ಜ್ಯೋತಿ ಇರ್ವತ್ತೂರು
1. ಭರವಸೆಯ ಬೆರಳ ಕೈಹಿಡಿದು..
ಕಾಮನಬಿಲ್ಲಿನ ಬಣ್ಣ ಮರೆಯಾಗಲಿ ಮತ್ತೆ ಬಣ್ಣ ತುಂಬುತ್ತೇನೆ
ನಡೆದು ನಡೆದು ದಣಿದ ಪಾದಗಳಿಗೆ ಧೈರ್ಯ ಹೇಳುತ್ತೇನೆ.
ಮತ್ತೆ ಹೆಜ್ಜೆ ಹಾಕುತ್ತೇನೆ
ಅಹಂಕಾರದ ಪರದೆಯ ಸರಿಸಿ ಬೆಳಕಿನೆಡೆಗೆ ಮುಖವೊಡ್ಡುತ್ತೇನೆ
ಪ್ರತಿ ಉಸಿರಿಗು ಹೊಸತನವ ತುಂಬುತ್ತೇನೆ
ಅಣಕಿಸುವ ಆಡಿ ನಗುವ ಧ್ವನಿಗಳ ಆನಂದಿಸುತ್ತೇನೆ
ಭರವಸೆಯ ಭ್ರೂಣದ ಗರ್ಭಪಾತವಾಗದಂತೆ ಕಾಯುತ್ತೇನೆ
ಹೊಸತನದ ಕೂಸಿನ ಆಗಮನಕ್ಕಾಗಿ ಎದುರು ನೋಡುತ್ತೇನೆ..
ಅದಕ್ಕಾಗಿ ಕಾಯುತ್ತೇನೆ…

2. ವೃಷಭಾವತಿ ಹಾಡು
ನನ್ನ ವ್ಯಥೆಯ ಕೇಳುವರಾರು?
ನನ್ಮ ಸಾವಿಗೆ ಕಾರಣ
ತಿಳಿಸಿ ಹೇಳುವರಾರು?
ಬೆಳ್ನೊರೆಯಲಿ ನಾ ಹರಿದೆನು
ಜೀವವ ನಾ ಕೊಟ್ಟೆನು
ನಿಮ್ಮ ತಣಿಸಿ
ಪೈರಿಗುಣಿಸಿ
ಹರಿದೆನು ನಾನಂದು..
ನನ್ನ ಕಥೆಯ…
ಜೀವ ನೀಡಿದ ನನ್ನ ಮಡಿಲಿಗೆ ವಿಷವ ಸುರಿದಿರಿ ನೀವು
ಮರುಕವಿಲ್ಲದೆ ನರಕಯಾತನೆ
ಕ಼ಣಕ್ಷಣವು ಕೊಟ್ಟಿರಿ ನೀವು
ನನ್ನ ಕೊಂದಿರಿ ಸುಮ್ಮನಾದಿರಿ
ಆತ್ಮವಿಲ್ಲದಂತೆ ನಡೆದಿರಿ
ನನ್ನ ಕೊಂದ ಪಾಪವು
ಸುಡದೆ ಬಿಡುವುದೆ….






ಚೆನ್ನಾಗಿದೆ