ಡಾ ಕೆ ಎಸ್ ಚೈತ್ರಾ ಅಂಕಣ – ಪ್ರೇಮ ಸೌಧ ತಾಜ್‌ ಮ ‘ಹಲ್ಲು’

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

27

ಸಂಜೆ ಕ್ಲಿನಿಕ್ ಮುಗಿಯುವ ಹೊತ್ತು, ಇಬ್ಬರು ಹುಡುಗಿಯರು ಕಾಯುತ್ತಿದ್ದರು.ಸಹಾಯಕಿ ಪಾರ್ವತಿ ವಿಚಾರಿಸಿ “ಪೇಶೆಂಟ್ಸ್ ಅಲ್ಲ; ಹಲ್ಲು ಕೇಳಲು ಬಂದಿದ್ದಾರೆ,” ಎಂದು ವರದಿ ಒಪ್ಪಿಸಿದಳು. ದುಡ್ಡು, ಬಟ್ಟೆ, ಧಾನ್ಯ ಇದೆಲ್ಲಾ ಸರಿ ಆದರೆ ಹಲ್ಲು ಎಂದು ಆಶ್ಚರ್ಯವಾಗುವುದು ಸಹಜ. ಹಲ್ಲು ಕೇಳಲು ಬಂದವರು ದಂತವೈದ್ಯಕೀಯ ಓದುತ್ತಿರುವ ವಿದ್ಯಾರ್ಥಿಗಳು. ರೋಗಿಗಳ ಬಾಯಲ್ಲಿ ಚಿಕಿತ್ಸೆ ಮಾಡುವ ಮುನ್ನ ಕೃತಕ ಹಲ್ಲುಗಳಲ್ಲಿ ಕೆಲಸ ಮಾಡಿ ಪರಿಣತಿ ಗಳಿಸಬೇಕು. ಹಾಗೆಯೇ ಕಿತ್ತುಹಾಕಿದ ನೈಜ ಹಲ್ಲುಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಿ ಇಟ್ಟು ಅದರ ಮೇಲೆ ಕೆಲಸ ಮಾಡುವುದೂ ತರಬೇತಿಯ ಭಾಗ. ಈ ರೀತಿ ನೈಜ ಹಲ್ಲುಗಳ ಮೇಲೆ ಕೆಲಸ ಮಾಡಿದಾಗ ಹಲ್ಲಿನ ಒಳಭಾಗಗಳ ಬಗ್ಗೆ ಸ್ಪಷ್ಟ ಅರಿವು ಸಿಗುತ್ತದೆ. ಇದೇ ಕಾರಣದಿಂದ ಆಗಾಗ್ಗೆ ಕ್ಲಿನಿಕ್‌ಗೆ ವಿದ್ಯಾರ್ಥಿಗಳು ಹಲ್ಲು ಸಂಗ್ರಹಣೆಗೆ ಬರುತ್ತಾರೆ! ಆದರೆ ಈಗೀಗ ಹಲ್ಲುಗಳ ಕೀಳುವಿಕೆ ತೀರಾ ಕಡಿಮೆ. ಹಲ್ಲು ನೋವು ಎಂದೊಡನೆ ಹಲ್ಲು ಕೀಳಿಸು ಎನ್ನುವುದರಿಂದ ಆದಷ್ಟೂ ಹಲ್ಲನ್ನು ಉಳಿಸು ಎಂಬ ಹಂತಕ್ಕೆ ದಂತವೈದ್ಯಕೀಯ ಬಂದು ಎರಡು ದಶಕಕ್ಕೂ ಮಿಗಿಲಾಯಿತು. ಈಗ ಅನಿವಾರ್ಯವೆನಿಸಿದಲ್ಲಿ ಮಾತ್ರ ಹಲ್ಲು ಕೀಳಲಾಗುವುದರಿಂದ ಸಂಗ್ರಹಿಸಿಟ್ಟ ಕೆಲವು ಹಲ್ಲು ಅವರಿಗೆ ನೀಡಿ ಕಳಿಸಿದೆ. ಅವರ ಹಾಗೇ ನಾವು ಹಲ್ಲು ಸಂಗ್ರಹಣೆಗಾಗಿ ಸುತ್ತುತ್ತಿದ್ದ ದಿನಗಳು ನೆನಪಾದವು!

  ಹಲ್ಲು ಸಂಗ್ರಹಣಾ ಅಭಿಯಾನ

ಮೂರನೇ ವರ್ಷದಲ್ಲಿ ಓದುತ್ತಿದ್ದೆವು. ಆಗಷ್ಟೇ ಕ್ಲಿನಿಕ್ಸ್ ಆರಂಭವಾಗಿತ್ತು. ನಮಗೆ ಪ್ರತಿ ರೋಗಿ ಮೇಲೆ ಕೆಲಸ ಮಾಡುವಾಗಲೂ ಒಂಥರಾ ಹೆದರಿಕೆ. ಪ್ರೊಫೆಸರ್ ಮತ್ತು ಸೀನಿಯರ್ಸ್ ನೀಡಿದ ಸಲಹೆ ಹೀಗಿತ್ತು; ಕೃತಕ ಹಲ್ಲಿನಲ್ಲಿ ಎಷ್ಟೇ ಕೆಲಸ ಮಾಡಿದ್ದರೂ ನೈಜ ಹಲ್ಲುಗಳಲ್ಲಿ ವ್ಯತ್ಯಾಸ ಇರುತ್ತದೆ. ಹಾಗಾಗಿ ಕಿತ್ತ ಹಲ್ಲು ಕಲೆಕ್ಟ್ ಮಾಡಿ ಅದರ ಮೇಲೆ ಕೆಲಸ ಮಾಡಿದಷ್ಟೂ ಒಳ್ಳೆಯದು. ಸರಿ, ಶುರುವಾಯ್ತು ಹಲ್ಲುಗಳ ಬೃಹತ್ ಸಂಗ್ರಹಣಾ ಅಭಿಯಾನ. ಕಾಲೇಜಿನಲ್ಲಂತೂ ಹಲ್ಲು ಕೀಳುವ ವಿಭಾಗದ ಮೇಲೆ ನಮ್ಮ ಹದ್ದಿನ ಕಣ್ಣು. ಆ ವಿಭಾಗಕ್ಕೆ ಒಳಹೊಕ್ಕವರನ್ನು ಕಣ್ಣೋಟದಲ್ಲಿಯೇ ವಯಸ್ಸು, ಬಾಯಿಯ ಆರೋಗ್ಯ, ಹಲ್ಲಿನ ಸ್ಥಿತಿಯ ಬಗ್ಗೆ ಅಂದಾಜು ಹಾಕುತ್ತಿದ್ದೆವು. ವಯಸ್ಸಾದಷ್ಟೂ ನಮ್ಮ ಗೌರವ ಹೆಚ್ಚು (ಹಲ್ಲು ಕೀಳಿಸುವ ಸಾಧ್ಯತೆ ಹೆಚ್ಚು ಎಂದು). ಯಾರಾದರೂ ಹಲ್ಲು ಕೀಳಿಸಿದ ಕೂಡಲೇ ನಮ್ಮ ರಬ್ಬರ್ ಬೌಲ್ ಹಿಡಿದು ಮಹಾಪ್ರಸಾದ ಸ್ವೀಕರಿಸುವವರಂತೆ ತಯಾರಿರುತ್ತಿದ್ದೆವು. ಪ್ರತಿ ಛೇರಿನ ಬಳಿ ಈ ರೀತಿ ಬೌಲ್ ಹಿಡಿದ ಜ್ಯುನಿಯರ್ಸ್ ಕಂಡು ಯಾರೋ ಪೇಶೆಂಟ್ ಕಡೆಯವರು ‘ಅದೆಂತದಾ ಭಿಕ್ಷಾ ಪಾತ್ರೆ ಹಿಡಿದು ಎಲ್ಲರೂ ಹಾಗೆ ಕಾಯುತ್ತಾ ನಿಲ್ಲುವುದು?’ ಎಂದು ಕೇಳಿದ್ದರು. ಕೊಳೆ ಏಪ್ರನ್, ಕೆದರಿದ ಕೂದಲು, ಬಾಡಿದ ಮುಖ, ನಿರೀಕ್ಷೆಯ ಕಣ್ಣುಗಳು, ಕೈಯ್ಯಲ್ಲಿ ಈ ಬೌಲ್ ಹಿಡಿದು ಕಾಯುತ್ತಿದ್ದ ನಾವು ಭಿಕ್ಷುಕರಂತೆ ಅವರಿಗೆ ಕಂಡಿದ್ದರೂ ಆಶ್ಚರ್ಯವೇನಿಲ್ಲ!

ಮತ್ತೆ ಕೆಲವು ನಮ್ಮಂಥ ಜಾಣರು ಉಡುಪಿಯ ಖಾಸಗಿ ಕ್ಲಿನಿಕ್‌ಗಳಿಗೆ ಹೋಗಿ ಹಲ್ಲು ಸಂಗ್ರಹಿಸುವ ತೀರ್ಮಾನಕ್ಕೆ ಬಂದೆವು. ಸರಿ, ಸಂಜೆಯಾದೊಡನೆ ಮಣಿಪಾಲದಿಂದ ಬಸ್ಸೇರಿ ಉಡುಪಿಗೆ ಪಯಣ. ಅಲ್ಲಿ ಬಸ್ ಸ್ಟಾಂಡಿನಿಂದ ನಡೆಯುತ್ತಾ ಉದ್ದಕ್ಕೆ ಬೋರ್ಡ್ ನೋಡುತ್ತಾ ಡೆಂಟಲ್ ಕ್ಲಿನಿಕ್ ಎಂದು ಕಂಡೊಡನೆ ಓಡುವುದೇ ಕೆಲಸ. ಒಳನುಗ್ಗಿ ಅಲ್ಲಿದ್ದ ಡಾಕ್ಟರಿಂದ ಹಲ್ಲುಗಳ ಬೇಡಿಕೆ. ಅವರೂ ಕನಿಕರದಿಂದ “ಆಗಲಿ, ಈವರೆಗೆ ಎಲ್ಲಾ ಬಿಸಾಡಿದ್ದಾಯ್ತು ಮುಂದೆ ತೆಗೆದಿಡುತ್ತೇನೆ, ಮತ್ತೆ ಬನ್ನಿ,” ಎಂದು ಕಳಿಸುತ್ತಿದ್ದರು. ಹೀಗೆ ಒಂದಷ್ಟು ಕ್ಲಿನಿಕ್ ಸುತ್ತಿ ಮರಳಿ ಹಾಸ್ಟೆಲ್ಲಿಗೆ ಬಂದರೂ ಮುಂದಿನ ವಾರ ಸಿಗಬಹುದಾದ ಹಲ್ಲಿನ ಲೆಕ್ಕ ಮನಸ್ಸಿನಲ್ಲಿ. ಮರುವಾರ ಹೋದರೆ ಕ್ಲಿನಿಕ್ ಮುಚ್ಚಿದೆ, ಹಲ್ಲು ತೆಗೆದಿಡಲು ಮರೆತುಹೋಯಿತು, ಹೆಚ್ಚಿಗೆ ಅಂಥ ಕೇಸ್ ಬರಲಿಲ್ಲ ಹೀಗೆ ಹಲ್ಲು ಸಿಗದಿರಲು ಏನೇನೋ ಕಾರಣಗಳು. ನಮಗಾಗುತ್ತಿದ್ದ ನಿರಾಶೆ ಅಷ್ಟಿಟ್ಟಲ್ಲ. ಛಲ ಬಿಡದ ತ್ರಿವಿಕ್ರಮನಂತೆ  ಸತತ ಪ್ರಯತ್ನದ ನಂತರ ಹೇಗೋ ಒಂದು ಡಬ್ಬ ಪೂರ್ತಿ ಹಲ್ಲು ಸಂಗ್ರಹಿಸಿ ಬರುವಾಗ ಆಗುತ್ತಿದ್ದ ಸಂತೋಷ, ಚಿನ್ನ ಕೊಟ್ಟರೂ ಸಿಗುವಂಥದ್ದಲ್ಲ! ಹಲ್ಲುಗಳನ್ನೆಲ್ಲಾ ಚೆನ್ನಾಗಿ ತೊಳೆದು ಶುಭ್ರಗೊಳಿಸಿ ಪಿಓಪಿಯಲ್ಲಿ ಕೂರಿಸಿ ಕೆಲಸ ಮಾಡಿ ಕಲಿತಿದ್ದರ ಫಲ ಈಗಲೂ ಸಿಗುತ್ತಿದೆ. ಇದು ಹಲ್ಲು ಸಂಗ್ರಹಣಾ ಕಥೆಯಾದರೆ ಹುಳುಕು ಹಲ್ಲುಗಳ ಬೇಟೆ ದೊಡ್ಡ ಕಾದಂಬರಿ!

  ಹುಳುಕು ಹಲ್ಲಿನ ಬೇಟೆ

ಮೂರನೇ ವರ್ಷಕ್ಕೆ ಬಂದ ಮೇಲೆ ರೋಗಿಗಳ ಬಾಯಲ್ಲಿ ಕೆಲಸ ಮಾಡುವುದು ಆರಂಭಿಸಿದ್ದೇನೋ ಸರಿ; ಆದರೆ ಅಂತಿಮ ಪರೀಕ್ಷೆಗೆ ರೋಗಿಗಳ ಮೇಲೆ ಕೆಲಸ ಮಾಡಿ ಪರೀಕ್ಷಕರಿಗೆ ತೋರಿಸಿ ಮಾರ್ಕ್ಸ್ ಪಡೆಯಬೇಕಿತ್ತು. ಅದರಲ್ಲಿಯೂ ನಿರ್ದಿಷ್ಟ ಮಾದರಿಯ ಹುಳುಕಿರುವ ಹಲ್ಲನ್ನು ಸ್ವಚ್ಛಗೊಳಿಸಿ ಅದಕ್ಕೆ ಬೆಳ್ಳಿಯನ್ನು ತುಂಬಿ ತೋರಿಸುವುದು ನಮ್ಮ ಪ್ರಾಕ್ಟಿಕಲ್ ಪರೀಕ್ಷೆ. ಪ್ರತಿ ಹಂತದಲ್ಲೂ ಪರೀಕ್ಷಕರು ಬಂದು ಕೂಲಂಕಷವಾಗಿ ನೋಡುತ್ತಿದ್ದರು. ಪರೀಕ್ಷಕರು ಹೊರಗಿನಿಂದ ಬರುತ್ತಿದ್ದುದ್ದರಿಂದ ಏನಾಗುವುದೋ ಎಂಬ ಟೆನ್ಶನ್ ಜತೆ ಈ ರೀತಿ ‘ಐಡಿಯಲ್ ಕೇಸ್’ ಹುಡುಕುವ ತಲೆನೋವು. ಸಿಕ್ಕಸಿಕ್ಕವರನ್ನೆಲ್ಲಾ ಕರೆದು ಕೂರಿಸಿ ಬಾಯಿ ತೆರೆಸಿ ಆ ರೀತಿ ಕ್ಲಾಸ್ ಟು ಹುಳುಕು ಹಲ್ಲು ಇದೆಯೇ ಎಂದು ಪರಿಶೀಲಿಸುವುದು; ಅಕಸ್ಮಾತ್ ಇದ್ದಲ್ಲಿ ಅವರಿಗೆ ನಮ್ಮ ಎಕ್ಸಾಂ ದಿನ ಬರಲು ಹೇಳುವುದು. ಕೇಳಲೇನೋ ಸುಲಭ. ಆದರೆ ಇದರಷ್ಟು ಕಷ್ಟದ ಕೆಲಸ ಇನ್ನೊಂದಿರಲಿಲ್ಲ. ಕಾರಣ ಇಷ್ಟೆ..ನಮ್ಮ ಹಿಂದಿನ ಬ್ಯಾಚ್‌ನವರು ಈ ರೀತಿ ಮಾಡಿ ಮಾಡಿ ಮಣಿಪಾಲದ ಸುತ್ತಮುತ್ತಲ ಜನರೆಲ್ಲಾ ಸುಸ್ತಾಗಿಬಿಟ್ಟಿದ್ದರು. ಕೆಲವರಂತೂ “ನಮಗೆಲ್ಲಾ ಗೊತ್ತುಂಟು.. ಮೊದಾಲಿಗೆ  ನಾವು ಪಾಪ ಅಂತ ಹೋಗಿದ್ದೇ ತಪ್ಪಾಯ್ತು. ಈಗ ಅಲ್ಲಿ ತುಂಬಲಿಕ್ಕೆ ಏನುಂಟು ಸುಮ್ನೇ ಹಲ್ಲು ಕೊರೆದು ಮಣ್ಣು ತುಂಬಿದ್ದಾರಾ ಅಂತ! ಬರೀ ಚೊರೆ ಇವರದ್ದು.. ಈಗ ಎಂತ ಬೇಡ ಆಯ್ತಾ,” ಎಂದು ನಮಗೆ ರಾಗವಾಗಿಯೇ ಜೋರು ಮಾಡುತ್ತಿದ್ದರು. ಹೇಗಾದರೂ ಪೇಶೆಂಟ್ ಸಿಗಲಿ ಎಂದು ವಿದ್ಯಾರ್ಥಿಗಳು ತಿಂಡಿ-ಊಟ- ದುಡ್ಡು ಕೂಡ ಕೊಡುತ್ತಿದ್ದರು. ಒಟ್ಟಿನಲ್ಲಿ ಕೆಲಸ ಮಾಡುವುದಕ್ಕಿಂತ ಈ ಐಡಿಯಲ್ ಕೇಸ್ ಹುಡುಕುವುದೇ ಟೆನ್ಶನ್!

ಇಷ್ಟೆಲ್ಲಾ ಕಷ್ಟ ಇದ್ದರೂ ಹೇಗಾದರೂ ಮಾಡಿ ಸೂಕ್ತ ಕೇಸ್ ಹುಡುಕುವುದು ನಮಗೆ ಪರೀಕ್ಷೆಯ ದೃಷ್ಟಿಯಿಂದ ಬಹಳ ಮುಖ್ಯವಾಗಿತ್ತು (ಇಲ್ಲದಿದ್ದರೆ ನಮಗೆ ಅಲ್ಲೇ ಕೊಡುವ ಯಾವುದೇ ಕೇಸ್ ಮಾಡಬೇಕಾಗುತ್ತಿತ್ತು!) ಹಾಗಾಗಿ ಪರ್ಯಾಯ ಹಾದಿ ಹುಡುಕಿದ್ದೆವು. ಮಣಿಪಾಲದ ಹತ್ತಿರ ಹಳ್ಳಿಯಲ್ಲಿ ಯಾವುದೋ ದೊಡ್ಡ ಫ್ಯಾಕ್ಟರಿ ಇತ್ತು. ಅಲ್ಲಿಗೆ ಸಾಕಷ್ಟು ಜನ ದೂರದಿಂದ ಕೆಲಸಕ್ಕೆ ಬರುತ್ತಿದ್ದರು. ವಿದ್ಯಾರ್ಥಿಗಳಾದ ನಾವು ಸಂಜೆ ವೇಳೆ ಅವರಿಗಾಗಿ ಕಾಯುತ್ತಾ ನಿಲ್ಲುತ್ತಿದ್ದೆವು. ಕೇಳುವವರ ಕಣ್ಣಲ್ಲಿ ನೀರು ಬರುವ ಹಾಗೆ ನಾವು ಪಡುತ್ತಿರುವ ಕಷ್ಟ, ಒಂದೊಮ್ಮೆ ಅವರು ಬಂದರೆ ಅವರಿಂದ ನಮಗೆ ಮಾತ್ರವಲ್ಲ ಇಡೀ ಮಾನವಕುಲಕ್ಕೆ ಆಗುವ ಲಾಭ, ಪರೋಪಕಾರದ ಮಹತ್ವ.. ಹೀಗೆ ಬಗೆಬಗೆಯಾಗಿ ವಿವರಿಸುತ್ತಿದ್ದೆವು. ಅವರಿಗೆ ತಿಂಡಿ-ಊಟ-ಬಸ್ ಛಾರ್ಜ್ ಎಲ್ಲವನ್ನೂ ಕೊಡುವ ಭರವಸೆಯಂತೂ ಇತ್ತು. ಆದರೆ ಒಪ್ಪಿಕೊಂಡ ಎಲ್ಲರಲ್ಲೂ ಹುಳುಕು ಹಲ್ಲು ಇರುತ್ತಿರಲಿಲ್ಲ. ಇದ್ದವರು ಬರಲು ಒಪ್ಪುತ್ತಿರಲಿಲ್ಲ. ಕಿರಿದಾದ ಆ ರಸ್ತೆಗಳಲ್ಲಿ ನಮ್ಮ ಕನಸಿನ ಹುಳುಕು ಹಲ್ಲಿಗಾಗಿ ‘ಎಲ್ಲಿರುವೆʼ ಎಂದು ಅಲೆದಿದ್ದು ಹಲವು ಬಾರಿ. ನಮ್ಮಂಥವರ ಕಾಟ ತಡೆಯಲಾರದೇ ಕೆಲವರು ಬೇಗನೆ ಫ್ಯಾಕ್ಟರಿ ಕೆಲಸ ಮುಗಿಸಿ ಮನೆಗೆ ಹೊರಟರೆ ಮತ್ತೆ ಕೆಲವರು ಮೇನ್ ಗೇಟ್ ಬಿಟ್ಟು ಹಿಂದಿನ ಗೇಟ್ ಮೂಲಕ ತೆರಳುತ್ತಿದ್ದರು. ನಾವು ಅವರ ಹಿಂದೆ ಓಡುತ್ತಾ “ಹಲೋ, ಇಲ್ಕೇಳಿ,” ಎಂದು ಕರೆಯುವುದು ಅವರು ಭೂತದರ್ಶನವಾದಂತೆ ಬೆದರಿ ಬಸ್ಸು ಹತ್ತುವುದು ಇವು ಸಾಮಾನ್ಯ ದೃಶ್ಯವಾಗಿತ್ತು. ಅಂತೂ ದೇವರ ದಯೆ, ಹಿರಿಯರ ಆಶೀರ್ವಾದ, ಪೂರ್ವ ಜನ್ಮದ ಪುಣ್ಯ ಯಾವುದೋ ಒಂದು ಕೆಲಸ ಮಾಡಿ ನಮಗೆ ಬೇಕಾದ ಕೇಸ್ ಸಿಕ್ಕು, ಸಮಯಕ್ಕೆ ಸರಿಯಾಗಿ ಬಂದು, ನಾವು ಒಳ್ಳೆಯ ಅಂಕ ಪಡೆದವು.

 ಮ‘ಹಲ್ಲು’        

ಈಗೆರಡು ವರ್ಷಗಳ ಹಿಂದೆ ಸಿಕ್ಕ ನನ್ನ ವಿದ್ಯಾರ್ಥಿ ರವಿ ಇದೇ ವಿಷಯ ಕುರಿತು  ವಿವರಿಸಿದ. ”ಮ್ಯಾಮ್ ನಿಮಗೆ ಗೊತ್ತಲ್ಲ, ಎಷ್ಟು ಕಷ್ಟ ಈ ಐಡಿಯಲ್ ಕೇಸ್ ಸಿಗೋದು ಅಂತ! ನನ್ನದು ಆ ಕಷ್ಟ ಮುಗಿದು ಫೈನಲ್ ಇಯರ್‌ನಲ್ಲಿದ್ದೆ. ನನ್ನ ಬಸ್ಸಿನಲ್ಲಿ ಬರುತ್ತಿದ್ದ ಜ್ಯೂನಿಯರ್ ಶಶಿ, ಒಂದೇ ಏರಿಯಾದಿಂದ ಬರ್ತಿದ್ವಿ, ಹಾಗಾಗಿ ಆಗಾಗ ಮಾತಾಡುತ್ತಿದ್ವಿ. ಒಂದೆರಡು ದಿನ ತೀರಾ ಟೆನ್ಶನ್‌ನಲ್ಲಿ ಇದ್ಲು. ನಾನು ಸಹಜವಾಗಿ ಯಾಕೆ ಅಂತ ಕೇಳಿಬಿಟ್ಟೆ. ಅದು ನಾನು ಮಾಡಿದ ಮೊದಲ ತಪ್ಪು! ಕೂಡಲೇ ಕಣ್ಣಲ್ಲಿ ನೀರು ತುಂಬಿಕೊಂಡು “ನೆಕ್ಸ್ಟ್ ವೀಕ್ ಎಕ್ಸಾಂ ಇದೆ. ಕೇಸ್ ಸಿಕ್ತಾ ಇಲ್ಲ,” ಅಂದಳು. ʼಹೌದಾʼ ಅಂತ ಸುಮ್ಮನಿರಬೇಕಿತ್ತು.. ಮನಸ್ಸು ಚುರ್ ಎಂದು “ಅದಕ್ಕೇನು ಹುಡುಕೋಣ,” ಅಂತ ಹೀರೋ ಥರಾ ಪೋಸ್ ಕೊಟ್ಟೆ. ಆ ವಯಸ್ಸಲ್ಲಿ ಎಂಥ ತಪ್ಪು ಮಾಡಿದ್ರೂ ಗೊತ್ತಾಗಲ್ಲ. ಸರಿ, ಅವಳು ಅದೇ ಮಾತು ಗಟ್ಟಿ ಹಿಡಿದುಬಿಟ್ಲು. ಎಲ್ಲೆಲ್ಲಿ ತಿರುಗಿದರೂ ನಮಗೆ ಬೇಕಾದ ಕೇಸ್ ಸಿಗಲಿಲ್ಲ. ನನಗೂ ಬೇಜಾರಾಗಿತ್ತು, ತಲೆ ಓಡಿಸಿ ಅವಳಿಗೆ ಉಪಾಯ ಸೂಚಿಸಿದೆ. ಅವರ ಮನೆಯಲ್ಲಿದ್ದ ಅಜ್ಜನನ್ನು ಚೆಕ್ ಮಾಡಿ ಕರೆದುಕೊಂಡು ಬಾ ಎಂದೆ. ಈ ಹುಡುಗಿ ತಲೆ ಆಡಿಸಿ ಮನೆಗೆ ಹೋದಳು. ಅಜ್ಜ ಮೊದಲು ಒಪ್ಪದಿದ್ದರೂ ಇವಳು ಹೇಗೋ ಕನ್ವಿನ್ಸ್ ಮಾಡಿದ್ದಾಳೆ. ಇವಳು ಅವರಜ್ಜನಿಗೆ ಬಾಯಿ ತೆಗೆಸಿ ಚೆಕ್ ಮಾಡ್ತಾ ಇದ್ಳಂತೆ. ನನ್ನ ಗ್ರಹಚಾರಕ್ಕೆ ಅವರಜ್ಜನಿಗೆ ತಲೆ ಎತ್ತಿ ಕತ್ತು ಉಳುಕಿಬಿಟ್ಟಿದೆ. ಏನೋ ಆಯಿತು, ಹೆಚ್ಚುಕಡಿಮೆ ಆಗಿದ್ದರೆ ಪ್ರಾಣ ಹೋಗುತ್ತಿತ್ತು ಎಂದೆಲ್ಲಾ ರಂಪ ಮಾಡಿ ಹೆದರಿಸಿಬಿಟ್ಟರಂತೆ. ಮನೆಯವರೆಲ್ಲಾ ಇವಳಿಗೆ ಬೈದಿದ್ದಾರೆ. ಅಜ್ಜ-ಮೊಮ್ಮಗಳ ಗಲಾಟೆ ಬಂದಿದ್ದು ನನ್ನ ತಲೆಗೆ!

ಇವಳ ಮುಖ ಮರುದಿನ ಸುಟ್ಟ ಬದನೆಕಾಯಿ ತರಹ, ಮಾತಿಲ್ಲ-ಕತೆಯಿಲ್ಲ. ಹೇಗೋ ಮಾಡಿ ಮಾತನಾಡಿಸಿದರೆ 

ʼನಿಮ್ಮಿಂದ ಹೀಗಾಯ್ತು,” ಎಂಬ ಆರೋಪ. ಆ ಮುಖ ನೋಡಲಾಗದೇ, ಆರೋಪ ಸಹಿಸಲಾಗದೇ ಸಾಧ್ಯವಿದ್ದರೆ ನಾನೇ ಪೇಶೆಂಟ್ ಆಗುತ್ತಿದ್ದೆ ಎಂದುಬಿಟ್ಟೆ. ಅದು ಎರಡನೇ ತಪ್ಪು! ಈ ಶಶಿ ಹಿಂದಿನ ಜನ್ಮದಲ್ಲಿ ತಿಗಣೆ ಆಗಿದ್ದಳೋ ಏನೋ ಅದನ್ನೇ ಹಿಡಿದುಬಿಟ್ಟಳು. “ನೋಡೋಣ ಬನ್ನಿ,” ಎಂದು ನನ್ನನ್ನೇ ಕೂರಿಸಿ ಬಾಯಿ ಚೆಕ್ ಮಾಡಿಯೇಬಿಟ್ಟಳು. ಕರ್ಮ; ನನ್ನ ಬಾಯಲ್ಲಿ ಚಿಕ್ಕ ಹುಳುಕಿತ್ತು. ಅಲ್ಲಿಗೆ ಎಲ್ಲಾ ಹುಡುಕುವಿಕೆ ನಿಂತು ಕೇಸ್ ಫೈನಲ್ ಆಯಿತು. ಶಶಿ ನನ್ನ ಹಲ್ಲಿನ ಮೇಲೆ ಕೆಲಸ ಮಾಡಿ ಒಳ್ಳೆ ಮಾರ್ಕ್ಸ್ ಪಡೆದಳು. ಅಂದು ಮಾಡಿದ ಎರಡು ತಪ್ಪಿನ ಫಲವಾಗಿ ಮೂರು ವರ್ಷದ ನಂತರ ನಾನು ಅಕ್ಕ-ಪಕ್ಕದ ಹಲ್ಲೂ ರೂಟ್ ಕೆನಾಲ್ ಮಾಡಿಸಿ ಬ್ರಿಜ್ ಕಟ್ಟಿಸಿದೆ.” ಎಂದು ನಕ್ಕ! ಅಷ್ಟರಲ್ಲಿ ಬಂದಳು ಶಶಿ; ಅವನ ಹೆಂಡತಿ (ನನ್ನ ಶಿಷ್ಯೆಯೇ).

“ಬರೀ ಸುಳ್ಳು ಮ್ಯಾಮ್; ಕೇಸ್ ಹುಡುಕುವಾಗ ಕಷ್ಟ ಆಗಿದ್ದು, ಇವರಿಗೆ ಹೇಳಿದ್ದು, ಅಜ್ಜನಿಗೆ ಕತ್ತು ಉಳುಕಿದ್ದು ನಿಜ. ದೊಡ್ಡ ಕರ್ಣನಂತೆ ತಾನಾಗಿ ಬಂದು ಪೇಶೆಂಟ್ ಆಗಿ ಕುಳಿತು ಆಮೇಲೆ ಎಲ್ಲರೂ ಹಾರ್ಟ್ ಕೊಟ್ರೆ ನಾನು ಹಲ್ಲು ಮತ್ತು ಹಾರ್ಟ್ ಎರಡೂ ಕೊಟ್ಟಿದೀನಿ ಅಂತ ಸಾವಿರ ಸಲ ಹೇಳಿ ನನ್ನನ್ನು ಪಟಾಯಿಸಿ ಮದುವೆ ಆದ್ರು. ನಾನು ಆಗ ಚೆನ್ನಾಗಿಯೇ ಫಿಲ್ಲಿಂಗ್ ಮಾಡಿದ್ದೆ. ಇವರು ಚೆನ್ನಾಗಿ ಸ್ವೀಟ್ ತಿಂತಾರೆ, ರಾತ್ರಿ ಸರಿ ಬ್ರಶ್ ಮಾಡಲ್ಲ. ಬೇರೆಯವರಿಗೆ ಹೇಳೋದಷ್ಟೇ,, ತಾನು ಹಲ್ಲಿನ ಬಗ್ಗೆ ಕೇರ್ ಮಾಡಲ್ಲ.. ಇನ್ನೇನಾಗುತ್ತೆ? ಹಲ್ಲೆಲ್ಲಾ ಹುಳುಕಾಗಿ ಈಗ ನಾನೇ ರೂಟ್ ಕೆನಾಲ್ ಮಾಡಿ  ಬ್ರಿಜ್ ಹಾಕಿದೀನಿ,” ಎಂದು ದೂರಿದಳು. ಒಂಥರಾ ಹೊಸ ಪ್ರೇಮಿ- ಪೇಶೆಂಟ್ ಕಥೆ ಎನಿಸಿತು ನನಗೆ. ಉಕ್ಕಿ ಬರುತ್ತಿದ್ದ ನಗುವನ್ನು ತಡೆದು ಒಟ್ಟಿನಲ್ಲಿ ರವಿ – ಶಶಿಯರ ಪ್ರೇಮ ಸೌಧ ತಾಜ್ ಮ‘ಹಲ್ಲು’ ಎಂದೆ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: