ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಸಿ ಕಂಬಾರ ಹೊಸ ಕವಿತೆ- ಲಜ್ಜೆಯ ವಜ್ಜೆ

ಜಯಶ್ರೀ ಸಿ ಕಂಬಾರ

ನಟ್ಟ ನಡುವಿನ ಬಿಸಿಲಿನಲ್ಲಿ ನಡೆದಳು
ನವಿಲ ಹಸಿರ ಸೀರೆ ನೆರಿಗೆಗಳ ಒದೆಯುತ್ತ
ಗೆಜ್ಜೆ ಸದ್ದನ್ನು ಗಾಳಿ ಪದರುಗಳಲ್ಲಿ ಅಲೆಯಾಗಿಸುತ್ತ
ಮೌನ ಸಂಭಾಷಣೆಯ ದನಿಯ ಆಲಿಸಿ
ಗಿರಕಿ ಹೊಡೆಯುವ ಕಾಡಿನಲ್ಲಿ ಸಾಗಿದಳು.

ಆಕೆಯ ಸೋಕಿದ ಗಾಳಿ ತನ್ನ ಎಳೆಎಳೆಗಳನ್ನು
ಸುರುಳಿ ಕೂಡಿಸಿ ಸುತ್ತುತ್ತ ಹಿಂಬಾಲಿಸಿತು.
ಹೂಗಳು ಅರಳುವುದ ನಿಲ್ಲಿಸಿ ಉಸಿರು ಬಿಗಿ ಹಿಡಿದವು.
ಮೊಳಕೆ ಒಡೆಯುವುದ ಮರೆತು ಕಣ್ಮುಚ್ಚಿ
ಮಣ್ಣಲ್ಲಿ ಧ್ಯಾನಿಸಿದವು ಬೀಜಗಳು.

ಹೆಜ್ಜೆ ಹೆಜ್ಜೆಗೂ ಮಾತುಗಳ ತುಳಿಯುತ್ತ
ಮೋಹದ ಶಬ್ದಗಳ ತುಳಿಯುತ್ತ
ರೇಶಿಮೆ ಸೀರೆಯ ನೆರಿಗೆಗಳ ಒದೆಯುತ್ತ
ದಟ್ಟ ಅಡವಿಯಲ್ಲಿ ಬೆಚ್ಚಗೆ ಗರ್ಭ ಗುಡಿಯಲ್ಲಿ
ಅಡಗಿದ ಚೆಲುವ ನಾಗಲಿಂಗನ ಕರೆದಳು.
ಒಮ್ಮೆ ಕರೆದಳು, ಮತ್ತೊಮ್ಮೆ, ಮಗದೊಮ್ಮೆ
ಓಲೈಸಿ ಕರೆದಳು, ರಮಿಸಿ ಕರೆದಳು
ಕ್ಷಿತಿಜದ ಗಡಿ ದಾಟಿ ಅವನ ಕಾಣಲು ನಡೆದಳು
ಸವೆದ ಕಲ್ಲಿನ ಗುಡಿಯ ಹೊಸ್ತಿಲಿನ ಒಳಗೆ.

ಕಗ್ಗತ್ತಲಲ್ಲಿ ಮಿರಮಿರನೇ ಮಿಂಚುವ
ಶಿವನ ಲಿಂಗಕ್ಕೆ ಬೆವರ ಮುತ್ತಿನ ಸಾಲು.
ನಿರೀಕ್ಷೆಯ ನಾದಗಳ ಎಬ್ಬಿಸುವ ಬಳೆಗಳ ತೆಗೆದಳು
ಬಂಧಿಸಿದ ಕಾಲ್ಗೆಜ್ಜೆಯ ಸರಪಳಿ ಬಿಚ್ಚಿದಳು
ಲಜ್ಜೆ ಎಂಬ ವಜ್ಜೆಯ ನೆರಿಗೆಯ ಜಾಡಿಸಿದಳು
ಅಹಂ ಎಂಬ ನೆರಿಗೆಯ ಕಿತ್ತೊಗೆದಳು
ಮದ ಅಂಟಿದ ನೆರಿಗೆಯ ಬಿಸುಟಳು

ಒಂದೊಂದೇ ನೆರಿಗೆಯ ಬಿಚ್ಚುತ್ತ
ಸೆರಗಿಗೆ ಸುತ್ತಿದ ಭವಬಂಧನಗಳ ಚೆಲ್ಲಿದಳು.
ಎದೆಗವಚಿದ ಭವ ಭಾರವನ್ನು ಸಡಿಲಿಸಿ ತೆಗೆದಳು
ಕ್ಷಿತಿಜದಾಚೆಯಿಂದ ಮೂಡಿದ ಮೌನದ
ಸಿಡಿಲೊಂದು ಎರಗಿ ಲಿಂಗ ಇಬ್ಭಾಗವಾಗಿ
ಬಯಲಾಗಿ ಹೊರಬಂದ ಚೆನ್ನಮಲ್ಲಿಕಾರ್ಜುನ.

‍ಲೇಖಕರು Admin

28 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading