ಲಿಬ್ಯಾ, ಕ್ಯೂಬಾದಲ್ಲಿ ಎರಡು ಹಕ್ಕಿಗಳು

ಫೀಡೆಲ್ ಕ್ಯಾಸ್ಟ್ರೋ ಮತ್ತು ಮೌಮರ್ ಗಡಾಫಿ ಎಂಬ ಎರಡು ಫೀನಿಕ್ಸ್ ಹಕ್ಕಿಗಳು

ಉದಯ್ ಇಟಗಿ

”ಅವಧಿ’ಯಲ್ಲಿ ಪ್ರಕಟವಾಗಿದ್ದ ನನ್ನ ’’ ಅಂಕಣವನ್ನು 2018 ರಲ್ಲಿ ಪುಸ್ತಕವಾಗಿ’ ಹೊರತರಬೇಕೆಂದುಕೊಂಡಾಗ ಅದಕ್ಕೆ ಮುನ್ನುಡಿಯನ್ನು ಯಾರಿಂದ ಬರೆಸಬೇಕು ಎಂದು ಯೋಚಿಸುತ್ತಿರುವಾಗ ನನಗೆ ಮೊದಲು ಹೊಳೆದ ಹೆಸರು ’ಅವಧಿ’ಯ ಸಂಪಾದಕರಾಗಿದ್ದ ಜಿ.ಎನ್.ಮೋಹನ್ ಸರ್ ಅವರದು.

ಅದಕ್ಕೆ ಮುಖ್ಯ ಕಾರಣ ಅವರ ಪುಸ್ತಕ ’ನನ್ನೊಳಗಿನ ಹಾಡು ಕ್ಯೂಬಾ’ ಆಗಷ್ಟೇ ಬಿಡುಗಡೆಯಾಗಿ ಸುದ್ದಿ ಮಾಡಿತ್ತು. ನಾನಿನ್ನೂ ಆ ಪಸ್ತಕವನ್ನು ಓದಿರಲಿಲ್ಲ. ಆದರೆ ಅಮೆರಿಕಾ ಕ್ಯೂಬಾದಲ್ಲಿ ನಡೆಸಿದ ಕುತಂತ್ರಗಳ ಬಗೆಗಿನ ಚಿತ್ರಣ ಆ ಪುಸ್ತಕದಲ್ಲಿದೆ ಎನ್ನುವದನ್ನು ಅಲ್ಲಿ-ಇಲ್ಲಿ ಓದಿ ತಿಳಿದುಕೊಂಡಿದ್ದೆ.

ನನ್ನ ಪುಸ್ತಕವೂ ಲಿಬಿಯಾದಲ್ಲಿ ಅಮೆರಿಕಾ ನಡೆಸಿದ ಹುನ್ನಾರಗಳ ಕುರಿತೇ ಇದ್ದುದರಿಂದ ಮೋಹನ್ ಸರ್ ಗೆ ಈ ವಿಷಯ ಚನ್ನಾಗಿ ಅರ್ಥವಾಗುತ್ತದೆಂದುಕೊಂಡು ಅವರೇ ಸೂಕ್ತವಾದ ವ್ಯಕ್ತಿ ಎಂದು ಅವರನ್ನು ಕೇಳಿಕೊಂಡಾಗ ಅವರು ಆ ಸಮಯದಲ್ಲಿ ಬಿಡುವಿಲ್ಲದ ಕಾರಣ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾ ಆಗುವುದಿಲ್ಲ ಎಂದು ಹೇಳಿಬಿಟ್ಟರು.

ಮುಂದೆ ಯಾರನ್ನು ಹುಡುಕುವದು ಎಂದು ಯೋಚಿಸುತ್ತಿರವಾಗಲೇ ನನಗೆ ತಟ್ಟನೆ ಹೊಳೆದಿದ್ದು ಸಂಧ್ಯಾರಾಣಿ ಮೇಡಮ್ ಅವರ ಹೆಸರು, ಆಗ ಅವರು ’ಅವಧಿ’ಯ ಉಪಸಂಪಾದಕಿಯಾಗಿದ್ದರು ಮತ್ತು ಅದರಲ್ಲಿ ಪ್ರಕಟವಾಗುವ ಎಲ್ಲ ಅಂಕಣಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಎಲ್ಲವನ್ನೂ ಪರಾಮರ್ಶಿಸಿ ಪ್ರಕಟಿಸುವ ಹೊಣೆ ಅವರ ಮೇಲಿದ್ದ ಕಾರಣಕ್ಕಾಗಿ ಅವರು ಹೆಚ್ಚು-ಕಮ್ಮಿ ನನ್ನ ಮೊದಲ ಓದುಗರಾಗಿದ್ದರು. ಹಾಗಾಗಿ ಅವರೇ ಸೂಕ್ತವಾದ ವ್ಯಕ್ತಿ ಎಂದು ನಾನವರಿಗೆ ಫೋನಾಯಿಸಿ ಮುನ್ನುಡಿ ಬರೆದುಕೊಡಿ ಎಂದು ಕೇಳಿಕೊಂಡಾಗ ಅವರೂ ಕೂಡ ಆಗತಾನೆ ಹೊಸ ಪ್ರಾಜೆಕ್ಟ್ ವೊಂದರಲ್ಲಿ ತೊಡಗಿಕೊಂಡಿದ್ದರಿಂದ ಸದ್ಯಕ್ಕೆ ಆಗುವದಿಲ್ಲವೆಂದೂ ಮತ್ತು ಬರೆಯುವದಕ್ಕೆ ತಾವು ಸೂಕ್ತ ವ್ಯಕ್ತಿ ಅಲ್ಲವೆಂದು ಹೇಳುತ್ತಾ ನಯವಾಗಿ ನಿರಾಕರಿಸಿದರು. ನಾನು ಬಿಡದೆ ಅವರನ್ನು ಒತ್ತಾಯಿಸುತ್ತಾ “ಒಂದು ಹೆಣ್ಣಾಗಿ ನೀವು ಗಡಾಫಿಯನ್ನು ಮತ್ತು ಲಿಬಿಯಾವನ್ನು ಹೇಗೆ ನೋಡಬಯಸುತ್ತೀರಿ?’ ಎಂಬುದನ್ನು ಬರೆದುಕೊಡಿ ಎಂದು ಗಂಟುಬಿದ್ದೆ. ಕೊನೆಗೆ ನನ್ನ ಒತ್ತಾಯಕ್ಕೆ ಮತ್ತು ಪ್ರೀತಿಗೆ ಮಣಿದು ಬರೆಯಲು ಒಪ್ಪಿಕೊಂಡರು. ಅದಕ್ಕಾಗಿ ನಾನವರಿಗೆ ಚಿರಋಣಿ.

ಸಂಧ್ಯಾರಾಣಿಯವರು ಮುನ್ನುಡಿ ಬರೆಯುತ್ತಾ “ಉದಯ್ ಇಟಗಿಯವರ ಈ ಪುಸ್ತಕ ಓದುವಾಗ ನನ್ನ ಮನಸ್ಸಿನಲ್ಲಿದ್ದ ಇನ್ನೊಂದು ದೇಶ ಕ್ಯೂಬಾ. ಒಂದು ಅಧಿವೇಶನದಲ್ಲಿ ಭಾಗವಹಿಸಲೆಂದು ಕ್ಯೂಬಾಕ್ಕೆ ಹೋಗಿದ್ದ ಹಿರಿಯ ಮಾಧ್ಯಮ ತಜ್ಞರಾದ ಜಿ.ಎನ್. ಮೋಹನ್ ಅವರು ಕ್ಯೂಬಾವನ್ನು ನೆಪವಾಗಿಟ್ಟುಕೊಂಡು ಇಡೀ ಲ್ಯಾಟಿನ್ ಅಮೆರಿಕಾ ದೇಶಗಳನ್ನು ನಿಯಂತ್ರಿಸಲು ದಾಳ ಉರುಳಿಸುವ ಅಮೆರಿಕಾದ ಹುನ್ನಾರುಗಳನ್ನು ಬಿಡಿಸಿಡುತ್ತಾ ಹೋಗುತ್ತಾರೆ. ಉದಯ್ ಅವರು ಬರೆದ ಈ ಪುಸ್ತಕದ ಹಲವಾರು ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ನನಗೆ ಜಿ.ಎನ್.ಮೋಹನ್ ಅವರ ’ನನ್ನೊಳಗಿನ ಹಾಡು ಕ್ಯೂಬಾ’ ನೆರವಾಯಿತು” ಎಂದು ಆರಂಭದಲ್ಲಿಯೇ ಹೇಳುತ್ತಾರೆ.

ಅವರ ಈ ಮಾತು ಇದೀಗ ನಾನು ”ನನ್ನೊಳಗಿನ ಹಾಡು ಕ್ಯೂಬಾ’ ಪುಸ್ತಕವನ್ನು ಓದಿದ ಮೇಲೆ ನನಗೆ ಮತ್ತೊಮ್ಮೆ ಮನದಟ್ಟಾಯಿತು. ಅದಕ್ಕೆ ಪುಷ್ಟೀಕರಣವೆಂಬಂತೆ ನಾನು ಲಿಬಿಯಾದಲ್ಲಿದ್ದುಕೊಂಡೇ ಅಂಕಣ ಬರೆಯುವಾಗ ಅಲ್ಲಿನ ಬಹಳಷ್ಟು ನಾಗರಿಕರನ್ನು ಭೇಟಿ ಮಾಡಿದ್ದೆ. ಗಡಾಫಿ ಕಾಲದ ಲಿಬಿಯಾ ಹೇಗಿತ್ತು? ಮತ್ತು ಆತನ ನಂತರ ಅದು ಹೇಗಾಯಿತು? ಎನ್ನುವದನ್ನು ಪ್ರತ್ಯಕ್ಷ ಕಣ್ಣಾರೆ ಕಂಡಿದ್ದರೂ ಕ್ರಾಂತಿಯ ನಂತರ ಅಲ್ಲಿಯ ಜನತೆ ಗಡಾಫಿ ಬಗ್ಗೆ ಏನು ಹೇಳುತ್ತಾರೆ ಎನ್ನುವದರ ಆಧಾರದ ಮೇಲೆ ನನಗೆ ಆತನನ್ನು ಹಿಡಿದಿಡುವದು ಮುಖ್ಯವಾಗಿತ್ತು.

ಹಾಗೆಂದೇ ನಾನು ಲಿಬಿಯಾದ ನಾಲ್ಕೂ ಮೂಲೆಗಳನ್ನು ಓಡಾಡಿ ರಹಸ್ಯವಾಗಿ ಆತನ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದೆ. ಆ ಸಮಯದಲ್ಲಿ ಬಹಳಷ್ಟು ಲಿಬಿಯಾದ ಜನತೆ ಮೊಹಮ್ಮದ್ ಗಡಾಫಿಯನ್ನು ಚೆಗುವಾರನಿಗೆ ಹೋಲಿಸುತ್ತಾ ಅವನನ್ನು ಆಫ್ರಿಕಾದ ಚೆಗುವಾರನೆಂದು ಕರೆಯಬಹುದೆಂದು ಹೆಮ್ಮೆಯಿಂದ ಹೇಳಿದ್ದರು. ಮಾತ್ರವಲ್ಲ ಮುಂದುವರಿದು ಆತನನ್ನು ಕ್ಯೂಬಾದ ಹರಿಕಾರ ಫಿಡೆಲ್ ಕ್ಯಾಸ್ಟ್ರೋಗೂ ಹೋಲಿಸಿದ್ದರು. ಆದರೆ ನನಗೆ ಗಡಾಫಿಯನ್ನು ಯಾರಿಗೂ ಹೋಲಿಸದೇ ಅವನನ್ನು ಅವನಿರುವಂತೆ, ಜನರ ಮನದಲ್ಲಿ ರೂಪಿತಗೊಂಡಂತೆ ಹಿಡಿದಿಡುವದು ಮುಖ್ಯವಾಗಿತ್ತು. ಪರಿಣಾಮವಾಗಿ ನನ್ನ ಪುಸ್ತಕದೊಳಗಿನ ಗಡಾಫಿ ರೂಪಿತಗೊಂಡಿದ್ದು ಹೀಗೆ.

ಲೇಖನವನ್ನು ಮುಂದುವರಿಸುವ ಮೊದಲು ನಾನು ನಿಮಗೊಂದು ಸತ್ಯವನ್ನು ಹೇಳಿಬಿಡುತ್ತೇನೆ. ನಾನು 2007 ರಲ್ಲಿ ಲಿಬಿಯಾಕ್ಕೆ ಬಂದಿಳಿದಾಗ ನಮ್ಮ ಕಾಲೇಜಿನಲ್ಲಿ ನನ್ನೊಟ್ಟಿಗೆ ನಾಲ್ಕು ಜನ ಇರಾಕಿ ಪ್ರೊಫೆಸರ್ ಗಳು ಕೆಲಸ ಮಾಡುತ್ತಿದ್ದರು. ನಾನವರನ್ನು ಕಂಡೊಡನೆ ”Was Saddam Hussein really so cruel? Did he really exploit you? How did you tolerate his atrocities?” ಎಂದೆಲ್ಲಾ ಅವರನ್ನು ಕೇಳಿದಾಗ ಅವರಲ್ಲಿ ಒಂದಿಬ್ಬರು ಸಪ್ಪೆ ಮುಖ ಮಾಡಿದರೆ ಇನ್ನೊಬ್ಬರು ಅತ್ತೇ ಬಿಟ್ಟರು.

ನಾನು ಗಾಬರಿ ಬಿದ್ದು ಯಾಕೆ ಏನಾಯಿತೆಂದು ಕೇಳಿದಾಗ ಅವರೆಲ್ಲಾ ಅದು ಅಮೆರಿಕಾ ಹೇಳಿದ ಸುಳ್ಳು ಸುದ್ದಿ, ಇರಾಕಿನಲ್ಲಿದ್ದ ತೈಲ ಸಂಪತ್ತನ್ನು ದೋಚಲು ಅಮೆರಿಕಾ ಏನೆಲ್ಲಾ ಹುನ್ನಾರಗಳನ್ನು ಮಾಡಿತು ಮತ್ತು ಸದ್ದಾಂ ಹುಸೇನ್ ಎಷ್ಟೆಲ್ಲಾ ಒಳ್ಳೆಯವನಾಗಿದ್ದ ಎಂಬುವದನ್ನು ಸೂಚ್ಯವಾಗಿ ಹೇಳಿದ್ದರು. ಅಷ್ಟೇ ಅಲ್ಲದೇ ಸಧ್ಯದಲ್ಲಿಯೇ ಲಿಬಿಯಾಕ್ಕೂ ಕೂಡ ಆ ಗತಿ ಬರಬಹುದೆಂದು ಹೇಳಿದಾಗ ನಾನವರನ್ನು ನಂಬಿರಲಿಲ್ಲ. ಆದರೆ 2011 ರಲ್ಲಿ ಲಿಬಿಯಾದಲ್ಲಿ ಕ್ರಾಂತಿ ಆರಂಭವಾದಾಗ ಜಗತ್ತಿನ ಬಹುತೇಕ ಮಾಧ್ಯಮಗಳು ಗಡಾಫಿ ಮತ್ತು ಆತನ ಲಿಬಿಯಾದ ಬಗ್ಗೆ ವ್ಯತಿರಿಕ್ತವಾದ ಚಿತ್ರಣಗಳನ್ನು ತೋರಿಸುವಾಗ ಅವರ ಮಾತುಗಳು ವಾಸ್ತವದಲ್ಲಿ ಅರಿವಾಗಿ ಅಮೆರಿಕಾ ತನ್ನ ಬೇಳೆ ಬೇಯಿಸಿಕೊಳ್ಳುವದಕ್ಕಾಗಿ ಏನೆಲ್ಲಾ ಮಾಡುತ್ತದೆ ಎಂದು ತಿಳಿದು ಭಾರೀ ನೋವಾಗಿತ್ತು.

’ಅರಬ್ ವಸಂತ” 2010 ರಲ್ಲಿ ಟ್ಯುನಿಶಿಯಾದಲ್ಲಿ ಆರಂಭವಾಗಿ ಈಜಿಪ್ಟ್, ಸಿರಿಯಾದ ಮೂಲಕ ಹಾದು ಕೊನೆಗೆ 2011 ರಲ್ಲಿ ಲಿಬಿಯಾದಲ್ಲಿ ಮುಕ್ತಾಯಗೊಂಡಾಗ ಅದರ ಹಿಂದೆ ಅಮೆರಿಕಾ ಮತ್ತು ಮಿತ್ರ ರಾಷ್ಟ್ರಗಳ ಕೈವಾಡ ಎಷ್ಟಿತ್ತು ಎಂಬುದು ಬಲ್ಲವರಿಗೆ ಮಾತ್ರ ಗೊತ್ತಿತ್ತು. ಈ ಎಲ್ಲ ದೇಶಗಳಲ್ಲಿ ತಮಗೆ ಬೇಡವಾಗಿದ್ದ ನಾಯಕರನ್ನು ಕಿತ್ತೆಸೆದು ತನಗೆ ಬೇಕಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸುವಲ್ಲಿ ಅಂತೂ ಅಮೆರಿಕಾ ಯಶಸ್ವಿಯಾಗಿತ್ತು. ನನಗೆ ಅಮೆರಿಕಾದ ಹುನ್ನಾರಗಳನ್ನು ಟ್ಯುನಿಶಿಯಾದ ಓರ್ವ ನಾಗರಿಕನೊಬ್ಬ ಒಮ್ಮೆ ನಾನು ಕೈರೋದಿಂದ ಟ್ಯುನಿಶಿಯಾದ ಮೂಲಕ ಬೆಂಗಾಜಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ಪ್ರಯಾಣದುದ್ದಕ್ಕೂ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದನು; ಹಾಗೆ ನೋಡಿದರೆ ಟ್ಯುನೀಶಿಯಾದಲ್ಲಿ ಕ್ರಾಂತಿಯೊಂದರ ಅವಶ್ಯಕತೆಯೇ ಇರಲಿಲ್ಲ. ಅಲ್ಲಿಯ ದೊರೆ ಆಡಳಿತವನ್ನು ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದ. ಆದರೆ ಅಮೆರಿಕಾದವರಿಗೆ ಲಿಬಿಯಾದೊಳಕ್ಕೆ ನುಗ್ಗಲು ಒಂದು ನೆಪ ಮತ್ತು ಸಮರ್ಥನೆ ಬೇಕಿತ್ತು. ಹಾಗಾಗಿ ಪಕ್ಕದ ರಾಷ್ಟ್ರವಾದ ಟ್ಯುನಿಶಿಯಾವನ್ನು ದಾಳವಾಗಿ ಉಪಯೋಗಿಸಿಕೊಂಡು ಲಿಬಿಯಾದೊಳಕ್ಕೂ ನುಗ್ಗಿಬಿಟ್ಟರು. ನೇರವಾಗಿ ನುಗ್ಗುವ ಬದಲು ಅಮೆರಿಕಾದವರು ಈ ತಂತ್ರವನ್ನು ಬಳಸಿದರು. ಕೇಳಿ ನಾನು ದಿಗ್ಭ್ರಾಂತನಾಗಿದ್ದೆ.

ನಾನು ಮೋಹನ್ ಅವರ ’ನನ್ನೊಳಗಿನ ಹಾಡು ಕ್ಯೂಬಾ” ಓದಿದ ಮೇಲೆ ಈ ಮೇಲಿನ ಎಲ್ಲ ಘಟನೆಗಳು ನನಗೆ ಮತ್ತೊಮ್ಮೆ, ಮಗದೊಮ್ಮೆ ಮನದಟ್ಟಾದವು. ಅಮೆರಿಕಾದ ಕುತಂತ್ರಕ್ಕೆ, ಅದರ ಸ್ವಾರ್ಥಕ್ಕೆ ಬಲಿಯಾದ ತೃತಿಯ ಜಗತ್ತಿನ ರಾಷ್ಟ್ರಗಳು ಎಷ್ಟೊಂದಿಲ್ಲ? ಪ್ರತಿ ಸಾರಿ ಅಮೆರಿಕಾ ಈ ರಾಷ್ಟ್ರಗಳಲ್ಲಿ ತಮಗೆ ಬೇಕಾದ ಹೊಸದೊಂದು ಸರಕಾರವನ್ನು ಸ್ಥಾಪಿಸಿದಾಗ ಹೊರಜಗತ್ತಿಗೆ ಗೊತ್ತಾಗುವ ಸತ್ಯವೇ ಬೇರೆ, ಒಳಜಗತ್ತಿನಲ್ಲಿರುವ ಸತ್ಯವೇ ಬೇರೆ.

ಜಗತ್ತಿನ ಅತ್ಯಂತ ಹೈಟೆಕ್ ಆದ ಎಪಿ (ಅಸೋಸಿಯೇಟ್ ಪ್ರೆಸ್) ಸುದ್ದಿ ಸಂಸ್ಥೆಯು ಅಮೆರಿಕಾದವರ ಕೈಯಲ್ಲಿರಬೇಕಾದರೆ ತಮಗೆ ಬೇಕಾದಂತೆ ಸುದ್ದಿಯನ್ನು ತಿರುಚಿ ಇಡಿ ಜಗತ್ತಿಗೆ ಕಾಮಾಲೆ ಕಣ್ಣು ತೊಡಿಸುವದು ಆ ದೇಶಕ್ಕೆ ಕಷ್ಟದ ಕೇಲಸವೇನಲ್ಲ. ಈ ಕೆಲಸವನ್ನು ಅದು ಮುಂಚಿನಿಂದಲೂ ವ್ಯವಸ್ತಿತವಾಗಿ ಮಾಡಿಕೊಂಡು ಬಂದಿರುವದರಿಂದ ಇತಿಹಾಸದಲ್ಲಿ ಎಷ್ಟೋ ಸತ್ಯಗಳು ಹಾಗ್ಹಾಗೆ ಹೂತುಹೋಗಿವೆ ಮತ್ತು ಅಮೆರಿಕಾದಿಂದಾದ ಅನ್ಯಾಯಗಳು ಕೂಡಾ ಮುಚ್ಚಿಹೋಗಿವೆ, ಈ ಹಿನ್ನೆಲೆಯಲ್ಲಿ ಮೋಹನ್ ಅವರ ಪುಸ್ತಕ ’ನನ್ನೊಳಗಿನ ಹಾಡು ಕ್ಯೂಬಾ’ ಅಮೆರಿಕಾ, ಕ್ಯೂಬಾದಲ್ಲಿ ನಡೆಸಿದ ಕುತಂತ್ರಗಳು, ಫಿಡೆಲ್ ಕ್ಯಾಸ್ಟ್ರೋಗೆ ಕೊಟ್ಟ ಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾ ಹೋಗುತ್ತದೆ.

ಈ ಪುಸ್ತಕವನ್ನು ಓದುವಾಗ ಗದಾಫಿಯ ಲಿಬಿಯಾ ಮತ್ತು ಫೀಡೆಲ್ ಕ್ಯಾಸ್ಟ್ರೋರವರ ಕ್ಯೂಬಾ ಒಟ್ಟೊಟ್ಟಿಗೆ ನನ್ನ ಕಣ್ಮುಂದೆ ಸಾಗುತ್ತಿದ್ದವು. ಮುಖ್ಯವಾಗಿ ಈ ಇಬ್ಬರೂ ನಾಯಕರುಗಳಲ್ಲಿ ಸಾಕಷ್ಟು ಸಾಮ್ಯತೆಗಳಿರುವದು ಕಂಡು ಬಂತು. ಇಬ್ಬರೂ ರಾಜಕೀಯವಾಗಿ ಬಹಳಷ್ಟು ಸಂವೇದನಾಶೀಲರಾಗಿದ್ದರು. ಇಬ್ಬರೂ ತಂತಮ್ಮ ದೇಶದ ಜನಕ್ಕಾಗಿ ಬಡಿದಾಡಿದರು. ಇಬ್ಬರೂ ತಮ್ಮ ದೇಶದ ಜನತೆಗಾಗಿ ಒಂದು ಘನತೆಯನ್ನು ತಂದುಕೊಟ್ಟರು. ಇಬ್ಬರೂ ಹಸಿದವರಿಗೆ ಅನ್ನ ನೀಡಿದವರು, ಬಾಯಾರಿದವರಿಗೆ ನೀರೂಣಿಸಿದರು, ಬೆತ್ತಲೆ ನಿಂತವರಿಗೆ ಬಟ್ಟೆ ನೀಡಿದವರು, ಸೂರಿಲ್ಲದವರಿಗೆ ಆಶ್ರಯ ನೀಡಿದವರು, ವಿಧವೆಯರಿಗೆ, ರೋಗಿಗಳಿಗೆ ಆರೋಗ್ಯ ನೀಡಿದರು. ಇಬ್ಬರೂ ಅಮೆರಿಕಾದವರಿಗೆ ಸೆಡ್ಡು ಹೊಡೆದು ನಿಂತರು. ಇಬ್ಬರೂ ಅಮೆರಿಕಾದ ಸಾಮ್ರಾಜ್ಯಶಾಹಿ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು ಮತ್ತು ಅದನ್ನು ತಂತಮ್ಮ ಜನರಲ್ಲಿ ಬಲವಾಗಿ ಬಿತ್ತಿದರು.

ಇದು ಎಷ್ಟು ಬಲವಾಗಿತ್ತೆಂದರೆ ಮೋಹನ್ ಸರ್ ಹೇಳುವಂತೆ ಕ್ಯೂಬನ್ನರು ಸದಾ ಅಮೆರಿಕಾದ ಮೂತಿಗೆ ಗುದ್ದಲು ತುದಿಗಾಲಲ್ಲಿ ನಿಂತಿದ್ದರು. ಅಂತಯೇ ಲಿಬಿಯಾದಲ್ಲಿ ಹುಟ್ಟುವ ಪ್ರತಿಯೊಂದು ಮಗುವೂ ಅಮೆರಿಕನ್ನರ ದ್ವೇಷಿಯಾಗಿಯೇ ಹುಟ್ಟುತ್ತಿತ್ತು. ಇದೇ ಕಾರಣಕ್ಕಾಗಿ ಇಬ್ಬರೂ ಇನ್ನಿಲ್ಲದ ಕಷ್ಟವನ್ನು ಅನುಭವಿಸಿದರು. ಆದರೂ ಅವುಗಳನ್ನೆಲ್ಲಾ ಮೆಟ್ಟಿ ನಿಂತು ಇಬ್ಬರೂ ಹೊಸ ನಾಡೊಂದನ್ನು ಕಟ್ಟಿದರು. ಇಬ್ಬರೂ ಮಾನವ ಸಂಪನ್ಮೂಲ ಅಭಿವೃದ್ಧಿ, ಶಿಕ್ಷಣ, ಆರೋಗ್ಯ. ಕೃಷಿ-ಕೈಗಾರಿಕೆಗಳಿಗೆ ಒತ್ತು ಕೊಟ್ಟರು. ಇಬ್ಬರೂ ವಿಶ್ಚಸಂಸ್ಥೆಯಲ್ಲಿ ಅಮೆರಿಕಾದವರಿಂದ ಅವಮಾನಕ್ಕೊಳಗಾದರು. ಇಬ್ಬರೂ ಅನೇಕ ವರ್ಷಗಳ ಕಾಲ ಅಮೇರಿಕಾದಿಂದ ನಿರ್ಬಂಧಕ್ಕೊಳಗಾದರು. ಮತ್ತು ನಾನಾ ಕಾರಣಗಳಿಗಾಗಿ ಅನೇಕ ಬಾರಿ ಅಮೆರಿಕಾದವರಿಂದ ಹತ್ಯೆಯ ಪ್ರಯತ್ನಕ್ಕೊಳಪಟ್ಟವರು. ಅಮೆರಿಕಾ ಕ್ಯಾಸ್ಟ್ರೋರವರನ್ನು ’ಭೂತ’ ಎಂದು ಕರೆದರೆ ಗಡಾಫಿಯನ್ನು ’ಹುಚ್ಚು ನಾಯಿ’ ಎಂದು ಕರೆಯಿತು.

ಬೇರೆಯವರಿಗೆ ’ಯುದ್ಧ’ ಎಂಬ ಮಾತು ಅಮೆರಿಕಾದ ಬಾಯಲ್ಲಿ ’ಶಾಂತಿ ಕಾರ್ಯಾಚರಣೆ’, ಮಾನವೀಯ ಸಂಬಂಧ ಬೆಳೆಸುವ ಪ್ರಯತ್ನ ಎಂದು ಹೇಳುತ್ತಲೇ ಅಮೆರಿಕಾ ಇರಾಕ್ ಮತ್ತು ಲಿಬಿಯಾದೊಳಕ್ಕೆ ನುಗ್ಗಿ ಅಲ್ಲಿನ ಶ್ರೇಷ್ಟ ಸರ್ವಾಧಿಕಾರಿಗಳನ್ನು ಕಿತ್ತೆಸೆದು ಅಲ್ಲಿನ ತೈಲ ಸಂಪತ್ತನ್ನು ಕೊಳ್ಳೆ ಹೊಡೆದಿದ್ದೆಷ್ಟೋ? ಅಮೆರಿಕಾದೊಂದಿಗೆ ವ್ಯವಹರಿಸುವ ದೇಶಗಳು ಕ್ಯೂಬಾದೊಡನೆ ಸಂಬಂಧ ಬೆಳೆಸುವದನ್ನು ಅಮೆರಿಕ ಇಚ್ಚಿಸುವದಿಲ್ಲ ಎನ್ನುವ ಮೋಹನ್ ಸರ್ ಅವರ ಮಾತು ಕ್ಯೂಬಾದಲ್ಲಿ ಎಷ್ಟು ಸತ್ಯವಿತ್ತೋ ಅಷ್ಟೇ ಸತ್ಯ ಲಿಬಿಯಾದಲ್ಲಿ ಕೂಡಾ ಇತ್ತು.

ನನಗೆ ಇನ್ನೊಂದು ಮುಖ್ಯ ಅಂಶ ಕಂಡು ಬಂದುದೇನೆಂದರೆ ಈ ಎರಡೂ ದೇಶಗಳು ಸಮಾಜವಾದದಲ್ಲಿ ನಂಬಿಕೆಯಿಟ್ಟು ಅಕ್ಷರಶಃ ಅದನ್ನು ಜಾರಿಗೆ ತಂದರು. ಈ ಎರಡೂ ದೇಶಗಳಲ್ಲಿನ ಅಲ್ಲಿನ ರಾಜಕೀಯ ನಡೆ ಒಂದೇ ತೆರನಾಗಿತ್ತು. ಕ್ಯೂಬಾದಲ್ಲೂ ಮತ್ತು ಲಿಬಿಯಾದಲ್ಲಿ ಚುನಾವಣಾ ಪ್ರಕ್ರಿಯೆ ಹೆಚ್ಚು ಕಮ್ಮಿ ಒಂದೇ ತೆರ ಇರುವಂಥದ್ದು. ಮುಕ್ತ ಮತದಾನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದರು.

ಕ್ಯೂಬಾದಲ್ಲಿರುವಂತೆಯೇ ಲಿಬಿಯಾದಲ್ಲಿಯೂ ಸಹ ರಾಜಕೀಯ ವ್ಯಕ್ತಿಗಳು ಜನರಿಗೆ ಅತಿ ಸುಲಭವಾಗಿ ಸಿಗುತ್ತಿದ್ದರು, ಸಾಮಾನ್ಯ ಜನರಲ್ಲಿ ತಾವೂ ಸಾಮಾನ್ಯ ಜನರಾಗಿ ಬದುಕುತ್ತಿದ್ದರು. ಆಯ್ಕೆಯಾದ ಪ್ರತಿನಿಧಿಗಳೂ ಅಷ್ಟೇ. ಕಾರು, ಬಂಗಲೆ, ಮತ್ತೆ ಐದು ವರ್ಷಕ್ಕೆ ಕೈ ಜೋಡಿಸುವ ಯಾವ ಪದ್ಧತಿಯೂ ಇರಲಿಲ್ಲ  ನಾನು ಕೆಲಸ ಮಾಡುವ ‘ಘಾತ್’ ಪ್ರಾಂತ್ಯದ ಕಾರ್ಮಿಕ ಮಂತ್ರಿಯೊಬ್ಬರು ನನ್ನ ಸಹೋದ್ಯೋಗಿಯಾಗಿದ್ದರು. ಅವರು ಮಂತ್ರಿ ಎಂಬ ಕಾರಣಕ್ಕೆ ಅವರಿಗೆ ಪ್ರತ್ಯೇಕ ಸರಕಾರಿ ಕಾರ್ ಆಗಲಿ, ಬೇರೆ ಸೌಲತ್ತುಗಳಾಗಲಿ ಇರಲಿಲ್ಲ. ತಮ್ಮದೇ ಸ್ವಂತ ಕಾರಿನಲ್ಲಿ ಯಾವುದೇ ಸೆಕ್ಯೂರಿಟಿ, ಎಸ್ಕಾರ್ಟ್ ಇಲ್ಲದೆ ನಮ್ಮ ಕಾಲೇಜಿಗೆ ಬಂದು ಪಾಠ ಮಾಡಿಹೋಗುತ್ತಿದ್ದರು.

ಬ್ಯಾಂಕುಗಳಲ್ಲಿ ಮತ್ತು ಸರಕಾರಿ ಕಛೇರಿಗಳಲ್ಲೂ ಅಷ್ಟೆ, ಅವರಿಗೆ ಯಾವುದೇ ವಿಶೇಷ ರಿಯಾಯಿತಿ ತೋರಿಸುತ್ತಿರಲಿಲ್ಲ. ಎಲ್ಲರಂತೆ ಅವರೂ ಕೂಡ ಕ್ಯೂನಲ್ಲಿ ನಿಂತಿಕೊಂಡು ತಮ್ಮ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದರು. ಜೊತೆಗೆ ಅಲ್ಲಿನ ಗವರ್ನರ್ ಗಳ, ಮಂತ್ರಿಗಳು ಮತ್ತು ರಾಜಕೀಯ ಪ್ರತಿನಿಧಿಗಳು ಸಾಮಾನ್ಯರೊಳಗೊಬ್ಬರಾಗಿ ಬದುಕುತ್ತಿದ್ದರು.

ಗಡಾಫಿ ಮತ್ತು ಕ್ಯಾಸ್ಟ್ರೋ ಅವರ ಗೆಳೆತನ ಸಾಯುವವರೆಗೂ ಗಟ್ಟಿಯಾಗಿತ್ತು. 1977 ರ ವಸಂತ ಋತುವಿನ ಒಂದು ದಿನ ಫಿಡೆಲ್ ಕ್ಯಾಸ್ಟ್ರೋ ಅವರು ಲಿಬಿಯಾಕ್ಕೆ ಬಂದಿಳಿದಾಗ ಗಡಾಫಿ ಅವರಿಗೆ ರತ್ನಗಂಬಳಿ ಸ್ವಾಗತವನ್ನು ಕೋರಿದ್ದ. ಮಾಧ್ಯಮದ ಕ್ಯಾಮೆರಾಗಳ ಮುಂದೆ ಒಂದು ಕ್ಷಣ ಇಬ್ಬರೂ ಒಬ್ಬರೊನ್ನೊಬ್ಬರು ನೋಡಿಕೊಂಡು ತಮ್ಮ ನಡುವಿನ ಸಾಮ್ಯತೆಗಳಿಗಾಗಿ ಮುಗುಳ್ನಕ್ಕಿದ್ದರು. ನಂತರ ಇಬ್ಬರೂ ಕುಳಿತು ಲಿಬಿಯಾ ಮತ್ತು ಕ್ಯೂಬಾದ ಮುಂದಿನ ಮೂವತ್ತು ವರ್ಷಗಳ ಸಂಬಂಧದ ಒಪ್ಪಂದಕ್ಕೆ ಭದ್ರ ಬುನಾದಿಯನ್ನು ಹಾಕಿದ್ದರು. ಮುಂದೆ ಅಂದರೆ 1980 ರಲ್ಲಿ ಕ್ಯೂಬಾ ಅಮೆರಿಕಾದವರ ದಾಳಿಗೆ ತುತ್ತಾದಾಗ ಗಡಾಫಿ, ಫಿಡೆಲ್ ಕ್ಯಾಸ್ಟ್ರೋ ಅವರಿಗೆ ಸಹಾಯ ಹಸ್ತವನ್ನು ನೀಡಿದ್ದ.

ಕ್ಯೂಬಾದಲ್ಲಿ ಕ್ಯಾಸ್ಟ್ರೋ ಅವರು ಎರಡನೇ ಕಮ್ಯೂನಿಸ್ಟ್ ಪಾರ್ಟಿ ಕಾಂಗ್ರೆಸಿನ ಸೆಕ್ರೆಟರಿಯಾದಾಗ ಗಡಾಫಿ ಅವರನ್ನು ಮನದುಂಬಿ ಹಾರೈಸಿದ್ದ. ಇಬ್ಬರೂ ತಂತಮ್ಮ ದೇಶಗಳನ್ನು ಬಹಳ ಬೇಗನೆ ಅಭಿವೃದ್ಧಿಗೊಳಿಸಿ ಜಗತ್ತಿನ ಭೂಪಟದಲ್ಲಿ ಮಿಂಚಿಸಿತೊಡಗಿದಾಗ ಅಮೆರಿಕಾದವರ ಕೆಂಗಣ್ಣಿಗೆ ಗುರಿಯಾದರು. ಕುಸ್ತಿ ಅಂಕಣದಲ್ಲಿ ಕ್ಯೂಬಾ ತಾನು ಸ್ಪರ್ಧಿ ಎಂದು ಘೋಷಿಸಿದಾಗ ಅಮೆರಿಕದ ಸಿಟ್ಟು ನೆತ್ತಿಗೇರಿತು. ಅಮೆರಿಕಾ ಕ್ಯೂಬಾವನ್ನು ಏಡ್ಸ್ ನಗರವೆಂದು ಅಪಪ್ರಚಾರ ಮಾಡಿತು, ಅತ್ತ ಗಡಾಫಿ ಲಿಬಿಯಾದಲ್ಲಿ ಅಧಿಕಾರ ವಹಿಸಿಕೊಂಡ ತಕ್ಷಣ ಅಮೆರಿಕನ್ ಮಿಲಿಟರಿ ಪಡೆಯನ್ನು ಲಿಬಿಯಾದಿಂದ ಹೊರಗೆ ನೂಕಿದ ದಿನದಿಂದಲೇ ಆತನ ಬಗ್ಗೆಯೂ ಅಪಪ್ರಚಾರ ಶುರುವಾಯಿತು. ಮಾತ್ರವಲ್ಲ ತೈಲ ಕಂಪನಿಗಳ ಗುತ್ತಿಗೆಯನ್ನು ಮರುಪರಿಶೀಲಿಸಿ ಹತೋಟಿಗೆ ತೆಗೆದುಕೊಂಡಾದ ಮೇಲೆ ಅವರ ಆರ್ಥಿಕತೆಗೆ ಬಲವಾದ ಏಟು ಬಿತ್ತು, ಮುಂದೆ ಆತ ಪರಿಚಯಿಸಿದ ಹೊಸ ಹೊಸ ವಿದೇಶಿ ನಿಯಮಗಳು ಮತ್ತು ಆರ್ಥಿಕ ನೀತಿಗಳು ಅವರನ್ನು ಕಂಗೆಡಿಸುತ್ತಾ ಹೋದಂತೆ ಗಡಾಫಿ ಬಗೆಗಿನ ಅಪ ಪ್ರಚಾರವೂ ಹೆಚ್ಚುತ್ತಾ ಹೋಯಿತು.

ಇಬ್ಬರೂ ಹೋರಾಟಗಾರರೇ. ಇಬ್ಬರೂ ಅಮೆರಿಕಾದ ವಿರೋಧಿಗಳೇ. ಇಬ್ಬರೂ ಸಾಮ್ರಾಜ್ಯಶಾಹಿ ಧೋರಣೆಯನ್ನು ಖಂಡಿಸುತ್ತಲೇ ಸಮಾನತೆಯ ಸಿದ್ಧಾಂತಕ್ಕಾಗಿ ಹಪಹಪಿಸಿದವರು. ಅಗಾಧ ಕನಸುಗಳನ್ನು ಕಾಣುತ್ತಲೇ ತಮ್ಮ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದವರು. ಇಬ್ಬರೂ ನವಯುಗದ ಹರಿಕಾರರೇ. ಇಬ್ಬರೂ ಅಮೆರಿಕಾದ ದಾಳಿಗೆ ಹಲವು ಬಾರಿ ತುತ್ತಾದವರೇ. ಆದರೆ ಒಬ್ಬರು (ಫಿಡೆಲ್ ಕ್ಯಾಸ್ಟ್ರೋ) ಇವೆಲ್ಲವುಗಳಿಂದ ಪಾರಾಗಿ ಕೊನೆಯಲ್ಲಿ ಸಹಜ ಸಾವನ್ನು ಸತ್ತರೆ ಇನ್ನೊಬ್ಬರು (ಮೌಮರ್ ಗಡಾಫಿ) ಅಮೆರಿಕಾದ ಕುತಂತ್ರಕ್ಕೆ ಬಲಿಯಾದವರು.

ಗಡಾಫಿ ಹತ್ಯೆಯನ್ನು ಕ್ಯಾಸ್ಟ್ರೋ ಅವರು ಮನುಷ್ಯ ಲೋಕದ ಒಂದು ದುರಂತ ಎಂದು ಹೇಳುತ್ತಾ ಇದು ಅಮೆರಿಕಾದ ಕೇಡಿನ ಪರಮಾವಧಿಯೆಂದು ತೀವ್ರವಾಗಿ ಖಂಡಿಸಿದ್ದರು. ಜೊತೆಗೆ ಲಿಬಿಯಾದಲ್ಲಿ ರಚಿತವಾಗುವ ಹೊಸ ಸರಕಾರವನ್ನು ತಾವು ಗುರುತಿಸುವದಿಲ್ಲ ಎಂದು ಹೇಳಿ ಆ ಕೂಡಲೇ ಲಿಬಿಯಾದಲ್ಲಿದ್ದ ತಮ್ಮ ರಾಯಭಾರ ಕಛೇರಿಯನ್ನು ವಾಪಾಸು ಕರೆಸಿಕೊಂಡಿದ್ದರು. ಇದು ಅವರು ಗಡಾಫಿ ಮೇಲೆ ಇಟ್ಟಿದ್ದ ವಿಶ್ವಾಸವನ್ನು ಸಾಬೀತುಪಡಿಸುತ್ತದೆ. ಅಮೆರಿಕಾ ಕೊಟ್ಟ ಕಷ್ಟಗಳಿಗೆ ಇಬ್ಬರೂ ಫಿನಿಕ್ಸ್ ಹಕ್ಕಿಯಂತೆ ಮತ್ತೆ ಮತ್ತೆ ಹುಟ್ಟಿಬಂದವರು. ಮತ್ತೆ ಮತ್ತೆ ಅವರಿಗೆ ಸಡ್ಡು ಹೊಡೆದು ನಿಂತರು. ದುರಂತವೆಂದರೆ ಅಮೆರಿಕಾದಿಂದಾಗಿ ಈ ಮಹಾನ್ ನಾಯಕರು ಪಟ್ಟ ಕಷ್ಟ ಎಲ್ಲಿಯೂ ಬಹಿರಂಗವಾಗುವದಿಲ್ಲ. ಬದಲಿಗೆ ಹೊರಜಗತ್ತಿಗೆ ಇವರು ಖಳನಾಯಕರೆಂಬಂತೆ ಬಿಂಬಿತರಾಗುತ್ತಾರೆ.

ಹಾಗಾಗಿ ನನಗೆ ಮತ್ತು ಮೋಹನ್ ಸರ್ ಅಂಥವರಿಗೆ ಗಡಾಫಿಯ ಲಿಬಿಯಾ ಮತ್ತು ಕ್ಯಾಸ್ಟ್ರೋರವರ ಕ್ಯೂಬಾ ನೋಡಿದಾಗಲೆಲ್ಲಾ ಸಹಜವಾಗಿ ಅವರ ಬಗ್ಗೆ ಹೆಮ್ಮೆಯ ಭಾವವೊಂದು ಮೂಡುತ್ತದೆ. ಮರುಕ್ಷಣವೇ ಅಮೆರಿಕಾದಿಂದಾಗಿ ಇವರಿಬ್ಬರು ಪಟ್ಟ ಕಷ್ಟವನ್ನು ನೋಡಿ ಕಣ್ಣೀರು ಬರುತ್ತದೆ. ಆ ಕಣ್ಣೀರು ಒಮ್ಮೊಮ್ಮೆ ನಮ್ಮ ಎದೆಯ ನೋವಾಗಿಯೂ ಕಾಡತೊಡಗುತ್ತದೆ. ಇದನ್ನೆಲ್ಲಾ ಅರ್ಥಮಾಡಿಕೊಳ್ಳಲು ಜನರು ಪೂರ್ವಾಗ್ರಹಪೀಡಿತರಾಗಿರಬಾರದು. ಇದಕ್ಕಿಂತ ಹೆಚ್ಚಾಗಿ ಜನರ ಹೃದಯದಲ್ಲಿ ಪ್ರೀತಿ ಇರಬೇಕು. ಉದಾರ ಮನೋಭಾವ ಇರಬೇಕು. ಪ್ರೀತಿ-ವಾತ್ಸಲ್ಯ ಇರುವ ಜನಕ್ಕೆ ಇವನ್ನೆಲ್ಲಾ ಅರ್ಥಮಾಡಿಸಬಹುದು. ಆದರೆ ಇಲ್ಲದವರಿಗೆ ಅರ್ಥ ಮಾಡಿಸುವದಾದರೂ ಹೇಗೆ?

‍ಲೇಖಕರು avadhi

April 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ನ . ವಿಶ್ವನಾಥ

    ಚೆನ್ನಾಗಿ ನಿರೂಪಣೆಯಾಗಿದೆ. ಲಿಬ್ಯ
    ಡೈರಿ ಪುಸ್ತಕವನ್ನು ಎಂದಾದರೂ ಓದಲೇಬೇಕೆನಿಸಿದೆ.ನಿಮಗೆ ಒಳ್ಳೆಯದಾಗಲಿ

    ಪ್ರತಿಕ್ರಿಯೆ
  2. Uday Itagi

    ಸರ್,
    ಈ ಪುಸ್ತಕ Amazon.com ನಲ್ಲಿ ಲಭ್ಯವಿದೆ. ಲಾಕ್ ಡೌನ್ ಮುಗಿದ ಮೇಲೆ ತರಿಸಿಕೊಳ್ಳಬಹುದು. ಅದರ ಲಿಂಕ್ ಇಲ್ಲಿದೆ.
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ಪ್ರತಿಕ್ರಿಯೆ
  3. Uday Itagi

    ಸರ್,
    ಈ ಪುಸ್ತಕ Amazon.com ನಲ್ಲಿ ಲಭ್ಯವಿದೆ. ಲಾಕ್ ಡೌನ್ ಮುಗಿದ ಮೇಲೆ ತರಿಸಿಕೊಳ್ಳಬಹುದು. ಅದರ ಲಿಂಕ್ ಇಲ್ಲಿದೆ. https://www.amazon.in/dp/8193901657/ref=cm_sw_r_fm_apa_i_jWyQEbQ1NJ6PR?fbclid=IwAR38lI5CIxSV3khEGK-WsWPUBhi63wfPQtfQyAJF3CN3FLdzHk_goIWJMWQ
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: