ಒಲವಿಗೆ ಆಹ್ವಾನ

ಆರನಕಟ್ಟೆ ರಂಗನಾಥ
ರೈಲು ಬಂಡಿಯ ಬಿಸಿಯುಸಿರಿಗೆ
ಬೆಸೆದಿದ್ದ ಮನವೀಗ
ನಗುವಿನ ಸೂತಕದಲ್ಲಿ ಬಸಿರಾಗಿ
ಒಲವಿನ ನಿಶಬ್ಧವ
ಮಸಣದ ನೀರವತೆಯ ಪ್ರಸವಿಸುತ್ತಿದೆ
೨
ಏಕಾಂತವ ಧ್ಯಾನಿಸುವ ಗಳಿಗೆಯಲಿ
ಭಗ್ನಗೊಂಡು
ಪ್ರೇಮದ ಆರ್ದತೆಗೆ ಉಸಿರ ಉಲ್ಲೇಖಿಸಿದರು
ಸಂಬಂಧಗಳ ಮರಗಟ್ಟಿಸುವ ನಿನ್ನ
ಶವಾಗಾರದ ಕಾವಲಿರಲಾರೆ
೩
ಮರಣಿಸಿದ ಪುಸ್ತಕದ ಟಿಪ್ಪಣಿಗಳಂತೆ
ಗಾಳಿಮಾತಿನ ಪಲ್ಲವಿಗೆ
ಲಯಕಾರ ವಿನ್ಯಾಸಕಾರ ಯಾರೋ
ಅವಡುಗಚ್ಚಿ ಕುಂತಿರುವ ನೆನಪಿಗೆ
ತಲ್ಲಣಿಸುತ್ತಿದೆ ಮನವು ತಾಳದೆ
೪
ಹೇಳಲೆಷ್ಷೋ ಉಳಿದಿರುವಾಗ
ಪದಗಳ ಅರ್ಥವೇ ಕಳೆದು
ಘನ ಗಾಂಭೀರ್ಯದ ಎದುರುಗೊಳ್ಳುವಿಕೆಯ
ಯಾರೂ ಅರಿಯದೆ ಉಳಿದರು
ಎದುರಾದರು ಬಿರಿಯದ ತುಟಿಗಳಿಗೆ
ಧಾವಂತದ ನಡಿಗೆಗೆ ಮನಸ್ಸನ್ನು ಪಳಗಿಲ್ಲ
ಕಲ್ಲೆದೆಯೆಂದು ಬರೆಯಲಷ್ಟೇ ಸಾಧ್ಯವಾಗಲಿ ನಮಗೆ
೫
ಸಾಂತ್ವನದ ಸಾಂಗತ್ಯಕ್ಕೆ ಆದರ್ಶದ ಹಂಗೇಕೆ
ಮನ್ವಂತರಗಳಿಲ್ಲ ಉಳಿದು ಹೋಗಲು
ನಿರುತ್ತರದ ಸಂಜ್ಞೆಗಳಿಗೆ ಆವರಣದ ಚಿನ್ಹೆಗಳೇಕೆ
ಮನದಾಳದ ಮಾತಿಗೆ ಸೂತಕವೇಕೆ
ಸೊಲ್ಲು ಸೊಲ್ಲಿಗು ಸೊಡರನ ಬೆಳಕಿರಲಿ





0 Comments