ಚಂದ್ರಪ್ರಭ ಕಠಾರಿ ನೋಡಿದ ‘ಪಾಲಾರ್’

ಪ್ರೇಕ್ಷಕರ ಬುದ್ಧಿಭಾವವನ್ನು ಒಮ್ಮೆಗೆ ಕಲಕಿಬಿಡುವ ಸಿನಿಮಾ ‘ಪಾಲಾರ್’

ಚಂದ್ರಪ್ರಭ ಕಠಾರಿ

ಭಾರತದ ಚಿತ್ರರಂಗದ ನೂರಕ್ಕು ಮಿಕ್ಕು ವರ್ಷಗಳ ಇತಿಹಾಸದಲ್ಲಿ ದಲಿತ ಸಂವೇದನೆಯ ಸಿನಿಮಾಗಳನ್ನು ದುರ್ಬೀನು ಹುಡುಕಿ ತೆಗೆಯಬಹುದಾದಷ್ಟು ಕಡಿಮೆ ಸಂಖ್ಯೆಯಲ್ಲಿದೆ. ಅದರಲ್ಲೂ ಪೂರ್ಣ ಪ್ರಮಾಣದ ದಲಿತ ಕಥಾನಕಗಳು ಬೆರಳೆಣಿಕೆಯಷ್ಟು. ಆದರೆ, ಕಳೆದ ದಶಕದಲ್ಲಿ ತಮಿಳು, ಮರಾಠಿ, ಮಲಯಾಳಮ್, ಹಿಂದಿ ಭಾಷೆಯಲ್ಲಿ ದಲಿತರ ಕತೆಗಳನೊತ್ತ ಹಲವು ಸಿನಿಮಾಗಳು ಸಾಲುಸಾಲಾಗಿ ತೆರೆಕಂಡವು.

ತಮಿಳಿನಲ್ಲಿ ಪ.ರಂಜೀತ್, ಮಾರಿ ಸೆಲ್ವರಾಜ್, ವೆಟ್ರಿಮಾರನ್ – ಮಲಯಾಳಮ್ ನಲ್ಲಿ ರಾಜೀವ್ ರವಿ – ಮರಾಠಿಯಲ್ಲಿ ನಾಗರಾಜ್ ಮಂಜುಳೆ – ಹಿಂದಿಯಲ್ಲಿ ಅನುಭವ್ ಸಿನ್ಹಾ ಸೇರಿದಂತೆ ಹಲವು ನಿರ್ದೇಶಕರು, ಸಿನಿಮಾ ನಿರ್ಮಾಣ ವ್ಯಾಪಾರವೇ ಅದರ ಮೊದಲ ಗುಣವಾದರೂ ದಲಿತ ಕಥಾನಕಗಳನ್ನು ಸಿನಿಮಾದಲ್ಲಿ ಆಳವಡಿಸುವ ಧೀಮಂತಿಕೆಯನ್ನು ತೋರಿದರು. ಕಲೆಯಾಗಿ ಆ ಸಿನಿಮಾಗಳನ್ನು ಕಟ್ಟಿದರು. ಬೆರಗಾಗುವಂತೆ ಜನರು ಆ ಸಿನಿಮಾಗಳನ್ನು ಮೆಚ್ಚಿ, ಸಿನಿಮಾಗಳು ಹಣ ಗಳಿಕೆಯಲ್ಲೂ ಯಶಸ್ಸು ಗೊಳಿಸುವಂತೆ ಮಾಡಿದರು. ಇಂಥ ಕ್ರಾಂತಿಕಾರಿ ನಡೆಯಿಂದ ಪ್ರಖ್ಯಾತಿ ಪಡೆದ ಭಾರತೀಯ ಸಿನಿಮಾ ಚಿತ್ರರಂಗ ಅದರಲ್ಲೂ ದಕ್ಷಿಣ ಭಾರತದ ಸಿನಿಮಾ ಚಿತ್ರರಂಗದ ಮುಂದಿನ ನಡೆಯನ್ನು ನಿರೀಕ್ಷಿಸುವಂತೆ ಮಾಡಿತು.

ತನ್ನ ಸೋದರ ಭಾಷೆಗಳಲ್ಲಿ ಕಳೆದೊಂದು ದಶಕದಿಂದ ಅಷ್ಟೊಂದು ಸಿನಿಮಾಗಳು ತೆರೆ ಕಾಣುತ್ತಿರುವಾಗ, ತನಗದು ಯಾವ ಸಂಬಂಧವೇ ಇಲ್ಲವೆನ್ನುವಂತೆ ಕನ್ನಡ ಚಿತ್ರರಂಗ ದಲಿತ ಸಂವೇದನೆಯ ಚಿತ್ರಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಮುಗುಮ್ಮಾಗಿದ್ದು ನಿಜಕ್ಕು ಅಚ್ಚರಿ ಮತ್ತು ನಿರಾಶೆಯ ಸಂಗತಿ (ಇದಕ್ಕೆ ಅಪವಾದವೆಂಬಂತೆ ಬಿ ಎಮ್ ಗಿರಿರಾಜ್ ಅವರ ‘ಅಮರಾವತಿ’ ಮತ್ತು ಕೆ ಶಿವರುದ್ರಯ್ಯ ಅವರ ದೇವನೂರು ಮಹಾದೇವ ಅವರ ಕತೆಗಳ ಆಧಾರಿತ ‘ಮಾರಿಕೊಂಡವರು’ ತೆರೆಕಂಡು ರಾಜ್ಯಪ್ರಶಸ್ತಿಗೂ ಭಾಜನವಾದವು). ಅದಕ್ಕೆ ಕಾರಣ – ಹಾಕಿದ ಹಣ ವಾಪಸ್ಸು ಬರುವುದಿಲ್ಲವೆಂದೊ, ಕತೆಗಳು ಇಲ್ಲವೆಂದೊ ಅಥವಾ ಅಂಥ ಚಿತ್ರವನ್ನು ನಿರ್ಮಿಸುವ ಸಂವೇದನಾಶೀಲ ನಿರ್ದೇಶಕರ ಕೊರತೆಯೆಂದೊ ಭಾವಿಸಿದರೆ ಅದು ಕುಂಟುನೆಪವಾದೀತು. ಅಂಥ ಚಿತ್ರನಿರ್ಮಾಣಕ್ಕೆ ಸಾಮಾಜಿಕ ಬದ್ಧತೆಯ ಕೊರತೆಯೆಂದೇ ಭಾವಿಸಬೇಕಾಗುತ್ತದೆ.

ಇಷ್ಟೆಲ್ಲ ಪೀಠಿಕೆಗೆ ಕಾರಣವೆಂದರೆ – ಈಗ ಬಿಡುಗಡೆಯಾಗಿ ಯಶ್ವಸಿ ಪ್ರದರ್ಶನವಾಗುತ್ತಿರುವ ಕನ್ನಡ ಸಿನಿಮಾ ‘ಪಾಲಾರ್’. ಇದೊಂದು ಪೂರ್ಣ ಪ್ರಮಾಣದ ದಲಿತ ಸಂವೇದನೆಯ ಸಿನಿಮಾ. ಯುವ ನಿರ್ದೇಶಕ ಜೀವಾ ನವೀನ್ ಅವರು ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ದಲಿತ ದೃಷ್ಟಿಕೋನವಿದೆ. ತಡವಾಗಿಯಾದರೂ ಇಂಥದ್ದೊಂದು ಸಿನಿಮಾ ತೆರೆಕಂಡದ್ದು ನಿಜಕ್ಕು ಸಮಾಧಾನದ ವಿಷಯ.

ಅವಿಭಜಿತ ಕೋಲಾರ ಜಿಲ್ಲೆಯ ಪಾಲಾರ್, ದೇವನಹಳ್ಳಿ ಸುತ್ತಮುತ್ತ ಗ್ರಾಮಗಳಲ್ಲಿ ನಡೆಯುವ ದಲಿತ ಸಮುದಾಯದ ಶೋಷಣೆಯ ಕತೆಯ ‘ಪಾಲಾರ್’ ಸಿನಿಮಾ ಪ್ರೇಕ್ಷಕರ ಬುದ್ಧಿಭಾವವನ್ನು ಒಮ್ಮೆಗೆ ಕಲಕಿಬಿಡುವಷ್ಟು ಸಶಕ್ತವಾಗಿದೆ. ತಳಜಾತಿ ಯುವಕನನ್ನು ಪ್ರೇಮಿಸಿ – ಜಾತಿ ಭೇದ ಮಾಡುವ, ಮೇಲ್ಜಾತಿ ಭೂಮಾಲೀಕ ತಂದೆಯಿಂದ ಮದುವೆಗೆ ಒಪ್ಪಿಗೆ ಸಿಗುವುದು ಊಹಿಸಲು ಅಸಾಧ್ಯವಾಗಿರುವಾಗ ಅವನೊಟ್ಟಿಗೆ ಊರು ಬಿಡುವ ಸಂಭಾಷಣೆಯೊಂದಿಗೆ ಸಿನಿಮಾ ಆರಂಭವಾಗುತ್ತದೆ. ಎಲ್ಲೂ ಹುಡುಕಿದರೂ ಯುವಜೋಡಿಗಳು ಸಿಗದಾಗ, ಭೂಮಾಲೀಕನ ಭಂಟರು ಯುವಕನ ಅಪ್ಪನನ್ನು ಟ್ರಾಕ್ಟರಿಗೆ ಕಟ್ಟಿ ಎಳೆದಾಡುತ್ತ ರಾಮಯ್ಯನಲ್ಲಿಗೆ ಕರೆತರುತ್ತಾರೆ. ಸಾಕಷ್ಟು ಥಳಿಸಿ ಮಗಳು ಕಣ್ಮರೆಯಾದದ್ದನ್ನೇ ನೆಪಮಾಡಿಕೊಂಡು, ರಾಮಯ್ಯ ಸರ್ಕಾರವಿತ್ತ ಸಾಗುವಳಿ ಭೂಮಿಯನ್ನು ಖಾಲಿ ಕಾಗದ ಮೇಲೆ ಹೆಬ್ಬೆಟ್ಟು ಹಾಕಿಸಿಕೊಂಡು ಲಪಟಾಯಿಸುತ್ತಾನೆ. ಮುಂದೆ ಆ ಭೂಮಿಯನ್ನು ಯುವಕನ ದಲಿತ ಕುಟುಂಬ ವಾಪಸ್ಸು ಪಡೆಯಲು ನಡೆಸುವ ಹೋರಾಟ, ಜಾತಿ ತಾರತಮ್ಯದ ಪ್ರತಿರೋಧಗಳು ಚಿತ್ರದುದ್ದಕ್ಕೂ ಸಾಗುತ್ತದೆ.

ಸಿನಿಮಾದ ಮೊದಲಾರ್ಧ ಜಾತಿ ತಾರತಮ್ಯ ಆ ಮೂಲಕ ನಡೆಯುವ ಶೋಷಣೆ, ಅವಮಾನಗಳ ಹಲವು ಮುಖಗಳು ಅನಾವರಣಗೊಳ್ಳುತ್ತವೆ. ತಳಜಾತಿಯವನೆಂಬ ದ್ವೇಷದ ಕಾರಣಕ್ಕಾಗಿ ಮುನಿರಾಜನ ಅಣ್ಣ ಜಮೀನ್ದಾರನಿಂದ ಬರ್ಬರವಾಗಿ ಹತ್ಯೆಯಾಗುವುದು ಅದಕ್ಕೆ ಪ್ರತೀಕಾರವಾಗಿ ಮುನಿರಾಜ ಜಮೀನ್ದಾರ ಸೋದರರಿಬ್ಬರ ಮೇಲೆ ಏಕಾಂಗಿ ಸೆಣೆಸುವುದು ಸೇಡಿನ ದೃಶ್ಯಕಟ್ಟುಗಳಾಗೇ ಕಂಡರೂ, ನೆಲವಿರುವವರೆಗೂ ತಗ್ಗಿಬಗ್ಗಿ ಹುಟ್ಟೂರಿನಲ್ಲೇ ಹೊಟ್ಟೆ ಹೊರೆಯಲು ಬಿಡದ ಉಸಿರುಕಟ್ಟಿದ ಯಾಜಮಾನಿಕೆಯ ಆಳುವ ವಾತಾವರಣದಲ್ಲಿ, ಎದೆಯುಬ್ಬಿಸಿ ನಿಂತು ಪ್ರತಿರೋಧಿಸುವ ಅನಿವಾರ್ಯತೆಯಾಗಿ ಕಾಣುತ್ತದೆ. ನೋಡುಗರನ್ನು ಕಾಡುವ ಜಾತಿ ರಾಜಕಾರಣದ ಮಧ್ಯೆ ಈ ಚಿತ್ರದಲ್ಲಿ ಮುನಿರಾಜ ಮತ್ತು ರತ್ನರ ನವಿರಾದ ಪ್ರೇಮಕಥನವಿದೆ. ಅವರಿಬ್ಬರ ನಡುವೆ ಅರಳುವ ಪ್ರೀತಿ ಪ್ರಸಂಗಗಳು ಸಹಜವಾಗಿ ಮೂಡಿಬಂದಿದೆ ಮತ್ತು ಸಂದರ್ಭಕ್ಕೆ ಪೂರಕವಾಗಿ ಬರುವ ಹಾಡುಗಳ ಸಾಹಿತ್ಯ, ಲಯ ಮನಸೆಳೆಯುತ್ತವೆ.

ಸಿನಿಮಾದ ಉತ್ತರಾರ್ಧದಲ್ಲಿ ಜಮೀನ್ದಾರನ ದಬ್ಬಾಳಿಕೆಯಿಂದ ಪ್ರೀತಿಸಿದವನನ್ನು ಸೇರಿ – ನೆಮ್ಮದಿ, ಸಂತೋಷ ಎಲ್ಲವನ್ನೂ ಕಳೆದುಕೊಂಡು, ಕಳೆದುಕೊಳ್ಳಲು ಮತ್ತೇನು ಉಳಿಯದಿರುವ ಪರಿಸ್ಥಿತಿಯಲ್ಲಿ, ಬದುಕುವುದೇ ದುಸ್ತರವೆನಿಸಿದಾಗ ನಾಯಕಿ ರತ್ನ ಸಿಡಿದೇಳುವ ಪರಿ, ದಲಿತ ಮಹಿಳೆಯ ಪ್ರತಿರೋಧದ ಅಭಿವ್ಯಕ್ತಿಯಾಗಿ ದಾಖಲಾಗುತ್ತದೆ. ಸಿನಿಮಾದ ಉದ್ದಕ್ಕೂ ನೋಡುಗರ ಬೆಚ್ಚಿ ಬೀಳಿಸುವ, ಚಿಂತನೆಗೆ ಹಚ್ಚುವ ಹಲವು ದೃಶ್ಯಕಟ್ಟುಗಳಿವೆ.

ಪಂಚಾಯಿತಿ ಚುನಾವಣೆಯಲ್ಲಿ ತಾನು ಪ್ರತಿನಿಧಿಸುವ ದೇವನಹಳ್ಳಿ, ದಲಿತ ಮೀಸಲಾತಿಗೆ ಒಳಪಟ್ಟಾಗ ತನ್ನ ಬಳಿ ಕೆಲಸಕ್ಕಿರುವ ರತ್ನನ ಅಪ್ಪನನ್ನೇ ನಾಮಕಾವಸ್ತೆಗೆ ಚುನಾವಣೆಯಲ್ಲಿ ನಿಲ್ಲಿಸಿ, ಗೆಲ್ಲಿಸುವಂತೆ ದಲಿತರನ್ನು ಓಲೈಸುತ್ತಾನೆ ಊರ ಸಾಹುಕಾರ. ಫಲಿತಾಂಶ ಹೊರ ಬಿದ್ದು ರತ್ನಳ ಅಪ್ಪ ಜಯಗಳಿಸುತ್ತಾನೆ. ಆದರೆ, ತಾನೇ ಗೆದ್ದಂತೆ ಸಂಭ್ರಮಿಸುತ್ತ ಮೇಲ್ಜಾತಿಯ ಸಾಹುಕಾರ ಅಸಲೀ ಗೆದ್ದ ಅಭ್ಯರ್ಥಿ ರತ್ನಳ ಅಪ್ಪನನ್ನು ತಮಟೆ ಬಡಿಯಲು ಹೇಳುತ್ತಾನೆ. ಊರಿನ ದಲಿತ ಹುಡುಗರು ತಮ್ಮವ ಗೆದ್ದ ಖುಷಿಗೆ ಕೇಕೆ ಹಾಕಿ ಕುಣಿಯುತ್ತ ರತ್ನಳ ಅಪ್ಪನಿಗೆ ಹೂಹಾರ ಹಾಕಿದಾಗ ಸಾಹುಕಾರನ ಮಗ ಸಿಟ್ಟಿಗೆದ್ದು ಕೊರಳಲ್ಲಿದ್ದ ಹೂಹಾರವನ್ನು ಕಿತ್ತು ಹಾಕುತ್ತಾನೆ.

ಹಾಗೆ ಮಧ್ಯಂತರದಲ್ಲಿ ಹೊತ್ತಿಗೆ ಬರುವ ಮುನಿರಾಜನ ಹತ್ಯೆಯ ದೃಶ್ಯಕಟ್ಟುಗಳು ಎದೆ ನಡುಗಿಸುವಂತಿವೆ. ಮತ್ತೊಂದು ದೃಶ್ಯದಲ್ಲಿ, ಪಂಚಾಯಿತಿ ಕಛೇರಿಯಲ್ಲಿ ಸಹೋದ್ಯೋಗಿಗಳು ಮನೆಯಿಂದ ತಂದ ತಿಂಡಿಯನ್ನು ಪರಸ್ಪರ ಎಲ್ಲರೂ ಹಂಚಿಕೊಂಡು ತಿನ್ನುವಾಗ, ತನ್ನ ಮೇಲಾಧಿಕಾರಿ ಪಿಡಿಒ ಒಬ್ಬ ದಲಿತನೆಂದು ತಿಳಿದ ಕೂಡಲೇ ಬಾಯಲ್ಲಿಟ್ಟ ತುತ್ತನ್ನು ಉಗಿದು, ಆತ ಹಂಚಿದ್ದ ಊಟವನ್ನು ಬಿಸಾಡುವ ದೃಶ್ಯ ಸಮಾಜದ ಬೇರುಗಳಲ್ಲಿ ಇಳಿದ ಮಾನವ ವಿರೋಧಿ ಅಸ್ಪೃಶ್ಯತೆಯನ್ನು ಕಟ್ಟಿ ಕೊಡುತ್ತದೆ.

ಇಡೀ ಸಿನಿಮಾ ನೋಡಿದ ಮೇಲೆ, ಸಿನಿಮಾದಲ್ಲಿ ಮೊದಲಾರ್ಧದಲ್ಲಿ ಕಂಡು ಬಂದ ಸಂಯಮದ ನಿರೂಪಣೆ ದ್ವಿತೀಯಾರ್ಧದಲ್ಲಿ ದೃಶ್ಯಗಳು ಬಿಡಿ ಬಿಡಿಯಾಗಿ ಕಂಡು ಅವನ್ನು ಜೋಡಿಸುವ ಕಸೂತಿ ಕೆಲಸ ಮಾಯವಾಗಿದೆ ಅನಿಸುತ್ತದೆ. ಅದಕ್ಕೆ ಕಾರಣ – ನಿರ್ದೇಶಕರು ತಮಗೆ ಸಿಕ್ಕ ಅವಕಾಶದಲ್ಲಿ ಶೋಷಣೆಯ ಎಲ್ಲಾ ಮುಖಗಳನ್ನೂ ಪ್ರೇಕ್ಷಕರ ಮುಂದಿಡಬೇಕೆಂಬ ಅತಿ ಉತ್ಸಾಹವಿರಬಹುದು. ಸಿನಿಮಾದ ಹಲವೆಡೆ ಅದರಲ್ಲೂ ಪ್ರತಿರೋಧದ ದೃಶ್ಯಗಳಲ್ಲಿ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಅಬ್ಬರಿಸಿದಂತೆ ಭಾಸವಾಗುತ್ತದೆ.

ಕಾಣೆಯಾದ ಮುನಿರಾಜನ ಹುಡುಕಾಟದಲ್ಲಿರುವ ಬೆಟ್ಟಗುಡ್ಡ ಪ್ರದೇಶದಲ್ಲಿ ಧ್ಯಾನಸ್ಥನಾಗಿ ಕುಳಿತ ಸನ್ಯಾಸಿಯ ಅವಧೂತನ ಮಾತುಗಳು ಸಿನಿಮಾದ ತಾತ್ವಿಕ ನೆಲೆಗಟ್ಟಿಗೆ ಪೂರಕವಾಗಿಲ್ಲ. ನಾಯಕ ಮುನಿರಾಜನ ಪೂರ್ವ ಜೀವನದ ಫ್ಲಾಶ್ ಬ್ಲಾಕನ್ನು ಸನ್ಯಾಸಿಯ ಮಾತುಗಳಿಂದ ನಿರೂಪಸಿದ್ದು ಅಸಹಜವಾಗಿದೆ.

ಆದರೆ, ಕೋಲಾರದ ನೆಲದ ಗ್ರಾಮೀಣ ಸೊಗಡಿನ ಹರಿತ ಕನ್ನಡ ಮತ್ತು ತೆಲುಗು ಭಾಷೆಯ ಚಿತ್ರದ ಜೀವಾಳವೇ ಆಗಿರುವ ಸಂಭಾಷಣೆ, ಸಹಜಾಭಿನಯದ ನಟವರ್ಗ, ಸಮಾಜದ ಅಂಚಿಗೆ ದೂಡಲ್ಪಟ್ಟವರ ಸಂಪ್ರದಾಯ, ಆಚರಣೆಗಳ ಚಿತ್ರಣಗಳು, ಅರ್ಥಗರ್ಭಿತ ಹಾಡುಗಳು, ಕನ್ನಡ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಬಂದಿಲ್ಲದ ಕೋಲಾರ ಜಿಲ್ಲೆಯ ನಿಸರ್ಗ ವಾತಾವರಣದ ಚಿತ್ರಣ – ಸಿನಿಮಾದಲ್ಲಿನ ಕೆಲ ನ್ಯೂನತೆಗಳನ್ನು ಮರೆಯುವಂತೆ ಮಾಡುತ್ತದೆ.

ಮುನಿರಾಜನಾಗಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಪದವೀಧರ ತಿಲಕ್ ರಾಜ್, ಜಮೀನ್ದಾರನಾಗಿ ಮಹೇಶ್ ಬಾಬು, ಜಲಜ ಕುಂದಾಪುರ, ಪರಮೇಶ್ ಜೋಳದ್, ಮಂಜುಳ, ಲಕ್ಷ್ಮಿ, ಅಜಿತ್ ಜೈನ್, ಪರಂ, ಸಂದೀಪ್, ವಿಶೇಷ್ ಅವರ ಸಹಜ ನಟನೆಯಿದೆ. ಅದರಲ್ಲೂ ರತ್ನಳಾಗಿ ಜಾನಪದ ಗಾಯಕಿ, ರಂಗಭೂಮಿ ನಟಿ ವೈ ಜಿ ಉಮಾರ ಅದ್ಭುತ ನಟನೆ ಚಿತ್ರದ ಹೈಲೆಟ್. ಆಸಿಫ್ ರೆಹಾನ್ ಅವರ ಛಾಯಾಗ್ರಹಣ ನಿರ್ದೇಶನವಿದೆ. ಸಿನಿಮಾಕ್ಕೆ ವರದರಾಜ್ ಚಿಕ್ಕಬಳ್ಳಾಪುರ ಅವರ ಸಾಹಿತ್ಯವಿದೆ. ಸುಬ್ರಮಣಿ ಆಚಾರ್ಯರವರು ಸಂಗೀತ ನೀಡಿದ್ದಾರೆ. ವಾಲಿ ಅವರು ಸಂಕಲನ ಮಾಡಿದ್ದಾರೆ. ಇಡೀ ಚಿತ್ರತಂಡ ನಿಜಕ್ಕು ಅಭಿನಂದನಾರ್ಹರು. ಅದರಲ್ಲೂ ದಲಿತ ಕತೆಯನ್ನು ಸಿನಿಮಾವಾಗಿಸುವ ಸಾಹಸಕ್ಕೆ ಕೈ ಹಾಕಿರುವ ಸೌನವಿ ಕ್ರಿಯೇಶನ್ಸ್ ನ ನಿರ್ಮಾಪಕರಾದ ಸೌಜನ್ಯ ಮತ್ತು ಸೌಂದರ್ಯರನ್ನು ಮೆಚ್ಚಲೇ ಬೇಕು.

ಹಳ್ಳಿಯ ದಲಿತರ ನೋವಿನ ಬದುಕನ್ನು ಹಲವು ನೆಲೆಗಳಲ್ಲಿ ಕಟ್ಟಿಕೊಡುವ ತಮ್ಮ ಪ್ರಥಮ ಪ್ರಯತ್ನವಾಗಿ ನಿರ್ದೇಶಕ ಜೀವಾ ನವೀನ್ ಅವರು ಯಶಸ್ಸು ಕಂಡಿದ್ದಾರೆ. ಸಂವೇದನಾಶೀಲ ಕನ್ನಡಿಗರು ಈ ‘ಪಾಲಾರ್’ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಬೇಕು. ಆ ಮೂಲಕ ಮುಂದೆ ಇಂಥ ದಲಿತರ ಕತೆಗಳು ತೆರೆಗೆ ಬರಲು ಕಾರಣವಾಗಬೇಕು.

‍ಲೇಖಕರು avadhi

March 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: