ಉದಯ ಗಾಂವಕಾರ
ಗೆಲ್ಲುವ ಅಡುಗೆಯೆಂದರೆ
ಹೊಟ್ಟೆತುಂಬಿಸುವುದಲ್ಲ
ಹಸಿವಾಗಿದೆ ಎಂಬ
ಹುಸಿಭ್ರಮೆಯನ್ನು ಹುಟ್ಟಿಸಿ
ತಿನ್ನಲು ಪುಸಲಾಯಿಸುವುದು.
ಇಲ್ಲಿ ಕುದಿಯುವುದು
ಅಡುಗೆಯಲ್ಲ.
ರುಚಿನೋಡಲು
ಕಾದವರನ್ನು
ಗಡಣದಂತಹ ಪಾತ್ರೆಯಲಿ
ತಿರುತಿರುವಿ ಬಾಡಿಸಿ
ಒಡೆದು, ಒಗ್ಗರಿಸಿ
ಜಜ್ಜಿ ರಸತೆಗೆದು
ಹದಗೊಳಿಸಬೇಕು.

ಅಡುಗೆ ಅದರಷ್ಟಕ್ಕೆ
ತಯಾರಾಗುತ್ತದೆ.
ಅಥವಾ
ತಯಾರಾಗಿಯೇ ಇದೆ.
ಮೊದಲು ಹಸಿದವರನ್ನು
ಸಿದ್ಧಗೊಳಿಸಬೇಕು.
ಎಲ್ಲವೂ ರುಚಿಗೆ
ತಕ್ಕಷ್ಟಿರಬೇಕು.
ಅಷ್ಟು ಸಿಹಿಯೊಡನೆ
ಇಷ್ಟೇ ಇಷ್ಟು ಕಹಿ
ಖಾರ, ಉಪ್ಪು, ಹುಳಿ
ಎಲ್ಲವೂ ಬೇಕು
ಅವುಗಳ ಬೇಡಿಕೆಗೆ ತಕ್ಕಷ್ಟು-
ಎಂಬಿತ್ಯಾದಿ ಪಾಕಶಾಸ್ತ್ರದ
ಹಳೆಯ ಪಾಠಗಳು
ಈಗ ಜಾರಿಯಲ್ಲಿಲ್ಲ.
ಅಡುಗೆಗೆ ತಕ್ಕಂತೆ
ನಾಲಿಗೆಗೆ ಪಾಠ ಕಲಿಸಬೇಕು.
ರುಚಿಯ ಮೊಗ್ಗುಗಳನು
ಬಗ್ಗುಬಡಿದು
ಬದಲಿಸಬೇಕು;
ಜಿಹ್ವಾ ಸಂಸ್ಕಾರವನು.
ಗೊಂದಲದ ನಾಲಿಗೆ
ತನ್ನ ಬೇಡಿಕೆಯಲ್ಲಿ
ನಿಖರವಾಗಿರುವುದಿಲ್ಲ.
ಅಡುಗೆಯ ಗುಟ್ಟು
ಇರುವುದಿಲ್ಲೇ!
ಒಳ್ಳೆಯ ಅಡುಗೆಯೆಂದರೆ
ನಾಲಿಗೆಯನ್ನು ವಂಚಿಸಿ
ಪಡೆವ ಗೆಲುವಲ್ಲವೇ?






0 Comments