ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊನೆ ವಿದಾಯ…

ಆರ್ ಎನ್ ದರ್ಗಾದವರ

ಇಷ್ಟೆಲ್ಲ ಘಟಿಸಿದ ಮೇಲೂ
ಹೇಳಲೇಬೇಕೆನಿಸಿದ ಮಾತುಗಳಿಗೆ
ಮುಕ್ತ ಅವಕಾಶವಿತ್ತು

ಕುಳಿತು ಹರಟೆ ಹೊಡೆದ ಮಾತುಗಳೀಗ
ಅಣುಕಿಸುತ್ತಾ ಬಿಡುಗಡೆಗೊಳ್ಳದಂತೆ
ವೃತ್ತ ಎಳೆದಿವೆ
ಇಬ್ಬರ ಮಧ್ಯ ಇಣುಕುತ್ತಿದ್ದ
ಪಾತರಗಿತ್ತಿಯ ದಂಡು
ನಿನ್ನೆ ವಿಷಕಾರಿ ಅಸುನೀಗಿತಂತೆ

ಆ ದಿನ,
ನಾವಿಬ್ಬರು ಥಟ್ಟನೆ ಮುಖಾಮುಖಿಯಾಗಿ
ವಿರಸದೊಂದಿಗೆ ವಿಮುಖವಾದಾಗ
ನಿನ್ನ ಹೆಜ್ಜೆ ಎಣಿಸುತ್ತ-ಎಣಿಸುತ್ತ
ಪಾತಾಳ ತಲುಪಿದ್ದು ನೀ ಗಮನಿಸಲೇ ಇಲ್ಲ

ಖಚಿತ ಒಲುವಿರದ ಆ ನಿನ್ನ ಹೆಜ್ಜೆಗಳ
ಪಾದಡದಿಯಲಿ
ನನ್ನೆಲ್ಲ ಹೆಬ್ಬಯಕೆಗಳು ‘ದಫನ್’ ಆಗುತ್ತಿರುವದು
ನೋಡಿದಾಗಲೂ
ನಾ ನಗುತ್ತಲೇ ಇದ್ದೆ
ಹೃದಯ ಸಂತುಷ್ಟವಾಗಿರುವದಕ್ಕಲ್ಲ
ನನ್ನ ಕಣ್ಣೀರಿನ ದನಿ ಕೇಳಿ
ನಿನ್ನ ಹೆಜ್ಜೆಗಳು ಗಡಿಬಿಡಿಗೊಳ್ಳದಿರಲೆಂದು

ಮೊದಲ ಅಪ್ಪುಗೆಯಲಿ ವಿನಿಮಯಗೊಳಿಸಿದ್ದು
ಕೇವಲ ಹಾತೊರೆದ ಭಾವನೆಗಳಷ್ಟೇ ಅಲ್ಲ
ಮಧ್ಯಾಹ್ನವೇ ಇಳಿಸಿಕೊಂಡ ಬೀರಿನ-
ವಾಸನೆಯೊಂದಿಗೆ ಬೆವರಗಂಧ
ಹೇಸಿಗೆ ಪಟ್ಟುಕೊಳ್ಳದೇ ಭುಜವನ್ನು ಕಚ್ಚಿದ್ದು
ಮುದ ನೀಡಿತ್ತು ನನಗೆ
ಈಗ,
ತಂಪಾದ ಹೊತ್ತಿನಲಿ
ಕೇದಿಗೆ ವನದ ವಾಸನೆಯು
ಹೇಸಿಗೆ ತರಿಸಿದೆ

ನಗಲು ನನ್ನಲ್ಲಿ ನೀ ಬಿಟ್ಟು ಹೋದ
ಸಾಕಷ್ಟು ಕಾರಣಗಳಿದ್ದವು
ಅಳಲು ನೀ ಬಿಟ್ಟು ಹೊರಟಿರುವದೊಂದೇ
ಕಾರಣ

ಮತ್ತೇನಿಲ್ಲ,
ಹೇಳುವದು ಹೇಳಿಯಾಗಿತ್ತು
ಎಲ್ಲ ಹೇಳಿಯಾದ ಮೇಲೂ ಹೇಳುವದು
ಸಾಕಷ್ಟು ಇತ್ತು….

‍ಲೇಖಕರು Admin

7 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading