ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ಪದ್ಮಿನಿ ನಾಗರಾಜು ಹೊಸ ಕವಿತೆ- ಅಳುವ ಕಡಲಲಿ

ಡಾ ಪದ್ಮಿನಿ ನಾಗರಾಜು

ಪರಮ ಆತ್ಮೀಯರು
ಗುಂಪುಗಳಲ್ಲಿ ಮರಣಚಿತ್ರವಾಗಿ
ಕಾಣಿಸಿಕೊಂಡಿದ್ದಾರೆ
ಮನಸ್ಸು ಭಾರವಾಗಿದೆ
ಸಂಬಂಧದ ಸೆಳೆತದ ಎಳೆ
ಕಣ್ಣಮುಂದಾಗಿ
ಕರೋನಾ ಮಾರಿ ಬಲಿ
ಎಂಬ ಸುದ್ಧಿ ತಲ್ಲಣಗೊಳಿಸಿ
ನನ್ನದೂ ಒಂದು ಮೆಸೇಜು
ಒತ್ತಿ ಕಣ್ಣೀರಾಗುತ್ತೇನೆ
ನನ್ನ ಫೋನಿಂದ ಅವರ
ಹೆಸರ ಡಿಲೀಟು ಮಾಡುತ್ತಾ

ಪ್ರತಿದಿನ ಇದೇ ದಿನಚರಿ
ಸತ್ತವರ ಮುಖಗಳ
ಮೆರವಣಿಗೆ
ನೋವಿನ ಆಕ್ರಂದನ
ಪ್ರಾಣವಾಯುವಿಗೆ ಪರದಾಟ
ಬೆಡ್‌ಗಳ ದಂಧೆ
ಸಾಮೂಹಿಕ ಹತ್ಯೆ
ವೈದ್ಯರಿಗೆ ಶಾಪ
ಕಪ್ಪು ಮನದ
ಬಿಳಿಯುಡಿಗೆಯ
ರಾಜಕಾರಣಿಗಳು
ಶವಗಳ ಹೆಸರಲ್ಲಿ
ರಾಜಕೀಯ ಮಾಡುವ ಕ್ರೌರ್ಯ
ಹರಕೆಯ ಕುರಿಗಳು
ಬಾಗಿಲಿಗೆ ಕಟ್ಟಿದ ತೋರಣ
ತಿನ್ನುವ ಸಂಭ್ರಮ

ಪ್ರೀತಿಪಾತ್ರರ ಕಳಕೊಂಡ
ಮನಗಳ ಸಂತೈಸುವ
ಕೈಗಳಿಗಿಂತ
ಸಾವಿನ ಭಯ ಹರಡಿ
ಟಿಆರ್‌ಪಿ ಹೆಚ್ಚಿಸುವ
ಕೂಗು ಮಾರಿಗಳ
ಹೊಡೆತಕ್ಕೆ
ಎದೆಯೊಡೆದು ಸತ್ತವರ
ನೇಣು ಬಿಗಿದುಕೊಂಡವರ
ಆಸ್ಪತ್ರೆ ಜಿಗಿದು ಮುಕ್ತರಾದವರ
ಮುಗ್ಧ ಮುಖ ಕಣ್ಣೆದುರಿಗೆ

ಶವಗಳ ಯಾತ್ರೆಗೆ
ಬಿಳಿವಸ್ತ್ರ ಕಟ್ಟುವವನ
ಕೈಬೆಚ್ಚಗಿಟ್ಟು ಸಾಗಿಸುವವರ
ಮುಂದೆ ತಟ್ಟೆಯಿಡಿದು
ಜೇಬು ತುಂಬಿಸಿಕೊಳ್ಳುತ್ತಾನೆ
ದಿನಪೂರ್ತಿ ಸುಡುವ ಹರಿಶ್ಚಂದ್ರ
ಯಾರೋ ಸಣ್ಣಗೆ ಗೊಣಗುತ್ತಾರೆ
ನಮ್ಮದು ಬ್ರಾಹ್ಮಣ್ಯ
ನಮ್ಮದು ಲಿಂಗಾಯಿತ
ನಾವು ಗೌಡರು
ಹೀಗೆಲ್ಲಾ ಹೇಗೇಗೋ ಸುಡುವುದುಂಟೆ?
ಮುಟ್ಟಿದರೆ ಅಂಟುವ ರೋಗಕ್ಕಂಜಿ
ಅವರ ಮಾತುಗಳು ಗಂಟಲಲ್ಲೆ ಹೂತು
ಚಿಮಣಿಗಳು ಹೊಗೆ ಸೂಸಿವೆ
ಅವರ ನಿಟ್ಟುಸಿರಿನಂತೆ

ಮುಖಗವಸಿನಡಿ
ಮಾನವೀಯತೆಯೋ
ವಂಚಿಸುವ ಜಾಲವೋ
ಊರೆಲ್ಲಾ ಯಮಪುರಿಗಳೋ
ಪ್ರತಿಕ್ಷಣವೂ ಆತಂಕವೋ
ಸುತ್ತ ಸತ್ತ ಸುದ್ಧಿಗಳಲ್ಲಿ
ಬದುಕಿದವರ ನಿಟ್ಟುಸಿರೋ
ಕಾಣದ ಕತ್ತಲ ದಾರಿಗೆ
ಕುರುಡನೊಬ್ಬ ಕೈಹಿಡಿದು
ನಡೆಸುತ್ತಿದ್ದಾನೆ
ನಡೆಯುತ್ತಿದ್ದೇನೆ
ಕ್ಯೂನಲ್ಲಿ ನಾನೂ ಇದ್ದೇನೆ!

‍ಲೇಖಕರು Avadhi

7 May, 2021

2 Comments

  1. ರಮೇಶ್

    ಅಹುದು, ಎಲ್ಕರೂ ಕ್ಯೂನಲ್ಲಿ ನಿಂತಿದ್ದೇವೆ. ಕ್ಯೂನ ಆರಂಭ, ಅಂತ್ಯ ತಿಳಿಯದು. ಯಾರೋ ಎಲ್ಲೋ ಮಾಡಿದ ತಪ್ಪಿಗೆ ನೂರಾರು ವಿಜ್ಞಾನಿಗಳುಗಳು ಬೇಕು ಪರಿಹಾರ ಹುಡುಕಲು. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.

  2. ಚಂದ್ರಪ್ರಭ ಕಠಾರಿ

    ಕೊರೊನಾ ತಂದ ಸಂಕಟ, ನೋವು ಅದರೊಟ್ಟಿಗೆ ಮರೆಯಾದ ಮನುಷ್ಯತ್ವ, ಪ್ರಸ್ತುತ ಎಲ್ಲೆಡೆ ಘಟಿಸುತ್ತಿರುವ ಸಂದರ್ಭಗಳನ್ನು ಕವನ ಬಹಳ ಚೆನ್ನಾಗಿ ಚಿತ್ರಿಸುತ್ತದೆ..

    ಕಾಣದ ಕತ್ತಲ ದಾರಿಗೆ
    ಕುರುಡನೊಬ್ಬ ಕೈಹಿಡಿದು
    ನಡೆಸುತ್ತಿದ್ದಾನೆ
    ನಡೆಯುತ್ತಿದ್ದೇನೆ
    ಕ್ಯೂನಲ್ಲಿ ನಾನೂ ಇದ್ದೇನೆ!

    ಎಲ್ಲರ ಪರಿಸ್ಥಿತಿ ಒಂದೇ ಆಗಿದೆ..ಎಲ್ಲರ ಆತಂಕಗಳನ್ನು ಈ ಸಾಲುಗಳು ಪ್ರತಿನಿಧಿಸುತ್ತದೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading