ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ದೇಶಪಾಂಡೆ ಕವಿತೆ – ಬೆಂಕಿ ಬಿದ್ದಿದೆ ಕೆರೆಗೆ…

ಜಯಶ್ರೀ ದೇಶಪಾಂಡೆ

ಇದ್ದುಬಿಡುತ್ತೇನೆ ಬಿಡು
ನಾ ನನ್ನ ಹೆಜ್ಜೆಗಳ ಜತೆಗೆ,
ಏಕೆಂದರೆ ಇದು ನನ್ನ ನಿನ್ನ
ಗಮ್ಯಗಳ ಪ್ರಶ್ನೆ!
ನೀ ಮುಟ್ಟಿದಲ್ಲಿಗೇ ನಾ ಮುಟ್ಟಬೇಕಿಲ್ಲ…
ನಿನ್ನ ಹೆಜ್ಜೆಗುರುತಿನ ಪಾದಕ್ಕೂ
ನನ್ನ ಪಾದಕ್ಕೂ ಇದೆಯಲ್ಲ ವ್ಯತ್ಯಾಸ!

ಹೆಜ್ಜೆಗಳಲ್ಲಿ ಯಾಕಿಷ್ಟು ಅಂತರ
ಅಂತ ಕೇಳಲೇ ಇಲ್ಲ ನೀ ನನ್ನ.
ವಿಳಂಬಿತ ನಡೆ ತಟ್ಟಲಿಲ್ಲ,
ಬೇಕು ನಿನಗೂ ಅಷ್ಟು
ಕಸುವು ಅನ್ನಲಿಲ್ಲ.

ನಿನ್ನ ವೇಗಕ್ಕಿತ್ತು ಜಗತ್ತಿನ ಹಿಮ್ಮೇಳ..

ಮೀಸೆ ತಿರುವುವ ಗಂಡಿಗಲ್ಲವೇ

ಶೌರ್ಯದ ಪದಕಗಳು?
ನನಗೋ ಊರೆಗೋಲಿಲ್ಲ
ಅಷ್ಟೇ ಖುಷಿ ಹೌದಲ್ಲ?

‘ಓಹೋ ಕಂಡಿರಾ ಅವನ ಓಟ?’

ಅನುತ ಸಂಭ್ರಮಿಸುವವರ ನಡುವೆ
ಆಗೊಂದು ಈಗೊಂದು ಪಾದ

ಸರಿಸುತ್ತಿದ್ದ ನಾ
ಯಾರ ಕಣ್ಣಿಗೂ ಬೀಳಲೇ ಇಲ್ಲ.

ನಿನ್ನ ಪಾದಗಳ ಹೊಳಪಿಗೆ..

ವೇಗಕ್ಕೆ, ಬಿರುಸಿಗೆ
ಬಿದ್ದ ಚಪ್ಪಾಳೆಗಳದೆಷ್ಟು ?

‘ನಾನೂ ಬಂದೆ ಇರು’
ಅಂದ ನನ್ನ ಕ್ಷೀಣ ದನಿ

ಹಬೆಯಾಡಿದ ಬಿಸಿಯನ್ನದ

ಒಲೆಯ ಹಿಂದೆ…
ಎದ್ದೆದ್ದು ಆರಿ, ಹೊಗೆಯಿಂದೆದ್ದು

ನಾ ಹೊರಬಿದ್ದೇನೆನ್ನುವಾಗ
ನಿನ್ನ ಸುಳಿವೇ ಇರಲಿಲ್ಲವಲ್ಲ,
ರಿಂಗ್ ರೋಡಿನಂಥ ವತು೯ಲರಸ್ತೆಗಳ
ಧೀಂ ತಕಿಟ ಹರಿನಾಟ್ಯಗಳ

ತಿರುವುಗಳ ಲಂಘಿಸಿ..ನೀ
ಎಲ್ಲೋ ಕಾಣದಂತಾಗಿಬಿಟ್ಟಿದ್ದೆ.

ಆಕಾಶಕ್ಕೆ ಲಗ್ಗೆ ಹಾಕುವ
ನಿನ್ನ ಹುಚ್ಚಿನ ಬೆನ್ನಟ್ಟಿ

ನಾ ಬರಲೇಬೇಕೆಂಬ

ಕರಾರೇನಿರಲಿಲ್ಲ.

ತ್ರಿವಿಕ್ರಮನಾಗುವ ಹುಚ್ಚಿನಲ್ಲಿ
ಇದ್ದ ನೆಲಕ್ಕೊಂದು ಪಾದಊರಲಾಗದ

ತ್ರಿಶಂಕು ಆಗಹೊರಟ ನಿನಗೆ
ನಾಇಟ್ಟ ತಡೆಯೊಳಗೆ
ತಪ್ಪಿತ್ತೇ?ಹೇಳು…
ಕೇಳಿಲ್ಲಿ ಗೆಳೆಯ,
ತಪ್ಪಿಲ್ಲ ಕನಸುಗಳ
ಹಿಮ್ಮೆಟ್ಟುವಲ್ಲಿ- ಉಡಿತುಂಬ

ಬಾಚಿಕೊಳಲೋಡುವಲ್ಲಿ.
ಆದರೆ ಕನಸೆಲ್ಲ
ಕನಸೇ ಅಂತ ತಿಳಿಯದೆ ಹೋದೆಯಲ್ಲ
ಅದಲ್ಲವೇ ತಪ್ಪು!?

ಅಲ್ಲೆಲ್ಲೋ ಎಂದೋ
ನೀ ಹೊರಳಿ ನೋಡಿದರೆ
ಇದ್ದುಬಿಟ್ಟಿರುತ್ತೇನೆ ನಾ

ನನ್ನ ಹೆಜ್ಜೆಗಳ ಜೊತೆಗೆ
ನನ್ನ ಪಾದಗಳ ಜೊತೆಗೆ,
ಕೆರೆಯ ಕಣ್ಣೀರಿಗೆ ಗಿರಾಕಿಗಳಿಲ್ಲ….

ಏಕೆಂದೆಯಾ?ಬೆಂಕಿ ಬಿದ್ದಿದೆ ಕೆರೆಗೆ!

‍ಲೇಖಕರು avadhi

27 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading