ಕ್ರಾಂತಿಯ ಹಕ್ಕಿಗೆ ಶಾಂತಿಯ ರೆಕ್ಕೆ ಕಟ್ಟುವ ಯತ್ನ..

ಯುವ ಕವಿ ನದೀಮ್ ಸನದಿ ಅವರ ಮೊದಲ ಕವಿತಾ ಸಂಕಲನ ಪ್ರಕಟವಾಗಿದೆ.

‘ಹುಲಿಯ ನೆತ್ತಿಗೆ ನೆರಳು’ ಕೃತಿಗೆ ಕವಿ ಬರೆದ ಮಾತುಗಳು ಇಲ್ಲಿವೆ-

ನದೀಮ ಸನದಿ

ದುರಿತ ಕಾಲದಲೂ ಹಾಡುತಿರಬೇಕೇ?
ಹೌದು, ಹಾಡುತಿರಬೇಕು
ದುರಿತ ಕಾಲದ ಹಾಡನ್ನು

ಬರ್ಟೋಲ್ಟ್ ಬ್ರೆಕ್ಟ್ ಈ ಭೂಮಿಯ ಮೇಲೆ ಆಗಿ ಹೋಗಿ ಆರು ದಶಕಕ್ಕೂ ಹೆಚ್ಚು ಕಾಲವಾಗಿದೆ. ಆದರೆ ಈ ಸಾಲುಗಳ ಪ್ರಸ್ತುತತೆ ಮತ್ತು ಭಾವತೀವ್ರತೆ ಕಾಲಕ್ರಮೇಣ ಹೆಚ್ಚುತ್ತಲೇ ಇದೆ ಹೊರತು ಕಡಿಮೆಯಾಗಿಲ್ಲ. ಸಲ್ಲದ ವಿಷಯಗಳ ಕುರಿತು, ಸಮಾಜದಲ್ಲಿ ಕಂಡುಬರುವ ಲೋಪದೋಷಗಳ ಕುರಿತು ನಮ್ಮಲ್ಲಿ ಜನ್ಮತಳೆದು ಬೆಳೆಯುವ ಒಳಗುದಿಯನ್ನು ಹೊರಹಾಕಬೇಕಾದುದು ಕವಿಯಷ್ಟೇ ಅಲ್ಲದೇ ಸೃಜನಶೀಲ ವ್ಯಕ್ತಿತ್ವವನ್ನು ಹೊಂದಿರುವ ಪ್ರತಿಯೊಬ್ಬನ ಜವಾಬ್ದಾರಿ ಮತ್ತು ಈ ಹೊತ್ತಿನ ಜರೂರತ್ತು ಕೂಡ. ಕವಿಯಾದವನು ಹಾಡಲೇಬೇಕು.

ಚೈತ್ರ ಮಾಸದಲ್ಲಿ ಚಿಗುರು ಮಾವಿನ ಮರದಿಂದ ಕೂಗುವ ಕೋಗಿಲೆಯ ಹಾಡನ್ನು. ಕಟುಕನ ಚೂರಿಗೆ ಬಲಿಯಾಗುವ ಪ್ರಾಣ ಯ ಪಾಡನ್ನು. ಬರೆಯಬೇಕು. ತನ್ನ ಸುತ್ತಲಿನ ಸಮಾಜದ ಅವ್ಯವಸ್ಥೆಗಳ ಬಗ್ಗೆ. ಜಾತಿ, ಧರ್ಮ, ಭಾಷೆ, ಬಣ್ಣಗಳ ತಾರತಮ್ಯದ ಬಗ್ಗೆ. ಮೊದಲ ಮಳೆಗೆ ತಣ ದು ಘಮ-ಘಮಿಸುವ ಮಣ ್ಣನ ಬಗ್ಗೆ. ಮಾಂಸದಂಗಡಿಯ ಮುಂದೆ ಕುಣ ಯುವ ನವಿಲಿನ ಬಗ್ಗೆ. ಮನುಷ್ಯರಿಂದಲೇ ಕೊಲ್ಲಲ್ಪಡುವ ಮನುಷ್ಯನ ಬಗ್ಗೆ.

ಇತ್ತೀಚಿನ ದಿನಗಳಲ್ಲಿ ಮನುಷ್ಯನಲ್ಲಿ ಒಂದು ವಿಚಿತ್ರ ರೀತಿಯ ಬದಲಾವಣೆಯನ್ನು ನಾವು ಗಮನಿಸುತ್ತಿದ್ದೇವೆ. ಆತನ ಹೃದಯದಲ್ಲಿ ಪ್ರೇಮ, ಭ್ರಾತೃತ್ವ, ಮಾನವೀಯತೆಗಳು ಮಾಯವಾಗಿ ಕೋಪ, ಕ್ರೋಧ, ದ್ವೇಷಗಳು ಮನೆಮಾಡಿವೆ. ಆತ ಮತೀಯವಾದಿಯಾಗುತ್ತಿದ್ದಾನೆ, ಧರ್ಮಾಂಧನಾಗುತ್ತಿದ್ದಾನೆ, ಮಾನಸಿಕವಾಗಿ ವಿಕೃತನಾಗುತ್ತಿದ್ದಾನೆ ಹಾಗೂ ಹಿಂದೆಂದಿಗಿಂತಲೂ ಅಪಾಯಕಾರಿಯಾಗಿ ರೂಪಗೊಳ್ಳುತ್ತಿದ್ದಾನೆ. ಮನುಷ್ಯನ ಈ ರೀತಿಯ ರೂಪಾಂತರಕ್ಕೆ ಕಾರಣ ೀಕರ್ತನೂ ಮನುಷ್ಯನೇ, ಇದನ್ನು ಅನುಭವಿಸಬೇಕಾದವನೂ ಮನುಷ್ಯನೇ, ಸರಿಪಡಿಸಬೇಕಾದ ಜವಾಬ್ದಾರಿಯೂ ಮನುಷ್ಯನದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಜಾಗರೂಕರಾಗಿ ಎದುರಿಗಿರುವ ಇಕ್ಕಟ್ಟನ್ನು ನಿಭಾಯಿಸುವ ಸಾಮಥ್ರ್ಯವನ್ನು, ಜಾತಿ-ಧರ್ಮಗಳ ಕುರಿತಾದ ನಮ್ಮ ಜ್ಞಾನವಿಸ್ತಾರದ ಪರಿಧಿಯನ್ನು ದಾಟಿ, ಸತ್ಯ-ಸುಳ್ಳುಗಳನ್ನು ಪರಾಮರ್ಶಿಸಿ ತರ್ಕಬದ್ಧವಾದ ಆಲೋಚನಾಕ್ರಮವೊಂದನ್ನು ಬೆಳೆಸಿಕೊಳ್ಳಬೇಕಾಗಿದೆ. ಜಾತ್ಯಾತೀತವಾದ ಒಂದು ಸದೃಢ ಸಮಾಜ ಕಟ್ಟುವತ್ತ ಗಮನ ಹರಿಸಬೇಕಾಗಿದೆ.

ಸುಳ್ಳಿನ ಸರಮಾಲೆಯನ್ನೇ ಸತ್ಯದ ಮುತ್ತುಗಳನ್ನಾಗಿ ಬಿಂಬಿಸಿ ಜನರ ಮನಗಳನ್ನು ಒಡೆದು, ನಡುವೆ ಜಾತಿ-ಧರ್ಮಗಳ ಹೆಸರಿನ ಗೋಡೆಗಳನ್ನು ಕಟ್ಟಲಾಗುತ್ತಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಒಂದೇ ಬಳ್ಳಿಯ ಹೂಗಳಂತೆ ಬಾಳುತ್ತಿರುವವರ ಎದೆಯಲ್ಲಿ ದ್ವೇಷದ ಬೀಜ ಬಿತ್ತಿ ಬಹುತ್ವ ಭಾರತದ ಪ್ರತಿಮೆಗೆ ಧಕ್ಕೆ ತಲುಪಿಸುವ ಸಂಚುಗಳು ಹೇರಳವಾಗಿ ನಡೆಯುತ್ತಿವೆ. ಶಿಕ್ಷಿತರು, ಪ್ರಜ್ಞಾವಂತರನ್ನೊಳಗೊಂಡು ದೊಡ್ಡ ಸಂಖ್ಯೆಯಲ್ಲಿ ಜನ ಈ ಷಡ್ಯಂತ್ರದ ಬಲೆಗೆ ಬಿದ್ದಿರುವುದು ರಾಮರಾಜ್ಯ ಎಂಬ ಸಭ್ಯ ಸಮಾಜ ಕಟ್ಟುವ ಆಶಯಕ್ಕೆ ಅತಿದೊಡ್ಡ ಮಾರಕ. ಇದರ ವಿರುದ್ಧ ಸೆಟೆದು ನಿಲ್ಲುವ ದಿಟ್ಟತನವನ್ನು ನಾವು ತೋರಿಸಬೇಕು. ಬಂಜರು ಜಮೀನಿನಡಿ ಬೀಜ ಮೊಳಕೆಯೊಡೆದು ಸಸಿ ಚಿಗುರುವಂತೆ ಹೃದಯದಲ್ಲಿ ಬತ್ತಿಹೋಗಿರುವ ಛಲದ ಮಶಾಲನ್ನು ಮತ್ತೆ ಉರಿಯುವಂತೆ ಮಾಡಬೇಕು. ಅಸಾಧ್ಯವೆನಿಸಿದವುಗಳನೆಲ್ಲ ಸಾಧ್ಯತೆಯ ಮೈಲಿಗಲ್ಲುಗಳಾಗಿ ಪರಿವರ್ತಿಸಬೇಕು.

ಅತ್ತ ನಾವು ಮಂಗಳನಂಗಳದ ಪ್ರಗತಿಪಥದತ್ತ ದಾಪುಗಾಲು ಹಾಕುತ್ತಿರುವಾಗ, ಇತ್ತ ಮನುಷ್ಯ ಮನುಷ್ಯರ ಕೊಲೆಗೈಯುವುದರಲ್ಲಿ ನಿರತನಾಗಿದ್ದಾನೆ. ಉಜ್ವಲ ಭವಿಷ್ಯದ ಯುವಕರು ಭಯೋತ್ಪಾದಿ ಸಂಘಗಳನ್ನು, ಧರ್ಮಸೇನೆಗಳನ್ನು ಸೇರಿ ದೇಶದಲ್ಲಿ ಆಂತರಿಕ ಯುದ್ಧವನ್ನೇ ಸಾರಿದ್ದಾರೆ. ಗುಂಪೊಂದು ದೊಡ್ಡ ಸಮುದಾಯವೊಂದನ್ನು ತಮ್ಮ ದಾಳವನ್ನಾಗಿಸಿ ನಿರ್ದಿಷ್ಟ ಸಮುದಾಯಗಳ ವಿರುದ್ಧ ಎತ್ತಿ ಕಟ್ಟುತ್ತಿದೆ. ನಮ್ಮನಾಳುವ ಸರಕಾರಗಳು ಈ ಎಲ್ಲ ವಿಷಯಗಳಲ್ಲಿ ಜಾಣ ಮೌನ ವಹಿಸಿವೆ. ದೇಶದ ಸಾಧನೆಗೆ ಹೆಮ್ಮೆ ಪಡಬೇಕೇ ಅಥವಾ ಮನುಷ್ಯನ ಅವನತಿಗೆ ತಲೆತಗ್ಗಿಸಬೇಕೇ, ನಿರ್ಧರಿಸುವುದಾದರೂ ಹೇಗೆ?

ಮನುಷ್ಯ ಮನುಷ್ಯನನ್ನು ಕೊಲ್ಲುವುದೆಂದರೆ.!! ಮಾನವನ ಈ ಹೀನ ಧೋರಣೆಯನ್ನು ನೀಚತನದ ಪರಮಾವಧಿಯ ಯಾವ ಹಂತ ಎಂದು ಕರೆಯಬೇಕು? ಇಂತಹ ನಮ್ಮದೇ ತಪ್ಪುಗಳ ಪರಿಣಾಮವಾಗಿ ರೋಹಿತ ವೇಮುಲ ಆತ್ಮಹತ್ಯೆಗೆ ಶರಣಾಗಬೇಕಾಯಿತು. ನಿರ್ಭಯಾ ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಬೇಕಾಯಿತು. ಉನ್ನಾವ್ ಸಂತ್ರಸ್ತೆಯ ತಂದೆ ಜೈಲಿನಲ್ಲೇ ಪ್ರಾಣಬಿಡುವಂತಾಯಿತು, ಅವಳು ಪ್ರಯಾಣ ಸುತ್ತಿದ್ದ ಕಾರು ಅನುಮಾನಾಸ್ಪದವಾಗಿ ಅಪಘಾತಕ್ಕೀಡಾಯಿತು..

..ರಾಜಸ್ತಾನದಲ್ಲಿ ದಲಿತ ಯುವಕರನ್ನು ಬೆತ್ತಲಾಗಿಸಿ ಥಳಿಸಲಾಯಿತು, ಹೇಳಿದ ಘೋಷಣೆ ಕೂಗಲು ಒಪ್ಪದ ಯುವಕನ್ನು ಕೈಕಾಲು ಕಟ್ಟಿ ಥಳಿಸಿ ಪ್ರಾಣ ತೆಗೆಯಲಾಯಿತು. ಬುಲಂದಶಹರದ ಇನ್ಸಪೆಕ್ಟರ್ ಸುಬೋಧ್ ಕುಮಾರ ಸಿಂಗ್‍ನನ್ನು ಪೋಲಿಸ್ ಠಾಣೆಯ ಬಯಲಿನಲ್ಲೇ ಕೊಲ್ಲಲಾಯಿತು. ಗೋಹತ್ಯೆಯ ಹೆಸರಿನಲ್ಲಿ ಮೊಹಮ್ಮದ್ ಅಖ್ಲಾಕ್, ಪೆಹ್ಲು ಖಾನ್ ಮೊದಲಾದವರಿಂದ ಆರಂಭಗೊಂಡು ತಬ್ರೇಜ್ ಅನ್ಸಾರಿ ವರೆಗೆ ಹತ್ತಾರು ಜನರನ್ನು ನಿರ್ದಯಿಯಾಗಿ ಕೊಲ್ಲಲಾಯಿತು. ಇಷ್ಟೆಲ್ಲ ಅರಾಜಕತೆಯನ್ನು ಸಹಿಸಿಕೊಂಡು ಸುಮ್ಮನಿರುವ ನಾವು ಈಗಲೂ ಸುಮ್ಮನಿದ್ದರೆ ನರೇಂದ್ರ ಧಾಬೋಳ್ಕರ್, ಗೋವಿಂದ ಪನ್ಸಾರೆ, ಎಂ. ಎಂ. ಕಲಬುರ್ಗಿ ಹಾಗೂ ಗೌರಿ ಲಂಕೇಶರನ್ನು ತಲುಪಿರುವ ಹಂತಕರ ಪಿಸ್ತೂಲಿನ ಗುಂಡು ನನ್ನನ್ನು-ನಿಮ್ಮನ್ನು ತಲುಪಲು ಬಹಳ ಹೊತ್ತು ಬೇಕಾಗಿಲ್ಲ.

ಇದು ಯುದ್ಧಕಾಲ. ವಿರಾಮ ನಿಷಿದ್ಧ. ನಾವು ಎಚ್ಚರದಿಂದಿರಬೇಕು.. ಮಾತನಾಡಬೇಕು.. ಪ್ರತಿರೋಧಿಸಬೇಕು.. ಮತ್ತು ಕವಿತೆ ಬರೆಯಬೇಕು.

 

‍ಲೇಖಕರು avadhi

September 1, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. ಸಿದ್ದರಾಮ

  ತುಂಬ ಅರ್ಥಗರ್ಭಿತ ಹಾಗೂ ವಾಸ್ತವವನ್ನು ಪ್ರತಿಬಿಂಬಿಸಬಲ್ಲ ಕವಿತೆಗಳು ಇದರಲ್ಲಿರಬಹುದು ಅಂದುಕೊಳ್ಳುತ್ತೇವೆ. ನದೀಮ್ ನನ್ನ ಆತ್ಮೀಯ ಸ್ನೇಹಿತ ಸಹೋದರನಂತೆ ಮೂಲತಃ ಸಾಹಿತ್ಯದ ಕುಟುಂಬದಿಂದ ಬಂದಿರುವ ನದೀಮ ಯುವಕವಿ ಅಲ್ಲ ಬದಲಾಗಿ ಪ್ರೌಢತ್ವ ಉಳ್ಳ ಕವಿ. ಈ ಮೇಲೆ ಆತ ಉಲ್ಲೇಖಿಸಿರುವ ಆತನ ಮಾತುಗಳೇ ಇದಕ್ಕೆ ಸಾಕ್ಷಿ ಸಾರಸ್ವತ ಲೋಕಕ್ಕೆ ಇಂತಹ ಒಳ್ಳೆಯ ಕವಿಯನ್ನು ಉಡುಗೊರೆಯಾಗಿ ನೀಡಿದ ಅವರ ತಂದೆಯವರಿಗೆ ಹಾಗೂ ಕಾವ್ಯ ಸಂಸ್ಕೃತಿಯನ್ನು ಹುಟ್ಟುಹಾಕಿದ ನಾಡಿನ ಮೇರು ಕವಿ ಬಿ.ಎ.ಸನದಿಯವರಿಗೂ ಅನಂತಾನಂತ ಧನ್ಯವಾದಗಳು…
  ಯುವ ಪ್ರಬುದ್ದ ಕವಿಗೆ ಶುಭಾಶಯಗಳು…

  ಪ್ರತಿಕ್ರಿಯೆ
 2. ಚಂದ್ರಪ್ರಭ ಕಠಾರಿ

  ಮೊದಲಿಗೆ ನದೀಮ ಸನದಿ ಅವರ ಲೇಖನವನ್ನು ಪ್ರಕಟಿಸಿದ್ದಕ್ಕೆ ಅವಧಿಗೆ ಧನ್ಯವಾದಗಳು. ಈಗಿನ ದುರಿತ ಕಾಲದಲ್ಲಿ ಇಂಥ ಬರಹಗಳ ಜರೂರತ್ತು ಬಹಳವಿದೆ. ಸದ್ಯದ ಇಡೀ ಭಾರತದ ಚಿತ್ರಣವನ್ನು ಅಕ್ಷರದಲ್ಲಿ ಸವಿವರವಾಗಿ ದುಗುಡದಿಂದ ಬಿಡಿಸಿದ್ದಾರೆ. ವಾಟ್ಸಾಪ್ ಯೂನಿವರ್ಸಿಟಿಯ ಸುಳ್ಳು ಸಂದೇಶಗಳ ಮಹಾಪೂರದಲ್ಲಿ ಸಿಕ್ಕು, ಅವುಗಳ ಸತ್ಯಾಸತ್ಯತೆಯ ಚರ್ಚೆಯಲ್ಲಿ ಮನಸ್ಸುಗಳು ಒಡೆದು ರಕ್ತಸಂಬಂಧಿ, ಗೆಳೆತನವೆನ್ನದೆ ಎಲ್ಲಾ ಸಂಬಂಧಗಳು ಮುರಿದು ಬಿದ್ದಿವೆ. ವ್ಯಕ್ತಿ ಆರಾಧನೆಯಲ್ಲಿ ಮಿಂದೆದ್ದವರಲ್ಲಿ ಸಂವಾದ ಅಸಹ್ಯವೆನ್ನುವ ಮಟ್ಟಕ್ಕೆ ತಲುಪಿದೆ. ತಾವುಗಳಷ್ಟೇ ಈ ದೇಶದಲ್ಲಿ ಬದುಕಲು ಅರ್ಹರು ಎಂದು ಅವರು ತಿಳಿದಂತಿದೆ. ಇಂಥ ಕಾಲಘಟ್ಟದಲ್ಲಿ ಕವಿತೆಗಳನ್ನು ಬರೆಯಬೇಕು, ಹಾಡಬೇಕು ಎಂದಿದ್ದಾರೆ. ಅಷ್ಟರಿಂದಲೇ ಬದಲಾವಣೆ ಸಾಧ್ಯವೇ? ನಿರಾಶವಾದದ ಮಾತು ಬೇಡ. ಸೃಜಲಶೀಲ ಮನಸ್ಸುಗಳ ಪ್ರಯತ್ನವಂತೂ ಇರಲಿ. ಅರ್ಧದಷ್ಟು ಗೆದ್ದೆತ್ತಿನ ಬಾಲ ಹಿಡಿದಿರುವವರು ಉಳಿದರ್ಧ ದೇಶವಾಸಿಗಳ ಮಾತನ್ನು ಕೇಳುವಂತಾಗಲಿ. ನದೀಮ ಸನದಿಯವರ ಕವನಗಳು ಅಂಥ ಕೆಲಸಕ್ಕೆ ಸ್ಫೂರ್ತಿ ತರಲಿ ಎಂದು ಹಾರೈಸೋಣ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: