ತಂತ್ರಜ್ಞಾನ ಹಾಗೂ ಹಕ್ಕುಗಳ ನಡುವಿನ ಜಂಜಾಟ

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

‍”ಅಂತರರಾಷ್ಟ್ರೀಯ ಅನುವಾದಕರ ದಿನದ ಹಿನ್ನಲೆಯಲ್ಲಿ ನಾನು ಅನುವಾದಿಸುತ್ತಿರುವ ಲಾರೆನ್ಸ್ ಲೆಸಿಗ್ ಅವರ ಫ್ರೀ ಕಲ್ಚರ್ (ಸ್ವತಂತ್ರ ಸಂಸ್ಕೃತಿ)‍ ಪುಸ್ತಕದ ಒಂದಷ್ಟು ವಿಷಯಗಳನ್ನು ತಂತ್ರಜ್ಞಾನ ಬೆಳವಣಿಗೆಯ ಸಂದರ್ಭದಲ್ಲಿ ಆದ ಸೋಷಿಯಲ್ ಶಿಫ್ಟ್ ಅಥವಾ ಸಾಮಾಜಿಕ ಪಲ್ಲಟಗಳನ್ನು ನಿಮ್ಮೆದುರಿಗೆ ಇಡಲು ಮುಕ್ತ ಕಣದ ಮೂಲಕ ನಿಮ್ಮ ಮುಂದಿಡುತಿದ್ದೇನೆ”

ಸೂಚನೆ: ಮೂಲ ಪುಸ್ತಕದ ಅನುವಾದ ಲೇಖಕರ ಅನುಮತಿಯ ಮೇರೆಗೆ ನಡೆಯುತ್ತಿದೆ ಜೊತೆಗೆ ಫ್ರೀ ಕಲ್ಚರ್ ಹಾಗೂ ಅನುವಾದಗೊಳ್ಳುತ್ತಿರುವ ಪುಸ್ತಕ ಎರಡೂ ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್ ಅಡಿಯಲ್ಲಿವೆ. 

ಡಿಸೆಂಬರ್ ೧೭, ೧೯೦೩ ರಂದು, ಗಾಳಿ ಬೀಸುತ್ತಿದ್ದ ಉತ್ತರ ಕೆರೊಲಿನಾದ ಬೀಚಿನ ಮೇಲೆ ಕೇವಲ ೧೦೦ ಸೆಕೆಂಡುಗಳು ಕಾಲದ ಹಾರಾಟದ ಮೂಲಕ, ಗಾಳಿಗಿಂತ ಭಾರವಾದ, ಸ್ವಯಂ ಚಾಲಿತ ವಾಹನವು ಹಾರಾಡಬಲ್ಲದು ಎಂಬುದನ್ನು ರೈಟ್ ಸಹೋದರರು‍ ತೋರಿಸಿಕೊಟ್ಟರು. ಈ ಕ್ಷಣ ವಿದ್ಯುತ್ ಸಂಚಾರವಾದ ಅನುಭವವನ್ನು ಉಂಟುಮಾಡಿತು ಮತ್ತು ಅದರ ಮಹತ್ವವನ್ನು ವ್ಯಾಪಕವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗಿಸಿತು.

ತಕ್ಷಣವೇ, ಈ ಹೊಸ ತಂತ್ರಜ್ಞಾನ ಮಾನವಸಹಿತ ಹಾರಾಟದ ಬಗ್ಗೆ ಆಸಕ್ರಿಯ ಮಹಾಸ್ಪೋಟವನ್ನು ಸಾಧ್ಯವಾಗಿಸಿದು, ‍ಮತ್ತು ‍ಬೇರೆ ಬೇರೆ ‍ಇನ್ನೋವೇಟರ್‌ಗಳು (ನಾವೀನ್ಯಕಾರರು? Innovators) ಈ ಒಂದು ಶೋಧನೆಯ ಮೇಲೆ ಕೆಲಸ ಮಾಡಲಾರಂಭಿಸಿದರು.

ರೈಟ್ ಸಹೋದದರು ವಿಮಾನವನ್ನು ಕಂಡುಹಿಡಿದ ಸಮಯದಲ್ಲಿ ಅಮೇರಿಕದ ಒಂದು ಕಾನೂನು ‍ಆಸ್ತಿ ಮಾಲೀಕರಿಗೆ ತನ್ನ ಭೂಮಿಯ ಮೇಲಿನ ಜಾಗವನ್ನಷ್ಟೇ ಅಲ್ಲದೆ, ಅದರ ಕೆಳಗಿನ, ಅಂದರೆ ಭೂಮಿಯ ಮಧ್ಯಭಾಗವದವರೆ, ಹಾಗೂ ಭೂಮಿಯ ಮೇಲಿನ ಎಲ್ಲಾ ಜಾಗಕ್ಕೂ, “ಒಂದು ಅನಿರ್ದಿಷ್ಟ ಎತ್ತರದವರೆಗೆ” ಮಾಲೀಕತ್ವವನ್ನು ನೀಡುತ್ತಿತ್ತು.

ಬಹಳಷ್ಟು ವರ್ಷಗಳವರೆಗೆ, ವಿದ್ವಾಂಸರುಗಳಿಗೆ ಭೂಮಿಯ ಮೇಲಿನ ಹಕ್ಕು ಸ್ವರ್ಗವನ್ನು ಮುಟ್ಟುವವರೆಗೆ ಎನ್ನುವ ಕಲ್ಪನೆಯನ್ನು ಅರ್ಥೈಸುವುದು ಹೇಗೆ ಎನ್ನುವ ಗೊಂದಲದಲ್ಲಿದ್ದರು. ಇದರರ್ಥ ನೀವು ಅಲ್ಲಿನ ನಕ್ಷತ್ರಗಳಿಗೂ ಒಡೆಯರೆಂದೇ? ನಿಮ್ಮ ಭೂಮಿಯ ಮೇಲೆ ಉದ್ದೇಶಪೂರ್ವಕವಾಗಿ ಮತ್ತು ನಿಯಮಿತವಾಗಿ ಹಾರಾಡುವ ಹೆಬ್ಬಾತುಗಳನ್ನು ‍ಅತಿಕ್ರಮಣದ ಅಪರಾಧಕ್ಕೆ ವಿಚಾರಣೆಗೆ ಒಳಪಡಿಸಬಹುದೇ?

ಆನಂತರ ವಿಮಾನಗಳು ಬಂದವು, ಮತ್ತು ಮೊದಲ ‍ಬಾರಿಗೆ, ಆಮೇರಿಕಾದ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿದ್ದ, ಮತ್ತು ಈ ಹಿಂದಿನ ಪ್ರಸಿದ್ಧ ಕಾನೂನು ಚಿಂತಕರು ಒಪ್ಪಿಕೊಂಡಿದ್ದ –  ಕಾನೂನಿನ ತತ್ವಗಳು ಮುಖ್ಯವಾಗಲಾರಂಭಿಸಿದವು.

ನನ್ನ ಭೂಮಿ ಸ್ವರ್ಗಕ್ಕೆ ತಲುಪಿದ್ದೇ ಆದರೆ, ಯುನೈಟೆಡ್ (ಅಮೇರಿಕಾದ ವಿಮಾನ ಸಂಸ್ಥೆ) ನನ್ನ ಮೈದಾನದ ಮೇಲೆ ಹಾರಿದರೆ ಏನಾಗುತ್ತದೆ? ಅದನ್ನು ನನ್ನ ಆಸ್ತಿಯ ಮೇಲೆ ಹಾರಾಡುವುದನ್ನು  ಬಹಿಷ್ಕರಿಸುವ ಹಕ್ಕು ನನಗೆ ಇದೆಯೇ? ಡೆಲ್ಟಾ ಏರ್‌ಲೈನ್ಸ್‌ನೊಂದಿಗೆ ವಿಶೇಷ ಪರವಾನಗಿ ಪಡೆಯಲು ನನಗೆ ಅನುಮತಿ ಇದೆಯೇ? ಈ ಹಕ್ಕುಗಳ ಬೆಲೆಯನ್ನು ನಿರ್ಧರಿಸಲು ನಾವು ಹರಾಜು ಪ್ರಕ್ರಿಯೆ ನೆಡೆಸಬಹುದೇ?

1945 ರಲ್ಲಿ, ಈ ಪ್ರಶ್ನೆಗಳು ಫೆಡರಲ್ ಪ್ರಕರಣವಾದವು. ಉತ್ತರ ಕೆರೊಲಿನಾದ ರೈತರಾದ ಥಾಮಸ್ ಲೀ ಮತ್ತು ಟಿನಿ ಕಾಸ್ಬಿ ಕೆಳಮಟ್ಟದಲ್ಲಿ-ಹಾರುವ ಮಿಲಿಟರಿ ವಿಮಾನಗಳಿಂದಾಗಿ ಕೋಳಿಗಳನ್ನು ಕಳೆದುಕೊಳ್ಳಲು ಪ್ರಾರಂಭಿಸಿದಾಗ (ವಿಮಾನದ ಗದ್ದಲದಿಂದ ಭಯಗೊಂಡ ಕೋಳಿಗಳು ‍ಕೊಟ್ಟಿಗೆಯ ಗೋಡೆಗಳಿಗೆ ಹಾರಿ ಗುದ್ದಿಕೊಂಡು ಸತ್ತವು) ಕಾಸ್ಬಿಸ್, ಸರ್ಕಾರವು ತಮ್ಮ ಭೂಮಿಯ ಮೇಲೆ ಅತಿಕ್ರಮಣ ಮಾಡುತ್ತಿದೆ ಎಂದು ಮೊಕದ್ದಮೆ ಹೂಡಿದ.

ವಿಮಾನಗಳು, ಸಹಜವಾಗಿ, ಕಾಸ್ಬಿಸ್ ಭೂಮಿಯ ಮೇಲ್ಮೈಯನ್ನು ಮುಟ್ಟಲಿಲ್ಲ. ಆದರೆ, ಬ್ಲಾಕ್‌ಸ್ಟೋನ್, ಕೆಂಟ್ ಮತ್ತು ಕೋಕ್ ಹೇಳಿದಂತೆ, “ಒಂದು ಅನಿರ್ದಿಷ್ಟ ಎತ್ತರದವರೆಗೆ” ಭೂಮಿಯ ಒಡೆತನದ ವ್ಯಾಪ್ತಿ ಇದ್ದಲ್ಲಿ, ಸರ್ಕಾರವು ಅವರ ಆಸ್ತಿಯ ಮೇಲೆ ಅತಿಕ್ರಮಣ ಮಾಡಿದಂತಾಗಿತ್ತು, ಮತ್ತು ಕಾಸ್ಬಿಸ್ ಅದನ್ನು ತಡೆಹಿಡಿಯಲು ಬಯಸಿದ್ದ.

ಸುಪ್ರೀಂ ಕೋರ್ಟ್ ಕಾಸ್ಬಿಸ್ ಪ್ರಕರಣದ ವಿಚಾರಣೆ ನಡೆಸಲು ಒಪ್ಪಿಕೊಂಡಿತು. ಈಗಾಗಲೇ ಕಾಂಗ್ರೆಸ್ (ಅಮೇರಿಕಾದ ಚುನಾಯಿತ ಸರ್ಕಾರ) ವಾಯುಮಾರ್ಗಗಳನ್ನು ಸಾರ್ವಜನಿಕವೆಂದು ಘೋಷಿಸಿತ್ತು, ಆದರೆ ಒಬ್ಬರ ಆಸ್ತಿ ನಿಜವಾಗಿಯೂ ಸ್ವರ್ಗಕ್ಕೆ ವಿಸ್ತರಿಸಿದ್ದರೆ, ಕಾಂಗ್ರೆಸ್ಸಿನ ಈ ಘೋಷಣೆಯು ಪರಿಹಾರವಿಲ್ಲದೆ ಆಸ್ತಿಯನ್ನು “‍ಮುಟ್ಟುಗೋಲು ಹಾಕಿಕೊಳ್ಳುವ ನೆಡೆ” ಅಸಂವಿಧಾನಿಕ ಆಗಿರುತ್ತಿತ್ತು..

ನ್ಯಾಯಾಲಯವು “ಪ್ರಾಚೀನ ಸಿದ್ಧಾಂತ ಪ್ರಕಾರವಾಗಿ ಭೂಮಿಯ ಸಾಮಾನ್ಯ ಕಾನೂನು ಮಾಲೀಕತ್ವವು ಬ್ರಹ್ಮಾಂಡದ ಪರಿಧಿಗೆ ವಿಸ್ತರಿಸಿದೆ” ಎಂದು ಒಪ್ಪಿಕೊಂಡಿತು. ಆದರೆ ನ್ಯಾಯಮೂರ್ತಿ ಡೌಗ್ಲಾಸ್ ಪ್ರಾಚೀನ ಸಿದ್ಧಾಂತವನ್ನು ಅರ್ಥೈಸುವ ಬಗ್ಗೆ ತಾಳ್ಮೆ ಹೊಂದಿರಲಿಲ್ಲ. ‍ಒಂದೇ ಪ್ಯಾರಾಗ್ರಾಫ್‌/ಕಲಮಿನಲ್ಲಿ, ನೂರಾರು ವರ್ಷಗಳ ಆಸ್ತಿ ಕಾನೂನನ್ನು ಅಳಿಸಿ ಹಾಕಿದ.. ಅವರು ನ್ಯಾಯಾಲಯಕ್ಕೆ ಬರೆದಂತೆ,

[ಈ ಪ್ರಾಚೀನ] ಸಿದ್ಧಾಂತಕ್ಕೆ ಆಧುನಿಕ ಜಗತ್ತಿನಲ್ಲಿ ಸ್ಥಾನವಿಲ್ಲ. ಕಾಂಗ್ರೆಸ್ ಘೋಷಿಸಿದಂತೆ, ವಾಯುಮಾರ್ಗ ಸಾರ್ವಜನಿಕ ಹೆದ್ದಾರಿಯಾಗಿದೆ. ಅದು ನಿಜವಲ್ಲದಿದ್ದರೆ, ಪ್ರತಿ ಖಂಡಾಂತರ ಹಾರಾಟವು ವಿಮಾನದ ಆರಪೇಟರ್ (ಪೈಲಟ್‌) ಅನ್ನು ಎಣಿಸಲಾರದಷ್ಟು ಕಟ್ಟಳೆಗಳಿಗೆ ಗುರಿಪಡಿಸುತ್ತದೆ. ಸಾಮಾನ್ಯ ಜ್ಞಾನ ಕಲ್ಪನೆಯ ವಿರುದ್ಧ ಪ್ರತಿಭಟಿಸುತ್ತದೆ.

ಖಾಸಗಿ ಹಕ್ಕುಗಳನ್ನು ವಾಯುಪ್ರದೇಶಕ್ಕೆ ಮಾನ್ಯಮಾಡುವುದರಿಂದ ಈ ಹೆದ್ದಾರಿಗಳನ್ನು ಮುಚ್ಚಿಹಾಕಿದಂತಾಗುತ್ತದೆ, ಸಾರ್ವಜನಿಕ ಹಿತದೃಷ್ಟಿಯಿಂದ ಅವುಗಳ ನಿಯಂತ್ರಣ ಮತ್ತು ಅಭಿವೃದ್ಧಿಗೆ ಗಂಭೀರವಾಗಿ ಹಸ್ತಕ್ಷೇಪ ಮಾಡಿದಂತಾಗುತ್ತದೆ, ಮತ್ತು ಸಾರ್ವಜನಿಕರ ಹಕ್ಕನ್ನು ಖಾಸಗಿ‍ ಮಾಲೀಕತ್ವಕ್ಕೆ ವರ್ಗಾಯಿಸಿದಂತಾಗುತ್ತದೆ.

“ಸಾಮಾನ್ಯ ಜ್ಞಾನ ಕಲ್ಪನೆಯ ವಿರುದ್ಧ ಪ್ರತಿಭಟಿಸುತ್ತದೆ”.

ಸಾಮಾನ್ಯವಾಗಿ ಕಾನೂನು ಕಾರ್ಯನಿರ್ವಹಿಸುವ ರೀತಿಯೇ ಹೀಗೆ. ಆಗಾಗ್ಗೆ ಥಟ್ಟನೆ ಅಥವಾ ಅಸಹನೆಯಿಂದ ಅಲ್ಲದಿದ್ದರೂ, ಅಂತಿಮವಾಗಿ ಹೀಗೆ ಕಾರ್ಯನಿರ್ವಹಿಸುತ್ತದೆ. ಇದು ಡೌಗ್ಲಾಸ್ನ ಅಳುಕಿಲ್ಲದ ಶೈಲಿಯಾಗಿತ್ತು. ಬೇರೆ ನ್ಯಾಯಾಧೀಶರುಗಳಾದಿದ್ದಲ್ಲಿ ತಮ್ಮ ತೀರ್ಮಾನವನ್ನು ತಿಳಿಸಲು ಡೌಗ್ಲಾಸ್‌ನ ಒಂದೇ ಸಾಲಿನ ತೀರ್ಪು – “ಸಾಮಾನ್ಯ ಜ್ಞಾನ ಕಲ್ಪನೆಯ ವಿರುದ್ಧ ಪ್ರತಿಭಟಿಸುತ್ತದೆ” ಎನ್ನುವ ಬದಲು ಪುಟಗಳನ್ನೇ ತುಂಬಿಸುತ್ತಿದ್ದಿರಬಹುದು.

ಆದರೆ ಅದು ಪುಟಗಳನ್ನೋ ಅಥವಾ ಕೆಲವೇ ಕೆಲವು ಪದಗಳನ್ನು ತೆಗೆದುಕೊಳ್ಳುತ್ತದೆಯೋ, ಅದು ಸಾಮಾನ್ಯ ಕಾನೂನು ವ್ಯವಸ್ಥೆಯ ವಿಶೇಷ ಪ್ರತಿಭೆ, ನಮ್ಮಂತೆಯೇ,‍ ಕಾನೂನು ಆಯಾ ಕಾಲದ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುತ್ತದೆ. ಮತ್ತು ಅದು ಸರಿಹೊಂದಿಸಿದಂತೆ, ಅದು ಬದಲಾಗುತ್ತದೆ. ಒಂದು ಯುಗದಲ್ಲಿ ರಾಕ್ ಸಾಲಿಡ್ / ಬಂಡೆಯಂತೆ ಗಟ್ಟಿ ಎಂದು ಕರೆಸಿಕೊಳ್ಳುತ್ತಿದ್ದ ವಿಚಾರಗಳು ಮತ್ತೊಂದು ಯುಗದಲ್ಲಿ ಜೊಳ್ಳಾಗುತ್ತಾ ಹೋಗುತ್ತವೆ.

ಅಥವಾ ‍ಕನಿಷ್ಠಪಕ್ಷ, ಬದಲಾವಣೆಯ ಮತ್ತೊಂದು ತುದಿಯಲ್ಲಿ ಶಕ್ತಿಯುತರಾದವರು ಯಾರೂ ಇಲ್ಲದಿದ್ದಾಗ ಈ ರೀತಿಯ ಸಂಭಾವ್ಯತೆ ಸಾಧ್ಯ. ಕಾಸ್ಬಿಸ್ ಕೇವಲ ರೈತರಾಗಿದ್ದವರು. ಮತ್ತು ನಿಸ್ಸಂದೇಹವಾಗಿ ಅವರಂತೆಯೇ ವಾಯುಮಾರ್ಗದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್‌ನಿಂದ ಅಸಮಾಧಾನಗೊಂಡ ಅನೇಕರು ಇದ್ದರೂ (ಎಲ್ಲಾ ಕೋಳಿಗಳು ಈ ಗದ್ದಲದಿಂದ ಗೋಡೆಗಳಿಗೆ ಹಾರಿಸಿಲ್ಲ ಎಂದು ಭಾವಿಸಿದ್ದವರೂ ಇರಬಹುದು), ತಂತ್ರಜ್ಞಾನ, ಹಾಗೂ ರೈಟ್ ಸಹೋದರರ ಹುಟ್ಟು, ಈ ಎಲ್ಲಾ ಕಲ್ಪನೆಗಳನ್ನು ಕಾಸ್‌ಬೈಗಳ ಪ್ರಂಪಂಚದಲ್ಲಿನ ಎಲ್ಲರೂ ಒಟ್ಟಾಗಿ ತಡೆಹಿಡಿಯಲು ತುಂಬಾ ಕಷ್ಟಪಡಬೇಕಾಗುತ್ತದೆ

ರೈಟ್ ಸಹೋದರರು ವಿಮಾನಗಳನ್ನು ತಾಂತ್ರಿಕ ಲೆಕ್ಕಾಚಾರದ ಕೊಳಕ್ಕೆ ಉಗುಳಿದರು; ಈ ಕಲ್ಪನೆಯು ಕೋಳಿ  ಗೂಡುಗಳಲ್ಲಿ ವೈರಸ್‍ ಹರಡಿದಂತೆ ಹರಡುತ್ತದೆ; ಕಾಸ್ಬಿಸ್‌ನಂತಹ ರೈತರು ರೈಟ್ ಸಹೋದರರು ಸೃಷ್ಟಿಸಿದ ತಂತ್ರಜ್ಞಾನದ ಬಗ್ಗೆ “ತಮಗೆ ಸಮಂಜಸವೆಂದು ತೋರುತ್ತಿದೆ” ಎನ್ನುವುದರ ಸುತ್ತ ತಮಗೆ ತಾವೇ ಸುತ್ತುವರೆದಿದ್ದಾರೆ.

ಅವರು ತಮ್ಮ ಹೊಲಗಳಲ್ಲಿ ನಿಲ್ಲಬಹುದು, ಕೈಯಲ್ಲಿ ಸತ್ತ ಕೋಳಿಗಳನ್ನು ಹಿಡಿಯಬಹುದು ಮತ್ತು ಈ ಆಕ್ಷೇಪಾರ್ಹ ನವೀನ ತಂತ್ರಜ್ಞಾನಗಳ ವಿರುದ್ಧ ಬಿಗಿಮುಷ್ಟಿ ಮಾಡಿ ಗುದ್ದಾಡಬಹುದು. ಅವರು ತಮ್ಮ ಪ್ರತಿನಿಧಿಗಳನ್ನು ಕರೆಯಬಹುದು ಅಥವಾ ಮೊಕದ್ದಮೆ ಹೂಡಬಹುದು. ಆದರೆ ಕೊನೆಯಲ್ಲಿ, ಬೇರೆಯವರಿಗೆಲ್ಲರಿಗೂ “ಸ್ಪಷ್ಟ” ಎಂದು ತೋರುವ “ಸಾಮಾನ್ಯ ಜ್ಞಾನ” ದ ಶಕ್ತಿಯೇ ಮೇಲುಗೈ ಸಾಧಿಸುತ್ತದೆ. ಅವರ “ಖಾಸಗಿ ಹಿತಾಸಕ್ತಿ”ಯು ಸ್ಪಷ್ಟವಾದ ಸಾರ್ವಜನಿಕ ಲಾಭವನ್ನು ಸೋಲಿಸಲು ಇಲ್ಲಿ ಅನುಮತಿಸಲಾಗುವುದಿಲ್ಲ.

ಮುಂದುವರೆಯುತ್ತದೆ… 

‍ಲೇಖಕರು ಓಂಶಿವಪ್ರಕಾಶ್

October 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: