ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಕದನ ಮುಗದ ಮ್ಯಾಲೆ…

ಚೈತ್ರಾ ಶಿವಯೋಗಿಮಠ

ಯುದ್ಧಕ್ಕ ಹೋಗಿ ಬಂದ
ನನ್ನ ಮಗ
ಎದೆಯುಬ್ಬಿಸಿ ಹೇಳ್ತೀನೀ
ಗೆದ್ದ ಬಂದ ಅವ
ಯುದ್ಧ ಮುಗೀತು ಎಲ್ಲಾ
ಮುಗೀತು ಇನ್ನ ಅಂದು
ನಿರಾಳ ಆಗಬೇಕಂದೆ ನಾ

ಖರೆ ಕತಿ ಈಗ ಶುರುವಾಗ್ತದ
ಅಂತಿಂಥಾ ಕತಿ ಅಲ್ಲಿದು
ಕಣ್ಣಿರಿಂದ ಬರ್ದದ್ದು ಇದು
ರಕ್ತದ ಕಲಿ ಹಾಳಿ ತುಂಬಾ
ಕರುಳು ಹಿಂಡೂ ಕೂಗಗಳದ್ದ
ಕಾರೋಬಾರು ಅದರ ತುಂಬಾ

ರಾತ್ರೋ ರಾತ್ರಿ ಬೆಚ್ಚಿ ಬಿದ್ದು
ಚೀರ್ಕೋತ ಏಳ್ತಾನ ನನ್ನ ಮಗ
ಜೊತಿಗಾರರು ಕಣ್ಣು ಮುಂದಾ
ಚೂರು ಚೂರು ಆದರು
ಕೋವಿ ನಳಕಿಯ ಹಸಿವಿಗೆ
ಅವರ ಎದಿ ಆಹಾರ ಆತು
ಅದರ ಬಾಯಾರಿಕಿಗೆ ಅವರ
ನೆತ್ತರು ಉದಕ ಆತು

ಸಹಚರರ ಚೂರುಗಳನ್ನು
ಆಯ್ಕೊಂಡು ಗಂಟು ಕಟ್ಕೊಂಡು
ಬಂದರು ಊರಿಗೆ
ಯುದ್ಧ ಮುಗೀತು, ಶಾಂತಿಯ
ಬಿಳಿ ಬಾವುಟ ಹಾರಿಸಿದರು
ಎತ್ತರಕ್ಕ ಹಾರೋ ಧ್ವಜದಾಗಿನ
ರಕ್ತದ ಸಣ್ಣ ಕಲಿಗಳು ಹೆಂಗ ಕಂಡಾವು

ಮಗ ಮನಿಗೆ ಬಂದ
ಯೋದ್ಧ ಅವ ಗುಂಡಿಗಿ ಗಟ್ಟಿ
ಇರತದ ಅಂತ ತಿಳುವಳಿಕೆ
ಗಟ್ಟಿ ಎಲುವಿನ ಹಂದರದೊಳಗ
ಮಿದು ಹೃದಯನೆ ಅಲಾ
ಶಾಂತಿ ಯಾರಿಗೆ ಸಿಕ್ತು ಅನ್ನೂದ
ನನಗ ತಿಳಿವಲ್ತು
ಅದು ನನ್ನ ಕಣ್ಣೀರನ್ಯಾಗ,
ಮಗನ ತಳಮಳಗಳ ಜೊತಿ
ಕರಗಿ ಸಿಗಲಾರದಂಗ ಹಾರಿ ಹೋಗೇತಿ!

‍ಲೇಖಕರು Admin

28 February, 2022

1 Comment

  1. T S SHRAVANA KUMARI

    ಚಂದದ ಕವಿತೆ, ಅಭಿನಂದನೆಗಳು ಚೈತ್ರಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading