ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯರಾಮಾಚಾರಿ ಹೊಸ ಕವಿತೆ- ನಮ್ಮ ಮೆಟ್ರೊ…

ಜಯರಾಮಾಚಾರಿ

ಲಿಫ್ಟುಗಳು:

ಪ್ರಯಾಣಿಕರ ಧಾವಂತವನ್ನು
ಸೀಟಿಗಾಗಿ ಹೊಂಚು ಹಾಕುವ ಸಣ್ಣತನವನ್ನು
ಒಂದೆತ್ತರದ ಸ್ಥರಕ್ಕೆ ನಿಲ್ಲಿಸಿ ನೂಕುತ್ತದೆ

ಎಸ್ಕಲೇಟರುಗಳು:

ಅವಳು ಎಸ್ಕಲೇಟರಿನಲ್ಲಿ ಇಳಿಯುವಾಗ
ತೊಳೆಯಬೇಕಾದ ಪಾತ್ರೆಗಳು
ಮಾಡಬಹುದಾದ ಅಡಿಗೆ
ಸಹಿಸಬೇಕಾದ ಮಿಥುನ
ನೆನಪಾಗಿ ಕುಸಿಯುತ್ತಾಳೆ
ಕೊನೆ ಮೆಟ್ಟಿಲು ಸಾಂತ್ವನ ಕೊಡಲಾಗದೆ
ಅಡಗಿಕೊಳ್ಳುತ್ತದೆ

ಟಿಕೇಟು ಸೆಂಟರುಗಳು:

ಅವಳ ಸೇರುವ ಆತುರದಲ್ಲಿ
ಟಿಕೇಟು ಕೊಡುವ ಹುಡುಗಿಯ ಚೇಂಜ್ ಗೆ
ಕೂಡ ಕಾಯದೇ ಆತ ಹೊರಟಾಗ
ಅದನ್ನವಳು ಜೇಬಿಗಿಳಿಸಿಕೊಳ್ಳುವಳು
ಜೀವನ ಪೂರ್ತಿ
ಋಣಭಾರ ಅವಳ ಹೆಗಲೇರುತ್ತದೆ

ರೈಲುಗಳು-ಸೀಟುಗಳು:

ವೃದ್ದರಿಗಾಗಿ
ಮಹಿಳೆಯರಿಗಾಗಿ
ವಿಕಲ ಚೇತನರಿಗಾಗಿ
ಅನಾಯಾಸವಾಗಿ ಅಂಡಿಟ್ಟ
ಪ್ರಯಾಣಿಕರು
ಐಡೆಂಟಿಟಿಯನ್ನು ಕೊಂದಿದ್ದಾರೆ

ಸೆಕ್ಯುರಿಟಿ-ಹೌಸ್ ಕೀಪಿಂಗ್:

ರಾತ್ರಿ ಪಾಳಿಗೆ ಬಂದ
ಸೆಕ್ಯುರಿಟಿಯವಳಿಗೆ ಮನೆಯ ನೆನಪು,
ನಿಲ್ದಾಣದ ಗದ್ದಲದಲ್ಲಿ
ಗಂಡನ ಗೊರಕೆ ಸದ್ದು
ಮಗಳ ರಗ್ಗು ಹೊದ್ದು
ಮೊಬೈಲಿನ ಹಸಿಬಿಸಿ ನರಳಿನ ಸದ್ದು
ಕೇಳಿಸದು

ಶ್ರಮಿಕರ ನಾಯಕನ ಮಾತುಗಳು
ಅಲ್ಲೆಲ್ಲೊ ಮೈಕಿಂದ
ನೆಲಕ್ಕೆ ಬಿದ್ದ ಪಾರಿವಾಳದ ಹಿಕ್ಕೆ ತೆಗೆದು
ಫ್ಲೊರು ತೊಳೆಯುವಾಗ
ಕಮ್ಯೂನಿಷ್ಯಂ ಬಗ್ಗೆ ಭಾಷಣ ಮಾಡಲು ಹೊರಟವನು
ಆತುರದಲ್ಲಿ ಅವಳು ಒರೆಸಿದ ಜಾಗದಲ್ಲೇ ನಡೆದುಹೋದ
ಮತ್ತೆ ಅವಳು ಒರೆಸಲು ಸುರು ಮಾಡಿದಳು

‍ಲೇಖಕರು Admin

12 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading