ಚೀಮನಹಳ್ಳಿ ರಮೇಶಬಾಬು ಅವರ ‘ರಾಗಿಕಾಳು’

ಧಾನ್ಯವು ಧ್ಯಾನದ ಎವೆ ತೆರೆದಾಗ – ರಾಗಿ

ಕಾತ್ಯಾಯಿನಿ ಕುಂಜಿಬೆಟ್ಟು

ನಿನ್ನ ನೆನಪಿಗೊಂದು ರಾಗಿಕಾಳು ಚೆಲ್ಲಿದ್ದೇನೆ
ಎರೆ ಹುಳುಗಳು ಮಿಸುಕಾಡುವ ನೆಲದ ಎದೆಗೆ.

ಕಡುಕಪ್ಪು ಕಾಳು
ಕಡುಕಪ್ಪು ಮಣ್ಣು
ಅಪ್ಪಿಕೊಳ್ಳುವ ಸೋಜಿಗಕ್ಕೆ ಬೆರಗಾಗಿದ್ದೇನೆ.

ವ್ಯೋಮ ಕಣ್ಣಿಗೆ ರಾಗಿಕಾಳಾಗುವ ಭೂಮಿ
ಮುಗಿಲ ನೋಟಕ್ಕೆ ಭೂಮಿ ಕಣ್ಣಾಗುವ ರಾಗಿ
ಕಾಳಿನ ಕಣ್ಣಲ್ಲಿ ಎಷ್ಟೊಂದು ಹಸಿರು!
ಮುಗಿಲ ಮುಟ್ಟುವ ಪಾತಾಳ ತಡಕುವ ಎಷ್ಟೊಂದು ಹುರುಪು.

ಅನಂತ ಆಗಸದ ಕಣ್ಣಿಗೆ ಭೂಮಿ ಎಂಬುವುದು ಒಂದು ಪುಟ್ಟ ಕಪ್ಪು ರಾಗಿ. ಮುಗಿಲಿನ ನೋಟಕ್ಕೆ ರಾಗಿಯೆಂಬುದು ಭೂಮಿಯ ಕಣ್ಣು. ಆಗಸದ ಕಣ್ಣು ಭೂಮಿಯನ್ನು ನೋಡುತ್ತಿದೆ ಎಂದರೆ ಭೂಮಿಯ ಕಣ್ಣಾದ ರಾಗಿ ಕೂಡ ಆಗಸವನ್ನು ನೋಡುತ್ತಿದೆ ಎಂದರ್ಥ. ರಾಗಿ ಎಂಬುದು ಧಾನ್ಯವೂ ಹೌದು, ಅನುರಾಗಿಯೂ ಹೌದು. ರಾಗಿಯೂ ತನ್ನ ನೋಟದಲ್ಲೇ ಮುಗಿಲಿನ ತುಂಬ ರಾಗವನ್ನು ಬಿತ್ತುತ್ತಿದೆ. ಆಗಸಕ್ಕೆ ಅಗಣಿತ ಕಪ್ಪು ಮುಗಿಲು ಕಣ್ಣುಗಳು, ಭೂಮಿಗೆ ಅಗಣಿತ ಕಪ್ಪು ರಾಗಿ ಕಣ್ಣುಗಳು.

ರಾಗಿಗೆ ಅನುರಾಗ ಮಳೆಯ ಬಯಕೆ, ಆಗಸಕ್ಕೆ ರಾಗಿಯ ಕಣ್ಣ ಒಳಗಿನ ಹಸಿರು ಕನಸನ್ನು ನನಸಾಗಿಸುವ ಬಯಕೆ. ಇದು ಪ್ರಕೃತಿ – ಪುರುಷ ಅನುರಾಗ. ಆಗಸದ ಕಣ್ಣ ದೃಷ್ಟಿಗೆ ದೂರದಿಂದ ಬ್ರಹ್ಮಾಂಡವೆಂಬುದು ಪುಟ್ಟ ಕಪ್ಪು ಧಾನ್ಯ, ರಾಗಿಯಾಂಡ. ಆಗಸ-ಭೂಮಿಯದ್ದು ಬರೇ ಕಣ್ಣು ಕಣ್ಣುಗಳ ಮಿಲನವಲ್ಲ, ಸ್ಥೂಲದಿಂದ ಸೂಕ್ಷ್ಮ, ಸೂಕ್ಷ್ಮಾತಿಸೂಕ್ಷ್ಮದೊಳಗಿನ ಸೂಕ್ಷ್ಮ…  ನೋಡುವಿಕೆಯು ದೃಷ್ಟಿಯು ದೃಷ್ಟಿಕೋನವಾಗುತ್ತ, ಹೊರನೋಟವು ಒಳನೋಟವಾಗುತ್ತ… ಸೂರ್ಯನ ಸುತ್ತ ಬೆಳಕಿನ ಸುತ್ತ ಸುತ್ತುವ ಚಲನಶೀಲ ಭೂಮಿಯ ರಾಗಿ ಕಣ್ಣ ಒಳಗಿನ ಜೀವ ಹಸಿರಲ್ಲಿ ಒಂದಾಗಿ ಮೊಳಕೆಯೊಡೆದು ಬೆಳೆದು ಫಸಲಾಗಿ, ಜೀವಕೋಟಿಗಳ ಒಡಲು ಸೇರಿ ಮಣ್ಣಾಗಿ ಮತ್ತೆ ಮತ್ತೆ ರಾಗಿ ಕಣ್ಣುಗಳಲ್ಲಿ ಹಸಿರು ಆಗಸವನ್ನು ಇಣುಕುವ ಅನಂತ ಕ್ರಿಯಾಶೀಲ ಸೃಜನಶೀಲ ಜೀವಶಕ್ತಿಯ ಅದ್ಭುತವನ್ನು ಕವಿಯ ಹೃದಯ ಭೂಮಿಯ ರಾಗಿ ಕಣ್ಣುಗಳು ಬೆರಗಿನಿಂದ ನೋಡುತ್ತವೆ.

ಕವಿ ಕಣ್ಣಿಗೆ ರಾಗಿಕಾಳು ಎಂಬುವುದು ಮಣ್ಣಒಡಲಲ್ಲಿ ಮೊಳೆತು ಬೆಳೆದು ಫಸಲು ನೀಡಿ ಗೊಬ್ಬರವಾಗಿ ಮಣ್ಣಾಗುವ ಚಲನಶೀಲ ಕ್ರಿಯಾಶೀಲ ಧಾನ್ಯ ಮಾತ್ರವಲ್ಲ, ಮತ್ತೆ ಮತ್ತೆ ಮೂಲರೂಪ ಪಡೆಯುವ ರಾಗಿಯಾಗುವ ರಾಗಚಕ್ರ. ಕಾಲಚಕ್ರದ ಉರುಳುವಿಕೆಯೊಂದಿಗೆ ರಾಗಚಕ್ರದ್ದು ಅನಂತ ಯಾನ. ಸ್ಥಿರ ಸೂರ್ಯನ ಸುತ್ತ ಸುತ್ತುತ್ತಲೇ ಇರುತ್ತದೆ. ಚಲನಶೀಲ ಭೂಮಿ. ಅದರದ್ದು ಅಂತರ್ಮುಖಿ ಚಲನೆಯೂ ಹೌದು, ಬಹಿರ್ಮುಖಿ ಚಲನೆಯೂ ಹೌದು. ರಾಗಿ ಎಂದರೆ ಧಾನ್ಯ ಮಾತ್ರವಲ್ಲ ಅದು ಧ್ಯಾನವೂ ಹೌದು, ತಾದಾತ್ಮ್ಯ. ಒಡಲ ಒಳಗಿಂದ  ಹೊರಚಲಿಸುವ ಮುನ್ನ ಧಾನ್ಯದ ಒಳಗೇ ನಡೆಯುವ ಸೃಷ್ಟಿಯ ಧ್ಯಾನವೂ ಹೌದು.

ಧಾನ್ಯದ ಒಳಗೆ ಕತ್ತಲಲ್ಲಿ ಸಂತಳಂತೆ ನಿಂತಿರುವ ಹಸಿರು ಪ್ರಕೃತಿಯ ಅಂತರ್ಧ್ಯಾನವನ್ನು ಭಂಗಿಸಿ ಕತ್ತಲಿಂದ ಬೆಳಕಿನತ್ತ, ಮಣ್ಣಿಂದ ಆಗಸದತ್ತ, ಮೂರ್ತದಿಂದ ಅಮೂರ್ತದೆಡೆ ಚಲಿಸುವಂತೆ ಮಾಡುವ ಅನುರಾಗಿಯೂ ಹೌದು. ಕವಿಗೆ ಭೂಮಿ ಬೇರೆಯಲ್ಲ, ಧಾನ್ಯ  ಬೇರೆಯಲ್ಲ. ಧಾನ್ಯವೆಂಬುದು ಒಂದು ಮನುಷ್ಯ ಶರೀರವೂ ಹೌದು. ಜೀವದಿಂದ ಜೀವದ ಉದ್ದೀಪನ. ಹೃದಯ, ಮೆದುಳು.. ಇಡೀ ಶರೀರವೇ ರಾಗಿಯಾಗುವ… ‘ಕಪ್ಪು ತಾಯಿಯ ಮೊಲೆತೊಟ್ಟಿನಂತಾ ರಾಗಿ’ ಯಿಂದ ಜಿನುಗುವ ಮಮತೆಯ ಹಾಲು.. ರಾಗಿಯೇ ಭೂಮಿಯಾಗುವ, ಭೂಮಿಯೇ ರಾಗಿಯಾಗುವ  ತಾದಾತ್ಮ್ಯದಲ್ಲಿ, ಅದ್ವೈತರಲ್ಲಿ ‘ಮೊಳಕೆಯೊಡೆಯದೆ ಮತ್ತೆ?’ ಎಂಬ  ಜೀವಾಂಕುರದ ಬಯಕೆಯಲ್ಲಿ ಕವನ ನಿಂತರೂ ನಿಲ್ಲುವುದಿಲ್ಲ… ಮೊಳಕೆ ಕಾಯುತ್ತಲೇ ಮೊಳೆಯುತ್ತದೆ ಮತ್ತೆ ಮತ್ತೆ. ರಾಗಿಯಿಂದ ಭೂಮಿ ಮೊಳೆಯುತ್ತದೆ, ಭೂಮಿಯಿಂದ ರಾಗಿ ಮೊಳೆಯುತ್ತದೆ. ಒಟ್ಟಿನಲ್ಲಿ  ಕವಿ ಚೀಮನಹಳ್ಳಿ ರಮೇಶ ಬಾಬು ಅವರು ತಮ್ಮ ‘ರಾಗಿಕಾಳು’ ಕವನದಲ್ಲಿ ಮಾತ್ರವಲ್ಲ, ಇಡೀ ಕೃತಿ ಭೂಮಿಯ ತುಂಬ ರಾಗದ ಕಾಳುಗಳನ್ನು ಚೆಲ್ಲಿದ್ದಾರೆ. 

‘ಪಯಣ’ ವೆಂಬ ಕವನ ಕೂಡ ರಾಗಿಯದ್ದೇ  ಪಯಣ, ಕ್ಷಣ ವಿರಾಗದ ನಿಲ್ದಾಣ ಅನಿಸುತ್ತದೆ. ದೀರ್ಘ ಜೀವಪಯಣದ ನಡುವೆ ಕ್ಷಣ ನಿಂತು ತನ್ನದೇ ಬಾಳಿನ ಹೆಜ್ಜೆ ಗುರುತುಗಳತ್ತ ಕಣ್ಣು ಹಾಯಿಸಿದ ಹಾಗೆ ಬಾಳಿನ ಅರ್ಥದ ಶೋಧ ನಡೆಸುತ್ತಾನೆ ಕವಿ. ಉಸಿರಿನ ಹೆಜ್ಜೆಯ ಹುಡುಕಾಟವಿದು;

ಕಾಣುವುದಿಲ್ಲ ಕಣ್ಣಿಗೆ ಎಂದರೇನು?
ಎಲೆ ಅಲುಗಾಡುತ್ತದಲ್ಲ – ಕಾಣ್ಕೆಯಲ್ಲವೆ ಅದು!
ಸಿಗುವುದಿಲ್ಲ ಕೈಗೆ ಎಂದರೇನು?
ಎದೆ ತುಂಬುತ್ತದಲ್ಲ – ದಕ್ಕುವುದೆಂದರೆ ಮತ್ತಿನ್ನೇನು?

ಗಾಳಿಯಿದೆ ಎಂಬುದಕ್ಕೆ ಎಲೆಗಳ ಚಲನೆಯೆ ಗುರುತು. ಗಾಳಿಯ ಹೆಜ್ಜೆ ಗುರುತು ಎಲೆಗಳ ಮೇಲೆ. ಗಾಳಿ ಮಾತ್ರ ಪಯಣ ಮಾಡುವುದಿಲ್ಲ, ಎಲೆಯದ್ದೂ ಪಯಣವೇ. ಮಣ್ಣಲ್ಲಿ ಹೂತ ಬೀಜವು ಮರವಾಗುವುದು ಪಯಣವೇ. ಪ್ರತಿಯೊಂದಕ್ಕೂ ಪಯಣಿಸಲು ಪಾದಗಳಿವೆ, ಎಲೆ, ಹೂ, ಬೀಜ ಎಲ್ಲವೂ ಪಾದಗಳೇ, ‘ಪಾದಗಳ ಲೋಕ’ ಕವನದಲ್ಲಿ ಈ ಪಾದಗಳನ್ನು ಅಳತೆ  ಮಾಡುತ್ತ ವ್ಯಾಖ್ಯೆಗಳನ್ನು ನೀಡಿದ್ದಾರೆ. ಪಂಚಭೂತಗಳದ್ದೂ ಅನಂತ ಯಾನವೇ. ಒಟ್ಟಿನಲ್ಲಿ ಜೀವಿಯ ಹುಟ್ಟು- ಬದುಕು – ಸಾವು ಎಂಬುವುದು ಮಹಾಪಯಣ. ಕಣ್ಣಿಗೆ ಕಾಣುತ್ತಿರುವ ಚಲನೆಗಳೆಲ್ಲವೂ ಕಾಣದ ಪಾದಗಳ ಪಯಣದ ಕಾಣ್ಕೆ. ‘ರಾಗಿಕಾಳು’ ಕವನದ ನೆರಳಂತೆ ಭಾಸವಾಗುತ್ತದೆ ‘ಪಯಣ’ ಕವನ. ‘ಎದೆಯ ಮೇಲಿನ ನಡಿಗೆ’ ಕವನದಲ್ಲಿ ಪ್ರಭುತ್ವದ ಆಳುವ ತುಳಿತದ ತೆವಲಿನ ನಡಿಗೆಗೆ ರಕ್ತ ನೆಕ್ಕುವ ಸೇಡು.

ಎದೆಯ ಮೇಲಿನ ನಡಿಗೆ ಒಂದು ಕಲೆಗಾರಿಕೆ. ಅದು ಎದೆಯ ಕಲೆ. ಅದು ಹೂವಂತೆ ಅರಳುವ ಅರಳಿಸುವ ಕಲೆ ಎನ್ನುತ್ತಾರೆ. ‘ಬೊಗಸೆ’ ಕವನದ ಬೊಗಸೆಯಲ್ಲಿ ಹೂವು, ಎಲೆ, ಭೂಮಿ… ಬೇರೆ ಬೇರೆ ರೂಪಗಳನ್ನು, ನಕ್ಷತ್ರ ನಗು, ಚಂದ್ರನ ಬೆಳದಿಂಗಳು, ಮಳೆಯ ಹನಿಗಳು ಹೀಗೆ ಎಲ್ಲವನ್ನೂ ತುಂಬಿಕೊಳ್ಳುವ ಕವಿ ಬಾಯಾರಿದ ಜೀವಿಗಳ ಬಾಯಿಗೆ ಜೀವಜಲವನ್ನು ಸುರಿಯುತ್ತಾರೆ, ಕವಿಯೇ ರೂಪಾಂತರವಾಗುತ್ತ ಬೊಗಸೆಯಾಗುತ್ತಾರೆ. ಕೊನೆಗೆ ಜಗದ ಮುಂದೆ ಬೊಗಸೆಯೊಡ್ಡಿ ಬಯಲಾಗುತ್ತಾರೆ. ಈ ಕವಿ ಒಂದರಲ್ಲಿ ಇನ್ನೊಂದು ಆಕಾರವನ್ನು ಕಾಣಬಲ್ಲ; ಪ್ರತಿಮೆಗಳಲ್ಲಿ, ಸಂಕೇತಗಳಲ್ಲಿ ಮಾತನಾಡಬಲ್ಲ ಪ್ರತಿಭಾವಂತರು.

 ಹಿಂದೆಯೇ ಹೇಳಿರುವಂತೆ  ಈ ಕವಿಗೆ ಭೂಮಿ ಬೇರೆಯಲ್ಲ, ಅದರಲ್ಲಿ ಮೊಳಕೆಯೊಡೆಯುವ ಜೀವ ಬೇರೆಯಲ್ಲ. ಇದಕ್ಕೆ ನಿದರ್ಶನ ಅವರ ‘ಅಪ್ಪನೆಂಬೋ ಸಂಕಟ’ ಕವನ.

ನಾನು ಅಪ್ಪನಂತಲ್ಲವೆಂಬ ಸಂಕಟವನ್ನು
ಅವರಿಗೆ ಹೇಗೆ ಮುಟ್ಟಿಸಲಿ?
ಮತ್ತೆ
ಕಾಡ ಹಣ್ಣಿಗೂ ಮಲ್ಟಿ ವಿಟಮಿನ್ ಮಾತ್ರೆಗೂ
ನಡುವೆ ಇರುವ ಅಂತರವನ್ನು?

ಅವನ ತಲೆ ಕೊಯಿಲಿಗೆ ಅಣಿಯಾದ
ತೆನೆ ಹೊತ್ತ ಗದ್ದೆ ಬಸಿರು
ನನ್ನದೋ ಬಟಾಬಯಲು… ಬೋಳು ಬೋಳು

ಅವನ ಹಣೆಯ ತುಂಬ ಎರೆಹುಳುಗಳಂತೆ
ಮಿಸುಕಾಡುವ ಕಾಡ ನಡುವಿನ ಕಾಲು ದಾರಿಗಳು
ನನ್ನದೋ ಬೀಜ ಮೊಳೆಯದ ಹೆದ್ದಾರಿ

ತನ್ನನ್ನು ಅಪ್ಪನ ಪಡಿಯಚ್ಚು ಎನ್ನುತ್ತ ಕಣ್ಣು, ಮೂಗು, ಬಾಯಿ ಕಣ್ಣಿಗೆ ಕಾಣುವ ಶರೀರವನ್ನು ಅಪ್ಪನ ಪಕ್ಕದಲ್ಲಿಟ್ಟು ಹೋಲಿಸುವವರಿಗೆ ‘ನಾನು ಅಪ್ಪನಂತಲ್ಲ’ ಎಂಬ ಒಳಗಿನ ಸಂಕಟವನ್ನು ಹೇಳಿಕೊಳ್ಳಲಾಗದೆ ಒಳಗೇ ಒದ್ದಾಡುತ್ತದೆ ಮನಸ್ಸು. ವಿಶಿಷ್ಟವೆಂದರೆ ಮಗ ಅಪ್ಪನನ್ನು ಒಳಗಿನಿಂದ ನೋಡುತ್ತ ಹೊರಬರುತ್ತಾನೆ, ಅದು ತನ್ನದೇ ಹುಟ್ಬಾದರೂ ಪ್ರಸವ ವೇದನೆಯನ್ನು ತಾನೇ ಅನುಭವಿಸಿದ ಹಾಗೆ, ಹೊರಬಂದು ತನ್ನ ಹೊರಗಿಂದ ತನ್ನ ಒಳಗನ್ನು ಇಣುಕಿ ನೋಡುತ್ತಾನೆ. ಮತ್ತೊಂದು ವಿಶೇಷವೆಂದರೆ ಅಪ್ಪನ ಒಳಗು ತಿಳಿನೀರ ಕೊಳ, ಒಸರು. ಅಲ್ಲಿ ತನ್ನನ್ನು ತಾನು ನೋಡಿಕೊಂಡಾಗ ಮನಸ್ಸು ಕದಡಿ ಹೋಗುತ್ತದೆ. ಅಪ್ಪನ ಹೊರಗು ಮಣ್ಣ ಶರೀರ, ಭೂಮಿ. ‘ಅಪ್ಪ ಭೂತ ಭವಿಷ್ಯಗಳ ಗೊಡವೆಗಳಿಲ್ಲದೆ ನಿರಂತರ ಚಲಿಸುವ ಗೆಲಾಕ್ಸಿಯೊಳಗಿನ ಗ್ರಹ, ನಾನೊಂದು ವ್ಯೋಮ ನೌಕೆ!’ ಎನ್ನುತ್ತಾರೆ.

ಈಗ
ಗಟ್ಟಿಯಾಗಿ ಕೂಗಿ ಹೇಳಬೇಕೆನಿಸುತ್ತದೆ
ಅಪ್ಪನಿಗಿಂತ ದೊಡ್ಡ ಧರ್ಮಗ್ರಂಥವಿಲ್ಲವೆಂದು

ಎಂದು ಕವನ ಮುಗಿಯುತ್ತದಾದರೂ, ಭವಿಷ್ಯದತ್ತ ?ಕಣ್ಣುನೆಟ್ಟು ಶರವೇಗದಿಂದ ಓಡುತ್ತಿರುವ ವರ್ತಮಾನವು ಏದುಸಿರು ದಮ್ಮು ಬಿಡುವ ಹೃದಯದ ಮೇಲಿರುವ ಕಿಸೆಯ ನೋಟುಗಳನ್ನು ಮುಟ್ಟಿ ನೋಡುತ್ತ..  ಕ್ಷಣಕಾಲ ಭ್ರೂಣದಂತೆ ಮುದುಡಿ ನಿಂತು ಭೂತಕಾಲದ ಗರ್ಭದಾರಿಯತ್ತ ಕ್ಷಣ ಕಣ್ಣು ಹಾಯಿಸಿ ಮೈ ಕೈ ತಲೆ ಕೊಡವಿ ನೆಟ್ಟಗಾಗಿ ಮತ್ತೆ ಮುಂದಕ್ಕೋಡುತ್ತದೆ. 

ಅವನ ಹಣೆಯ ತುಂಬ ಎರೆಹುಳುಗಳಂತೆ 
ಮಿಸುಕಾಡುವ ಕಾಡ ನಡುವಿನ ಕಾಲುದಾರಿಗಳು
ನನ್ನದೋ ಬೀಜ ಮೊಳೆಯದ ಹೆದ್ದಾರಿ

ಈ ಮೂರು ಸಾಲುಗಳೇ ಸಾಕು, ಅಪ್ಪ-ಮಗನ ನಡುವಿನ ‘ಮಾರು ಮಾಪನ’ಗಳನ್ನು ಅಳೆಯಲು. ಇಲ್ಲಿ ಅಪ್ಪನೆಂದರೆ ಬರೇ ಅಪ್ಪನಲ್ಲ, ಒಂದು ದೀರ್ಘ ಪರಂಪರೆ. ಮಣ್ಣ ಸಂಸ್ಕೃತಿಯ ತೇರನ್ನು ಮುಂದಕ್ಕೆಳೆಯುತ್ತಿರುವ ಪ್ರತಿನಿಧಿ. ಮಣ್ಣಲ್ಲೇ ಹುಟ್ಟಿ ಮಣ್ಣನ್ನೇ ಉಟ್ಟು, ತೊಟ್ಟು, ಕಟ್ಟಿ, ತಿಂದು, ಹೀರಿ ಬೆಳೆದ ಮಣ್ಣ ಶರೀರ. ಮಣ್ಣೇ ತೊಟ್ಟಿಲು, ಮಣ್ಣೇ ಚಟ್ಟ. ಕಾಡ ನಡುವಿನಲ್ಲೇ ಕಾಲ್ನಡಿಗೆಯಲ್ಲೇ ನಡೆ ನಡೆದು ಹೃದಯದಲ್ಲೇ ಕಾಲುದಾರಿ ಮಾಡಿಕೊಂಡ ಕೃಷಿಕ, ಕಾಯಕವೇ ಕೈಲಾಸ ಎನ್ನುವ ಜಂಗಮ. ಅಗಾಧ ಜೀವ ಚೈತನ್ಯ ಇರುವವ. ಅವನಿಗೆ ಅನುಭವವೇ ವಚನ, ಅಧ್ಯಾತ್ಮ.

ಮೊಬೈಲ್ ಜಂಗಮವಾಣಿಯ ಅಗತ್ಯವಿಲ್ಲ. ಆದರೆ ಇಲ್ಲಿಯ ಮಗ ಅಪ್ಪನ ತದ್ವಿರುದ್ಧ ‘ತಲೆಮಾರಿ’ನ ಪ್ರತಿನಿಧಿ. ಮೆದುಳಿನಲ್ಲೇ ಹೆದ್ದಾರಿ ಮಾಡಿಕೊಂಡವ. ಕೈ ಕಾಲು ಶರೀರವನ್ನೇ ಯಂತ್ರ ಮಾಡಿಕೊಂಡವ. ತನ್ನ ಮೈಯನ್ನೇ ಜೆ.ಸಿ.ಬಿ ಮಾಡಿಕೊಂಡು ಅಲ್ಲಿ ಅಪ್ಪ ಬೆಳೆಸಿದ ಹಸಿರನ್ನು ಅಗೆದಗೆದು ಹೆದ್ದಾರಿ ಮಾಡಿಕೊಂಡು, ತನ್ನ ಮೆದುಳಿನ ಹೆದ್ದಾರಿಯಲ್ಲಿ ತಾನೇ ರಾಕೆಟ್ಟಿನಂತೆ ಕಾಲದೊಡನೆ ಪೈಪೋಟಿಯಿಟ್ಟು ಶರವೇಗದಲ್ಲಿ ಚಿಮ್ಮುವವ. ಆದರೂ.. ಮಗನಾದರೂ ತನ್ನೊಳಗೇ ಇದ್ದು ಕಾಡುವ ಅಪ್ಪನೆಂಬ, ಮಣ್ಣು ಎಂಬ ಸಂಕಟಕ್ಕೆ ಅವನೇ ಮದ್ದು, ಪರಿಹಾರ.. ಅವನೇ ದೊಡ್ಡ ಧರ್ಮಗ್ರಂಥ, ಮಣ್ಣೇ ಆಧ್ಯಾತ್ಮ ಎಂದು ಗೊತ್ತಿದ್ದರೂ ದುಡ್ಡಿನಿಂದ ಹಿಂದಿರುಗಲಾಗದೆ ಆಧುನಿಕ ಯಂತ್ರಯುಗದ ಯಾಂತ್ರಿಕ ಏಕತಾನ ಬದುಕಿನ ಅನಾಥ ಪ್ರಜ್ಞೆಗೆ ಕಾಡುವ ಖಿನ್ನತೆಗೆ ಶಾಂತಿಯನ್ನು ಧರ್ಮಗ್ರಂಥಗಳಲ್ಲಿ ಹುಡುಕುವವ. ಇಬ್ಬರಿಗೂ ಅಜಗಜಾಂತರ.

ಅಪ್ಪ ಹೊಂಗೆ ಮರದಡಿಯಲ್ಲಿ ಮಲಗುವ ಕಾಸಿಲ್ಲದ ಶ್ರೀಮಂತ, ಮಗ ಸಾಕ್ಸ್ ಏರಿಸಿಕೊಂಡು ಏಸಿಯಲ್ಲಿ ಪ್ಲಾಸ್ಟಿಕ್ ಕಾರ್ಡ್ಗಳ ಹಾಸಿ ಮಲಗಿರುವ ಬಡವ. ‘ಪ್ಲಾಸ್ಟಿಕ್ ಬೇರುಗಳು’ ಕವನದಲ್ಲಿ ಈ ಜಡ  ಹಾಸಿಗೆಯ ಬೇರುಗಳು ಕಬಂಧ ಬಾಹುಗಳಾಗಿ ತನ್ನನ್ನು ಕಬಳಿಸಿ ನುಂಗುತ್ತಿದ್ದರೂ ಇಂದ್ರಿಯಾನುಭವಗಳನ್ನೇ ಕಳಕೊಂಡ ಯಂತ್ರದಂತಾಗಿರುವ ಶರೀರ; ಆಧುನಿಕ ವೈಜ್ಞಾನಿಕ ಅನ್ವೇಷಣೆಗಳಿಗೆ ಬಲಿಪಶುವಾಗಲಿದ್ದೇನೆ ಆಗುತ್ತಿದ್ದೇನೆ ಎಂಬುದನ್ನು ಅರಿಯದೆ ಸುಖವಾಗಿರುವ ಇಲಿಯಂತೆ ಕಿರೀಟ ಧರಿಸಿಕೊಂಡು ನಿರ್ವಾತದಲ್ಲಿ ಎ.ಸಿ ಕೊಠಡಿಯಲ್ಲಿ ಕುಳಿತು ಹೆಂಡತಿಯ ಪೋಸ್ಟಿಗೆ ಲೈಕ್ ಕೊಟ್ಟು ಮುಂದೆ ನುಗ್ಗುವ ಭಯಾನಕ ಚಿತ್ರವನ್ನು ಕವಿ ನೀಡಿದ್ದಾರೆ.

ಆಳವಾದ ಅನುಭವಗಳನ್ನೇ ಸಂವೇದನೆಗಳನ್ನೇ ಪಂಚೇಂದ್ರಿಯಗಳು ಕಳಕೊಂಡರೂ ಆರನೇ ಇಂದ್ರಿಯದ ಆಳದಲ್ಲಿ ವೇದನೆಯ ತಂದೆ ಬೇರಿದೆ, ಅದು ‘ಅಪ್ಪನೆಂಬೋ ಸಂಕಟ’. ದುಡ್ಡಿಗಾಗಿ ತಲೆಮಾರಿ ಹೃದಯವನ್ನೇ ಯಂತ್ರ ಮಾಡಿಕೊಂಡ ಯುವ ತಲೆಮಾರು ಮತ್ತೆ ತಿರುಗಿ ಮಣ್ಣನ್ನು, ಬೇಸಾಯವನ್ನು ಮಾಡಬೇಕು ಎಂಬ ಚಿಕಿತ್ಸಕ ದೃಷ್ಟಿಯಿರುವ ಕವಿ ಎರಡು ತಲೆಮಾರುಗಳನ್ನು ವಾಸ್ತವದ ಕಣ್ಣಿಂದ ನೋಡುತ್ತ ಹಿಂದೆ ಬರಲಾಗದ ಮುಂದಕ್ಕೆ ಓಡಲಾಗದ ಕಾಲದ ಸಂಕಟಕ್ಕೆ ನಿಟ್ಟುಸಿರಿಡುತ್ತಾರೆ.

‘ಜೀವನ’ ಕವನದಲ್ಲಿ ಡಾಲರುಗಳ ಧ್ಯಾನದಲ್ಲೇ ಜೀವನದ ಗತಿ ತಪ್ಪಿದ ಉಸಿರಾಟಕ್ಕೆ, ನುಡಿತ ಮಿಡಿತ ಲಯ ತಪ್ಪಿದ ಹೃದಯಗಳ ಬಡಿತಕ್ಕೆ ಸ್ಟೆತೋಸ್ಕೋಪೇ ಬೇಡ, ಮಾರು ದೂರಕ್ಕೂ ಬಡಿದು ಪ್ರತಿಧ್ವನಿಯಾಗುತ್ತವೆ. ‘ಮೆದುಳು ಬಾಂಬಿನಂತೆ ಸ್ಫೋಟವಾಗುತ್ತಿರುತ್ತದೆ’ ಎನ್ನುವ ಕವಿ ಕೊನೆಯಲ್ಲಿ;

ನಿತ್ಯ ಏಳುವ ಹೊತ್ತಿಗೆ ಕೋಳಿ ಕೂಗುವುದಿಲ್ಲ
ಎಚ್ಚರಾಗುವುದೆ ಆಂಬುಲೆನ್ಸಿನ ಸದ್ದಿಗೆ
ಎದ್ದವನೂ ಸುಮ್ಮನೆ ಕೂರಲಾಗುವುದಿಲ್ಲ
ಹೊರಟು ಬಿಡಬೇಕು ಮುಂಜಾನೆಯ ವಾಕಿಂಗ್ಗಿಗೆ

ಕೊನೆಯ ನಾಲ್ಕೇ ಸಾಲುಗಳಲ್ಲಿ ಅತಿ ಸುಖ ಅತಿ ಭೋಗದ ಬೆನ್ನು ಹತ್ತಿ ನಗರ ಸೇರಿದ ಜನರ ಜೀವನವು ದೇಹ ಹಾಗೂ ಮನಸ್ಸಿನ ಜತೆಗೇ ಸಾಗಬೇಕಾದ ಅನಿವಾರ್ಯತೆ ಇರುವುದರಿಂದ ಅವುಗಳನ್ನು ಕಳಚಿಡಲಾಗದಿರುವುದರಿಂದ ಎಂತಹ ಕಾಯಿಲೆ ಕಷ್ಟಗಳನ್ನು ಅನುಭವಿಸಬೇಕಿದೆ ಎಂಬ ಚಿತ್ರವನ್ನು ಕಣ್ಣ ಮುಂದೆ ಬಿಡಿಸುತ್ತದೆ.

ಬೆದೆ ಹತ್ತಿದ ಮಣ್ಣು
ನೀರು ಹನಿದು ತಣಿದು
ಗಮಲು ಹರಡಬೇಕು ಹದಗೊಂಡು
ಮತಿ ಭ್ರಮಣಗೊಂಡ ಮಣ್ಣಿನ ಆಳಕ್ಕೆ
ಎಷ್ಟು ಬೀಜ ಚೆಲ್ಲಿದರೇನು…
ಹೌದು ಋಣಕ್ಕೆ ಬೀಜ ಸಮವೆಂದವರಾರು?

– ಮಣ್ಣು – ಬೀಜ

ಒಟ್ಟಿನಲ್ಲಿ ಪರಂಪರೆ ಹಾಗೂ ಆಧುನಿಕತೆಯ ನಡುವೆ ಹೊಯ್ದಾಡುತ್ತ ಮತ್ತೆ ಮತ್ತೆ ಮಣ್ಣಿನತ್ತ ತುಡಿಯುವ ಕವಿಯ ಕಾಡುವ ಮನಸ್ಸು, ‘ಮಣ್ಣುಗತ್ತಲು’, ‘ಕಾಡುವುದೆಂದರೆ’, ‘ಪಾದ ಮುದ್ರೆ’, ‘ಸೂರ್ಯನ ಪಾದ’, ‘ಗೂಗಲಮ್ಮ ಮತ್ತು ಭಕ್ತ’, ‘ಪರಾಗ ನೆನಪು’, ‘ನೆನಪಿನಾಟ’ ಮುಂತಾದ ಮಣ್ಣು ಮೆತ್ತಿದ ಭಾವಗಳ ಕವನಗಳನ್ನು ನೀಡಿವೆ. 

‘ರಾಗಿ ಕಾಳು’ ಚೀಮನಹಳ್ಳಿ ರಮೇಶರ ಹೃದಯ ಹೊಲದಿಂದ ಮತ್ತಷ್ಟು ಹಳ್ಳಿ ಸಂವೇದನೆಯ ಮಣ್ಣ ತುಡಿತದ ಮಣ್ಣು ಮೆತ್ತಿದ ಬಿತ್ತಿನಂತಹ  ಕವನಗಳು ಮೊಳೆತು ತೆನೆಬಿಡಲಿ, ತೆನೆತೆನೆಗಳಲ್ಲಿ ಹಕ್ಕಿ ಹಾಡಲಿ ಎಂಬ ಶುಭ ಹಾರೈಕೆ ನನ್ನದು.

‍ಲೇಖಕರು Admin

October 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: