-ಗೀತಾ ನಾರಾಯಣ್
*
ಆ ದಿನ ಯಮುನೆಗೆ ಬಾಯಾರಿಕೆ
ರಾಧೆಯ ಹೆಜ್ಜೆ ಗುರುತುಗಳು ಅಳಿಸಿ ಹೋಗಿವೆ
ಮಾಧವ ಅರಮನೆಯ ಚಾವಡಿಯಲ್ಲಿ ಚಂದ್ರನನ್ನಾದರೂ ಹೇಗೆ ಹುಡುಕಿಯಾನು?
ತಟಸ್ಥ ಯಮುನೆ ಮಾಧವನ ಹೆಗಲಿಗೆ ಕೈಹಾಕಿ ಪಿಸುಗುಟ್ಟಿದ್ದು ರಾಧೆಯ ಕಣ್ಣಿನಾಳದ ಬೆಳಕಿಗೇಕೆ ಕತ್ತಲು ಸುರಿದೆಯೆಂದೇ ಇರಬೇಕು?
ಒಳಗೆ ಯುದ್ದದ ಅಮಲು
ಹೊರಗೆ ಪ್ರೀತಿಯ ಚಟ
ಬೆಳದಿಂಗಳಾದರೂ ಇಳಿದು ಏನು ಮಾಡಲಾದೀತು?
ಹಯಗಳ ಲಾಯದ ಮೇಲೆ ಕಣ್ಣಿಟ್ಟ ಮಾಧವ ಸುಖವನ್ನೇನು ನಿರಾಕರಿಸಲಿಲ್ಲ
ಅವಳಲ್ಲಿ ಯಮುನೆಗೆ ಜೊತೆಗೂಡಿ ಅರಳಿದಳು
ಬೆಳದಿಂಗಳ ಧರಿಸಿ ಮುಳುಗಿ ದಿವ್ಯಗೊಂಡಳು; ಅಕ್ಕರೆಗೆ ಅರ್ಥ ಬರೆಯಲೇಕೆ? ಬಾಳಿದಳಲ್ಲ ಒಲವನ್ನೇ!
ಅವನಿನ್ನು ಸಂಧಾನದ ವಾಂಛೆಯಲ್ಲಿ ಆಸಕ್ತ; ಅವಳೋ ಯಮುನೆಯೊಳಗೆ ಲೀನವಾಗಿ ಹರಿದೇ ಹರಿದಳು..
ರಥವೇರಿ ಸಂಗ್ರಾಮಕ್ಕೆ ಹೊರಟ ಅವನು ಗಳಿಸಿದ್ದಾದರೂ ಏನನ್ನು??
ಅವಳೀಗ ಹುಣ್ಣಿಮೆಗೆದುರಾಗಿ
ದಿನವೂ ಒಲವಿನ ಹಾಡು ಹೇಳುತ್ತಾಳೆ….
ಅವನು ಮಾತ್ರ ಯುದ್ದಾಸಕ್ತ.
ಎಲ್ಲವೂ ಪ್ರೀತಿಯಾದ ದಿನ ರಾಧೆಗೆ ಮುಕ್ತಿ…
ಯಮುನೆ ಅವನಿಲ್ಲದೆಯೂ ಹರಿಯುತ್ತಿರಲಿ…..






0 Comments