ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಪಿ ಬಸವರಾಜು ಕಾಲಂ : ಸಾಹಿತ್ಯ ಮತ್ತು ಮಾಧ್ಯಮಗಳು

ಸಾಹಿತ್ಯ ಮತ್ತು ಮಾಧ್ಯಮಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವಂತೆ ಕಾಣಿಸುತ್ತವೆ. ಒಂದು ಅಂತರಂಗದ ಜೊತೆ ಸಖ್ಯ ಬೆಳೆಸಿದರೆ, ಇನ್ನೊಂದು ಬಹಿರಂಗದಲ್ಲಿ, ಜನ ಸಮುದಾಯದ ನಡುವೆ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ನೋಡುತ್ತದೆ. ಆದರೆ ಇವೆರಡೂ ಒಂದನ್ನು ಇನ್ನೊಂದು ದೂರವಿಡದೆ ಕ್ರಿಯಾಶೀಲವಾಗಿವೆ. ಯಾವುದೇ ಸಾಹಿತ್ಯ, ಕಲೆ ಜನರ ಬಳಿಗೆ ಹೋಗದಿದ್ದರೆ ಅದಕ್ಕೆ ಯಾವ ಅರ್ಥವೂ, ಸಾರ್ಥಕ್ಯವೂ ಸಾಧ್ಯವಾಗುವುದಿಲ್ಲ. ಜನ ಸಮುದಾಯದ ಬಳಿಗೆ ಸಾಹಿತ್ಯ ಮತ್ತು ಕಲೆಗಳನ್ನು ಕೊಂಡೊಯ್ಯುವ ಕೆಲಸವನ್ನು ಮಾಧ್ಯಮಗಳೇ ಮಾಡಬೇಕು. ಅನ್ಯ ದಾರಿಯೇ ಇಲ್ಲ.

ಮಾಧ್ಯಮದ ಸ್ವರೂಪ ಒಂದೊಂದು ಕಾಲಕ್ಕೆ ಒಂದೊಂದು ರೀತಿಯಲ್ಲಿದ್ದುದನ್ನು, ನಿರಂತರ ಬದಲಾವಣೆಯಾಗುತ್ತಿರುವುದನ್ನು ನಾವು ನೋಡುತ್ತಬಂದಿದ್ದೇವೆ. ಸಂಜೆ ಹೊತ್ತು ಮನೆ ಜಗಲಿಯ ಮೇಲೆ ಕುಳಿತು ಕತೆ ಹೇಳುತ್ತಿದ್ದ ಹಳ್ಳಿಯ ಹಿರಿಯರೇ ಒಂದು ಕಾಲಕ್ಕೆ ಈ ಮಾಧ್ಯಮವಾಗಿದ್ದರು. ಎಲ್ಲ ಪುರಾಣ ಕತೆಗಳೂ ಅವರ ಮಾತಿನಲ್ಲಿ ಹೊಸ ಅರ್ಥ ಮತ್ತು ಧ್ವನಿಗಳನ್ನು ಪಡೆದುಕೊಳ್ಳುತ್ತಿದ್ದವು. ಹಳ್ಳಿಗಳಲ್ಲಿ ಶನಿದೇವರ ಕತೆಗಳನ್ನು ಹೇಳುವವರು, ಸಾಂಗತ್ಯಗಳನ್ನು ‘ಓದುವವರು’ ಕೂಡಾ ಈ ಮಾಧ್ಯಮದ ಪಾತ್ರವನ್ನು ವಹಿಸುತ್ತಿದ್ದರು. ತಮ್ಮ ಧ್ವನಿಯ ಮಾಧುರ್ಯದಲ್ಲಿ, ಲಯ, ಗತಿಗಳ ಏರಿಳಿತಗಳಲ್ಲಿ ಹಲವಾರು ‘ಕತೆ’ಗಳನ್ನು ಇಡೀ ರಾತ್ರಿ ಹಾಡಿ ಸಮುದಾಯವನ್ನು ಎಚ್ಚರವಾಗಿಟ್ಟಿರುತ್ತಿದ್ದ ಹಾಡುಗಾರರೂ ಸಮರ್ಥ ಮತ್ತು ಪರಿಣಾಮಕಾರಿ ಮಾಧ್ಯಮವೇ ಆಗಿದ್ದರು. ಹಾಡು, ಕುಣಿತ, ಕತೆ, ಎಲ್ಲವನ್ನೂ ಒಳಗೊಂಡಿದ್ದ ನಾಟಕಗಳು ಅತ್ಯಂತ ಪ್ರಭಾವೀ ಮಾಧ್ಯಮವಾಗಿ ಜನಪ್ರಿಯವಾದುದನ್ನು ನಾವೆಲ್ಲ ಕಂಡಿದ್ದೇವೆ. ಇವತ್ತಿಗೂ ನಾಟಕ ಜನರನ್ನು ಸೆಳೆದುಕೊಳ್ಳಬಲ್ಲ ಮಾಧ್ಯಮವೇ.

ವಿಜ್ಞಾನದ ಹೊಸ ಹೊಸ ಆವಿಷ್ಕಾರಗಳಾದಂತೆ ಮಾಧ್ಯಮಗಳ ಹೊಸ ಹೊಸ ಸಾಧ್ಯತೆಗಳೂ ಹೆಚ್ಚಿದವು. ಚಲನಚಿತ್ರ ಬಂದಾಗ ಅದೊಂದು ಅದ್ಭುತ, ರೋಮಾಂಚಕ ಮಾಧ್ಯಮವಾಗಿ ಸಮುದಾಯವನ್ನು ಸೆಳೆದುಕೊಂಡಿತು. ಈ ಮಾಧ್ಯಮದ ಹೊರ ರೂಪ ಬೇರೆಯಾದರೂ, ಅದರ ಅಂತರಂಗದಲ್ಲಿ ಸಾಹಿತ್ಯವೇ ಪ್ರಧಾನ ಎಳೆಯಾಯಿತು. ಕತೆ, ಹಾಡು, ಸಂಭಾಷಣೆ, ಚಿತ್ರ, ಚಲನೆ ಇತ್ಯಾದಿ ಅಂಶಗಳು ಕೂಡಿ ಚಲನಚಿತ್ರವಾಯಿತು. ಕನ್ನಡದ ಮಹತ್ವದ ಕವಿಗಳ ಕವಿತೆಗಳನ್ನು ಚಲನಚಿತ್ರಗಳ ಹಾಡುಗಳಾಗಿ ಬಳಸಿಕೊಳ್ಳುವುದೂ ಆರಂಭವಾಯಿತು. ಚಲನಚಿತ್ರದ ಸನ್ನಿವೇಶವನ್ನು ಗಮನಿಸಿ ಹಾಡು ಬರೆಯುವ ಪದ್ಧತಿಯೂ ರೂಢಿಗೆ ಬಂತು. ಚಲನಚಿತ್ರಗಳಿಗೆ ಗೀತೆ ರಚಿಸುವುದೇ ಒಂದು ಪ್ರತ್ಯೇಕ ಪ್ರಕಾರವಾಗಿ ಅಸ್ತಿತ್ವ ಪಡೆಯಿತು. ಹಾಗೆಯೇ ಚಲನಚಿತ್ರಗಳಿಗಾಗಿ ಕತೆಗಳನ್ನು, ಚಿತ್ರಕತೆಗಳನ್ನು ಬರೆಯುವ ಪರಿಪಾಠವೂ ಬೆಳೆದುಬಂತು. ಜೊತೆಗೆ ಸಾಹಿತ್ಯದಲ್ಲಿ ಹೆಸರು ಮಾಡಿದ ಕಥೆ, ಕಾದಂಬರಿಗಳನ್ನು ಆಧರಿಸಿ ಚಿತ್ರನಿರ್ಮಿಸುವ ಪ್ರಯೋಗಗಳೂ ನಡೆದವು. ಕನ್ನಡದಲ್ಲಿಯೂ ಕೆಲವು ಸಾಹಿತ್ಯ ಕೃತಿಗಳು ಸಿನಿಮಾಗಳಾಗಿ ಹೆಚ್ಚು ಜನರನ್ನು ತಲುಪಿದವು. ಈ ಮಾಧ್ಯಮವೇ ಭಿನ್ನ ಮಾಧ್ಯಮವಾಗಿರುವ ಕಾರಣ, ಮುದ್ರಣ ಮಾಧ್ಯಮದಲ್ಲಿರುವ ಸಾಹಿತ್ಯ ಕೃತಿಯನ್ನು ಯಥಾವತ್ತಾಗಿ ತೆರೆಯಮೇಲೆ ತರುವುದು ಸಾಧ್ಯವಾಗದ ಮಾತು. ಇಂಥ ಸನ್ನಿವೇಶದಲ್ಲಿ ಸಾಹಿತ್ಯ ಕೃತಿ ಮತ್ತು ಅದನ್ನು ಆಧರಿಸಿದ ಚಲನಚಿತ್ರ ಪರಸ್ಪರ ಭಿನ್ನವಾಗಿರುವುದು ಸಹಜ. ಆದರೂ ಇವುಗಳಿಗೆ ಸಂಬಂಧಿಸಿದಂತೆ ವಾದ ವಿವಾದ ಹುಟ್ಟಿಕೊಂಡವು. ಸಾಹಿತಿ ಮತ್ತು ಚಿತ್ರನಿರ್ದೇಶಕರ ನಡುವೆ ಮಾತ್ರವಲ್ಲದೆ, ಸಾರ್ವಜನಿಕವಾಗಿಯೂ ವಾಗ್ವಾದಗಳು, ಸಂವಾದಗಳು ನಡೆದವು. ತ.ರಾ.ಸು. ಅವರ ಕಾದಂಬರಿ ‘ನಾಗರಹಾವು’ ಚಲನಚಿತ್ರವಾದಾಗ, ‘ನಾಗರಹಾವೋ, ಕೇರೆಯ ಹಾವೋ’ ಎಂದು ಪತ್ರಿಕೆಗಳಲ್ಲಿ ದೊಡ್ಡ ಚರ್ಚೆಯಾದದ್ದು, ಯು.ಆರ್. ಅನಂತಮೂರ್ತಿ ಅವರ ಕಾದಂಬರಿ ‘ಅವಸ್ಥೆ’ ಚಲನಚಿತ್ರವಾದಾಗ ವಿವಾದ ಹುಟ್ಟಿಕೊಂಡದ್ದು ಇನ್ನೂ ಹಲವರ ನೆನಪಿನಲ್ಲಿ ಉಳಿದಿದೆ. ಇಂಥ ವಾಗ್ವಾದಗಳ ಮೂಲಕ ಕೆಲವೊಮ್ಮೆ ಅರ್ಥಪೂರ್ಣ ವಿಚಾರ ವಿನಿಮಯ ಸಾಧ್ಯವಾದದ್ದೂ ಇದೆ. ಹಾಗೆಯೇ ಟಿವಿಗಳಲ್ಲಿ ಬರುವ ಧಾರವಾಹಿಗಳು, ಸಣ್ಣ ಕತೆಗಳ ಕಿರುತೆರೆಯ ರೂಪಗಳು, ಚರ್ಚೆಯನ್ನು ಹುಟ್ಟು ಹಾಕುತ್ತಲೇ ಇವೆ. ಸಾಹಿತ್ಯ ಎನ್ನುವುದು ಮುದ್ರಣ ಮಾಧ್ಯಮಕ್ಕೇ ಅಂಟಿಕೊಂಡಿರುವ ಕಾರಣ, ಇವತ್ತಿಗೂ ಆ ಹಿನ್ನೆಲೆಯಲ್ಲಿಯೇ ಕಿರುತೆರೆಯ ಕತೆಗಳನ್ನು, ಧಾರವಾಹಿಗಳನ್ನು ಗ್ರಹಿಸುವ ಅಭ್ಯಾಸ ನಮ್ಮಲ್ಲಿದೆ. ಅದೊಂದು ಭಿನ್ನವಾದ ಮಾಧ್ಯಮ, ಅಲ್ಲಿಯ ಗ್ರಹಿಕೆ, ಸೂಕ್ಷ್ಮತೆಗಳು ಬೇರೆಯೇ ಆಗಿರುತ್ತವೆ ಎಂದು ಗೊತ್ತಿದ್ದರೂ, ಮುದ್ರಣದಲ್ಲಿ ಓದಿದ ಸಾಹಿತ್ಯ ಕೃತಿಯೊಂದನ್ನು ಈ ಮಾಧ್ಯಮಕ್ಕೆ ಅಳವಡಿಸಿದಾಗ ಅದನ್ನು ಪರಿಭಾವಿಸುವ ನಮ್ಮ ಕ್ರಮ ಸಂಪೂರ್ಣ ಬದಲಾಗುವುದಿಲ್ಲ; ಅದರ ವಿಮರ್ಶೆಗೆ, ವಿವೇಚನೆಗೆ ಬಳಸುವ ಮಾನದಂಡಗಳೂ ಬೇರೆ ಆಗುವುದಿಲ್ಲ.

ಕೇವಲ ಧ್ವನಿಯ ಮೂಲಕವೇ ಜನರ ಬಳಿಗೆ ನಡೆದ ರೇಡಿಯೋ ಮತ್ತೊಂದು ಸೋಜಿಗದ ಮಾಧ್ಯಮವಾಯಿತು. ಅದರ ಚರ್ಚೆ ಪ್ರತ್ಯೇಕ ನಡೆಯುವುದರಿಂದ ಅದನ್ನಿಲ್ಲಿ ನಾನು ಪ್ರಸ್ತಾಪಿಸಬೇಕಾಗಿಲ್ಲ.

ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಇತ್ತೀಚಿನ ದಶಕಗಳಲ್ಲಾದ ಕ್ರಾಂತಿಕಾರಕ ಬೆಳವಣಿಗೆಗಳು ಇನ್ನಷ್ಟು ಹೊಸ ಹೊಸ ಮಾಧ್ಯಮಗಳನ್ನು, ಅವುಗಳ ಪ್ರಚಂಡ ಶಕ್ತಿಯನ್ನು ತೋರಿಸಿದವು. ಟಿವಿಯ ನೂರಾರು ಚಾನಲ್ಗಳು, ಇಂಟರ್ನೆಟ್ನ ಸಾಧ್ಯತೆಗಳು, ಬ್ಲಾಗ್ಗಳು, ಜಾಲತಾಣಗಳು ಹೀಗೆ ಹಲವು ಸಾಧ್ಯತೆಗಳು ಮಾಧ್ಯಮದ ಸ್ವರೂಪವನ್ನೇ ಬದಲಾಯಿಸಿಬಿಟ್ಟವು. ಇಂಟರ್ನೆಟ್, ಬ್ಲಾಗ್ ಮತ್ತು ಜಾಲತಾಣಗಳು ಹುಟ್ಟು ಹಾಕುತ್ತಿರುವ ಸಾಹಿತ್ಯ, ಹಲಬಗೆಯ ಸಾಂಸ್ಕೃತಿಕ ಸಂವಾದಗಳಿಗೆ ಎಡೆಮಾಡಿಕೊಡುವಂಥದ್ದು. ಈ ಮಾಧ್ಯಮಗಳ ಸಂಪೂರ್ಣ ಸಾಧ್ಯತೆಗಳ ಬಗ್ಗೆ, ಈ ಮಾಧ್ಯಮಗಳಲ್ಲಿ ಸೃಷ್ಟಿಯಾಗುತ್ತಿರುವ ಸಾಹಿತ್ಯದ ಬಗ್ಗೆ ಇನ್ನೂ ಸೂಕ್ತ ರೀತಿಯಲ್ಲಿ ವಿಶ್ಲೇಷಣೆ ನಡೆಯಬೇಕಾಗಿದೆ. ಓದುಗರ ತಕ್ಷಣದ ಮತ್ತು ಮುಕ್ತವಾದ ಪ್ರತಿಕ್ರಿಯೆ ಇಲ್ಲಿ ಲೇಖಕನಿಗೆ ಲಭ್ಯವಾಗುತ್ತಿರುವ ಕಾರಣ, ಈ ಮಾಧ್ಯಮ ಹೆಚ್ಚು ಪ್ರಭಾವಶಾಲಿಯಾಗುವ ಸಾಧ್ಯತೆಯೂ ಇದೆ. ಲೇಖಕ ಮತ್ತು ಓದುಗರ ನೇರ ಮುಖಾಮುಖಿ ಇಲ್ಲಿ ಸುಲಭವಾಗಿರುವಂತೆಯೂ ಕಾಣುತ್ತದೆ. ಮುಕ್ತಸ್ವಾತಂತ್ರ ಸ್ವೇಚ್ಛಾಚಾರಕ್ಕೂ ಎಡೆಮಾಡಿಕೊಡಬಲ್ಲದು; ಹೊಣೆಗಾರಿಕೆಯೇ ಇಲ್ಲದ ಮುಖರಹಿತ ಓದುಗ, ಲೇಖಕನ ಚಾರಿತ್ರ್ಯ ಹರಣಕ್ಕೂ ಇಳಿಯಬಹುದು. ಮುಕ್ತಸ್ವಾತಂತ್ರ್ಯವನ್ನು ಮಾನ್ಯ ಮಾಡುತ್ತಲೇ ಓದುಗನ ಹೊಣೆಗಾರಿಕೆಯನ್ನು ನೆನಪಿಸುತ್ತ ಅವನನ್ನು ನಿಯಂತ್ರಿಸುವುದು ಹೇಗೆ ಎಂಬ ಪ್ರಶ್ನೆಗಳೂ ಎದುರಾಗುತ್ತವೆ. ಅಗಾಧ ಸಾಧ್ಯತೆಗಳ ಜೊತೆಗೇ ಅದರ ದುರ್ಬಳಕೆಗೂ ಅವಕಾಶವನ್ನು ಇಂಥ ಹೊಸ ಮಾಧ್ಯಮಗಳು ಕಲ್ಪಿಸಬಲ್ಲವು. ಇದೆಲ್ಲವನ್ನು ನಿಭಾಯಿಸುವ ಸಂಕೀರ್ಣವಾದ ಸವಾಲು ಈ ಮಾಧ್ಯಮದ ಮುಂದಿದೆ. ಆದರೆ ನಮ್ಮ ದೇಶದಲ್ಲಿ ಸದ್ಯಕ್ಕೆ ಈ ಮಾಧ್ಯಮದ ಬಳಕೆ ಇನ್ನೂ ವ್ಯಾಪಕವಾಗಿ ಆಗುತ್ತಿಲ್ಲ. ಹೀಗಾಗಿ ಇದರ ಪರಿಣಾಮ ಮತ್ತು ದುಷ್ಪರಿಣಾಮದ ಬಗ್ಗೆ ಈಗಲೇ ನಿಖರವಾಗಿ ಹೇಳುವುದು ಕಷ್ಟವಾಗಬಹುದು. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ, ಇಲ್ಲಿಯೂ ಸಣ್ಣ ಸಣ್ಣ ಗುಂಪುಗಳ ನಿರ್ಮಾಣಕ್ಕೆ, ಗುಂಪುಗಾರಿಕೆಗೆ, ಇದರ ಫಲವಾಗಿ ಹುಟ್ಟಿಕೊಳ್ಳುವ ಅಭಿಪ್ರಾಯಗಳಿಗೆ ಅವಕಾಶವಿದೆ. ಗುಂಪುಗಾರಿಕೆ ಎಂಬುದು ಸದಾಕಾಲ ಸಾಹಿತ್ಯಕ್ಕೆ ಅಪಾಯಕಾರಿಯಾದದ್ದು. ನಿಜವಾದ ಸಾಹಿತ್ಯದ ಮೌಲ್ಯಮಾಪನಕ್ಕೂ ಇಂಥ ಗುಂಪುಗಾರಿಕೆಗಳು ತೊಡಕನ್ನುಂಟುಮಾಡುವ ಸಾಧ್ಯತೆ ಇದೆ. ಈ ಮಾಧ್ಯಮದಲ್ಲಿ ಅನೇಕ ಓದುಗರು ಈಗ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳನ್ನು ನೋಡಿದರೆ, ಅವು ಸಾಹಿತ್ಯದ ಬಗೆಗಿನ ಗಂಭೀರವಾದ ಶ್ರದ್ಧೆಯಿಂದ ಹುಟ್ಟಿದ ಅಭಿಪ್ರಾಯಗಳಾಗಿ ಕಾಣಿಸುವುದಿಲ್ಲ. ಅಂತೂ ಮುಕ್ತವಾದ ಅವಕಾಶವನ್ನು ಈ ಮಾಧ್ಯಮ ಓದುಗರಿಗೂ, ಸಾಹಿತಿಗಳಿಗೂ ತೆರೆದಿರುವುದಂತೂ ನಿಜ. ಸರಿಯಾದ ರೀತಿಯಲ್ಲಿ ಈ ಮಾಧ್ಯಮ ಬಳಕೆಯಾದರೆ, ಸಾಹಿತ್ಯ ಸೃಷ್ಟಿಗೆ ಬಹುದೊಡ್ಡ ಬೆಂಬಲವೂ ದೊರೆಯಬಹುದು. ಏನಾಗುವುದೋ- ಅದು ನಮ್ಮ ನಾಳೆಗಳಿಗೆ ಬಿಟ್ಟ ವಿಚಾರ.

ಒಂದೊಂದು ಹೊಸ ಸಾಧ್ಯತೆ ತೆರೆದಾಗಲೂ, ಹಳೆಯ ಮಾಧ್ಯಮಗಳು ಕಳಾಹೀನವಾದಂತೆ ಕಾಣಿಸಿದರೂ, ಮತ್ತೆ ಚೇತರಿಸಿಕೊಂಡು ತಮ್ಮ ಪಾತ್ರವನ್ನು ಸುಧಾರಿಸಿಕೊಂಡು ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದ್ದು ಕೂಡಾ ಇತಿಹಾಸದ ಪುಟಗಳಲ್ಲಿ ರೋಚಕ ಅಧ್ಯಾಯಗಳನ್ನು ಉಳಿಸಿದೆ. ಚಲನಚಿತ್ರ, ರಂಗಭೂಮಿ, ಟಿವಿ, ರೇಡಿಯೊ, ಅಂತರ್ಜಾಲ, ಜಾಲತಾಣ, ಬ್ಲಾಗ್ ಇತ್ಯಾದಿ ಎಲ್ಲ ಮಾಧ್ಯಮಗಳ ಜೊತೆಯಲ್ಲಿ ಸಾಹಿತ್ಯವನ್ನಿಟ್ಟು, ಅವುಗಳ ಸಂಬಂಧವನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವುದು ಈ ಪ್ರಬಂಧದ ಚೌಕಟ್ಟನ್ನು ಮೀರಿದ ಸಂಗತಿಯಾಗುತ್ತದೆ; ಹೀಗಾಗಿ ಇಲ್ಲಿ ಕೇವಲ ಮುದ್ರಣ ಮಾಧ್ಯಮವನ್ನು, ವಿಶೇಷವಾಗಿ ಪತ್ರಿಕಾ ಮಾಧ್ಯಮವನ್ನೇ ಕೇಂದ್ರವಾಗಿರಿಸಿಕೊಂಡು ಕೆಲವು ವಿಚಾರಗಳನ್ನು ಪ್ರಸ್ತಾಪಿಸುತ್ತೇನೆ.

2

ಇವತ್ತಿನ ಪತ್ರಿಕಾ ಜಗತ್ತನ್ನು, ವಿಶೇಷವಾಗಿ ಕನ್ನಡ ಪತ್ರಿಕಾ ರಂಗವನ್ನು ನೋಡಿದರೆ ಅದು ಸೋಜಿಗ ಹುಟ್ಟಿಸುವಷ್ಟು ವಿಸ್ತಾರಕ್ಕೆ ಚಾಚಿಕೊಂಡಿದೆ. ವಸ್ತು ವೈವಿಧ್ಯವೂ ಅಗಾಧವಾಗಿದೆ. ದಿನ ಪತ್ರಿಕೆಗಳು, ವಾರ ಪತ್ರಿಕೆಗಳು, ಪಾಕ್ಷಿಕ, ಮಾಸ, ದ್ವೈಮಾಸಿಕ, ತ್ರೈಮಾಸಿಕ ಹೀಗೆ ವಿಭಿನ್ನ ನಿಯತಕಾಲಿಕೆಗಳು ಬರುತ್ತಿವೆ. ಸುದ್ದಿ ಪತ್ರಿಕೆಗಳು ಕೇವಲ ಸುದ್ದಿಯನ್ನು ನೀಡದೆ, ವಿಸ್ತೃತ ಮಾಹಿತಿ, ಹಿನ್ನೆಲೆಯ ಸಂಗತಿಗಳು, ವಿಶ್ಲೇಷಣೆಗಳು, ಲೇಖನಗಳು ಇತ್ಯಾದಿ ಅಂಶಗಳ ಕಡೆಗೂ ಗಮನ ಹರಿಸಿವೆ. ವಾಣಿಜ್ಯ, ಕ್ರೀಡೆ, ಮಹಿಳೆ, ಚಲನಚಿತ್ರ, ರಂಗಭೂಮಿ, ಆರೋಗ್ಯವಿಚಾರಗಳು, ಅಡಿಗೆಯ ಮಾಹಿತಿ, ಹಣಕಾಸು, ಸಂಸ್ಕೃತಿಯ ಸಂಗತಿಗಳು ಹೀಗೆ ಬದುಕಿನ ಎಲ್ಲ ಸಂಗತಿಗಳನ್ನು ತನ್ನ ವ್ಯಾಪ್ತಿಯ ಒಳಕ್ಕೆ ತಂದುಕೊಳ್ಳಲು ಪತ್ರಿಕೆಗಳು ಪ್ರಯತ್ನಿಸಿವೆ. ಅದಕ್ಕಾಗಿಯೇ ಪ್ರತ್ಯೇಕ ಪ್ರತ್ಯೇಕ ಪುರವಣಿಗಳನ್ನು ಪ್ರಕಟಿಸುವ ಪರಿಪಾಠವೂ ಆರಂಭವಾಗಿದೆ. ಜನರಿಗೆ ಅವರ ಅಗತ್ಯಗಳನ್ನು ಪೂರೈಸುವ ಪ್ರಯತ್ನದಂತೆ ಕಂಡರೂ ಇದರ ಹಿಂದೆ ಬಹುದೊಡ್ಡ ಪೈಪೋಟಿ ಇರುವುದು ಕಂಡುಬರುತ್ತದೆ. ಈ ಪೈಪೋಟಿಯನ್ನು ಎದುರಿಸದಿದ್ದರೆ ಪತ್ರಿಕೆಗಳು ನಿರಂತರವಾಗಿ ಮುನ್ನಡೆ ಸಾಧಿಸುವುದು ಅಸಾಧ್ಯ. ಇಂಥ ಪೈಪೋಟಿಯಲ್ಲಿಯೇ ಸಾಹಿತ್ಯಕ್ಕೂ ಪತ್ರಿಕೆಗಳಲ್ಲಿ ಸ್ಥಾನ ಸಿಕ್ಕಿದೆ. ಅನೇಕ ಪತ್ರಿಕೆಗಳು ಸಾಹಿತ್ಯಕ್ಕಾಗಿಯೇ ಪುರವಣಿಗಳನ್ನೂ ರೂಪಿಸಿವೆ. ಇತರ ನಿಯತಕಾಲಿಕೆಗಳಲ್ಲೂ ಕತೆ, ಕವಿತೆ, ಪ್ರಬಂಧ, ವಿಮರ್ಶೆ,  ಗ್ರಂಥ ಪರಿಚಯ, ಸಂಸ್ಕೃತಿಯನ್ನು ಕುರಿತ ಬರಹಗಳು ಪ್ರಕಟವಾಗುತ್ತಿವೆ.

ಆದರೆ ಸಾಹಿತ್ಯದ ಮೇಲೆ ಗಾಢ ಪರಿಣಾಮವನ್ನು ಬೀರುವ ಮತ್ತು ಸಾಹಿತ್ಯ ಪಲ್ಲಟಗಳಿಗೆ ಕಾರಣವಾಗುವ ಸಾಮಥ್ರ್ಯ ಇರುವುದು ಸಾಹಿತ್ಯ ಪತ್ರಿಕೆಗಳಿಗೆ. ಸಕಾಲಕ್ಕೆ ಪ್ರಕಟವಾಗದ (ಎಂದು ಹೇಳಿದರೂ ಅನೇಕ ಪತ್ರಿಕೆಗಳು ಕಾಲಬದ್ಧವಾಗಿರುವುದನ್ನೂ ನೋಡಬಹುದು), ಜಾಹಿರಾತುಗಳಿಲ್ಲದ, ಹೆಚ್ಚು ಪ್ರಸಾರ ಸಂಖ್ಯೆಯೂ ಇಲ್ಲದ, ವ್ಯಾಪಾರೋದ್ಯಮವನ್ನೇ ಮುಖ್ಯ ಗುರಿಯಾಗಿಸಿಕೊಳ್ಳದ, ‘ಅಬ್ಬೇಪಾರಿ’ಯಂತೆ ಕಾಣುವ ಪತ್ರಿಕೆಗಳನ್ನು ಕಿರುಪತ್ರಿಕೆಗಳು, ಸಾಹಿತ್ಯಪತ್ರಿಕೆಗಳು ಎಂದು ಗುರುತಿಸಲಾಗಿದೆ. ಹೊರನೋಟಕ್ಕೆ ಅಬ್ಬೇಪಾರಿಗಳಂತೆ ಕಾಣಿಸಿದರೂ, ಇವುಗಳ ಒಳಸತ್ವ ಮತ್ತು ಪ್ರಭಾವ ಭಿನ್ನವಾದದ್ದು. ಸಾಹಿತ್ಯ ಚರಿತ್ರೆಯಲ್ಲಿ ಈ ಪ್ರಭಾವಕ್ಕೆ ತೀರ ಮಹತ್ವವಿದೆ. ಕಲೆ, ಸಾಹಿತ್ಯ, ಸಂಸ್ಕೃತಿ, ರಾಜಕೀಯ ಚಿಂತನೆ, ಅಭಿರುಚಿ, ಸಾಮಾಜಿಕ ಸ್ಥಿತಿಗತಿ ಇತ್ಯಾದಿ ಅನೇಕ ಮಹತ್ವದ ಸಂಗತಿಗಳನ್ನು ಗ್ರಹಿಸುವಲ್ಲಿ, ವಿಶ್ಲೇಷಿಸುವಲ್ಲಿ, ಅಭಿಪ್ರಾಯಗಳನ್ನು ರೂಪಿಸುವಲ್ಲಿ ಈ ಪತ್ರಿಕೆಗಳು ವಹಿಸಿರುವ ಪಾತ್ರ ಅತ್ಯಂತ ಪರಿಣಾಮಕಾರಿಯಾದದ್ದು. ಜಗತ್ತಿನಲ್ಲಿ ಹೊಸ ಕಲೆ ರೂಪ ಪಡೆದದ್ದು, ಹೊಸ ಸಂಗೀತ ಜನಮನವನ್ನು ಪ್ರವೇಶಿಸಿದ್ದು, ಅನೇಕ ‘ವಾದ’ಗಳು ಹುಟ್ಟಿಕೊಂಡದ್ದು, ಅನೇಕ ಚಿಂತನೆಗಳು ಸ್ಪಷ್ಟ ಚಹರೆಯನ್ನು ಕಂಡುಕೊಂಡದ್ದು, ಸಂಸ್ಕೃತಿಯ ಹೊಸ ಹೊಸ ರೂಪಗಳು ಕಾಣಿಸಿಕೊಂಡದ್ದು ಈ ‘ಕಿರುಪತ್ರಿಕೆ’ಗಳ ಪ್ರಭಾವದ ಮೂಲಕವೇ ಎಂಬುದು ಕುತೂಹಲಕರ ಸಂಗತಿ. ದೃಢವಾದ ಆರ್ಥಿಕ ಬಲವಿಲ್ಲದ, ಹೆಚ್ಚು ಜನರನ್ನು ನೇರವಾಗಿ ತಲುಪದ ಈ ‘ಕಿರು ಪತ್ರಿಕೆಗಳು’ ಪರೋಕ್ಷದಲ್ಲಿ ಸಮಾಜದ ಮೇಲೆ ಮಾಡುವ ಪರಿಣಾಮ ದೊಡ್ಡದೇ. ಈ ಪುಟ್ಟ ಪತ್ರಿಕೆಗಳ ಸ್ವಾತಂತ್ರ್ಯ ಬಹಳ ದೊಡ್ಡದಾಗಿರುತ್ತದೆ.

ಕನ್ನಡ ಪತ್ರಿಕೋದ್ಯಮದ ಇತಿಹಾಸ ಬಹಳ ದೀರ್ಘವಾಗೇನೂ ಇಲ್ಲ. ಕನ್ನಡದ ಮೊದಲ ಪತ್ರಿಕೆ ಎಂಬ ಮನ್ನಣೆಗೆ ಪಾತ್ರವಾಗಿರುವ ‘ಮಂಗಳೂರ ಸಮಾಚಾರ’ ಪ್ರಕಟವಾದದ್ದು 1843ರಲ್ಲಿ; ಅಂದರೆ ಸರಿಯಾಗಿ 170 ವರ್ಷಗಳ ಹಿಂದೆ. ಈ ಪ್ರಾರಂಭಿಕ ಘಟ್ಟದಲ್ಲಿ ಪತ್ರಿಕೆಗಳು ಅಕರ್ಷಕವಾಗಿರಲಿಲ್ಲವಾದರೂ, ಒಂದು ಹೊಸ ಆವಿಷ್ಕಾರವಾಗಿ ಜನರ ಕಣ್ಣನ್ನು ಕುಕ್ಕುತ್ತಿದ್ದವು. ವರ್ತಮಾನವನ್ನು ಜನರಿಗೆ ತಲುಪಿಸುವುದೇ ಮುಖ್ಯಗುರಿಯಾಗಿದ್ದ ಪತ್ರಿಕೆಗಳು ಜನರ ಅರಿವನ್ನು ವಿಸ್ತರಿಸುವ ಸಣ್ಣಪುಟ್ಟ ಬರಹಗಳನ್ನೂ ಪ್ರಕಟಿಸುತ್ತಿದ್ದವು. ಅದು ಆರಂಭ ಘಟ್ಟವಾದುದರಿಂದ ವರ್ತಮಾನವೂ ಪ್ರಾಯೋಗಿಕ ನೆಲೆಯಲ್ಲಿಯೇ ಇತ್ತು. ಸಾಹಿತ್ಯಕ್ಕಂತೂ ಅಲ್ಲಿ ಅಷ್ಟಾಗಿ ಜಾಗವಿರಲಿಲ್ಲ. ನಿಜಕ್ಕೂ ಸಾಹಿತ್ಯಕ್ಕೆ ಪ್ರಾಧಾನ್ಯತೆ ದೊರೆತದ್ದು, ಸಾಹಿತ್ಯಕ್ಕೇ ಮೀಸಲಾದ ಪತ್ರಿಕೆಗಳು ಹುಟ್ಟಿಕೊಂಡಾಗ. ಪತ್ರಿಕೋದ್ಯಮದ ಇತಿಹಾಸಕಾರರು ಅನೇಕ ಸಾಹಿತ್ಯ ಪತ್ರಿಕೆಗಳ ಹೆಸರಿರುವ ದೊಡ್ಡ ಪಟ್ಟಿಯನ್ನೇ ಕೊಡುತ್ತಾರೆ. ಆದರೆ ನಿಜವಾದ ಸಾಹಿತ್ಯ ಪತ್ರಿಕೆಯಾಗಿ ಸೃಜನಶೀಲ ಸಾಹಿತ್ಯಕ್ಕೆ ದೊಡ್ಡ ಆಸರೆಯಾಗಿ ನಿಂತದ್ದು-ಸುವಾಸಿನಿ ಪತ್ರಿಕೆ. ಇದು ಹುಟ್ಟಿಕೊಂಡದ್ದು ಮಂಗಳೂರಿನಲ್ಲಿ, 1900ರಲ್ಲಿ; ಬೆನಗಲ್ ರಾಮರಾಯರು ಇದರ ಸಂಪಾದಕರು. ಪಂಜೆ ಮಂಗೇಶರಾಯರ ಕತೆಗಳು ಪ್ರಕಟವಾದದ್ದು ಈ ಪತ್ರಿಕೆಯಲ್ಲಿ. ಮುಂದೆ, 1904ರಲ್ಲಿ, ‘ಸದ್ಬೋಧ ಚಂದ್ರಿಕೆ’ ಎನ್ನುವ ಇನ್ನೊಂದು ಸಾಹಿತ್ಯ ಪತ್ರಿಕೆ ಗಳಗನಾಥರ ಐತಿಹಾಸಿಕ ಕಾದಂಬರಿಗಳನ್ನು ಧಾರಾವಾಹಿಯಾಗಿ ಪ್ರಕಟಿಸಿತು. ಬಂಗಾಳೀ ಕಾದಂಬರಿಗಳು ಕನ್ನಡಕ್ಕೆ ಬಂದದ್ದು, ಬಿ.ವೆಂಕಟಾಚಾರ್ಯರ ಸಂಪಾದಕತ್ವದ ‘ಅವಕಾಶತೋಷಿಣಿ’ ಪತ್ರಿಕೆಯ ಮೂಲಕ. ಕನ್ನಡ ಪತ್ರಿಕೆಗಳಲ್ಲಿ ಕಾದಂಬರಿಗಳನ್ನು ಧಾರಾವಾಹಿಯಾಗಿ ಪ್ರಕಟಿಸುವ ಪರಂಪರೆ ಇಲ್ಲಿಂದಲೇ ಆರಂಭವಾಯಿತೆಂದು ಹೇಳಬಹುದು. ಆನಂತರ, ಅನೇಕ ಸಾಹಿತ್ಯ ಪತ್ರಿಕೆಗಳು ತಲೆಎತ್ತಿ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹೊಸ ಹೊಸ ಪ್ರಯೋಗಗಳು, ಚಿಂತನೆಗಳು, ಸೃಜನಶೀಲ ಕ್ರಿಯೆಗಳು ನಡೆಯಲು ಕಾರಣವಾದವು.

ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಈ ಸಾಹಿತ್ಯ ಪತ್ರಿಕೆಗಳ ಸಂಪಾದಕರು ಸಾಮಾನ್ಯವಾಗಿ ಕನ್ನಡ ಸಾಹಿತ್ಯದ ಪ್ರಮುಖ ವ್ಯಕ್ತಿಯೇ ಆಗಿರುತ್ತಿದ್ದರು; ಸೃಜನಶೀಲ ಕ್ರಿಯೆಯಲ್ಲಿ ಅವರೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅವರ ಚಿಂತನೆ, ಗ್ರಹಿಕೆ, ಹೊಸದನ್ನು ನೀಡುವ ಹುಮ್ಮಸ್ಸು ಎಲ್ಲವೂ ಈ ಕಿರುಪತ್ರಿಕೆಗಳ ಹಿನ್ನೆಲೆಯಲ್ಲಿ ಇರುತ್ತಿದ್ದವು. ಈ ಪರಂಪರೆ ಮುಂದುವರಿದಂತೆಲ್ಲ ಸಾಹಿತ್ಯದ ರುಚಿ-ಅಭಿರುಚಿಗಳು ಕನ್ನಡ ಓದುಗರಲ್ಲಿ ಗಟ್ಟಿಯಾದವು. ದೊಡ್ಡ ಪತ್ರಿಕೆಗಳಿಗೆ ಪ್ರೇರಣೆ-ಪ್ರಭಾವಗಳೂ ಇಲ್ಲಿಂದಲೇ ದೊರೆಯುವ ಸನ್ನಿವೇಶವೂ ಸಹಜವಾಗಿಯೇ ಉಂಟಾಯಿತು. ಸಾಹಿತ್ಯ ಪತ್ರಿಕೆಗಳಲ್ಲಿ ಮನ್ನಣೆ ಪಡೆದ ‘ಜಯಕರ್ನಾಟಕ’ ವಹಿಸಿದ ಪಾತ್ರದ ಬಗ್ಗೆ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರು ದಾಖಲಿಸಿರುವ ಅಭಿಪ್ರಾಯವನ್ನು ಇಲ್ಲಿ ಹೇಳುವುದು ಈ ಪತ್ರಿಕೆಗಳ ಮಹತ್ವವನ್ನು ಸ್ಪಷ್ಟಪಡಿಸುತ್ತದೆ. ಅವರು ಹೇಳುತ್ತಾರೆ: ನವೋದಯ ಸಾಹಿತ್ಯದ ಆಶೋತ್ತರಗಳನ್ನು, ಹೊಸ ಸಾಹಿತ್ಯದ ಕರ್ತವ್ಯ ಮತ್ತು ಹೊಣೆಗಾರಿಕೆಯನ್ನು ‘ಜಯಕರ್ನಾಟಕ’ ತನ್ನ ಪರಿಮಿತವಾದ ಕಾಲಾವಧಿಯಲ್ಲಿ ಶಾಸ್ತ್ರೀಯವಾಗಿ ರೂಪಿಸಿತು.

ಮಾಸ್ತಿಯವರ ಸಂಪಾದಕತ್ವದಲ್ಲಿ 25 ವರ್ಷಗಳ ಕಾಲ ಪ್ರಕಟವಾದ ‘ಜೀವನ’, ಎ.ಆರ್.ಕೃಷ್ಣಶಾಸ್ತ್ರಿಗಳ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ಪ್ರಬುದ್ಧ ಕರ್ನಾಟಕ’, ಬೆಟಗೇರಿ ಕೃಷ್ಣಶರ್ಮರ ‘ಜಯಂತಿ’ ಹೀಗೆ ಅನೇಕ ಸಾಹಿತ್ಯ ಪತ್ರಿಕೆಗಳ ಉದಾಹರಣೆಯನ್ನು ನೀಡುತ್ತ ಹೋಗಬಹುದು. ಅವು ವಹಿಸಿದ ಪಾತ್ರ ಕನ್ನಡ ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ ಮಹತ್ವವಾದದ್ದು; ಕನ್ನಡ ನಾಡನ್ನು ಮತ್ತು ಜನತೆಯನ್ನು ಈ ಪತ್ರಿಕೆಗಳು ರೂಪಿಸಿವು. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹುಟ್ಟಿಕೊಂಡ ನವೋದಯ, ಪ್ರಗತಿಶೀಲ, ನವ್ಯ ಮತ್ತು ಬಂಡಾಯ ಸಾಹಿತ್ಯ ಚಳವಳಿಗಳ ಬೆನ್ನಿಗೆ ಇಂಥ ಸಾಹಿತ್ಯ ಪತ್ರಿಕೆಗಳು ಇದ್ದವೆಂಬುದನ್ನು ಮರೆಯಲಾಗದು.

ಕಳೆದ ಮೂರ್ನಾಲ್ಕು ದಶಕಗಳ ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೂ ಈ ಮಾತು ಇನ್ನಷ್ಟು ಸ್ಪಷ್ಟವಾಗುತ್ತದೆ. ನವ್ಯ ಸಾಹಿತ್ಯ ಸಂದರ್ಭದಲ್ಲಿ ಹೊಸ ಚಿಂತನೆ, ಗ್ರಹಿಕೆ, ರುಚಿ, ರೂಪಗಳನ್ನು ಕಟ್ಟಿಕೊಡುತ್ತಿದ್ದ ಸಾಕ್ಷಿ, ಸಂಕ್ರಮಣ ಮೊದಲಾದ ಪತ್ರಿಕೆಗಳು ಅಧಿಕ ಪ್ರಸಾರದ ದೊಡ್ಡ ಪತ್ರಿಕೆಗಳ ಮೇಲೆ ಬೀರುತ್ತಿದ್ದ ಪ್ರಭಾವ ಬಹಳ ದೊಡ್ಡದಾಗಿಯೇ ಇತ್ತು. ಸಾಕ್ಷಿ, ಸಂಕ್ರಮಣಗಳಲ್ಲಿ ಕಾಣಿಸಿಕೊಳ್ಳುವ ಲೇಖಕರು ತಕ್ಷಣವೇ ಅಧಿಕ ಪ್ರಸಾರದ ಸಾಪ್ತಾಹಿಕ ಪುರವಣಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸಾಹಿತ್ಯ ಪತ್ರಿಕೆಗಳನ್ನು ಬಹಳ ಆಸಕ್ತಿಯಿಂದ ಗಮನಿಸುತ್ತಿದ್ದ ಸಿಬ್ಬಂದಿ ದೊಡ್ಡ ಪತ್ರಿಕೆಗಳಲ್ಲಿರುತ್ತಿದ್ದರು. ಸಾಹಿತ್ಯ ಪತ್ರಿಕೆಗಳಲ್ಲಿ ಕಾಣಿಸಿಕೊಂಡ ಹೊಸ ಲೇಖಕರನ್ನು ಪತ್ತೆಹಚ್ಚಿ, ಅವರನ್ನು ತಮ್ಮ ಪತ್ರಿಕೆಯಲ್ಲಿ ಬರೆಯುವಂತೆ ಆಹ್ವಾನಿಸುವ ಸದ್ಗುಣವೂ ನಮ್ಮ ಪತ್ರಿಕೆಗಳಲ್ಲಿತ್ತು. ಸಾಹಿತ್ಯ ಪತ್ರಿಕೆಗಳು ರೂಪಿಸುತ್ತಿದ್ದ ಅಭಿರುಚಿಯನ್ನು ಈ ಪತ್ರಿಕೆಗಳು ವಿಸ್ತಾರ ವೇದಿಕೆಯನ್ನು ಒದಗಿಸುವುದರ ಮೂಲಕ ಬೆಳೆಸುತ್ತಿದ್ದವು. ಹೀಗೆ ಇದು ಸಮಸ್ತ ಕನ್ನಡ ಸಾಹಿತ್ಯಪ್ರೇಮಿಗಳನ್ನು ಮುಟ್ಟುತ್ತಿತ್ತು. ಇದಕ್ಕೆ ವ್ಯತಿರಿಕ್ತವಾದ ಮುಖವೂ ಇರುತ್ತಿತ್ತು. ಆಗಲೂ ಸಾರ್ವಜನಿಕ ಚರ್ಚೆ, ಸಂವಾದಗಳು ಏರ್ಪಟ್ಟು, ಆರೋಗ್ಯಕರ ಬೆಳವಣಿಗೆಗೆ ಸಹಾಯವಾಗುತ್ತಿತ್ತು. ಸಣ್ಣ ಪತ್ರಿಕೆಗಳು ಮತ್ತು ದೊಡ್ಡ ಪತ್ರಿಕೆಗಳ ಬಾಂಧವ್ಯ ನಮ್ಮ ಸಾಹಿತ್ಯ ಪರಂಪರೆಯಲ್ಲಿ ಅರ್ಥಪೂರ್ಣವಾಗಿಯೇ ಉಳಿದುಕೊಂಡು ಬಂದಿದೆ.

ಇನ್ನೊಂದು ಅಂಶವನ್ನೂ ಇಲ್ಲಿ ಗುರುತಿಸಬೇಕು. ಅದು ಮೌಲ್ಯಗಳಿಗೆ ಸಂಬಂಧಿಸಿದ್ದು. ಜೀವನ ಮೌಲ್ಯ ಮತ್ತು ಸಮಾಜನಿಷ್ಠೆ ವ್ಯಕ್ತಿಬದುಕಿನಲ್ಲಿ, ಸಮುದಾಯದ ಬದುಕಿನಲ್ಲಿ ಬಹಳ ಗಟ್ಟಿಯಾಗಿದ್ದ ಕಾಲದಲ್ಲಿ ಈ ಸಾಹಿತ್ಯ ಪತ್ರಿಕೆಗಳು ಪ್ರಭಾವಶಾಲಿಯಾಗಿದ್ದವು. ಹಾಗೆಯೇ ಅಧಿಕ ಪ್ರಸಾರದ ಪತ್ರಿಕೆಗಳಲ್ಲಿ ದುಡಿಯುತ್ತಿದ್ದ ವ್ಯಕ್ತಿಗಳಲ್ಲೂ ಈ ಮೌಲ್ಯ ಮತ್ತು ನಿಷ್ಠಗಳು ಪ್ರಖರವಾಗಿಯೇ ಇದ್ದವು. ಇವತ್ತು ಈ ಮೌಲ್ಯಗಳು ಮೊದಲಿನ ಪ್ರಖರತೆಯನ್ನು ಕಳೆದುಕೊಂಡಿವೆ. ಮೌಲ್ಯ ಎನ್ನುವುದು ಕೂಡಾ ಕಾಲಕಾಲಕ್ಕೆ ಬದಲಾಗುತ್ತದೆ ಎನ್ನುವುದು ನಿಜವಾದರೂ, ಕೆಲವು ಸಾರ್ವಕಾಲಿಕ ಮೌಲ್ಯಗಳಿರುವುದೂ ನಿಜ. ಇಂಥ ಮೌಲ್ಯಗಳ ದೃಷ್ಟಿಯಲ್ಲಿ ಇವತ್ತಿನ ಸಂದರ್ಭವನ್ನು ಗಮನಿಸಬೇಕಾಗಿದೆ. ಜಾಗತೀಕರಣದ ನಂತರ ಇಡೀ ಜಗತ್ತು ಹೆಚ್ಚಾಗಿ ತುಡಿಯುತ್ತಿರುವುದು ಆರ್ಥಿಕ ಮೌಲ್ಯಗಳ ಕಡೆಗೆ. ನಮ್ಮ ರಾಷ್ಟ್ರ ಮತ್ತು ಸಮಾಜಗಳೂ ಇದಕ್ಕೆ ಹೊರತಲ್ಲ. ಇಂಥ ಹೊತ್ತಿನಲ್ಲಿ ಮಾಧ್ಯಮಗಳನ್ನು ಪ್ರತ್ಯೇಕಿಸಿ, ಮೌಲ್ಯಗಳು ಮರೆಯಾಗಿವೆ ಎಂದು ಹೇಳುವುದು ಎಷ್ಟೊಂದು ಸಮಂಜಸ?

3

ಸಾಹಿತ್ಯದ ತುಡಿತ ಯಾವಾಗಲೂ ಸ್ವಾತಂತ್ರ್ಯದ ಕಡೆಗೆ. ಇದಕ್ಕೆ ವ್ಯತಿರಿಕ್ತವಾಗಿ, ಸಾಹಿತ್ಯದ ವಾಹಕವಾಗಿ ದುಡಿಯುವ ಮಾಧ್ಯಮಗಳು ಒಂದಲ್ಲ ಒಂದು ನಿರ್ಬಂಧದ ಅಡಿಯಲ್ಲಿಯೇ ಕೆಲಸಮಾಡಬೇಕಾದ ಅನಿವಾರ್ಯಕ್ಕೆ ಸಿಕ್ಕಿಹಾಕಿಕೊಂಡಿರುತ್ತವೆ. ಜೊತೆಜೊತೆಯಲ್ಲಿಯೇ ಸಾಗಬೇಕಾದ ಸಾಹಿತ್ಯ ಮತ್ತು ಮಾಧ್ಯಮಗಳು ಸದಾ ಸ್ವಾತಂತ್ರ್ಯ ಮತ್ತು ನಿರ್ಬಂಧಗಳನ್ನು ಮುಂದಿಟ್ಟುಕೊಂಡು ಪರಸ್ಪರ ಸೆಣಸುತ್ತಲೇ ಇರುತ್ತವೆ.

ಮಾಸ್ತಿಯವರು ಜೀವನ ಪತ್ರಿಕೆಯಲ್ಲಿ ಬರೆದ ಟಿಪ್ಪಣಿಗಳಲ್ಲಿ ಜಾಹಿರಾತು ಮತ್ತು ಚಂದಾದಾರರನ್ನು ಕುರಿತ ಒಂದೆರಡು ಟಿಪ್ಪಣಿಗಳಿವೆ. ಅವುಗಳನ್ನಿಲ್ಲಿ ಪ್ರಸ್ತಾಪಿಸುವುದು ಅಗತ್ಯವಾಗಿ ಕಾಣುತ್ತದೆ. ಪ್ರಭುತ್ವ ಎನ್ನುವುದು ಈ ಎರಡು ಅಂಶಗಳನ್ನಿಟ್ಟುಕೊಂಡು ಹೇಗೆ ಪತ್ರಿಕೆಗಳನ್ನು ನಿಯಂತ್ರಿಸಲು ನೋಡುತ್ತದೆ ಎಂಬುದನ್ನು ಮಾಸ್ತಿಯವರ ಈ ಟಿಪ್ಪಣಿಗಳು ಹೇಳುತ್ತವೆ. ಪ್ರಭುತ್ವ ರಾಜಪ್ರಭುತ್ವವಾಗಿರಲಿ, ಪ್ರಜಾಪ್ರಭುತ್ವವಾಗಿರಲಿ ಅದು ಮುಕ್ತ ಪತ್ರಿಕಾಸ್ವಾತಂತ್ರವನ್ನು ಬಯಸುವುದಿಲ್ಲ. ಪ್ರಭುತ್ವವನ್ನು ಶ್ಲಾಘಿಸುವ ಮಾತುಗಳು ಪತ್ರಿಕೆಯಲ್ಲಿ ಪ್ರಕಟವಾದ ಕೂಡಲೇ ಪ್ರಭುತ್ವವೇ ಮುಂದೆಬಂದು ಜಾಹಿರಾತನ್ನೊ ಅಥವಾ ಚಂದಾದಾರರನ್ನೊ ಒದಗಿಸುವ ಉತ್ಸಾಹ ತೋರಿಸುವುದು, ಟೀಕೆಯ ಮಾತುಗಳು ಪ್ರಕಟವಾದಕೂಡಲೇ ಜಾಹಿರಾತನ್ನೊ ಅಥವಾ ಚಂದಾದಾರರನ್ನು ತಪ್ಪಿಸುವ ದಿಕ್ಕಿನಲ್ಲಿ ಪ್ರಯತ್ನಿಸುವುದು ಹೇಗಿರುತ್ತದೆ ಎಂಬುದನ್ನು ಮಾಸ್ತಿಯವರು ತಮ್ಮ ಅನುಭವದ ಕಥನದ ಮೂಲಕ ಹೇಳುತ್ತಾರೆ. ಮಾಸ್ತಿಯವರು ಪ್ರಭುತ್ವವವನ್ನು ಎದುರಿಸಿ ತಮ್ಮ ಪತ್ರಿಕೆಯ ಸ್ವಾತಂತ್ರ್ಯವನ್ನು ಕಾಯ್ದುಕೊಂಡರು. ಇವತ್ತಿಗೂ ಪ್ರಭುತ್ವ ಎನ್ನುವುದು ಹೀಗೆಯೇ ಇದೆ. ಇವತ್ತಿನ ಪ್ರಭುತ್ವದ ರೂಪ ಬೇರೆಯಾಗಿರಬಹುದು ಅಷ್ಟೆ. ಅಗಾಧ ಪ್ರಮಾಣದಲ್ಲಿ ಪತ್ರಿಕೆಗಳಿಗೆ ಅಥವಾ ಇತರ ಮಾಧ್ಯಮಗಳಿಗೆ ಜಾಹಿರಾತನ್ನು ನೀಡುವ ಸಾಮಥ್ರ್ಯ ಇರುವ ಸರ್ಕಾರಗಳು, ಬಹುರಾಷ್ಟ್ರೀಯ ಕಂಪೆನಿಗಳು ಪ್ರಭುತ್ವದ ಬೇರೆಬೇರೆಯ ಮುಖಗಳಾಗಿವೆ. ಮಾಸ್ತಿಯವರು ಪ್ರಭುತ್ವವನ್ನು ಎದುರು ಹಾಕಿಕೊಂಡು ತಮ್ಮ ಪತ್ರಿಕೆಯನ್ನು ಮುನ್ನಡೆಸಿದರು. ಇವತ್ತು ಮಾಧ್ಯಮಗಳು ಪ್ರಭುತ್ವಕ್ಕೆ ಎದುರಾಗಿ ನಿಲ್ಲುವ ಛಲವನ್ನು ಕಳೆದುಕೊಂಡಿವೆ. ಪ್ರಭುತ್ವಕ್ಕೆ ಎದುರಾಗಿ ನಿಲ್ಲಲು ನಿರ್ಧರಿಸಿದರೆ, ಕೋಟ್ಯಂತರ ರೂಪಾಯಿಗಳ ಆದಾಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಅದಕ್ಕೆ ಯಾರೂ ಸಿದ್ಧರಾಗಿರುವುದಿಲ್ಲ. ಈ ಕಾರಣದಿಂದಾಗಿ ಜಾಹಿರಾತುದಾರರು ಇವತ್ತು ಮಾಧ್ಯಮಗಳನ್ನು ನಿಯಂತ್ರಿಸುವ ಸ್ಥಿತಿಯಲ್ಲಿದ್ದಾರೆ. ಅವರು ಕೇಳಿದಲ್ಲಿ, ಕೇಳಿದಷ್ಟು ಜಾಗವನ್ನು ಕೊಡಲು ಪತ್ರಿಕೆಗಳು ತುದಿಗಾಲಲ್ಲಿ ನಿಂತಿರುತ್ತವೆ; ಟಿವಿಯ ಚಾನಲ್ಗಳು ಜಾಹಿರಾತುಗಳಿಲ್ಲದಿದ್ದರೆ ಉಸಿರಾಡಲಾರವು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೆಲ್ಲ ಗಮನಿಸಿದರೆ ಜಾಹಿರಾತಿಗಾಗಿ ಮಾಧ್ಯಮಗಳೊ, ಮಾಧ್ಯಮಗಳಿಗಾಗಿ ಜಾಹಿರಾತುಗಳೊ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇಂಥ ಬಿಕ್ಕಟ್ಟಿನ ನಡುವೆ ಸಾಹಿತ್ಯ ನಿರ್ಮಾಣವಾಗಬೇಕಾದ ಅನಿವಾರ್ಯವಾದ ಒತ್ತಡ ಸೃಷ್ಟಿಯಾಗಿದೆ.

ಈ ಜಾಗದ ಮಿತಿ ಸಾಹಿತ್ಯದ ಮೇಲೆ ಹೇಗೆ ಪ್ರಭಾವಬೀರಬಲ್ಲದು? ಇಷ್ಟೇ ಪದಗಳ ಮಿತಿಯಲ್ಲಿ ಕತೆಗಳನ್ನು ರಚಿಸಿ ಎಂದು ಸಾಹಿತಿಗಳಿಗೆ ಹೇಳುವುದು, ಕಾದಂಬರಿ ರಚನೆಗೂ ಪದಮಿತಿ ಒಡ್ಡುವುದು ಹೊಸದೇನೂ ಅಲ್ಲ. ಹಿಂದೆ ಪುಟಗಳ ಮಿತಿ ಇರುತ್ತಿತ್ತು; ಈಗ ಪದಗಳ ಮಿತಿ. ಇದಕ್ಕೆ ಹೊಂದಿಕೊಂಡು ಸಾಹಿತ್ಯ ಸೃಷ್ಟಿಯಾಗಬೇಕಾಗಿದೆ. ಸಾಹಿತ್ಯ ಚರಿತ್ರೆಯನ್ನು ಗಮನಿಸಿದವರಿಗೆ, ಈ ಜಾಗಮಿತಿಯಲ್ಲಿಯೇ ಅರ್ಥಪೂರ್ಣವಾದ ಸಾಹಿತ್ಯ ಸೃಷ್ಟಿಯಾಗಿರುವುದೂ ತಿಳಿಯುತ್ತದೆ. ಪತ್ರಕರ್ತನಾಗಿದ್ದ ಮತ್ತು ಪತ್ರಿಕೆಗಳಿಗೆ ಬರೆಯುತ್ತಿದ್ದ ನೊಬೆಲ್ ಪ್ರಶಸ್ತಿ ಪಡೆದ ಸಾಹಿತಿ ಹೆಮ್ಮಿಂಗ್ವೇ ಇಂಥ ಮಿತಿಗಳ ನಡುವೆಯೇ ಹೆಚ್ಚು ಕ್ರಿಯಾಶೀಲವಾಗಿದ್ದ. ಚುರುಕಾಗಿ, ಹರಿತವಾಗಿ, ಸಂಗ್ರಹವಾಗಿ, ಸಣ್ಣ ಸಣ್ಣ ವಾಕ್ಯ ಮತ್ತು ಪ್ಯಾರಾಗಳಲ್ಲಿ ಬರೆಯುವ ಕಲೆಯನ್ನು ಹೆಮ್ಮಿಂಗ್ವೇ ಕಲಿತದ್ದೇ ಪತ್ರಿಕೆಗಳ ಮೂಲಕ. ಯುದ್ಧಭೂಮಿಯಿಂದ ತನಗಿರುತ್ತಿದ್ದ ಸ್ವಲ್ಪ ಜಾಗದಲ್ಲಿಯೇ ತನ್ನ ಅನುಭವವನ್ನು ಸಮರ್ಥವಾಗಿ ಮಂಡಿಸಿದ ಈ ಲೇಖಕ. ಇಂಥ ಅನುಭವಗಳ ದಾಖಲೆಯನ್ನೂ ಈತ ಕಥೆಗಳಾಗಿ ಪರಿಗಣಿಸಿದ. ಹೆಮ್ಮಿಂಗ್ವೇಯ ಮಹತ್ವದ ಕತೆಗಳಲ್ಲಿ ಇಂಥ ಕತೆಗಳೂ ಸೇರಿವೆ.

ಕನ್ನಡದ ಉದಾಹರಣೆಯನ್ನೇ ಗಮನಿಸಿದರೂ ಈ ಅಂಶ ಸ್ಪಷ್ಟವಾಗುತ್ತದೆ. ನಮ್ಮ ಅನೇಕ ಮುಖ್ಯ ಲೇಖಕರು ಅತಿ ಕಡಿಮೆ ಜಾಗದಲ್ಲಿ ಚುರುಕಾದ ರಿವ್ಯೂಗಳನ್ನು ಬರೆದದ್ದು, ಅವು ಸಾಹಿತ್ಯ ಕೃತಿಗಳ ಬಗ್ಗೆ ಮಹತ್ವದ ಒಳನೋಟಗಳನ್ನು ಕಟ್ಟಿಕೊಂಡದ್ದು ದೊಡ್ಡ ಸಾಧನೆಯಾಗಿಯೇ ಕಾಣಿಸುತ್ತದೆ. ಮಾಧ್ಯಮಗಳು ಕೊಟ್ಟ ವಸ್ತುವೊಂದನ್ನು ಗಂಭೀರವಾಗಿ ತೆಗೆದುಕೊಂಡು ಪದ್ಯರಚಿಸಿದ್ದೂ ನಮ್ಮ ಆಧುನಿಕ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿದೆ. ಅಡಿಗರ ‘ಭೂಮಿಗೀತ’, ರಾಮಚಂದ್ರಶರ್ಮರ ‘ಭುವಿನೀಡಿದ ಸ್ಪೂರ್ತಿ’ ಮೊದಲಾದ ಪದ್ಯಗಳು ಹುಟ್ಟಿಕೊಂಡಿದ್ದೇ ಹೀಗೆ. ಇಂಥ ಸವಾಲುಗಳನ್ನು ಸಮರ್ಥವಾಗಿ ಸ್ವೀಕರಿಸುವ ಪ್ರತಿಭಾವಂತರು ಮಹತ್ವದ ಕೃತಿಗಳನ್ನು ನಿರ್ಮಿಸುತ್ತಾರೆಂಬುದು ನಿಜವಾದರೂ, ಇದೊಂದು ಆದರ್ಶವಲ್ಲ. ಇಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಎಡಬಿಡಂಗಿ ಸಾಹಿತ್ಯವನ್ನು ನಿರ್ಮಾಣ ಮಾಡುವವರೇ ಹೆಚ್ಚಾಗಿಬಿಡುವ, ನಿಜವಾದ ಸಾಹಿತ್ಯ ಸೊರಗಿಬಿಡುವ ಅಪಾಯವೂ ಇದೆ.

ಜಾಹಿರಾತಿನ ಉಪಟಳದಲ್ಲಿ ಸಾಹಿತ್ಯ ಕೃತಿಗಳು ಹೇಗೆ ಒಣಗಿಬಿಡುತ್ತವೆ ಎಂಬುದು ಸ್ಪಷ್ಟವಾಗಬೇಕಾದರೆ ನಮ್ಮ ಟಿವಿ ಧಾರಾವಾಹಿಗಳನ್ನೇ ನೋಡಬೇಕಾಗುತ್ತದೆ. ಟೆಲಿವಿಷನ್ ರೇಟಿಂಗ್ ಪಾಯಿಂಟಿನ (ಆರ್ಟಿಪಿ) ಮೇಲೇ ಜಾಹಿರಾತುಗಳು ನಿಂತಿರುವುದರಿಂದ, ಟಿವಿ ಧಾರಾವಾಹಿಗಳನ್ನು ನಿರ್ಮಿಸುವವರು ಈ ಅಂಶಕ್ಕೇ ಒತ್ತುಕೊಟ್ಟು ತಮ್ಮ ಧಾರಾವಾಹಿಗಳನ್ನು ನಿರ್ಮಿಸಲು ನೋಡುತ್ತಾರೆ. ಕೌಟುಂಬಿಕ ಚೌಕಟ್ಟು, ಅತ್ತೆ-ಸೊಸೆ ಜಗಳ, ಅನೈತಿಕ ಸಂಬಂಧಗಳು, ಸೇಡಿಗೆ ಸೇಡು, ಕೊಲೆ, ಅದನ್ನು ಮುಚ್ಚಿಹಾಕುವ ಪ್ರಯತ್ನಗಳು, ನ್ಯಾಯಾಲಯದ ಕಲಾಪಗಳು ಇತ್ಯಾದಿ ಅಂಶಗಳ ಸುತ್ತ ತಿರುಗುವ ಧಾರಾವಾಹಿಗಳು ಮತ್ತೆ ಮತ್ತೆ ನಿರ್ಮಾಣವಾಗುತ್ತವೆ. ಬದುಕಿನ ನಿಜವಾದ ಸವಾಲುಗಳನ್ನು ಎದುರಿಗಿಟ್ಟುಕೊಂಡು, ಹೊಸ ಅಭಿವ್ಯಕ್ತಿಗೆ ಹಂಬಲಿಸುವ ಸಾಹಿತಿಗೆ ಇಲ್ಲಿ ಅವಕಾಶವೇ ಇಲ್ಲವೇನೋ ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ. ಜನಪ್ರಿಯತೆ ಎನ್ನವುದು ಸಾಹಿತ್ಯಕ್ಕೆ ಮಾರಕವಾಗಬೇಕಾಗಿಲ್ಲ. ಆದರೆ ಅದನ್ನೇ ಗುರಿಯಾಗಿಟ್ಟುಕೊಂಡು ಸೃಷ್ಟಿಯಾಗುವ ಸಾಹಿತ್ಯ ಹೊಸ ದಾರಿಗಳನ್ನು ತುಳಿಯುವುದಿಲ್ಲ; ಹೊಸ ಹೊಸ ಪ್ರಯೋಗಗಳಿಗೆ ಅವಕಾಶ ಕಲ್ಪಿಸುವುದಿಲ್ಲ. ಇದು ಸಾಹಿತ್ಯದ ದುರಂತ ಅಧ್ಯಾಯವಾಗುವ ಅಪಾಯವೇ ಹೆಚ್ಚು. ಹೆಚ್ಚು ಜನರನ್ನು ಸೆಳೆದುಕೊಳ್ಳುವುದಕ್ಕಾಗಿ ಮಾಧ್ಯಮಗಳು ಮೌಢ್ಯಗಳನ್ನು ಹೆಚ್ಚಿಸುವ, ಹಿಂಸೆ ಮತ್ತು ಲೈಂಗಿಕತೆಯನ್ನು ವೈಭವೀಕರಿಸುವ, ಪರಂಪರಾಗತ ಸಂಗತಿಗಳಲ್ಲಿನ ಜಡ್ಡುಗಟ್ಟಿದ ಜೀವವಿರೋಧಿ ಅಂಶಗಳಿಗೇ ಒತ್ತುಕೊಡುವ ಮತ್ತು ಆ ಮೂಲಕ ಸಮಾಜದ ಆರೋಗ್ಯಕರ ಬೆಳವಣಿಗೆಗೆ ತಡೆಯೊಡ್ಡುವ ಚಟುವಟಿಕೆಗಳಲ್ಲಿ ತೊಡಗಿಬಿಡುವ ಸನ್ನಿವೇಶವನ್ನಂತೂ ನಾವು ನೋಡುತ್ತಲೇ ಇದ್ದೇವೆ.

ಜನಪ್ರಿಯತೆ ಎನ್ನುವುದೇ ಮುದ್ರಣ ಮಾಧ್ಯಮದಲ್ಲೂ ಅಳತೆಗೋಲಾಗಿರುವುದನ್ನು ನೋಡಬಹುದು. ಜನಪ್ರಿಯ ಧಾರಾವಾಹಿಗಳು ಒಂದು ಕಾಲಕ್ಕೆ ಪತ್ರಿಕೆಗಳ ಪ್ರಸಾರ ಸಂಖ್ಯೆಯನ್ನು ಮೇಲಕ್ಕೂ ಕೆಳಕ್ಕೂ ಕೊಂಡೊಯ್ಯುವ ಪಾತ್ರವನ್ನು ವಹಿಸುತ್ತಿದ್ದವು. ಒಂದು ಧಾರಾವಾಹಿ ಜನಪ್ರಿಯವಾಯಿತೆಂದರೆ ಅದೇ ಸೂತ್ರವನ್ನು ಹಿಡಿದು ಹತ್ತಾರು ಕಾದಂಬರಿಗಳು ಸೃಷ್ಟಿಯಾಗುತ್ತಿದ್ದವು. ಈ ಕಾದಂಬರಿಗಳು ಓದುಗರನ್ನು ಒಂದೇ ಸೂತ್ರಕ್ಕೆ ಕಟ್ಟಿಹಾಕಿ ಅವರ ಅಭಿರುಚಿಯನ್ನು ಅಣಕಿಸುತ್ತಿದ್ದವು. ಆದರೆ ಇದು ಓದುಗರಿಗೆ ತಿಳಿಯದೆ ಅವರ ಸಂವೇದನೆ ಹರಿತವಾಗುವ ಬದಲು ಜಡಗಟ್ಟುತ್ತಿತ್ತು. ಇದು ಒಂದು ಸಮಾಜದ ಬೆಳವಣಿಗೆಗೆ ಹಾನಿಕರ ಎಂಬುದು ತಿಳಿದೂ ಪತ್ರಿಕೆಗಳು ಇದಕ್ಕೇ ಬೆಂಬಲವಾಗಿ ನಿಲ್ಲುತ್ತಿದ್ದವು.

ಇಲ್ಲಿಯೇ ಪ್ರಸ್ತಾಪಿಸಬೇಕಾದ ಇನ್ನೊಂದು ಅಂಶವೂ ಇದೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಇತರ ಪ್ರಭುತ್ವ ರಾಷ್ಟ್ರಗಳಿಗಿಂತ ಇಲ್ಲಿ ಹೆಚ್ಚಾಗಿರುತ್ತದೆ. ಆದರೆ ನಮ್ಮಲ್ಲಿರುವ ಜಾತಿ ಸೂಕ್ಷ್ಮಗಳು, ವರ್ಗ ವ್ಯತ್ಯಾಸಗಳು, ಧಾರ್ಮಿಕ ನಂಬಿಕೆಗಳು, ಆಚರಣೆಗಳು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸದಾ ಸವಾರಿಮಾಡುತ್ತಿರುತ್ತವೆ. ಇಲ್ಲಿ ಜಾತಿ, ಧರ್ಮಗಳ ಹೆಸರಿನಲ್ಲಿ ಹುಟ್ಟುವ ಬಿಕ್ಕಟ್ಟುಗಳು ಅತ್ಯಂತ ಸಂಕೀರ್ಣ ಸ್ವರೂಪದಲ್ಲಿರುತ್ತವೆ. ಇವುಗಳನ್ನು ಸರಿಯಾಗಿ ಗ್ರಹಿಸದಿದ್ದರೆ, ಸಮರ್ಪಕವಾಗಿ ನಿಭಾಯಿಸದಿದ್ದರೆ ದೊಡ್ಡ ಗುಂಪುಗಾರಿಕೆಗೆ, ಜನರ ಪ್ರಚೋದನೆಗೆ ಅವಕಾಶ ಕಲ್ಪಿಸಬಹುದು. ಕೆಲವು ಪತ್ರಿಕೆಗಳು ಜನರನ್ನು ಪ್ರಚೋದಿಸಿ ತಮ್ಮ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ನೋಡುತ್ತವೆ; ಇಲ್ಲವೇ ತನ್ನ ವಸ್ತುನಿಷ್ಠತೆಯನ್ನು ಕಳೆದುಕೊಂಡು ಒಂದು ಧರ್ಮದ ಪರವಾಗಿ ನಿಂತು ಸಮುದಾಯವನ್ನು ದಿಕ್ಕುತಪ್ಪಿಸಲು ನೋಡುತ್ತವೆ. ಜನಸಮುದಾಯವನ್ನು ಧರ್ಮದ ಹೆಸರನಲ್ಲಿ ಅಥವಾ ಆಚರಣೆಯ ಹೆಸರಿನಲ್ಲಿ ವಿಭಜಿಸುವುದು ಸಮಾಜ ಮತ್ತು ರಾಷ್ಟ್ರದ್ರೋಹ ಎಂಬ ಎಚ್ಚರವೂ ಕೆಲವರಿಗೆ ಇರುವುದಿಲ್ಲ. ಇದು ಅತ್ಯಂತ ಅಪಾಯಕಾರಿ ಸ್ಥತಿ. ಇನ್ನೂ ಕೆಲವು ಪತ್ರಿಕೆಗಳು ‘ತೆನಾಲಿ ರಾಮಕೃಷ್ಣನ ಬೆಕ್ಕಿನಂತೆ’, ಇಂಥ ಸೂಕ್ಷ್ಮ ವಸ್ತುವನ್ನೊಳಗೊಂಡ ಸಾಹಿತ್ಯವನ್ನು ಮುಟ್ಟುವುದಕ್ಕೇ ಹಿಂಜರಿದುಬಿಡುತ್ತವೆ. ಈ ಹಿಂಜರಿಕೆ ಕಾರಣವಾಗಿ ನಿಜವಾದ ಸಾಹಿತ್ಯಸೃಷ್ಟಿ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಆತಂಕದ ಮನಸ್ಸು ಮುಕ್ತವಾಗಿ ವಿಹರಿಸಲಾರದು; ಅದಿಲ್ಲದೆ ನಿಜವಾದ ಸಾಹಿತ್ಯ ಸೃಷ್ಟಿ ಸಾಧ್ಯವಾಗುವುದಿಲ್ಲ. ಮುಚ್ಚಿಟ್ಟು ಬರೆಯುವ ಲೇಖಕ ರೂಪಕಗಳನ್ನು ಸೃಷ್ಟಿಸುತ್ತಾನೆ ಎಂಬುದು ನಿಜವಾದರೂ, ಎಲ್ಲ ರೀತಿಯ ಅಭಿವ್ಯಕ್ತಿಯೂ ರೂಪಕಗಳ ಮೇಲೇ ನಿಂತಿರುವುದಿಲ್ಲ. ಕಾವ್ಯ ರೂಪಕಗಳಲ್ಲಿ ಮಾತನಾಡಬಹುದು. ಆದರೆ ಕತೆ, ಕಾದಂಬರಿ, ನಾಟಕ, ಸಂಸ್ಕೃತಿ ಚಿಂತನೆಯ ಬರಹಗಳು ರೂಪಕಗಳನ್ನೇ ಆಧರಿಸುವುದು ಕಷ್ಟ. ಇಂಥ ಹೊತ್ತಿನಲ್ಲಿ ಮಾಧ್ಯಮಗಳು ಸರಿಯಾದ ನಿಲುವನ್ನು ತಳೆಯಬೇಕು; ದಿಟ್ಟತನವನ್ನು ಪ್ರದರ್ಶ   ಸಬೇಕು. ಇಲ್ಲವಾದರೆ ಸಾಹಿತ್ಯ ಕಮರಿಹೋಗುತ್ತದೆ; ನಿಜವಾದ ಸವಾಲುಗಳನ್ನು ಎದುರಿಸದೆ ಪಲಾಯನವಾದವನ್ನು ರೂಪಿಸಿಕೊಳ್ಳುತ್ತದೆ.

ಸಂವೇದನೆಯ ಪ್ರಶ್ನೆ ಕೂಡಾ ಮುಖ್ಯವಾದದ್ದು: ಸಾಹಿತ್ಯ, ರಾಜಕೀಯ, ಸಂಸ್ಕೃತಿ, ಕಲೆ ಹೀಗೆ ಯಾವುದೇ ವಿಚಾರದಲ್ಲಿ ಒಂದು ಸಮಾಜ ಪ್ರಬುದ್ಧವಾಗಿ ವರ್ತಿಸಬೇಕಾದರೆ ಅದರ ಸಂವೇದನೆ ಬಹಳ ಮುಖ್ಯವಾಗುತ್ತದೆ. ಸಮಾಜದ ಸಂವೇದನೆಯನ್ನು ಹರಿತಗೊಳಿಸಬೇಕಾದ ಹೊಣೆ ಮಾಧ್ಯಮಗಳ ಮೇಲೆಯೇ ಇರುತ್ತದೆ. ಇದು ಮಾಧ್ಯಮಗಳ ಗುರುತರವಾದ ಹೊಣೆಗಾರಿಕೆಯೂ ಹೌದು. ಸಾಹಿತ್ಯ ಮತ್ತು ಮಾಧ್ಯಮಗಳು ಕೂಡಿಯೇ ಈ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗುತ್ತದೆ. ಸಾಹಿತ್ಯ ಪತ್ರಿಕೆಗಳ ಪ್ರಭಾವಶಾಲಿಯಾಗಿರುವ ಕಾಲದಲ್ಲಿ ಸಂವೇದನೆಯನ್ನು ಹರಿತಗೊಳಿಸುವ ಕೆಲಸವನ್ನು ಅವು ಮಾಡಬಹುದು. ಈ ಸಾಹಿತ್ಯ ಪತ್ರಿಕೆಗಳಿಂದ ಅಧಿಕ ಪ್ರಸಾರದ ಪತ್ರಿಕೆಗಳು ಪ್ರಭಾವಗೊಂಡು ಕೆಲಸಮಾಡಬಹುದು. ಹೀಗೆ ಮಾಡಿರುವ ಉದಾಹರಣೆಗಳು ನಮ್ಮ ಚರಿತ್ರೆಯಲ್ಲಿ ಧಾರಾಳವಾಗಿ ಸಿಕ್ಕುತ್ತವೆ. ಸಾಹಿತ್ಯ ಪತ್ರಿಕೆಗಳು ಮಂದವಾದಾಗ, ದೊಡ್ಡ ಪತ್ರಿಕೆಗಳೇ ತಮ್ಮ ಸಂವೇದನೆಯನ್ನು ಹರಿತಗೊಳಿಸಿಕೊಂಡು ಕ್ರಿಯಾಶೀಲವಾಗಬೇಕಾಗುತ್ತದೆ. ಸ್ವಾತಂತ್ರ್ಯ ಪೂರ್ವದ ಮತ್ತು ಸ್ವಾತಂತ್ರ್ಯಾನಂತರದ ಕೆಲವು ದಶಕಗಳಲ್ಲಿ ಮಾಧ್ಯಮಗಳಲ್ಲಿ ದುಡಿಯುತ್ತಿದ್ದ ಹಲವರು ಸ್ವತಃ ಸಾಹಿತಿಗಳಾಗಿದ್ದರು; ಚಿಂತಕರಾಗಿದ್ದರು; ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಂದರ್ಭಗಳನ್ನು ಸಮರ್ಥವಾಗಿ ಪರಿಭಾವಿಸುವ, ವಿಶ್ಲೇಷಿಸುವ ಸಾಮಥ್ರ್ಯವನ್ನು ಪಡೆದವರಾಗಿದ್ದರು. ಸಾಹಿತ್ಯ ಪತ್ರಿಕೆಗಳ ಸಂಪಾದಕರಾಗಬಲ್ಲ ಅರ್ಹತೆಯನ್ನೂ ಪಡೆದಿದ್ದರು. ಹೀಗಾಗಿ ಅವರ ಸಂವೇದನೆ ಹರಿತವಾಗಿಯೇ ಇರುತ್ತಿತ್ತು. ಇವತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಎಳೆಯ ತಲೆಮಾರಿನ ಬುದ್ಧಿಶಕ್ತಿ ಹರಿತವಾಗಿದೆ ಎಂಬುದು ನಿಜ; ಅದು ಹೊಸ ತಂತ್ರಜ್ಞಾನಕ್ಕೆ ಬಹುಬೇಗ ಸ್ಪಂದಿಸಬಲ್ಲ ಸಾಮಥ್ರ್ಯವನ್ನೂ ಪಡೆದಿದೆ. ಆದರೆ ಬೃಹತ್ ಬಂಡವಾಳದ ಎದುರಿನಲ್ಲಿ ಅದು ಸ್ವತಂತ್ರವಾಗಿ ಕೆಲಸಮಾಡಬಲ್ಲ ನಿಲುವನ್ನು ಪಡೆಯುವುದು ಕಷ್ಟ; ಹಾಗೆಯೇ ಈ ತಲೆಮಾರನ್ನು ಪ್ರಭಾವಿಸುತ್ತಿರುವ ಮೌಲ್ಯಗಳು ಯಾವುವು ಎಂಬುದನ್ನೂ ನಾವು ನೋಡಬೇಕಾಗಿದೆ. ಇಂಥ ಪರಿಸ್ಥಿತಿಯಲ್ಲಿ ಮಾಧ್ಯಮಗಳ ನಡೆ ಯಾವ ದಿಕ್ಕಿನಲ್ಲಿರುತ್ತದೆ ಎಂಬುದನ್ನು ಊಹಿಸುವುದು ಕಷ್ಟವಾಗಲಾರದು. ಅನೇಕ ಮಿತಿಗಳಲ್ಲಿ ಮಾಧ್ಯಮಗಳು ಕೆಲಸಮಾಡಿದರೆ ಏನಾಗಬಹುದು? ಹಣಕಾಸೇ ಮುಖ್ಯವಾಗಿ, ಮೌಲ್ಯಗಳೆಲ್ಲ ಅನಾದರಕ್ಕೊಳಗಾದರೆ ಅಂಥ ಸಮಾಜ ಮುನ್ನಡೆಯುವುದಾದರೂ ಹೇಗೆ? ಈ ಎಚ್ಚರವನ್ನು ಸಮುದಾಯದಲ್ಲಿ ಮೂಡಿಸಬೇಕಾದವರು ಯಾರು?

4

ಇದಕ್ಕೆ ಅಪವಾದವೆನ್ನುವಂತೆ ಅಧಿಕ ಪ್ರಸಾರವನ್ನೂ, ಸಾಹಿತ್ಯಪತ್ರಿಕೆಗಳ ಸತ್ವವನ್ನೂ ಇಟ್ಟುಕೊಂಡ, ತನ್ನದೇ ಮೌಲ್ಯಕ್ಕೆ ಕಟ್ಟುಬಿದ್ದು ಸಮಾಜನಿಷ್ಠವಾಗಿ, ಅತ್ಯಂತ ನಿಷ್ಠುರವಾಗಿ ಕಾರ್ಯನಿರ್ವಹಿಸಿದ ಪತ್ರಿಕೆಯೊಂದು ಕನ್ನಡದಲ್ಲಿ ಇತಿಹಾಸವನ್ನು ಸೃಷ್ಟಸಿತು. ಕನ್ನಡದ ಅತ್ಯಂತ ಮಹತ್ವದ ಸಾಹಿತಿಯಾದ ಪಿ.ಲಂಕೇಶ್ ಅವರು ರೂಪಿಸಿದ ‘ಲಂಕೇಶ್ ಪತ್ರಿಕೆ’ ಸಾಮಾಜಿಕವಾಗಿ, ವೈಚಾರಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಅಗಾಧ ಪರಿಣಾಮವನ್ನು ಬೀರಿತು. ಜಾಹಿರಾತನ್ನೇ ಸ್ವೀಕರಿಸದೆ, ತನ್ನ ಸ್ವಾತಂತ್ರ್ಯ ಮತ್ತು ಚಿಂತನೆಯನ್ನು ಬಿಟ್ಟುಕೊಡದೆ, ಮೌಲ್ಯಗಳಿಗಾಗಿ ಹೋರಾಡಿ, ಸಮಾಜದ ಆರೋಗ್ಯವನ್ನು ಮತ್ತು ಹಿತವನ್ನು ಕಾಯ್ದ ಪತ್ರಿಕೆ ಇದು. ಹೊಸ ಹೊಸ ಪ್ರತಿಭೆಗಳು ಇಲ್ಲಿ ಮುಖಪಡೆದವು. ಅಭಿವ್ಯಕ್ತಿಯ ವಿಧಾನದಲ್ಲೂ ತಾಜಾತನ ಕಾಣಿಸಿತು. ಹೊಸ ಓದುವ ವರ್ಗವನ್ನೂ ಈ ಪತ್ರಿಕೆ ಸೃಷ್ಟಿಸಿತು. ಸಂಸ್ಕೃತಿ, ಸಾಹಿತ್ಯ ಮತ್ತು ರಾಜಕೀಯ, ಒಂದರೊಳಗೊಂದು ಅರ್ಥಪೂರ್ಣವಾಗಿ ಯಾವ ಹದದಲ್ಲಿ ಬೆರೆಯಬಹುದು ಎಂಬುದನ್ನು ಈ ವಾರ ಪತ್ರಿಕೆ ತೋರಿಸಿಕೊಟ್ಟಿತು. ಇದು ಲಂಕೇಶರ ಮಹಾನ್ ಪ್ರತಿಭೆಯ ಫಲವಾಗಿತ್ತು. ಕನ್ನಡ ಪತ್ರಿಕೋದ್ಯಮದಲ್ಲಿ ಲಂಕೇಶ್ಪತ್ರಿಕೆಗಿರುವ ಸ್ಥಾನ ಅತ್ಯಂತ ಮಹತ್ವದ್ದು.

ಎಲ್ಲವನ್ನೂ ಸರಕಾಗಿ ಕಾಣುವ ಮತ್ತು ಮನುಷ್ಯರನ್ನು ಗ್ರಾಹಕರಾಗಿ ನೋಡುವ ಇಂದಿನ ಜಾಗತೀಕರಣದ ಸನ್ನಿವೇಶದಲ್ಲಿ ಸಾಹಿತ್ಯವನ್ನು ಸಾಹಿತ್ಯವಾಗಿ, ಮನುಷ್ಯರನ್ನು ಮನುಷ್ಯರನ್ನಾಗಿ ಉಳಿಸಿಕೊಳ್ಳಬೇಕಾದ ಹೊಣೆ ಮಾಧ್ಯಮಗಳ ಮೇಲಿದೆ; ಹಾಗೆಯೇ ಸಾಹಿತ್ಯದ ಮೇಲೆಯೂ.

(ಬೆಂಗಳೂರು ಆಕಾಶವಾಣಿ ಕೇಂದ್ರವು 2013ರ ಮಾರ್ಚ್ 22ರಿಂದ ಮೂರು ದಿನಗಳ ಕಾಲ ಏರ್ಪಡಿಸಿದ್ದ ‘ನವ ನವೋದಯ-ಕನ್ನಡ ಸಾಹಿತ್ಯದ ನಾಳೆಗಳು’ ವಿಚಾರ ಸಂಕಿರಣಕ್ಕೆ ಸಿದ್ಧಪಡಿಸಿದ ಪ್ರಬಂಧ.)

‍ಲೇಖಕರು avadhi

23 April, 2013

ನಿಮಗೆ ಇವೂ ಇಷ್ಟವಾಗಬಹುದು…

4 Comments

  1. ಪಂಡಿತಾರಾಧ್ಯ ಮೈಸೂರು

    ಚೆನ್ನಾಗಿದೆ. ಪ್ರಬುದ್ಧ ಕರ್ಣಾಟಕವನ್ನು ಪ್ರಬುದ್ಧ ಕರ್ನಾಟಕ ಎಂದಿರುವುದನ್ನು ಸರಿಪಡಿಸಬೇಕು.

  2. Pramod

    ಸ೦ಗ್ರಹ ಯೋಗ್ಯ ಪ್ರಬ೦ಧ.

  3. Sudha ChidanandaGowda

    ಜಿಪಿಬಿ ಸರ್,
    ತುಂಬಾ ಚೆನ್ನಾಗಿದೆ ಈ ಲೇಖನ. ಮಾಹಿತಿಪೂರ್ಣ ಕೂಡಾ.
    ಇದುವರೆಗು “ಸದ್ಭೋಧಚಂದ್ರಿಕೆ”ಯೇ ಕನ್ನಡದ ಮೊದಲ ಸಾಹಿತ್ಯಕಪತ್ರಿಕೆ ಎಂದು ತಿಳಿದಿದ್ದೆ.
    “ಸುವಾಸಿನಿ”ಯ ಬಗ್ಗೆ ತಿಳಿಸಿ ಉಪಕರಿಸಿದಿರಿ.
    ಧನ್ಯವಾದ ಸರ್

  4. mallikarjuna kalamarahalli

    Adyayanapoorna..Sangraha yogya leekana.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading