ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧಿ

ಕಾವ್ಯಾ ಕಡಮೆ

ಅವ ಒಬ್ಬ ಮನುಷ್ಯ ಅಲ್ಲ

ಹೀಗಾಗಿ ಒಂದು ಗುಂಡು

ಅವನ ಉರುಳಿಸಲು ಸಾಧ್ಯವಿಲ್ಲ

ಸಾವಿರ ತಲೆಗಳ ಸಹಸ್ರ ಕೈ ಕಾಲುಗಳ

ಈ ಸಂತನಿಗೆ ಹೃದಯವ ಬಗೆದು ಕೊಡು

ಎನಬಹುದೇ? ಕೇಳಿದರೆ ಕೊಟ್ಟೇ ಬಿಟ್ಟಾನು

ತಕೋ ಒಂದ್ಯಾಕೆ ಎರಡು ಎಷ್ಟೆಂದರೂ

ಇನ್ನೊಂದು ಕೆನ್ನೆಯ ತೋರಿಸಿದ ಮಹಾನುಭಾವ

ನೂರು ವರ್ಷ ತಡವಾಗಿ ಹುಟ್ಟಿದ್ದರೆ

ಇಲ್ಲೇ ಇರುತ್ತಿದ್ದನಲ್ಲ ನಮ್ಮ ಹಿರಿಯ ಗೆಳೆಯ

ಸುಮ್ಮನಂತೂ ಕೂಡುತ್ತಿರಲಿಲ್ಲ ಕಿವಿ ಹಿಂಡಿ

ಪುಂಡರ ಬಗ್ಗದಿರೆ ಬೆತ್ತದಲ್ಲೊಂದು ಕೊಟ್ಟು

ಮಗ್ಗಿ ಹೇಳಿಸುತ್ತಿದ್ದನೇ?

ಮಗ್ಗ ನೇಯಿಸುತ್ತಿದ್ದನೇ?

ಹೂ ಅರಳಿಸುತ್ತ ತೋಟದಲಿ

ಅಂತರ್ಜಾಲಕ್ಕಿಂತ ಅಂತರ ಜಲವೇ ಮುಖ್ಯ

ಅಂತ ತಿಳಿ ಹೇಳುತ್ತಿದ್ದ

ಈಗಷ್ಟೇ ಐವತ್ತೊಂದು ತುಂಬಿದವನು

ನೂರು ವರ್ಷವಾದರೂ ಮೊದಲೇ ಹುಟ್ಟಬೇಕಿತ್ತು

ಅಂದುಕೊಳ್ಳುತ್ತಿದ್ದನೇನೋ

ಓದುತ್ತ ಇತಿಹಾಸವನು

ಸತ್ಯವನೇ ಪ್ರಯೋಗಾಲಯದಲಿ

ಪುಟಕ್ಕಿಟ್ಟು ನೋಡಿದವನು

ಕಾಯಿಸಿ ಮಣಿಸಿ ಕರಗಿಸಿ ಹೊತ್ತಿಸಿ

ಮಾಯಿಸಿ ಸೆಣೆಸಿ

ಆ ಚಿನ್ನದ ಹೊಳಪಿಗೆ

ಬೆರಗಾದವನು

ವಿಚಾರದ ಹೆರಳು ಸುರುಳಿ ಸುರುಳಿಯಾಗಿ

ಮೂಡುತ್ತ ಹೋದಂತೆ ಕಾಗದದ ಮೇಲೆ

ಅವನ ಬೆರಳುಗಳೂ ತಡೆದಿರಬಹುದು ಅಲ್ಲಲ್ಲಿ

ಒಮ್ಮೆಲೇ ಹತ್ತು ಹೆಜ್ಜೆ ಮುಂದೆ ಹೋಗುವಲ್ಲಿ

ತುಸು ಬ್ರೇಕು ಹಾಕಿ ಬರಲಿ ಎಲ್ಲರೂ ಅಂತ

ಕಾದಿರಬಹುದು

ಹಾಗೆ ಅವನು ಕಾಯುತ್ತಿರುವಲ್ಲಿ

ಅದೋ ಆ ದೂರದಲ್ಲಿ

ತಲುಪಬೇಕಿದೆ ನಾವಿನ್ನೂ.  

‍ಲೇಖಕರು avadhi

28 September, 2020

2 Comments

  1. T S SHRAVANA KUMARI

    ಚಂದದ ಕವಿತೆ

  2. ಡಾ.ಶ್ರೀಪಾದ ಭಟ್

    ಆಪ್ತತೆಯ ಭಾವದ ಶಬ್ಧಚಿತ್ರ,
    ಅವನ ಪಕ್ಕೆಲುಬಿಗೆ ತಾಗಿನಿಂತಂತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading