ಗೀತಾ ಕುಂದಾಪುರ ಓದಿದ ‘ಸುತ್ತಾಟದ ಸಂಭ್ರಮ’

ಗೀತಾ ಕುಂದಾಪುರ

**

ಕೃತಿಯ ಹೆಸರು – ಸುತ್ತಾಟದ ಸಂಭ್ರಮ (ಪ್ರವಾಸಾನುಭವ ಕಥನ)
ಲೇಖಕಿ – ಗೀತಾ ಜಿ ಹೆಗಡೆ ಕಲ್ಮನೆ.
ಬೆಲೆ – 120/-

ಪ್ರಕಾಶನ – ತೇಜು ಪ್ರಕಾಶನ.

**

ಗೀತಾ ಹೆಗಡೆ ಅವರು ಅವರ ಕವಿತೆಗಳ ಮೂಲಕ ಪರಿಚಯವಾದರು, ಭಾವ ಜೀವಿ, ಅದರೆ ಸರಿಯಲ್ಲ ಎನಿಸಿದ್ದನ್ನು ಮಾತ್ರ ನಿರ್ಭೀತಿಯಿಂದ ಜಾಲತಾಣದಲ್ಲಿ ಹಂಚಿಕೊಂಡವರು. ಅವರ ʻಓ ಮನಸೇ ನೀನೇಕೆ ಹೀಗೆ?ʼ ಲೇಖನಗಳ ಸಂಕಲನ ಮತ್ತು ʻಖಾಲಿ ಹಾಳೆʼ ಕಥಾಸಂಕಲನವನ್ನೂ ಓದಿದ್ದೆ. ಇದೀಗ ಅವರ ʻಸುತ್ತಾಟದ ಸಂಭ್ರಮʼ, ಹೆಸರೇ ಹೇಳುವಂತೆ ಪ್ರವಾಸಾನುಭವ ಕಥನ ಕೈ ಸೇರಿದೆ. ಮೊದಲಿಗೆ ಅಂಡಮಾನ್, ಪೋರ್ಟ್‌ ಬ್ಲೇರ್ ಪ್ರವಾಸದ ಸಂಭ್ರವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಜಗವ ಸುತ್ತವ ಹುಚ್ಚು ನನಗಿದ್ದರೂ ಅಂಡಮಾನ್‌ ಪ್ರವಾಸ ಮಾಡಿರಲಿಲ್ಲ, ಅಲ್ಲೇನೀದೆ ಕಡಲು ತಾನೇ? ನಮ್ಮೂರಿನ ಅದೇ ಬಿಳಿ ನೊರೆಯುಕ್ಕುವ ನೀಲಿ ಅಲೆಗಳ ಒಡೆಯ ನಮ್ಮೂರಲ್ಲೂ ಇದ್ದಾನೆ. ಅಲ್ಲಿಗೆ ಹೋಗಿ ನೋಡುವುದೇನು? ಮಾಡುವುದೇನು? ಎಂಬ ಅಂಬೋಣ ಕರಾವಳಿಯಲ್ಲೇ ಹುಟ್ಟಿ ಬೆಳೆದ ನನ್ನದು. ನನ್ನ ಅನಿಸಿಕೆಯನ್ನು ಸುಳ್ಳು ಮಾಡಿದರು ಗೀತಾ.

ಅಂಡಮಾನ್‌ ದ್ವೀಪ ಸಮೂಹಗಳು ಮಧುಚಂದ್ರಕ್ಕೆ ಹೋಗುವವರಿಗೆ ಹೇಳಿ ಮಾಡಿಸಿದ್ದು ಅನ್ನುವ ಅನಿಸಿಕೆ ಇದ್ದರೂ ಇದು ಎಲ್ಲಾ ವಯೋಮಾನದವರು ಮೆಚ್ಚುವಂತಹದ್ದು ಎನ್ನುತ್ತಾರೆ ಗೀತಾ. ಅದೇ ಭೂಮಿ, ಅದೇ ಆಕಾಶ, ಅದೇ ನೀರಾದರೂ ನೋಡುವ ಕಣ್ಣುಗಳು ಬೇರೆಯಾದಾಗ ಅನಿಸಿಕೆಗಳೂ ಬೇರೆ, ಬೇರೆಯಾಗುತ್ತದೆ. ಇದನ್ನು ಓದಿದ ಮೇಲೆ ಕಡಲನ್ನು ನೋಡುವ ನನ್ನ ದೃಷ್ಟಿಯೇ ಬದಲಾಗಿದೆ. ಗೀತಾ ಅವರು ಹೇಳಿ, ಕೇಳಿ ಕವಿ, ಕಡಲು, ಸೂರ್ಯಾಸ್ತ ನೋಡುತ್ತಿದ್ದಂತೆ, ಅವರ ಕವಿ ಹೃದಯ ಅರಳುತ್ತದೆ, ಅದೇ ಭಾವನೆಯನ್ನು ಅಕ್ಷರ ರೂಪಕ್ಕಿಳಿಸಿದರು. ನೀಲಿ ಸಮುದ್ರದ ರಾಶಿ ರಾಶಿ ನೀರನ್ನು ನೋಡುತ್ತಾ ನೀರ್ಜೀವ ಬೋಟಿನಲ್ಲಿ ಕೂತರೂ ಸೂಕ್ಷ್ಮ ಸಂವೇದನೆಯನ್ನು ಕಂಡರು.

ಇಲ್ಲಿದೆ ಕೆಲವೊಂದು ಉದಾಹರಣೆಗಳು – ಬನ್ನಿ ಬನ್ನಿ ಸಾಗೋಣ, ದೂರ ತೀರವ ಮುಟ್ಟೋಣ, ಸವಿಯಿರಿ ನನ್ನಂಗಳದ ತುಂಬ ಪೊಗದಸ್ತಾದ ಈ ಸೊಬಗಿನ ಸಿರಿ. ಆಹಾ ಆ ಭಾಸ್ಕರನ ಬಿಂಬ ಆಗಾಗ ಮರೆಯಾಗುತಿರಲು ಕಪ್ಪು ಮೋಡದ ತುಂಟಾಟಿಕೆ ನಭೋ ಮಂಡಲದ ಸೌಂದರ್ಯ ವರ್ಣನೆಗೂ ನಿಲುಕದು ಕೈಗೆಟುಕುವಂತಿರುವ ಸೂರ್ಯ ರಶ್ಮಿಯ ಹಾವಭಾವ ನೋಡುಗರ ಕಣ್ಣು ತಣಿಸುತ್ತ ದಿಗಂತದಲ್ಲಿ ಲೀನವಾಗುವ ಗಳಿಗೆಯಂತೂ ಎಂಬ ವಿವರಣೆಗಳಲ್ಲಿ ಇವರ ಕವಿ ಹೃದಯ ಹುಚ್ಚೆದ್ದು ಕುಣಿಯಿತು ಎಂದರೆ ತಪ್ಪಾಗದು, ಓದುಗರಿಗೂ ಲೇಖಕರ ವಿವರಣೆ ಕ್ಯಾನವಾಸಿನಲ್ಲಿ ಬಿಡಿಸಿದ ಚಿತ್ರದಂತಾಗುತ್ತದೆ.

ಸೂರ್ಯಾಸ್ತವನ್ನು ನೋಡಲು ಮುಗಿ ಬೀಳುವ ಜನರ ವಿವರಣೆ ಓದಿದಾಗ ನನಗೆ ಬಾಲಿಯ ʻತನಾಹ ಲಾಟ್‌ʼ ಎಂಬಲ್ಲಿ ಕಂಡ ಸೂರ್ಯಾಸ್ತದ ನೆನಪಾಯಿತು. ಎಷ್ಟೋ ಜನ, ಎಷ್ಟೇ ಕಾದು ಕುಳಿತರೂ ಸೂರ್ಯಾಸ್ತದ ಅಂತಿಮ ಕ್ಷಣ ನೋಡುವ ಭಾಗ್ಯಕ್ಕೆ ಮೇಘರಾಜನ ಕೃಪೆ ಇದ್ದರೆ ಮಾತ್ರ ಸಾಧ್ಯ. ಅಲ್ಲಲ್ಲಿ ಬರೆದಿರುವ ಉಪಮೆ ನಗು ತರಿಸದಿರದು, ಮರಳನ್ನು ಚಿರೋಟಿ ರವೆಗೆ ಹೋಲಿಸಿದ್ದಾರೆ, ಪೂರೀನೋ ಎಣ್ಣೆ ಮುಳುಕ, ಕುಂಡಿ ಕುಣಿಸುತ್ತಾ ಸಾಗುವ ನವಿಲು.

ಪೋರ್ಟ್‌ ಬ್ಲೇರ್ನ ಸೆಲ್ಯೂಲರ್‌ ಜೈಲ್‌ನ ಬಗ್ಗೆ ಮೊದಲೇ ಗೊತ್ತಿದ್ದರೂ ಈ ಮಾನವ ನಿರ್ಮಿತ ನರಕದ ವಿವರಣೆ ಓದುತ್ತಿದ್ದಂತೆ ನಾವೇ ನರಕದ ಬಾಗಿಲಲ್ಲಿ ನಿಂತಂತಾಯಿತು, ನಮ್ಮ ಸ್ವತಂತ್ರದ ಯೋದರು ಅನುಭವಿಸಿದ ಕಷ್ಟ, ಕಾರ್ಪಣ್ಯ, ನೋವಿನ ಮೇಲೆ ಬೆಳಕು ಚಲ್ಲಿದರು, ಓದಿ ಮನಸ್ಸು ಮ್ಲಾನವಾಯಿತು. ಹ್ಯಾವ್ ಲಾಕ್‌ ದ್ವೀಪ – ಸ್ಕೂಬಾ ಡೈವಿಂಗನ ವಿವರಣೆ, ಪಚೀತಿ ಎರಡೂ ಖುಷಿ ಕೊಟ್ಟಿತು. ರಸ್‌ ಐಲ್ಯಾಂಡ್‌ – ಸಾಕಷ್ಟು ಏಳು, ಬೀಳನ್ನು ಕಂಡ ಜಾಗ, ಒಂದು ಕಾಲದಲ್ಲಿ ಬ್ರಿಟೀಷರ ವಸಾಹತುವಾಗಿತ್ತು, ಇವರು ಇಲ್ಲಿಂದಲೇ ದರ್ಬಾರು ನಡೆಸಿದ್ದರು. ಕಡೆಗೆ ಸುನಾಮಿಯ ಹೊಡೆತಕ್ಕೆ ಸಿಕ್ಕು ಬ್ರಿಟೀಷರ ಗತ ವೈಭವದ ಕುರುಹವನ್ನೂ ನಿರ್ನಾಮಗೊಂಡ ಜಾಗ, ಈಗ ಜಿಂಕೆ, ನವಿಲಿನ ಬೀಡಾಗಿದೆ. ಯಾವುದೂ ಶಾಶ್ವತವಲ್ಲ ಎಂದು ಸಾರಿ, ಸಾರಿ ಹೇಳುತ್ತದೆ.

ಅಂತಹ ಬರಡು ಭೂಮಿಯಲ್ಲೂ ಗೀತಾ ಅವರ ವಿವರಣೆ ಬರಡಾಗಿರಲಿಲ್ಲ. ಧರ್ಮಸ್ಥಳ, ಸುಬ್ರಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳು – ಇದೇ ಊರಿನ ದಾರಿಯಲ್ಲಿ ಹಲವು ಸಲ ಸಾಗಿದ್ದರೂ ಈ ಸ್ಥಳಕ್ಕೆ ಭೆಟಿ ಕೊಟ್ಟಿದ್ದು ಕಮ್ಮಿ ಎಂದೇ ಹೇಳಬಹುದು. ಧರ್ಮಸ್ಥಳದ ಸುತ್ತಮುತ್ತ ಇರುವ ಚಿಕ್ಕ, ಪುಟ್ಟ ದೇವಸ್ಥಾನಗಳಿಗೂ ಹೋಗಿ ಅದರ ವಿವರವನ್ನೂ ಕೊಟ್ಟಿದ್ದಾರೆ, ನಾನಿನ್ನೂ ಅಲ್ಲಿಗೆಲ್ಲಾ ಭೇಟಿ ಕೊಡದ್ದರಿಂದ ನನಗೊಂದಿಷ್ಟು ವಿವರ ಸಿಕ್ಕಂತಾಯಿತು. ಗೀತಾ ಅವರ ಮುಂದಿನ ಹೆಜ್ಜೆ ತಮಿಳುನಾಡಿನತ್ತ. ರಾಮೇಶ್ವರ, ಧನುಷ್ಕೋಟಿ, ಶ್ರೀ ಕೋದಂಡ ರಾಮಸ್ವಾಮಿ ದೇವಸ್ಥಾನ,
ಕನ್ಯಾಕುಮಾರಿ, ಮಧುರೈ ಮಿನಾಕ್ಷಿ ಹೀಗೆ ಒಂದನ್ನೂ ಬಿಡದೆ ಸುತ್ತಿದರು, 20-30 ತೀರ್ಥಗಳಲ್ಲಿ ಮುಳುಗೆದ್ದರು, ಅದನ್ನು ಬರೆದರು, ಪುಣ್ಯ ಸಂಪಾದಿಸಿದರು, ಅದನ್ನು ನಮ್ಮಂತವರೂ ಓದುವಂತೆ ಮಾಡಿ, ನಮಗೊಂದಿಷ್ಟು ಪುಣ್ಯ ಕಟ್ಟಿಕೊಳ್ಳುವಂತೆ ಮಾಡಿದರು.

ಪಾಂಬನ್‌ ರೈಲ್ವೆ ಮಾರ್ಗ ಬ್ರೀಟಿಷರ ಕಾಲದ್ದು, ಅದು ಸಮುದ್ರದ ಮೇಲೆ ಹಾದು ಹೋಗುತ್ತದೆ, ಆ ದೃಶ್ಯ ಅತ್ಯಂತ ರಮಣೀಯ, ಇದನ್ನು ಚೆನೈ ಎಕ್ಸಪ್ರೆಸ್‌ ಸಿನೆಮಾದಲ್ಲಿ ನೋಡಿದ ನೆನಪು. ಹಾಗೆಯೇ ರಾಮೇಶ್ವರದಿಂದ ಧನುಷ್ಕೋಟಿವರೆಗೂ ಹಾದಿಯೂ ಸುಂದರವೇ, ಸುಂದರ ದೃಶ್ಯಗಳ ವಿವರಣೆಯೂ ಸುಂದರವೇ. ಹಾಗೆಯೇ ತಮಿಳುನಾಡಿನ ದೇವಸ್ಥಾನಗಳ ದ್ರಾವಿಡ ಶೈಲಿಯ ವಾಸ್ತುಶಿಲ್ಪ ಅತ್ಯಂತ ಸುಂದರ, ನೋಡಲು ಎರಡು ಕಣ್ಣುಗಳು ಸಾಲದು, ಅದನ್ನೂ ಸಹ ಸಾಧ್ಯವಾದಷ್ಟು ವಿವರಿಸಲು ಪ್ರಯತ್ನಿಸಿದ್ದಾರೆ. ಮಧುರೈ ಮೀನಾಕ್ಷಿಯನ್ನು ಕಂಡಾಗ ಆದ ಅನುಭೂತಿ ಓದುಗರಲ್ಲೂ ಉಂಟಾಗುವಂತೆ ಮಾಡಿದರು.

ದಕ್ಷಿಣದ ಕ್ಷೇತ್ರಗಳನ್ನು ಮುಗಿಸಿ ಉತ್ತರದ ಕಾಶಿಯತ್ತ ಹೊರಟರು, ಬಹುಶಃ ಹಿಂದುಗಳು ಜೀವನದಲ್ಲಿ ಒಂದು ಬಾರಿಯಾದರೂ ಭೇಟಿಕೊಡಲು ಇಚ್ಚಿಸುವ ದೇವಸ್ಥಾನ. ಭಂ, ಭಂ ಭೋಲೆನಾಥನೊಡನೆ ಆಘೋರಿಗಳನ್ನು ನೋಡುವ ಇಚ್ಚೆಯೂ ಇತ್ತು ಅವರಿಗೆ. ಕಾಶಿಯ ಘಾಟುಗಳು, ತ್ರಿವೇಣಿ ಸಂಗಮ, ಗಯಾವೆನ್ನುತ್ತಾ ಕಾಲ್ನಡಿಗೆಯಲ್ಲೇ ಸುತ್ತಾಟ ಮಾಡಬೇಕೆಂಬ ಹಂಬಲ, ತಮ್ಮನ್ನು ತಾವೇ ಭೋಲೇನಾಥದ ಸನ್ನಿದಿಗೆ ಒಪ್ಪಿಸುವ ಇಚ್ಛೆ. 2019ರಲ್ಲೇ ಅಯೋಧ್ಯೆಗೆ ಭೇಟಿ ಇತ್ತು ಅಲ್ಲಿರುವ ಕೆಲವೊಂದು ದೇವಾಲಯಗಳನ್ನು ನೋಡಿ ಬಂದರು, ಅದರೊಂದಿಗೆ ಸಾರಾನಾಥ್‌ ದರ್ಶನ.

ಹತ್ತಾರು ಸ್ಥಳಕ್ಕೆ ಹೋದರೂ ಅಲ್ಲಿಗೆ ಹೋದ, ಬಂದ ದಿನಾಂಕ, ಸಮಯವನ್ನೂ ಬರೆದಿದ್ದಾರೆಂದರೆ! ಇವರ ನೆನಪಿನ ಶಕ್ತಿಯನ್ನು ಮೆಚ್ಚಲೇಬೇಕು. ಬಸ್ಸಿನಲ್ಲಿ ಹೊರಟರೆ ಬಸ್‌ ಚಾರ್ಜ್‌, ದೂರ ಸಹ ನಮೂದಿಸಿದ್ದಾರೆಂದರೆ! ದೇವಸ್ಥಾನದಲ್ಲಿರುವ ಕಂಬಗಳ ಲೆಕ್ಕವನ್ನೂ ಬಿಟ್ಟಿಲ್ಲ, ಆದರೆ ಎಲ್ಲೂ ಬೋರಾಗದಂತೆ ಬರೆದಿದ್ದಾರೆ. ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿರುವಾಗ ಮಗುವಾದರು, ಕವಿಯಾದರು, ತೀರ್ಥಕ್ಷೇತ್ರಗಳಲ್ಲಿ ಭಗವಂತನಿಗೆ ತಮ್ಮನ್ನೇ ಅರ್ಪಿಸಿಕೊಂಡರು. ಎಲ್ಲವನ್ನೂ ಅಕ್ಷರ ರೂಪಕ್ಕಿಳಿಸುವಾಗ ತಮ್ಮ ಭಾವನೆಗಳನ್ನು, ನೋಡಿದ್ದನ್ನು, ಕೇಳಿದ್ದನ್ನು, ಅಂಕಿ
ಅಂಶಗಳನ್ನು ನಮ್ಮ ಮುಂದಿಟ್ಟರು, ಓದುಗನೂ ಅದರ ಸವಿಯನ್ನು ಉಣ್ಣುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ.

‍ಲೇಖಕರು Admin MM

March 25, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜಾಲಂದರ’ ನೀಡುವ ಸಾಹಿತ್ಯ ಸಿಂಚನ..

‘ಜಾಲಂದರ’ ನೀಡುವ ಸಾಹಿತ್ಯ ಸಿಂಚನ..

ಆರ್ ಎಸ್ ಹಬ್ಬು ** ಕಲಾ ಭಾಗ್ವತ್ ಅವರ ಕೃತಿ 'ಜಾಲಂದರ'. ಈ ಕೃತಿಯನ್ನು ಬೆಂಗಳೂರಿನ 'ಸ್ನೇಹಾ ಎಂಟರ್ ಪ್ರೈಸಸ್' ಪ್ರಕಟಿಸಿದ್ದಾರೆ. ಹಿರಿಯ...

ನವಮಾಧ್ಯಮದ ಹೊಸ ಶೋಧಗಳ ಅನಾವರಣ

ನವಮಾಧ್ಯಮದ ಹೊಸ ಶೋಧಗಳ ಅನಾವರಣ

ಬಿ.ಎ. ವಿವೇಕ ರೈ ** ಮಾಧ್ಯಮ ತಜ್ಞರಾದ ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ ಅವರ ಹೊಸ ಕೃತಿ 'ಪತ್ರಿಕೋದ್ಯಮದ ಪಲ್ಲಟಗಳು'. 'ಬಹುರೂಪಿ' ಈ...

ಒಂದು ವೃತ್ತಿ ಪಯಣ..

ಒಂದು ವೃತ್ತಿ ಪಯಣ..

ಮಧು ವೈ ಎನ್ ** ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ಕೃತಿ 'ಉಳಿದಾವ ನೆನಪು'. 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಮಧು ವೈ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This