ಕೆ ನಲ್ಲತಂಬಿ ಅನುವಾದ ಸರಣಿ- ನರಿ ಬೇಟೆ

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ  ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕನ್ನಡಕ್ಕೆ: ಕೆ ನಲ್ಲತಂಬಿ

6

ಹೊಸ ದೆಹಲಿ ನಗರದ ಶಂಕುಸ್ಥಾಪನೆ ಸಮಾರಂಭ, ಡಿಸಂಬರ್ 15ನೇಯ ತಾರೀಕು 1911 ನೇಯ ಇಸವಿ ನಡೆಯಿತು. 1905ನೇಯ ಇಸವಿಯಿಂದ ಬ್ರಿಟೀಷ್ ಸರಕಾರ ರಾಜಧಾನಿಯನ್ನು ಬದಲಾಯಿಸಲು ಕಾರಣಗಳನ್ನು ಹುಡುಕುತ್ತಿತ್ತು. ಅದರ ಪರಿಣಾಮವೇ ಐದನೇಯ ಜಾರ್ಜ್ ಚಕ್ರವರ್ತಿಯ ಆಜ್ಞೆ ಎಂದು ಹೇಳುತ್ತಾರೆ. 

ಐದನೇಯ ಜಾರ್ಜ್ ಚಕ್ರವರ್ತಿಯ ಬೇಟೆಗೂ ಆದಿಕಾಲದಲ್ಲಿ ನಡೆದ ವನವಾಸಿಗಳ ಬೇಟೆಗೂ ನಡುವೆ  ವ್ಯತ್ಯಾಸವೇನು ಎಂದು ಪ್ರಶ್ನೆ ಏಳಬಹುದು. ವನವಾಸಿಗಳು ತಮ್ಮ ಅಧಿಕಾರವನ್ನು ತೋರಿಸಿಕೊಳ್ಳಲು ಎಂದೂ ಬೇಟೆಯಾಡಲಿಲ್ಲ ಎಂಬುದೇ ಅದಕ್ಕೆ ತಕ್ಕ ಉತ್ತರ. ಬ್ರಿಟೀಷರು ದಟ್ಟವಾದ ಕಾಡುಗಳಿಲ್ಲದ ಪ್ರದೇಶದಿಂದ ಬಂದವರು. ಅದರಲ್ಲೂ ಹುಲಿಯಂತಹ ಬಲಿಷ್ಠವಾದ ಮೃಗಗಳು ಅಲ್ಲಿಲ್ಲ. ಆದ್ದರಿಂದ ಹುಲಿಯನ್ನು ಕೇವಲ ಮನುಷ್ಯನನ್ನು ಕೊಲ್ಲುವ ಮೃಗವಾಗಿ ಮಾತ್ರವೇ ಅವರು ನೋಡಿದರು. ಹುಲಿಯನ್ನು ಕೊಲ್ಲುವುದು ಸಾಹಸ, ಸಾಧನೆ ಎಂದು ಹೇಳಿ ಬಿರುದು ಕೊಟ್ಟರು. ಆ ಭಾವನೆ ಭಾರತದ ಮೃಗಗಳನ್ನು ಕೊಂದು ರಾಶಿಹಾಕಲು ಕಾರಣವಾಯಿತು. 

ಇಂಗ್ಲೆಂಡಿನ ಗ್ರಾಮಗಳಲ್ಲಿ ಹಲವು ಶತಮಾನಗಳಿಂದ ನರಿಯ ಬೇಟೆ ಆಡುವುದು ಒಂದು ಮನರಂಜನೆ. ಬೇಟೆಯ ನಾಯಿಗಳಿಂದ ನರಿಯನ್ನು ಅಟ್ಟಿಸಿಕೊಂಡು ಹೋಗಿ ಬೇಟೆಯಾಡುತ್ತಿದ್ದರು. ಕೆಲವು ಸಮಯ ಕುದುರೆಗಳ ಮೇಲೆ ಹೋಗಿ ತುಪಾಕಿಯಿಂದ ನರಿಯನ್ನು ಗುಂಟಿಟ್ಟು ಕೊಲ್ಲುತ್ತಿದ್ದರು. ಅದು ಪ್ರಕೃತಿಯನ್ನು ನಾಶ ಮಾಡುವ ಕಾರ್ಯ ಎಂದು ಇಂಗ್ಲೆಂಡಿನ ಸರಕಾರ ತಡೆಮಾಡಿತು. ಅವರ ದೇಶದಲ್ಲಿ ನರಿಯನ್ನು ಕೊಲ್ಲುವುದನ್ನು ತಡೆ ಮಾಡಿದ ಸರಕಾರ, ಮತ್ತೊಂದು ದೇಶದಲ್ಲಿ ಘೇಂಡಾಮೃಗವನ್ನು ಕೊಲ್ಲುವುದನ್ನೂ ಸಹಾ ಅಪರಾಧವಾಗಿ ಪರಿಗಣಿಸಲಿಲ್ಲ. ಅದೇ ಬಹಳ ದೊಡ್ಡ ವಿಪರ್ಯಾಸ. 

ಮನುಷ್ಯರನ್ನು ಕೊಲ್ಲುವ ಈ ಮೃಗಗಳನ್ನು ಯಾಕೆ ರಕ್ಷಿಸಬೇಕು? ಮನುಷ್ಯ ತನ್ನ ಅಗತ್ಯಕ್ಕಾಗಿ ಮೃಗಗಳನ್ನು ಕೊಲ್ಲುವುದರಲ್ಲಿ ತಪ್ಪೇನು? ಎಂಬ ಪ್ರಶ್ನೆಗಳು ನಮ್ಮೊಳಗೆ ಸದಾ ಇರುವಂತಹದ್ದು. ಮೃಗ ಯಾವ ಮನುಷ್ಯನನ್ನು ಅವನಿರುವ ಜಾಗಕ್ಕೆ ಹುಡುಕಿಕೊಂಡು ಬಂದು ಕೊಲ್ಲುವುದಿಲ್ಲ. ಅವನು ತನಗೆ ತೊಂದರೆ ಕೊಡುತ್ತಿದ್ದಾನೆ ಎಂದು ಅನಿಸಿದರೆ  ದಾಳಿ ಮಾಡುತ್ತದೆ. ಒಂದು ಮೃಗ ಮತ್ತೊಂದನ್ನು ಕೊಲ್ಲುವುದಕ್ಕೆ ಹಸಿವು ಒಂದೇ ಕಾರಣ. ಮನುಷ್ಯ ಸಹ ಹಲವು ಶತಮಾನಗಳ ಹಿಂದೆ ಹಸಿವಿಗಾಗಿ ಮೃಗಗಳನ್ನು ಬೇಟೆಯಾಡಿದ್ದಾನೆ. ಅದು ಒಂದು ಜಿಂಕೆಯನ್ನೋ, ಮೊಲವನ್ನೋ, ಕಾಡೆಮ್ಮೆಯನ್ನೋ ಇರಬಹುದು.  ಮೃಗಗಳ ಸಂತಾನೋತ್ಪತ್ತಿಯ ಕಾಲದಲ್ಲಿ ಬೇಟೆಗೆ ಹೋಗುತ್ತಿರಲಿಲ್ಲ. ಬೇಟೆಯಾಡಿದ ಮೃಗವನ್ನು ಊರಿನ ಜನರೆಲ್ಲಾ ಸೇರಿ ಹಂಚಿಕೊಳ್ಳುವುದು ಪದ್ದತಿಯಾಗಿತ್ತು. 

ಕಾಡಿನಲ್ಲಿ ಒಂದು ಹುಲಿ ಒಂದು ಮೃಗವನ್ನು ಬೇಟೆಯಾಡಿ ತಿಂದ ಮೇಲೆ ಉಳಿದದ್ದನ್ನು 100 ಸಣ್ಣ ಜೀವಗಳು ಆಹಾರವಾಗಿ ಹಂಚುಕೊಳ್ಳುತ್ತವೆ. ಅಂತಹ ಪದ್ಧತಿಯೇ ಆದಿ ಮಾನವನ ಬಳಿಯೂ ಇತ್ತು. ಆದರೆ, ರಾಜರ ಕಾಲದಲ್ಲೂ ಅದರ ನಂತರ ಆಳಿದ ಬ್ರಿಟೀಷರ ವಸಾಹತ್ತುಶಾಹಿ ಕಾಲದಲ್ಲೂ ಮನರಂಜನೆಗಾಗಿಯೂ, ಶೌರ್ಯವನ್ನು ನಿರೂಪಿಸಲು ಮೃಗಗಳನ್ನು ಬೇಟೆಯಾಡಿದರು. 

ಐದನೇಯ ಜಾರ್ಜ್ ಚಕ್ರವರ್ತಿ ಮಾತ್ರವಲ್ಲ…. ಚೇರ, ಚೋಳ, ಪಾಂಡಿಯ ರಾಜರುಗಳ ಬೇಟೆಗಳಿಂದ ತೊಡಗಿ ಮೊಗಲರ ಬೇಟೆಯವರೆಗೆ  ನಡೆದಿದೆ. ಆ ಬೇಟೆಗೆ, ಜತೆಯಾಗಿ ಹೋದ ಸಾಮಾನ್ಯರು ಹುಲಿಯ ದಾಳಿಗೆ ಸತ್ತುಹೋಗಿದ್ದಾರೆ. ಆದರೆ ಒಬ್ಬ ರಾಜ ಕೂಡ ಬಲಿಯಾಗಲಿಲ್ಲ. ಭಾರತದಲ್ಲಿ ಪ್ರಮುಖವಾಗಿ ಬೇಟೆಯಾಡಿದ ನಾಲ್ಕು ಮೃಗಗಳು ಹುಲಿ, ಆನೆ, ಘೇಂಡಾಮೃಗ ಮತ್ತು ಅಪರೂಪ ಬಗೆಯ ಜಿಂಕೆಗಳು. ಈ ನಾಲ್ಕರಲ್ಲಿ ಇಂದು ಕಾಡುಗಳಲ್ಲಿ ಉಳಿದಿರುವುದು ಕೇವಲ 20 ಪ್ರತಿಶತಗಳು ಮಾತ್ರವೇ. ಉಳಿದವು ಬೇಟೆಯಲ್ಲಿ ಅಳಿದು ಹೋಗಿವೆ. 

ಹುಲಿಯ ಜಾತಿಗಳಲ್ಲಿ, ರಾಯಲ್ ಬೆಂಗಾಲ್, ದಕ್ಷಿಣ ಚೀನಾ, ಇಂಡೋಚೀನಾ, ಸುಭದ್ರನ್, ಸೈಬೀರಿಯಸ್, ಬಾಲಿ, ಹಾಸ್ಬಿನ್, ಜಾವಾ ಮುಂತಾದ ಎಂಟು ಬಗೆಗಳು ಇದ್ದವು. ಅವುಗಳಲ್ಲಿ 1940ರಲ್ಲಿ ಬಾಲಿ, ಹಾಸ್ಬಿನ್ ಮುಂತಾದ ತಳಿಗಳೂ, 1970ರಲ್ಲಿ ಜಾವಾ ತಳಿಯೂ ಸಂಪೂರ್ಣವಾಗಿ ಅಳಿದುಹೋದವು. ಈಗ, ನಾಲ್ಕು ಬಗೆಯ ತಳಿ ಹುಲಿಗಳೇ ಉಳಿದಿವೆ. ಅವುಗಳಲ್ಲಿ ಭಾರತದಲ್ಲಿ ಮ್ರಮುಖವಾಗಿ ರಾಯಲ್ ಬೆಂಗಾಲ್ ಹುಲಿಗಳು, ಕಳೆದ ಶತಮಾನದಲ್ಲಿ ಇಡೀ ಭಾರತದಲ್ಲಿ  ಒಟ್ಟು 40,000ಕ್ಕೂ ಹೆಚ್ಚಾಗಿ  ಇದ್ದವು. ಬ್ರಿಟೀಷ್ ಅಧಿಕಾರಿಗಳ, ವಿದ್ಯಾವಂತ ಭಾರತೀಯ ಅಧಿಕಾರಿಗಳ ಬೇಟೆಯಿಂದ ಅದು ಹೆಚ್ಚಿನ ಸಂಖ್ಯೆಯಲ್ಲಿ ಕಡಿಮೆಯಾದವು. 1973ರಲ್ಲಿ ನಡೆಸಿದ ಗಣನೆಯ ಪ್ರಕಾರ, ಭಾರತದಲ್ಲಿರುವ ಒಟ್ಟು ಹುಲಿಗಳ ಸಂಖ್ಯೆ 1800. ಈಗ 1411 ಎನ್ನುತ್ತಾರೆ. ಒಂದು ಬಲಿತ ಗಂಡು ಹುಲಿಯನ್ನು ಕೊಲ್ಲುವುದು ಅದರ ವಂಶದ ಬೆಳವಣಿಗೆಯನ್ನು ಅಳಿಸುವಂತಹ ಕೃತ್ಯ. 

ಮೊಗಲ್ ದೊರೆ ಜಹಾಂಗೀರ್, ತಾನು ಬೇಟೆಯಾಡಿದ ಮೃಗಗಳ ಪಟ್ಟಿಯನ್ನು ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ. ತನ್ನ 12ನೇಯ ವಯಸ್ಸಿನಲ್ಲಿ ತೊಡಗಿ, 48ನೇಯ ವಯಸ್ಸಿನೊಳಗೆ ಅವನು  ಬೇಟೆಯಾಡಿದ ಮೃಗಗಳ ಸಂಖ್ಯೆ 28,532.  ಅವನು ಒಂಟಿಯಾಗಿ ಕೊಂದ ಮೃಗಗಳ ಸಂಖ್ಯೆ 17,167 . ಇವುಗಳಲ್ಲಿ ಸಿಂಹ, ಕರಡಿ, ಹುಲಿ, ಚಿರತೆ, ಜಿಂಕೆ, ಎಮ್ಮೆ, ಆನೆ ಎಂದು ಸಕಲವೂ ಉಂಟು. 

ರೇವಾ ಸಂಸ್ಥಾನದಲ್ಲಿ  ಪ್ರತಿಯೊಬ್ಬ ರಾಜನೂ ಎಷ್ಟು ಕಾಡು ಮೃಗಗಳನ್ನು ಬೇಟೆಯಾಡಿದರು ಎಂಬ ಒಂದು ದಾಖಲೆ ಇದೆ. 1911ರಲ್ಲಿ ರಾಜ ರಘುರಾಜ್ ಸಿಂಗ್ ಕೊಂದ ಹುಲಿಗಳ ಸಂಖ್ಯೆ 91,  ಚಿರತೆಗಳು 7, ಆನೆಗಳು 5. ರಾಜ ಬಲದೇವ್ ಕೊಂದ ಹುಲಿಗಳು 121, ಚಿರುತೆಗಳು 12, ಕರಡಿಗಳು 4. ರಾಜ ಗುಲಾಬ್ ಸಿಂಗ್ ತನ್ನ ಮೊದಲ ಹುಲಿಯನ್ನು ಗುಂಡಿಕ್ಕಿ ಕೊಂದಾಗ ಅವನ ವಯಸ್ಸು 13. ಅವನು ಕೊಂದ ಹುಲಿಗಳ ಸಂಖ್ಯೆ 616. ಇವುಗಳಲ್ಲಿ ಗಂಡು 327, ಹೆಣ್ಣು ಹುಲಿಗಳು 289. ಹೀಗೆ ತಲೆಮಾರು ತಲೆಮಾರುಗಳಿಂದ ನಾಶವಾಗುವ ಹುಲಿಗಳ  ಸಂಖ್ಯೆ ಹೆಚ್ಚಾಗುತ್ತಲೇ ಇವೆ. 

ಹುಲಿಗಳಂತೆಯೇ, ಅಧಿಕವಾಗಿ ನಾಶವಾದ ಮತ್ತೊಂದು ಮೃಗ ಘೇಂಡಾಮೃಗ. ಇದನ್ನು ಬೇಟೆಯಾಡಿದ್ದನ್ನು ಬಾಬರ್ ತನ್ನ ಕೃತಿಯಲ್ಲಿ ವಿವರವಾಗಿ ಉಲ್ಲೇಖಿಸಿದ್ದಾನೆ. ಒಂದು ಕಾಲದಲ್ಲಿ ಸಿಂಧು ಬಯಲಿನಿಂದ  ಮೊದಲುಗೊಂಡು ಉತ್ತರಕ್ಕೆ ಬರ್ಮಾದವರೆಗೆ ಹರಡಿದ್ದ ಭಾರತದ ಘೇಂಡಾಮೃಗ, ಇಂದು ಅಸ್ಸಾಮ್, ಪಶ್ಚಿಮ ಬಂಗಾಲದಲ್ಲಿರುವ ಎರಡು ಜಾಗಗಳಲ್ಲಿಯೂ, ನೇಪಾಳದ ಚಿತ್ವನ್ ಕಣಿವೆಗಳಲ್ಲಿಯೂ  ಮಾತ್ರವೇ ಕಾಣುತ್ತವೆ. 

ಭಾರತದ ಘೇಂಡಾಮೃಗ ವಿಶೇಷ ಬಗೆಯಾದದ್ದು. ಒಂದು ಕೊಂಬಿರುವ ಇದಕ್ಕೆ ಘ್ರಾಣಿಸುವ ಶಕ್ತಿ ಅಧಿಕ. ಆದರೆ ಕಣ್ಣಿನ ದೃಷ್ಟಿ ಕಡಿಮೆ. ಹೆಚ್ಚಾಗಿ ಒಂಟಿಯಾಗಿ ಜೀವಿಸುವಂತಹವು. ಆದ್ದರಿಂದ ಇದನ್ನು ಸುಲಭವಾಗಿ ಬೇಟೆಯಾಡಿದರು. ಘೇಂಡಾಮೃಗದ ಕೊಂಬಿಗೆ ವೀರ್ಯವೃದ್ಧಿ ಮಾಡುವ ಶಕ್ತಿ ಇದೆ ಎಂಬ ನಂಬಿಕೆ ಅಂದಿನಿಂದ ಬೆಳೆದು ಬಂದಿದೆ. ಅದರ ಕೊಂಬನ್ನು ಕತ್ತರಿಸುವುದಕ್ಕಾಗಿ ಇಂದಿಗೂ ಆ ಮೃಗದ ಬೇಟೆ ಮುಂದುವರೆಯುತ್ತಿದೆ.  

1993ನೇಯ ಇಸವಿಯಲ್ಲಿ ಭೂತಾನ್ ರಾಜಕುಮಾರ 22 ಘೇಂಡಾಮೃಗದ ಕೊಂಬುಗಳನ್ನು ತೈವಾನ್  ದೇಶಕ್ಕೆ ಕಳ್ಳ ಸಾಗಾಣಿಕೆ ಮಾಡಿದಾಗ ಸಿಕ್ಕಿಹಾಕಿಕೊಂಡನು. ಅವನ ಬಳಿ ನಡೆಸಿದ ಶೋಧನೆಯಲ್ಲಿ ಇದರಂತೆ ನೂರಾರು ಘೇಂಡಾಮೃಗಗಳನ್ನು, ವಿದ್ಯುಚ್ಛಕ್ತಿ ಹಾಯಿಸಿ ಕೊಂದು ಅದರ ಕೊಂಬುಗಳನ್ನು ಮಾರಿದ್ದಾಗಿ ಒಪ್ಪಿಕೊಂಡನು. ಒಂದು ಕೊಂಬಿನ ಬೆಲೆ ಒಂದೂವರೆ ಲಕ್ಷ ಡಾಲರ್. ಚರ್ಮದ ಬೆಲೆ 40,000 ಡಾಲರ್. 

1683ರ-ವರೆಗೆ ಬ್ರಿಟನ್-ನಲ್ಲಿ ಸಾರ್ವಜನಿಕರು ಯಾರೂ ಘೇಂಡಾಮೃಗದ ಬಗ್ಗೆ  ಅರಿತಿರಲಿಲ್ಲ. 1683ರಲ್ಲಿ ಸಾರ್ವಜನಿಕರ ನೋಟಕ್ಕೆ ಘೇಂಡಾಮೃಗವನ್ನು ಪ್ರದರ್ಶನಕ್ಕೆ  ಅಲ್ಲಿ  ಬೋನಿನಲ್ಲಿ ಇಡಲಾಗಿತ್ತು. ಜಗತ್ತಿನಲ್ಲಿರುವ  ಘೇಂಡಾಮೃಗಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಾಗಿ ಭಾರತದಲ್ಲಿ ವಾಸವಿದ್ದವು. ಆದರೆ, ನಿರಂತರ ಬೇಟೆಯಿಂದ ಘೇಂಡಾಮೃಗ ಹೆಚ್ಚಾಗಿ ಅಳಿದುಹೋದವು. 

ಭಾರತದ ಪ್ರತಿ ಕಾಡಿನ ಪ್ರದೇಶದಲ್ಲೂ ಒಂದೊಂದು ಬಗೆಯ ಮೃಗಗಳನ್ನು ಬೇಟೆಯಾಡುವುದು ರೂಡಿಯಲ್ಲಿದೆ. ಹಿಮಾಲಯದ ಭಾಗಗಳಲ್ಲಿ ಹಿಮ ಚಿರತೆ, ಅಸ್ಸಾಮಿನಲ್ಲಿ ಘೇಂಡಾಮೃಗ, ನೇಪಾಳ ಮತ್ತು ಗ್ವಾಲಿಯರ್ ಪ್ರದೇಶಗಳಲ್ಲಿ ಚಿರತೆ, ಹುಲಿಗಳನ್ನು ಬೇಟೆಯಾಡಲಾಯಿತು. ಹಕ್ಕಿಗಳು ಹೆಚ್ಚಾಗಿ ಬರುವ ಭರತ್ಪುರ್ ಪ್ರದೇಶಗಳಿಗೆ ಹೋದರೆ, ಕಪ್ಪು ಬಾತುಗಳನ್ನು ಕೊಂದು ರಾಶಿ ಹಾಕಬಹುದು. ಗುಜರಾತ್ ಕಾಡುಗಳಲ್ಲಿ ಜಿಂಕೆಯ ಬೇಟೆ. ಗಿರ್ ಕಾಡು ಪ್ರದೇಶಗಳಲ್ಲಿ ಸಿಂಹ. ದಕ್ಷಿಣದ ಕೇರಳದಲ್ಲಿ ಆನೆಯ ಬೇಟೆ ಸಾಧ್ಯ. ಇವುಗಳಲ್ಲದೆ ಕರಡಿ, ತೋಳ, ನವಿಲು, ಕಾಡುಹಂದಿ, ಸಾಂಬಾರ ಎಂದು ಭಾರತದ ಕಾಡು ಮೃಗಗಳು ಹೆಚ್ಚಾಗಿ ರಾಜರುಗಳ, ವಸಾಹತುಶಾಹಿ ಅಧಿಕಾರಿಗಳ ಮನರಂಜನೆಯ ಆಟಕ್ಕಾಗಿ ಪ್ರಾಣ ಕಳೆದುಕೊಂಡವು. 

ಕರ್ಜನ್ ಪ್ರಭು (Curzon) ಬೇಟೆಯಾಡಿ ಕೊಂದ ಹುಲಿಯ ಮುಂದೆ, ತನ್ನ ಮಡದಿಯೊಂದಿಗೆ  ತೆಗೆಸಿಕೊಂಡ ಫೋಟೋ ಬಹಳ ಮುಖ್ಯವಾದದು. ಸತ್ತ ಹುಲಿಯ ಚರ್ಮವನ್ನು ಸಂರಕ್ಷಿಸಿ ಇಟ್ಟುಕೊಳ್ಳುವುದು, ಹುಲಿಯ ಬೇಟೆಗಾಗಿ ಪ್ರತ್ಯೇಕವಾಗಿ ರೋಲ್ಸ್ ರಾಯ್ಸ್ ಕಾರನ್ನು ಕೊಂಡು ಕೊಳ್ಳುವುದು ಇವೆಲ್ಲ ಕಳೆದ ಶತಮಾನದ ಮೇಲ್ವರ್ಗದ ಪ್ರಭುಗಳ ವಾಡಿಕೆಯಾಗಿತ್ತು.

ಅಧಿಕಾರಿಗಳನ್ನು ಮೃಗ ಬೇಟೆಗಾಗಿ ಕರೆದುಕೊಂಡು ಹೋಗಲು ಶಿಕಾರಿ ಎಂಬ ಮಾರ್ಗದರ್ಶಕರು ಇರುವರು. ಇವರು ಕಾಡುಗಳನ್ನು ಕೈ-ರೇಖೆಯಂತೆ ಅರಿತಿರುವರು. ಅವರ ಜತೆಯಿಲ್ಲದೆ ಯಾವ ಪರಂಗಿಯೂ ಬೇಟೆಗೆ ಹೋಗಲು ಸಾಧ್ಯವಿಲ್ಲ. ಶಿಕಾರಿಗಳು ಮಾಡುವ ಸಹಾಯಕ್ಕೆ ಹಣವನ್ನೂ, ಕುಡಿಯಲು ಮಧುವನ್ನೂ ಕೂಲಿಯಾಗಿ ಕೊಡಲಾಗುತ್ತಿತ್ತು. ಭಾರತದ ಶಿಕಾರಿಗಳ ಹಾಗೆ ಕಾಡು ಜೀವನದ ಸೂಕ್ಷ್ಮತೆಗಳನ್ನು ಅರಿತವರು ಜಗತ್ತಿನಲ್ಲಿ ಯಾರೂ ಇಲ್ಲ ಎಂದು ಪರಂಗೀಯರು ಮೆಚ್ಚಿಕೊಂಡಿದ್ದಾರೆ. ಆದರೆ, ಮೃಗಗಳನ್ನು ಕೊಲ್ಲುವುದನ್ನು ಶಿಕಾರಿಗಳು ಬಯಸುವುದಿಲ್ಲ. ಕೊಂದ ಮೃಗಗಳ ಮುಂದೆ, ‘ತನ್ನ ಪಾಪವನ್ನು ಕ್ಷಮಿಸುವಂತೆ ಶಿಕಾರಿಗಳು ಪ್ರಾರ್ಥಿಸುತ್ತಾರೆ’ ಎಂದು ಆಂಡರ್ಸನ್ (Anderson )ಎಂಬ ಬೇಟೆಗಾರ ಬರೆದಿದ್ದಾನೆ. 

ಕಾಡುಮೃಗಗಳ ಬೇಟೆಯ ಇತಿಹಾಸ ರಕ್ತದ ಕಲೆಯಿಂದ ತುಂಬಿದೆ. ಆ ನೆನಪುಗಳಿಂದಲೇ ಭಾರತೀಯ ಎಂದಕೂಡಲೆ ವನವಾಸಿ ಎಂದು ಪರಂಗೀಯರು ಇಂದಿಗೂ ಅಂದುಕೊಳ್ಳುತ್ತಾರೆ. ಮನರಂಜನೆ ಎಂದು ಅರಿತ ಬೇಟೆಯ ಆಟ, ಪ್ರಕೃತಿಯ ಸಮತೋಲನದಲ್ಲಿ ದೊಡ್ಡ ಆಘಾತವನ್ನು ಉಂಟುಮಾಡಿದೆ. ಇರುವೆಯಿಂದ ಹುಲಿಯವರೆಗೆ ಎಲ್ಲವೂ ಒಟ್ಟುಗೂಡಿ ಜೀವಿಸುವಾಗ ಮಾತ್ರವೇ ಕಾಡು ಪರಿಪೂರ್ಣವಾಗುತ್ತದೆ. ಅದನ್ನು ಮರೆತು ಒಂದು ಜನಾಂಗವನ್ನೇ ಅಳಿಸಿದರೆ, ಅದನ್ನು ಅವಲಂಬಿಸಿ ಜೀವಿಸುವ ಜೀವರಾಶಿಗಳು ಮೆಲ್ಲಗೆ ಅಳಿದುಹೋಗುತ್ತವೆ. 

ನಗರಮಯವಾಗುವುದು, ಹೊಸ ಕಾರ್ಖಾನೆಯನ್ನು ನಿರ್ಮಾಣಿಸುವುದು ಎಂದು ಕಳೆದ 100 ವರ್ಷಗಳಲ್ಲಿ ಬಹಳ ಕಾಡುಗಳು ಕಾಣದೆ ಹೋಗಿವೆ. ಅದರ ಪರಿಣಾಮವೇ, ಇಂದು ನಾವು ಅನುಭವಿಸುವ ಕ್ಷಾಮ ಮತ್ತು ಪ್ರಕೃತಿಯ ಬದಲಾವಣೆಗಳು, ವಿಕೋಪಗಳು. ಆ ಪರಿಣಾಮಗಳ ಬುನಾದಿಯ ಬೇರುಗಳನ್ನು ಇತಿಹಾಸ ನಮಗೆ ಗುರುತುಮಾಡಿ ತೋರಿಸುತ್ತದೆ. 

ಶತಮಾನಗಳಿಂದ ಮುಂದುವರೆಯುವ ಈ ಕಾಡುಜೀವಗಳ ಕೊಲೆಯನ್ನು ತಡೆಯಲು 1991ರ ನವಂಬರ್ ತಿಂಗಳು ಭಾರತ ಸರಕಾರ ವನ್ಯಜೀವಿ ಸಂರಕ್ಷಣಾ ಕಾಯಿದೆಯನ್ನು ತಿದ್ದುಪಡಿ ಮಾಡಿ ಜಾರಿಗೆ ತರುತ್ತದೆ. ಅಂದಿನಿಂದ ಭಾರತೀಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಕೊಂಡ ಬೇಟೆಯಾಡುವುದನ್ನು ಅಧಿಕಾರಪೂರಕವಾಗಿ ತಡೆ ಮಾಡಲಾಯಿತು. ಆದರೂ ಅಲಂಕಾರಕ್ಕಾಗಿ ತೂಗುಹಾಕಿರುವ ಮೃಗಗಳ ತಲೆಗಳು, ಸಂರಕ್ಷಣೆ ಮಾಡಿದ ಹುಲಿಯ ದೇಹಗಳು ಗತ ಕಾಲದ ಕ್ರೌರ್ಯವನ್ನು ನೆನಪುಮಾಡುತ್ತಲೇ ಇರುತ್ತವೆ. ಮ್ಯೂಸಿಯಂ ಗೋಡೆಗಳ ಮೇಲೆ ತಗಲಹಾಕಿರುವ ಹುಲಿಯ ಚಲನೆಯಿಲ್ಲದ ಕಣ್ಣುಗಳಲ್ಲಿ ಅದು ಕೇಳಲು ಬಯಸಿದ ಪ್ರಶ್ನೆ ಹೆಪ್ಪುಗಟ್ಟಿಹೋಗಿದೆ. ಅದನ್ನು ಕಾಣದಂತೆ  ನಾವು ಸುಮ್ಮನೇ ಹಾದುಹೋಗುತ್ತೇವೆ ಎಂಬುದೇ ಕ್ರೂರವಾದ ಸತ್ಯ. 

| ಇನ್ನು ನಾಳೆಗೆ |

‍ಲೇಖಕರು Admin

July 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: