ಎಂ ವಿ ಶಶಿಭೂಷಣ ರಾಜು
ಮೊನ್ನೆ ರಾಷ್ಟ್ರೀಯ ಪಕ್ಷದ ನಾಯಕರೊಬ್ಬರು ” ಗಾಂಧಿ ಒಬ್ಬರೇ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿಲ್ಲ” ಎಂದು ಅಪ್ಪಣೆ ಕೊಡಿಸಿದ್ದಾರೆ. ಇಂದು, ಇದು ಎರಡನೇ ತರಗತಿ ಮಗುವನ್ನು ಕೇಳಿದರೂ ಇದೇ ಹೇಳುತ್ತದೆ. ಗಾಂಧಿಯವರು ಎಲ್ಲಿಯೂ ಭಾರತದ ಸ್ವಾತಂತ್ರ್ಯಕ್ಕೆ ತಾವೊಬ್ಬರೇ ಕಾರಣ ಎಂದು ಹೇಳಿದ ದಾಖಲೆಯೂ ಇಲ್ಲ. ಹಾಗಾದರೆ ಪದೇ ಪದೇ ಇಂತಹ ಹೇಳಿಕೆಗಳನ್ನು ಕೊಡುವ ರಾಜಕೀಯ ನಾಯಕರ ಮನಸಿನಲ್ಲಿ ಎಂತಹ ಕೊಳಕಿದೆ ಎಂದು ಊಹಿಸುವುದು ಸುಲಭ. ಹೀಗೆ ಯಾರಾದರೂ ಹೇಳಿಕೆಗಳನ್ನು ಕೊಡುತ್ತಾ ನಾವು ಗಾಂಧಿಯನ್ನೇ ವಿಶ್ಲೇಷಿಸುವಷ್ಟು ದೊಡ್ಡವರೆಂದುಕೊಳ್ಳುತ್ತಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಷ್ಟೂ, ಗಾಂಧೀ ಇನ್ನೂ ಎತ್ತರಕ್ಕೆ ಬೆಳೆಯುತ್ತಲೇ ಇರುತ್ತಾರೆ. ಹಾಗಾದರೆ, ಇಂತಹ ಹೇಳಿಕೆಗಳನ್ನು ಕೊಡುತ್ತಾ ಇವರು ಸಾಧಿಸುವುದು ಏನನ್ನು?.
ಗುಜರಾತಿನ ಪಟೇಲ ಜನಾಂಗದವರಿಗೆ, ತಮ್ಮ ಸಮುದಾಯಕ್ಕೆ ಸೇರಿದ ಸರ್ದಾರ ವಲ್ಲಬಾಯಿಪಟೇಲರನ್ನು ಮೊದಲ ಪ್ರಧಾನಿಯನ್ನಾಗಿ ಮಾಡದೆ, ನೆಹರೂರವರನ್ನು ಪ್ರಧಾನಿ ಕುರ್ಚಿಯಲ್ಲಿ ಕೂರಿಸಿದ್ದರ ಕೋಪವಿದೆ. ಸ್ವತಃ ಗಾಂಧಿಯವರೂ ಕೂಡ ಗುಜರಾತಿನವರೇ ಎಂಬುದನ್ನೂ ಮರೆತು, ಗಾಂಧಿಯವರ ಬಗ್ಗೆ ಅಸಹನೆ ತೋರುತ್ತಾರೆ. ಗಾಂಧಿ ಅವರಿಗೆ ನೆಹರೂ ಅವರ ಮೇಲಿದ್ದ ಗೌರವವೇ ಪಟೇಲರ ಮೇಲಿತ್ತು. ತಾವು ಗುಜರಾತಿನವರಾದ್ದರಿಂದ ಒಬ್ಬ ಗುಜರಾತಿಯನ್ನೇ ಪ್ರಧಾನಿಯನ್ನಾಗಿ ಮಾಡಿದರು ಎಂದು ದೇಶದ ಜನ ಅಂದುಕೊಳ್ಳಬಹುದು ಎಂಬ ಅಳುಕು ಗಾಂಧಿಯವರಲ್ಲಿತ್ತು ಎಂದು ಕೆಲವು ಕಡೆ ಧಾಖಲಾಗಿದೆ. ಭಾರತದ ಅಂದಿನ ಜರೂರತ್ತುಗಳನ್ನು ಪೂರೈಸುವ ಅಗತ್ಯ ಮತ್ತು ಜವಾಬ್ದಾರಿಗಳು ಮೊದಲ ಪ್ರಧಾನಿಯ ಮೇಲೆ ಇದ್ದಕಾರಣ, ಸ್ವತಃ ಗಾಂಧಿಯರೇ ಪ್ರಧಾನಿಯಾಗಿದ್ದರೂ ಆಗುತ್ತಿದ್ದ ಕೆಲಸಗಳು ಅವೇ ಆಗಿರುತ್ತಿದ್ದವು.
ಇರಲಿ, ಈಗ ಗಾಂಧಿಯನ್ನು ಅರ್ಥ ಮಾಡಿಕೊಳ್ಳುವಷ್ಟು ಬುದ್ದಿಯಾಗಲಿ, ಅವಗಾಹನೆಯಾಗಲಿ, ಓದಾಗಲಿ ಇರದ ನಾಯಕರು, ಕೆಲಜನಗಳು, ಗಾಂಧಿಯವರನ್ನೇ ದೂರುವುದ ನೋಡಿ ಪಾಪ ಎನಿಸುತ್ತದೆ. ಇಡೀ ವಿಶ್ವವೇ ಗಾಂಧಿಯನ್ನು ಕೊಂಡಾಡುತ್ತಿದ್ದರೂ, ವಿಶ್ವದ ಎಲ್ಲ ಜನಾಂಗದ ಕಣ್ಣನು ತೆರೆಸಿದ ಗಾಂಧಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದರೂ , ನಮ್ಮ ದೇಶದ ಕೆಲವರು ಪರೋಕ್ಷವಾಗಿ ಗಾಂಧಿಯ ಬಗ್ಗೆ ಕುಹುಕವಾಡುವುದನ್ನು ಕೇಳಿ ಇವರ ಜ್ಞಾನವಿಷ್ಟೇ ಎಂದು ಸುಮ್ಮನಾಬೇಕಷ್ಟೆ.
ಒಂದು ಪಕ್ಷ ಸಾರ್ವರ್ಕರನ್ನು ಎತ್ತಿ ಹಿಡಿದರೆ, ಇನ್ನೊಂದು ಪಕ್ಷ ಅವರ ಅವಹೇಳನ ಮಾಡುತ್ತದೆ. ಒಂದು ಪಕ್ಷ ಪದೇ ಪದೇ ಗಾಂಧಿಯವರನ್ನು ನನಪಿಸಿಕೊಳ್ಳುವವರಿಂದ ಇನ್ನೊಂದು ಪಕ್ಷ ಗಾಂಧಿಯವರಿಗೆ ಅಷ್ಟೊಂದು ಪ್ರಾಮುಖ್ಯ ಕೊಡುವುದ ಬೇಡ ಎಂಬಂತೆ ಮಾತನಾಡುತ್ತದೆ. ಕೆಲವು ಸಲ ನೆಹರು, ನೇತಾಜಿ, ಅಂಬೇಡ್ಕರ್, ಎಲ್ಲರನ್ನೂ ಎಳೆದು ತರುತ್ತವೆ. ಇನ್ನು ಟಿಪ್ಪು ಸುಲ್ತಾನ್ ಒಂದು ಪಕ್ಷಕ್ಕೆ ಮೈಸೂರ ಹುಲಿ, ಸ್ವಾತಂತ್ರ್ಯ ಹೋರಾಟಗಾರ, ಇನ್ನೊಂದು ಪಕ್ಷಕ್ಕೆ ದೇಶದ್ರೋಹಿ, ಭಾಷಾ ದ್ರೋಹಿ, ಜನ ದ್ರೋಹಿ. ಗತಿಸಿದವರು ಎದ್ದುಬಂದು ಉತ್ತರಕೊಡಲಾಗುವುದಿಲ್ಲ ಎಂಬ ಕನಿಷ್ಠ ಜ್ಞಾನವೂ ಇಲ್ಲದಿರಿವುದು ಸೋಜಿಗ ಎನಿಸುತ್ತದೆ. ನಮ್ಮ ನಡುವೆ ಇರದವರ ಒಳ್ಳೆಯ ಕೆಲಸಗಳು, ಅವರ ಒಳ್ಳೆಯ ಮಾರ್ಗಗಳ ಬಗ್ಗೆ ಮಾತನಾಡಿ, ಅವರೂ ಮನುಷ್ಯರಾದ್ದರಿಂದ ಕೆಲ ತಪ್ಪುಗಳು ಆಗುವುದು ಸಹಜ ಎನ್ನುವ ಅರಿವಿನಿಂದಲೇ ಅವರನ್ನು ನೆನಪಿಕೊಳ್ಳಬೇಕಲ್ಲವೇ?
ಭಾರತದ ಹೊರಗಿನ ದೇಶಗಳ ಉನ್ನತ ನಾಯಕರು ಗಾಂಧಿಯನ್ನು ವಿನಮ್ರದಿಂದ, ಗೌರವದಿಂದ, ಪ್ರೀತಿಯಿಂದ ನೆನಪಿಸುಕೊಳ್ಳುತ್ತಿದ್ದರೆ, ಭಾರತದ ಕೆಲಜನ ಅವರ ಅವಹೇಳನಕ್ಕೆ ಸಿದ್ದವಾಗಿರುತ್ತದೆ, ಗಾಂಧಿಯವರನ್ನು ಕೊಂದವನಿಗೆ ಪೂಜೆ ಮಾಡಲಾಗುತ್ತದೆ, ಗಾಂಧಿಯ ಚಿತ್ರಪಟಕ್ಕೆ ಗುಂಡು ಹೊಡೆಯಲಾಗುತ್ತದೆ. ಹೀಗೆ ಮಾಡುತ್ತಾ ಅವರು ಏನು ಹೇಳುತ್ತಿದ್ದಾರೆ, ಮಕ್ಕಳಿಗೆ ಯಾವ ಸಂದೇಶ ನೀಡುತ್ತಿದ್ದಾರೆ, ಇಂತವರ ಕಂಡೂ ಸರ್ಕಾರಗಳಾಗಲೀ, ನ್ಯಾಯಾಲಯಗಳಾಗಲಿ ಯಾಕೆ ಯಾವುದೇ ಒಂದು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ವಾಕ್ ಸ್ವಾತಂತ್ರ್ಯದ ನೆರವು ಪಡೆದು ಅಂತವರನ್ನು ಯಾಕೆ ರಕ್ಷಿಸಲಾಗುತ್ತದೆ.
ಇನ್ನು ನೆಹರು ಅವರನ್ನಂತೋ ಮೂರ್ಖತನದಿಂದ ಸದಾ ಒಂದಲ್ಲ ಒಂದು ಕಾರಣಕ್ಕೆ, ಒಂದಲ್ಲ ಒಂದು ಸಂದರ್ಭದಲ್ಲಿ ಕೆಲಜನ, ಅವಮಾನಕ್ಕೆ ಗುರಿ ಮಾಡುತ್ತಲೇ ಇರುತ್ತಾರೆ. ಇಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲಗಾಂಧಿ, ನೆಹರು ಅವರ ಕುಡಿ ಎಂಬ ಒಂದೇ ಕಾರಣಕ್ಕೆ ನೆಹರು ಅವರ ಬಗ್ಗೆ ಏನೂ ಗೊತ್ತಿಲ್ಲದ ಜನ, ಅವರ ಸಾಧನೆ ಶೂನ್ಯ ಎಂಬಂತೆ ಮಾತನಾಡಿ, ಸಾಧ್ಯವಾದಷ್ಟು ಅವರನ್ನು ಪಕ್ಕಕೆ ಸರಿಸುವ ಕೆಲಸ ನಡೆಯುತ್ತಿದೆ.
ಯಾರೋ ದಾರಿಯಲ್ಲಿ ಹೋಗುವವರು ಹೇಳಿದರೆ ಅದಕ್ಕೆ ಅಷ್ಟು ಪ್ರಾಮುಖ್ಯತೆ ಇರುವುದಿಲ್ಲ, ಆದರೆ ಸಮಾಜದಲ್ಲಿ ಪ್ರಮುಖ ವ್ಯಕ್ತಿಗಳಾಗಿ ಗುರಿತಿಸಿಕೊಂಡವರು,ರಾಜಕಾರಣಿಗಳು, ಸೆಲಬ್ರಿಟಿಗಳು ಮನಸಿಗೆ ಬಂದಂತೆ ಮಾತನಾಡಬಾರದು, ಅವರು ಮಾತನಾಡುವ ಪ್ರತಿಯೊಂದು ಮಾತಿಗೂ ತೂಕವಿರುತ್ತದೆ, ಅದು ಸಮಾಜದ ಸ್ವಾಸ್ಥ ಕೆಡಿಸುವಂತೆ ಇರಬಾರದು.
ಈಗ ವಿಶ್ವದೆಲ್ಲೆಡೆ ಏನಾಗುತ್ತಿದೆ ಎಂದರೆ, ಎಲ್ಲಕ್ಕೂ ಪರ ವಿರೋಧವಿರುವುದು. ಪ್ರತಿಯೊಬ್ಬ ರಾಜಕಾರಿಣಿಗೂ ತನ್ನದೇ ಆದ ಒಂದು ಗುಂಪಿರುತ್ತದೆ, ತನ್ನನು ವಿರೋಧಿಸಿದವರ ಗುಂಪಿನ ಮೇಲೆ ಅದು ಮುಗಿಬೀಳುತ್ತದೆ. ತಾನು ಬೆಂಬಲಿಸುವ ರಾಜಕಾರಣಿ ಮೂರ್ಖನಾದರೂ, ಭ್ರಷ್ಟಾಚಾರಿಯಾದರೂ, ಕೊಲೆಗಡುಕನಾದರೂ ಈ ಗುಂಪು ಸದಾ ಬೆನ್ನಿಗಿರುತ್ತದೆ.
ಸಮಾಜದ ಕೆಲಜನ ಈಗಲೂ ಮುಗ್ದರಂತೆ ಮೌಲ್ಯಾಧಾರಿತ ರಾಜಕಾರಣ, ಉತ್ತರದಾಯಿತ್ವ, ಭ್ರಷ್ಟಾಚಾರ ರಹಿತ ಸರ್ಕಾರ, ಸ್ವಜನಪಕ್ಷಪಾತ ನಡೆಸದ ನಾಯಕ ಹೀಗೆ ಅನೇಕ ಸಂಗತಿಗಳ ಬಗ್ಗೆ ತಪನದಿಂದ ಮಾತನಾಡುತ್ತಿರುತ್ತಾರೆ. ಬಹ್ವಂಶ ರಾಜಕಾರಣಿಗಳೂ, ಅಧಿಕಾರಿಗಳೂ, ಇವೆಲ್ಲವನ್ನೂ ಅಣಕಿಸುವ ರೀತಿಯಲ್ಲಿ ಹೇಗಾದರೂ ಅಧಿಕಾರ ಸಿಗಬೇಕೆಂದು, ಅದಕ್ಕೆ ಬೇಕಾದ ಹಣ ಹೊಂದಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ದೇವರನ್ನೇ ತಾವು ಅಧಿಕಾರಕ್ಕೆ ಬರಲು ಬಳಸಿಕೊಳ್ಳುವವರು ಇನ್ನು ಮನುಷ್ಯರನ್ನು ಬಿಟ್ಟಾರೆಯೇ?
ಎಲ್ಲರೂ ಪ್ರಜ್ಞಾಪೂರ್ವಕವಾಗಿ ಒಂದು ತೀರ್ಮಾನಕ್ಕೆ ಬರಬೇಕು, ಯಾವುದೇ ಗತಿಸಿದ ವ್ಯಕ್ತಿಯ ಬಗ್ಗೆ ಕೆಡುಕಾಗಿ ಮಾತನಾಡದಿರುವುದು, ಅವರ ಒಳ್ಳೆಯ ಸಂದೇಶಗಳ ಬಗ್ಗೆ ಮಾತ್ರ ಮಾತನಾಡುವುದು. ಉನ್ನತ ನ್ಯಾಯಾಲಯಗಳು ಆ ಬಗ್ಗೆ ಕಠಿಣ ಕ್ರಮ ತಾಳುವುದು. ಯಾವುದೇ ಪಕ್ಷ ಗತಿಸಿದವರ ಹೆಗೆಲೇರಿ ತಮ್ಮ ಬೇಳೆ ಬೇಯಿಸಿಕೊಳ್ಳದಂತೆ ಕಾಯುವುದು, ಅಥವಾ ಗತಿಸಿದವರ ಒಳ್ಳೆಯ ಗುಣಗಳನ್ನು ಮಾತ್ರ ಮಾತನಾಡಿ ಅವರ ನೆನಪನ್ನು ಮುಂದಿನ ಪೀಳಿಗೆ ದಾಟಿಸುವುದು. ಕಠಿಣ ಕಾನೂನನ್ನು ತರದೇ ಜನ ಒಳ್ಳೆಯವರಾಗುತ್ತಾರೆ ಎಂದು ಕಾಯುವುದು ಸಮಾಜದ ವಿಪರ್ಯಾಸವಾಗಿರುವುದರಿಂದ ಇದಕ್ಕೆ ಒಂದು ತಾರ್ಕಿಕ ಅಂತ್ಯ ಕಾಣುವುದು ಅಸಾದ್ಯ.
ಕೊನೆ ಮಾತು :
ಮೊನ್ನೆ ಅಮೇರಿಕಾದ ಶಾಲೆಯೊಂದರಲ್ಲಿ ಉನ್ನತ ವ್ಯಕ್ತಿಗಳ ಬಗ್ಗೆ ಮಾತನಾಡಲು ಹೇಳಿದಾಗ ಒಂದು ಮಗು ಆರಿಸಿಕೊಂಡದ್ದು ಮಹಾತ್ಮಾ ಗಾಂಧೀಜಿ ಅವರನ್ನು, ಗಾಂಧೀಜಿ ಅವರ ಬಗ್ಗೆ ಇಂಟರ್ನೆಟ್ ನಲ್ಲಿ ಹುಡುಕಿ, ಹತ್ತು ನಿಮಿಷ ಅವರ ಬಗ್ಗೆ ಆ ಮಗು ಮಾತನಾಡಿದ್ದು ಹೆಮ್ಮೆ ಎನಿಸಿತು.
0 ಪ್ರತಿಕ್ರಿಯೆಗಳು