ಜೋಗಿ ಅಂಕಣ- ಗಿರಿರಾಜ ಕಂಡ ಕಾಮನಬಿಲ್ಲು

‘ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು.

ಜೋಗಿ ಬಗ್ಗೆ ಸವಿವರ ಬೇಕಾದರೆ ಈ ವಿಡಿಯೋ ನೋಡಿ

ಈಗ ಜೋಗಿ ‘ಅವಧಿ’ಯ ಮೇಲಿನ ಅಭಿಮಾನದಿಂದ ಪ್ರತೀ ಭಾನುವಾರ ಹೊಸ ತಲೆಮಾರಿನವರ ಬರಹವನ್ನೇ ಗಮನದಲ್ಲಿಟ್ಟುಕೊಂಡು ‘ನವ ಪಲ್ಲವ’ ಬರೆಯಲಿದ್ದಾರೆ.

ಕಳೆದ ವಾರ ಬರೆದ ಆರಂಭದ ಟಿಪ್ಪಣಿಗೆ ಕಾರಣ ಬಿ ಎಂ ಗಿರಿರಾಜ ಬರೆದ ಕಾದಂಬರಿ ಅಂದಿದ್ದೆ. ‘ಕಥೆಗೆ ಸಾವಿಲ್ಲ’ ಎಂಬ ಈ ಕಾದಂಬರಿಯನ್ನು ನಾನು ತರಿಸಿಕೊಂಡದ್ದಕ್ಕೆ ಕಾರಣ, ಗಿರಿರಾಜರ ಬರಹಗಳ ಮೇಲೆ ನನಗಿದ್ದ ಕುತೂಹಲ ಅಲ್ಲ. ನಾನು ಯಾವತ್ತೂ ಅವರ ಕತೆಗಳನ್ನಾಗಲೀ ಇತರ ಬರಹಗಳನ್ನಾಗಲೀ ಓದಿದವನಲ್ಲ.

ಗಿರಿರಾಜ್ ಕೊಂಚ ಎತ್ತರದ ದನಿಯಲ್ಲಿ ಮಾತಾಡುವ ನಿರ್ದೇಶಕ. ಅವರ ಸಿನಿಮಾಗಳಲ್ಲಿ ಕೂಡ ಅಗತ್ಯಕ್ಕಿಂತ ಕೊಂಚ ಹೆಚ್ಚೇ ಅನ್ನಿಸುವ ಕ್ರೌರ್ಯ ಇರುತ್ತದೆ. ನಾನಿದನ್ನು ‘ಅಮರಾವತಿ’ ಚಿತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳುತ್ತಿಲ್ಲ. ಅವರ ಮಿಕ್ಕ ಸಿನಿಮಾಗಳಲ್ಲೂ ಕೂಡ ಅವರ ಸಿಟ್ಟು ಅಲ್ಲಲ್ಲಿ ಕಾಣಿಸುತ್ತದೆ. ಅದನ್ನು ಸಾತ್ವಿಕ ಸಿಟ್ಟು ಎಂದು ಕರೆದು ಅವಮಾನಿಸಲಿಕ್ಕೂ ನನಗೆ ಮನಸ್ಸಿಲ್ಲ. ಸಾತ್ವಿಕ ಸಿಟ್ಟು ಎಂಬ ಪದವೇ ರಾಜಿ ಪ್ರಸ್ತಾಪದಂತೆ ಕೇಳಿಸುತ್ತದೆ.

ಒಂದು ವಿಚಿತ್ರ ಹುಡುಕಾಟದಲ್ಲಿರುವಂತೆ ಕಾಣಿಸುವ ಗಿರಿರಾಜ, ತಮ್ಮ ಸಿನಿಮಾಗಳಲ್ಲಿ ಹೇಳುತ್ತಾ ಬಂದದ್ದು ತಾವು ಕಂಡಿರುವ ಕತೆಗಳನ್ನೇ. ತನ್ನ ಊರು, ಬೆಂಗಳೂರು, ಎರಡರ ನಡುವಿನ ಸೇತುವೆಯಂತೆ ಕಾಣಿಸುವ ಉದ್ಯೋಗ, ಅದರ ಆಳದಲ್ಲಿ ಅಡಗಿರುವ ಹುನ್ನಾರಗಳನ್ನೆಲ್ಲ ಕಂಡವರಂತೆ ಗಿರಿರಾಜ ದಾಖಲಿಸುತ್ತಾ ಹೋಗುತ್ತಾರೆ. ಕ್ರುದ್ಧಳಾದ ಹೆಣ್ಣು, ಅಸಹಾಯಕ ಗಂಡಸು ಮತ್ತು ಧಿಕ್ಕರಿಸಲಾಗದ ವ್ಯವಸ್ಥೆಯೊಂದರ ಊರುಗೋಲಿನಲ್ಲಿ ನಡೆಯುವ ದೈನಂದಿನ ಬದುಕನ್ನು ಗಿರಿರಾಜರ ಸಿನಿಮಾಗಳು ಕಟ್ಟಿಕೊಟ್ಟಿವೆ.

ಸುಮ್ಮನೆ ಖಾತ್ರಿ ಪಡಿಸಿಕೊಳ್ಳಲೆಂದು ತೆಗೆದು ನೋಡಿದರೆ, ‘ಜಟ್ಟ’ ಸಿನಿಮಾವನ್ನಿಡೀ ಬರೆದದ್ದು ಅವರೇ. ಅದರ ನಾಲ್ಕು ಹಾಡುಗಳನ್ನೂ ಅವರೇ ರಚಿಸಿದ್ದರು. ಅಮರಾವತಿ ಚಿತ್ರದ ಪ್ರತಿಯೊಂದು ಮಾತು ಕೂಡ ಅವರೇ ಆಡಿದಂತಿತ್ತು. ‘ಮೈತ್ರಿ’ ಸಿನಿಮಾದ ಮೂಲಕ ಅವರು ತಾನು ಹೇಳಬೇಕಾದ್ದನ್ನು ಎಲ್ಲರಿಗೂ ಹೇಳಲು ಪ್ರಯತ್ನಿಸಿದ್ದನ್ನು ನೋಡಬಹುದು.

ಮೂರೋ ನಾಲ್ಕೋ ಸಿನಿಮಾ ಮಾಡಿದ ನಂತರ ಒಬ್ಬ ನಿರ್ದೇಶಕ ಕಾದಂಬರಿ ಬರೆಯುತ್ತಾನೆ ಎಂಬ ನಂಬಿಕೆ ನನಗೆ ಖಂಡಿತಾ ಇರಲಿಲ್ಲ. ಯಾಕೆಂದರೆ ಸಿನಿಮಾ ಮಾಧ್ಯಮ ಎಷ್ಟು ಪ್ರಭಾವಶಾಲಿ ಎಂದರೆ, ಹತ್ತಾರು ಪುಟಗಳನ್ನು ಬರೆಯುವ ಹೊತ್ತಿಗೆ ಮನಸ್ಸು ಒಂದು ದೃಶ್ಯದ ಮೋಹಕತೆಗೆ ಸಿಲುಕಿಕೊಂಡು ಬಿಡುತ್ತದೆ. ಇವೆಲ್ಲವನ್ನೂ ಒಂದು ಸೆಳಕಿನಲ್ಲಿ ಗೀಚಿ ಬಿಸಾಡಬಲ್ಲೆ ಎಂದು ಅನ್ನಿಸತೊಡಗುತ್ತದೆ. ಬರೆದು, ಪ್ರಕಟಿಸಿ, ಅದು ಅದೇ ರೀತಿಯಲ್ಲಿ ಮತ್ತೊಬ್ಬರನ್ನು ತಲುಪಿ, ಪ್ರಭಾವಿಸಲು ಪ್ರಾಸೆಸ್ಸು ತುಂಬ ಸುದೀರ್ಘವಾದದ್ದು ಅನ್ನಿಸಿಬಿಡುತ್ತದೆ. ಹಾಗಿದ್ದಾಗ, ಬಿಎಂ ಗಿರಿರಾಜ ಕಾದಂಬರಿಯನ್ನೇಕೆ ಬರೆದರು ಅನ್ನುವ ಕುತೂಹಲ ನನ್ನಲ್ಲಿತ್ತು.

‘ಕಥೆಗೆ ಸಾವಿಲ್ಲ’ ಓದುತ್ತಿದ್ದಂತೆಯೇ ಎರಡು ಸಂಗತಿಗಳು ನಿಚ್ಚಳವಾಗುತ್ತಾ ಹೋದವು. ಮೊದಲನೆಯದು ಈ ಕಾದಂಬರಿಯನ್ನು ಗಿರಿರಾಜ ಬರೆದದ್ದು ಹನ್ನೆರಡು ವರುಷಗಳ ಹಿಂದೆ, ಅವರ ಮೊದಲ ಸಿನಿಮಾ ತೆರೆಕಾಣುವುದಕ್ಕೂ ಮೊದಲು. ಎರಡನೆಯದು, ಈ ಕಾದಂಬರಿಯನ್ನು ನನಗೆ ಕಂಡದ್ದು ಕಾದಂಬರಿಕಾರ ಅಲ್ಲ, ಒಬ್ಬ ನಿರ್ದೇಶಕ.

ಕಥೆಗೆ ಸಾವಿಲ್ಲ ಕಾದಂಬರಿ ಅಮೆರಿಕಾದಿಂದ ಮರಳಿದ ಕೌಸ್ತುಭನ ಹುಡುಕಾಟವನ್ನು ಕುರಿತದ್ದು. ಕೌಸ್ತುಭನ ಹುಡುಕಾಟ ತನ್ನ ಹಾದಿಯ ಹುಡುಕಾಟವೂ ಹೌದೆಂಬಂತೆ ಇದನ್ನು ಗಿರಿರಾಜ ನಿರೂಪಿಸುತ್ತಾ ಹೋಗಿದ್ದಾರೆ. ಇದನ್ನು ಗಿರಿರಾಜ ಸಿನಿಮಾ ಮಾಡಬಹುದಾಗಿತ್ತು ಅನ್ನುವುದನ್ನು ಈ ಕಾದಂಬರಿಯ ನಾಲ್ಕು ಅಧ್ಯಾಯಗಳನ್ನು ಓದಿಯೇ ಹೇಳಿಬಿಡಬಹುದು.

ಪ್ರತಿಯೊಂದು ಅಧ್ಯಾಯದ ಕೊನೆಗೂ ಒಂದು ಅನೂಹ್ಯವಾದ ತಿರುವು, ಒಂದು ಕೊಲೆ, ಒಂದು ಹುಡುಕಾಟ ಕಾಣಿಸುತ್ತದೆ. ತೆಲುಗು ಸಿನಿಮಾಗಳಲ್ಲಿ ಕಂಡುಬರುವ ಪವರ್-ಫುಲ್ ದೃಶ್ಯಗಳು, ಪೊಲೀಸರ ಕೌರ್ಯ, ನಕ್ಸಲ್ ಹೋರಾಟ, ನಿಗೂಢವಾಗಿ ಭವಿಷ್ಯ ಹೇಳುವ ಕುರುಡಿ ಗೌರಿ, ಆ ಮುದುಕಿಯ ಹತ್ತಿರವೂ ಇಂಗ್ಲಿಷ್ ಮಾತಾಡುವ ಕೌಸ್ತುಭ, ಅವಳು ತೋರಿಸುವ ಜಾಡು, ಒಂದು ಪ್ರಸಂಗಕ್ಕೆ ಮತ್ತೊಂದು ಘಟನೆ ಕೊಂಡಿಯಾಗುತ್ತಾ ಹೋಗುವುದು- ಹೀಗೆ ಸರಪಣಿಯಂತೆ ಕತೆ ಸಾಗುತ್ತದೆ.

ಕತೆಯಲ್ಲಿ ಒಂದು ದೃಶ್ಯದಿಂದ ಮತ್ತೊಂದು ದೃಶ್ಯಕ್ಕೆ ಜಿಗಿಯುವುದು ಕೂಡ ಕುತೂಹಲಕಾರಿ. ಗಿರಿರಾಜ ಹಾಗೆ ಮಾಡುವಾಗ ಅದು ಸಂಭಾವ್ಯ ಹೌದೇ ಅಲ್ಲವೇ ಎಂದು ತಿರುಗಿ ನೋಡುವುದಿಲ್ಲ. ತನಗೆ ಒಪ್ಪಿತವಾದದ್ದು ಜಗತ್ತಿಗೆ ಒಪ್ಪಿತವಾಗುತ್ತದೆ ಎಂಬ ಕತೆಗಾರನ ಹುಮ್ಮಸ್ಸು ಮತ್ತು ಆತ್ಮವಿಶ್ವಾಸವೇ ಈ ಕಾದಂಬರಿಯನ್ನು ಮುನ್ನಡೆಸುತ್ತಾ ಹೋಗಿದೆ.

ಇದೊಂದು ಮಾಯಾವಾಸ್ತವದ ಬೆನ್ನು ಹತ್ತಿದ ಕತೆ. ಹಳೆಯ ಪೋಸ್ಚಾಫೀಸು, ಕತ್ತಲ ಗುಹೆ, ಆಮೆಗಳಿಗೆ ಹೆಸರಿಡುವ ಹುಡುಗಿ, ಅಜ್ಜಿಯ ದನಿ ಕೇಳಿದ ತಕ್ಷಣ ಓಡೋಡಿ ಬರುವ ಆಮೆ, ಚುನಾವಣೆಗೆ ನಿಂತು ಗೆಲ್ಲುವ ಮಾಚ ಅಲಿಯಾಸ್ ಮಾಚೇಗೌಡನ ಸುದೀರ್ಘ ವೃತ್ತಾಂತ- ಹೀಗೆ ತಾನು ಹೇಳಬೇಕಾದ್ದೆಲ್ಲವನ್ನೂ ಒಂದೇ ಸಲ ಹೇಳಿಬಿಡುವ ಹುಡುಗನ ಹುಮ್ಮಸ್ಸೇ ಈ ಕಾದಂಬರಿಯನ್ನು ಮುನ್ನಡೆಸುತ್ತದೆ.

ಬಿಎಂ ಗಿರಿರಾಜರ ನಂತರದ ಕೃತಿಗಳನ್ನು ನೋಡಿದವರಿಗೆ ಅಚ್ಚರಿ ಹುಟ್ಟಿಸುವ ಕೃತಿ ಇದು. ಇದು ಅವರ ಮೊದಲ ಕಾದಂಬರಿ ಆಗಿದ್ದರಿಂದ ಇದರಲ್ಲಿ ಕೆಲವು ಆತ್ಮಕಥನದ ಅಂಶಗಳೂ ಅಲ್ಲಲ್ಲಿ ಸೇರಿಕೊಂಡಿವೆ. ಅದರ ಜೊತೆಗೇ ತನ್ನ ಪರಿಸರ, ಭಾಷೆ, ಮೊಂಡುಗಟ್ಟಿದ ಶೈಲಿ ಮತ್ತು ತಾನು ಕಂಡ ಹೊಸ ಜಗತ್ತಿನ ನೋಟವನ್ನು ದಾಖಲಿಸುವ ಅದಮ್ಯ ಆಶೆಯೂ ಕಾಣಿಸುತ್ತದೆ. ಒಬ್ಬ ಲೇಖಕನ ಮೊದಲ ಕಾದಂಬರಿಯಲ್ಲಿ ಕಾಣಿಸುವ ಪ್ರಭಾವವಾಗಲೀ, ಬೋಳೇತನವಾಗಲೀ ಇದರಲ್ಲಿಲ್ಲ.
**
ಈ ಕೃತಿಯ ಕುರಿತು ಬರೆಯುತ್ತಾ ಬರೆಯುತ್ತಾ ನನಗೆ ಕೆಲವು ಜ್ಞಾನೋದಯಗಳಾದವು. ಒಬ್ಬ ಲೇಖಕನನ್ನು ಅವನ ಒಂದು ಕೃತಿಯನ್ನಿಟ್ಟುಕೊಂಡು ನೋಡುವುದು ಸಾಧ್ಯವಿಲ್ಲ. ಬಿಎಂ ಗಿರಿರಾಜರ ಕುರಿತು ಬರೆಯುವುದಕ್ಕೆ ಅವರ ಒಂದು ಕಾದಂಬರಿಯ ಬೆಂಬಲ ಸಾಕಾಗುವುದಿಲ್ಲ. ಅಲ್ಲದೇ, ರೋಚಕತೆಯೇ ಮೈತುಂಬಿಕೊಂಡ ಕಾದಂಬರಿಯೊಂದನ್ನು ಯಾವ ಒಳಗುಟ್ಟುಗಳನ್ನೂ ಬಿಟ್ಟುಕೊಡದೇ, ಪರಿಚಯಿಸುವುದು ಕೂಡ ದುರಾಸೆಯೇ. ಈ ಕಾದಂಬರಿಯನ್ನು ಓದುತ್ತಾ ಹೋದರೆ ಗಿರಿರಾಜರ ವೈವಿಧ್ಯ ಗೊತ್ತಾಗುತ್ತದೆ. ಇದು ಅವರು ಬರೆದ, ಬರೆಯಲೇಬೇಕಾಗಿದ್ದ ಮತ್ತು ಬರೆಯಬಾರದಿದ್ದ ಕಾದಂಬರಿ ಅಂತಲೂ ಅನ್ನಿಸಿಬಿಡುತ್ತದೆ.

ಕೆಲವು ಸಲ ಲೇಖಕರು ತಮ್ಮ ಆರಂಭದ ಕೃತಿಗಳಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಾರೆ. ಲಂಕೇಶರು ತಮ್ಮ ಆರಂಭದ ಕವಿತೆಗಳನ್ನು ಪ್ರಕಟಿಸಲು ನಲವತ್ತು ವರ್ಷಗಳ ತನಕ ಕಾದಿದ್ದರು. ಎಸ್ ಎಲ್ ಭೈರಪ್ಪ ಕೂಡ ತಮ್ಮ ಮೊದಲ ಕಾದಂಬರಿಯನ್ನು ಪ್ರಕಟಿಸುವ ಧೈರ್ಯ ಮಾಡಿದ್ದು ದಶಕದ ಹಿಂದೆ. ಲೇಖಕನ ಮೊದಲ ಕೃತಿ ಅವನ ಸಾಹಿತ್ಯ ಪಯಣದ ದಿಕ್ಸೂಚಿಯೇನೂ ಅಲ್ಲ. ಆದರೆ ಆತ ತನ್ನನ್ನು ರೂಪಿಸಿಕೊಳ್ಳುತ್ತಿರುವ ರೀತಿಯನ್ನಂತೂ ಅದು ಸೂಚಿಸುತ್ತಿರುತ್ತದೆ.

ಇಲ್ಲಿ, ಬಿಎಂ ಗಿರಿರಾಜ, ತಾನು ಯಾವುದರಿಂದ ಬಿಡಿಸಿಕೊಳ್ಳಬೇಕೆಂದು ಸ್ಪಷ್ಟವಾಗಿ ಗೊತ್ತಿರುವವರ ಹಾಗೆ ‘ಕಥೆಗೆ ಸಾವಿಲ್ಲ’ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಇಲ್ಲಿ ಹುಟ್ಟುವ ದೃಶ್ಯಗಳು, ಅವನ್ನು ಮುನ್ನಡೆಸುವ ಇಂಗ್ಲೀಷು, ಕಾವೇರಿ ಮತ್ತು ಆಕೆಯ ಪರಿಸರದ ಮಂದಿ ಆಡುವ ಊರ ಕನ್ನಡ, ಕೌರ್ಯ ಮತ್ತು ಭಾವುಕತೆ ಬೆರೆತ ಜಗತ್ತು- ಎಲ್ಲವೂ ಗಿರಿರಾಜರ ಇವತ್ತಿನ ಜಗತ್ತು ಅಲ್ಲವೇ ಅಲ್ಲ.

ತನ್ನದಲ್ಲದ, ತನಗೆ ಪರಿಚಿತವಲ್ಲದ, ತಾನೂ ಪರಿಚಿತನಲ್ಲದ ಲೋಕದಲ್ಲಿ ಕಳೆದುಹೋಗುವುದು ಕೂಡ ಮನುಷ್ಯನ ಆಳದ ಆಸೆಗಳಲ್ಲಿ ಒಂದು. ಅದನ್ನು ಗಿರಿರಾಜ ಇಲ್ಲಿ ತೀರಿಸಿಕೊಂಡಿದ್ದಾರೆ.

‍ಲೇಖಕರು Avadhi

May 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಡಿ ಎಸ್ ರಾಮಸ್ವಾಮಿ

    ಹೊಸಬರು ಹಳಬರು ಎನ್ನುವ ವರ್ಗೀಕರಣವೇ ಪರಸ್ಪರರನ್ನು ಓದಿಕೊಳ್ಳದ ಹಾಗೆ ಮಾಡಿದೆ. ಖ್ಯಾತ ವಿಮರ್ಶಕರು ತನ್ನ ಕೃತಿಯ ಬಗ್ಗೆ ಯಾಕೆ ಮಾತಾಡುತ್ತಿಲ್ಲ ಎಂದು ಹೊಸಬ, ಅಯ್ಯೋ ಹೊಸಬರಿಗೆ ದಕ್ಕುವ ಕಥಾ ವಸ್ತು ತನಗೇಕೆ ಸಿಕ್ಕುತ್ತಿಲ್ಲ ಎಂದು ಕನಲುವ ಹಳಬ….

    ಇವೆಲ್ಲವನ್ನೂ ಮೀರಿಸುವ ಹಾಗೆ ಈ ಹೊತ್ತಿನ ಸಾಮಾಜಿಕ ಜಾಲತಾಣಗಳು. ಅವಧಿಯ ಪ್ರಯತ್ನ ಯಾವತ್ತೂ ಹೊಸತೇ! ಇನ್ನು ಜೋಗಿ ಅದ್ಯಾವಾಗ ಅಷ್ಟೆಲ್ಲ ಬರೆಯುತ್ತಾರೋ ಹೀಗೆ ಸಿಕ್ಕವರನ್ನೆಲ್ಲ ಓದಿ ಟಿಪ್ಪಣಿಸುತ್ತಾರೋ ಜೊತೆಗೆ ಅದ್ಯಾವ ಮಾಯದಲ್ಲಿ ಕೆಲಸವನ್ನೂ ಸರಿದೂಗಿಸ್ತಾರೋ……

    ಅಂಕಣದ ಉದ್ದೇಶ ಸಾರ್ಥಕವಾಗಿದೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: