ಗುರುವೆಂಬ ಹಣತೆ: ವಿದುಷಿ ಬಿ ಭಾನುಮತಿ

ವಿದುಷಿ ನಳಿನ ಉದಯಕುಮಾರ್
ನಿರೂಪಣೆ : ವಾಣಿ ಸತೀಶ್


ಚಿತ್ರ : ಮಧುಸೂದನ್ ಎಸ್ ಎ

ಇತ್ತೀಚೆಗೆ ಕೊರೋನಾದಿಂದ ಕಾಲವಶರಾದ ಅಂತರಾಷ್ಟ್ರೀಯ ಕಲಾವಿದೆ, ಗುರು ವಿದುಷಿ ಬಿ.ಭಾನುಮತಿ ಅವರ ಹಿರಿಯ ಶಿಷ್ಯೆ ವಿದುಷಿ ನಳಿನ ಉದಯಕುಮಾರ್ ಗುರುಗಳೊಂದಿಗಿನ ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ನಾನು ನೃತ್ಯ ಕ್ಷೇತ್ರದಲ್ಲಿ ನಡೆಯಲಾರೆ ಎಂದು ಸೋತು ಕುಗ್ಗುತ್ತಿದ್ದಾಗ ನನ್ನಲ್ಲಿ ಭರವಸೆಯ ಹಣತೆ ಹಚ್ಚಿ ತಿಪಟೂರಿನಂಹ ಸಣ್ಣ ಊರಿನಿಂದ ಭಾರತದ ಹಲವಾರು ಕಡೆ ನನ್ನನ್ನು ಚಲಿಸುವಂತೆ ಮಾಡಿ ಆ ಬೆಳಕ ಕಂಡು ಸಂಭ್ರಮಿಸಿದವರು ನನ್ನ ನೃತ್ಯಗುರು ವಿದುಷಿ. ಬಿ. ಭಾನುಮತಿ.

ಭಾನುಮತಿ ಮೇಡಂ ಎಂದ ಕೂಡಲೇ ನನ್ನ ಕಣ್ಣೆದುರು ಬರುವುದು ಧ್ಯಾನಲೀನವಾಗಿರುವ ಯೋಗಿನಿಯ ಚಿತ್ರ. ಅವರು ನೃತ್ಯ ಕಲೆಗೆ ತಮ್ಮನ್ನು ಪರಿಪೂರ್ಣವಾಗಿ ಸಮರ್ಪಿಸಿಕೊಂಡಿದ್ದ ತಪಸ್ವಿನಿಯೇ ಆಗಿದ್ದರು. ಅವರು ನೃತ್ಯವನ್ನು ಕೇವಲ ಒಂದು ಪ್ರದರ್ಶನ ಕಲೆ ಎಂದು ಭಾವಿಸದೆ ಪರಮಾತ್ಮನನ್ನು ಅನುಸಂಧಾನ ಮಾಡುವ ಸತ್ವಪೂರ್ಣ ಪಥ ಎಂದೇ ನಂಬಿದವರು. ಆದ್ದರಿಂದಲೇ ಅವರ ಅಭಿನಯದಲ್ಲಿ ನಿಜವಾದ ಕೃಷ್ಣನನ್ನೋ, ಯಶೋಧೆಯನ್ನೋ, ಶಬರಿ, ಹನುಮಂತರನ್ನೋ ಕಂಡ ಭಾವಾನುಭೂತಿ ಉಂಟಾಗುತಿತ್ತು.

ಇಂತಹ ಮಹಾನ್ ಗುರುವನ್ನು ನಾನು ಮೊದಲು ಸಂಧಿಸಿದ್ದು ೧೯೮೯ ರಲ್ಲಿ. ಅಂದು ಬೆಂಗಳೂರಿನ ನೆಟ್ಟಕಲ್ಲಪ್ಪ ಸರ್ಕಲ್ಲಿನ ಹತ್ತಿರವಿದ್ದ ಗಣಪತಿ ದೇವಸ್ಥಾನದಲ್ಲಿ ಅವರ ನೃತ್ಯ ಪ್ರದರ್ಶನವಿತ್ತು. ತಾಯಿ ವಿದುಷಿ ಇಸೈಮಣಿ ಎಲ್.ಆರ್ ಲಕ್ಷ್ಮಿ ಅಮ್ಮ ಮತ್ತು ತಂಗಿ ಗೀತಾ ಅವರ ಹಾಡುಗಾರಿಕೆಗೆ ಭಾನುಮತಿ ಮೇಡಂ ಅವರ ನೃತ್ಯ ಪ್ರಸ್ತುತಿ ನೋಡುಗರನ್ನು ಮಂತ್ರಮುಗ್ದರನ್ನಾಗಿಸಿತ್ತು. ಅದುವರೆಗೂ ಗುರುವನ್ನು ಅರಸುತ್ತಿದ್ದ ನನಗೆ ಭಾಗ್ಯವೇ ದೊರೆತಂತಾಯಿತು.

ಆ ಹೊತ್ತಿಗೆ ಗುರು ವಿದ್ವಾನ್ ಕಣ್ಣನ್ ಮಾರಾರ್ ಅವರಲ್ಲಿ ಕಥಕ್ಕಳಿಯಲ್ಲಿ ಜೂನಿಯರ್ ಹಂತವನ್ನು ಹಾಗು ಗುರು ವಿದುಷಿ ಅಲಮೇಲು ಮೇಡಂ ಅವರಲ್ಲಿ (ಇವರು ಆಸ್ಥಾನ ವಿದ್ವಾಂಸರಾಗಿದ್ದ ಬಿ.ಎಸ್ ರಾಜಯ್ಯಂಗಾರ್ ಅವರ ಮಗಳು) ಭರತನಾಟ್ಯದಲ್ಲಿ ಸೀನಿಯರ್ ಹಂತ ಮುಗಿಸಿದ್ದೆ. ಅಲಮೇಲು ಮೇಡಂ ಅವರ ಒತ್ತಾಸೆಯಂತೆ ತಿಪಟೂರಿನಲ್ಲಿ ನೃತ್ಯಶಾಲೆ ಆರಂಭಿಸಿ ತರಗತಿಗಳನ್ನು ನಡೆಸುತ್ತಿದ್ದೆ. ಈ ಸಮಯದಲ್ಲೇ ಅವರ ಆರೋಗ್ಯ ಪದೇ ಪದೇ ಹದಗೆಡುತ್ತಿದ್ದರಿಂದ ಅವರು ‘ನಾನಿರುವಾಗಲೇ ಬೇರೆ ಗುರುಗಳನ್ನು ಹುಡುಕಿಕೋ’ ಎಂದು ಪ್ರೀತಿಯಿಂದಲೇ ಒತ್ತಾಯಿಸುತ್ತಿದ್ದರು.

ಈ ದಿನಗಳಲ್ಲೇ ನನಗೆ ಭಾನುಮತಿ ಮೇಡಂ ಅವರ ದರ್ಶನವಾದದ್ದು. ನೃತ್ಯ ಕಲಿಕೆಯನ್ನು ಮುಂದುವರೆಸುವ ಹಂಬಲದಿಂದ ಅವರಲ್ಲಿ ಶಿಷ್ಯವೃತ್ತಿಯನ್ನು ಆರಂಭಿಸಿದೆ. ತಿಪಟೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಓಡಾಡುತ್ತಾ ವಿದ್ವತ್ತಿನ ಪಾಠಗಳನ್ನು ಕಲಿಯತೊಡಗಿದೆ. ಒಂದು ದಿನ ರೈಲನ್ನು ಹತ್ತುವ ಅವಸರದಲ್ಲಿ ಬಿದ್ದುಬಿಟ್ಟೆ. ಬಿದ್ದ ರಭಸಕ್ಕೆ ಬೆನ್ನುಹುರಿಗೆ ಪೆಟ್ಟಾಗಿತ್ತು. ಸಮಸ್ಯೆ ತೀವ್ರವಾಗಿದ್ದರಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾದೆ. ಈ ವಿಷಯ ತಿಳಿದು ಭಾನುಮತಿ ಮೇಡಂ ಆಸ್ಪತ್ರೆಗೆ ಬಂದರು, ನನ್ನ ಪಕ್ಕ ಕುಳಿತು ‘ಬೇಗ ಹುಶಾರಾಗ್ತಿಯ ಕಣೆ, ಹೆದರಬೇಡ. ನಿನಗೆ ಯಾವ ಸಹಾಯ ಬೇಕಿದ್ರು ಕೇಳು; ಸಂಕೋಚ ಮಾಡಿಕೋಬೇಡ. ನನ್ನ ಕಾರ್ ಬೇಕಿದ್ದರೆ ಬಳಸಿಕೋ. ಯಾವ ಕಾರಣಕ್ಕೂ ಡಿಪ್ರೆಸ್ ಆಗಬೇಡ. ಏನೇ ಆದ್ರು ನಾನು ನಿನ್ನ ಜೊತೆಗಿರ್ತಿನಿ’ ಅಂದು ನನಗೆ ಧೈರ್ಯ ತುಂಬಿ ಹೋದರು.

ಬೆಂಗಳೂರಿನ ಓಡಾಟದಿಂದ ಆಗಾಗ ಬೆನ್ನುನೋವು ಕಾಣಿಸಿಕೊಳ್ಳಲು ಶುರುವಾಯಿತು. ಈ ನೋವಿಗೆ ಶಾಶ್ವತ ಪರಿಹಾರಗಳಿರಲಿಲ್ಲ. ಆದ್ದರಿಂದ ‘ಮೇಡಂ ನನಗೆ ಆಗ್ತಿಲ್ಲ, ನೃತ್ಯ ಶಾಲೆಯನ್ನ ನಿಲ್ಲಿಸಿ ಬಿಡ್ತೀನಿ’ ಎಂದು ಹೇಳಲು ಶುರು ಮಾಡಿದೆ. ಆಗ ಮೇಡಂ ‘ನಿನ್ನ ಜೊತೆಗೆ ನಾನಿರ್ತಿನಿ ಕ್ಲಾಸ್ ಮುಂದುವರೆಸು. ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ ಏನಾಯ್ತು; ನೀನು ಒಳ್ಳೆಯ ಟೀಚರ್. ನಿನ್ನ ಊರಿನ ಮಕ್ಕಳ ಬಗ್ಗೆ ಯೋಚಿಸು’ ಎಂದು ಹೇಳಿ ನನ್ನೊಳಗೆ ಆತ್ಮವಿಶ್ವಾಸ ತುಂಬಿದರು. ಅಂದಿನಿಂದ ಮೇಡಂ ತಾವೇ ನನ್ನ ಜೊತೆಗೆ ನಿಂತರು.

ನಮ್ಮ ಮಕ್ಕಳ ನೃತ್ಯ ಪರೀಕ್ಷೆಗಳಿಗೆ ನಟುವಾಂಗ ಮಾಡುವುದರಿಂದ ಹಿಡಿದು, ತಿಪಟೂರಿನಲ್ಲಿ ಒಂದೆರಡು ದಿನಗಳ ಕಾಲ ಉಳಿದು ಶಾಲೆಯ ಪ್ರತೀ ಕಾರ್ಯಕ್ರಮಗಳ ತಾಲೀಮುಗಳನ್ನು ಖುದ್ದು ತಾವೇ ನೋಡಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಅಲ್ಲದೇ ಶಾಲೆಯ ಪ್ರತೀ ವಾರ್ಷಿಕೋತ್ಸವಗಳಲ್ಲೂ ತಂಡದೊಂದಿಗೆ ಬಂದು ತಾವು ಕೂಡಾ ಪ್ರದರ್ಶನ ನೀಡುತ್ತಿದ್ದರು. ಸಂಭಾವನೆ ತೆಗೆದುಕೊಳ್ಳುತ್ತಿರಲಿಲ್ಲ. ಒತ್ತಾಯ ಮಾಡಿ ವೆಹಿಕಲ್ ಬಾಡಿಗೆಯನ್ನು ಕೊಡುತ್ತಿದ್ದೆ.

ಮುಂದೆ ನಾನು ಮದುವೆ ಆದ ನಂತರವೂ ಅವರೇ ಒಂದಷ್ಟು ತಿಂಗಳು ತುಮಕೂರಿಗೆ ಬಂದು ನನಗೆ ಪಾಠ ಮಾಡಿ ಹೋಗುತ್ತಿದ್ದರು. ಇದರಿಂದ ನನಗೆ ಬಹಳ ಸಂಕೋಚವಾಗುತ್ತಿತ್ತು. ‘ನೀವು ಬರೋದು ಬೇಡ ಮೇಡಂ. ನಾನೇ ನಿಮ್ಮಲ್ಲಿಗೆ ಬರ್ತೇನೆ’ ಎಂದು ವಿನಂತಿಸಿದ ಮೇಲೆ ಮೇಡಂ ತಮ್ಮ ವಿದ್ಯಾರ್ಥಿಯಾಗಿದ್ದ ಬಿ.ವಿ.ದೇವರಾಜ್ ಅವರನ್ನು ತಮ್ಮ ಪರವಾಗಿ ಕಳುಹಿಸಿದರು. ಇಂದಿಗೂ ಶ್ರೀಯುತರು ನಮ್ಮ ಕುಟುಂಬದ ಭಾಗವಾಗಿ ನಮ್ಮ ಶಾಲೆಯನ್ನು ಮುನ್ನಡೆಸಲು ನೆರವಾಗಿದ್ದಾರೆ.

ಇವುಗಳೆಲ್ಲದರ ನಡುವೆಯೇ ನಾನು ಶಾಸ್ತ್ರೀಯ ನೃತ್ಯದ ಜೊತೆಗೆ ಹೆಜ್ಜೆ ಕುಣಿತ, ಸುಗ್ಗಿ ಕುಣಿತ, ಡೊಳ್ಳುಕುಣಿತ, ಸೋಮನ ಕುಣಿತ ಮುಂತಾದ ಜಾನಪದ ಕಲಾಪ್ರಕಾರಗಳ ಗಂಭೀರ ಅಧ್ಯಯನ ನಡೆಸುತ್ತಾ ಅವುಗಳ ನೃತ್ಯಬಂಧಗಳಿಂದ ಹೊಸಹೊಸ ಸಂಯೋಜನೆಗಳನ್ನು ರೂಪಿಸತೊಡಗಿದ್ದೆ. ಅದೇ ಸಮಯದಲ್ಲಿ ಕೊಲ್ಕೊತ್ತಾದಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವದಲ್ಲಿ ನನ್ನ ಸಂಯೋಜನೆಗೆ ರಾಷ್ಟ್ರೀಯ ಪುರಸ್ಕಾರ ದೊರೆಯಿತು. ಭಾನುಮತಿ ಮೇಡಂ ನನ್ನ ಈ ಪ್ರಯೋಗಗಳನ್ನು ಮೆಚ್ಚಿ ಅಭಿನಂದಿಸುವುದರ ಜೊತೆಗೆ ರಾಷ್ಟ್ರೀಯ ವೇದಿಕೆಗಳಲ್ಲಿ ಅವಕಾಶಗಳನ್ನು ಕಲ್ಪಿಸಿದರು.

ಹಲವು ನೃತ್ಯ ತಂಡಗಳಿಗೆ ನನ್ನನ್ನು ಪರಿಚಯಿಸಿ ಅಲ್ಲಿ ನೃತ್ಯ ಸಂಯೋಜನೆ ಮಾಡಲು ಅವಕಾಶ ಮಾಡಿಕೊಟ್ಟರು. ಇವರ ಕಾಳಜಿಯಿಂದಾಗಿಯೇ ಮಹಾನಗರಗಳಿಗೆ ಮೀಸಲಾಗಿದ್ದ ಪ್ರತಿಷ್ಠಿತ ವೇದಿಕೆಗಳು ತಿಪಟೂರಿನಂತಹ ಸಣ್ಣ ಊರಿನ ವಿದ್ಯಾರ್ಥಿಗಳಿಗೂ ದೊರಕುವಂತಾಯಿತು. ಬೆಂಗಳೂರು ಹಾಗು ದೆಹಲಿ ದೂರದರ್ಶನಗಳಲ್ಲಿ ನಮ್ಮ ಕಾರ್ಯಕ್ರಮಗಳು ಪ್ರಸಾರವಾಯಿತು. ಹಂಪೆ ಉತ್ಸವ, ವಸಂತ ಹಬ್ಬ, ಜನಪದ ಜಾತ್ರೆಗಳಿಂದ ಪ್ರಾರಂಭವಾದ ಹೆಜ್ಜೆಗಳು ಇಂಟರ್ ನ್ಯಾಷನಲ್ ಡಾನ್ಸ್ ಅಲಯನ್ಸ್ – ಚೆನೈ, ಸದ್ಭಾವನಾ ದಿವಸ್ – ದೆಹಲಿ. ನ್ಯಾಷನಲ್ ಗೇಮ್ಸ್ ಲಾಂಛನ ಬಿಡುಗಡೆ – ಬೆಂಗಳೂರು, ಕೊಲ್ಕೊತ್ತಾ, ಹರಿಯಾಣಗಳ ರಾಷ್ಟ್ರೀಯ ಉತ್ಸವಗಳು ಮುಂತಾಗಿ ಭಾರತದಾದ್ಯಂತ ನೂರಾರು ಪ್ರದರ್ಶನಗಳಾಗಲು ಮೇಡಂ ಕಾರಣರಾದರು.

ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ನಮ್ಮ ಶ್ರೀ ನಟರಾಜ ನೃತ್ಯ ಶಾಲೆಯ ೨೫ ವರ್ಷಗಳ – ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಭಾನುಮತಿ ಮೇಡಂ ಅವರೇ ಮುಂದೆ ನಿಂತು ಕಾರ್ಯಕ್ರಮಗಳನ್ನು ರೂಪಿಸಿದರು. ನಮ್ಮ ಶಾಲೆಯ ಭರತನಾಟ್ಯ, ಜನಪದ ನೃತ್ಯ, ಯಕ್ಷಗಾನ ನೃತ್ಯ ರೂಪಕಗಳ ಜೊತೆಗೆ, ವಿದುಷಿ ವೈಜಯಂತಿ ಕಾಶಿ ಅವರ ಕೂಚುಪುಡಿ, ವಿದುಷಿ ಮಧುಲಿತಾ ಮಹಾಪಾತ್ರ ಅವರ ಒಡಿಸ್ಸಿ, ವಿದುಷಿ ಪ್ರಿಯಾಂಕ ಚಂದ್ರಶೇಖರ್ ಅವರ ಕಥಕ್ ಮತ್ತು ಭರತಾಂಜಲಿಯಿಂದ ಭರತನಾಟ್ಯವನ್ನು ಆಯೋಜಿಸುದುದಲ್ಲದೆ ಸ್ವತಃ ಅವರೇ ಕೆಲವು ಮುಖ್ಯ ಅಭಿನಯ ಪ್ರಯೋಗಗಳನ್ನು ಪ್ರಸ್ತುತಪಡಿಸಿದರು. ಸುಮಾರು ನಾಲ್ಕು ಸಾವಿರ ಪ್ರೇಕ್ಷಕರು ನಮ್ಮ ಊರಿನ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಅಭಿನಯ ಮತ್ತು ಸಮೂಹ ನೃತ್ಯ ಸಂಯೋಜನೆಗಳಲ್ಲಿ ತಮ್ಮದೇ ಛಾಪು ಮೂಡಿಸಿದ ಗುರು ಬಿ. ಭಾನುಮತಿ ಮೇಡಂ ಪುಣೆಯ ರೋಹಿಣಿ ಭಾಟೆಯವರಿಂದ ಕಥಕ್ ಕಲಿತವರು. ಪದ್ಮಶ್ರೀ ದಂಡಾಯುಧಪಾಣಿ ಪಿಳ್ಳೈ, ಪದ್ಮಭೂಷಣ ಡಾ. ಕೆ ವೆಂಕಟಲಕ್ಷಮ್ಮ, ಪದ್ಮಭೂಷಣ ಡಾ. ಕಲಾನಿಧಿ ನಾರಾಯಣ್ ಅವರಂತಹ ಶ್ರೇಷ್ಠ ಗುರುಗಳಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡಿದವರು. ಶಾಂತಲಾ ಪ್ರಶಸ್ತಿ, ಆರ್ಯಭಟ, ಕರ್ನಾಟಕ ಕಲಾಶ್ರೀ, ಕರ್ನಾಟಕ ರಾಜ್ಯೋತ್ಸವ ಮುಂತಾದ ಪ್ರಶಸ್ತಿ ಪುರಸ್ಕೃತರು….

ಇಂತಹ ಶ್ರೇಷ್ಠ ಗುರು ಪರಂಪರೆಯಿಂದ ಬಂದು ಅಂತರಾಷ್ಟ್ರೀಯ ಖ್ಯಾತ ಕಲಾವಿದರಾಗಿ ಮನ್ನಣೆ ಪಡೆದಿದ್ದರೂ; ಬೆಂಗಳೂರಿನಿಂದ ದೂರದಲ್ಲಿರುವ ತಿಪಟೂರಿನಂತಹ ಸಣ್ಣ ಊರಿಗೆ ಬಂದು ನನ್ನಂತಹ ವಿದ್ಯಾರ್ಥಿಯೊಬ್ಬಳಿಗೆ ಮೂವತ್ತು ವರ್ಷಗಳಷ್ಟು ಧೀರ್ಘಕಾಲ ಆತ್ಮವಿಶ್ವಾಸದ ಆಸರೆಯಾಗಿ ನಿಂತಿದ್ದರಿಂದಲೇ ಈ ಪ್ರದೇಶದ ಬಹು ದೊಡ್ಡ ಸಾಧ್ಯತೆಯೊಂದು ಸಾಕಾರವಾಯಿತು. ಆದ್ದರಿಂದ ಇಷ್ಟು ವರ್ಷಗಳಲ್ಲಿ ತಿಪಟೂರು ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿತಿದ್ದಾರೆ. ನೂರಾರು ವಿದ್ಯಾರ್ಥಿಗಳು ಈಗಲೂ ಕಲಿಯುತ್ತಿದ್ದಾರೆ. ಕೆಲವರು ನೃತ್ಯ ಶಿಕ್ಷಣವನ್ನು ವೃತ್ತಿಯಾಗಿಸಿಕೊಂಡು ತಮ್ಮದೇ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುತ್ತಿದ್ದಾರೆ. ಧೀರ್ಘಕಾಲದ ನೃತ್ಯ ಕೃಷಿಯಿಂದಾಗಿ ಇಡೀ ಊರಿಗೆ ಒಂದು ರೀತಿಯ ಮಾನಸಿಕ ಹಾಗು ದೈಹಿಕ ನಿಲುವು ರೂಪುಗೊಳ್ಳುತ್ತಾ ಬಂದಿದೆ.

ಮೇಡಂ, ಕಡೆಯ ಬಾರಿ ತಿಪಟೂರಿಗೆ ಬಂದಾಗ ಕಾರ್ಯಕ್ರಮವೊಂದರಲ್ಲಿ ಹೀಗೆ ಹೇಳಿದ್ದರು. ‘I have many students but less disciples. Nalina is one of my disciple. Disciples are those who carry our values’ ನನ್ನ ಪಾಲಿಗೆ ಮಾತೃ ಹಾಗು ದೈವ ಸ್ವರೂಪರೂ ಆದ ಗುರುವಿನ ಈ ವಚನ ನನ್ನ ಜೀವಮಾನದಲ್ಲಿ ದೊರಕಿದ ಅತಿದೊಡ್ಡ ಗೌರವವೆಂದೇ ಭಾವಿಸಿದ್ದೇನೆ.

ಮೇಡಂ ನೀವು ಧ್ಯಾನಿಸಿ ಪಡೆದದ್ದನ್ನು ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ನೀಡಿದಿರಿ. ನಾನೆಂಬುದೇನಿಲ್ಲ ಎಂಬಂತೆ ಅನಿರೀಕ್ಷಿತವಾಗಿ ರಂಗದಿಂದ ನಿರ್ಗಮಿಸಿದಿರಿ. ನಿಮಗೆ ಭಕ್ತಿಪೂರ್ವಕ ನಮನಗಳು.

‍ಲೇಖಕರು Avadhi

June 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: