ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ, 20ಆವೃತ್ತಿಗಳನ್ನು ಕಂಡ ನಟಿ ರಂಜನಿ ರಾಘವನ್ ಅವರ ‘ಕತೆ ಡಬ್ಬಿ’ಯ ಒಂದು ಕಥೆಯನ್ನು ನಿಮ್ಮ ಮರು ಓದಿಗಾಗಿ ಮತ್ತೆ ಇಲ್ಲಿ ಪ್ರಕಟಿಸುತ್ತಿದ್ದೇವೆ.
ಕಾಣೆಯಾದವರ ಬಗ್ಗೆ ಪ್ರಕಟಣೆ…
ಒಂದಾನೊಂದು ಕಾಲದಲ್ಲಿ, ದಟ್ಟ ಅರಣ್ಯದ ಮಧ್ಯೆ ಪ್ರಾಣಿಗಳ ಸಭೆ ನೆರೆದಿತ್ತು. ಗಂಧದ ಮರದ ಸಿಂಹಾಸನದ ಮೇಲೆ ಕಾಡಿನ ರಾಜ ಠೀವಿಯಿಂದ ಕೂತಿದ್ದರು. ಅಮ್ಮ ಕೋತಿಯೊಂದು, ತನ್ನ ಪುಟ್ಟ ಮರಿಯನ್ನು ಕಳೆದುಕೊಂಡು, ಕಣ್ಣೀರು ಹಾಕುತ್ತಾ ತನಗಾದ ನೋವನ್ನು ವಿವರಿಸುತ್ತಿತ್ತು. ಜಿಂಕೆ, ಆನೆ, ನರಿ, ತೋಳ, ಕರಡಿ ಸೇರಿದಂತೆ ಎಲ್ಲವೂ ಕನಿಕರದಿಂದ ಅವಳ ಮಾತುಗಳನ್ನು ಕೇಳುತ್ತಿದ್ದವು. ‘ನನ್ನ ಕಂದನನ್ನು ಆ ಮನುಷ್ಯರು ಬಲೆಗೆ ಬೀಳಿಸಿಕೊಂಡು ಗಾಡಿಯಲ್ಲಿ ಕರೆದುಕೊಂಡು ಹೋಗಿದ್ದಾರೆ ಮಹಾರಾಜ, ನಾನು ಊರೊಳಗೆ ಹೋಗಿ ನನ್ನ ಮಗುವನ್ನು ಹುಡುಕಿಕೊಂಡು ಬರುತ್ತೇನೆ’ ಅಮ್ಮ ಕೋತಿಯು ಅಪ್ಪಣೆ ಕೇಳಿದಾಗ ದಪ್ಪ ಧ್ವನಿಯ ಕಾಡಿನ ರಾಜ ಗಂಟಲು ಸರಿ ಮಾಡಿಕೊಂಡು ಮಾತನಾಡಿತು.

‘ಮನುಷ್ಯರು ಒಂದು ಸಲ ನಮ್ಮವರನ್ನ ಕರೆದುಕೊಂಡು ಹೋದರೆ, ಎಂದಿಗೂ ವಾಪಸ್ಸು ಕಳಿಸಿಲ್ಲ, ನಮ್ಮ ಆನೆ ಗಜಾನನ, ಹುಲಿರಾಯ ಎಲ್ಲರನ್ನು ಸರ್ಕಸ್ ನವರು ಕರೆದುಕೊಂಡು ಹೋಗಿ ವರ್ಷಗಳೇ ಆಯ್ತು, ನಾಪತ್ತೆ. ಇನ್ನು ನಿನ್ನ ಮರಿ ಸಿಗುವ ಸಾಧ್ಯತೆ ಕಮ್ಮಿ ವ್ಯರ್ಥ ಪ್ರಯತ್ನ ಮಾಡ್ಬೇಡ’. ಸಿಂಹವು ಎಚ್ಚರಿಕೆ ಕೊಟ್ಟಾಗ ಅಮ್ಮ ಕೋತಿ, ನಮ್ಮ ದೂರದ ನೆಂಟರು ಊರಲ್ಲೇ ವಾಸ ಮಾಡ್ತಾರೆ, ಅವರಿಂದ ನಂಗೆ ಸಹಾಯ ಸಿಗ್ಬೋದು ಮಹಾರಾಜ, ಒಂದು ಸಲ ಪ್ರಯತ್ನ ಮಾಡ್ತೀನಿ ನನ್ನ ಕಂದ ನಂಗೆ ಬೇಕು ಅಂತ ಕಣ್ಣೀರು ಹಾಕಿತು. ತಾಯಿಯ ಕರುಳನ್ನು ನೋಯಿಸಬಾರದೆಂದು ಮಹಾರಾಜ ಒಳ್ಳೇದಾಗಲಿ ಎಂದು ಹರಸಿ ಕಳಿಸಿಕೊಟ್ಟಿತು.
ಸುತ್ತಲೂ ಮರಗಳಿದ್ದ ಗೊಂಡಾರಣ್ಯದಿಂದ ಸುತ್ತಲೂ ಮನೆಗಳಿರುವ ದಾರಿ ಸಿಗುವ ತನಕ ಅಮ್ಮ ಕೋತಿಯ ಪ್ರಯಾಣ ಬೆಳೆದಿತ್ತು. ಮರದಿಂದ ಮರಕ್ಕೆ ನೆಗೆಯುತ್ತಾ, ಒಂದಷ್ಟು ದೂರ ನಾಲ್ಕು ಕಾಲಲ್ಲಿ ನಡೆಯುತ್ತಾ, ಎಲ್ಲಾದರೂ ತನ್ನ ಮರಿ ಕಾಣಬಹುದೇ ಅನ್ನೋ ತವಕದಿಂದ ನೋಡ್ತಾ ಮುಂದೆ ಸಾಗಿತು. ರಸ್ತೆಯಲ್ಲಿ ಒಬ್ಬ ಹೆಂಗಸು ತಲೆಯ ಮೇಲೆ ಹುಲ್ಲಿನ ಹೊರೆಯನ್ನು ಹೊತ್ತುಕೊಂಡು, ಕಂಕುಳಲ್ಲಿ ಮಗುವನ್ನು ಎತ್ತುಕೊಂಡು ಹೋಗ್ತಿದ್ದನ್ನು ನೋಡಿದಾಗ, ತಾನು ತನ್ನ ಮರಿಯನ್ನು ಹೊಟ್ಟೆಗೆ ಅಪ್ಪಿಕೊಂಡು ಕಾಡೆಲ್ಲಾ ಸುತ್ತಿದ್ದು ನೆನಪಾಯಿತು.
ಮರದಿಂದ ಹಣ್ಣುಗಳನ್ನು ಕಿತ್ತು ಕೊಡುತ್ತಿತ್ತು, ಮೈಮೇಲೆ ಮಲಗಿಸಿಕೊಂಡು ಕೂದಲಲ್ಲಿದ್ದ ಹೇನುಗಳು ಮರಿಗೆ ಕಚ್ಚದಂತೆ ಬೆರಳಲ್ಲಿ ಕುಕ್ಕುತ್ತಿತ್ತು. ಮರಿ ಕೋತಿ ಅಂದ್ರೆ ಎಲ್ಲರಿಗೂ ಮುದ್ದು. ತುಂಟಾಟ ಮಾಡೋದು, ಬೇರೆ ಕೋತಿಗಳ ಮೇಲೆ ಬಿದ್ದು ಅವುಗಳನ್ನು ರೇಗಿಸೋದು ಅದಕ್ಕೆ ಇಷ್ಟವಾದ ಆಟವಾಗಿತ್ತು. ಇಷ್ಟು ಲವಲವಿಕೆಯಿಂದಿದ್ದಕ್ಕೇ ಕಣ್ಣುಬಿದ್ದು ನನ್ನಿಂದ ನನ್ನ ಕಂದ ದೂರವಾಗಿಯೇನೋ ಎಂದು ಅಮ್ಮ ಕೋತಿ ವ್ಯಥೆಪಟ್ಟಿತು
ಗದ್ದೆ, ತೋಟ, ನದಿ, ಬಾವಿಗಳನ್ನು ದಾಟಿ ಎಷ್ಟು ದೂರಬಂದರೂ ಮನುಷ್ಯರನ್ನು ಬಿಟ್ಟು ಯಾರೂ ಕಾಣಲಿಲ್ಲ. ಕಿಲೋಮೀಟರ್ ಗಟ್ಟಲೆ ಕ್ರಮಿಸಿದ್ದರಿಂದ ಬಳಲಿ ಅಮ್ಮ ಕೋತಿಗೆ ಬಾಯಾರಿಕೆಯಾಗಿತ್ತು. ಪಕ್ಕದಲ್ಲಿದ್ದ ಮರವನ್ನು ನಿಧಾನವಾಗಿ ಹತ್ತುತ್ತಾ ತುದಿ ತಲುಪಿ ಸುತ್ತ ನೋಡಿದಾಗ ದೂರದಲ್ಲಿ ಒಂದು ಕೊಳಾಯಿ ಮುಂದೆ ಕೊಡವಿಟ್ಟು ಒಂದಿಬ್ಬರು ಹೆಂಗಸರು ನಿಂತಿದ್ದರು. ಅಮ್ಮ ಕೋತಿ ಖುಷಿಯಿಂದ ಕೊಳಾಯಿ ಹತ್ತಿರ ಹೋದಾಗ ಹೆಂಗಸರ್ಯಾರೂ ಇರಲಿಲ್ಲ, ಕೈಯಲ್ಲಿ ಕೊಳಾಯಿಯನ್ನು ತಿರುಗಿಸಿದಾಗ ನೀರು ಬರಲೇ ಇಲ್ಲ. ಏಕೆ ಅವರೆಲ್ಲಾ ಹೊರಟುಹೋದರೆಂದು ಈಗ ಅರ್ಥವಾಯಿತು. ಆದ್ರೆ ದಾಹ ಹೆಚ್ಚಾಗಿ ಗಂಟಲು ಒಣಗಿತು.
ಮೊದಲು ತನ್ನ ಹಸಿವು, ದಣಿವಾರಿಸಿಕೊಳ್ಳಬೇಕೆಂದು ಅಮ್ಮ ಕೋತಿಯು ಊರಿನ ಒಳದಾರಿ ಹಿಡಿಯಿತು. ಮನೆಗಳ ಮುಂದೆ ಅಲ್ಲಲ್ಲಿ ಮಕ್ಕಳು ಆಡುತ್ತಿದ್ದವು, ಹೆಂಗಸರು ಬಟ್ಟೆ ಒಗೆಯುತ್ತಿದ್ದರು, ಕಸ ಗುಡಿಸುತ್ತಿದ್ದರು. ಬಿಟ್ಟರೆ ಬಾಯಿಗೆ ಹಾಕಿಕೊಳ್ಳುವಂಥದ್ದೇನೂ ಕಣ್ಣಿಗೆ ಕಾಣಲಿಲ್ಲ. ಉದ್ದಬಾಲವನ್ನು ಎತ್ತಿಕೊಂಡು ಅಮ್ಮ ಕೋತಿ ಹೆಂಚಿನ ಮೇಲೆ ನಡೆಯುತ್ತಾ ಮುಂದೆ ಹೋದಾಗ ಜನ ಗುಂಪುಗುಂಪಾಗಿ ಹೋಗುತ್ತಿರೋದು ಕಾಣಿಸಿತು. ಅಲ್ಲಿ ಏನಾದರೂ ತಿನ್ನೋಕೆ ಸಿಗಬಹುದೆಂದೆಣಿಸಿ ಅತ್ತ ಹೋಯಿತು.
ಪುಟ್ಟ ಹನುಮಂತನ ಗುಡಿ ಮುಂದೆ ಜನ ಸೇರಿದ್ದರು. ಬಾಗಿಲಿಗೆ ತೋರಣ ಕಟ್ಟಿದ್ದರು. ಹೂವಿನಿಂದ ಅಲಂಕಾರ ಮಾಡಿದ್ದರು, ಹನುಮಂತನಿಗೆ ಉದ್ದಿನವಡೆಯ ಹಾರ ಹಾಕಿದ್ದರು, ಮುಂದೆ ನೈವೇದ್ಯೆಗೆ ಹಣ್ಣುಗಳು, ಉಸಲಿ, ಮೊಸರನ್ನ ಇಟ್ಟಿದ್ದರು. ಕೋತಿಗೆ ಗರ್ಭಗುಡಿಯಲ್ಲಿದ್ದ ಮೂರ್ತಿಯನ್ನು ನೋಡಿ ಆಶ್ಚರ್ಯವಾಯಿತು! ತನ್ನ ಹಾಗೆ ಮುಖ, ತನ್ನ ಹಾಗೆ ಬಾಲ, ಕೈಕಾಲುಗಳು. ಕೈಲಿ ಬೆಟ್ಟ ಹಿಡಿದು ನಿಂತಿದ್ದ ಮೂರ್ತಿಯನ್ನು ನೋಡಿ ಒಂದು ಕ್ಷಣ ಸ್ಥಭ್ಧವಾಗಿಹೋಯಿತು. ಇಲ್ಲಿಯ ಜನ ನನ್ನ ಹಾಗೇ ಇರೋ ಈ ಮೂರ್ತಿಗೆ ತುಂಬಾ ಗೌರವಕೊಡ್ತಾರೆ ಅಂದುಕೊಂಡು ಎಲ್ಲರೂ ಮಾಡಿದ ಹಾಗೆ ತಾನೂ ಕೈ ಮುಗಿದು ನಮಸ್ಕಾರ ಮಾಡಿತು.

ಪೂಜೆ ಮುಗಿಸಿದವರು ಪ್ರಸಾದ ಹಂಚಿಕೊಳ್ಳುತ್ತಿದ್ದನ್ನು ಕಂಡು ಹಸಿವಾಗಿದ್ದ ಕೋತಿಗೆ ಜೀವ ಬಂದಂತಾಯಿತು. ಅವರ ಹತ್ತಿರ ಹೋದಾಗ ಕೆಲವರು ಹೆದರಿ ದೂರ ಓಡಿದರು, ಧೈರ್ಯ ಮಾಡಿ ಪ್ರಸಾದದ ಕಡೆ ಹೆಜ್ಜೆಯಿಟ್ಟಾಗ ಕೆಲವರು ಓಡಿಸಲು ಮುಂದಾದರು. ಅಮ್ಮ ಕೋತಿ ತನಗೆ ಹಸಿವಾಗಿದೆ ಅಂತ ಅರ್ಥಮಾಡಿಸಲು ಗುರ್ರ್ ಎಂದು ಇನ್ನೊಂದು ಹೆಜ್ಜೆ ಮುಂದಿಟ್ಟಿದಾಗ ಒಂದಿಬ್ಬರು ಕಲ್ಲನ್ನು ಕೈಗೆತ್ತಿಕೊಂಡರು, ಏನಾದರಾಗಲಿ ಒಂದು ದೊನ್ನೆಯನ್ನು ಎತ್ತಿಕೊಳ್ಳುವ ಅಂತ ನಿರ್ಧಾರ ಮಾಡಿ ಇನ್ನೊಂದಿಷ್ಟು ಮುಂದೆ ಹೋದ ಕೋತಿಯ ಮೇಲೆ ಯಾರೋ ಒಬ್ಬ ಕಲ್ಲು ತೂರೇಬಿಟ್ಟ. ಜೋರಾಗಿ ಎಸೆದ ಕಲ್ಲು ಭುಜಕ್ಕೆ ತಾಗಿ ರಕ್ತ ಒಸರಿತು. ನೋವಿಗೆ ತಲೆಸುತ್ತಿದಂತಾಯಿತು. ಅಮ್ಮ ಕೋತಿ ನಿಧಾನವಾಗಿ ಹೆಜ್ಜೆ ಇಡುತ್ತಾ ಹತ್ತಿರವಿದ್ದ ಬಂಡೆಯ ಹಿಂದೆ ಅವಿತುಕುಳಿತುಕೊಂಡಿತು. ಹಸಿವು, ಸುಸ್ತು, ಮೇಲಿಂದ ಕಲ್ಲಿಂದಾದ ಗಾಯದಿಂದ ಅನಾಯಾಸವಾಗಿ ಕಣ್ಣು ಒದ್ದೆಯಾಯಿತು.
ಇದ್ಯಾಕೆ ಹೀಗೆ? ನನ್ನ ತರವೇ ಇರೋ ವಿಗ್ರಹಕ್ಕೆ ಹೂವಿನಿಂದ ಅಲಂಕಾರ ಮಾಡಿ, ಮುಂದೆ ಹಣ್ಣು ಹಂಪಲು ಇಟ್ಟು, ಧೂಪ ದೀಪ ಹಚ್ಚಿ ಎಲ್ಲರೂ ನಮಸ್ಕರಿಸುತ್ತಿದ್ದರು. ನಾನು ಬಂದರೆ ಯಾಕೆ ಹೀಗೆ ನಡೆದುಕೊಂಡರು? ನಾನೇನಾದರೂ ತಪ್ಪುಮಾಡಿದ್ದೇನಾ? ಅಥವಾ ನನ್ನ ಮಗುವನ್ನು ವಾಪಸ್ ಕರೆದುಕೊಂಡು ಹೋಗಲು ಬಂದಿರುವುದು ಗೊತ್ತಾಗಿ ಇವರು ನನ್ನನ್ನು ವಾಪಸ್ ಕಳಿಸಲು ಪ್ರಯತ್ನ ಮಾಡುತ್ತಿದ್ದಾರಾ? ಉತ್ತರ ಸಿಗದೆ ಯಕ್ಷಪ್ರಶ್ನೆ ಹಾಗೇ ಉಳಿದುಕೊಂಡಿತು.
‘ನಮ್ಮ ಧರ್ಮದಲ್ಲಿ ಮನುಷ್ಯ ಜನ್ಮಕ್ಕೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಪ್ರಾಣಿ,ಪಕ್ಷಿಗಳಿಗೂ ಕೊಟ್ಟಿದ್ದಾರೆ. ಹಾಗಾಗಿಯೇ ವಿಷ್ಣುವಿಗೆ ಗರುಡವನ್ನು, ದುರ್ಗಿಗೆ ಸಿಂಹವನ್ನು, ಗಣೇಶನಿಗೆ ಇಲಿಯನ್ನು, ಸುಬ್ರಹ್ಮಣ್ಯನಿಗೆ ನವಿಲನ್ನೂ, ಶಾರದೆಗೆ ಹಂಸವನ್ನು, ಹೀಗೆ ಒಂದೊಂದು ದೇವರಿಗೂ ಒಂದೊಂದು ವಾಹನವೆಂದು ಹೇಳೋದು. ಕಾಮಧೇನು, ಅಂದ್ರೆ ಗೋವಿನ ದೇಹದಲ್ಲಿ ಕೋಟ್ಯಾಂತರ ದೇವತೆಗಳಿದ್ದಾರೆ ಅಂತ ನಂಬಿದ್ದೇವೆ. ದೇವರು ಸೃಷ್ಟಿಸಿರೋ ಈ ಎಲ್ಲಾ ಜೀವರಾಶಿಗೂ ಬದುಕೋ ಹಕ್ಕು ಸಮನಾಗಿದೆ, ಆದರೆ ಮಾನವ ತನ್ನ ಬುದ್ಧಿಶಕ್ತಿಯನ್ನು ಬಳಸಿಕೊಂಡು ಬೇರೆ ಜೀವಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾನೆ, ಕಾಡುಗಳನ್ನು ಕಡಿದು ಪ್ರಾಣಿಗಳ ನೈಸರ್ಗಿಕ ಆವಾಸ್ಥಾನವನ್ನು ನಾಶಮಾಡುತ್ತಿದ್ದಾನೆ. ಹನುಮಂತನ ಭಕ್ತರಾದ ನಾವು ಎಲ್ಲಾ ಜೀವಿಗಳನ್ನು ಸಮನಾಗಿ ಕಾಣೋಣ’ ದೇವಸ್ಥಾನದ ಪುರೋಹಿತರ ಪ್ರವಚನವನ್ನು ಭಕ್ತಾದಿಗಳು ಕೇಳಿಸಿಕೊಂಡು ಚಪ್ಪಲಿ ಮೆಟ್ಟಿ ಹೊರಟರು.
ಖಾಲಿ ಹೊಟ್ಟೆಯಲ್ಲಿ ನರಳುತ್ತಿದ್ದ ಅಮ್ಮ ಕೋತಿಯ ವಿಚಾರದಲ್ಲಿ ‘ತಲ್ಲಣಿಸದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ’ ಅನ್ನೋ ಕನಕದಾಸರ ಮಾತು ಸತ್ಯವಾಯಿತು. ಚಿಕ್ಕಮಗುವೊಂದು ನಡೆಯುವಾಗ ಎಡವಿ, ಪ್ರಸಾದವನ್ನು ಕೆಳಗೆ ಬೀಳಿಸಿಕೊಂಡಿತು. ಅದನು ಎತ್ತಿಕೊಳ್ಳಲು ಹೋದಾಗ ಅವರಮ್ಮ ಮಗುವನ್ನು ತಡೆದು ಎತ್ತುಕೊಂಡು ಹೋದಳು . ಅಮ್ಮ ಕೋತಿ ನಾನು ಬೇಜಾರುಮಾಡಿಕೊಂಡಿದ್ದು ಈ ಗುಡಿಯೊಳಗಿರೋ ಕೋತಿರಾಜನಿಗೆ ಗೊತ್ತಾಗಿರಬೇಕು ಅದಕ್ಕೇ ಹೀಗೆ ಮಾಡಿದ್ದಾನೆ ಅಂದುಕೊಂಡು ಮನದಲ್ಲೇ ನಮಿಸಿತು. ಹೊಟ್ಟೆಗೆ ಪ್ರಸಾದ ಬಿದ್ದಾದ ಮೇಲೆ ಗಾಯದ ನೋವು ಗೊತ್ತಾಗಲಿಲ್ಲ.
ಹೊಸ ಉತ್ಸಾಹದಿಂದ ಮೈಯೆಲ್ಲಾ ಕಣ್ಣಾಗಿಸಿಕೊಂಡು ಅಮ್ಮ ಕೋತಿ ತನ್ನ ಶೋಧನಾಕಾರ್ಯವನ್ನು ಮುಂದುವರಿಸಿತು. ಹೊಲದಲ್ಲಿ ಎತ್ತುಗಳು ಊಳುತ್ತಿದ್ದವು, ಕತ್ತೆಯು ಹೊರೆಯನ್ನು ಸಾಗಿಸುತ್ತಿತ್ತು, ಕೋಳಿ, ಕುರಿ, ನಾಯಿ ಹಸುಗಳು ಮನೆಯ ಜನರಲ್ಲೊಬ್ಬರಂತೆ ಮನುಷ್ಯರ ಜೀವನದಲ್ಲಿ ಬೆರೆತುಹೋಗಿದ್ದನ್ನು ನೋಡಿ, ಕಾಡಿನಲ್ಲೇ ಹುಟ್ಟಿ ಬೆಳೆದ ಕೋತಿಗೆ ಸೋಜಿಗವೆನಿಸಿತು. ಈ ಸಾಕು ಪ್ರಾಣಿಗಳ ಹಾಗೆಯೇ ತನ್ನ ಮರಿಯೂ ಎಲ್ಲಾದರೂ ಸುರಕ್ಷಿತವಾಗಿರುತ್ತದೆ ಅನ್ನೋ ಭರವಸೆ ಮೂಡಿತು.
ಇದ್ದಕ್ಕಿದ್ದಂತೆ ದೊಡ್ಡದೊಡ್ಡ ಶಬ್ದಕೇಳಿ ಬಂದಿತು. ಮಣ್ಣಿನ ರಸ್ತೆಯಲ್ಲಿ ಧೂಳೆದ್ದಿತು. ನಾಯಿಯೊಂದು ತನ್ನ ಬಾಲಕ್ಕೆ ಕಟ್ಟಿದ್ದ ಪಟಾಕಿಯ ಶಬ್ದಕ್ಕೆ ಹೆದರಿ ದಿಕ್ಕಾಪಾಲಾಗಿ ಓಡುತ್ತಿರುವಾಗ ಅದರ ಹಿಂದೆ ಐದಾರು ಹುಡುಗರು ದೊಡ್ಡ ಸಾಧನೆ ಮಾಡಿರೋ ಹಾಗೆ ಕೇಕೆ ಹಾಕುತ್ತಾ ಚಪ್ಪಾಳೆತಟ್ಟುತ್ತಾ ಓಡಿಬರುತ್ತಿದ್ದರು. ಈಗಷ್ಟೇ ಮನುಷ್ಯರ ಮಧ್ಯೆ ತನ್ನ ಮರಿ ಸುರಕ್ಷಿತವಾಗಿರಬಹುದು ಅಂತೆನ್ನಿಸಿದ್ದ ಅಮ್ಮ ಕೋತಿಗೆ ಈ ದೃಶ್ಯದಿಂದ ಆ ವಿಶ್ವಾಸ ಮಂಕಾಯಿತು.
ನನ್ನ ಮರಿಗೂ ಇದೇ ತರ ಹಿಂಸೆ ಮಾಡುತ್ತಿರಬಹುದಾ ಎನಿಸಿ ಭಯ ಕಾಡಿತು. ತನ್ನ ಯೋಚ್ನೆಗೆ ಲಗಾಮು ಹಾಕಿ ತಕ್ಷಣ ನಾಯಿಯ ಸಹಾಯಕ್ಕೆ ಮುಂದಾಯಿತು. ನಾಯಿಯ ಹಿಂದೆ ಓಡಿ ತನ್ನ ಚೂಪಾದ ಹಲ್ಲುಗಳನ್ನು ಪ್ರದರ್ಶಿಸುತ್ತಾ ಆ ಹುಡುಗರನ್ನು ಪರಚುವ ಹಾಗೆ ಜೋರಾಗಿ ಗುರ್ರ್ ಎನ್ನುತ್ತಾ ಹೆದರಿಸಿದಾಗ ಹುಡುಗರು ಕಾಲ್ಕಿತ್ತರು. ನಾಯಿಯ ಬಾಲಕ್ಕೆ ಕಟ್ಟಿದ್ದ ಪಟಾಕಿಯನ್ನು ಕಿತ್ತೆಸೆಯಿತು. ನಾಯಿಗೆ ಹೋದ ಜೀವ ಬಂದಂತಾಗಿ ಕುಯ್ ಕುಯ್ ಅನ್ನುತ್ತಾ ಸುಸ್ತಾಗಿ ಮಲಗಿಕೊಂಡಿತು.

‘ನೀನು ಬರ್ಲಿಲ್ಲ ಅಂದಿದ್ರೆ ಆ ಹುಡುಗ್ರು ಇವತ್ತು ನನ್ನ ಸುಮ್ಮನೆ ಬಿಡ್ತಿರ್ಲಿಲ್ಲ, ತುಂಬ ಉಪಕಾರವಾಯಿತು’ ನಾಯಿ ಕೃತಜ್ನತೆ ಹೇಳಿ ಅಮ್ಮ ಕೋತಿಯ ಮೈಯನ್ನು ನೆಕ್ಕಿತು. ಊರಿಗೆ ಹೊಸಬರಂತೆ ಕಾಣಿಸಿದ ಅಮ್ಮ ಕೋತಿಯ ಬಗ್ಗೆ ವಿಚಾರಿಸಿದಾಗ ತಾನು ಕಾಡಿನಿಂದ ನನ್ನ ಮರಿಯನ್ನು ಹುಡುಕಿಬಂದಿದ್ದೇನೆ ಅಂತ ತಿಳಿಸಿತು. ನಾಯಿಯು ತನಗೆ ಉಪಕಾರ ಮಾಡಿದ್ದಕ್ಕೆ ಪ್ರತ್ಯುಪಕಾರ ಮಾಡ್ಬೇಕು ಅಂದುಕೊಂಡಿತು.
ಊರಿನಲ್ಲಿ ಯಾರ್ಯಾರ ಮನೇಲಿ ಯಾವ್ಯಾವ ಪ್ರಾಣಿಪಕ್ಷಿಗಳನ್ನು ಸಾಕಿಕೊಂಡಿದ್ದಾರೆ ಅಂತ ತೋರಿಸುತ್ತಾ ನಾಯಿಯು ಅಮ್ಮ ಕೋತಿಯನ್ನು ಕರೆದುಕೊಂಡು ಹೊರಟಿತ್ತು. ಒಂದು ಮನೆಯ ಮುಂದೆ ದೊಡ್ಡ ಗಲಾಟೆಯಾಗುತ್ತಿತ್ತು ಯಾರೋ ಯಾರಿಗೋ ಬೈಯುತ್ತಿದ್ದ. ‘ಯಾಕೆ ಜಗ್ಳ ಆಡುತ್ತಿದ್ದಾರೆ?’ ಅಮ್ಮ ಕೋತಿ ಕುತೂಹಲದಿಂದ ಕೇಳಿತು. ‘ಬಿಳೀ ಟೋಪಿ ಹಾಕೊಂಡಿರೋನಿಗೂ ಬಿಳೀ ನಾಮ ಹಾಕೊಂಡಿರೋನಿಗೂ ಒಬ್ಬರ ಕಂಡ್ರೆ ಒಬ್ಬರಿಗೆ ಆಗಲ್ಲ, ಇಬ್ಬರೂ ಅಕ್ಕಪಕ್ಕದ ಮನೆಯವರು’ ನಾಯಿ ಉತ್ತರಿಸಿತು. ‘ಯಾಕೆ? ನನ್ ಮರೀನ ಕದ್ದಹಾಗೆ ಏನಾದ್ರು ಕಳ್ಳತನ ಆಗಿದ್ಯಾ?’ ‘ಇಲ್ಲ, ಅವರಿಬ್ಬರಿಗೂ ಬೇರೆ ಬೇರೆ ದೇವರಂತೆ’. ನಾಯಿ ಹೇಳಿದಾಗ ಅಮ್ಮ ಕೋತಿಗೆ ಮನುಷ್ಯರ ಲಾಜಿಕ್ ಅರ್ಥವಾಗದೇ ಹೋಯಿತು.
‘ಗುಡಿಯಲ್ಲಿದ್ದವರು ಎಲ್ಲಾ ಜೀವಿನೂ ಒಂದೇ ಅಂತಿದ್ರು, ಅಂದಮೇಲೆ ಮನುಷ್ಯ ಮನುಷ್ಯರಲ್ಲಿ ಬೇಧ ಭಾವ ಹೇಗೆ ಬಂತು? ಕಾಡಿನಲ್ಲಿ ನಾವು ಎಂದಿಗೂ ಜಗಳ ಆಡೋದೇ ಇಲ್ಲ, ಎಷ್ಟು ಅನ್ಯೋನ್ಯವಾಗಿದ್ದೀವಿ ಗೊತ್ತಾ ಎಂದಿತು.’ ಅದ್ ಹೇಗೆ ಅನ್ಯೋನ್ಯವಾಗಿರ್ತೀರಾ? ಹುಲಿ ಜಿಂಕೇನ ತಿನ್ನುತ್ತೆ, ಹಾವು ಕಪ್ಪೇನ ತಿನ್ನುತ್ತೆ ಆಗ ಜಗಳ ಆಗೋದಿಲ್ವ ಅಂತ ನಾಯಿ ಕೇಳಿದ್ದಕ್ಕೆ ಅಮ್ಮ ಕೋತಿ ನನಗೆ ಹಣ್ಣು, ಕಾಯಿ ಇದ್ದ ಹಾಗೆ ಅವುಗಳ ಮಾಂಸ ಆಹಾರ ಅಷ್ಟೇ. ಅಷ್ಟಕ್ಕೆಲ್ಲಾ ನಾವು ಜಗಳ ಆಡೋದಿಲ್ಲ ಅಂದಿತು. ಮನುಷ್ಯರ ಮಧ್ಯೆ ಜೀವಿಸಿದ್ದ ನಾಯಿಗೆ ಮುಂದೆ ವಾದ ಮಾಡಲು ತಿಳಿಯಲಿಲ್ಲ.
ನಾಯಿ ತನ್ನ ಸ್ನೇಹಿತರಿಗೆಲ್ಲಾ ಹೇಳಿ ಊರಿಗೆ ಯಾವುದಾರರೂ ಹೊಸಾ ಕೋತಿ ಮರಿ ಬಂದಿದೆಯಾ ಅಂತ ವಿಚಾರಿಸಿಕೊಂಡು ಬಂದಿತು, ಆದ್ರೆ ಏನೂ ಸುಳಿವು ಸಿಗಲಿಲ್ಲ. ಅಮ್ಮ ಕೋತಿ ಅಕ್ಕ ಪಕ್ಕದ ಊರಿನಲ್ಲೆಲ್ಲಾ ನೋಡಿಕೊಂಡು ಬಂದರೂ ಪ್ರಯೋಜನವಾಗಲಿಲ್ಲ. ನಾಯಿ, ತಾನಿದ್ದ ಜಾಗದಲ್ಲಿ ಅಮ್ಮ ಕೋತಿಗೆ ಆಶ್ರಯ ಮಾಡಿಕೊಟ್ಟಿತು. ತನಗೆ ಹಾಕಿದ ರೊಟ್ಟಿಯನ್ನು ನಾಯಿ ಹಂಚಿ ತಿಂದಿತು. ಅಗಾಗ ಅಮ್ಮ ಕೋತಿ, ಊರ ದೊಡ್ಡ ಮನೆಯ ಗೋಡೆಗೆ ಹಾಕಿದ್ದ ಜಿಂಕೆಯ ಚರ್ಮ, ಆನೆಯ ಕೊಂಬು, ಹುಲಿಯ ಮುಖ ಎಲ್ಲವನ್ನು ನೋಡುತ್ತಾ, ನನ್ನ ಮರಿಯನ್ನೇನಾದರೂ ಕತ್ತರಿಸಿ ಗೋಡೆಗೆ ನೇತುಹಾಕಿರಬಹುದೇ ಅನ್ನೋ ಭಯದಿಂದ ಬೆಚ್ಚಿಬೀಳುತ್ತಿತ್ತು.
ತಿಂಗಳಾದರೂ ಅಮ್ಮ ಕೋತಿಗೆ ಮರಿ ಸಿಗಲಿಲ್ಲ. ನಿನ್ ಮರಿ ಎಲ್ಲಿದ್ರೂ ಚೆನ್ನಾಗಿರುತ್ತೆ, ಬೇಜಾರಾಗ್ಬೇಡ ಅಂತ ನಾಯಿ ಸಮಾಧಾನ ಮಾಡಿತು. ಇಲ್ಲಿದ್ದು ಉಪಯೋಗವಿಲ್ಲ ಎನಿಸಿ ಇನ್ನೇನು ಹೊರಡ ಬೇಕೆನ್ನುವಷ್ಟರಲ್ಲಿ ಏನೋ ಶಬ್ದ ಕೇಳಿಸಿತು. ಮತ್ತೇನಾದರೂ ಗಲಾಟೆ ನಡೆಯುತ್ತಿದೆಯೇನೋ ಅಂತ ನೋಡಿದ್ರೆ ಡಂಗೂರದವ ಊರಲ್ಲಿ ಇಂದು ಜಾತ್ರೆ ನಡೀತಿದೆ ಎಲ್ಲರೂ ಬನ್ನಿ ಅಂತ ಡಂಗೂರ ಬಡಿಯುತ್ತಾ ಹೋದ. ‘ಜಾತ್ರೆಯಲ್ಲಿ ಸುತ್ತ ಮುತ್ತಲಿನ ಊರಿನಿಂದ ತುಂಬಾ ಜನ ಸೇರ್ತಾರೆ ಅಲ್ಲಿ ಒಂದು ಸಲ ಅದೃಷ್ಟ ಪರೀಕ್ಷೆಮಾಡೋಣ’. ನಾಯಿಯ ಮಾತಿನಿಂದ ಡಂಗೂರದ ಶಬ್ದದ ಹಾಗೆ ಅಮ್ಮ ಕೋತಿಯ ಎದೆ ಬಡಿತ ಜೋರಾಯಿತು. ಜಾತ್ರೆಯಲ್ಲಿ ತನ್ನ ಮಗು ಸಿಗುತ್ತೆ ಅನ್ನೋ ನಂಬಿಕೆ ಇಲ್ಲದಿದ್ದರೂ ಅಮ್ಮ ಕೋತಿಗೆ ಇದು ತನ್ನ ಕೊನೇ ಅವಕಾಶ ಅನ್ನಿಸಿತು.
ಹೂವಿನಂಗಡಿಗಳು, ತರಾವರಿ ಸೀರೆ ಬಟ್ಟೆಗಳನ್ನು ತೊಟ್ಟ ಮಕ್ಕಳು ಕೈಲಿ ಆಟಿಕೆಯನ್ನೋ, ಬಣ್ಣಬಣ್ಣದ ಬಲೂನುಗಳನ್ನು, ತಿಂಡಿಗಳನ್ನು ತಿನ್ನುತ್ತಾ ಜಾತ್ರ ಬೀದಿಯಲ್ಲಿ ನಡೆಯುತ್ತಿದ್ದರು. ದೇವಸ್ಥಾನದ ಗೋಪುರದ ಮೇಲೆ ಕೂತು ನೋಡುತ್ತಿದ್ದ ಅಮ್ಮ ಕೋತಿಗೆ ಇಡೀ ಜಾತ್ರೆಯೇ ಕಾಣಿಸುತ್ತಿತ್ತು. ಎಲ್ಲೆಲ್ಲೂ ಮನುಷ್ಯರೇ ಇರೋ ಜಾಗದಲ್ಲಿ ತನ್ನ ಮರಿ ಎಲ್ಲಿ ಕಾಣಸಿಗುತ್ತದೆ ಅಂದುಕೊಳ್ಳುವಷ್ಟರಲ್ಲಿ ದೂರದಲ್ಲಿ ಜನರು ಏನನ್ನೋ ನೋಡುತ್ತಾ ಸುತ್ತುಗಟ್ಟಿರುವುದು ಕಾಣಿಸಿತು. ಅಮ್ಮ ಕೋತಿ ಕುತೂಹಲದಿಂದ ಗೋಪುರದಿಂದ ಇಳಿದು ಪ್ರಾಂಗಣದ ಗೋಡೆಯ ಮೇಲೆ ನಡೆದುಬಂದು ನೋಡಿದಾಗ ತನ್ನ ಕಣ್ಣನ್ನು ತಾನೇ ನಂಬಲಾರದಂತಾಯಿತು.
ಕೆಂಪು ಜಾಕೆಟ್ ಹಳದಿ ಚಡ್ಡಿ ಹಾಕಿದ ಮರಿ ಕೋತಿಯನ್ನು ಮಾಲೀಕ ಕುಣಿಸುತ್ತಿದ್ದ. ತಾಳಕ್ಕೆ ತಕ್ಕಂತೆ ಅವನು ಆಡಿಸಿದಂತೆ ಕುಣಿಯುತ್ತಿದ್ದ ಕೋತಿ ಮರಿಯನ್ನು ಜನ ಕೇಕೆ ಹಾಕುತ್ತಾ, ಚಪ್ಪಾಳೆ ತಟ್ಟುತ್ತಾ ನೋಡಿ ಆನಂದಿಸುತ್ತಿದ್ದರು. ದೇವಸ್ಥಾನದಲ್ಲಿ ದೇವರಿಗೆ ಬಟ್ಟೆ ಹಾಕಿದ ಹಾಗೆ ತನ್ನ ಮರಿಗೂ ಜರಿಯ ಬಟ್ಟೆ ಹಾಕಿದ್ದನ್ನು ನೋಡಿ ದೇವರನ್ನು ಪೂಜಿಸಿದಂತೆ ಇದೂ ಒಂದು ತರಹದ ಪೂಜೇನಾ ಅನ್ನೋ ಗೊಂದಲದಲ್ಲಿದ್ದ ಅಮ್ಮ ಕೋತಿಗೆ ಉತ್ತರ ಕಂಡುಕೊಳ್ಳೋದು ಕಷ್ಟವಾಗಲಿಲ್ಲ. ಏಕೆಂದರೆ ಮಾಲೀಕ ಜನರು ಕೊಡುತ್ತಿದ್ದ ತಿಂಡಿಗಳನ್ನು, ದುಡ್ಡನ್ನು ತನ್ನ ಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದ.

ಅಮ್ಮ ಕೋತಿ ಊರಲ್ಲಿದ್ದ ಅನುಭವದಿಂದ ತಾನು ನೋಡಿದ ಬೇರೆ ಪ್ರಾಣಿಗಳ ಹಾಗೆ ತನ್ನ ಮರಿಯೂ ಮನುಷ್ಯರ ಸಹಾಯಕ್ಕೆ ನಿಂತಿದೆ ಅಂತ ಅರ್ಥ ಮಾಡಿಕೊಂಡಿತು. ಅಲ್ಲಿಂದಲೇ ಗುರ್ ಗುರ್ರ್ ಅಂತ ಕೂಗಿದ್ದು ಮರಿ ಕೋತಿಗೆ ಕೇಳಲಿಲ್ಲ. ಮರಿ ಕೋತಿ ಅದರ ಪಾಡಿಗೆ ಕಲಾಪ್ರದರ್ಶನ ಮಾಡೋದರಲ್ಲಿ ನಿರತವಾಗಿತ್ತು. ಅಮ್ಮ ಕೋತಿ ಮರಿಯನ್ನು ಗುಂಪಿನ ಹತ್ತಿರ ಬಂದಾಗ ದೊಣ್ಣೆ, ಕಲ್ಲನ್ನು ತೊಗೊಂಡು ಓಡಿಸಿದರು. ಇದರಿಂದ ತನ್ನ ಕಂದನನ್ನುಕಾಪಾಡಲು ಇದು ಸರಿಯಾದ ಜಾಗವಲ್ಲ ಅಂತ ಗೊತ್ತಾಯಿತು.
ಸಾಯಂಕಾಲ ಸೂರ್ಯ ಮುಖ ಕೆಂಪಗೆ ಮಾಡಿಕೊಂಡು ನಾಚುತ್ತಿದ್ದ. ಜಾತ್ರೆ ಮುಗಿದು ಜನರೆಲ್ಲಾ ತಮ್ಮ ಬಂಡಿ ಹತ್ತಿದರು, ಅಮ್ಮ ಕೋತಿ ಮಾಲೀಕ ಹೊರಡೋದನ್ನೇ ಕಾಯುತ್ತಿತ್ತು. ಮಾಲೀಕ ತಾವು ಉಳಿಕೊಳ್ಳಲು ಹಾಕಿಕೊಂಡಿದ್ದ ಟೆಂಟ್ ಅನ್ನು ಮುಚ್ಚುತ್ತಿದ್ದ. ಮಾಲೀಕನ ಮಗಳು ಅವತ್ತಿನ ಸಂಪಾದನೆಯನ್ನು ಎಣಿಸಿ ಅಪ್ಪನಿಗೆ ಕೊಟ್ಟಳು. ಗಂಟು ಮೂಟೆ ಕಟ್ಟಿಕೊಂಡು ಅವನು ಮರಿ ಕೋತಿಯನ್ನು ತನ್ನ ಚೀಲದಲ್ಲಿ ಕೂರಿಸಬೇಕು ಅನ್ನುವಷ್ಟ್ರಲ್ಲಿ ಅಮ್ಮ ಕೋತಿ ಅವನ ಮೇಲೆಗರಿ ಅವನನ್ನು ಪರಚಿ, ಅನಿರೀಕ್ಷಿತ ಆಕ್ರಮಣದಿಂದ ಅವನು ಚೇತರಿಸಿಕೊಳ್ಳೋ ಮುನ್ನ ಅಮ್ಮ ಕೋತಿ ತನ್ನ ಮರಿಯನ್ನು ತಬ್ಬಿ ಅಲ್ಲಿಂದ ಓಟ ಕಿತ್ತಿತು.
ಜೀವ ಬಾಯಿಗೆ ಬರುವ ಹಾಗೆ ಓಡುತ್ತಿದ್ದ ಅಮ್ಮನ ಹೊಟ್ಟೆಯನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದ ಮರಿ ಕೋತಿ ‘ಅಮ್ಮ, ಓಡ್ಬೇಡ.. ನಿಂತುಕೋ ಅಮ್ಮ’ ಅಂತ ಕೂಗಿಕೊಳ್ಳುತ್ತಿತ್ತು. ತನ್ನ ಕಂದನಿಗೆ ಭಯವಾಗಿರಬಹುದೆಂದೆಣಿಸಿದ ಅಮ್ಮ ಕೋತಿ ಅಪಾಯವಿಲ್ಲದ ಜಾಗ ನೋಡಿ, ಓಡುವುದನ್ನು ನಿಲ್ಲಿಸಿ ಅಪ್ಪಿ ಮುದ್ದಾಡಿತು. ಅಮ್ಮನನ್ನು ನೋಡಿ ಮರಿಕೋತಿಗೆ ಅಳುವೇ ಬಂದುಬಿಟ್ಟಿತು. ಇಲ್ಲಿಂದ ಹೊರಟರೆ ಮುಂದೆ ಕಾಡಲ್ಲೇ ನಿಲ್ಲೋದು ಅನ್ನೋ ಅವಸರದಲ್ಲಿ ಅಮ್ಮ ಕೋತಿ ಇದ್ದರೆ, ಮರಿ ಕೋತಿಯ ಯೋಚನೆಯೇ ಬೇರೆಯಾಗಿತ್ತು. ತಾನು ವಾಪಸ್ಸು ತನ್ನ ಮಾಲೀಕನ ಹತ್ತಿರ ಹೋಗ್ತೀನಿ ಅಂತ ಕೇಳಿಕೊಂಡಿತು.
ಅಮ್ಮ ಕೋತಿಗೆ ಮರಿಯ ಮಾತನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ. ‘ಅಮ್ಮ ಅವರು ಹೊಟ್ಟೆ ಪಾಡಿಗಾಗಿ ಈ ಕೆಲ್ಸ ಮಾಡ್ತಿದ್ದಾರೆ, ನಮಗೆ ಹೇಗೋ ಆಹಾರ ಸಿಗುತ್ತೆ ಆದ್ರೆ ಮನುಷ್ಯರಿಗೆ ದುಡ್ಡು ಬೇಕಲ್ವಾ? ನಾನು ನಿನ್ ಜೊತೆ ಬಂದ್ರೆ ಅವರೆಲ್ಲಾ ಉಪವಾಸ ಇರ್ಬೇಕಾಗುತ್ತೆ. ಅಲ್ಲಿ ಇದ್ದಳಲ್ಲ ಆ ಹುಡುಗಿ? ಅವಳು ಒಂದು ದಿನವೂ ಅವರಪ್ಪ ನನಗೆ ಹೊಡೆಯೋಕೆ ಬಿಟ್ಟಿಲ್ಲ. ಕಾಡಲ್ಲಿರೋದಕ್ಕಿಂತ ನಮ್ಮಿಂದ ಅವರಿಗೆ ಸಹಾಯ ಆದ್ರೆ ಒಳ್ಳೇದಲ್ವಾ’ ಅಮ್ಮ ಕೋತಿಗೆ ತನ್ನ ಮರಿಯ ತ್ಯಾಗವನ್ನ ನೋಡಿ ಬಾಯಿಕಟ್ಟಿದಂತಾಯಿತು. ‘ನನ್ ನೆನಪಿಗೆ ಇದನ್ನ ಇಟ್ಟುಕೋ ಅಮ್ಮ’ ಅಮ್ಮನ ಕೈಗೆ ತನ್ನ ಕೈಲಿದ್ದ ಕಡಗವನ್ನು ಬಿಚ್ಚಿಕೊಟ್ಟು ವಾಪಸ್ ಓಡಿತು.
ಸೂರ್ಯ ಮುಳುಗುವ ಹೊತ್ತಿಗೆ ಮರಿ ಕೋತಿ ಹುಡುಗಿಯ ಭುಜದ ಕೂತು ಮೇಲೆ ಆಡುತ್ತಾ ಹೋಗುವುದನ್ನ ದೂರದಿಂದ ಅಮ್ಮ ಕೋತಿ ನೊಡುತ್ತಾ ಕಣ್ಣೊರೆಸಿಕೊಂಡಿತು.
Thumbaaa chanagidee heage mundu varasiii
ಹಾಯ್ ಮೇಡಮ್, ಮೊದಲನೆ ಸಾರಿ ನಿಮ್ ಕಥೆ ಓದಿದೆ. ತುಂಬಾನೆ ಚನ್ನಾಗಿತ್ತು. ತುಂಬ ಇಷ್ಟ ಆಯಿತು. ಎಷ್ಟೋ ದಿನಗಳು ಆಯಿತು ಇಂಥ ಕಥೆ ಓದಿ. ಬಾಲ್ಯದ ನೆನಪು ಮರುಕಳಿಸಿತು. ಹಾಗೇ ಬರೀತಾಇರಿ ಮೇಡಮ್. ಒಂದಿಷ್ಟು ಕಥೆಗಳು ಆದಮೇಲೆ ಪುಸ್ತಕ ವಾಗಿ ಬಿಡುಗಡೆ ಮಾಡಿದರೆ ಮೂಂದಿನ ಪೀಳಿಗೆಗು ಸಹಾಯ ಆಗುತ್ತೆ.
ಧನ್ಯವಾದಗಳು
ಮೊದಲಿಗೆ ಹೇಳುವುದಾದರೆ ಅಮ್ಮ ಕೋತಿಯ ಆತ್ಮ ವಿಶ್ವಾಸ ಮೆಚ್ಚಲೇ ಬೇಕಾದ ಅಂಶ ,ತನ್ನ ಮಗು ಸಿಗುವುದಿಲ್ಲ ಎಂದು ಬೇರೆಯವರ ಮಾತುಗಳು ಕಿವಿ ಮೇಲೆ ಬಿದ್ದರು ಸಹ ಪ್ರಯತ್ನ ಪಡುವುದರಲ್ಲಿ ಯಾವುದೇ ನಷ್ಟವಿಲ್ಲ ಎಂದು ಧೈರ್ಯ ಮಾಡಿ ಹೊರಡಲು ನಿರ್ಧರಿಸಿದ್ದು ನನ್ನಿಂದ ಏನೂ ಆಗುವುದಿಲ್ಲ ಅವಕಾಶ ಗಳಿಲ್ಲ ಎಂದು ಕೈ ಕಟ್ಟಿ , ಪಾದಗಳಿಲ್ಲದವರ ಮಧ್ಯೆ ಕೂತು ಪಾದ ರಕ್ಷೆ ಇಲ್ಲ ಎಂದು ರೋಧಿಸುವ ಅದೆಷ್ಟೋ ಮನಸ್ಸುಗಳಿಗೆ ಪ್ರಯತ್ನ ಪಡುವ ವ್ಯವಧಾನ ಇರ್ಬೇಕು ಎಂದು ಕಥೆಯ ಆರಂಭ ತಿಳಿಸುತ್ತದೆ…. ಇನ್ನೂ ಮಾನವೀಯತೆಯನ್ನು ಮರೆತು ಮೃಗಗಳಂತೆ ವರ್ತಿಸುವ ಮನುಷ್ಯರ ವರ್ತನೆ ಮನ ಕಲಕುವಂತೆ ಮೂಡಿ ಬಂದಿದೆ ….ಮರಿ ಕೋತಿಯ ತ್ಯಾಗ ನಿಜಕ್ಕೂ ಮನಃ ಸ್ಪರ್ಶ ಮಾಡಿತು …..ಕಥೆ ಕಾಲ್ಪನಿಕ ವಾಗಿದ್ದರೂ ಸಹ ವಾಸ್ತವ ಬದುಕಿನ ತಿರುಳನ್ನು ಹೊಂದಿದೆ …. ನಿಮ್ಮ ಭಾಷೆಯಲ್ಲಿನ ಸರಳತೆ,ಪದಗಳ ಬಳಕೆ, ನಿಮಗೆ ಕನ್ನಡದ ಜ್ಞಾನದ ಮೇಲಿನ ತೃಷೆ ಎಷ್ಟಿದೆ ಎಂಬುದನ್ನು ಈ ಮೂಲಕ ಅರಿತೆ…. ಧನ್ಯವಾದಗಳು ರಂಜಿನಿ ಮೇಡಂ ನಿಮ್ಮ ಈ ಬರವಣಿಗೆಯ ಪಯಣ ಸುಗಮವಾಗಿ ಸಾಗಲಿ ಎಂದು ಆಶಿಸುತ್ತೇವೆ……
ನಾನು ಎಂಟನೇ ತರಗತಿಯ ವಿದ್ಯಾರ್ಥಿನಿ. ನಾನು ಆನ್ಲೈನ್ ಶಾಲೆಯ ಮಧ್ಯದಲ್ಲಿ ವಿರಾಮ ನೀಡಿದಾಗ ನಾನು ಪ್ರತಿ ಶುಕ್ರವಾರ ನಿಮ್ಮ ಕಥೆಯನ್ನು ಓದುತ್ತೇನೆ.ಕಥೆ ತುಂಬಾ ಆಸಕ್ತಿದಾಯಕವಾಗಿತ್ತು.ನನ್ನ ದೃಷ್ಟಿಯಲ್ಲಿ ನೀವು ಉತ್ತಮ ಬರಹಗಾರರಾಗಿದ್ದೀರಿ. ನೀವು ಚಲನಚಿತ್ರವನ್ನು ನಿರ್ದೇಶಿಸಬಹುದು ಎಂದು ನಾನು ಭಾವಿಸುತ್ತೇನೆ.ನಿಮ್ಮ ಮುಂದಿನ ಬರಹಗಳಿಗೆ ಒಳ್ಳೆಯದಾಗಲಿ.
-ಸಿಂಚನ ಎ
ಮೊದಲಿಗೆ ಹೇಳುವುದಾದರೆ ಅಮ್ಮ ಕೋತಿಯ ಆತ್ಮ ವಿಶ್ವಾಸ ಮೆಚ್ಚಲೇ ಬೇಕಾದ ಅಂಶ ,ತನ್ನ ಮಗು ಸಿಗುವುದಿಲ್ಲ ಎಂದು ಬೇರೆಯವರ ಮಾತುಗಳು ಕಿವಿ ಮೇಲೆ ಬಿದ್ದರು ಸಹ ಪ್ರಯತ್ನ ಪಡುವುದರಲ್ಲಿ ಯಾವುದೇ ನಷ್ಟವಿಲ್ಲ ಎಂದು ಧೈರ್ಯ ಮಾಡಿ ಹೊರಡಲು ನಿರ್ಧರಿಸಿದ್ದು ನನ್ನಿಂದ ಏನೂ ಆಗುವುದಿಲ್ಲ ಅವಕಾಶ ಗಳಿಲ್ಲ ಎಂದು ಕೈ ಕಟ್ಟಿ , ಪಾದಗಳಿಲ್ಲದವರ ಮಧ್ಯೆ ಕೂತು ಪಾದ ರಕ್ಷೆ ಇಲ್ಲ ಎಂದು ರೋಧಿಸುವ ಅದೆಷ್ಟೋ ಮನಸ್ಸುಗಳಿಗೆ ಪ್ರಯತ್ನ ಪಡುವ ವ್ಯವಧಾನ ಇರ್ಬೇಕು ಎಂದು ಕಥೆಯ ಆರಂಭ ತಿಳಿಸುತ್ತದೆ…. ಇನ್ನೂ ಮಾನವೀಯತೆಯನ್ನು ಮರೆತು ಮೃಗಗಳಂತೆ ವರ್ತಿಸುವ ಮನುಷ್ಯರ ವರ್ತನೆ ಮನ ಕಲಕುವಂತೆ ಮೂಡಿ ಬಂದಿದೆ ….ಮರಿ ಕೋತಿಯ ತ್ಯಾಗ ನಿಜಕ್ಕೂ ಮನಃ ಸ್ಪರ್ಶ ಮಾಡಿತು …..ಕಥೆ ಕಾಲ್ಪನಿಕ ವಾಗಿದ್ದರೂ ಸಹ ವಾಸ್ತವ ಬದುಕಿನ ತಿರುಳನ್ನು ಹೊಂದಿದೆ …. ನಿಮ್ಮ ಭಾಷೆಯಲ್ಲಿನ ಸರಳತೆ,ಪದಗಳ ಬಳಕೆ, ನಿಮಗೆ ಕನ್ನಡದ ಜ್ಞಾನದ ಮೇಲಿನ ತೃಷೆ ಎಷ್ಟಿದೆ ಎಂಬುದನ್ನು ಈ ಮೂಲಕ ಅರಿತೆ…. ಧನ್ಯವಾದಗಳು ರಂಜಿನಿ ಮೇಡಂ ನಿಮ್ಮ ಈ ಬರವಣಿಗೆಯ ಪಯಣ ಸುಗಮವಾಗಿ ಸಾಗಲಿ ಎಂದು ಆಶಿಸುತ್ತೇವೆ……
fabulous story..
I love this story and theme
Thank you so much for writing this story ..one of the bestttt
ನಿಮ್ಮ ಎಲ್ಲಾ ಕಥೆಗಳನ್ನು ಓದುತ್ತಾ ಬಂದಿದ್ದೇನೆ. ಕಥೆ ತುಂಬ ಚನ್ನಾಗಿ ಬರುಯುತ್ತೀರ. ಎಲ್ಲಾ ಕಥೆಗಳು ನಿಮ್ಮ ಅಭಿನಯನದಂತೆ ಸಹಜ ಹಾಗು ನೈಜವಾಗಿರುತ್ತೆ. ನಮ್ಮ ಸುತ್ತಮುತ್ತಲಿನ ಸನ್ನಿವೇಶ … ವಿಶಯ ಗಳನ್ನು ರೂಪಿಸುವ ಮುಲಕ ಬಹಳ ಜನಪ್ರಿಯವಾಗುತ್ತಾ ಬಂದಿದೆ.
you have nice flair for writing. The flow is good. Keep Writing.!!!!1
Story is nice.It is written in a such a manner we can actually visualize it read.Value based and has a moral in it keep writing ,,☺️
ತುಂಬಾ ಚೆನ್ನಾಗಿದೆ, ಮನಸ್ಸಿಗೆ ನಾಟುವಂತ್ತಿದೆ, ನಿಮ್ಮ ಬರವಣಿಗೆ ಅದ್ಬುತ, ನೀವು ನಮ್ಮಗೆ ಪ್ರೇರಣೆ, ಧನ್ಯವಾದಗಳು
ತುಂಬ ಚೆನ್ನಾಗಿದೆ ರಂಜಿನಿ ಅಕ್ಕ… ನನಗು ನಿಮ್ಮ್ ಹಾಗೆ ಬರೀಬೇಕು ಅಂತ ತುಂಬಾ ಆಸೆ….
Nimma baravanige hagu nim katha kriyashilatege nanna namskaraglu ranjaniyavare, nanage kathegalanna oduva abysave iralilla nim kathegalannu oduttiruvadarinda nanage hechina pustakagalannu odalu sahayakavagide