ಚಿನುವಾ ಅಚಿಬೆ ಮಕ್ಕಳ ಕತೆ ಬರೆದದ್ದು…

ಹರೀಶ್ ಗಂಗಾಧರ

ಚಿನುವ ಅಚಿಬೆ ಯಾರಿಗೆ ಗೊತ್ತಿಲ್ಲ ಹೇಳಿ. ಈ ನೈಜಿರಿಯಾದ ಮಾಂತ್ರಿಕನ Things Fall Apart ಕಾದಂಬರಿಯನ್ನು ಸಾಕಷ್ಟು ಮಂದಿ ರೆಫರ್ ಮಾಡುತ್ತಲೇ ಇರುತ್ತಾರೆ. ನನಗೆ ಅಚಿಬೆ ಹಾರ್ಟ್ ಆಫ್ ಡಾರ್ಕ್ನೆಸ್ ಖ್ಯಾತಿಯ ಜೋಸೆಫ್ ಕಾನ್ರಾಡ್‌ರಂತಹ ದಿಗ್ಗಜರ ಮುಖವಾಡ ಕಳಚಿದಾತ. ಯಾವುದೇ ಅಳುಕಿಲ್ಲದೆ Conrad Was a Racist ಎಂದು ಘೋಷಿಸಿ ತನ್ನ “ಇಮೇಜ್ ಆಫ್ ಆಫ್ರಿಕಾ” ಎಂಬ ಪ್ರಬಂಧದಲ್ಲಿ ಅದನ್ನ ಬಹಳ ಸ್ಪಷ್ಟವಾಗಿ ಸಾಬೀತು ಪಡಿಸಿದಾತ. ಭಾಷೆ, ಕತೆಗಳೆಂಬ ಮೇಲ್ಮೈ ಮೀರಿ ಎಲ್ಲ ಬರಹಗಳಲ್ಲೂ ಅಡಗಿ ಕುಳಿತಿರುವ ರಾಜಕೀಯದ ಪರಿಚಯ ಮಾಡಿಸಿದವ ಅಚಿಬೆ. ಕಾದಂಬರಿಗಳಿಗಿಂತ ಅಚಿಬೆ ನನಗೆ ಇಷ್ಟ ಆಗೋದು ಅವರ ಪ್ರಬಂಧ ಮತ್ತು ಬಿಡಿ ಬರಹಗಳಲ್ಲಿ. ಅಲ್ಲಿ ಅವರು ಸಂಕೀರ್ಣ ವಿಷಯಗಳನ್ನ, ವಿದ್ವಾಂಸರು ಗಮನಿಸದ, ಸಾರ್ವತ್ರಿಕ ಸತ್ಯಗಳೆಂದು ಮನ್ನಣೆ ಪಡೆದ ಪಾಶ್ಚಾತ್ಯರ ಪೂರ್ವಾಗ್ರಹ ಆಲೋಚನೆಗಳನ್ನ ನಗ್ನವಾಗಿ ಓದುಗರ ಎದಿರು ನಿಲ್ಲಿಸುತ್ತಾರೆ. ಇದಕ್ಕೂ ಮೀರಿ ಅಚಿಬೆಯ ನಿರ್ಲಿಪ್ತತೆ, ಉದ್ವಿಗ್ನಗೊಳಿಸಬಲ್ಲ ವಿಷಯಗಳನ್ನ ತಣ್ಣಗೆ ಹೇಳಿಬಿಡುವ ಗುಣ, ಆತನಲ್ಲಿರುವ ಸಾಮಾಜಿಕ ಬದ್ಧತೆ, ಪ್ರತಿರೋಧ ಪ್ರಜ್ಞೆ ಗೂಗಿ ಮತ್ತು ಮಂಡೇಲಾರನ್ನ ನೆನಪಿಸುತ್ತದೆ.

ಅಚಿಬೆಗೆ ನಾಲ್ಕು ಜನ ಮಕ್ಕಳು. ಎರಡು ಹೆಣ್ಣು ಎರಡು ಗಂಡು. ಮನೇಲಿ ಹೆಣ್ಣು ಮಕ್ಕಳದೇ ಮೇಲಗೈ. ಅವರ ಹುಟ್ಟಲ್ಲೇ ಒಂದು ಸಿಮಿಟ್ರಿ ಇತ್ತು. ಮೊದಲನೆಯದು ಹೆಣ್ಣು ಮತ್ತು ಮೂರನೆಯದು ಹೆಣ್ಣು. ಕುಟುಂಬದಲ್ಲಿ ತುಂಬ ಸ್ಟ್ರಟೀಜಿಕ್ ಜಾಗಗಳನ್ನ ಹೆಣ್ಣು ಮಕ್ಕಳು ಆಕ್ರಮಿಸಿಕೊಂಡಿದ್ದರು. ಮೊದಲ ಮಗಳು ಚಿನೆಲೋ . ಒಂದು ದಿನ ಪುಟ್ಟ ಚಿನೆಲೋ ಇದ್ದಕಿದ್ದ ಹಾಗೆ ” I am not black, I am brown” ಎಂಬ ಮಾತುಗಳನ್ನ ಕೇಳಿ ಅಚಿಬೆ ಹೌಹಾರಿ ಹೋಗುತ್ತಾನೆ. ಏನು ಅರಿಯದ ಪುಟ್ಟ ಮಗುವೊಂದು ವರ್ಣ ಪ್ರಜ್ಞವಾಗಿದ್ದಾದರೂ ಹೇಗೆ? ಎಂದು ಚಿಂತೆಗೊಳಗಾಗುತ್ತಾನೆ. ಉತ್ತರ ಹುಡುಕುತ್ತ ಮಗಳು ಓದುವ ಕ್ರಿಶ್ಚಿಯನ್ ಮಿಷನರಿ ಶಾಲೆಗೆ ತೆರಳುತ್ತಾನೆ. ಅಲ್ಲಿ ಅವನಿಗೆ we will look into the matter ಎಂಬ ಆಶ್ವಾಸನೆ ನೀಡಿ ಕಳಿಸುತ್ತಾರೆ. ಅಚಿಬೆ ತನ್ನ ತನಿಖೆ ಚುರುಕುಗೊಳಿಸುತ್ತಾನೆ. ಕೊನೆಗೊಂದು ದಿನ ನೈಜೀರಿಯಾದ ಲಾಗೊಸ್ ಪಟ್ಟಣದ ಮಾಲ್ ಒಂದರಲ್ಲಿ ಮಗಳಿಗೆ ಕೊಡಿಸಿದ ಚಿತ್ತಾಕರ್ಷಕ ಕತೆ ಪುಸ್ತಕದಲ್ಲಿ ಅವನ ಆತಂಕಕ್ಕೆ ತೆರೆಬೀಳುತ್ತದೆ. ಅಲ್ಲಿಯವರೆಗೂ ಅಚಿಬೆ ಎಂದು ಮಕ್ಕಳ ಪುಸ್ತಕ ತೆರೆದು ನೋಡಿದವನಲ್ಲ. “ಅವು ಮಕ್ಕಳ ಕತೆಗಳು. ಅದರಲ್ಲೇನಿದೆ ಆತಂಕ ಪಡೋಕೆ” ಅನ್ನೋ ಉಡಾಫೆ.

ಬಹಳಷ್ಟು ಪೋಷಕರು ತಮ್ಮ ಮಕ್ಕಳು ಓದಲಿ ಎಂಬ ಹುರುಪಿನಲ್ಲಿ ಹೇರಳವಾಗಿ ಪುಸ್ತಕ ಕೊಡಿಸುತ್ತಾರೆ. ಎಲ್ಲಾ ಪುಸ್ತಕಗಳು ಅವರ ಜ್ಞಾನ ವೃದ್ಧಿಸುತ್ತಾ , ಅರಿವಿನ ವಿಸ್ತಾರ ಹೆಚ್ಚಿಸುತ್ತದೆ ಎಂಬ ಅಚಲ ನಂಬಿಕೆ ಅವರದು. ಕೆಲ ಪುಸ್ತಕಗಳು ತೀರಾ ಅಪಮಾನಕಾರಿಯಾದ ಕಂಟೆಂಟ್ ಇಂದ ಓದುಗರಲ್ಲಿ ಕೀಳರಿಮೆಯನ್ನ ತುಂಬಿಬಿಡುವ ಅಗಾಧ ಶಕ್ತಿ ಹೊಂದಿರುತ್ತವೆ ಎಂಬುದು ಪೋಷಕರಿಗೆ ಹೊಳೆಯುವುದೂ ಇಲ್ಲ.

Many parents like me, who never read children’s books in their own childhood, saw a chance to give to their children the blessings of modern civilisation which they never had and grabbed it. But what I saw in many of the books was not civilization but condescension and even offensiveness. There are mean stories hiding behind the glamorous covers of a children’s book ಅನ್ನುತ್ತಾನೆ ಅಚಿಬೆ.

ಮಗಳ ಪುಸ್ತಕದಲ್ಲಿ ಹೀಗೊಂದು ಕತೆ ಇರುತ್ತದೆ-
ಬೇಸಿಗೆಯ ಸುಂದರವಾದ ಬಯಲೊಂದರಲ್ಲಿ ಬಿಳಿಯ ಹುಡುಗನೊಬ್ಬ ಗಾಳಿಪಟ ಹಾರಿಸುತ್ತಿರುತ್ತಾನೆ. ಆ ಬಯಲಾಚೆಗೆ ಆಕರ್ಷಕ ಮನೆಗಳು, ಹೂದೋಟಗಳು, ನುಣುಪಾದ ರಸ್ತೆಯ ಎರಡು ಬದಿಗಳಲ್ಲಿ ಬೆಳೆದ ninta ಹೆಮ್ಮರಗಳು. ಗಾಳಿಪಟ ಎತ್ತರಕ್ಕೆ ಮತ್ತಷ್ಟು ಎತ್ತರಕ್ಕೆ ಹಾರಿ ಕೊನೆಗೊಮ್ಮೆ ಆಗಸದಲ್ಲಿ ಹಾರುತ್ತಿದ್ದ ವಿಮಾನದ ಬಾಲಕ್ಕೆ ಸಿಕ್ಕಿ ಹಾಕಿಕೊಳ್ಳುತ್ತದೆ. ಆ ವಿಮಾನ ಬೃಹತ್ ನಗರಗಳ ಮೇಲಾರಿ, ಸಾಗರಗಳನು ದಾಟಿ, ಮರುಭೂಮಿಯ ಮೀರಿ ದಟ್ಟ ಕಾನನದ ಮೇಲಾರುತ್ತಿರುತ್ತದೆ. ಆ ದಟ್ಟ ಕಾನನದಲ್ಲಿ ನೂರಾರು ಬಗೆಯ ವನ್ಯಮೃಗಗಳು, ಅಲ್ಲಲ್ಲಿ ಗುಡಿಸಲುಗಳ ಸಮೂಹ. ಆಶ್ಚರ್ಯಕರ ರೀತಿಯಲ್ಲಿಗಾಳಿಪಟ ವಿಮಾನದ ಬಾಲದಿಂದ ಕಳಚಿ ಗುಡಿಸಲ ಬಳಿಯ ತೆಂಗಿನ ಮರದ ಮೇಲೆ ಬೀಳುತ್ತದೆ. ವಿಮಾನ ಮುಂದೆ ಸಾಗುತ್ತದೆ. ಕಾಯಿ ಕೀಳಲು ಮರ ಏರಿದ್ದ ಕರಿಯನೊಬ್ಬ ಮರದ ಮೇಲಿದ್ದ ಗಾಳಿಪಟವನ್ನ ನೋಡಿ ಬೆಚ್ಚಿ, ಅರಚುತ್ತಾ ಕೆಳಕ್ಕೆ ಬೀಳುತ್ತಾನೆ. ಪೋಷಕರು, ನೆರೆಮನೆಯವರು ಆತನೆಡೆಗೆ ಆತಂಕದಿಂದ ಓಡಿಬರುತ್ತಾರೆ. ಗಾಳಿ ಪಟ ಅವರ ಪಾಲಿಗೆ ಒಂದು ವಿಸ್ಮಯ, ಪರಲೋಕದಿಂದ ಬಂದ ಭೂತ, ಎಲ್ಲರು ನಡುಗುತ್ತಾ ಅದರ ಮುಂದೆ ಭಯ ಭಕ್ತಿಯಿಂದ ಕೈಕಟ್ಟಿ ನಿಲ್ಲುತ್ತಾರೆ. ಹಳ್ಳಿಯ ಮಾಂತ್ರಿಕ ಮತ್ತು ನಾಟಿ ವೈದ್ಯನಿಗೆ ಬರಹೇಳುತ್ತಾರೆ. ಡೋಲು ಬಡಿಯುತ್ತಿರುವ ತನ್ನ ಹಿಂಬಾಲಕರ ಸಮೇತ ಅಲ್ಲಿಗೆ ಆಗಮಿಸುತ್ತಾನೆ. ಪರಲೋಕದಿಂದ ಬಂದ ಆ ದಿವ್ಯ ಶಕ್ತಿಗೆ ಪ್ರಾರ್ಥನೆ ಸಲ್ಲಿಸಿ ಬಲಿ ಕೊಡಲಾಗುತ್ತದೆ. ಹಳ್ಳಿಯ ಬಲಿಷ್ಠ ಯುವಕ ಮರ ಏರಿ ಗೌರವಾಧರದಿಂದ ಗಾಳಿಪಟವನ್ನ ಕೆಳಕ್ಕೆ ತರುತ್ತಾನೆ. ಅಲ್ಲಿಂದ ಮಾಂತ್ರಿಕ ಮುಂಚೂಣಿಯಲ್ಲಿದ್ದ ಮೆರವಣಿಗೆ ಹೊರಟು ಗುಡಿ ತಲಪುತ್ತದೆ. ಅಲ್ಲಿ ಗಾಳಿಪಟವನ್ನಿಟ್ಟು ಇಂದಿಗೂ ಪೂಜೆ ಸಲ್ಲಿಸಲಾಗುತ್ತಿದೆಯೆಂದು ಕತೆ ಕೊನೆಗೊಳ್ಳುತ್ತದೆ.

ಈ ಕತೆ ಏನನ್ನೂ ಹೇಳದೆ ಎಷ್ಟೆಲ್ಲಾ ಹೇಳಿಬಿಡುತ್ತದೆ ಅನ್ನುವುದು ಸೂಕ್ಷ್ಮ ಓದುಗನಿಗೆ ತಿಳಿಯದೆ ಇರದು. ಕತೆ ವೆಸ್ಟ್ ಮತ್ತು ಈಸ್ಟ್ ಎಂಬ ಬೈನರಿಯ ಜೊತೆಗೆ ಪಡಿಯಚ್ಚುಗಳನ್ನೂಸೃಷ್ಟಿಸುತ್ತದೆ. ವೆಸ್ಟ್ ಆಧುನಿಕ ಮತ್ತು ಸೊಫಿಸ್ಟಿಕೇಟೆಡ್ ಆದರೆ ಈಸ್ಟ್ ರಸ್ಟಿಕ್ ಆಗಿದೆ. ವೇಸ್ಟಿನ ಹೂದೋಟ ಅಗಲವಾದ ರಸ್ತೆಗಳು, ಗಾಳಿಪಟ, ವಿಮಾನಗಳು ಮುಂದುವರೆದ ತಂತ್ರಜ್ಞಾನ ಅಭಿವೃದ್ಧಿಯ ಸೂಚಕವಾದರೆ ಈಸ್ಟ (especially ಆಫ್ರಿಕಾ) ಅನಾಗರಿಕ, ಅನಾಭಿವೃದ್ದಿ, ಡಂಬಾಚಾರ, ಮೂಢನಂಬಿಕೆಗಳ ಕೂಪ. ಮಾಟ ಮಂತ್ರಗಳ ತವರು. ಗಾಳಿಪಟ ಹಾರಿಸುವವ ಬಿಳಿಯ ಹುಡುಗ ಆ ಗಾಳಿಪಟಕ್ಕೆ ಹೆದರಿ ಮರದ ಮೇಲಿಂದ ಬೀಳುವವ ಕಪ್ಪು ಹುಡುಗ. ಬಿಳಿಯ ಹುಡುಗನಿಗೆ ಗಾಳಿಪಟ ಆಟಿಕೆ ಆದರೆ ಆಫ್ರಿಕಾದವರಿಗೆ ಅದು ಆರಾಧನೆಗೆ ಅರ್ಹವಾದ ಅಲೋಕಿಕ ಶಕ್ತಿ!
ಇದಾವುದನ್ನೂ ಕತೆ explicit ಆಗಿ ಹೇಳದಿದ್ದರೂ ಕತೆಯ ಉದ್ದೇಶ ಇಂತಹ ಯೋಚನೆಗಳನ್ನ ಓದುಗನ ಮುಗ್ಧ ಮನಸಲ್ಲಿ ನೆಡುವುದೇ ಆಗಿದೆ. ಇಂತಹ “ನೇರ ಮತ್ತು ಸರಳ” ಕತೆಗಳು ಮಾಡುವ ಅನಾಹುತ ಎಂತದ್ದು? ಇಂತಹ ಪೂರ್ವಗ್ರಹ ಪೀಡಿತ ಕಟ್ಟು ಕತೆಗಳಿಂದಲೇ ತುಂಬಿದ್ದ ಆ ಮಕ್ಕಳ ಪುಸ್ತಕ ಓದಿದ್ದ ಅಚಿಬೆಯ ಪುಟ್ಟ ಮಗಳಾದ ಚಿನೆಲೋ ಮನದಲ್ಲಿ ತನ್ನ ಜನ, ಸಂಸ್ಕೃತಿ ಅಥವಾ ವರ್ಣದ ಬಗ್ಗೆ ಅಭಿಮಾನವಾದರೂ ಹೇಗೆ ಹುಟ್ಟೀತು? ವಸಾಹತುಗಾರರು ಕಥನಗಳ ಮೂಲಕ ತಮ್ಮ ಅಮಾನವೀಯ, ದುರಾಸೆಭರಿತ ಉದ್ದೇಶವನ್ನ Civilising mission/ ವೈಟ್ ಮ್ಯಾನ್ಸ್ ಬರ್ಡನ್ ಎಂದು ಜಸ್ಟಿಫೈ ಮಾಡಿಕೊಳ್ಳುಲು ಸಾಧ್ಯವಾಯಿತು.

ಭಾರತದ ಮಟ್ಟಿಗೆ ಹೇಳುವುದಾದರೆ ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನ (ಪುಟಾಣಿಗಳು ಓದುವ ಪಠ್ಯವೂ ಸೇರಿಸಿ) ಏಕರೂಪಿ ಸಂಸ್ಕೃತಿ ಹರಡುವಿಕೆ ಮತ್ತು ರಾಜಕಾರಣದ ಪರಿಕರಗಳಾಗಿ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿ ರಹಮತ್ ತರೀಕೆರೆ ಅವರ ನೀಡುವ ಕೆಲ ಉದಾಹರಣೆಗಳ ಪ್ರಸ್ತಾಪ ಮಾಡುವುದು ಸಮಂಜಸ ಅನಿಸುತ್ತೆ.

” … ಪರಿಷ್ಕರಣ ಪೂರ್ವ ಪಠ್ಯಪುಸ್ತಕಗಳಲ್ಲಿ ನಿಚ್ಚಳವಾಗಿ ಕಾಣುತ್ತದೆ. ಅಲ್ಲಿ ಮುಸ್ಲಿಂರನ್ನು ಅನಾಗರೀಕರನ್ನಾಗಿ ದುಷ್ಟರನ್ನಾಗಿ ಚಿತ್ರಿಸುವ, ಬಹುಸಂಖ್ಯಾತ ದುಡಿಮೆಗಾರರ, ದಲಿತರ, ಶೂದ್ರರ ಸಂಸ್ಕೃತಿಯನ್ನು ಬದಿಗೆ ಸರಿಸುವ ಹಾಗೂ ಬ್ರಾಹ್ಮಣ ಸಂಸ್ಕೃತಿಯನ್ನು ಸಮಗ್ರ ಭಾರತದ ಸಂಸ್ಕೃತಿಯೆಂದು ಬಿಂಬಿಸುವ ಯತ್ನಗಳನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. 2015ರ ಮುಂಚಿನ ಕನ್ನಡ ಭಾಷಾಪಠ್ಯಗಳಲ್ಲಿದ್ದ ಮೂರು ಪ್ರಕರಣಗಳನ್ನ ನಿದರ್ಶನಕ್ಕೆ ಗಮನಿಸಬಹುದು. ಒಂದು ಪಾಠದಲ್ಲಿ, ಲುಂಗಿ-ಟೋಪಿ ಧರಿಸಿದ ವ್ಯಕ್ತಿಯೊಬ್ಬನು, ಹಸಿರು ಮರವನ್ನು ಕಡಿಯುತ್ತಾನೆ. ಪಕ್ಷಿಗಳು ಆರ್ತನಾದ ಮಾಡುತ್ತಿದ್ದರೂ, ಶಾಲೆಯ ಮಕ್ಕಳು ಬೇಡವೆಂದು ಬೇಡಿಕೊಳ್ಳುತ್ತಿದ್ದರೂ ಆತ ಬಿಡುವುದಿಲ್ಲ. ಇನ್ನೊಂದರಲ್ಲಿ, ರಾಮಣ್ಣನೆಂಬ ಕಟ್ಟಿಗೆಕಾರನು ಕೇವಲ ಒಣಗಿದ ಮರ ಕಡಿಯುತ್ತ, ವನದೇವತೆ ಮೆಚ್ಚುಗೆಗೆ ಪಾತ್ರನಾಗುವನು. “ಯಕ್ಷಪ್ರಶ್ನೆ’ ಎಂಬ ಪಾಠದಲ್ಲಿ ಯುಧಿಷ್ಠಿರನು ಅರಣಿ ಕಳೆದುಕೊಂಡ ದ್ವಿಜನಿಗೆ, ಅದನ್ನು ಹುಡುಕಿಕೊಡುವುದು ತನ್ನ ತಮ್ಮಂದಿರನ್ನು ಕಳೆದುಕೊಳ್ಳುವುದಕ್ಕಿಂತ ಮಹತ್ವದ್ದು ಎಂದು ವಚನ ನೀಡುತ್ತಾನೆ” (ಹಾಸು ಹೊಕ್ಕು, ಪುಟ ೪೫)”

ಅಚಿಬೆ ಹೇಳಿದ ಕತೆ ವರ್ಣಭೇದ ಮತ್ತು ಅನ್ಯರನ್ನ (ಅಫ್ರಿಕನ್ನರನ್ನ) ಕೀಳಾಗಿ ಕಾಣುವ ವಿಲಕ್ಷಣವನ್ನ ಪುಟ್ಟ ಮಕ್ಕಳ ತಲೆಯಲ್ಲಿ ಬಿತ್ತುವ ಕಾರ್ಯವನ್ನ ನಾಜೂಕಾಗಿ ಆದರೂ ಸಮರ್ಪಕವಾಗಿ ಮಾಡಿದರೆ, ನಮ್ಮಲ್ಲಿ ಪುಸ್ತಕಗಳ ಮೂಲಕ ಬಹುಸಂಖ್ಯಾತ ಕೆಳಜಾತಿಯ ಹಿಂದುಗಳ ಮೇಲೆ, ಬ್ರಾಹ್ಮಣವಾದಿ ಮೌಲ್ಯಗಳನ್ನು ಹಾಗು ಮೇಲ್ಜಾತಿಯ ಸಾಂಸ್ಕೃತಿಕ ಯಜಮಾನಿಕೆಯನ್ನು ಹೇರುವ ಪ್ರಯತ್ನ ಭರದಿಂದ ಸಾಗಿದೆ.

ಪ್ರಪಂಚದಲ್ಲಿರುವ ವರ್ಣಭೇದ, ಗುಲಾಮಗಿರಿ, ಜೀತ, ಜಾತಿ ಪದ್ಧತಿ ಯಾರೋ ಮುಂಜಾನೆ ಎದ್ದು ” lets try to enslave an entire race or population” ಎಂದು ಶುರುವಾದದ್ದಲ್ಲ. ರಾತ್ರೋರಾತ್ರಿ ಹುಟ್ಟಿಕೊಂಡಿದ್ದಲ್ಲ. “ನೀವು ಕೀಳು” ಎಂಬ ಸಸಿ ನೆಟ್ಟು ನೂರಾರು ವರುಷ ನೀರೆರದು ಹೆಮ್ಮರವಾಗಿ ಬೆಳೆಸಿದ್ದು. ಸಾಹಿತ್ಯ, psuedo ವಿಜ್ಞಾನ, ಪವಿತ್ರ ಗ್ರಂಥಗಳೆಲ್ಲಾ ಸಸಿ ಹೆಮ್ಮರವಾಗಲು ಅನುಕೂಲ ಮಾಡಿಕೊಟ್ಟಿವೆ. “ಕರಿಯರು ಶ್ರೇಣಿಯಲ್ಲಿ ಮಂಗಗಳಿಗಿಂತ ಸ್ವಲ್ಪ ಮೇಲಷ್ಟೇ” ಎಂದಿದ್ದ ಪ್ರಖ್ಯಾತ ಫ್ರೆಂಚ್ ತತ್ವಜ್ಞಾನಿ ವಾಲ್ಟೈರ್! ಕರಿಯರು ಸಹಜವಾಗಿಯೇ ಬಿಳಿಯರಿಗಿಂತ ಕೀಳು ಎಂದಿದ್ದ ಸ್ಕಾಟಿಷ್ ತತ್ವಜ್ಞಾನಿ ಡೇವಿಡ್ ಹ್ಯುಮ್!

This could be called indoctrination or brainwashing. It has been handed down from governments to populace, historians to scholars, teachers to pupils, parent to child. Like a nasty habit, for hundreds of years. When people are told something over and over again, when they see it and when they hear it, it becomes as natural as the passing of the seasons. “that’s the way it’s always been.” Like a tradition or a recipe… ಎಂಬ ಮೈಕಲ್ ಹೋಲ್ಡಿಂಗ್ ಅವರ ಮಾತುಗಳು ಎಷ್ಟು ನಿಜವಲ್ಲವೇ?

ಮಾನವರು ತಮ್ಮವರಲ್ಲದವರನ್ನು ಕೀಳೆಂದು ಗ್ರಹಿಸುವುದು ಸಹಜ ಮತ್ತು ನೈಸರ್ಗಿಕವಾಗಿ ಬಂದ ಗುಣ. ಹನ್ನೆರಡನೇ ಶತಮಾನದಲ್ಲೇ ಯಹೂದಿರನ್ನ ಯೂರೋಪಿನ ಕ್ರೈಸ್ತರು ಕೀಳಾಗಿ ಕಂಡರು. 1275ರ ಹೊತ್ತಿಗೆ ಇಂಗ್ಲೆಂಡಿನಲ್ಲಿ “statute of the Jewry” ಎಂಬ ಕಾನೂನು ಮಾಡಿ ಯಹೂದಿರನ್ನ ಬೇರ್ಪಡಿಸಿ ದೇಶದಿಂದ ಹೊರಹಾಕುವ ಕಾರ್ಯ ಭರದಿಂದ ಸಾಗಿತ್ತು. ಹದಿನೈದನೇ ಶತಮಾನದಲ್ಲೇ ಮುಸ್ಲಿಂರ ಮೇಲಿನ ದ್ವೇಷ ಜಗದ ಎಲ್ಲೆಡೆ ಹರಡಿತ್ತು. ಹೊಸ ದೇಶಗಳ ಡಿಸ್ಕವರಿ, ಕಾಲೋನಿಯಾಲಿಸಂ ಮತ್ತು ಹೆಚ್ಚೆಚ್ಚು ಮುದ್ರಣಾಲಯಗಳ ಆರಂಭ ಒಂದೇ ಕಾಲಘಟ್ಟದಲ್ಲಾಯಿತು ಎಂಬುದನ್ನ ಮರೆಯಬಾರದು.

ಅಚಿಬೆ ತನ್ನ ಮಗಳ ಪುಸ್ತಕದಲ್ಲಿ ಓದಿದ ಕತೆಯಿಂದ ದಂಗಾಗಿ ಹೋದರು ವಿಚಲಿತನಾಗಲಿಲ್ಲ. ಪುಸ್ತಕ/ ಕತೆಯ ರಾಜಕೀಯ ಅವರಿಗೆ ಅರ್ಥವಾಗಿತ್ತು. ಇಂತಹ ಪುಸ್ತಕಗಳು ಎಳೆಯ ಮನಸ್ಸುಗಳ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಅರಿವಿತ್ತು. ಪುಟ್ಟ ಕತೆಯೊಂದು ಮಗಳು ಚಿನೆಲೊ ಮನಸಲ್ಲಿ ಎಂತಹ ಕೀಳಿರಿಮೆ ಹುಟ್ಟಿಹಾಕಿತ್ತು. ತಾನು ಕಪ್ಪಲ್ಲ, ಕಂದು ಬಣ್ಣದವಳು ಎಂದು ಹೇಳಿಕೊಳ್ಳುವಷ್ಟು! ಪಾಶ್ಚತ್ಯರು ಬರೆದ ಪುಸ್ತಕಗಳ ಬದಲಿಗೆ ತಾನೇ ಪುಟ್ಟ ಕತೆಗಳನ್ನ ಬರೆಯುವೆ ಎಂದು ಪಣತೊಟ್ಟ ಕೂತ ಅಚಿಬೆಗೆ ಮಕ್ಕಳ ಸಾಹಿತ್ಯ ಬರೆಯುವುದು ಕಠಿಣ ಅಂತ ಬಹುಬೇಗ ಅರ್ಥವಾಗುತ್ತೆ ಕೂಡ … ಪೋಷಕರು ಪುಸ್ತಕ ಕೊಡಿಸುವುದಷ್ಟೇ ನಮ್ಮ ಜವಾಬ್ದಾರಿ ಅಂದುಕೊಂಡಿದ್ದಾರೆ ಆದರೆ ಪುಸ್ತಕದ ಒಳಗಿರುವ ಕಂಟೆಂಟ್ ನೋಡುವ ಕಾಲ ಬಂದಿದೆ ಮತ್ತು ಪಾಠ ಮಾಡುವ ಶಿಕ್ಷಕರು ಪಠ್ಯ ಪುಸ್ತಕ ಯಾವುದೇ ಇರಲಿ ಸಾವಧಾನವಾಗಿ ಓದಿ ಅರ್ಥ ತಿಳಿಸಿ, ಚರ್ಚೆಗೊಳಪಡಿಸಿ critique ಮಾಡುವಷ್ಟು ಕ್ಷಮತೆ ಬೆಳೆಸಿಕೊಳ್ಳಬೇಕಾಗುತ್ತದೆ. ಸೌಹಾರ್ದಯುತ ನಾಡು ಕಟ್ಟುವಲ್ಲಿ ಪೋಷಕರು ಮತ್ತು ಶಿಕ್ಷಕರ ಮೇಲೆ ಅಗಾಧವಾದ ಜವಾಬ್ದಾರಿಯಿದೆ.

‍ಲೇಖಕರು Admin

September 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: