟೆ ನನ್ ಹೊಟ್ಟೇಲಿ. ಎಲ್ಲೋದ್ರೂ ಹಿಂಗೇ’ ಅಂತ ಒಳಗೊಳಗೇ ಕುದಿಯುತ್ತಾ ಮೀನಾಕ್ಷಿ ಬಳಿ ಹೋಗಿ ಚಿವುಟಿ ಎಬ್ಬಿಸಿದಳು.
ನಿದ್ದೆಯಲ್ಲಿದ್ದ ಮೀನಾಕ್ಷಿಗೆ ಏನೋ ಇರುವೆ ಕಚ್ಚಿದಂತಾಗಿ ಕೈ ನೋಡಿಕೊಂಡಳು. ಸಿದ್ದವ್ವ ಪಕ್ಕದಲ್ಲಿದ್ದದ್ದನ್ನು ನೋಡಿ, ಇವ್ಳುದೇ ಕೆಲ್ಸ ಇದು ಎಂದು ಎದ್ದು ಹೊರಡಲು ಸಿದ್ಧಳಾದಳು. ಸಿದ್ದವ್ವ, ‘ಮನಿಗೋಗ್ಬಾ… ಯಾರ್ಯಾರು ಬಂದೌವ್ರೆ ಎಲ್ರುನೂ ಮನಿಗೆ ಕರ್ಕಂಡ್ನೆಡಿ. ನಾನೂ ಹಿಂದೇನೆ ಬತ್ತೀನಿ…’ ಅಂದಳು.
‘ಹ್ಞೂಂ… ನೀನ್ಯಾಕೆ ಒಂದ್ಸತಿ ಬತ್ತೀಯಾ? ಇಲ್ಲೇ ಇರು ಆಮ್ಯಾಕೆ ಎಲ್ರೂನೂ ಕರ್ಕಂಡ್ ಬರುವಂತೆ’ ಅಂತ ಮುಖ ಸಿಂಡರಿಸಿದಳು ಮೀನಾಕ್ಷಿ.
‘ಯಾಕೆ ನಿಂಗೇನು ಕಷ್ಟಾಗ್ತೈತೆ? ಈಗ್ಲೇ ಕರಿ ಬಂದೋಗ್ಲಿ’
‘ಅವ್ವೋ… ನಾನ್ಯಾರ್ನೂ ಕರಿಯಕ್ಕಿಲ್ಲ. ನೀನೇ ಕರ್ಕೊಂಡು ಬಾ… ನಾನೋಗಿತರ್ೀನಿ’ ಅಂತ ನಿಧಾನಕ್ಕೇಳಿ ಮೇಲಕ್ಕೆದ್ದಳು.
ದಾರಿಯಲ್ಲಿ ಮನೆ ಕಡೆ ಹೆಜ್ಜೆ ಹಾಕುತ್ತಾ, ‘ಅಲ್ಲಾ ನಂಗೇನ್ ಆಗೈತೆ ಅಂತ. ಎಲ್ಲೋದ್ರೂ ನಗ್ತಾನೇ ಇತರ್ೀನಿ. ಸಾವು-ನೋವು ಅನ್ನಂಗಿಲ್ಲ. ನಮ್ಮವ್ವ ಆಗಿದ್ಕೆ ಸುಮ್ಕಾಗವ್ಳೆ. ನಮ್ಮಜ್ಜಿ ಏನಾದ್ರೂ ಬದ್ಕಿರ್ಬೇಕಿತ್ತು… ಅಂತ ಒಬ್ಬೊಬ್ಬಳೇ ನಗುತ್ತಿದ್ದಳು.
ಮೀನಾಕ್ಷಿ ಹಿಂದೆನೇ ಬರುತ್ತಿದ್ದ ಸಿದ್ದವ್ವ, ‘ಇವ್ಳಿಗೆ ಏನಾಗೈತೆ, ಏನಾದ್ರು ಮೆಟ್ಕಬಿಡ್ತ ಅಂತೀನಿ’ ಅಂತ ತನ್ನ ಜೊತೆ ಮನೆಗೆ ಬರುತ್ತಿದ್ದ ನೆಂಟರಿಷ್ಟರ ಜೊತೆ ಅಂದಳು.
‘ಅದೇಕವ್ವ ಸಿದ್ದಿ, ಆ ಮಗೀಗೆ ಅಂಗಂತರಾ? ಏನೋ ಹುಡುಗಾಟ್ದ ವಯ್ಸು. ಹಂಗೆಲ್ಲ ಯಾವ್ದಾವ್ದೋ ಗಳಿಗೆಲೆಲ್ಲ ಏನೇನೋ ಮಾತಾಡ್ಬಾದರ್ು’ ಅಂತ ಸೋಮಜ್ಜಿ ಸಿದ್ದವ್ವನಿಗೆ ಬೈಯ್ಯತೊಡಗಿದಳು.
‘ಹಂಗಲ್ಲ ಸೋಮತ್ತೆ, ಈಗಿನ್ ಕಾಲುದ್ ಮಕ್ಳಿಗೆ ಏನ್ ಹೇಳೋದೋ ತಿಳಿಯಕ್ಕಿಲ್ಲ. ನಮ್ ಕಾಲ್ದಾಗ ಹಿಂಗೆಲ್ಲ ನಕ್ರೆ ನಮ್ಮವ್ವ ಕೈಗೆ ಸಿಕ್ಕಿದ್ರಾಗೇ ಬೀಸೋಳು. ಹುಡ್ಗೀರು ಅಂತೆಲ್ಲ ನಗ್ಬಾದರ್ೆ ಮುಂಡೇದೆ. ಸ್ವಲ್ಪ ನಾಜೂಕಾಗಿ ಇರೋದ್ನ ಕಲೀರಿ ಅಂತ ಮಂಗ್ಳಾತರ್ಿ ಎತ್ತೋಳು. ನೀನೇ ಕಂಡಿಯಲ್ಲ ನಮ್ಮವ್ವುನಾ?’
‘ಓಹೋ… ನಿಮ್ಮವ್ವ ಬಾಟ್ ಬಜಾರಿ. ನಾನೇನ್ ಕಂಡಿಲ್ವಾ? ಅದ್ಕೆ ನೀನೂ ಅದೇ ಸಾಗ್ನಾಗೆ ನಡೀಬೇಕು ಅಂತಿದ್ದೀಯೇನು?’
‘ಅಯ್ಯೋ ನಮ್ಮವ್ನ ಧೈರ್ಯ ನಂಗಿಲ್ಲ ನಡಿ. ಆಕೆ ಬದುಕ್ದಂಗೆ ನಾವು ಬದ್ಕಕ್ಕಾಯ್ತದ. ನಮ್ಮವ್ವ ಗಂಡಿಗಿತ್ತಿ ನಿಂಗೆ ಗೊತ್ತಲ್ಲ’
‘ಹೌದವ್ವ ಗಂಡಿಗಿತ್ತಿನೇ ಸರಿ. ನಿಮ್ಮವ್ವ ಮಾಡ್ತಿದ್ ಯವಾರವ ಯಾವ್ ಗಂಡ್ಸೂ ಮಾಡ್ತಿಲರ್ಿಲ್ಲ ಅನ್ನು’
‘ಹ್ಞೂಂ ಮತ್ತೆ…’ ಅಂತೇಳಿ ಮೀನಾಕ್ಷಿ ಕರೆದಳು ಸಿದ್ದವ್ವ.
‘ಮಗಾ… ಯಾಕಂಗೆ ಒಬ್ಳೆ ನಗ್ತಿದ್ದೆ ದಾರುದ್ದುಕು? ನೋಡ್ದೋರು ಏನಂದಾರು?’
‘ಏನಂತರವ್ವ, ಏನೋ ನೆನಪಾಗೈತೆ ನಕ್ಕಾಳು ಅಂತಾರೆ’
‘ಹಂಗೆಲ್ಲ ನಗ್ಬೇಡ್ವೆ…’
‘ಯಾಕೆ?’
‘ಯಾಕಂದ್ರೆ…?’
‘ಅಲ್ಲಾ ನಿಮ್ಮವ್ವ ಇರೋವರ್ಗೂ ಮೊಮ್ಮಕ್ಳು ನಕ್ರೆ, ಅತ್ರೆ, ತಿಂದ್ರೆ ಏನ್ ಹೇಳೋಳು ಅಂತ ಗೊತ್ತೈತಲ್ವ ನಿಂಗೆ? ನಿಂಗೂ ಅದೇ ಸಾಗು ಬಂದಿರೋದು. ಅದ್ಕೆ ನಗ್ಬೇಡ ನಗ್ಬೇಡ ಅನ್ನು’
‘ಓಹೋ ನೋಡವ್ವ ಸೋಮತ್ತೆ, ನಿನ್ ಮೊಮ್ಮಗಳ್ನಾ. ನಂಗೆ ಹೆಂಗ್ ಜೋರ್ ಮಾಡ್ತಾವ್ಳೆ.’
‘ಏನ್ ಜೋರ್ ಮಾಡುದ್ಲು ತಗಳಗಿ’ ಅಂತ ನಗುತ್ತಿದ್ದಳು ಸೋಮತ್ತೆ.
‘ಸೋಮಜ್ಜಿ ನಾವು ನಕ್ರೆ ಸಾಕು ಹಂಗೆಲ್ಲ ನಗ್ಬೇಡ್ರೆ… ನಮ್ಮೂರಲ್ಲಿ ಕುಲುಕುಲು ಅಂತ ನಕ್ಕೇ ಸತ್ತೋದ್ರು ಅನ್ನೋಳು ಇವ್ರವ್ವ! ಅದ್ಕೆ ಯಾವಾಗ್ಲೂ ಬೈತಿತರ್ಾಳೆ’ ಅಂತ ಸಿದ್ದವ್ವನ ಮೇಲೆ ಚಾಡಿ ಹೇಳತೊಡಗಿದಳು ಮೀನಾಕ್ಷಿ. ಸಿದ್ದವ್ವ-ಮೀನಾಕ್ಷಿ ಒಬ್ಬರ ಮೇಲೊಬ್ಬರು ಮಾತಿಗೆ ಮಾತು ಬೆಳೆಸಿಕೊಳ್ಳತೊಡಗಿದರು.
ಸೋಮಜ್ಜಿ ಅವ್ವ-ಮಗಳ ಮಾತುಕತೆಗಳನ್ನು ಕೇಳಲಾರದೇ, ‘ಅಯ್ಯೋ ದೇವ್ರೇ… ಸುಮ್ಕಿರ್ರೇ… ನಮ್ಮೂರಾಗೆ ಹಿಂಗೇ ಒಬ್ರುಮೇಲೊಬ್ರು ಚಾಡಿ ಹೇಳ್ತಾ ಸತ್ತೇ ಹೋದ್ರು…’ ಅಂದಳು.
ಸಿದ್ದವ್ವ, ಮೀನಾಕ್ಷಿ ಸೇರಿದಂತೆ ಅಲ್ಲಿದ್ದವರೆಲ್ಲ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತ ಸೋಮಜ್ಜಿ ಮಾತಿಗೆ ಜೋರಾಗಿ ನಗತೊಡಗಿದರು.
 

‍ಲೇಖಕರು G

December 31, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: