ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಿಕಾ ಹೆಗಡೆ ಹೊಸ ಕವಿತೆ – ನಮ್ಮೂರ ಶಾಲೆ…

ಚಂದ್ರಿಕಾ ಹೆಗಡೆ

ಅವೊತ್ತು….
ನಮ್ಮೂರ ಶಾಲೇಲಿ ನಾ ಓದ್ತಾ ಇದ್ದಾಗ,
ಒಂದೇ ರೂಮು ನಾಲಕ್ಕು ಬೆಂಚು
ಮುರುಕು ಕುರ್ಚೀಲಿ ತೂಕಡಿಸ್ತಿದ್ರು
ಒಬ್ರೇ ಮೇಷ್ಟ್ರು
ಬಣ್ಣ ಮಾಸಿದ ಬೋರ್ಡಿನ ಮೇಲೆ
ಅ ಆ ಇ ಈ ಕಲಿಸ್ತಿದ್ರು.
ನಾಲ್ಕು ಕ್ಲಾಸು ನಲವತ್ತು ಹುಡುಗರಿಗೆ
ಜಾಗ ಸಾಲ್ದೆ
ಕೂರುಸ್ತಿದ್ರು ಹೊರಗೆ ಕಟ್ಟೆ ಮೇಲೂ
ಮಧ್ಯಾಹ್ನ ತಂಗಳು ತಿಂದು
ಅರ್ದಂಬರ್ದ ಮಗ್ಗಿ ಬರದು
ನಿದ್ದೆ ಮಾಡ್ತಿದ್ರು ಹುಡುಗ್ರು
ವಂದಾ ಸಾರ್ ! ಎಂದು
ಬೆರಳು ತೋರ್ಸಿ ಬಯಲಿಗೆ ಓಡ್ತಿದ್ರು
ನೀರು ಕುಡ್ಕೊಂಡು ಬರ್ತೀನಂತ ಹೇಳಿ
ಹೊಳೆಗೆ ಹೋಗಿ ಈಸಾ ಹೊಡಿತಿದ್ರು.

ಇವೊತ್ತು ನೋಡಿ
ನಮ್ಮೂರ ಶಾಲೆ
ಹೊಸಾ ಬಿಲ್ಡಿಂಗು
ಸುಣ್ಣ ಬಣ್ಣ ಸುತ್ಲೂ ಕೌಂಪೌಂಡು
ಕ್ಲಾಸಿಗೊಂದು ರೂಮು
ಎರೆಡೆರಡು ಮೇಡಮ್ಮು.
ಅಡಿಗೆ ಕೋಣೆ , ಟಾಯ್ಲೆಟ್ಟು
ಬಾವಿ ಪಂಪಸೆಟ್ಟು
ನಲ್ಲಿ ನೀರು , ಉರಿಯೋ ಲೈಟು
ಕಬ್ಣದ ಕಪಾಟು , ಕಂಪ್ಯೂಟರ್ರೂ ಉಂಟು.
ಹೊಸಾ ಡೆಸ್ಕು , ಬಣ್ಣಬಣ್ಣದ ಬುಕ್ಸು
ಮಧ್ಯಾಹ್ನಕ್ಕೆ ಬಿಸಿ ಬಿಸಿ ಊಟ
ನಿದ್ದೆ ಮಾಡ್ದೆ ಮೇಡಮ್ಮು
ಚನ್ನಾಗೇ ಕಲಿಸ್ತಾರೆ ಪಾಠ.

ಈ ವರ್ಷ ನಾಲ್ಕನೇ ಕ್ಲಾಸು ಪಾಸಾಗಿ ಹೋದ್ರು
ಶಾಲೇಲಿದ್ದ ಎರಡೇ ಎರಡು ಮಕ್ಳು
ಒಂದನೇ ಕ್ಲಾಸಿಗೆ ಬರ್ಲೇ ಇಲ್ಲ ಯಾರೂ !
ಅಲ್ಲಾ … ಈ ಮಕ್ಕಳೆಲ್ಲಾ ಎಲ್ಲಿಗೆ ಹೋದ್ರು !!

‍ಲೇಖಕರು Admin

23 February, 2022

2 Comments

  1. Jayasrinivasa Rao

    What a lovely poem! Yes, where have all the children gone?

  2. T S SHRAVANA KUMARI

    ನೈಜ ಚಿತ್ರಣ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading