ನಾಗೇಶ್ ಹೆಗಡೆ ಕಂಡಂತೆ ಜರಗನಹಳ್ಳಿ ಎಂಬ ಬೆರಗು..

ನಾಗೇಶ್ ಹೆಗಡೆ

ಮಿತ್ರ ಜರಗನಹಳ್ಳಿ ಶಿವಶಂಕರ್‌ ತೀರಿಕೊಂಡರು. ಅವರು ಶ್ರೇಷ್ಠಮಟ್ಟದ ಚುಟುಕು ಕವಿಯಾಗಿದ್ದರು, ಉತ್ತಮ ಸಂಘಟಕರಾಗಿದ್ದರು, ಸಮುದಾಯದ ಸಂಕಟಗಳಿಗೆ ಮಿಡಿಯುವ ಸಹೃದಯಿಯಾಗಿದ್ದರು. ಎಲ್ಲವೂ ನಿಜ. ಅವೆಲ್ಲಕ್ಕಿಂತ ಮುಖ್ಯ ಎಂದರೆ, ಈ ಮಾನವ ಕೇಂದ್ರಿತ ಆದ್ಯತೆಗಳಾಚೆಗೂ ಅವರ ಚಟುವಟಿಕೆ ವಿಸ್ತರಿಸಿತ್ತು.

ನಾನು ʼಸುಧಾʼದಲ್ಲಿದ್ದಾಗ ಫೋನ್‌ ಮಾಡಿ ಅವರಿಂದ ಹನಿಗವನಗಳನ್ನು ಬರೆಸುತ್ತಿದ್ದೆ. ಅವರೂ ಆಗೊಮ್ಮೆ ಈಗೊಮ್ಮೆ ಫೋನ್‌ ಮಾಡಿ ನನ್ನ ಪರಿಸರ ಲೇಖನಗಳ ಬಗ್ಗೆ ಭಾವುಕರಾಗಿ ಮಾತಾಡುತ್ತಿದ್ದರು. ಆದರೆ ನಾನು ಆಗೆಲ್ಲ ಅವರಿಗೆ ಒಂದು ಕಂಡಿಶನ್‌ ಹಾಕಿರುತ್ತಿದ್ದೆ. ನನಗೆ ಫೋನ್‌ ಮಾಡಿದಾಗಲೆಲ್ಲ ತಮ್ಮ ಒಂದಾದರೂ ಹನಿಗವನವನ್ನು ಓದಿ ಹೇಳಬೇಕು ಎಂದು. ಅವರು ಓದುತ್ತಿರಲಿಲ್ಲ. ಓದದೇ ಹೇಳುತ್ತಿದ್ದರು.

ಕೆಲವೊಮ್ಮೆ ‘ಮೊನ್ನೆ ಒಂದು ವಿಶೇಷ ಐಡಿಯಾ ಹೊಳೆದಿತ್ತು. ನಿಮಗೆ ಕಳಿಸಲೆಂದೇ ನೆನಪಲ್ಲಿ ಇಟ್ಟುಕೊಂಡಿದ್ದೆ ನೋಡಿ’ ಎಂದು ಹೇಳುತ್ತಿದ್ದರು. ಅವರು ಮಾತಾಡುತ್ತಿದ್ದಂತೆಯೇ ನಾನು ಬರೆದುಕೊಂಡು ಅಚ್ಚಿಗೆ ಕಳಿಸುತ್ತಿದ್ದೆ.
ಉದಾ: ‘ಹತ್ತಿಯ ಹೊಲ ಕಾಯುವ ಬೆರ್ಚಪ್ಪನಿಗೆ ಹರಕು ಬಟ್ಟೆ’

ಅವರ ಕೆಲವು ಸಾರ್ವಕಾಲಿಕ ಶ್ರೇಷ್ಠ ಎನಿಸಿದ ಹನಿಗವನಗಳು ನನ್ನ ಪೆನ್‌/ ಪೆನ್ಸಿಲ್‌ ಮೂಲಕವೇ ಮೂಡಿ ಅಚ್ಚಿಗೆ ಹೋದುವೆಂದು ನಾನು ಕಾಲರ್‌ ಎತ್ತಿ ಹೇಳಬಹುದು. ಉದಾ:

ಕುಂಬಾರರು ಮಾಡಿದ ಹಣತೆಗೆ
ಗಾಣಿಗರ ಎಣ್ಣೆಯ ತುಂಬಿ
ಒಕ್ಕಲಿಗರು ಬೆಳೆದ ಹತ್ತಿಯ ಹೊಸೆದು
ಬತ್ತಿಯ ಮಾಡಿ ದೀಪವ ಹಚ್ಚಿದರೆ
ಹಲವು ಜಾತಿಗಳ ಕೂಡಿ
ಕುಲಗೆಟ್ಟ ಬೆಳಕು ನೋಡಾ! (ಸುಧಾ ೫/೩/೯೫)

ತಮಾಷೆ ಎಂದರೆ ನಾನು ಸುಧಾದಿಂದ ನಿವೃತ್ತಿಯಾದ (೨೦೦೬) ನಂತರವೂ ಅವರು ತಮ್ಮ ಹೊಸ ಹನಿಗವನವನ್ನು ನನಗೆ ಮೊದಲು ಹೇಳಿ, ಆಮೇಲೆ ಸುಧಾಕ್ಕೆ ಕಳಿಸುತ್ತಿದ್ದರು. ಕವಿ ಎಂದ ಮೇಲೆ ಸಹಜವಾಗಿ ಅವರಿಗೆ ಹಸಿರು, ನೀರು, ಜೀವಲೋಕದ ಕಲರವಗಳ ಬಗ್ಗೆ ಅಪಾರ ಪ್ರೀತಿಯಿತ್ತು. ಇತರರಿಗಿಂತ ಜಾಸ್ತಿಯೇ ಇದ್ದಂತಿತ್ತು. ನನ್ನ ಲೇಖನಗಳನ್ನು ತನ್ಮಯತೆಯಿಂದ ಓದುತ್ತಿದ್ದರು. ಗೆಳೆಯರಿಂದ ಓದಿಸುತ್ತಿದ್ದರು.

ಬೆಂಗಳೂರಿನ ಜೆ.ಪಿ. ನಗರದ ಅಂಚಿನಲ್ಲಿರುವ ಜರಗನಹಳ್ಳಿ ಎಂಬ ತಮ್ಮ ಪೂರ್ವಜರಿದ್ದ ಮನೆಯನ್ನೇ ವಿಸ್ತರಿಸಿ ಅಲ್ಲೊಂದು ‘ಅನುಭವ ಮಂಟಪ’ವನ್ನು ಕಟ್ಟಿಕೊಂಡಿದ್ದರು. ಅಲ್ಲಿ ಆಗಾಗ ವಿವಿಧ ವಿಷಯಗಳ ತಜ್ಞರನ್ನು ಕರೆಸಿ ಚಿಂತನಗೋಷ್ಠಿಯನ್ನು ಏರ್ಪಡಿಸುತ್ತಿದ್ದರು. ಅರಣ್ಯತಜ್ಞ ಯೆಲ್ಲಪ್ಪ ರೆಡ್ಡಿ, ಸಿನೆಮಾ ಖ್ಯಾತಿಯ ನಾಗತಿಹಳ್ಳಿ ಮತ್ತು ನಾನು ಆಗಾಗ ಹೋಗಿ ಅಲ್ಲಿ ಉಪನ್ಯಾಸ ಕೊಡಬೇಕಿತ್ತು. ನಂತರ ಅವರ ಮನೆಯವರು ಪ್ರೀತಿಯಿಂದ ಉಣಿಸುತ್ತಿದ್ದ ರಾಗಿಮುದ್ದೆಯ ಭೂರಿಭೋಜನವನ್ನು ಸವಿಯಲೇಬೇಕಿತ್ತು

ನಾವು ತಿಪ್ಪಗೊಂಡನಹಳ್ಳಿ ಜಲಾಶಯದ ಸುತ್ತ ‘ಸ್ಫೂರ್ತಿವನ’ವನ್ನು ಸೃಷ್ಟಿಸುತ್ತಿರುವುದನ್ನು ಕೇಳಿ, ಅದರ ಬಗ್ಗೆ ಅವರ ಮಂಟಪದಲ್ಲಿ ನಾನೊಂದು ಉಪನ್ಯಾಸ ಕೊಡಬೇಕೆಂದು ಒತ್ತಾಯಿಸಿದರು. ಅವರ ಮಗಳು ಶುಭದಾಳ ಕ್ಲಾಸ್‌ಮೇಟ್ಸ್‌ಗಳನ್ನೆಲ್ಲ ಕರೆಸಿ ಕೂರಿಸಿದ್ದೂ ಅಲ್ಲದೆ, ಅವರಿಂದ ಚಂದಾ ಸಂಗ್ರಹಿಸಿ ಸ್ಫೂರ್ತಿವನದ ಸಂಘಟಕರಿಗೆ ಕೊಡಿಸಿದರು.

ಒಮ್ಮೆ ಅವರು ಮುಂಬೈಗೆ ಹೋಗಿದ್ದಾಗ ಅಲ್ಲಿನ ತಾಜ್‌ ಹೊಟೆಲ್‌ ಮುಂದೆ ವಿಹಾರಕ್ಕೆ ಹೋಗಿದ್ದರಂತೆ. ಅಲ್ಲಿಂದ ಬಂದಮೇಲೆ ನನಗೆ ಫೋನ್‌ ಮಾಡಿ ಅದೂ ಇದೂ ಮಾತಾಡುತ್ತ, ಶರತ್ತಿನಂತೆ ಒಂದು ಹನಿಗವನ್ನು ಹೇಳಿದರು. ನಾನೂ ಶರತ್ತಿನಂತೆ ಅವರ ಫೋನ್‌ ಬರುತ್ತಲೇ ಕೈಗೆ ಸಿಕ್ಕ ಪೆನ್ನು ಹಾಳೆ ಎತ್ತಿಕೊಳ್ಳುತ್ತೇನೆ. ಅವರು ಹೇಳಿದರು: ‘ಗುಣ’ -ಇದು ಶೀರ್ಷಿಕೆ ಬರ್ಕೊಳ್ಳಿ ಅಂತ.

ಎಲ್ಲ ಸಾಗರಗಳ ಉಪ್ಪಿಗೆ ಒಂದೇ ರುಚಿ, ಒಂದೇ ಗುಣ
ಸಾಗರದ ಪ್ರತಿಯೊಂದು ತೀರದಲ್ಲೂ
ಒಂದೊಂದು ದೇಶ, ತೀರದ ದ್ವೇಷ.

ತುಂಬ ಚೆನ್ನಾಗಿದೆ ‘ಕಳಿಸ್ರೀ ಸುಧಾಕ್ಕೆ’ ಎಂದೆ. ಅದು ಪ್ರಕಟವಾಗಿ (೯ ಅಕ್ಟೊಬರ್‌ ೨೦೦೮) ಒಂದೂವರೆ ತಿಂಗಳಲ್ಲಿ ತಾಜ್‌ ಹೊಟೆಲ್‌ ಮೇಲೆ ಭಯೋತ್ಪಾದಕರ ಅತ್ಯಂತ ಭೀಕರ ದಾಳಿ ನಡೆಯಿತು. ಅಜ್ಮಲ್‌ ಕಸಬ್‌ ಸೆರೆ ಸಿಕ್ಕ ಮೇಲೆ ಕವಿವರ್ಯರಿಗೆ ಫೋನ್ ಮಾಡುವ ಸರದಿ ನನ್ನದಾಯಿತು. ಮತ್ತೊಮ್ಮೆ ಅವರ ಅನುಭವ ಮಂಟಪಕ್ಕೆ -ನನ್ನನ್ನು ಕರೆದಿದ್ದರೊ ಅಥವಾ ನಾನೇ ಹೋಗಿದ್ದೆನೊ ನೆನಪಿಲ್ಲ. ಅವರು ಈ ಬಾರಿ ನನ್ನನ್ನು ಸಮೀಪದ ಪಾರ್ಕ್‌ ಒಂದಕ್ಕೆ ಕರೆದೊಯ್ದರು.

‘ಇದೇ ನೆಲದಲ್ಲಿ, ಹೆಗಡೆಯವರೆ, ಇದು ಭತ್ತದ ಗದ್ದೆಯಾಗಿತ್ತು… ನಾನು ಚಿಕ್ಕವನಿದ್ದಾಗಿ ಇಲ್ಲಿ ನಾಟಿ ಮಾಡಿದ್ದು ನೆನಪಿದೆ’ ಎಂದು ಹೇಳುತ್ತ ಆ ದಟ್ಟ ಕಾಂಕ್ರೀಟ್‌ ಕಟ್ಟಡಗಳ ಸಂದುಗೊಂದುಗಳ ಮೂಲಕ ನನ್ನನ್ನು ಕರೆದೊಯ್ದರು. ಅವರು ಅದೇನೋ ವರ್ಷಗಟ್ಟಲೆ ಮಹಾನಗರ ಪಾಲಿಕೆಯ ಜೊತೆ ಗುದ್ದಾಡಿ ಅಲ್ಲೊಂದು ಉದ್ಯಾನವನವನ್ನು ಸೃಷ್ಟಿಸಿದ್ದರು. ನನ್ನನ್ನು ಅದರ ತುಂಬ ಸುತ್ತಾಡಿಸಿ, ತಾವು ಅದೇತಾನೆ ನೆಡಿಸಿದ ಗಿಡಗಳನ್ನು ತೋರಿಸಿ ಒಂದೊಂದರ ವಿಶೇಷವನ್ನು ಬಣ್ಣಿಸಿದ್ದರು.

ಈಗ ಸುಮಾರು ಒಂದೂವರೆ ತಿಂಗಳ ಹಿಂದೆ ಕರೆ ಮಾಡಿ, ‘ನನ್ನ ಅಳಿಯ (ಶುಭದಾಳ ಗಂಡ) ಮತ್ತು ಅವರ ಫ್ರೆಂಡ್ಸ್‌ ಎಲ್ಲ ಒಂದು ಉಗ್ರ ಚಳವಳಿ ಮಾಡಲು ಹೊರಟಿದ್ದಾರೆ. ನಿಮ್ಮ ಸಲಹೆ ಬೇಕಂತೆ, ಫೋನ್‌ ಮಾಡ್ತಾರೆ ನೋಡಿ’ ಎಂದರು. ಅದು, ಅಲ್ಲೇ ಸಮೀಪದ ತುರಹಳ್ಳಿ ಫಾರೆಸ್ಟ್‌ ಮಧ್ಯೆ ಅರಣ್ಯ ಇಲಾಖೆಯವರು ‘ಟ್ರೀ ಪಾರ್ಕ್‌’ ಮಾಡುವುದರ ವಿರುದ್ಧ ಈ ಯುವಕರು ಕೈಗೆತ್ತಿಕೊಂಡ ಚಳವಳಿ. ಅಲ್ಲಿ ಸಹಜವಾಗಿ ಬೆಳೆದಿದ್ದ ಗಿಡಮರಗಳನ್ನು ಕಡಿದು ಹಾಕಿ, ಹೊಸದಾಗಿ ಶಿಸ್ತಾಗಿ ಮರಗಳನ್ನು ಬೆಳೆಸುವ ಯೋಜನೆಯನ್ನು ಇಲಾಖೆಯವರು ಕೈಗೆತ್ತಿಕೊಂಡಿದ್ದರು. ಕೆಲವು ಮರಗಳನ್ನು ಆಗಲೇ ಬೀಳಿಸಿದ್ದರು.

ನಾನು ವಯಸ್ಸಾದ ಅನುಭವಿಯ ಥರಾ ಅವರಿಗೆ ಉಪದೇಶ ಮಾಡಿದೆ. ‘ಹುಷಾರಾಗಿ ಹೋರಾಟಕ್ಕೆ ಧುಮುಕಿ: ಅರಣ್ಯ ಇಲಾಖೆಯ ದೃಷ್ಟಿಕೋನ ಏನಿದೆ ಎಂಬುದನ್ನು ಕೂಲಂಕಷ ಅರ್ಥ ಮಾಡಿಕೊಂಡು ಆಮೇಲೆ ಪ್ರತಿಭಟನೆಗೆ ಇಳಿಯಿರಿ. ಅವರ ಸ್ಟ್ರೆಂಗ್ತ್‌ ನಮಗೆ ಗೊತ್ತಿರಬೇಕು’ ಎಂದೇನೊ ಹೇಳಿದೆ. ಆದರೆ ಅವರೆಲ್ಲ ಬಿಸಿರಕ್ತದ ಯುವಕರು. ಸೋಷಿಯಲ್‌ ಮೀಡಿಯಾದಲ್ಲಿ ಡೋಲು ತಮಟೆ ಬಾರಿಸಿ, ಮಾಧ್ಯಮದವರನ್ನು ಕರೆಸಿ, ಅರಣ್ಯದ ಧ್ವಂಸದೃಶ್ಯಗಳನ್ನು ರೆಕಾರ್ಡ್‌ ಮಾಡಿಸಿ, ಗದ್ದಲ ಎಬ್ಬಿಸಿ, ನಾಲ್ಕೇ ದಿನಗಳ ಉಗ್ರ ಹೋರಾಟದಲ್ಲಿ ಆ ‘ಟ್ರೀ ಪಾರ್ಕ್‌’ ಯೋಜನೆಯನ್ನು ನಿಲ್ಲಿಸಿಯೇ ಬಿಟ್ಟರು.

ನಾನು ಶಿವಶಂಕರ್‌ ಅವರಿಗೆ ಫೋನ್‌ ಮಾಡಿ, ಅವರ ಯುವಪಡೆಗೆ ಅಭಿನಂದನೆ ಹೇಳಿದೆ. ಅವರದೇ ಒಂದು ಹಳೆಯ ಹನಿಗವನವನ್ನು (ಜಪಾನೀ ಹೈಕೊಂದರ ಕನ್ನಡ ರೂಪ) ಅವರಿಗೆ ನೆನಪಿಸಿದೆ:

ಹತ್ತಾರು ವರ್ಷ ಆಳಿದ ಅರಸ
ಹೆಣವಾಗಿ ಉಳಿಯಲಿಲ್ಲ ಮೂರು ದಿವಸ
ನೂರಾರು ವರ್ಷ ಬೆಳೆದು ಮೆರೆದ ಮರ
ತೊಲೆಯಾಗಿ ಉಳಿಯಿತು ನೂರು ವರುಷ.

* ನಾನಿರುವವರೆಗೂ ಜರಗನಹಳ್ಳಿಯ ಈ ವೃಕ್ಷ ನನ್ನೊಂದಿಗೆ ಇರುತ್ತದೆ, ಗಟ್ಟಿಮುಟ್ಟಾಗಿ.

‍ಲೇಖಕರು Avadhi

May 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: