ಭುವನೇಶ್ವರಿ ಹೆಗಡೆ ಅಂಕಣ- ವೇಗದಿಂದ ಯೋಗದತ್ತ…

22

ವೇಗದ ನಗರಿ ಮಂಗಳೂರಿಗೆ ದೇಹವನ್ನು ಒತ್ತೆ ಇಟ್ಟು ದುಡಿಯತೊಡಗಿದ ಮೇಲೆ ‘ಬೆವರು ಸುರಿಸಿ ದುಡಿಯುವುದು’ ಎಂದರೇನೆಂದು ಅರ್ಥವಾಗಿತ್ತು. ಸಿರಸಿ ಸಿದ್ದಾಪುರ ಸಾಗರದಂಥ ಮಲೆನಾಡಿನವರಿಗೆ ತಂಪು, ಥಂಡಿ, ಬೆಂಕಿ, ಬಿಸಿಲು ಕಾಯಿಸುವುದು, ಕಷಾಯ, ಕಾಫಿ, ಶಾಲು ಸ್ವೆಟರು ಸ್ಕಾರ್ಫು ಕಂಬಳಿ, ರಗ್ಗು ಇಂತಹ ಬೆಚ್ಚನ ಶಬ್ದಗಳೇ ಆಪ್ಯಾಯಮಾನ ವಾದವುಗಳು. ಕರಾವಳಿಯ ಊರುಗಳಲ್ಲಿಯೋ ಈ ಯಾವ ಪದಗಳಿಗೂ ಆಸ್ಪದವೇ ಇಲ್ಲ. ಗಾಳಿ ಫ್ಯಾನು, ಏ ಸಿ,ಫ್ರಿಜ್ಜು, ಐಸ್ ಕ್ರೀಮು ಕೋಲ್ಡ್ರಿಂಕ್ಸ್ ಇಂತಹ ಪದಗಳಿಗೆ ಮಾತ್ರ ಅವಕಾಶ.

ಈ ಎರಡೂ ವೈರುಧ್ಯಗಳಲ್ಲಿ ನನ್ನ ದೇಹ ಸ್ವಲ್ಪ ಗೊಂದಲದ ಗೂಡಾಗಿದ್ದಂತೂ ಸತ್ಯ. ಮಂಗಳೂರಿನ ಬೆವರನ್ನು ಹೇಗೆ ಸಂಭಾಳಿಸುವುದು ಎಂಬುದೇ ನನ್ನ ಮೊದಲ ಸಮಸ್ಯೆಯಾಗಿ ಹೋಯ್ತು. ಜೂನ್ ಜುಲೈ ತಿಂಗಳಲ್ಲಿ ಹೊರಗೆ ಧೋ ಎಂದು ಮಳೆ ಸುರಿಯುತ್ತಿದ್ದರೂ ಒಳಗೆ ಮೈತುಂಬಾ ಬೆವರು ಸುರಿಯುವುದಂತೂ ವಿಚಿತ್ರವಾಗಿ ತೋರುತ್ತಿತ್ತು. ಕೈಯಲ್ಲಿ ಕರ್ಚೀಫ್ ಇಲ್ಲದೆ ಮನೆಯ ಹೊರಗೆ ಹೊರಟೆವೋ ಆಗುವ ಫಜೀತಿ ಅಂತಿಂಥದ್ದಲ್ಲ. ಸಮಾರಂಭಗಳಲ್ಲಿ ಅಥವಾ ದೇವಸ್ಥಾನಗಳಲ್ಲಿ ಬಿಸಿಯೂಟ ಮಾಡಿಬಿಟ್ಟರಂತೂ ಮುಗಿದೇ ಹೋಯಿತು.

ಕೊಪ್ಪರಿಗೆಗಟ್ಟಲೆ ಬೆವರು ಸುರಿದು ಹೋಗಿ ನಮ್ಮದೇ ಬಟ್ಟೆ ನಮ್ಮದೇ ಮೈಗಂಟಿಕೊಂಡು ತೊಡರುಗಾಲು ಹಾಕುತ್ತಾ ಬಸ್ಸು ರಿಕ್ಷಾ ಕಾರು ಕಾಲೆತ್ತಿ ಹತ್ತಲು ಸಹ ಕಷ್ಟವಾಗಿಬಿಡುತ್ತದೆ. ಹೀಗೆ ನಾನು ಮಂಗಳೂರಿನಲ್ಲಿ ‘ಬೆವರು ಸುರಿಸಿ ದುಡಿಯಲು’ ಪ್ರಾರಂಭಿಸಿದ ಬಳಿಕ ದೇಹಕ್ಕೆ ಸೇರಿಕೊಂಡ ಅನೇಕಾನೇಕ ಕೋಟಲೆಗಳನ್ನು ನಿಭಾಯಿಸಲು ಅಲೋಪತಿ ಹೋಮಿಯೋಪತಿ ಎಂದು ವೈದ್ಯರಲ್ಲಿಗೆ ಎಡತಾಕುವುದು ನಡೆದೇ ಇತ್ತು. ಕಾಲೇಜಿನ ಎದುರಿಗಿರುವ ‘ಕೋಟೆಕಲ್ ಆಯುರ್ವೇದ ಸೆಂಟರ್’ಗೆ ಒಮ್ಮೆ ಸಹೋದ್ಯೋಗಿಯ ಜೊತೆ ಹೋದೆ. ಒಳಗೆ ಕೂತ ಮಲೆಯಾಳಿ ಲೇಡಿ ಡಾಕ್ಟರ್ ನನ್ನ ವಯಸ್ಸು ಉದ್ಯೋಗ ಇತ್ಯಾದಿ ವಿವರ ಗಳನ್ನು ಕೇಳಿ ‘ನಿಮಗೆ ಕಾಪ್ರಿ ಕಾಪ್ರಿ ಆಗುತ್ತದೆಯೋ?’ ಎಂದು ಕೇಳಿದಳು.

ತಲೆಬುಡ ತಿಳಿಯದೆ ಸಹೋದ್ಯೋಗಿಯ ಮುಖ ನೋಡಿದೆ. ಅವಳಿಗೂ ಅರ್ಥವಾಗಲಿಲ್ಲ ಮಿಕಿಮಿಕಿ ನೋಡಿದೆವು ಕಾಪ್ರಿ ಕಾಪ್ರಿ ಎಂದರೆ ಏನೆಂದು ಅರ್ಥವಾಗಲಿಲ್ಲ ಡಾಕ್ಟರ್ ಎಂದು ಹೇಳಿದೆ. ‘ಅದೇಮಾ ಎನ್ಕ್ಸೈಟಿ ಟೆನ್ಶನ್ ಅಂತೆಲ್ಲ ಹೇಳ್ತೀವಲ್ಲ ಅದು’ ಎಂದಾಗ ನನ್ನ ಸ್ನೇಹಿತೆ ಹೋ ಹೋ ಹೌದು ಡಾಕ್ಟ್ರೆ ಯಾವಾಗ್ಲೂ ಗಾಬ್ರಿ ಗಾಬ್ರಿ ಮಾಡ್ಕೋತಾಳೆ ಎಂದು ನ ನ್ನತ್ತ ನೋಡದೇ ಈ ನಡುವೆ ಸ್ವಂತ ಮನೆಯ ಕನಸು ಪ್ರಾರಂಭವಾಗಿ ‘ಸೈಟ್ ಸೀಯಿಂಗ್’ ಕೈಬಿಟ್ಟು ‘ಹೋಮ್ ಹಂಟಿಂಗ್’ ಪ್ರಾರಂಭಿಸಿಯಾಗಿತ್ತು. ಅಂತೂ ಕದ್ರಿಯಲ್ಲಿ ನನಗೆ ಹೇಗೆ ಬೇಕೋ ಹಾಗೆ ಕಟ್ಟಿಕೊಡುವ ಅಪಾರ್ಟ್ ಮೆಂಟ್ ಪ್ಲಾನ್ ಒಂದು ಸಿದ್ಧವಾಯಿತು.

ನನ್ನ ಪಕ್ಕದ ಮನೆಯಲ್ಲಿಯೇ ವಾಸವಾಗಿದ್ದ ಬಿಲ್ಡರ್ ಶ್ರೀನಾಥ್ ಹೆಬ್ಬಾರ್ ಎಂಬವರು ತಮ್ಮ ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯ ಸಾಧನೆಗಳ ಮೂಲಕ ಮಂಗಳೂರು ನಗರದ ಟಾಪ್ ಒನ್ ಬಿಲ್ಡರ್ ಎಂದು ಹೆಸರು ಮಾಡಿದವರು. ಗಾಳಿ ಬೆಳಕು ಸಮೃದ್ಧವಾಗಿರುವ ಅತಿಥಿಗಳು ಬಂದು ಉಳಿದಾಗ ಅನವಶ್ಯಕವಾಗಿ ನಮ್ಮ ಕಾಲು ಕಾಲಿಗೇ ಸಿಕ್ಕು ತೊಡರದಂತೆ ವಿಶಾಲವಾಗಿರುವ ಗೆಸ್ಟ ರೂಮು, ನೆಂಟರು ಬಂದಾಗ ನಮ್ಮ ಜೊತೇಯೇ ಅಡುಗೆ ಮನೆಗೆ ಅಡರಿಕೊಂಡು ಸಿಕ್ಕ ಸಿಕ್ಕ ಸಲಹೆ ಕೊಡಲು ಜಾಗವೇ ಇಲ್ಲದಷ್ಟು ಸಣ್ಣ ಅಡುಗೆ ಮನೆ, ವಿದ್ಯಾರ್ಥಿಗಳು ಮೂಡ್ ಬಂದಾಗೆಲ್ಲ ಕವಿಗೋಷ್ಟಿ ಮಾಡೋಣ್ವಾ ಮೇಡಂಎಂದರೆ ಹದಿನೈದಿಪ್ಪತ್ತು ಜನರು ಕೂತು ಹಾಯಾಗಿ ಭಾಷಣ ಮಾಡಿ ಕೇಳಿ ಸಭೆ ನಡೆಸುವಷ್ಟು ದೊಡ್ಡ ಹಾಲು ಹೀಗೆ ನನ್ನ ಬೇಡಿಕೆಗಳನ್ನೆಲ್ಲ ಪರಿಶೀಲಿಸಿ ಅಳವಡಿಸಿಕೊಂಡ ಅಪಾರ್ಟ್ ಮೆಂಟ್ ಒಂದರ ನಿರ್ಮಾಣ ಪ್ರಾರಂಭ ವಾಯಿತು .

ಹಳೆಯ ಅಪಾರ್ಟ್ ಮೆಂಟ್ ಮಾರಿ ಹೊಸ ಅಪಾರ್ಟ್ಮೆಂಟ್ ಕೊಂಡು ಕೊಂಡೆವಾದರೂ ಹಣ ಪೂರ್ತಿ ಹೊಂದಿಸುವುದು ಸ್ವಲ್ಪ ಕಷ್ಟವೇ ಇತ್ತು. ಸುಮಾರು ಲಕ್ಷಕ್ಕೂ ಮಿಕ್ಕು ಬಾಕಿ ಇರುವಂತೆಯೇ ಬಿಲ್ಡರ್ ನನ್ನ ಕೈಗೆ ಕೀ ಕೊಟ್ಟು ಬಿಟ್ಟರು. ನಾನು ಟೀಚರ್ ಗಳನ್ನು ನಂಬುತ್ತೇನೆ ಉಳಿದ ಮೊತ್ತ ನಿಮಗೆ ಆದಾಗ ಕೊಡಿ ಎಂದು ನನ್ನನ್ನು ಔದಾರ್ಯದ ಉರುಳಲ್ಲಿ ಸಿಲುಕಿಸಿ ಬಿಟ್ಟರು. ಸಂಕೋಚದಿಂದಲೇ ಕೀ ಪಡೆದು ಗೃಹ ಪ್ರವೇಶ ಮಾಡಿ ಹಾಲುಕ್ಕಿಸಿ (ಕಾಫಿ ಹಂಚಿ) ಮುಹೂರ್ತ ಮಾಡಿದೆವು. ಹಣದ ಹೊಂದಾಣಿಕೆಯ ಒತ್ತಡ, ದೈಹಿಕ ಕೋಟಲೆ ಗಳಿಂದಾಗಿ ರಾತ್ರಿ ನಿದ್ದೆ ಕೈ ಕೊಟ್ಟು ಹೋಗಿ ಬಿಟ್ಟಿತ್ತು.

ಮಧ್ಯರಾತ್ರಿಯ ಒಂದು ಎರಡು ಘಂಟೆಗಳಿಗೆಲ್ಲ ಎಚ್ಚರವಾಗಿ ನಿದ್ದೆ ಬಾರದೆ ಹೊರಳಾಡುವ ದಿನಗಳು ಪ್ರಾರಂಭವಾದವು. ನೋಡನೋಡುತ್ತ ಊಹೂಂ ಓಡಿ ಓಡುತ್ತಾ ಒಂದು ದಿನ ನನ್ನ ದೇಹ ಮನಸ್ಸು ಎರಡೂ ನನ್ನ ವಿರುದ್ಧ ತಿರುಗಿ ಬೀಳತೊಡಗಿದವು. ಈ ವೇಗದ ಬದುಕಿಗೆ ತಲೆಯಾಡಿಸಲು ನನ್ನಿಂದಾಗದು ಎಂಬಂತೆ ಕುತ್ತಿಗೆ ನೋವು ಪ್ರಾರಂಭವಾಯಿತು. ಡಾಕ್ಟರುಗಳು ಸ್ಪಾಂಡಿಲೈಸಿಸ್ ಎಂಬ ಹೆಸರು ಕೊಟ್ಟರು . ಕತ್ತಿಗೆ ಪಟ್ಟಿ ಬಿಗಿಯಲಾಯಿತು. ಅಂಗೈ ಜುಂ ಜುಂ ಎಂದು ಹಾಡುತ್ತಾ ಸ್ಪರ್ಶಜ್ಞಾನ ಕಳೆದುಕೊಂಡಿತ್ತು.’ ಕಾರ್ಪಲ್ ಟನಲ್ ಸಿಂಡ್ರೋಮ್’ ಎಂಬ ಹೆಸರು ಬಿತ್ತು. ಒಂದು ದಿನ ಸಹ ಟೆನ್ನಿಸ್ ಆಡದಿದ್ದರೂ ಮೊಣಕೈಗೆ ‘ಟೆನ್ನಿಸ್ ಎಲ್ಬೋ’ ಬಂತು. ಕೈಗೆ ಬೆಲ್ಟು ಬಿಗಿದಾಯ್ತು. ಲೇಪ ಧೂಪ ಫಿಜಿಯೋತೆರಫಿ ಹಳ್ಳೆಣ್ಣೆ (ಮುಖ) ಕಂಡಾಯ್ತು. ಇಂಗ್ಲಿಷ್ ಮಾತ್ರೆಗಳ ಸಂಖ್ಯೆ ಡೋಸು ಹೆಚ್ಚುತ್ತ ಹೋಯಿತು.

ಇಷ್ಟರ ನಡುವೆ ಖರೀದಿಸಿದ ಹೊಸ ಮನೆಯ ಹೊಸಹೊಸ ಆತಂಕಗಳು, ಜವಾಬ್ದಾರಿ ಬೇರೆ. ಹಳೆಮನೆಯ ಮಾರಾಟ, ಬ್ರೋಕರುಗಳ ಹಾರಾಟ ನಿದ್ರೆ ಎಕ್ಕುಟ್ಟಿ ಹೋಯ್ತು. ಎಲ್ಲ ಫ್ಲ್ಯಾಟುಗಳ ದೀಪಗಳು ಆರಿದ ಮೇಲೆ
‘ಮನೆಯೆಲ್ಲ ಮಲಗಿರಲು ನಾನೊಬ್ಬಳೆದ್ದೆ.
ಹೊದಿಕೆಯನು ಒದ್ದೆ, ಕಾಫಿಯನ್ನು ಮೆದ್ದೆ
ಮಾಯವಾಯಿತು ನಿದ್ದೆ ಎಚ್ಚರವೇ ಇದ್ದೆ’
ಎಂದು ರಾತ್ರಿಯಿಡೀ ಹಾಡುವಂತಾಯಿತು.

ರಾತ್ರಿ ಪಾಳಿಯ ವಾಚ್ ಮನ್ ನನ್ನ ಮಗಳನ್ನು ಒಂದು ದಿನ ಕರೆದು ‘ನೋಡು ನಿಮ್ಮ ಮನೆಯಲ್ಲಿ ಮಧ್ಯ ರಾತ್ರಿ ಎರಡು ಗಂಟೆಗೆಲ್ಲ ಲೈಟ್ ಹೊತ್ತಿಕೊಳ್ಳುತ್ತದೆ. ಮನುಷ್ಯರು ಆಚೀಚೆ ಓಡಾಡುವ ಸಪ್ಪಳ ಕೇಳಿ ಬರುತ್ತದೆ! ಹೊಸ ಬಿಲ್ಡಿಂಗ್. ಎಲ್ಲೆಲ್ಲಿಂದಲೋ ಮರ ಕಡಿದು ಕಟ್ಟಿಗೆ ತಂದಿರುತ್ತಾರೆ ಭೂತ ಪ್ರೇತಗಳು ಸೇರಿಕೊಂಡಿರುತ್ತವೆ. ಅದಕ್ಕೊಂದು ಭೂತೋಚ್ಚಾಟನೆ ಹೋಮ ಮಾಡಿಸಬೇಕೆಂದು ತಂದೆಯವರ ಬಳಿ ಹೇಳು’ ಎಂದು ಕಥೆ ಕಟ್ಟಿದ್ದ.

ಮನಶ್ಯಾಂತಿಗೆ ಹೊರಟುಹೋಯ್ತು. ಸರಿ ಭೂತೋಚ್ಛಾಟನೆ ಹೋಮಕ್ಕೆ ಭಟ್ಟರು ಬಂದರು. ಸಂಕಲ್ಪ ಮಂತ್ರದಲ್ಲಿ ‘ಮನಶ್ಶಾಂತಿ ಪ್ರಾಪ್ಥ್ಯರ್ಥಂ’ ಸಹಜ ಸಮೃದ್ಧ ನಿದ್ರಾ ಪ್ರಾಪ್್ಥ್ಯರ್ಥಂ ಎಂದು ಒಂದು ಸಾಲು ಸೇರಿಸಲು ಕೇಳಿಕೊಂಡೆ. ಹೋಮಕ್ಕೆ ಎಲ್ಲ ಸಿದ್ಧತೆ ಮಾಡಿದಾಗ ಭಟ್ಟರ ಎದುರು ನೆಲದ ಮೇಲೆ ಚಕ್ಕಳ ಪಟ್ಟೆ ಹಾಕಿ ಕೂಡಲಾಗುತ್ತಿಲ್ಲ. ಕಾಲಿಗೆ ‘ಸಯಾಟಿಕ್ ಪೇನ್ ‘ಎಂಬ ಹೆಸರು ಇಟ್ಟಾಗಿತ್ತು. ಭಟ್ಟರ ಮಣೆಗಿಂತ ಎತ್ತರದ ಸ್ಟೂಲ್ ಒಂದನ್ನು ಇಟ್ಟು ನಾನು ಕೂತೆ. ಪುರೋಹಿತರಿಗಿಂತ ನಾವು ಎತ್ತರಕ್ಕೆ ಕೂತರೆ ಪೂಜೆಯಲ್ಲಿ ಮನಸ್ಸು ನಿಂತೀತೆ? ಮನಶ್ಶಾಂತಿ ದೊರಕೀತೇ? ಗಿಲ್ಟಿ ಫೀಲಿಂಗ್ ಸಮೇತ ಹಳಹಳಿಸುತ್ತಾ ಎದ್ದು ಪ್ರಸಾದ ತೆಗೆದುಕೊಂಡೆ. ಓಡಿ ದಣಿದು ನಿದ್ದೆಗೆಟ್ಟ ದೇಹ ಮಾತೆತ್ತಿದರೆ ನೋ ಎನ್ನತೊಡಗಿತ್ತು. ನರ ತಜ್ಞೆ ಡಾಕ್ಟರ್ ಸ್ನೇಹಿ ತೆಯಲ್ಲಿ ಓಡಿದೆ.

ರೇಲ್ವೆ ಸ್ಟೇಶನ್ನಿನಷ್ಟು ಜನ ಇದ್ದರು. ದಾರಿ ಮಾಡಿಕೊಂಡು ಒಳಗೆ ಹೋಗಿ ಕಣ್ಣೀರು ಸುರಿಸಿದೆ. ‘ನಿನ್ನದು ಮಲ್ಟಿಪಲ್ ಕಾಂಪ್ಲೆಕ್ಸ್’. ಔಷಧಿಗೆ ಬಗ್ಗುವುದಿಲ್ಲ ಯೋಗಕ್ಕೆ ಶರಣಾಗುವುದೊಂದೇ ದಾರಿ” ಎಂದು ಮಂಗಳೂರಿನ ಪ್ರಸಿದ್ಧ ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಅವರ ವಿಳಾಸ ನೀಡಿದಳು . ಆಯುರ್ವೇದದವರ ತೊಂಡೆಕಾಯಿ ಗಾತ್ರದ ಕಪ್ಪು ಬಣ್ಣದ ಗುಳಿಗೆಗಳನ್ನು ನೆನೆಸಿಕೊಂಡು ಕಾಪ್ರಿ ಕಾಪ್ರಿ ಯಾಗಿ ಅತ್ತ ಮತ್ತೆ ಹೋಗಲಿಲ್ಲ . ಯೋಗ ಗುರುವಿನ ನತ್ತ ಮುಖ ಮಾಡಿದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: