ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಪಿ ಬಸವರಾಜು ಹೊಸ ಕವಿತೆ- ದಂಡ ಹಿಡಿದು ನಿಂತಿದ್ದಾನೆ ದೊರೆ

ಜಿ ಪಿ ಬಸವರಾಜು

**

ದಂಡ ಹಿಡಿದು ನಿಂತಿದ್ದಾನೆ

ದೊರೆ

ಮಂದಿರದ ಹೆಬ್ಬಾಗಿಲಲ್ಲಿ

ಮೊಳಗುತ್ತಿದೆ ಗಂಟೆ ಸದ್ದು

ಊರು ಕೇರಿಯ ತುಂಬಿ

ಕಾಡು ಕಣಿವೆಯ ತುಂಬಿ

ಕೇಳುತ್ತಿಲ್ಲ

ಯಾವ ಮಾತು ಯಾರಿಗೂ

ಮಾತಲ್ಲ ದೊರೆಯದು

ಪಾಲಿಸಬೇಕು ಆಣತಿಯ

ಪಡಿನುಡಿಗಿಲ್ಲ ಎಡೆ

ನಡೆಯಬೇಕು ಶಿರಬಾಗಿ

ಮಾತಲ್ಲ, ನಡೆ, ನಡೆಯಬೇಕು

ಮುಂದೆ ಮುಂದೆ ಮಂದೆ

ದೊರೆಯ ಮಾತು

ಒಂದೇ

ಒಂದೇ ಭಾಷೆ

ಒಂದೇ ನಾಡು

ಒಂದೇ ಮಂದಿರ

ಒಂದೇ ದೈವ

ಉಡು ತೊಡು

ಒಂದೇ ಬಟ್ಟೆ

ತೊಟ್ಟುಕೊ ಒಂದೇ ಬಟ್ಟೆ

ಕಣ್ಣು ತುಂಬಿಕೊ ಒಂದೇ ಬಣ್ಣ

ʼಅನ್ಯಕ್ಕೆಳಸಿದರೆ

ಕಿವಿ ಮೂಗ ಕೊಯ್ವʼ

ತೆಗೆದೆಸೆ ಕಸ ತಲೆಯಿಂದ

ಬಿಡು ಇನ್ನೊಂದು ಮತ್ತೊಂದು

ಬೇರಿಲ್ಲ ದೈವ

ನೋಡಿಲ್ಲಿ, ಈ ನಾಡಿನಲ್ಲಿ

ಎಲ್ಲವೂ ಒಂದೇ

ಚರಿತ್ರೆ ಪುರಾಣ ಪುಣ್ಯಕತೆ

ಕೆಡುಕಿನ ತಲೆ ಕಡಿ

ಒಳಿತನು ಮೆರೆಸು

ಹೇಳುತ್ತಾನೆ ದೊರೆ

ಯಾವುದು ಒಳಿತು

ಯಾವುದು ಕೆಡುಕು

ರಾಮ-ರಾವಣರ ಕತೆ

ಪುರಾತನವಲ್ಲ  ಅಣ್ಣ

ಈಗಲೂ ನಡೆದಿದೆ ಯುದ್ಧ

ರಾಮ ಹೂಡಿದ್ದಾನೆ ಬಾಣ

ಕೊಡು ತಲೆ ಬಲಿದಾನಕ್ಕೆ

ಹರಿವ ನೆತ್ತರನು ಬೊಗಸೆಯಲ್ಲಿ ತುಂಬಿ

ಬಿಡು ತರ್ಪಣವ ಹಿರಿ ಹಿರಿಯರಿಗೆ

ಬಗೆದು ನೋಡು

ಅಗೆದಗೆದು ನೋಡು

ಸಿಗುವ ಮೂಳೆಗಳ ಮೇಲೆ

ಬರೆದ ಕತೆಯೂ ಅದೇ

ಕಟ್ಟು ನಿಜದ ನಾಡನು

ಹಾಡು ಹಳೆಯ ಹಾಡನು

ನಾವೆಲ್ಲ ಒಂದೇ ನಾವೆಲ್ಲ ಒಂದೇ

ಅಪಸ್ವರವೆತ್ತಿದರೆ

ಕೆಡುವುದು ಕಚೇರಿ

ನಡೆ ಆಚೆ

ಅನಂತವಾಗಿದೆ ಲೋಕ

ಕಟ್ಟಿಕೊ ನಿನ್ನದೇ ನಾಡು

ಕಟ್ಟಿಕೊ ನಿನ್ನದೇ ಭಾಷೆ

ಕಟ್ಟಿಕೊ ನಿನ್ನದೇ

ಮಂದಿರವೊ ಮಸೀದಿಯೊ

ಚರ್ಚೊ ವಿಹಾರವೊ ಅಲ್ಲಿ

ವಿಕಾರಗೊಳಿಸಬೇಡ

ಈ ಪುಣ್ಯ ನಾಡನ್ನು

ಅವತಾರಿಗಳು ನಡೆದಾಡಿದ ಬೀಡನ್ನು

ಎತ್ತಿಕೊ ಪವಿತ್ರ ಮಣ್ಣನ್ನು

ಹಣೆಗೊತ್ತಿಕೊ

 ನಡೆಮುಂದೆ ನಡೆಮುಂದೆ ನಡೆಮುಂದೆ

                    

‍ಲೇಖಕರು avadhi

30 January, 2024

1 Comment

  1. Mohan Habbu

    ವರ್ತಮಾನದ ವಾಸ್ತವ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading