ಚಲಪತಿ ವಿ
ಎಷ್ಟೋ ಸಂಜೆಗಳನ್ನು ಮಾರಿಕೊಂಡಿದ್ದೇನೆ
ಗೆಲ್ಲುವುದಕ್ಕಲ್ಲ
ಪದೇ ಪದೇ ಸೋಲುವುದಕ್ಕೆ,
ಸೋತಾಗಲೆಲ್ಲ ಗೆದ್ದಿದ್ದೇನೆ, ಬೀಗಿದ್ದೇನೆ
ಒಂದು ಹನಿ ಕಣ್ಞೀರಿಗೂ
ಮೌನಕ್ಕೂ ವ್ಯತ್ಯಾಸವಿಲ್ಲ
ಒಂದು ಕಾಮನಬಿಲ್ಲಿಗೆ ಮದವೇರಿಸುತ್ತದೆ
ಮತ್ತೊಂದು ಹಿತವಾಗಿ ಸುಡುತ್ತದೆ
ಆಕಾಶದ ಜೊತೆ ಪ್ರತಿ ಬಾರಿ ಸೆಣಸಿದಾಗಲೂ
ಗೆದ್ದ ಇತಿಹಾಸವಿಲ್ಲ
ಸೋತಿದ್ದಕ್ಕೆ ಪುರಾವೆಯೂ ಇಲ್ಲ
ನಕ್ಷತ್ರಗಳೆನ್ನುವುದು ಆಸೆಯ ಹೊದಿಕೆಯಷ್ಟೇ
ಕಾಲ ಬದಲಾದಂತೆಲ್ಲ ಎಲ್ಲವೂ ಭಾರ, ದೂರ

ಉಸಿರು ನಿಂತಾಗ ಸಂಭವಿಸುವುದು ಸಾವಲ್ಲ
ನಂಬಿಕೆಗಳನ್ನು ಉಳಿಸಿಕೊಳ್ಳದಾದಾಗ, ಕಳೆದುಕೊಂಡಾಗ
ಒಂಟಿ ಎನಿಸಿದಾಗ, ಕಾಯದಾದಾಗ
ಪ್ರತಿ ಸಂಜೆಯ ಕನಸು
ನಾಳೆಗಾಗಿ ಕಾಯುವುದು
ಕಾಯುವುದೆಂದರೆ ಕ್ಷಣಗಳು ಗತಿಸುವುದಲ್ಲ
ಅಪ್ಪಿಕೊಳ್ಳುವುದು






0 Comments