ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಬಾಗಿಲು ಮನೆಗೆ ಬಂದ..

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

23

ಈ ದಿನವೂ ಚಂದೂ ಊರ ಜನರ ಪಾತ್ರೆಗಳಿಗೆ ಕಲಾಯಿ ಹಾಕಿದ ನಂತರ ಹೊಳೆಬಾಗಿಲು ಮನೆಗೆ ಬಂದ. ಗೌರಿ ನಾಣಿಯ ಸವಾರಿಯೂ ಬಂತು ಅವನ ಹಿಂದೆ. ತಮ್ಮ ಮನೆ ಮುಂದೆ ಕೆಲಸ ಆಗುವುದು ಅವರಿಗೆ ಇನ್ನೂ ಸಂತೋಷ. ಆಯಿ ಆಗಲೇ ಹಲವಾರು ಕಲಾಯಿ ಹೋದ ಪಾತ್ರೆಗಳನ್ನು ತೆಗೆದಿಟ್ಟಿದ್ದಳು. ಅವನು ಅಂಗಳದ ಹೊರಗೆ ಹಲಸಿನ ಮರದ ಕೆಳಗೆ ಕುಳಿತು ಬೆಂಕಿ ಉರಿಸಿ ಕಲಾಯಿ ಹಾಕಲು ಶುರು ಮಾಡಿದ.

ಝಟಪಟ ಕೆಲಸಗಾರ. ಹಾಗೆಂದು ಈಗಲೇ ಹೋಗುವ ಅವಸರವಿಲ್ಲ. ಕಲಾಯಿ ಕೆಲಸ ಮುಗಿಸಿ ಅವರಲ್ಲೇ ಮಧ್ಯಾನ್ಹದ ಊಟ, ಅಜ್ಜಮ್ಮ ಕೊಟ್ಟ ಕವಳ, ಸುಬ್ಬಪ್ಪಯ್ಯರ ಹಳೆ ಬಟ್ಟೆ ಇದ್ದರೆ ಅವಷ್ಟು ತೆಗೆದುಕೊಂಡು ನಿಧಾನಕ್ಕೆ ಹೋದರೆ ಸಾಕು. ಪಾತ್ರೆಗಳಿಗೆ ಕಲಾಯಿ ಹಾಕಿಯಾಯ್ತು. ‘ಇನ್ನೆಂತಾದ್ರೂ ಇದ್ದರೆ ತನ್ನಿ ಒಡತಿ. ಮತ್ತೆ ಮೂರು ತಿಂಗಳಿಗೆ ಬಪ್ಪಕೆ ಆತ್ತೋ ಇಲ್ಯೋ’

ಆಗ ನಾಣಿ ಒಳಗೆ ಓಡಿ ಹೋಗಿ ನಿತ್ಯ ಉಪಯೋಗಿಸುವ ತನ್ನ ಮತ್ತು ಅಕ್ಕನ ಕುಡಿಯುವ ಉದ್ದದ ಎರಡು ಹಿತ್ತಾಳೆ ಲೋಟ ತಂದಿಟ್ಟ. ಹಿತ್ತಾಳೆ ಲೋಟಗಳಿಗೆ, ತಾಮ್ರದ ಕುಡಿಯುವ ನೀರಿನ ಗಿಂಡಿಗಳಿಗೆ ಕಲಾಯಿ ಹಾಕುವುದಿಲ್ಲ. ಅಡಿಗೆ ಉಪಯೋಗಕ್ಕೆ ಇರುವ ಹಿತ್ತಾಳೆ ಪಾತ್ರೆಗಳಿಗೆ ಮಾತ್ರ ಕಲಾಯಿ ಭಾಗ್ಯ. ಕಲಾಯಿ ಹೋಗಿ ಒಳಭಾಗ ಹಸಿರು ಪಾಚಿಗಟ್ಟಿದಂತೆ ಕಂಡರೆ ಕಲಾಯಿ ಇಲ್ಲ ಎಂದೇ ಅರ್ಥ. ಅಂತಹ ಹಿತ್ತಾಳೆ ಪಾತ್ರೆಗೆ ಹುಳಿ ಮುಟ್ಟಿದರೆ ಕಿಲುಬುತ್ತವೆ. ಕಿಲುಬಿದ ಪಾತ್ರೆಯಲ್ಲಿ ಮಾಡಿದ ಅಡಿಗೆ ಹೊಟ್ಟೆಗೆ ಹೋದ್ರೆ ವಾಂತಿ, ಹೊರಕ್ಕಡೆ ಇನ್ನೂ ಎಂತೆಂತದೋ ಶುರು. ಪಾತ್ರೆಯಂತೆ ತಮ್ಮ ಲೋಟಗಳ ಒಳಭಾಗಕ್ಕೆ ಕಲಾಯಿ ಬೇಕೆಂದು ಹಠ ಮಾಡಿ ನಾಣಿ ಕಲಾಯಿ ಹಾಕಿಸಿಕೊಂಡ. ಅವುಗಳ ಒಳಭಾಗ ಬೆಳ್ಳಿಯಂತೆ ಮಿರುಗಿತು.

‘ನಿಮ್ಮ ಲೋಟಕ್ಕೆ ಹುಳಿ ಮುಟ್ತಿಲ್ಲೆ. ಕಿಲುಬುದೂ ಇಲ್ಲೆ. ಸುಮ್ಮನೆ ಕಲಾಯಿ ಹಾಕೂದು ದುಡ್ಡ ದಂಡ’ ಅಜ್ಜಮ್ಮನ ಪಿರಿ ಪಿರಿ ಕೇಳಿದ ಆಯಿ, ‘ಮಕ್ಕಳಲ್ಲವೇ, ಬೆಳ್ಳಿ ಗ್ಲಾಸಿನಲ್ಲಿ ಕುಡೀತೇವೆ ಅಂದುಕೊಳ್ತವೆ. ಇರಲಿ ಅತ್ತೆ, ಇನ್ನೊಮ್ಮೆ ಬೆಳ್ಳಿ ಅಂಗಡಿಯಿಂದ ಇಬ್ಬರಿಗೂ ಬೆಳ್ಳಿಯದೇ ಲೋಟ, ಊಟದ ಬಟ್ಟಲು ತರುವ’ ಅಂತಾಳೆ. ಆದರೆ ತರುವುದಕ್ಕೆ ಮುಹೂರ್ತ ಬರುವುದೇ ಇಲ್ಲ.

ಕಲಾಯಿ ಹಾಕಿದ ಪಾತ್ರೆಗಳಿಗೆ ಒಂದು ದಿನ ಸೆಗಣಿ ನೀರು ತುಂಬಿಸಿ ಮರುದಿನ ತೊಳೆದ ಮೇಲೆಯೇ ಅಡಿಗೆಗೆ ಲಾಯಕ್ಕು. ಮೊದಲೆಲ್ಲ ನಿತ್ಯ ಅಡಿಗೆಗೆ ಮಡಿಕೆಗಳದೇ ಸಲಕರಣೆಗಳು. ಕಳೆದೆರಡು ವರ್ಷಗಳಿಂದ ಮಡಕೆಗಳ ಬದಲಿಗೆ ಬಂದದ್ದು ಹಿತ್ತಾಳೆ ಪಾತ್ರೆಗಳು. ಆಯಿಗೆ ಹೊಸ ಮಡಕೆಗಳನ್ನು ಸುಡುವ ಕೆಲಸವಿಲ್ಲ. ಎತ್ತಿ ಜಪ್ಪಿದರೂ ಹಿತ್ತಾಳೆ ಪಾತ್ರೆಗಳು ಒಡೆಯುವ ರಗಳೆಯಿಲ್ಲ. ಆಯಿ ಚಕ್ರಿ ಮನೆಗೂ ಕೆಲವು ಪಾತ್ರೆಗಳನ್ನು ಕಳಿಸಿದ್ದಾಳೆ. ಆದರೆ ಚಕ್ರಿ ಅಮ್ಮಮ್ಮ ಇನ್ನೂ ಹಳೆಕಾಲದವಳು. ಮಣ್ಣಿನ ಕುಡಿಕೆ ಗಡಿಗೆಗಳೇ ಹೆಚ್ಚು ಇಷ್ಟ. ಎಲ್ಲ ನಮೂನೆಯ ಮಡಕೆಗಳು ಅವಳ ಊರಿನ ಕುಂಬಾರ ರಂಗಚೆಟ್ಟಿ ಮನೆಯಲ್ಲಿ ತಯಾರಾಗಿ ಸಿಗುತ್ತವೆ.

ವಾರಕ್ಕೊಮ್ಮೆ ರಂಗಚೆಟ್ಟಿ ಒಂದು ದಪ್ಪದ ಬಿದಿರು ಕೋಲಿನ ಎರಡೂ ತುದಿಗೆ ಮಡಕೆಗಳನ್ನು ತೂಗು ಹಾಕಿ ಹೆಗಲ ಮೇಲೆ ಕಾವಡಿಯಂತೆ ಹೊತ್ತು ಚಕ್ರಿ ಊರಿನ ಪ್ರತಿ ಬೀದಿ ಬೀದಿಗೂ ತಿರುಗುತ್ತಾನೆ. ಊರಿನಿಂದ ಹಾಡಿಗೆ, ಹಾಡಿಯಿಂದ ಕಾಡಿಗೆ, ಅಲ್ಲಿಂದ ಗದ್ದೆ ಬಯಲಿಗೆ, ದೇವಸ್ಥಾನಕ್ಕೆ ನಡೆದೇ ಹೋಗುವವ. ‘ಮಡಿಕೆ ಬೇಕೇ ಮಡಿಕೆ?’ ಅವನ ಕೂಗು ನೂರು ಮಾರು ಆಚೆಗೂ ಕೇಳಬೇಕು. ಅದು ಎಷ್ಟು ಜೋರು ಎಂದರೆ ‘ಮ’ ಶಬ್ಧ ನಾಭಿಯಿಂದ ಹೊರಟು ಗಂಟಲಿಗೆ ಬಂದು ಸ್ವರ ಹೊರಬಿದ್ದು ‘ಮಾ’ ಆಗಿ, ‘ಡಿ’ ಹೃಸ್ವವಾಗಿ ‘ಕೆ’ ಇನ್ನೂ ಏರು ಸ್ಥಾಯಿಗೆ. ‘ಬೇಕೇ ಒಡತಿ, ಮಾ ಕೇ?’ ‘ಸಣ್ಣದು ದೊಡ್ಡದು ‘ಮಾ ಕೆ’ ಎನ್ನುವ ಗಂಟಲು ಹರಿಯುವಂತೆ.

ತನಗೆ ಬೇಕಿಲ್ಲದಿದ್ದರೂ ಅವನಿಗೆ ಆಸರು ತಿಂಡಿಯಿತ್ತು ಒಂದೆರಡು ಕಾಸುಕೊಟ್ಟು ಮಡಿಕೆ ಕೊಳ್ಳುತ್ತಾಳೆ ಚಕ್ರಿ ಅಮ್ಮಮ್ಮ. ‘ವಾರದಲ್ಲಿ ಎರಡು ಮಡಿಕೆ ಒಡೀತಾವೆ ನಿನ್ನ ಸೊಸೆಯಂದಿರು. ನಾವು ಮಾಡ್ದಾಂಗೆ ಹಿತ್ತಾಳೆ ಪಾತ್ರೆ ತರೂಕಾಗ್ದ?’ ಆಯಿ ಹೇಳಿದ್ದು ಅಲ್ಲದೆ ತಾನೇ ಅಪ್ಪಯ್ಯನಿಗೆ ಹೇಳಿ ತರಿಸಿ ಕೊಟ್ಟಿದ್ದಳು. ‘ಗಡಿ ಗಡಿ (ಆಗಾಗ) ಕಲಾಯಿ ಹಾಕ್ಸೂಕೆ ನಂಗಾಗ. ರಗಳೆ’ ಎನ್ನುವ ಅಮ್ಮಮ್ಮನ ಮನೆ ಹತ್ರವೇ ಕಲಾಯಿ ಹಾಕುವವನಿದ್ದ. ಅತ್ತ ಮೂಸಿಯೂ ನೋಡಲಾರಳು. ಏನಿದ್ದರೂ ಮಡಿಕೆಗಳೇ ಬೇಕು. ಅಲ್ಲದೆ ಅದರಲ್ಲಿ ಮಾಡುವ ಅಡಿಗೆ, ಮೊಸರು ಹಾಲು ಎಲ್ಲ ಹೆಚ್ಚು ರುಚಿಯಂತೆ.

‘ಅಲ್ಲವೇ ಗೌರಿ, ಶ್ರೀಕೃಷ್ಣನ ಕಥೆ ಕೇಳಿದ್ಯಲ್ಲ. ಮೊಸರು ಗಡಿಗೆ ಅವನಿಗೆ ಪ್ರಿಯ. ಗೋಪಿಕೆಯರು ಕಡೆಗೋಲಿನಿಂದ ಮೊಸರು ಕಡೆವದು ಗಡಿಗೆಯಲ್ಲಿಯೇ. ‘ಧಾರ್ ಭುರ್ ಬೊಮ್ಮಕ್ಕ, ಮೊಸರು ಕಡೆ ತಿಮ್ಮಕ್ಕ’ ಹೇಳುತ್ತ ಕಡೆದ ಮೊಸರಿಂದ ಮೆಲೆದ್ದು ಬಂದ ಬೆಣ್ಣೆಯನ್ನು ಕೂಡಿ ಹಾಕೂದು ಗಡಿಗೆಯಲ್ಲೇ. ಬೆಣ್ಣೆಯ ಒಂಚೂರು ಮುದ್ದೆಯನ್ನು ಕಡೆಗೋಲಿನ ತುದಿಗೆ ಹಚ್ಚಿ ಇಡ್ತಾರೆ, ಯಾಕೆ ಗೊತ್ತೇನೇ?’
‘ಶ್ರೀಕೃಷ್ಣನಿಗೆ!’

‘ಹಾಗೆ ಹೇಳು. ಶ್ರೀಕೃಷ್ಣ ರಾತ್ರೆ ಬಂದು ಗಡಿಗೆಯ ಮೊಸರನ್ನು, ಕಡೆಗೋಲಿನ ತುದಿಯ ಬೆಣ್ಣೆಯನ್ನು ತಿಂತಾನೆ ಎಂದು ಗೋಪಿಕೆಯರ ಶುದ್ಧ ಪ್ರೇಮದ ಭಾವ. ನಮ್ಮ ಸಾಮಾನ್ಯ ಹೆಂಗಸರಿಗೆ ಈಗಲೂ ಇದೇ ಕಲ್ಪನೆ, ಅಭ್ಯಾಸ ಬಲ’

ಮಣ್ಣಿನ ಮಡಿಕೆಯಲ್ಲಿ ಮಾಡುವ ಅನ್ನ ಪದಾರ್ಥಕ್ಕೂ ಈ ಕಲ್ಪನೆಗೂ ಎಲ್ಲಿದೆ ಸಾಮ್ಯ? ಅಮ್ಮಮ್ಮ ಅದೇ ಕಲ್ಪನೆಯಲ್ಲಿ ಅನುಭವಿಸುವ ಸುಖ ಕಂಡು ಗೌರಿ ನಿರುತ್ತರಳು. ಆಗೆಲ್ಲ ಈ ಮಣ್ಣಿಗೆ ಥಳಕು ಹಾಕಿದ ಒಂದು ಸಂಗತಿ ಹಿಂದೆ ಯಾವಾಗಲೋ ನಡೆದದ್ದು ನೆನಪಾಗುತ್ತದೆ. ಇದೇ ರಂಗಚೆಟ್ಟಿಯಿಂದ ಆಯಿ ಸಣ್ಣ ಸಣ್ಣ ಕುಡಿಕೆ, ತಟ್ಟೆ, ಬಟ್ಟಲು ಎಲ್ಲಾ ತಂದಿದ್ದಳು. ಅವುಗೌರಿಗೆ ಮನೆ ಆಟಕ್ಕಾಗಿ.

ಒಂದು ದಿನ ಮಕ್ಕಳ ಮನೆಯಾಟದ ಗೌಜಿನಲ್ಲಿ ನೀರು ತುಂಬಿಸಿಟ್ಟ ಚಿಕ್ಕ ಕುಡಿಕೆ ಒಡೆದು ಮಣ್ಣಲಿ ಬಿದ್ದು ನಾಣಿ ಅದನ್ನು ಗುದ್ದಿ ಪುಡಿ ಮಾಡಿ? ಕೇಳಬೇಕೇ, ಕುಡಿಕೆಯ ಮಣ್ಣು ನೆಲದ ಜಿಗುಟು ಮಣ್ಣುಕಲ್ಲು ಒಂದಾಗಿ ಮುದ್ದೆಯಾಗಿ ನಾಣಿ ಹಿಡಿ ತುಂಬಾ ಆ ಮಣ್ಣನ್ನು ಬಾಯಿಗೆ ತುಂಬಿಸಿ ಹ್ಹೇ ಹ್ಹೇ ನಕ್ಕಿದ್ದ. ‘ಉಗಿಯೋ ಕೆಳಗೆ. ಗಂಟಲು ಸಿಕ್ತು’ ಹೇಳಿದರೆ ತನ್ನ ಬಾಯಲ್ಲಿ ಏನಿದೆ ನೋಡು ಕೈ ಸನ್ನೆ ಮಾಡಿದ. ಗೌರಿ ಅವನ ಕೈ ಹಿಡಿದು ಎಳೆದು ತಂದು ಆಯಿ ಮುಂದೆ ನಿಲ್ಲಿಸಿದಳು. ‘ಇವನ ಬಾಯಿ ಕಾಣು, ಮಣ್ಣು ತಿಂತಾ ಇದ್ದ’

ಆಯಿ ಅವನ ಭುಜ ಹಿಡಿದು ದೊಡ್ಡದಾಗಿ ತೆರೆದ ಬಾಯಿ ಒಳಗೆ ನೋಡಿದರೆ ಬರೀ ಮಣ್ಣು ಮಣ್ಣು. ಮಣ್ಣು ತಿನ್ನುವ ಕೆಟ್ಟ ರೋಗ ಯಾವಾಗ ಶುರು ಮಾಡಿದ? ‘ನನ್ನ ಕಂದ ಉಗುಳಿ ಬಿಡೋʼ ಎಂದಳು. ಅವನು ಇನ್ನೂ ದೊಡ್ಡದಾಗಿ ಬಾಯಿ ಅಗಲಿಸಿ ಕೈ ಬೆರಳಿನಿಂದ, ‘ಇಲ್ಲಿ ನೋಡು’ ಎನ್ನುತ್ತಿದ್ದಾನೆ. ಬಾಯೊಳಗೆ ಮಣ್ಣು ಕಲ್ಲು ಅಲ್ಲದೆ ಇನ್ನೇನಿದೆ? ಮಣ್ಣನ್ನು ಉಗುಳದೆ ಗಂಟಲಲ್ಲಿ ಸಿಕ್ಕಿದರೆ? ಹಾಗೇ ಆಯಿತು. ಮಣ್ಣು ಗಂಟಲಲ್ಲಿ ಸಿಕ್ಕಿ ಹತ್ತಿಕ್ಕಿ ಕೆಮ್ಮು ಬಂದು ಮೂಗು ಕಣ್ಣಲ್ಲಿ ನೀರಿಳಿದು ಪಚೀತಿ! ಆಯಿ ಹೇಗೋ ತನ್ನ ಬೆರಳಿನಿಂದ ಮಣ್ಣನ್ನು ಹೊರತೆಗೆದು ಬಾಯಿ ತೊಳೆಯಿಸಿ ಸೆರಗಿನ ತುದಿಯಿಂದ ಬಾಯಿ ಮುಖ ಒರೆಸಿದಳು. ಅಷ್ಟು ಹೊತ್ತು ಮಾತು ಹೊರಡದೆ ಸುಮ್ಮನಿದ್ದವ, ‘ಯಾಕೆ ಬಾಯಿಂದ ಮಣ್ಣು ತೆಗೆದೆ?’ ಆರ್ಭಟಿಸಿದ, ‘ನಿಂಗೆ ಅದೆಂತದೋ ಜಗತ್ತನ್ನು ತೋರಿಸಲು ಅದೇ ಅಜ್ಜಯ್ಯ ಶ್ರೀಕೃಷ್ಣನ ಕಥೆಯಲ್ಲಿ ಹೇಳಿದ್ದು, ಹಾಗೇ ನನ್ನ ಬಾಯೊಳ್ಗೆ ತೋರಿಸ್ಬೇಕು ಅಂದ್ಕಂಡಿದ್ದೆ. ಎಲ್ಲ ಮಣ್ಣು ಹೋಯ್ತು.ʼ

ವಾಹ್ ಮಗನೇ, ಮೊನ್ನೆ ಶ್ರೀಕೃಷ್ಣನ ಕಥೆ ಕೇಳಿದ ಲಾಗಾಯ್ತು ನಾಣಿಯದು ಒಂದೇ ಪ್ರಶ್ನೆ, ‘ಬಾಲ ಕೃಷ್ಣನಂತೆ ನಂಗೂ ಬಾಯಲ್ಲಿ ಜಗತ್ತು ತೋರಿಸಲು ಆತಿಲ್ಯಾ? ನನ್ನ ಬಾಯಲ್ಲಿ ಹಣಿಕಿದರೆ ಎಂತ ಕಾಣ್ತು?’ ಇವತ್ತು ಮಣ್ಣು ತುಂಬಿಕೊಂಡು ಬಂದಿದ್ದಾನೆ ತನಗೆ ವಿಶ್ವರೂಪ ದರ್ಶನ ಮಾಡಿಸಲು! ಪಾಪ, ಆಯಿ ಅವನನ್ನು ಅಪ್ಪಿ ಸಮಜಾಯಿಸಿದಳು, ‘ತಾಯಿಗೆ ಬಾಯೊಳು ಜಗವನ್ನೇ ತೋರಿದ ಶ್ರೀಕೃಷ್ಣ. ಹೌದು ಮಗಾ, ಆದರೆ ನೀನು ದೇವತಾ ಸ್ವರೂಪಿ ಶ್ರೀಕೃಷ್ಣನೇ? ಅಲ್ಲ, ನೀನು ಶ್ರೀಕೃಷ್ಣನಲ್ಲ, ನಾನು ಯಶೋದೆಯೂ ಅಲ್ಲ! ಇನ್ನು ಅವನಂತೆ ನೀನು ಬಾಲಲೀಲೆಗೆ ಹೊರಟರೆ ಈ ಬಡಪಾಯಿ ಆಯಿ ಪಡ್ಚ!ʼ

ಈ ಪ್ರಸಂಗ ಚಕ್ರೀ ಅಮ್ಮಮ್ಮನಿಗೂ ಗೊತ್ತು. ಅವಳು ಪ್ರತಿದಿನ ಕಡೆಗೋಲಿನ ತುದಿಗೆ ಒಂದು ಕಡಲೆಕಾಳು ಗಾತ್ರದ ಬೆಣ್ಣೆ ಚೂರು ಇಡುತ್ತಾಳಲ್ಲ, ಆದರೆ ನಾಣಿ ಬಂದಾಗ ತನ್ನ ಮನೆಯಲ್ಲಿ ಇರುವಷ್ಟು ದಿನವೂ ದೊಡ್ಡ ಗಾತ್ರದ ಬೆಣ್ಣೆ ಮುದ್ದೆ ಇಡುತ್ತಾಳೆ. ಅದನ್ನು ಯಾವ ಹೊತ್ತಿನಲ್ಲಿ ನಾಣಿ ಕದ್ದು ತಿನ್ನುವನೋ!

| ಇನ್ನು ನಾಳೆಗೆ |

‍ಲೇಖಕರು Admin

July 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: