ಕೊರೊನಾ ವೈರಸ್ ದುಷ್ಪರಿಣಾಮಗಳು ಮತ್ತು  ಟೆಲಿಮೆಡಿಸಿನ್ ಅಗತ್ಯತೆ

ಡಾ. ಪ್ರಶಾಂತ ನಾಯ್ಕ, ಬೈಂದೂರು

ಅಂದು, ಇಡೀ ರಾಷ್ಟ್ರ  ಸ್ಥಗಿತಗೊಂಡಿತ್ತು;  ಸಂಘಟನೆಗಳು ಯಾವುದೋ ಒಂದು ನಿರ್ಣಯದ ವಿರುದ್ಧ ಬಂದ್‌ಗೆ ಕರೆ  ನೀಡಿದ್ದರಿಂದ,  ರಸ್ತೆ ಸಂಚಾರ,  ಅಂಗಡಿ-ಮುಂಗಟ್ಟುಗಳು ಎಲ್ಲವೂ ಸ್ತಬ್ಧ. ಒಂದು ಕುಗ್ರಾಮ,  ಈ ಪರಿಸ್ಥಿತಿಯಲ್ಲಿ ಬಾಲಕಿಯೊಬ್ಬಳು ತೀವ್ರವಾಗಿ ಜ್ವರದಿಂದ ಬಳಲುತ್ತಿದ್ದಳು. ಚಿಕಿತ್ಸೆಗೆ ಹತ್ತಿರದ  ಪಟ್ಟಣದಲ್ಲಿರುವ ವೈದ್ಯರ ಬಳಿಗೆ ಕರೆದೊಯ್ಯಲು ಸಾರ್ವಜನಿಕ ಸಾರಿಗೆ ಅಥವಾ ಖಾಸಗಿ ವಾಹನ ಲಭ್ಯವಿರಲಿಲ್ಲ.

ರೋಗಿಯ ಕುಟುಂಬ ಸದಸ್ಯರು ವೈದ್ಯರನ್ನು ಸಂಪರ್ಕಿಸಿದರು. ವೈದ್ಯರು ಅಲ್ಲಿಂದಲೇ ಆ ಬಾಲಕಿಯೊಂದಿಗೆ ಫೋನ್‌ನಲ್ಲಿ ಮಾತನಾಡಿ ರೋಗಲಕ್ಷಣಗಳು ಮತ್ತು ಇತರ ಅಗತ್ಯವಿರುವ  ಮಾಹಿತಿಯನ್ನು ಸಂಗ್ರಹಿಸಿ ಫೋನ್ ಮೂಲಕವೇ   ಪ್ರಿಸ್ಕ್ರಿಪ್ಷನ್  ಕಳುಹಿಸುತ್ತಾರೆ.  ವೈದ್ಯರು ಸೂಚಿಸಿ ಔಷಧಿಗಳನ್ನು ತೆಗೆದುಕೊಂಡು, ಬಾಲಕಿಯು ಅನಾರೋಗ್ಯದಿಂದ ಚೇತರಿಸಿಕೊಂಡಳು. ಅದೃಷ್ಟವಶಾತ್, ಬಂದ್‌ ದಿನ ಅಗತ್ಯ ಸೇವೆಯ ಅಡಿಯಲ್ಲಿ ಔಷಧಿ ಅಂಗಡಿಗಳನ್ನು ತೆರೆಯಲು ಅವಕಾಶವಿತ್ತು.  ಆ ದಿನ, ವೈದ್ಯರನ್ನು ಸಂಪರ್ಕಿಸಲು ಫೋನ್ ಸಂಪರ್ಕ ಇಲ್ಲದೆ ಹೋಗಿದ್ದಿದ್ದರೆ, ರೋಗಿಗೆ ಮತ್ತು ಕುಟುಂಬ ಸದಸ್ಯರಿಗೆ ಈ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟಕರವಾಗಿರುತ್ತಿತ್ತು.

ಮತ್ತೊಂದು ಘಟನೆ.  ಆಸ್ಪತ್ರೆಯಲ್ಲಿ  ಒಂದು ತುರ್ತು ಸನ್ನಿವೇಶ.  ಒಬ್ಬ ರೋಗಿಯನ್ನು ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು.   ಆದರೆ ಈ ಶಸ್ತ್ರಚಿಕಿತ್ಸೆಯನ್ನು ನಿಭಾಯಿಸಬಲ್ಲ ಸೂಪರ್-ಸ್ಪೆಷಾಲಿಟಿ ವೈದ್ಯರು ಆಸ್ಪತ್ರೆಯಿಂದ ದೂರದಲ್ಲಿರುವ ಮತ್ತೊಂದು ನಗರದಲ್ಲಿದ್ದರು. ತಕ್ಷಣ,  ಆಸ್ಪತ್ರೆಯ ವೈದ್ಯರು ದೂರವಾಣಿಯಲ್ಲಿ  ತಜ್ಞ  ಶಸ್ತ್ರಚಿಕಿತ್ಸಕರನ್ನು  ಸಂಪರ್ಕಿಸಿ,  ಒಂದು ವೀಡಿಯೊ ಸಮ್ಮೇಳನವನ್ನು ಏರ್ಪಡಿಸಿದರು. ಆ ಕಡೆಯಿಂದ  ಸೂಪರ್-ಸ್ಪೆಷಾಲಿಟಿ ಸರ್ಜನ್ ನಿರ್ದೇಶನಗಳನ್ನು ನೀಡುತ್ತಿದ್ದರೆ, ಈ ಕಡೆಯಿಂದ  ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು.  ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಿ, ರೋಗಿಯನ್ನು ಉಳಿಸಲಾಯಿತು.  ಅಂದು,  ದೂರದಲ್ಲಿದ್ದ ತಜ್ಞ  ಶಸ್ತ್ರಚಿಕಿತ್ಸಕರ ನಿರ್ದೇಶನಗಳನ್ನು ತೆಗೆದುಕೊಳ್ಳಲು  ವಿಡಿಯೋ ಕಾನ್ಫರೆನ್ಸ್  ವ್ಯವಸ್ಥೆ ಮಾಡದೇ ಹೋಗಿದ್ದರೆ, ಜೀವನ್ಮರಣ ಹೋರಾಟದಲ್ಲಿದ್ದ ಆ ರೋಗಿಯನ್ನು ಬದುಕಿಸಲು ಅಸಾಧ್ಯವಾಗುತ್ತಿತ್ತು.

ಮೇಲೆ ತಿಳಿಸಿರುವ ತುರ್ತು ಸಮಯದಲ್ಲಿ ಅಥವಾ ಬಂದ್ ನಂತಹ ಕೆಲವು ವಿಶೇಷ  ಸಂದರ್ಭಗಳಲ್ಲಿ  ಮಾತ್ರವಲ್ಲ,   ರೋಗಿಯು ದೂರದ ಪ್ರದೇಶದಲ್ಲಿದ್ದಾಗ, ಸಾರಿಗೆ ಸೌಲಭ್ಯ ಲಭ್ಯವಿಲ್ಲದಿದ್ದಾಗ, ಹಾಸಿಗೆ ಹಿಡಿದ ರೋಗಿಗಳು, ವೈದ್ಯಕೀಯ ಸಿಬ್ಬಂದಿಗಳ ಕೊರತೆ,  ಆರ್ಥಿಕ ದುಸ್ಥಿತಿ, ಕುಂಠಿತ ಮೂಲಸೌಕರ್ಯಗಳು,  ಇಂತಹ  ಸಂದರ್ಭಗಳಲ್ಲಿ, ರೋಗಿಗಳು ಮತ್ತು ವೈದ್ಯರ ನಡುವೆ ಸಂಪರ್ಕವನ್ನು ಏರ್ಪಡಿಸಿ ಸೂಕ್ತ ಚಿಕಿತ್ಸೆಗೆ  ಪೂರಕವಾಗಿರುವುದೇ ಟೆಲಿಮೆಡಿಸಿನ್. ರೋಗಿ ಮತ್ತು ವೈದ್ಯರ ನಡುವೆ ಸೇತುವೆಯಾಗಿ ಸಹಕರಿಸುವ ಟೆಲಿಮೆಡಿಸಿನ್ ಎಂಬ ಆರೋಗ್ಯ ಸೇವೆಯ ಹೆಗ್ಗಳಿಕೆ ಬಹುಪಾಲು ದೂರಸಂಪರ್ಕ ತಂತ್ರಜ್ಞಾನಕ್ಕೆ ಸಲ್ಲುತ್ತದೆ.

ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಜಗತ್ತಿನಾದ್ಯಂತ ಅಲ್ಲೋಲಕಲ್ಲೋಲ ಎಬ್ಬಿಸಿರುವ ಸಾಂಕ್ರಾಮಿಕ ಕಾಯಿಲೆ ಕೋವಿಡ್-19 ಸೂಕ್ತ ಚಿಕಿತ್ಸೆಗಾಗಿ ಕೌತುಕದಿಂದ ಕಾಯುತ್ತಿರುವ ಈ ಸಂದರ್ಭದಲ್ಲಿ  ‘ಟೆಲಿಮೆಡಿಸಿನ್’ ಪದ ಕೇಳಿದ ಸಾಮಾನ್ಯ ಜನರು  ಯಾವುದೋ ಒಂದು ಹೊಸ ಔಷಧಿ ಬರುತ್ತಿದೆ ಎಂದು  ಗ್ರಹಿಸಬಹುದು.   ಟೆಲಿಮೆಡಿಸಿನ್  ಅಂದರೆ ಒಂದು ಮೆಡಿಸಿನ್ ಅಲ್ಲ, ಅಥವಾ ಔಷಧಿಯನ್ನು ಟೆಲಿಫೋನ್ ಮೂಲಕ ರವಾನಿಸುವುದು ಅಂತಾನೂ ಅಲ್ಲ  (ಯಾರಿಗೆ ಗೊತ್ತು? ಭವಿಷ್ಯದಲ್ಲಿ, ಆ ತರದ ತಂತ್ರಜ್ಞಾನವು ಬಂದರೂ ಬರಬಹುದು!). ದೂರದರ್ಶನದಲ್ಲಿ ಎಲ್ಲೋ ನಡೆಯುವ ಘಟನೆ, ಕ್ರೀಡೆ, ಕಾರ್ಯಕ್ರಮಗಳನ್ನು ಮನೆಯಲ್ಲೇ ಕುಳಿತು ಹೇಗೆ ನಾವು ಲೈವ್ ಆಗಿ ವೀಕ್ಷಿಸಬಹುದು, ಅಂತೆಯೇ ಟೆಲಿಮೆಡಿಸಿನ್ ಸಹಾಯದಿಂದ ದೂರದಿಂದಲೇ ಆರೋಗ್ಯ ಸೇವೆಯನ್ನು ಕ್ಲಪ್ತ ಸಮಯದಲ್ಲಿ ಪಡೆಯುವುದು (ಟೆಲಿ = ದೂರ; ಮೆಡಿಸಿನ್ = ಔಷಧಿ). ವಿಶ್ವ ಆರೋಗ್ಯ ಸಂಸ್ಥೆ (W.H.O.) ತುಂಬಾ ಸರಳವಾಗಿ ಟೆಲಿಮೆಡಿಸಿನ್ ಅನ್ನು “ದೂರದಿಂದ ಗುಣಪಡಿಸುವುದು” ಎಂದು  ವ್ಯಾಖ್ಯಾನಿಸಿದೆ.

ನಿಸ್ಸಂಶಯವಾಗಿ, ಯಾವುದೇ ವೈದ್ಯರಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡಲು,  ಸ್ಟೆತೊಸ್ಕೋಪ್, ಸ್ಪಿಗ್ಮೋಮನೋಮೀಟರ್, ರಕ್ತ ಗ್ಲೂಕೋಸ್ ಮೀಟರ್, ತೂಕ ಮಾಪಕ, ಥರ್ಮಾಮೀಟರ್ ಸೇರಿದಂತೆ ಅತ್ಯಮೂಲ್ಯ ಪ್ರಾಥಮಿಕ ಆರೋಗ್ಯ ಸಾಧನಗಳನ್ನು ಬಳಸಿ  ತಪಾಸಣೆ ನಡೆಸಿ ರೋಗಿಯೊಂದಿಗೆ ವೈಯಕ್ತಿಕವಾಗಿ ಸಂವಹನ ಮಾಡಬೇಕಾಗಿರುವುದು ಅವಶ್ಯ.  ಆದರೆ ಎಲ್ಲಾ ಸಮಯದಲ್ಲೂ ಪರಿಸ್ಥಿತಿ ಒಂದೇ  ತೆರನಾಗಿರುವುದಿಲ್ಲ.  ಮೇಲೆ ತಿಳಿಸಿದ ಅನೇಕ ಸಂದರ್ಭಗಳಲ್ಲಿ ರೋಗಿಗಳಿಗೆ  ಕ್ಲಪ್ತ ಸಮಯದಲ್ಲಿ ವೈಯಕ್ತಿಕವಾಗಿ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗದಿರಬಹುದು ಅಥವಾ ವೈದ್ಯರು ರೋಗಿಗಳತ್ತ ಧಾವಿಸಲು ಅನಾನುಕೂಲ ಇರಬಹುದು. ಅಂತಹ ಪರಿಸ್ಥಿತಿಗಳಲ್ಲಿ ಟೆಲಿಮೆಡಿಸಿನ್ ಗಮನಾರ್ಹ ಪಾತ್ರವನ್ನು ವಹಿಸುತ್ತದೆ.

ಪ್ರಸ್ತುತ, ಟೆಲಿಮೆಡಿಸಿನ್ ಎಷ್ಟು  ಮುಂದುವರಿದಿದೆ ಎಂದರೆ ರೋಗಿಗಳ ಪ್ರಮುಖ ರೋಗಲಕ್ಷಣಗಳ ತಪಾಸಣೆಗಾಗಿ ಡಿಜಿಟಲ್ ಸ್ಟೆತೊಸ್ಕೋಪ್, ಪಲ್ಸ್ ಆಕ್ಸಿಮೀಟರ್, ಎಲೆಕ್ಟ್ರಾನಿಕ್ ಸ್ಟೆತೊಸ್ಕೋಪ್ಗಳು (Electronic stethoscopes), ಸ್ವಯಂಚಾಲಿತ ರಕ್ತದೊತ್ತಡ ಮಾನಿಟರ್ (Automated blood pressure monitor), ಓಟೋಸ್ಕೋಪ್ (Otoscope), ಡರ್ಮಟೊಸ್ಕೋಪಿ, ಇಟೈಮ್ನ ಹೋಮ್ ಎಂಡೋಸ್ಕೋಪ್ (eTime’s home endoscope) ಇಂತಹ ಅನೇಕ ಉಪಯುಕ್ತ  ಚಿಕ್ಕ ಗಾತ್ರದ  ಪೋರ್ಟಬಲ್ ಕಿಟ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಈ ಕಾಂಪ್ಯಾಕ್ಟ್ ಸಾಧನಗಳನ್ನು ಬಳಸಿಕೊಂಡು, ರೋಗಿಗಳ ಆರೋಗ್ಯ ಸ್ಥಿತಿಗಳನ್ನು ನೈಜ ಸಮಯದಲ್ಲಿ ಅಂದರೆ ಲೈವ್ ಆಗಿ ಪಡೆದು,  ಸರಿಯಾದ ಚಿಕಿತ್ಸೆಯನ್ನು ಸೂಚಿಸಲು ವೈದ್ಯರಿಗೆ ಸಾಧ್ಯವಾಗುತ್ತದೆ.  ಆದಾಗ್ಯೂ, ಈ ಡಿಜಿಟಲ್ ಪರಿಕರಗಳನ್ನು ತರಬೇತಿ ಪಡೆದ ವ್ಯಕ್ತಿಗಳು ಅಥವಾ ವೈದ್ಯಕೀಯ ಸಿಬ್ಬಂದಿ / ಸ್ಥಳೀಯ ವೈದ್ಯರ ಸಹಭಾಗಿತ್ವದಲ್ಲಿ ನಿರ್ವಹಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ, ವೈದ್ಯಕೀಯ ಸಿಬ್ಬಂದಿ/ ಸ್ಥಳೀಯ ವೈದ್ಯರು  ಕಿಟ್‌ಗಳ ಮೂಲಕ ಪಡೆದ ಮಾಹಿತಿಗಳನ್ನು  ಹೆಚ್ಚಿನ ಸಲಹೆ / ಚಿಕಿತ್ಸೆಯನ್ನು ಪಡೆಯಲು  ತಜ್ಞ ವೈದ್ಯರಿಗೆ  ರವಾನಿಸಬಹುದು. ಸಾಮಾನ್ಯ ವೈದ್ಯರಷ್ಟೇ ಅಲ್ಲ, ಹೃದ್ರೋಗ ತಜ್ಞರು, ನೇತ್ರಶಾಸ್ತ್ರಜ್ಞರು, ಮನೋವೈದ್ಯರು, ವಿಕಿರಣಶಾಸ್ತ್ರಜ್ಞರು, ಚರ್ಮರೋಗ ತಜ್ಞರು, ಶಿಶುವೈದ್ಯರು, ನರವಿಜ್ಞಾನಿ, ನೆಫ್ರಾಲಜಿಸ್ಟ್ (ಮೂತ್ರಪಿಂಡ ತಜ್ಞರು), ದಂತವೈದ್ಯರು, ಶಸ್ತ್ರಚಿಕಿತ್ಸಕರು  ಹಾಗೂ ಇನ್ನಿತರ  ತಜ್ಞ ವೈದ್ಯರುಗಳು ಅವರವರ ಪರಿಣತಿಗೆ ಅನುಗುಣವಾಗಿ ತಮ್ಮ ಆರೋಗ್ಯ ಸೇವೆಗಳನ್ನು  ದೂರದ ಪ್ರದೇಶಗಳಿಗೆ ವಿಸ್ತರಿಸಬಹುದು. ಟೆಲಿಮೆಡಿಸಿನ್‌ಗೆ ಬೆಂಬಲವಾಗಿ, ನಿಗದಿತ ಔಷಧಿಗಳು ಮತ್ತು ಇತರ ಆರೋಗ್ಯ ಸಾಮಗ್ರಿಗಳನ್ನು ಅಗತ್ಯವಿರುವ ಜನರಿಗೆ ಅವರ ಮನೆ ಬಾಗಿಲಿಗೆ ಪೂರೈಸುವ  ಟೆಲಿಫಾರ್ಮಸಿ ಸಹ ತನ್ನ ಸೇವೆಯನ್ನು ನೀಡುತ್ತದೆ.

ಟೆಲಿಮೆಡಿಸಿನ್ ವೈದ್ಯಕೀಯ ಕ್ಷೇತ್ರದಲ್ಲಿ ಇತ್ತೀಚಿನ ಹೊಸ ಬೆಳವಣಿಗೆ ಎಂಬಂತೆ ಕಂಡುಬಂದರೂ, ಇದು ಒಂದು ಸುದೀರ್ಘ ಇತಿಹಾಸವನ್ನು ಹೊಂದಿದೆ. 1950 ರ ದಶಕದಲ್ಲಿ, ಅಂತರ್ಯುದ್ಧದ ಸಮಯದಲ್ಲಿ, ಸೈನಿಕರು ಗಾಯಗೊಂಡಾಗ ಕೇಂದ್ರ ಸ್ಥಾನಕ್ಕೆ  ಮಾಹಿತಿಯನ್ನು ನೀಡಿ ತುರ್ತಾಗಿ ಔಷಧಿಗಳಿಗಾಗಿ ಸಂದೇಶವನ್ನು ನೀಡಲು ವಿದ್ಯುತ್ ಟೆಲಿಗ್ರಾಫ್ ಅನ್ನು  ಬಳಸಲಾಯಿತು. 1903 ರಲ್ಲಿ ಡಾ. ಲಿಂಥೋವನ್ ಅವರು ಆಸ್ಪತ್ರೆಯಲ್ಲಿ ರೋಗಿಗಳ ಇಸಿಜಿಯನ್ನು ದೂರದಿಂದಲೇ  ಮಾನಿಟರ್ ಮಾಡಲು ಬಯೋಟೆಲೆಮೆಟ್ರಿಕ್ ಎಂಬ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿರುವುದು ಟೆಲಿಮೆಡಿಸಿನ್‌   ಬೆಳವಣಿಗೆಯಲ್ಲಿ ಒಂದು ಹೆಗ್ಗುರುತು.

ವಾಸ್ತವವಾಗಿ, 1879 ರಲ್ಲಿಯೇ, ದಿ ಲ್ಯಾನ್ಸೆಟ್  ಎಂಬ ಒಂದು ಅಂತರರಾಷ್ಟ್ರೀಯ ಮೆಡಿಕಲ್ ಜರ್ನಲ್ ಭವಿಷ್ಯದ ವೈದ್ಯಕೀಯ ಕ್ಷೇತ್ರದಲ್ಲಿ ದೂರವಾಣಿಯ ಮಹತ್ವತೆಯ ಬಗ್ಗೆ ಲೇಖನವೊಂದನ್ನು  ಪ್ರಕಟಿಸಿತ್ತು.  1970 ರ ದಶಕದಲ್ಲಿ, ವಿಜ್ಞಾನಿ  ಥಾಮಸ್ ಬರ್ಡ್ ಟೆಲಿಮೆಡಿಸಿನ್ ಎಂಬ ಪದವನ್ನು ಹುಟ್ಟುಹಾಕಿದರು.  ಭೂಕಂಪಗಳು, ಸುನಾಮಿಗಳು, ಜ್ವಾಲಾಮುಖಿ ಸ್ಫೋಟಗಳು, ಭೂಕುಸಿತಗಳು, ಚಂಡಮಾರುತಗಳು, ಪ್ರವಾಹಗಳು ಮುಂತಾದ  ನೈಸರ್ಗಿಕ ವಿಪತ್ತುಗಳ ಸಂದರ್ಭಗಳಲ್ಲಿ  ಭೂ-ಆಧಾರಿತ ಎಲ್ಲಾ ಸಂವಹನಗಳು ಕುಸಿದಿರುವಾಗ, ಉಪಗ್ರಹ ಆಧಾರಿತ ಟೆಲಿಮೆಡಿಸಿನ್‌ನ ಪ್ರಮುಖ ಪಾತ್ರ ವಹಿಸುತ್ತದೆ. 1985 ರಲ್ಲಿ ಮೆಕ್ಸಿಕೊ ನಗರ ಭೂಕಂಪ ಉಂಟಾದಾಗ ಹಾಗೂ 1988 ರಲ್ಲಿ ಸೋವಿಯತ್ ಅರ್ಮೇನಿಯಾ ಭೂಕಂಪದ ಸಂದರ್ಭದಲ್ಲಿ,

ಉಪಗ್ರಹ ಆಧಾರಿತ ಟೆಲಿಮೆಡಿಸಿನ್ ಸೇವೆಯನ್ನು ಬಳಸಿಕೊಂಡು ನಾಸಾ ವಹಿಸಿದ ಪಾತ್ರ ಗಮನಾರ್ಹವಾದುದು. ಟೆಲಿಫೋನ್, ರೇಡಿಯೋ, ಟೆಲಿವಿಷನ್, ಸೆಮಿಕಂಡಕ್ಟರ್, ಟ್ರಾನ್ಸಿಸ್ಟರ್‌ಗಳು, ವಿಡಿಯೋ-ಟೆಲಿಫೋನಿ, ಡಿಜಿಟಲ್ ಟೆಲಿಫೋನ್, ವೈರ್‌ಲೆಸ್ ಸಂವಹನ ಸಾಧನಗಳು, ಸ್ಮಾರ್ಟ್‌ಫೋನ್, 2-ವೇ ಸಂವಾದಾತ್ಮಕ ದೂರದರ್ಶನ, ಕಂಪ್ಯೂಟರ್, ರಿಮೋಟ್ ಸೆನ್ಸರ್, ಉಪಗ್ರಹ ಮತ್ತು ಕಂಪ್ಯೂಟರ್ ನೆಟ್‌ವರ್ಕ್‌,   ಹೀಗೆ ನವನವೀನ ಸಂವಹನ ಮತ್ತು ಇತರ ತಂತ್ರಜ್ಞಾನಗಳ ಆವಿಷ್ಕಾರವಾದ ಹಾಗೆ, ಟೆಲಿಮೆಡಿಸಿನ್ ಕೂಡ ತಾಂತ್ರಿಕವಾಗಿ ಅಭಿವೃದ್ಧಿ ಹೊಂದುತ್ತಾ ಇಂದಿನ ಉನ್ನತಮಟ್ಟಕ್ಕೆ ವಿಕಸನಗೊಂಡಿದೆ.  ನಿಸರ್ಗದ ತತ್ವಗಳ ಆಧಾರದ ಮೇಲೆ ಸಂವಹನ  ಹಾಗೂ ಇತರ ತಂತ್ರಜ್ಞಾನಗಳನ್ನು ಆವಿಷ್ಕರಿಸಿ ತಾಂತ್ರಿಕವಾಗಿ ಇಡೀ ಜಗತ್ತನ್ನು  ಒಂದು  ‘ಜಾಗತಿಕ ಗ್ರಾಮ’ ಎಂಬಂತೆ  ಮಾಡಿದ ವಿಜ್ಞಾನಿಗಳಿಗೆಲ್ಲ ಅಭಿವಂದನೆಗಳು.

ಈ ಎಲ್ಲಾ ತಂತ್ರಜ್ಞಾನಗಳಿಂದ ಇಂದು  ನಮಗೆ ವಿಶ್ವದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ  ಕ್ಷಣಮಾತ್ರದಲ್ಲಿ ಸಂವಹನ ಮಾಡಲು ಸಾಧ್ಯವಾಗಿದೆ.  ಟೆಲಿಮೆಡಿಸಿನ್‌ಗೆ ಸಂಬಂಧಿಸಿದಂತೆ, ಭಾರತದ ಅನೇಕ ಆಸ್ಪತ್ರೆಗಳು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಮಾಹಿತಿ ಮತ್ತು ಸೇವೆಗಳ ಪರಸ್ಪರ ಹಂಚಿಕೆಗಾಗಿ   ಅತ್ಯುತ್ತಮ ಸಂವಹನ ವ್ಯವಸ್ಥೆಯನ್ನು ಹೊಂದಿವೆ.  ದೂರದ ಅಮೆರಿಕ ಅಥವಾ ಇಂಗ್ಲೆಂಡ್ ನಲ್ಲಿರುವ  ವೈದ್ಯರು  ತಮ್ಮ  ಪರಿಣತಿಯನ್ನು ಭಾರತದಲ್ಲಿರುವ ಆಸ್ಪತ್ರೆಗಳಿಗೆ ವಿಸ್ತರಿಸಬಹುದು, ಅದೇ ರೀತಿ, ಭಾರತದ ತಜ್ಞ ವೈದ್ಯರು  ತಮ್ಮ ಜ್ಞಾನವನ್ನು ಇತರ ದೇಶದ ವೈದ್ಯರೊಂದಿಗೆ ಹಂಚಿಕೊಳ್ಳಬಹುದು.

ಇತ್ತೀಚಿನ ವರ್ಷಗಳಲ್ಲಿ  ಮಾಹಿತಿ ತಂತ್ರಜ್ಞಾನವನ್ನು ಸಂವಹನ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಿ  ಟೆಲಿಮೆಡಿಸಿನ್ ಅನ್ನು ಇನ್ನಷ್ಟು ಹೆಚ್ಚು ಪರಿಣಾಮಕಾರಿ ಆರೋಗ್ಯ ಸೇವೆಯನ್ನಾಗಿ  ಅಭಿವೃದ್ಧಿಪಡಿಸಲಾಗಿದೆ.   1966 ರಲ್ಲಿ ನೋಯ್ಡಾದ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (ಸಿ-ಡಿ.ಎ.ಸಿ.) ಸಂಸ್ಥೆಯು   ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಆಸ್ಪತ್ರೆ ಮಾಹಿತಿ ವ್ಯವಸ್ಥೆ ಒದಗಿಸುವ ಸಾಫ್ಟ್‌ವೇರ್ ಅನ್ನು ಲಖನೌದಲ್ಲಿರುವ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ  ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಯಿತು. ಪ್ರಸ್ತುತ,  ಎನಿವೇರ್ ಕೇರ್ (AnywhereCare), ಇವಿಸಿಟ್ (eVisit),  ನೆಕ್ಸ್‌ಹೆಲ್ತ್ (NexHealth), ವಿಸೀ (VSee), ಪೇಷಂಟ್ ಪಾಪ್ (PatientPop), ಇತ್ಯಾದಿ ಟೆಲಿಮೆಡಿಸಿನ್  ಸಾಫ್ಟ್‌ವೇರ್ ಪ್ರೋಗ್ರಾಮ್‌ಗಳಿವೆ;  ಹಿಂದಿನ ದಿನಗಳಿಗೆ ಹೋಲಿಸಿದರೆ  ಇಂದು ವೈದ್ಯರು  ತಮಗೆ ಅನುಕೂಲವಾದ ಸಾಫ್ಟ್ವೇರ್ ಗಳನ್ನು ಆಯ್ಕೆ ಮಾಡಿಕೊಂಡು ಟೆಲಿಮೆಡಿಸಿನ್ ಸೇವೆಯನ್ನು ಇನ್ನೂ ಹೆಚ್ಚಿನ ದಕ್ಷತೆಯೊಂದಿಗೆ ನೀಡಲು  ಅವಕಾಶವಿದೆ. ಅಂತೆಯೇ,   ಪ್ರಸ್ತುತ  ‘ಆ್ಯಪ್ ಯುಗದಲ್ಲಿ’  ಟೆಲಿಮೆಡಿಸಿನ್ ಅನ್ನು ಸಹ  ಅನೇಕ ಆ್ಯಪ್ ‌ಗಳೊಂದಿಗೆ ಆಧುನೀಕರಿಸಲಾಗಿದೆ; ಲೈಬ್ರೇಟ್ (Lybrate); ಪೋರ್ಟಿಯಾ (Portea); ಪ್ರಾಕ್ಟೊ (Practo) ಬಳಕೆಯಲ್ಲಿರುವ ಕೆಲವು  ಟೆಲಿಮೆಡಿಸಿನ್ ಅಪ್ಲಿಕೇಶನ್‌ಗಳು. ಸಾಕುಪ್ರಾಣಿಗಳು ನಮ್ಮ ಜೀವನದ ಭಾಗವಾಗಿರುವುದರಿಂದ ಅವುಗಳ ಆರೈಕೆ, ಚಿಕಿತ್ಸೆಗಾಗಿ ಪಶುವೈದ್ಯರಿಗೆ ಟೆಲಿಮೆಡಿಸಿನ್ ಸೇವೆಯನ್ನು ಕಲ್ಪಿಸಲು ಅನುಕೂಲವಾಗುವ ‘ಅನಿಪಾನಿಯನ್’ (Anipanion) ಆ್ಯಪ್ ಕೂಡ ಲಭ್ಯವಿದೆ.

ಭಾರತ ಸರ್ಕಾರದ  ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು  ಕೊರೊನಾವೈರಸ್ (SARS-CoV-2)  ಸೋಂಕಿನ ವಿರುದ್ಧ ಸುರಕ್ಷತಾ ಕ್ರಮವಾಗಿ ಸಾರ್ವಜನಿಕರಿಗೆ ಉಪಯೋಗವಾಗಲು  ‘ಆರೋಗ್ಯಸೇತು’ ಎಂಬ ಮೊಬೈಲ್ ಆ್ಯಪ್  ಇತ್ತೀಚೆಗೆ ಬಿಡುಗಡೆ ಮಾಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.    ಉಚಿತ ಕರೆ ಮತ್ತು ಚಾಟ್  ಮಾಡಲು  ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಸ್ಟಾಲ್  ಆಗಿರುವ ಸ್ಕೈಪ್  ಮತ್ತು ವಾಟ್ಸಾಪ್ ಈಗಾಗಲೇ ಜನಪ್ರಿಯತೆ ಗಳಿಸಿವೆ.  ಈ ಆ್ಯಪ್ ಗಳನ್ನು ಬಳಸಿಕೊಂಡು ಎಷ್ಟೇ ದೂರದಲ್ಲಿದ್ದರೂ ವೈದ್ಯರು ಮತ್ತು ರೋಗಿಯು ಒಬ್ಬರಿಗೊಬ್ಬರು ಲೈವ್ ಆಗಿ ಸಂವಹನ ಮಾಡಬಹುದು. ಕರ್ನಾಟಕ ಸೇರಿದಂತೆ ಭಾರತದಲ್ಲಿರುವ ಕೆಲವು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳು ಕಸ್ಟಮೈಸ್ ಮಾಡಿದ-ಅಪ್ಲಿಕೇಶನ್‌ಗಳ ಸಹಾಯದಿಂದ ತಮ್ಮ ರೋಗಿಗಳಿಗೆ  ಆರೋಗ್ಯ ಸೇವೆಗಳನ್ನು ವಿಸ್ತರಿಸಿರುವುದು ಶ್ಲಾಘನೀಯ.

ಇಂದು, ಮೊಬೈಲ್ ಫೋನ್ ನಮ್ಮ ಜೀವನದ  ಒಂದು  ಅವಿಭಾಜ್ಯ ಅಂಗವಾಗಿದೆ; ಕ್ಯಾಮೆರಾ, ಸ್ಕ್ಯಾನರ್, ಬ್ರೌಸರ್, ಎಂಬೆಡೆಡ್ ಮೆಮೊರಿ, ಪಠ್ಯ ಸಂದೇಶ, ಧ್ವನಿ ಸಂದೇಶ, ನೆಟ್ ಪ್ಯಾಕ್ , ತರಹೇವಾರಿ ಆ್ಯಪ್ ಗಳು, ಮತ್ತು ಇನ್ನಿತರ ಸೌಲಭ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್  ಟೆಲಿಮೆಡಿಸಿನ್‌ನ ಪ್ರಯೋಜನವನ್ನು ಪಡೆಯಲು ತುಂಬಾ ಉಪಯುಕ್ತವಾಗಿದೆ.  ಟೆಲಿಮೆಡಿಸಿನ್ ಸೇವೆಯನ್ನು ಒದಗಿಸಲು, ಅತ್ಯುತ್ತಮವಾದ ಸಂವಹನ ತಂತ್ರಜ್ಞಾನಗಳು, ಸಾಫ್ಟ್‌ವೇರ್, ಮೊಬೈಲ್ ಅಪ್ಲಿಕೇಶನ್‌ಗಳು, ವೈದ್ಯಕೀಯ ಗ್ಯಾಜೆಟ್‌ಗಳು, ಸೇವಾ ಪೂರೈಕೆದಾರರು,  ಎಲ್ಲವೂ ಇರುವುದು,  ಅಭಿವೃದ್ಧಿ ಪಡಿಸಿರುವುದು ಸರಿ.  ಎಲ್ಲಕ್ಕಿಂತ ಮುಖ್ಯವಾಗಿ, ಅಂತಿಮ ಬಳಕೆದಾರರು, ಅಂದರೆ ಜನಸಾಮಾನ್ಯರು; ಟೆಲಿಮೆಡಿಸಿನ್ ಬಗ್ಗೆ  ಜನಸಾಮಾನ್ಯರಿಗೆ ಅರಿವು ಇಲ್ಲದಿದ್ದರೆ, ಯಾವುದೂ ಉಪಯುಕ್ತವಾಗುವುದಿಲ್ಲ. ಆದ್ದರಿಂದ, ಟೆಲಿಮೆಡಿಸಿನ್ ಮತ್ತು ಅದರ ಮಹತ್ವದ ಬಗ್ಗೆ ಸಾರ್ವಜನಿಕರಿಗೆ, ವಿಶೇಷವಾಗಿ ಗ್ರಾಮೀಣ ಭಾರತದ ಜನರಿಗೆ ಜಾಗೃತಿ ಮೂಡಿಸುವುದು ಅಷ್ಟೇ ಮುಖ್ಯವಾಗಿದೆ. ಭಾರತವು WHO ಶಿಫಾರಸು ಮಾಡಿದ ವೈದ್ಯರ ಜನಸಂಖ್ಯಾ ಅನುಪಾತವನ್ನು ಸಾಧಿಸುತ್ತದೆ

ವಿಸ್ತಾರದಲ್ಲಿ ಜಗತ್ತಿನ ಏಳನೇ ಬೃಹತ್ ರಾಷ್ಟ್ರವಾಗಿರುವ ಭಾರತವು  ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಪ್ರಕಾರ, ಕನಿಷ್ಠ ವೈದ್ಯ-ಜನಸಂಖ್ಯೆಯ ಅನುಪಾತವು 1:1000 (ಅಂದರೆ ಪ್ರತಿ  1,000 ಜನರಿಗೆ ಕನಿಷ್ಠ ಒಬ್ಬ ವೈದ್ಯರು) ಇರಬೇಕು. ವಿಶ್ವಬ್ಯಾಂಕ್ 2017 ರ ಮಾಹಿತಿಯ ಪ್ರಕಾರ, ಭಾರತದಲ್ಲಿ ಈ ಅನುಪಾತವು 0.8:1000. ಆದ್ದರಿಂದ, ದೇಶದ ಎಲ್ಲಾ ಜನರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವುದು ಒಂದು ದೊಡ್ಡ ಸವಾಲು.  ಭಾರತವು,  ವಿ. ಆ. ಸಂ. ನಿಗದಿಪಡಿಸಿರುವ ವೈದ್ಯ:ಜನಸಂಖ್ಯಾ ಅನುಪಾತವನ್ನು ಸಾಧಿಸುವತ್ತ ಹೆಜ್ಜೆ ಹಾಕುತ್ತಿರುವುದು ಒಂದು ಆಶಾಕಿರಣ. ಆದಾಗ್ಯೂ, ಹೆಚ್ಚಿನ ನೋಂದಾಯಿತ ವೈದ್ಯಕೀಯ ಚಿಕಿತ್ಸಕರು (Registered Medical Practitioners; ಆರ್‌.ಎಂ.ಪಿ.) ತಮ್ಮ ವೃತ್ತಿ ಜೀವನವನ್ನು ನಡೆಸಲು ಹಳ್ಳಿಗಳಿಗಿಂತ ಪಟ್ಟಣಗಳು ​​ಅಥವಾ ನಗರಗಳನ್ನು ಬಯಸುವುದು ಒಂದು ಸಹಜ ಪ್ರಕ್ರಿಯೆ. ಇಂತಹ ಸನ್ನಿವೇಶಗಳಲ್ಲಿ, ಟೆಲಿಮೆಡಿಸಿನ್  ಬಹಳ ಮಹತ್ತರವಾದ ಸ್ಥಾನವನ್ನು ಪಡೆಯುತ್ತದೆ.   ಆದರೆ ಇದನ್ನು ಸಾಧ್ಯ ಗೊಳಿಸಲು ಗ್ರಾಮೀಣ ಪ್ರದೇಶಗಳಲ್ಲಿ ಸಂವಹನಕ್ಕಾಗಿ ಉನ್ನತ ಶ್ರೇಣಿಯ ನೆಟ್‌ವರ್ಕ್ ಸೌಲಭ್ಯಗಳನ್ನು ಸ್ಥಾಪಿಸುವುದು ಅಷ್ಟೇ ಮುಖ್ಯ.

ಹೆಮ್ಮೆಯ ವಿಷಯ ಏನೆಂದರೆ, ಟೆಲಿಮೆಡಿಸಿನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮತ್ತು ಅಭಿವೃದ್ಧಿಪಡಿಸುವಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವು ವಿಶೇಷ ಸ್ಥಾನವನ್ನು ಹೊಂದಿದೆ. 2001 ರಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಪೊಲೊ ಆಸ್ಪತ್ರೆಯ ಜಂಟಿ ಸಹಭಾಗಿತ್ವದಲ್ಲಿ ಟೆಲಿಮೆಡಿಸಿನ್ ಪೈಲಟ್ ಯೋಜನೆಯೊಂದನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ; ಇದು ಚೆನ್ನೈನ ಆಸ್ಪತ್ರೆಗಳು ಮತ್ತು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಅರಗೊಂಡ ಎಂಬ ಹಳ್ಳಿಗಳ ನಡುವೆ ಸಂಪರ್ಕ ಕಲ್ಪಿಸುವ ಉಪಗ್ರಹ ಆಧಾರಿತ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ.  ಭಾರತ ಸರ್ಕಾರ, ವಿದೇಶಾಂಗ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಇಲಾಖೆ, ಗ್ರಾಮೀಣ ಭಾರತದಲ್ಲಿ ಟೆಲಿಮೆಡಿಸಿನ್ ಅನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ ಮತ್ತು ಈ ನಿಟ್ಟಿನಲ್ಲಿ ಕರ್ನಾಟಕವೂ ಸೇರಿ ಕೆಲವು ರಾಜ್ಯ ಸರ್ಕಾರಗಳು ಸಹ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸಿವೆ.

ರಾಷ್ಟ್ರೀಯ ಗ್ರಾಮೀಣ ಟೆಲಿಮೆಡಿಸಿನ್ ನೆಟ್ವರ್ಕ್ (National Rural Telemedicine Network: NRTN), ಇಂಟಿಗ್ರೇಟೆಡ್ ಡಿಸೀಸ್ ಸರ್ವೈವರ್ಲೆನ್ಸ್ ಯೋಜನೆ (Integrated Disease Surveillance Project: IDSP),  ಕ್ಯಾನ್ಸರ್ ನೆಟ್ವರ್ಕ್ ಇಂಡಿಯಾ (ONCONET),   2005 ರ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಟೆಲಿಮೆಡಿಸಿನ್ ಟಾಸ್ಕ್ ಫೋರ್ಸ್ (National Telemedicine Task Force: NTTF), ಭಾರತದಲ್ಲಿ ಟೆಲಿಮೆಡಿಸಿನ್ ಅನುಷ್ಠಾನಗೊಳಿಸಿರುವ ಸಾಧನೆಗಳಿಗೆ ಕೆಲವು ಸ್ಪಷ್ಟ ಉದಾಹರಣೆಗಳು.  1975 ರಲ್ಲಿ ಗ್ವಾಲಿಯರ್ ನಲ್ಲಿರುವ ಜಿ. ಆರ್.  ಮೆಡಿಕಲ್ ಕಾಲೇಜಿನ ವೈದ್ಯರ ತಂಡವು ರೋಗಿಯೊಬ್ಬರ ಇಸಿಜಿ (ಎಲೆಕ್ಟ್ರೋಕಾರ್ಡಿಯೋಗ್ರಾಮ್) ಅನ್ನು  ಆತನ ಮನೆಯಿಂದ ಆಸ್ಪತ್ರೆಗೆ ತಲುಪಿಸಲು ಕಂಡುಕೊಂಡ ಟೆಲಿ-ಪ್ರಸಾರದ ಒಂದು ನವೀನ ವಿಧಾನ (ಟೆಲಿಫೋನ್ ಮೂಲಕ ರಿಸೀವರ್ ತುದಿಯಲ್ಲಿ ಇಸಿಜಿ ಔಟ್‌ಪುಟ್ ಅನ್ನು ಅಧಿಕ-ಆವರ್ತನ ಧ್ವನಿಯಾಗಿ ಪರಿವರ್ತಿಸುವ ಮೂಲಕ) ಟೆಲಿಮೆಡಿಸಿನ್ ಕ್ಷೇತ್ರದಲ್ಲಿ ಭಾರತದ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ.  2015 ರಲ್ಲಿ ಅಪೊಲೊ ಆಸ್ಪತ್ರೆಗಳ ಸಹಯೋಗದೊಂದಿಗೆ ದೇಶಾದ್ಯಂತ ಇರುವ 60,000 ಸ್ಥಳೀಯ ಸೇವಾ ಕೇಂದ್ರಗಳನ್ನು ಸಾಮಾನ್ಯ ನೆಟ್‌ವರ್ಕ್‌ಗೆ ಸಂಪರ್ಕಿಸಲು ಮತ್ತು  ಆ ಮೂಲಕ ಲಕ್ಷಾಂತರ ನಾಗರಿಕರಿಗೆ ಆರೋಗ್ಯ ಸೇವೆಯನ್ನು ಒದಗಿಸಲು ಭಾರತ ಸರ್ಕಾರವು ಸೆಹಾಟ್ (SEHAT : Social Endeavour for Health and Telemedicine) ಎಂಬ ಯೋಜನೆಯೊಂದನ್ನು  ಅನಾವರಣಗೊಳಿಸಿರುವುದು ಭಾರತದ ಟೆಲಿಮೆಡಿಸಿನ್  ಕ್ಷೇತ್ರದಲ್ಲಿ ಯಶಸ್ಸಿನ ಒಂದು ಮೈಲುಗಲ್ಲು.

ಟೆಲಿಮೆಡಿಸಿನ್‌  ಇದರ ಇನ್ನೊಂದು  ಮುಖ್ಯ  ಪ್ರಯೋಜನವೆಂದರೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ  ಕಾಯುತ್ತಿರುವ ಜನಸಂದಣಿಯಲ್ಲಿ ಸೋಂಕಿತ ರೋಗಿಗಳ  ಮೂಲಕ ಇತರರಿಗೆ ಹರಡುವುದಕ್ಕೆ ಅವಕಾಶ ಇರುವುದಿಲ್ಲ. ಆದಾಗ್ಯೂ, ಟೆಲಿಮೆಡಿಸಿನ್ ಒಂದು ಅಂತಿಮ ಪರಿಹಾರವಲ್ಲ. ಇದರಲ್ಲಿಯೂ ಕೆಲವು ಇತಿಮಿತಿಗಳಿವೆ. ಯಾವುದೇ  ಆಧುನಿಕ,  ಮುಖ್ಯವಾಗಿ ಸಂವಹನ ಸೌಲಭ್ಯಗಳಿಲ್ಲದ ದೂರದ ಪ್ರದೇಶಗಳಲ್ಲಿ ವಾಸಿಸುವ ಸಮುದಾಯಗಳಿಗೆ, ಟೆಲಿಮೆಡಿಸಿನ್ ಉಪಯುಕ್ತತೆಗೆ ಬರುವುದಿಲ್ಲ. ಎಲ್ಲಕ್ಕಿಂತ ಪ್ರಮುಖವಾಗಿ, ರೋಗಿಯ ಸ್ಥಿತಿ ಸೌಮ್ಯ ಅಥವಾ ತೀವ್ರವಾಗಿದ್ದರೆ ಮಾತ್ರ ಟೆಲಿಮೆಡಿಸಿನ್ ಅನ್ವಯಿಸುತ್ತದೆ. ಹೃದಯ ಸ್ತಂಭನ, ಮೆದುಳಿನ ರಕ್ತಸ್ರಾವ, ಅಪಘಾತ, ವಿಷಪೂರಿತ ಹಾವು ಕಡಿತ, ಮುಂತಾದ ತುರ್ತು ಪರಿಸ್ಥಿತಿಗಳಿದ್ದರೆ, ರೋಗಿಗಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ,  ತಕ್ಷಣ ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲು  ಅಥವಾ ತಲುಪಿದ ಕೂಡಲೇ ಚಿಕಿತ್ಸೆ ನೀಡಲು ಸೂಕ್ತ  ವ್ಯವಸ್ಥೆಗಾಗಿ ಆಸ್ಪತ್ರೆಗೆ ಮುಂಚಿತವಾಗಿ ತಿಳಿಸಲು ದೂರವಾಣಿ ಕರೆ ಮಾಡುವ ಮೂಲಕ ಟೆಲಿಮೆಡಿಸಿನ್ ಉಪಯುಕ್ತತೆ ಬರುತ್ತದೆ.

ಜಗತ್ತಿನಾದ್ಯಂತವಿರುವ ಹಬ್ಬಿರುವ ಮಹಾಮಾರಿ ಕೋವಿಡ್ -19 ಹತೋಟಿಗೆ ತರುವ ಪ್ರಸ್ತುತ ಸನ್ನಿವೇಶದಲ್ಲಿ, ರಾಷ್ಟ್ರವ್ಯಾಪಿ (ವಿಶ್ವಾದ್ಯಂತ)  ಲಾಕ್‌ಡೌನ್  ಆಗಿರುವುದು ಅನಿವಾರ್ಯ ಪರಿಸ್ಥಿತಿಯಾಗಿದೆ.  ಈಗಾಗಲೇ ಸುಮಾರು ಒಂದು – ಒಂದುವರೆ   ತಿಂಗಳ ಲಾಕ್‌ಡೌನ್ ಅವಧಿ ಮುಗಿದಿದೆ;   ಕೊರೊನಾವೈರಸ್ ಸೋಂಕು ಸಾಮೂಹಿಕ ಹರಡುವಿಕೆಯ ಅಪಾಯವನ್ನು ತಪ್ಪಿಸಲು  ಲಾಕ್‌ಡೌನ್  ವಿಸ್ತರಣೆಯನ್ನು ಇನ್ನು ಎಷ್ಟು ದಿನಗಳವರೆಗೆ ಮುಂದುವರೆಯುತ್ತದೆ ಎಂಬುದು  ಯಾರಿಗೂ ತಿಳಿದಿಲ್ಲ.   ಮುಂಜಾಗೃತೆಗಾಗಿ, ಅನೇಕ ಆಸ್ಪತ್ರೆಗಳು ಹೊರರೋಗಿ ವಿಭಾಗದ (ಒಪಿಡಿ) ಸೇವೆಗಳನ್ನು ತಾತ್ಕಾಲಿಕವಾಗಿ  ಮುಚ್ಚಿವೆ ಅಥವಾ ನಿರ್ಬಂಧಿಸಿವೆ. ಇದಲ್ಲದೆ, ಕೊರೊನಾವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ತಪ್ಪಿಸಲು ಅನೇಕ ಸ್ಥಳೀಯ ಚಿಕಿತ್ಸಾಲಯಗಳು ಮುಚ್ಚಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ, ಟೆಲಿಮೆಡಿಸಿನ್ ಪಾತ್ರವು ಬಹಳ ನಿರ್ಣಾಯಕವಾಗಿದೆ.

ಕೊರೊನಾವೈರಸ್ (SARS-CoV-2) ಸೋಂಕಿತರು ಯಾರೇ ಇರಬಹುದು ಎಲ್ಲಿಯೇ ಇರಬಹುದು,  ವೈದ್ಯಕೀಯ ತಪಾಸಣೆ ನಡೆಸಿ ಅವರಿಗೆ ಚಿಕಿತ್ಸೆ ನೀಡುವುದು  ಮೊದಲ ಆದ್ಯತೆಯಾಗಿದೆ. ಅದರಲ್ಲಿ ಎರಡು ಮಾತಿಲ್ಲ. ಈ ಮಧ್ಯೆ, ಇತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಬದಿಗೊತ್ತಲು ಸಾಧ್ಯವಿಲ್ಲ; ಕ್ಲಪ್ತ ಸಮಯದಲ್ಲಿ ಚಿಕಿತ್ಸೆಯನ್ನು ಪಡೆಯಲು  ಅವರೂ  ಸಮಾನವಾಗಿ ಅರ್ಹರು. ಆಸ್ತಮಾ, ಸಂಧಿವಾತ, ಕ್ಯಾನ್ಸರ್, ಶ್ವಾಸಕೋಶದ ಕಾಯಿಲೆ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಇಂತಹ  ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಅನೇಕ ರೋಗಿಗಳು ನಮ್ಮ- ನಿಮ್ಮ ನಡುವೆ ಇದ್ದಾರೆ.

ಅನೇಕ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಆವಾಗಾವಾಗ ವರದಿ ಮಾಡಿರುವಂತೆ, ಈ ಲಾಕ್‌ಡೌನ್ ಅವಧಿಯಲ್ಲಿ, ಕೆಲವು ರೋಗಿಗಳು ಸಕಾಲಿಕ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗದೆ ನಿಧನರಾಗಿರುವುದು ತುಂಬಾ ವಿಷಾದದ ಸಂಗತಿ.  ಈ ಹಿನ್ನೆಲೆಯಲ್ಲಿ ಟೆಲಿಮೆಡಿಸಿನ್ ಮೂಲಕ ಸಮಾಜಕ್ಕೆ ಸಹಾಯ ಮಾಡಲು ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಇದು ಒಂದು ಸೂಕ್ತವಾದ ಸಮಯ.  ನಮ್ಮ ಸಮಾಜದಲ್ಲಿ ವೈದ್ಯರಿಗೆ ವಿಶಿಷ್ಟವಾದ ಗೌರವ ಸ್ಥಾನವಿದೆ.  “ವೈದ್ಯೋ ನಾರಾಯಣೋ ಹರಿಃ” ಅಂದರೆ, ಜೀವ ಉಳಿಸುವ ಮಾನವಕುಲದ ಅತ್ಯುತ್ತಮ ಸೇವೆಯನ್ನು ಮಾಡುವ  ವೈದ್ಯರು ದೇವರಿಗೆ ಸಮಾನರು. ಇಂತಹ ಉತ್ಕೃಷ್ಟ ಸೇವೆಯನ್ನು ನೀಡುತ್ತಿರುವ ವೈದ್ಯರುಗಳಿಗೆ ಒಂದು ದೊಡ್ಡ ಹ್ಯಾಟ್ಸಾಫ್.  ಕರ್ನಾಟಕದಲ್ಲಿ ಕೆಲವು ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳು / ವೈದ್ಯಕೀಯ ಕಾಲೇಜುಗಳು ಟೆಲಿಮೆಡಿಸಿನ್ ಸೇವೆಯನ್ನು ಈಗಾಗಲೇ ಪ್ರಾರಂಭಿಸಿರುವುದು ಪ್ರಶಂಸನೀಯ. ಲಾಕ್‌ಡೌನ್‌ ಈ ಸಂಕಷ್ಟ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ,  ಪೊಲೀಸ್ ಇಲಾಖೆ ಹಾಗು ಕೆಲವು  ಟಿವಿ ಚಾನಲ್ ಗಳು ಜನರ ಅನುಕೂಲಕ್ಕಾಗಿ ಟೆಲಿಮೆಡಿಸಿನ್ ಸೇವೆಯನ್ನು ಒದಗಿಸಲು ಆಸ್ಪತ್ರೆಗಳೊಂದಿಗೆ ಕೈಜೋಡಿಸಿ ಸಹಕರಿಸುತ್ತಿರುವುದು ಜನಮೆಚ್ಚುಗೆ ಪಡೆದಿದೆ.

‘ಸ್ಟೋರ್ ಮತ್ತು ಫಾರ್ವರ್ಡ್’, ‘ರಿಮೋಟ್ ಮಾನಿಟರಿಂಗ್’ ಮತ್ತು ‘ರಿಯಲ್-ಟೈಮ್ ಇಂಟರ್ಯಾಕ್ಟಿವ್’,  ಟೆಲಿಮೆಡಿಸಿನ್‌ನ ಯಾವುದಾದರೂ ಒಂದು  ಅಥವಾ ಈ ಮೂರು ಆವೃತ್ತಿಗಳನ್ನು  ಬಳಸಿಕೊಂಡು ವೈದ್ಯರು ತಮ್ಮ ನಿಯಮಿತ ಸೇವೆಯ ಭಾಗವಾಗಿ ಟೆಲಿಮೆಡಿಸಿನ್ ಸೇವೆಯನ್ನು ವಿಸ್ತರಿಸಬಹುದು. ಇನ್ನು ಆರ್ಥಿಕ (ಆದಾಯ) ದೃಷ್ಟಿಕೋನದಿಂದ ನೋಡುವುದಿದ್ದರೆ, ಎಲೆಕ್ಟ್ರಾನಿಕ್ ಹಣ ವರ್ಗಾವಣೆಗೆ ನೆಟ್-ಬ್ಯಾಂಕಿಂಗ್, ಪೇಟಿಎಂ, ಫೋನ್ ಪೆ, ಪೇಪಾಲ್ ಇಂಡಿಯಾ, ಮೊಬಿಕ್ವಿಕ್, ಗೂಗಲ್ ಪೇ ಮುಂತಾದ ಹಲವು ಆಯ್ಕೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಈ ನಿರ್ಣಾಯಕ ಅವಧಿಯಲ್ಲಿ, ಟೆಲಿಮೆಡಿಸಿನ್ ಸೇವೆಯನ್ನು ಒದಗಿಸುವ  ಆಸ್ಪತ್ರೆಗಳು ಮತ್ತು  ವೈದ್ಯರ ಪಟ್ಟಿಯನ್ನು  ಒಳಗೊಂಡಿರುವ ಪ್ರದೇಶವಾರು  ಸಾರ್ವಜನಿಕ ಡೊಮೇನ್  (Public domain) ಒಂದನ್ನು ತಯಾರಿಸಿ ಪತ್ರಿಕೆ, ರೇಡಿಯೋ,  ಟಿವಿ ಚಾನೆಲ್,  ಸಾಮಾಜಿಕ ಮಾಧ್ಯಮಗಳ ಮೂಲಕ  ಸಾರ್ವಜನಿಕರ ಗಮನಕ್ಕೆ ತಂದರೆ ಅದು ಅನೇಕ ಜನರಿಗೆ ಈ ಸಂದರ್ಭದಲ್ಲಿ ಉಪಯುಕ್ತವಾಗುತ್ತದೆ.

Photo courtesy: National Cancer Institute on Unsplash
ಭಾರತ ಸರ್ಕಾರವು ಇತ್ತೀಚೆಗೆ (ಮಾರ್ಚ್ 25, 2020) ನೀತಿ ಆಯೋಗ  ಸಹಯೋಗದೊಂದಿಗೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ವೃತ್ತಿಪರ ನಡವಳಿಕೆ, ಶಿಷ್ಟಾಚಾರ ಮತ್ತು ನೈತಿಕತೆ ನಿಯಂತ್ರಣ, 2002) ಅಡಿಯಲ್ಲಿ ಪರಿಷ್ಕೃತ  ‘ಟೆಲಿಮೆಡಿಸಿನ್ ಪ್ರಾಕ್ಟೀಸ್ ಗೈಡ್‌ಲೈನ್ಸ್’ ಎಂಬ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆಗೊಳಿಸಿದೆ (ವೆಬ್ ಸೈಟ್ ಗಾಗಿ ಕ್ಲಿಕ್ ಮಾಡಲು ಗ್ರಂಥಸೂಚಿ 6). ನೋಂದಾಯಿತ ವೈದ್ಯಕೀಯ ಚಿಕಿತ್ಸಕರು  (ಆರ್. ಎಂ. ಪಿ.) ಇದರಲ್ಲಿರುವ ಮಾರ್ಗಸೂಚಿಗಳನ್ನು ಅನುಸರಿಸಿ, ವಿಡಿಯೋ, ಆಡಿಯೋ, ಇಮೇಲ್ ಅಥವಾ ಅಕ್ಷರ ಸಂದೇಶ ಗಳ ಮೂಲಕ ರೋಗಿಗಳೊಂದಿಗೆ ಸಮಾಲೋಚನೆಗಳನ್ನು ನಡೆಸಿ  ಆರೋಗ್ಯ ಸೇವೆಯನ್ನು ನೀಡಬಹುದು.  ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಮಾರ್ಗದರ್ಶನಗಳನ್ನು ಪಡೆಯಲು ಭಾರತ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  ಆಶ್ರಯದಲ್ಲಿ ಆರೋಗ್ಯ ಮಾಹಿತಿ ಕೇಂದ್ರವು ‘ಸಂವಾದಾತ್ಮಕ ವೆಬ್-ಪೋರ್ಟಲ್ (Interactive Web-Portal)’  ಚಾಲ್ತಿಗೆ ತಂದಿದ್ದು (ವೆಬ್ ಸೈಟ್ ಗಾಗಿ ಕ್ಲಿಕ್ ಮಾಡಲು ಗ್ರಂಥಸೂಚಿ 7),  ಇದರ ಪ್ರಯೋಜನವನ್ನು ಸಹ  ಪಡೆದುಕೊಳ್ಳಬಹುದು.  ಇಂದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ  ಟೆಲಿಮೆಡಿಸಿನ್ ಬಗ್ಗೆ ಮಾಹಿತಿಗಾಗಿ ತಲಕಾಡ ಬೇಕಾಗಿಲ್ಲ, ಬೆರಳ ತುದಿಯಲ್ಲೇ  ಲಭ್ಯ ಇವೆ.

ಸಂಕ್ಷಿಪ್ತವಾಗಿ,  ಟೆಲಿಮೆಡಿಸಿನ್ ಒಂದು  ಸಮಯ ಉಳಿತಾಯದ, ಸುರಕ್ಷಿತ, ನೈಜ,  ಸಮಯೋಚಿತ  ಮತ್ತು ಮಿತವ್ಯಯದ ಉತ್ತಮ ಆರೋಗ್ಯ ಸೇವೆ. ಇದು ಗ್ರಾಮೀಣ / ದೂರದ ಪ್ರದೇಶಗಳಿಗೆ ಮಾತ್ರವಲ್ಲದೆ ಲಾಕ್‌ಡೌನ್‌ನಂತಹ ಅನಿವಾರ್ಯ ಪರಿಸ್ಥಿತಿಗಳಲ್ಲಿಯೂ ಸಹ ಅವಶ್ಯವಿರುವ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸಲು ಇದರ ಉಪಯುಕ್ತತೆ ಅಮೂಲ್ಯವಾದದ್ದು. ದೇಶದಾದ್ಯಂತ  (ಜಗತ್ತಿನಾದ್ಯಂತ) ಕೊರೊನಾವೈರಸ್ ಉಂಟು ಮಾಡಿರುವ ದುಷ್ಪರಿಣಾಮಗಳು  ಬಹು ಆಯಾಮದಾಗಿದ್ದು,  ಅವುಗಳಲ್ಲಿ ತೀವ್ರವಾಗಿ ಬಾಧಿತವಾಗಿರುವ ಒಂದು ಕ್ಷೇತ್ರ ಆರೋಗ್ಯ. ಸಾಂಕ್ರಾಮಿಕ ಕೋವಿಡ್ -19 ಮತ್ತು ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಈ ವಿಷಮ ಪರಿಸ್ಥಿತಿಯಲ್ಲಿ, ಟೆಲಿಮೆಡಿಸಿನ್‌ನ ಪ್ರಯೋಜನವು ಅದರ ಸಂಪೂರ್ಣ ಸಾಮರ್ಥ್ಯದೊಂದಿಗೆ ಗ್ರಾಮೀಣ ಮತ್ತು ನಗರ ಭಾರತದ ಮೂಲೆ ಮೂಲೆಗೂ ತಲುಪಲಿ.

ಗ್ರಂಥಸೂಚಿ

1.      Chellaiyan, V. G., Nirupama, A. Y., & Taneja, N. (2019). Telemedicine in India: Where do we stand?. Journal of Family Medicine and Primary Care, 8(6), 1872.

2.      Bajpai, N., & Wadhwa, M. (2019). Accessing Specialist Services via Telemedicine in India.

3.      Mishra, S. K., Singh, I. P., & Chand, R. D. (2012). Current status of telemedicine network in India and future perspective. Proceedings of the Asia-Pacific Advanced Network, 32(1), 151-163.

4.      Bali, S. (2017). Enhancing the Reach of Health Care Through Telemedicine. Open and Distance Learning Initiatives for Sustainable Development, 339.

5.      World Health Organization. (2010). Telemedicine: opportunities and developments in member states. Report on the second global survey on eHealth. World Health Organization.

6.      https://www.mohfw.gov.in/pdf/Telemedicine.pdf

7.      https://www.nhp.gov.in/telemedicine_pg

8.      https://www.nhm.gov.in/images/pdf/Telemedicine/Telemedicine.pdf

9.      https://www.daijiworld.com/chan/exclusiveDisplay.aspx?articlesID=5181

 

*********

 

 

 

 

 

 

 

 

‍ಲೇಖಕರು avadhi

April 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

 1. Vasundhara k m

  ತುಂಬಾ ಸುದೀರ್ಘವಾಗಿ ಹಾಗೂ ವಿವರವಾಗಿ ಮಾಹಿತಿ ನೀಡಿರುತ್ತೀರಿ. ಸಕಾಲಿಕ ಲೇಖನ

  ಪ್ರತಿಕ್ರಿಯೆ
 2. Thyagam...

  ಅದ್ಭುತವಾದ ಆರ್ಟಿಕಲ್… ಸರ್.. ಪ್ರಸ್ತುತ ಪರಿಸ್ಥಿತಿ ಯಲ್ಲಿ ಜನ ಸಾಮಾನ್ಯರಿಗೆ… ಅರ್ಥ ವಾಗುವ ರೀತಿಯಲ್ಲಿ ತಿಳಿಸಲ್ಪಟ್ಟ ಆರ್ಟಿಕಲ್…. ಅಭಿನಂದನೆಗಳು ಸರ್… ಈಗಾಗಲೇ ನಿಮ್ಮ ಪರಿಸರ ಕ್ಕೆ ಸಂಬಂಧಿಸಿದ ಪುಸ್ತಕ ಗಳನ್ನು ಕೂಡ ಓದಿರುತ್ತೇನೆ… ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಪ್ರಮುಖ ಪಾತ್ರ ವಹಿಸು ತ್ತದೆ…

  ಪ್ರತಿಕ್ರಿಯೆ
 3. ಚಂದ್ರಮ್ಮ. ಎಂ

  ಸರ್, ಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಪ್ರತಿಭೆ. ವ್ಯೆಜ್ಞಾನಿಕ ರೀತಿಯಲ್ಲಿ ವಿಷಯ ಪ್ರಸ್ತುತ ಪಡಿಸುತ್ತಿರುವ ರೀತಿ, ಟಿಪ್ಪಣಿ ಯೊಂದಿಗೆ ವಿವರಿಸುವ ಪರಿ, ಪ್ರತಿಯೊಂದಕ್ಕೂ ಗ್ರಂಥ ಋಣ ಹಾಗೂ ಹೆಚ್ಚಿನ ಮಾಹಿತಿಗಾಗಿ ಲೇಖನಗಳ ಉಲ್ಲೇಖ ಪ್ರತಿಯೊಂದು ನಿಮ್ಮ ಪರಿಶ್ರಮದ ಬರಹದ ಒಳ ಹೊಳಪನ್ನು ಓದುಗರ ಮುಂದೆ ಸುಲಿದ ಬಾಳೆಹಣ್ಣಿನಂತಿಡುತ್ತದೆ.
  ಸಮಕಾಲೀನ ವಿದ್ಯಮಾನ ವಿಷಯವನ್ನು ಸರಳ ಉದಾಹರಣೆ ಯೊಂದಿಗೆ ವಿವರಿಸಿರುವ ರೀತಿ ಅನನ್ಯ.

  ಪ್ರತಿಕ್ರಿಯೆ
 4. ದೇವರಾಜ್ ಬೆಂಗಳೂರು.

  ಟೆಲಿಮೆಡಿಸಿನ್ ಬಗ್ಗೆ ತುಂಬಾ ಚೆನ್ನಾಗಿ ಸಾಮಾನ್ಯರಿಗೂ ಅರ್ಥವಾಗುವ ಹಾಗೆ ವಿವರಿಸದ್ದು, ಪ್ರಸ್ತುತ ಪರಿಸ್ತಿತಿಯಲ್ಲಿ ಅದರ ಬಳಕೆಯ ಅಗತ್ಯತೆಯನ್ನು ತಿಳಿಸುವಲ್ಲಿ ಲೇಖನ ಪ್ರಮುಖವಾದ ಪಾತ್ರ ವಹಿಸಿದೆ. ಅಭಿನಂದನೆಗಳು.

  ಪ್ರತಿಕ್ರಿಯೆ
 5. N RAGHAVA NAIK

  ವಿಷಯವನ್ನು ವಿವರವಾಗಿ ತಿಳಿಸಿದ್ದೀರಿ. ಇದು ಇಂದಿನ ಸಮಸ್ಯೆಗೆ ಉತ್ತಮ ಸಂದೇಶ. Telemedicine ಉಪಯೋಗ ನಮಗೆ ಮನವರಿಕೆ ಮಾಡಿ ಕೊಟ್ಟಿದ್ದಕ್ಕೆ ತುಂಬ ಧನ್ಯವಾದಗಳು.

  ಪ್ರತಿಕ್ರಿಯೆ
  • Prashantha Naik

   ನಿಮ್ಮ ನಿರಂತರ ಬೆಂಬಲ ಮತ್ತು ಪ್ರೋತ್ಸಾಹದ ಪದಗಳಿಗೆ ತುಂಬಾ ಧನ್ಯವಾದಗಳು.

   ಪ್ರತಿಕ್ರಿಯೆ
 6. Prashantha Naik

  ನಿಮ್ಮೆಲ್ಲರ ನಿರಂತರ ಬೆಂಬಲ ಹಾಗೂ ಪ್ರೋತ್ಸಾಹದ ನುಡಿಗಳಿಗೆ ನಾನು ಸದಾ ಚಿರಋಣಿ

  ಪ್ರತಿಕ್ರಿಯೆ
 7. Jayadev K

  Sir very excellent coverage of topic and very nicely written so that common people can understand easily. congrats sir

  ಪ್ರತಿಕ್ರಿಯೆ
 8. Spoorthi Sagarkar

  Very nice & informative article. I really appreciated your quality of work

  ಪ್ರತಿಕ್ರಿಯೆ
 9. Dr. Venkatakrishna K.

  ಉತ್ತಮವಾದ ಲೇಖನ. ಈ ಕಾಲಕ್ಕೆ ಅಗತ್ಯವಾಗಿ ಬೇಕಿರುವ ಟೆಲೆಮೆಡಿಸಿನ್ ವ್ಯವಸ್ಥೆಯ ಬಗ್ಗೆ ಸವಿವರ ಮಾಹಿತಿ.. ಸರಳವಾದ ಭಾಷೆಯಲ್ಲಿ ಸಾಮಾನ್ಯ ಓದುಗನಿಗೂ ಮನಮುಟ್ಟುವಂತ ವಿವರಣೆ. ಈ ಆಸಕ್ತಿದಾಯಕ ಕ್ಷೇತ್ರವನ್ನು ಪರಿಚಯಿಸಿದ ಡಾ. ಪ್ರಶಾಂತ್ ನಾಯ್ಕರಿಗೆ ಅಭಿನಂದನೆಗಳು!

  ಪ್ರತಿಕ್ರಿಯೆ
 10. Sure she Devadiga

  ಅದ್ಬುತವಾದ ಲೇಖನ. ಜನಸಾಮಾ ನ್ಯರಿಗೂ ಅಥ೯ವಾಗುವಂತೆ ವಿವರಿಸಿದ್ದೀರಿ.ಅಭಿನಂದನೆಗಳು. ಇನ್ನೂ ಹೆಚ್ಚು ಪ್ರಚಾರಕ್ಕೆ ಓಳಪಡಬೇಕಾಗಿದೆ.

  ಪ್ರತಿಕ್ರಿಯೆ
 11. Vishalakshi M. Hegde

  ಲೇಖನ ಚೆನ್ನಾಗಿದೆ. ಜನಸಾಮಾನ್ಯರಿಗೂ ಅರ್ಥವಾಗುವಂತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಅಗತ್ಯವಾಗಿ ಬೇಕಾಗಿರುವ ವಿಷಯದ ಬಗ್ಗೆ ಬೆರೆದಿರುವ ಲೇಖನ. ನಮ್ಮಲ್ಲಿ ವೈದ್ಯರ ಕೊರತೆಯಿಲ್ಲ ಆದರೆ ಹಳ್ಳಿಗಳಿಗೆ ಅಥವಾ ಜನವಸತಿ ಕಡಿಮೆ ಇರುವ ಕಡೆ ಪರಿಣಿತ ವೈದ್ಯರು ಹೋಗಲು ಮನಸು ಮಾಡುತ್ತಿಲ್ಲ ಅಷ್ಟೇ. ಅಂತಹ ಪ್ರದೇಶಗಳಲ್ಲಿ ಇಂತಹ ವ್ಯವಸ್ಥೆ ತುಂಬಾ ಸಹಕಾರಿಯಾಗಬಲ್ಲುದು.

  ಪ್ರತಿಕ್ರಿಯೆ
 12. Renuka N

  ಬಹಳ ಉತ್ತಮವಾದ ಮಾಹಿತಿಯನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ತಿಳಿಸಿದ್ದೀರಿ. ಧನ್ಯವಾದಗಳು ಪ್ರಶಾಂತ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: