ಜಯಲಕ್ಷ್ಮಿ ಪಾಟೀಲ್ ಅಂಕಣ- ಇಂದಿಗೂ ನನ್ನಲ್ಲುಳಿದ ಅಸಮಾಧಾನ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

‘ಸ್ವಲ್ಪ ಸರೀರಿ, ನನಗ ಕಾಣಾವಲ್ರು, ಸ್ವಲ್ಪ ಸರೀರಿ’

‘ಒಂದೂರಾಗ, ಯಾರೋ ಒಂದು ಮನಿಯೋರು, ‘ನಾಳೆ ನಾವೇನರ ಸತ್ತ್ರ ನಾವು ಗಳಿಸಿದ ಬಂಗಾರ ನಮ್ಮ ಜೋಡೀನೇ ಬರ್ಲಿ’ ಅಂತ ಓಸೂರು ಬಂಗಾರ ನುಂಗಿ ಹೊಟ್ಟಿನೋವು ತಡ್ಕೊಳ್ಳಾಕಾಗ್ದ ದವಾಖಾನಿಗೆ ಹೋದ್ರಂತ. ಡಾಕ್ಟರು ಆಪರೇಶನ್ ಮಾಡ್ಬೇಕು ಅಂದಾರಂತ’

‘ನಿನಗೊತ್ತು? ಆ ಊರೈತೆಲ್ಲಾ, ಆ ಊರಾಗ ಎದಿ ಒಡ್ಕೊಂಡು ಇಬ್ಬ್ರು ಸತ್ತಾರಂತ! ನಮ್ಮಪ್ಪಾರು ಹೇಳಾಕತ್ತಿದ್ದ್ರು’

‘ಏ, ನಮ್ಮ ಊರಾಗs ಒಂದೀಸು ಮಂದಿ ಹೊಲಾ ಮನಿ ಮಾರಿ ಬ್ಯಾರೆ ಊರಿಗೆ ಹೋಗೋರದಾರಂತ, ನಮ್ಮಪ್ಪಾರು ಅನ್ನಾಕತ್ತಿದ್ದ್ರು. ಅದಕ ನಮ್ಮವ್ವಾರು ನಾವೂ ಹೋಗೂನು ನಡೀರಿ ಅಂತ ಅಳಾಕತ್ತು ಅಪ್ಪಾರಿಂದ ಬೈಸ್ಕೊಂಡ್ರು’

ಹೀಗೆ ಶಾಲೆಯ ತರಗತಿಗಳಲ್ಲಿ ಏನೂ ಸ್ಪಷ್ಟವಾಗಿ ಗೊತ್ತಿಲ್ಲದ ನಾವು ಚಿಳ್ಳ್ಯಾಗಳು ಮಾತಾಡಿಕೊಳ್ಳುತ್ತಿದ್ದೆವು. ಮನೆಗಳಲ್ಲಿ ಆದ ಚರ್ಚೆಗಳು ತರಗತಿಗಳಲ್ಲಿ ಹೀಗೆ ಪ್ರತಿಧ್ವನಿಸುತ್ತಿತ್ತು. ನಾನಾಗ ಐದನೇ ತರಗತಿಯಲ್ಲಿದ್ದೆ. ೧೯೭೩ರಲ್ಲಿ ಅಮೇರಿಕಾ ಅಂತರಿಕ್ಷದಲ್ಲಿ ನಿರ್ಮಿಸಿದ್ದ ಸ್ಕೈಲ್ಯಾಬ್, ೧೯೭೯ರಲ್ಲಿ ಅದೇನೋ ತಾಂತ್ರಿಕ ಕಾರಣಗಳಿಂದ ಮುರಿದು ಭೂಮಿಯ ಮೇಲೆ ಅದೂ ಭಾರತದ ಮೇಲೆ ಬೀಳಲಿದೆ, ಆದರೆ ನಿಖರವಾಗಿ ಎಲ್ಲಿ ಎಂದು ತಿಳಿದಿಲ್ಲ ಎನ್ನುವ ಸುದ್ದಿ ಆರಂಭದ ದಿನಗಳಲ್ಲಿ ಪತ್ರಿಕೆಗಳಲ್ಲಿ, ರೇಡಿಯೋದಲ್ಲಿ ಬಿತ್ತರವಾದಾಗಿನಿಂದ ದಿನವೂ ಇಂಥವೇ ಮಾತುಗಳು ಎಲ್ಲಾ ಕಡೆ. ದೊಡ್ಡವರು ಸಣ್ಣವರು ಎನ್ನದೇ ಎಲ್ಲರಲ್ಲೂ ಒಂದು ದಿಗಿಲು ಹುಟ್ಟಿಕೊಂಡಿತ್ತು. ಶಾಲೆಗೆ ಹೋಗುವಾಗ ಬರುವಾಗ ನಾವು ಮಕ್ಕಳೆಲ್ಲ ಪಾಟಿಚೀಲವನ್ನು ತಲೆ ಮೇಲೆ ಇಟ್ಟುಕೊಂಡು ದುಡುದುಡು ಓಡುತ್ತಿದ್ದೆವು, ಅಕಸ್ಮಾತ್ ಸ್ಕೈಲ್ಯಾಬ್ ತಪ್ಪಿ ನಮ್ಮ ತಲೆಯ ಮೇಲೇನಾದರೂ ಬಿದ್ದರೆ, ತಾಯಿ ಸರಸ್ವತಿ ನಮ್ಮನ್ನು ಅದರಿಂದ ಕಾಪಾಡುತ್ತಾಳೆ ಎನ್ನುವ ಮುಗ್ಧ ನಂಬಿಕೆ!

‘ಸ್ಕೈಲ್ಯಾಬ್ ಅಂದ್ರ ಏನಪ್ಪಾ?’ ನನ್ನ ಪ್ರಶ್ನೆ.

‘ಸ್ಕೈ ಅಂದ್ರೇನು?’ ಅಪ್ಪಾ ವಾಪಸ್ ನನ್ನನ್ನೇ ಕೇಳಿದ್ರು.

‘ಮುಗಲು’

‘ಲ್ಯಾಬ್ ಅಂದ್ರ?’

‘ಗೊತ್ತಿಲ್ಲ’

‘ಲ್ಯಾಬ್ ಅಂದ್ರ ಲ್ಯಾಬರೊಟರಿ ಅಂತ ಪೂರ್ತಿ ಶಬ್ದ. ಹಂಗಂದ್ರ ಪ್ರಯೋಗ ಮಾಡುವಂಥಾ ಜಾಗಾ ಅಂತರ್ಥ. ಮ್ಯಾಲೆ ಅಂತರಿಕ್ಷದಾಗ ಅಂದ್ರ ಆಕಾಶದಾಗ ಪ್ರಯೋಗಸಾಲಿ ಕಟ್ಟ್ಯಾರ ಅಮೇರಿಕಾದವ್ರು. ಅಲ್ಲಿಂದ ಸೂರ್ಯಾನ ಬಗ್ಗೆ ಹೆಚ್ಚಿಗೆ ತಿಳ್ಕೊಳ್ಳಾಕ, ಭೂಮಿ ಮ್ಯಾಲೆ ಏನೇನಾಕ್ಕತಿ ಅನ್ನೂದನ್ನ ತಿಳ್ಕೊಳ್ಳಾಕ ಪ್ರಯತ್ನ ಮಾಡತಾರ. ಆದ್ರ ಅದು ಈಗ ಏನೋ ಪ್ರಾಬ್ಲಮ್ ಆಗಿ ಬೀಳಾಕತ್ತತಿ’

ಅಪ್ಪಾ ಸಮಾಧಾನದಿಂದ ವಿವರಿಸಿದರು. ನಾವು ಎಂಟೂ ಜನ ಮಕ್ಕಳು ಕಣ್ಣು ಬಾಯಿ ಬಿಟ್ಕೊಂಡು ಕೇಳುತ್ತಿದ್ದೆವು. ವಿವರ ಕೇಳಿ ನನ್ನ ತಲೆ ಕೆಟ್ಟು ಮೊಸರು ಗಡಿಗೆ ಆಗೋಯ್ತು! ಮೊದಲನೇದಾಗಿ ‘ಮುಗಲಾಗ ನೆಲಾನೇ ಇರಂಗಿಲ್ಲ ಅಂದ ಮ್ಯಾಲೆ, ಅಲ್ಲಿ ಹೆಂಗ ಪ್ರಯೋಗಸಾಲಿ ಕಟ್ಟಾಕ ಸಾಧ್ಯ?! ಹುಚ್ಚರಗತೆ ಅಮೇರಿಕಾದವ್ರು ಹಂಗ ಮ್ಯಾಲೆ ನೆಲಾ ಇಲ್ಲದ ಜಾಗಾದಾಗ ಹೋಗಿ ಕಟ್ಟಿದ್ದಕ್ಕs ಈಗದು ಬೀಳಾಕತ್ತಿರ್ಬೇಕು’, ‘ಭೂಮಿ ಮ್ಯಾಲೆ ಏನಾಕ್ಕತಿ ಅಂತ ತಿಳ್ಕೊಳ್ಳಾಕ ಭೂಮಿ ಮ್ಯಾಗ ಓಡಾಡಬೇಕು. ಅದು ಬಿಟ್ಟು ಹೋಗಿ ಮುಗಲಾಗ ಕುಂತ ತಿಳ್ಕೋತೀನಿ ಅಂದ್ರ ಹುಚ್ಚರಾಟಿದು. ಎಷ್ಟರ ದಡ್ಡರದಾರ ಅಮೇರಿಕಾದವ್ರು!

‘ಅಲ್ಲಾ, ಅಮೇರಿಕಾದವ್ರು ಸ್ಕೈಲ್ಯಾಬ್ ಕಟ್ಟ್ಯಾರಂದ ಮ್ಯಾಲೆ ಅದು ಬೀಳಂಗಿದ್ದ್ರ ಅವ್ರ ದೇಶದಾಗ ಬೀಳಬೇಕು. ಅದು ಬಿಟ್ಟು ಭಾರತ್ ಮ್ಯಾಲೆ ಯಾಕ ಬೀಳಬೇಕು?!!’ ಹೀಗೆ ತುಂಬಾ ಬುದ್ದಿವಂತೆ ಎಂಬ ಪೆದ್ದುಪೆದ್ದು ಯೋಚನೆಗಳು ನನ್ನವು!

ಮುಂದೆ ಬರ್ತಾ ಬರ್ತಾ ಒಮ್ಮೆ ಅದು ಸುಳ್ಳು ಸುದ್ದಿ ಅಂತಲೂ, ಇನ್ನೊಮ್ಮೆ ಇನ್ನೆಲ್ಲೋ ಬಿದ್ದಿದೆ, ನಮ್ಮ ಗಂಡಾಂತರ ಕಳೀತು ಅಂತಲೂ ಮಾತಾಡಿಕೊಳ್ಳುತ್ತಾ ಜನ ನಿತ್ಯದ ಸಾಮಾನ್ಯ ಬದುಕಿಗೆ ಮರಳಿದರು. ಆ ಸ್ಕೈಲ್ಯಾಬ್ ಬಿದ್ದಿತ್ತು. ಆದರೆ ನನ್ನ ತಲೆಯೊಳಗಿನ ಸ್ಕೈಲ್ಯಾಬ್ ಮಾತ್ರ ಆಗಿನ ನನ್ನ ಜಾಣತನವನ್ನು ಕೊಂಡಾಡುತ್ತ ಈಗಲೂ ಅಣಕಿಸುತ್ತಿರುತ್ತದೆ.

ಒಮ್ಮೆ ಮಾಜಿ ಪ್ರಧಾನಮಂತ್ರಿಗಳಾದ ಶ್ರೀಮತಿ ಇಂದಿರಾ ಗಾಂಧಿಯವರು ಗುಲ್ಬರ್ಗಾದಿಂದ ಬಿಜಾಪುರಕ್ಕೆ ಮೋರಟಗಿ ಮೇಲಿಂದ ಹಾಯ್ದು ಹೋಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತು. ಬಹುಶಃ ಅದು ೧೯೭೯ರ ಅಂತ್ಯದ ವೇಳೆಗೋ ಅಥವಾ ೧೯೮೦ರ ಆರಂಭದಲ್ಲೋ ಇರಬೇಕು. ಎಮರ್ಜನ್ಸಿ ಘೋಷಿಸಿ ಜನರ ಕೋಪಕ್ಕೆ ತುತ್ತಾಗಿದ್ದ ಇಂದಿರಾ ಗಾಂಧಿಯವರು ಮುಂದೆ ಮೂರೇ ವರ್ಷದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದ್ದರು. ಆ ಸಮಯದಲ್ಲಿ ನಡೆದ ಎಲೆಕ್ಷನ್ನಿನ ಪ್ರಚಾರಕ್ಕಾಗಿ ಹೊರಟಿದ್ದರೆಂದು ಕಾಣುತ್ತದೆ.

ಬೆಳಿಗ್ಗೆಯಿಂದ ಊರಿನ ಪ್ರಮುಖರು ಮತ್ತು ಜನರು ಅವರ ದರ್ಶನಕ್ಕಾಗಿ ಹೂವಿನ ಹಾರಗಳೊಡನೆ ಕಾಯತೊಡಗಿದರು. ನಮ್ಮ ಮನೆ ಮತ್ತು ಅಪ್ಪಾ ಕೆಲಸ ಮಾಡುವ ಸರಕಾರಿ ಆಸ್ಪತ್ರೆ ಬಸ್ ಸ್ಟ್ಯಾಂಡಿಗೆ ತುಂಬಾ ಸಮೀಪದಲ್ಲೇ ಇದ್ದುದರಿಂದ ಊರ ಗಣ್ಯರು, ಅವರ ಮನೆಯ ಹೆಣ್ಣುಮಕ್ಕಳು ನಮ್ಮ ಮನೆಯಲ್ಲಿ ಜಮಾಯಿಸಿದ್ದರು. ಹೆಣ್ಣುಮಕ್ಕಳು ಅವ್ವನ ಜೊತೆಗೆ ಒಂದು ಪಡಸಾಲಿಯಲ್ಲಾದರೆ ಇನ್ನೊಂದು ಪಡಸಾಲಿಯಲ್ಲಿ ಅಪ್ಪಾನ ಜೊತೆ ಗಂಡಸರು.

ಮೋರಟಿಗಿಗೆ ಆಗ ಬಸ್ ನಿಲ್ದಾಣದ ಕಟ್ಟಡವೇ ಇರಲಿಲ್ಲ. ಊರ ಬದಿಗೆ, ಬಸ್ಸು ಲಾರಿಗಳು ಓಡಾಡುವ ಮುಖ್ಯ ರಸ್ತೆಗಂಟಿಕೊಂಡಂತೆ ನಾಲ್ಕಾರು ಹೊಟೆಲ್ಲುಗಳು, ಎರಡು ಪಾನ್ಪಟ್ಟಿ ಅಂಗಡಿಗಳಿದ್ದವು. ಅವುಗಳಿಂದಾಗಿಯೇ ಅದು ಬಸ್ ಸ್ಟ್ಯಾಂಡಿನ ಜಾಗವೆಂದು ಗುರುತಿಸಲ್ಪಟ್ಟಂತೆ ಬಸ್ಸುಗಳೆಲ್ಲ ಅಲ್ಲಿ ನಿಲ್ಲುತ್ತಿದ್ದವು. ಅಥವಾ ಬಸ್ಸುಗಳು ಅಲ್ಲಿ ನಿಲ್ಲುತ್ತಿದ್ದರಿಂದ ಅವೆಲ್ಲ ಹುಟ್ಟಿಕೊಂಡವುಗಳೆಂದರೆ ಹೆಚ್ಚು ಸರಿಯಾದೀತು.

ಹೊಟೆಲ್ಲುಗಳೆಂದರೆ ಇಲ್ಲಿ ನೀವು ಕಲ್ಲಿನ ಅಥವಾ ಇಟ್ಟಿಗೆಯ ಕಟ್ಟಡಗಳನ್ನು ಕಲ್ಪಿಸಿಕೊಳ್ಳುವಂತಿಲ್ಲ. ಅವು ಚೊಗಚಿ ಬರ್ಲು ಇಲ್ಲವೇ ಜೋಳದ ಕಣಿಕೆಯನ್ನು ಒತ್ತಾಗಿ ಪೇರಿಸಿ, ಬೀಳದಂತೆ ಅಡ್ಡಡ್ಡ ಗಳಗಳನ್ನು ಕಟ್ಟಿ ಗೋಡೆ ಮಾಡಿ, ಮೇಲೆ ಪತ್ರಾಸ್ ಹಾಕಿ ನಿರ್ಮಿಸಿಕೊಂಡ ಹೊಟೆಲ್ಲುಗಳು. ಹಿಂಬದಿಯಲ್ಲಿ ಪೂರಿ ಭಾಜಿ, ಪುಟಾಣಿ ಚಟ್ನಿ, ಮಿಸ್ಸಳ್ ಗಾಗಿ ಚೋಡಾ, ಸೇವ್, ಚಾ, ಕೇಟಿ ಮಾಡಲು ಜಾಗ ಬಿಟ್ಟುಕೊಂಡು ಮುಂದಿನ ಭಾಗದಲ್ಲಿ ಎರಡರಿಂದ ನಾಲ್ಕು ಬಾಕುಗಳು ಟೇಬಲ್ಲುಗಳನ್ನು ಹಾಕಿರುತ್ತಿದ್ದರು. ಆ ಹೊಟೆಲ್ಲುಗಳ ಹಿಂದಿನ ರಸ್ತೆಯ ಇನ್ನೊಂದು ಬದಿಗೆ ನಮ್ಮ ಮನೆ.

ಬೆಳಿಗ್ಗೆಯೇ ಈ ದಾರಿಯಲ್ಲಿ ಬರುತ್ತಾರೆ ಎಂದ ಇಂದಿರಾ ಗಾಂಧಿಯವರ ವಾಹನ ಮದ್ಯಾಹ್ನ ಒಂದು ಗಂಟೆಯಾದರೂ ಬರುತ್ತಿಲ್ಲ. ಉತ್ತರ ಕರ್ನಾಟಕದ ಮದ್ಯಾಹ್ನದ ಉರಿಬಿಸಿಲು ಹೇಗಿರುತ್ತೆ ಎಂದು ಎಲ್ಲರಿಗೂ ಕೇಳಿಯಾದರೂ ಗೊತ್ತಿರುತ್ತದೆ. ಅಂಥಾ ಉರಿಬಿಸಿಲಲ್ಲಿ ಜನ ಬಸ್ ಸ್ಟ್ಯಾಂಡಿನ ರಸ್ತೆ ಪಕ್ಕದಲ್ಲಿ ಅಲ್ಲಲ್ಲಿ ಇರುವ ಒಂದೆರಡು ಮರಗಳ ಕೆಳಗೆ, ಹೊಟೆಲ್ಲುಗಳಲ್ಲಿ ಗುಂಪು ಸೇರಿ ಕಾಯುತ್ತಿದ್ದಾರೆ. ಊಟದ ಹೊತ್ತು ಬೇರೆ. ತಾವು ಊಟಕ್ಕೆ ಮನೆಗೆ ಹೋದ ಸಮಯದಲ್ಲಿ ಇಂದಿರಾ ಗಾಂಧಿಯವರು ಬಂದುಬಿಟ್ಟರೆ!? ಮನೆಗೆ ಹೋಗದೆ ಜನ ಕಾಯುತ್ತಿದ್ದರು.

ಶಾಲೆಯಲ್ಲಿದ್ದ ನಾವುಗಳೂ ಆಗಾಗ ಮೇಷ್ಟ್ರುಗಳ ಹಿಂದಿಂದೇ ಹೊರಗೆ ಬಂದು ರಸ್ತೆಯೆಡೆಗೆ ಉದ್ದಕೆ ಕತ್ತು ಚಾಚಿ ನೋಡುತ್ತಾ, ಕ್ಲಾಸಿನಿಂದ ಆಚೆ ಬಂದಿದ್ದಕ್ಕೆ ಬೈಸಿಕೊಳ್ಳುತ್ತಾ ವಾಪಸ್ ಹೋಗಿ ಕುಳಿತುಕೊಳ್ಳುತ್ತಿದ್ದೆವು. ನನಗೋ ಇಂದಿರಾ ಗಾಂಧಿಯವರನ್ನ ನೋಡಲೇಬೇಕು ಎನ್ನುವ ತುಡಿತ. ಹಾಗಾಗಿ ಊಟದ ವಿರಾಮದ ವೇಳೆಯಲ್ಲಿ ಊಟಕ್ಕೆಂದು ಮನೆಗೆ ಬಂದವಳು ಮರಳಿ ಶಾಲೆಗೆ ಹೋಗಲಿಲ್ಲ. ಮನೆ ತುಂಬಾ ದೊಡ್ಡವರ ದಂಡು.

ಸುಮಾರು ಎರಡೂವರೆ ವೇಳೆಗೆ ದೂರದಿಂದ ಕಾರುಗಳು ಬರುತ್ತಿರುವುದು ಕಾಣುತ್ತಿದೆ ಎನ್ನುವ ಸುದ್ದಿ ಬಂತು. ಗಂಡಸರೆಲ್ಲರೂ ಎದ್ದು ಬಸ್ ಸ್ಟ್ಯಾಂಡಿನತ್ತ ಹೊರಟರು. ಅಲ್ಲಿಯವರೆಗೆ ಕಾದಿದ್ದ ಹೆಣ್ಣುಮಕ್ಕಳು ತಮ್ಮ ಗಂಡಂದಿರಿಂದ ಯಾವುದೇ ಸೂಚನೆ ಸಿಗದಾಗಿ ತಳಮಳಿಸುತ್ತ ನಮ್ಮ  ಮನೆಯಲ್ಲೇ ಉಳಿದರು. ನನ್ನ ತಮ್ಮಂದಿರು ಮೂವರೂ ಅಪ್ಪಾನ ಕಣ್ಣು ತಪ್ಪಿಸಿ ಅದಾಗಲೇ ಬಸ್ ಸ್ಟ್ಯಾಂಡಿಗೆ ಓಡಿಯಾಗಿತ್ತು. ನಾನು ಅಪ್ಪಾನ ಹಿಂದೆ ಹೊರಟೆ. ‘ಬರಬ್ಯಾಡ ಬರೇ ಗಂಡಸರಿರ್ತಾರಲ್ಲಿ’ ಅಂದ ಅಪ್ಪಾನ ಮಾತಿಗೆ ತಡೆದು ನಿಂತವಳು, ಅಪ್ಪಾ ತುಸು ಕಣ್ಮರೆಯಾಗುತ್ತಲೇ ರ್ರೊಂಯ್ ಎಂದು ಮುಖ್ಯರಸ್ತೆ ಕಡೆಗೆ ಓಡಿದೆ.

ರಸ್ತೆಯ ಎರಡೂ ಕಡೆ ಜನ ಒತ್ತೊತ್ತಿ ನಿಂತಿದ್ದಾರೆ. ದೂರದಲ್ಲಿ ಒಟ್ಟಿಗೆ ನಾಲ್ಕಾರು ಕಾರುಗಳು ಬರುತ್ತಿರುವುದು ಕಾಣಿಸಿತು. ಯಾವುದರಲ್ಲಿ ಇಂದಿರಾ ಗಾಂಧಿಯವರು ಇರಬಹುದು? ಎನ್ನುವ ಗೊಂದಲ ಅಲ್ಲಿದ್ದವರಿಗೆಲ್ಲ. ಅಕಸ್ಮಾತ್ ಅವರಿಲ್ಲಿ ನಿಲ್ಲಿಸದೇ ಸೀದಾ ಹೋಗಿಬಿಟ್ಟರೆ? ಹಾಗಾಗಲು ಬಿಡಬಾರದು ಕಾರುಗಳನ್ನು ಅಡ್ಡಗಟ್ಟಿ ನಿಲ್ಲಿಸುವುದು ಎಂಬ ಚರ್ಚೆ ನಡೆಯುತ್ತಿತ್ತಲ್ಲಿ.

ಕಾರುಗಳು ಊರೆದುರು ಬರುತ್ತಿದ್ದಂತೆಯೇ ಮೊದಲ ಕಾರಿಗೆ ಜನ ಅಡ್ದಗಟ್ಟಿದರು. ಇಂದಿರಾ ಗಾಂಧಿಯವರು ಮೂರನೇ ಕಾರಲ್ಲಿರುವುದಾಗಿಯೂ, ಅವರು ನಮ್ಮ ಊರಿನ ಜನರ ಕೋರಿಕೆಗೆ ಒಪ್ಪಿ ಎರಡು ನಿಮಿಷ ತಮ್ಮ ಕಾರು ನಿಲ್ಲಿಸಿ ಜನರನ್ನು ನೋಡಲು ಒಪ್ಪಿದ್ದಾರೆಂದೂ ಅವರು ಹೇಳಿದರೂ ಜನ ನಂಬದೆ ಕಾರಿನಲ್ಲಿ ಇಣುಕಿ ಅವರಿದರಲ್ಲಿಲ್ಲವೆಂದು ಖಾತ್ರಿಯಾದ ಮೇಲೆ ಆ ಕಾರನ್ನು ಹೋಗಗೊಟ್ಟು ಎರಡನೇ ಕಾರನ್ನು ಅಡ್ಡಗಟ್ಟಿ ಅಲ್ಲಿ ಮುಕರಿದರು. ಅದರ ಹಿಂದಿನ ಬಿಳಿ ಅಂಬಾಸೆಡರ್ ಕಾರಲ್ಲಿ ಇಂದಿರಾ ಗಾಂಧಿಯವರಿದ್ದುದು ನಿಜವಾಗಿತ್ತು. ಅಲ್ಲಿಯವರೆಗೆ ಅಪ್ಪಾನ ಕಣ್ಣು ತಪ್ಪಿಸಿ ಮರೆಯಲ್ಲಿ ನಿಂತಿದ್ದ ನನಗೀಗ ಪೇಚಾಟ! ಹೋದರೆ ಅಪ್ಪಾನಿಂದ ಗಜ್ಜು ಗ್ಯಾರಂಟಿ. ಹೋಗದೆ ಇದ್ದರೆ ಸಿಕ್ಕ ಅವಕಾಶ ತಪ್ಪುತ್ತದೆ. ಗೊಂದಲದಲ್ಲಿ ಹೊಯ್ದಾಡುತ್ತಲೇ ಓಡಿದೆ ಅಲ್ಲಿಗೆ. ಅಲ್ಲೋ ಪೂರ್ತಿ ದೊಡ್ಡವರ ಗುಂಪು, ಮಕ್ಕಳ್ಯಾರೂ ಕಾಣುತ್ತಿಲ್ಲ! ಅವರನ್ನೆಲ್ಲ ತಳ್ಳಿಕೊಂಡು ಮುನ್ನುಗ್ಗುವ ಧೈರ್ಯವಾಗದೆ ನಿಂತಲ್ಲಿಂದಲೇ ಹಿಂಬಡ ಎತ್ತರೆತ್ತರಿಸಿ ನೋಡಲು ಪ್ರಯತ್ನಿಸುತ್ತಲೇ ಇದ್ದೆ.

‘ಸ್ವಲ್ಪ ಸರೀರಿ, ನನಗ ಕಾಣಾವಲ್ರು, ಸ್ವಲ್ಪ ಸರೀರಿ’

ಸಂಕೋಚ ಮರೆತು ಅವಲತ್ತುಕೊಳ್ಳತೊಡಗಿದೆ. ಯಾರೋ ಒಬ್ಬರಿಗೆ ನನ್ನ ಮೇಲೆ ಕನಿಕರ ಉಕ್ಕಿ, ‘ಬಾ ಅವ್ವಿ ಇಲ್ಲಿ’ ಎಂದವರೇ ನನ್ನನ್ನು ಎತ್ತಿಕೊಂಡರು.

ಹಾಂ! ಇಂದಿರಾಜೀಯವರು ಎತ್ತಿದ ಒಂದು ಕೈ ಕಾಣಿಸಿತು! ಕಾರಿನ ಇನ್ನೊಂದು ಕಡೆಗೆ ಅವರಿದ್ದರು. ಎಲ್ಲರೆಡೆ ಕೈ ಬೀಸುತ್ತಿದ್ದರು. ಏನನ್ನೋ ಜೋರಾಗಿ ಹೇಳುತ್ತಿದ್ದಾರೆ, ಏನೆಂದು ಕೇಳಿಸುತ್ತಿಲ್ಲ. ಮುಖವೂ ಕಾಣುತ್ತಿಲ್ಲ! ಜನರು ಮುಗಿಬಿದ್ದು ಅವರನ್ನು ನೋಡಲು, ಹಾರ ಹಾಕಲು ಯತ್ನಿಸುತ್ತಿದ್ದರು. ಜನರನ್ನು ಅಡ್ಡಗಟ್ಟಿ ಇಂದಿರಾಜಿಯವರ ರಕ್ಷಣೆಗೆ ನಿಂತವರು, ಜನರು ತಂದ ಹಾರಗಳನ್ನು ಇಂದಿರಾ ಗಾಂಧಿಯವರಿಗೆ ತಲುಪಿಸುತ್ತಿದ್ದರು.

ಇಂದಿರಾಜೀ ಹಾರಗಳನ್ನು ಮತ್ತೆ ಜನರೆಡೆಗೇ ತೂರಿದ್ದನ್ನು ಜನ ಸಮೂಹ ಧನ್ಯತೆಯಿಂದ ತಾ ಮುಂದು ನಾ ಮುಂದು ಎಂದು ದಕ್ಕಿಸಿಕೊಳ್ಳಲು ನೋಡುತ್ತಿತ್ತು. ನನಗೋ ಈಗಲೂ ಅವರ ಮುಖ ಕಾಣಿಸುತ್ತಿಲ್ಲ ಜೊತೆಗೆ ಅಷ್ಟು ಪ್ರೀತಿಯಿಂದ ಜನರು ತಂದ ಹಾರಗಳನ್ನು ಅವರು ಮರಳಿ ಎಸೆಯುತ್ತಿರುವುದೇತಕ್ಕೆ ಎಂದು ತಿಳಿಯುತ್ತಿಲ್ಲ. ಪುಟ್ಟ ಸ್ಟೂಲೊಂದರ ಮೇಲೆ ನಿಂತಿದ್ದರೆಂದು ಕಾಣುತ್ತದೆ ಇಂದಿರಾಜೀ, ಹಾಗಾಗಿ ಅವರ ಕೈ ಮಾತ್ರ ಕಾಣುತ್ತಿತ್ತು. ನನ್ನನ್ನು ಎತ್ತಿಕೊಂಡವರು ಹತ್ತು ವರ್ಷದ ನನ್ನನ್ನು ಅದೆಷ್ಟು ಹೊತ್ತು ತಾನೇ ಹಾಗೇ ಎತ್ತಿಕೊಂಡಿರಲು ಸಾಧ್ಯ! ಉಶ್ಶ್ಯಪ್ಪಾ ಎಂದು ಕೆಳಗಿಳಿಸಿದರು.

‘ನನಗವ್ರು ಕಾಣಸ್ಲ ಇಲ್ರೀ!’ ಎಂದು ಅಳುಮೋರೆಯಿಂದ.

‘ಏ ಸಾಕ್ ಹೋಗೋವಾ ಇನ್ನ ಮನಿಗೆ’ ಎಂದವರೇ ಜನರ ನಡುವೆ ನುಗ್ಗಿ ಮರೆಯಾದರು. ಮತ್ತ್ಯಾರಾದರೂ ನನಗೆ ಇಂದಿರಾ ಗಾಂಧಿಯವರನ್ನು ತೋರಿಸಬಹುದೇ ಎಂದು ಜನರ ಮೋರೆಗಳನ್ನು ನೋಡುತ್ತಿದ್ದೆ. ಯಾರಿಗೂ ನನ್ನತ್ತ ಗಮನವಿಲ್ಲ. ನಿರಾಸೆಯಿಂದ ನಾಲ್ಕೈದು ಹೆಜ್ಜೆ ಹಿಂದೆ ಇಟ್ಟೆನೋ ಇಲ್ವೋ ಕಾರುಗಳು ಭರ್ರೆಂದು ಹೊರಟೇಬಿಟ್ಟವು.

ಮುಂದೆ ನಾನವರನ್ನು ನೋಡಿದ್ದು ಟಿವಿಯಲ್ಲಿ, ರಾಷ್ಟ್ರದ ಬಾವುಟ ಹೊದ್ದು ಮಲಗಿದ ಸ್ಥಿತಿಯಲ್ಲಿ… ತುಂಬಾ ಅತ್ತಿದ್ದೆ ನಾನಾಗ. ನನ್ನ ಮುತ್ತಜ್ಜಿಯೂ ಸೇರಿದಂತೆ ಮನೆಯವರೆಲ್ಲ ಹನಿಗಣ್ಣಲ್ಲೇ ದೂರದರ್ಶನದಿಂದ ನೇರ ಪ್ರಸಾರವಾಗುತ್ತಿದ್ದ ಅವರ ಅಂತಿಮ ಯಾತ್ರೆಯ ದೃಶ್ಯವನ್ನು ನೋಡುತ್ತಿದ್ದೆವು. ನಾ ಇಷ್ಟಪಡುವ ಧೀಮಂತರಲ್ಲಿ ಇಂದಿರಾ ಗಾಂಧಿಯೂ ಒಬ್ಬರು. ಹಾಗಾಗಿ ಅಂದು ಅವರು ಕಣ್ಣಳತೆ ದೂರದಲ್ಲೇ ಇದ್ದರೂ ನೋಡಲು ಸಾಧ್ಯವಾಗದೆ ಹೋದ ಅಸಮಾಧಾನ ಇಂದಿಗೂ ನನ್ನಲ್ಲಿದೆ.

‍ಲೇಖಕರು Avadhi

May 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಅಮೃತಾ ಎಂ ಡಿ

    ತುಂಬಾ ಚೆಂದವುಂಟು ಮ್ಯಾಮ್

    ಪ್ರತಿಕ್ರಿಯೆ
  2. ವಿಶ್ವನಾಥ ಎನ್ ನೇರಳಕಟ್ಟೆ

    ಶ್ರೀಮತಿ ಇಂದಿರಾ ಗಾಂಧಿ ಅವರನ್ನು ಪ್ರಥಮ ಬಾರಿಗೆ ಕಂಡ ಸಂದರ್ಭವನ್ನು ತುಂಬಾ ಕುತೂಹಲಕರವಾಗಿ, ಸ್ವಾರಸ್ಯಪೂರ್ಣವಾಗಿ ಬರೆದಿದ್ದೀರಿ. ಬಳಸಿರುವ ಭಾಷೆ ಆಪ್ಯಾಯಮಾನವಾಗಿದೆ. ಸೊಗಸಾದ ಅಂಕಣ ಬರೆದಿರುವ ತಮಗೆ ಅಭಿನಂದನೆಗಳು ಮೇಡಮ್.

    ಪ್ರತಿಕ್ರಿಯೆ
  3. Akshata ದೇಶಪಾಂಡೆ

    ಸ್ಕಾಯಲಾಬ್ ಬಿಳತ್ತೆ ಅನ್ನೋ ವದಂತಿ ಹಬ್ಬಿದ್ದಾಗ ನಾವು ಮೈಸೂರಲ್ಲಿ ಇದ್ವಿ
    ದಿನಾ ಹೆದರಿಕೊಂಡೆ ಶಾಲೆಗೆ ಹೋಗ್ತಿದ್ವಿ. ಮನೆಗೆ ಬರೋವಾಗ್ಲೂ ಅದೇ ಅವಸ್ಥೆ. ಅದೆಲ್ಲೋ ಸಮುದ್ರದಲ್ಲಿ ಬಿತ್ತು ಅಂದಾಗ ಸಲೀಸಾಗಿ ಉಸ್ರಾಡಿದ್ವಿ. ಓದ್ತಾ ಓದ್ತಾ ನಾನು ಹಳೇ ನೆನಪಿನಲ್ಲಿ ಕಳೆದುಹೋದೆ
    ಉತ್ತಮವಾದ ಬರಹ ಜಯಾ

    ಪ್ರತಿಕ್ರಿಯೆ
  4. ಗಣೇಶ್ ಕುಮಾರ್, ಮುಂಬಯಿ 

    ಇಂದಿರಾ ಗಾಂಧಿ ನಮ್ಮೂರಿಗೂ ಬಂದಿದ್ರು. ನಾವು ಶಾಲೆಯಿಂದ ಮಕ್ಕಳೆಲ್ಲ ಓಡೋಡಿ ಹೋಗಿದ್ದೆವು ಆಕೆಯನ್ನು ನೋಡಲು. ಅದೂ ಒಂದು ಮರೆಯಲಾರದ ನೆನಪು ನನಗೆ. ಆ ದಿನದ ನೆನಪುಗಳನ್ನು ಕೆದಕಿ ಬರೆದರೆ ಬಹುಷಃ, ಒಂದು ಕಥೆಯೇ ಆಗಬಹುದು….
    ಹ್ನಾಂ , ಮುಂದಿನ ಸಂಚಿಕೆಗೆ ಕಾಯಬೇಕಿನ್ನೊಂದು ವಾರ…. 

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: