ಮಹಾಮನೆ ಅಂಕಣ – ನನ್ನ ಗಂಗ ನನ್ನೊಡನೆ ಮಾತನಾಡಿದಳು

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

ನಾನು ಮತ್ತು ಆ ಬಾಲೆ ಕೋಮಲೆ ಮೆಳ್ಳಗಣ್ಣಿಯೊಡನೆ ನಾಗಮಂಗಲದ ತಾಲ್ಲೋಕಾಫೀಸಿನ ಮುಂದೆ ತುಮಕೂರಿನ ಬಸ್ಸಿನಿಂದಿಳಿದು ಮನೆಯತ್ತ ಹೆಜ್ಜೆ ಹಾಕುತ್ತಾ ಇದ್ದಂತೆ ನನ್ನ ಮನದ ಚಿತ್ರಶಾಲೆಯಲ್ಲಿ ನಾಗಮಂಗಲದ ಅನೇಕ ನೆನಪುಗಳ ಚಿತ್ರಗಳು ರೂಪ ಪಡೆಯತೊಡಗಿದವು….

ನಾನು ಅವಳಿಗೆ… ಅವಳ ಮನೋಭಿತ್ತಿಯೊಳಗೆ ನನ್ನ ನಾಗಮಂಗಲದ ನೆನಪುಗಳನ್ನು ಚಿತ್ರಿಸುತ್ತಾ ಹೋದೆ ಕಣ್ರೀ…

ನಾನು ನಾಗಮಂಗಲಕ್ಕೆ ಬಂದದ್ದು… ಅಪ್ಪಾಜಿಗೆ ಈ ಊರಿನ ಪಕ್ಕದಲ್ಲಿದ್ದ ‘ತುಳಸಿ’ ಎನ್ನುವ ಹಳ್ಳಿಯ ಶಾಲೆಗೆ ಟ್ರಾನ್ಸ್ ಫರ್ ಆದ ಸಂದರ್ಭದಲ್ಲಿ. ಅದಕ್ಕೂ ಮೊದಲು ಆಗಾಗ ಈ ಊರಿಗೆ ಬಂದಿದ್ದೆ… ನನ್ನ ಅಕ್ಕಂದಿರು ಇಲ್ಲಿಯ ಟಿ.ಸಿ.ಹೆಚ್.ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹಾಗಾಗಿ ನಾಗಮಂಗಲಕ್ಕೆ ಬರುತ್ತಿದ್ದೆ… ಈಗಿನ ಸಂತೆ ಬೀದಿಯಲ್ಲಿದ್ದ ಟೆಂಟ್‌ಗೆ ಸಿನಿಮಾ ನೋಡಲು ಒಂದೆರಡು ಬಾರಿ ಬಂದಿದ್ದೆ. ಬೀದಿ ಬಸವಣ್ಣ… ಎಮ್ಮೆ ತಮ್ಮಣ್ಣ… ಬಾಂಧವ್ಯ… ಕಿತ್ತೂರು ರಾಣಿ ಚೆನ್ನಮ್ಮ ಆ ಟೆಂಟಿನಲ್ಲಿ ಇಂತಹ ಚಿತ್ರಗಳನ್ನು ನೋಡಿದ್ದೇ ಆ ಟೆಂಟಿನಲ್ಲಿ ಸ್ತ್ರೀ ನಾಟಕ ಮಂಡಲಿಯ ನಾಗರತ್ನಮ್ಮನವರ ನಾಟಕ ದಾನಶೂರ ಕರ್ಣ, ಕೃಷ್ಣಲೀಲೆ, ಸಾವುಕಾರ ಇಂತಹ ನಾಟಕವನ್ನು ಇಲ್ಲೇ ನೋಡಿದ ನೆನಪು… ನನಗೆ ನಾಗರತ್ನಮ್ಮನವರ ಭೀಮ… ಕೊಟ್ಟೂರು ಬಸಪ್ಪನವರು ಕರ್ಣ… ಡಿಕ್ಕಿ ಮಾದವರಾವ್ ಅವರ ದುರ್ಯೋಧನ ಪಾತ್ರಗಳು ಇನ್ನು ಮನದಲ್ಲಿ ಉಳಿದಿವೆ.

ಆಹಾ… ಕೋಮಲೆ… ಅದೆತ್ತಲ್ಲೋ ನೋಡುತ್ತಿರುವೆಯೆಲ್ಲಾ ನನ್ನತ್ತಾ ನೋಡಬಾರದೆ…

ಕೇಳುವಂತವಳಾಗು…

ಈ ಪುರವು ನನಗೆ ಒಂದಷ್ಟು ವರುಷಗಳು ಆಶ್ರಯ ನೀಡಿದ ತಾಣವು… ನಾನು ಪ್ರೌಢಶಾಲೆಯ ೧೦ನೇ ತರಗತಿಯ ಪರೀಕ್ಷೆಯನ್ನು ಒಂದೇ ಬಾರಿಗೆ ಪಾಸಾದ ಸುಯೋಗದಿಂದ ಸಿರಿಕೃಷ್ಣನು ತನ್ನ ಗ್ರಾಮವನ್ನು ತೊರೆದು ನಗರ ಸೇರಿದಂತೆ ನಾನೂ ಸಹ ನನ್ನೂರು ದೇವಲಾಪುರವನ್ನು ತೊರೆದು ನನ್ನ ಮುಂದಿನ ವಿದ್ಯಾಭ್ಯಾಸದ ಕಾರಣದಿಂದ ನಾಗಮಂಗಲವೆಂಬ ಪಟ್ಟಣವನ್ನು ಸೇರಬೇಕಾಯಿತು.

ದ್ರಾವಿಡೆ ಕೇಳಿತ್ತಿರುವೆಯಲ್ಲ… ನಿನ್ನ ಮನವೆಕ್ಕೆ ಚಂಚಲವಾಗಿರುವುದಲ್ಲ… ಇತ್ತ ಆಲಿಸು…

ಈ ಸ್ಥಳವು ಬಹಳ ಹಿಂದೆ ದಟ್ಟ ಕಾಡಾಗಿತ್ತೆಂದೂ… ಈ ದಟ್ಟಾರಣ್ಯದಲ್ಲಿ ನರಸಿಂಹಸ್ವಾಮಿಯ ಗುಡಿಯೊಂದು ಇದ್ದಿತೆಂದೂ ಆ ಗುಡಿಯಸುತ್ತಾ ಕಾಳಿಂಗ ಸರ್ಪವೊಂದು ಮಂಡಲಾಕಾರವಾಗಿ ಸುತ್ತು ಹಾಕುವ ಕನಸೊಂದು ಲೋಹಿತ ವಂಶದ ದೊರೆಯೊಬ್ಬನಿಗೆ ಬಿದ್ದಾ ಕಾರಣದಿಂದ ಈ ಸ್ಥಳಕ್ಕೆ ಆತನು ಬರಲಾಗಿ ಆ ದೊಡ್ಡ ನಾಗರವೊಂದು ಆ ಗುಡಿಯ ಸುತ್ತಾಕೊಂಡು ಮಲಗಿದ್ಯು ಕಾಣಲಾಗಿ ಆ ಸ್ಥಳಕ್ಕೆ ಅವನು ‘ನಾಗಮಂಡಲ’ ಎಂದು ಕರೆದನೆಂದೂ ಹಾಗೂ ಬಬ್ರುವಾಹನನು ಈ ಸ್ಥಳದಿಂದಲೇ ‘ನಾಗಮಣಿ’ಯನ್ನು ತಂದು ಯುದ್ಧದಲ್ಲಿ ಶಿರಚ್ಛೇದನಗೊಂಡು ಬಿದ್ದಿದ್ದಾ ತನ್ನ ತಂದೆ ಅರ್ಜುನನಿಗೆ ಪುನರ್ಜನ್ಮ ಬರುವಂತೆ ಮಾಡಿದ್ದನೆಂದೂ… ಬಬ್ರುವಾಹನನು ಈ ಪ್ರದೇಶವನ್ನು ಆಳುತ್ತಿದ್ದನೆಂತಲೂ ಆಗ್ಗೆ ಈ ಪುರವನ್ನು ‘ಮಣಿಪುರ’ ಎಂದೂ ಕರೆಯುತ್ತಿದ್ದರೆಂತಲೂ ಪುರಾಣ ಕಥೆ ಇಹುದು ಬಾಲೆ ಸುಕೋಲೆ. ‘ನಾಗಮಂಡಲ’ವೆಂಬ ಹೆಸರು ಜನರ ನಾಲಿಗೆಗೆ ಸಿಕ್ಕಿ ‘ನಾಗಮಂಗಲ’ವಾಯಿತೆಂದು ಇಲ್ಲಿಯ ಹಳೆಯ ತಲೆಗಳು ಹೇಳುತ್ತಾರೆ ಬಾಲೆ ನೀಲೆ…

ಆಹಾ… ಕೇಳಿದೆಯಾ ನಮ್ಮೂರ ಕತೆಯ… ಹಾಗಾದರೆ ಬಾ ಮುಂದೆ ಸಾಗುವ…

ನೀರೆ… ನಾವೀಗ ನಾಗಮಂಗಲದ ಮುಖ್ಯರಸ್ತೆಯಲ್ಲಿದ್ದೇವೆ… ಈ ರಸ್ತೆಯು ಸೀದಾ ಸೌಮ್ಯಕೇಶವ ದೇವಾಲಯದ ಬಳಿ ಸಾಗುತ್ತದೆ. ಹಾಂ… ಇತ್ತ ತಿರುಗು… ನಮ್ಮ ಎಡಭಾಗಕ್ಕೆ ಇರುವುದೇ ಇಲ್ಲಿಯ ಗೌರ್ಮೆಂಟ್ ಆಸ್ಪತ್ರೆ… ಅದಕ್ಕೆ ಹೊಂದಿಕೊಂಡಂತೆ ಇರುವುದೇ ಮುಸಾಪಿರ್ ಖಾನೆ… ಅದಕ್ಕೆ ಹೊಂದಿಕೊಂಡಂತೆ ಇರುವುದೇ ನಾಗಮಂಗಲದ ಹಳೇ ಬಸ್ ನಿಲ್ದಾಣ… ಇದೊಂದು ರೀತಿ ಬೆಂಗಳೂರಿನ ಕಲಾಸಿಪಾಳ್ಯ ಬಸ್‌ಸ್ಟಾಂಡ್ ಇದ್ದಂತೆ. ಈ ಕುರಿತು ನಾನು ನಿನಗೆ ಮುದೊಂದು ದಿನ ಹೇಳೇನು… ಇತ್ತ ನೋಡು… ಆ ಮಹಡಿಯ ಮೇಲ್ಭಾಗದ ಕೊಠಡಿಯೇ ಎಂ.ಆರ್.ಎನ್. ಶಾಸ್ತಿçಗಳ ಕಾರ್ಯಾಲಯ… ನಾಗಮಂಗಲದ ಗಾಂಧೀಜಿ ಎಂದೇ ಹೆಸರಾಗಿದ್ದ ಶಾಸ್ತಿçಗಳು ಇಲ್ಲಿಂದಲೇ ತಮ್ಮ ಪೇಪರ್ ಏಜೆನ್ಸಿಯನ್ನು ನಡೆಸುತ್ತಿದ್ದುದ್ದು… ತಮ್ಮ ರಾಜಕಾರಣವನ್ನು ಮಾಡುತ್ತಿದ್ದದ್ದು… ಹಾಗೂ ಖಾದಿ ಮಾರಾಟ… ಗಾಂಧಿಯನ್ ವಿಚಾರಧಾರೆಯ ಹಾಗೂ ರಾಷ್ಟ್ರೀಯವಾದಿ ಪುಸ್ತಕಗಳ ಗ್ರಂಥಾಲಯವನ್ನು ಹೊಂದಿದ್ದದ್ದು…

ನೀಲೆ… ನಿನಗೆ ಗೊತ್ತೆ… ನಾನು ಪಿ.ಯು.ಸಿ. ಡುಮ್ಕಿ ಹೊಡೆದ ನಂತರ ಒಂದು ವರ್ಷಕ್ಕೂ ಮೇಲ್ಪಟ್ಟು ಶಾಸ್ತ್ರೀಗಳ ಜೊತೆ ಇದ್ದದ್ದು… ಇಲ್ಲೇ ಬಸ್‌ಸ್ಟಾಂಡಿನಲ್ಲೇ ನಾನು ಪೇಪರ್ ಮಾರಿದ್ದು… ಇಲ್ಲಿ ನಿಲ್ಲುವ ಬಸ್‌ಗಳ ಒಳನುಗ್ಗಿ ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ-ವಿಶಾಲ ಕರ್ನಾಟಕ. ಸುಧಾ-ಪ್ರಜಾಮತ, ಮಯೂರ, ಕಸ್ತೂರಿ… ವಿಜಯಚಿತ್ರ… ಬಾಲಮಿತ್ರ… ಚಂದಮಾಮ… ಮಾರಿದ್ದು.

ಅವಳು ನನ್ನತ್ತ ತಿರುಗಿ… ನಕ್ಕು… ‘ಇದೇನು ನಾಟ್ಕದ ಮೂಡ್ನಲ್ಲಿ ಇದ್ದೀರಾ… ಏನಾಯ್ತು ನಿಮಗೆ ಎಂದಾಗಲೇ ಗೊತ್ತಾಗಿದ್ದು… ನನ್ನ ಭಾಷೆ ನಾಟಕೀಯ ಭಾಷೆ ಎಂದು. ಹಾಗಾಗಿ ನಾನು ನಾಗರತ್ನಮ್ಮನವರ ಕಂಪನಿ ನಾಟಕಗಳ ಮೂಡ್ನಿಂದ ಹೊರ ಬಂದು ಸಹಜವಾಗಿ ಮಾತಾಡಲು ಪ್ರಾರಂಭಿಸಿದೆ.

ನೋಡಿ ಇವರೇ… ಇದೇ ಮಹಡಿಗೆ ನಾಗಮಂಗಲದ ಹಾಗೂ ನಾಡಿನ ಆಗಿನ ಅನೇಕ ರಾಜಕಾರಣಿಗಳು ಬರುತ್ತಿದ್ದದ್ದು… ಸಿಂಗಾರಿಗೌಡರಿಗೆ… ಹೆಚ್.ಟಿ. ಕೃಷ್ಣಪ್ಪನವರಿಗೆ… ಚಿಗರೀಗೌಡರಿಗೆ… ಪಾಲಗ್ರಹಾರದ ಶೆಟ್ಟರಿಗೆ… ಮೈಲಾರಪಟ್ಣದ ಲಿಂಗಪ್ಪನವರಿಗೆ… ನಾಗಮಂಗಲದ ಸಿದ್ಧಲಿಂಗಪ್ಪನವರಿಗೆ… ದೇಶಬಂಧು ಹನುಮಂತಪ್ಪನವರಿಗೆ… ಮಂಡ್ಯ ಜಿಲ್ಲೆಯ ಮಹಾನ್ ನಾಯಕ ಕೆ.ವಿ. ಶಂಕರೇಗೌಡರಿಗೆ… ಇದೇ ಬಸ್‌ಸ್ಟಾಂಡಿನ ಜನತಾ ಹೋಟೆಲ್‌ನಿಂದಲೇ ಕಾಫೀ ತಂದು ಕೊಡುತ್ತಿದ್ದದ್ದು… ಎಮೆರ್ಜೆನ್ಸಿ ನಂತರದ ಮಹಾಚುನಾವಣೆಯಲ್ಲಿ ಜನತಾ ಪಕ್ಷದ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀನಿವಾಸ ಪರವಾಗಿ ಶ್ರೀಮಾನ್ ಹೆಚ್.ಡಿ. ದೇವೇಗೌಡರ ಆದಿಯಾಗಿ ಮಹಾನ್ ನಾಯಕರು ಇದೇ ಮಹಡಿಯ ಮೇಲಿಂದಲೇ ಭಾಷಣ ಮಾಡಿದ್ದು… ಮುಸಾಫೀರ್ ಖಾನೆಯ ಮುಂಭಾಗದ ವೇದಿಕೆಯಲ್ಲಿ ವೀರೇಂದ್ರ ಪಾಟೀಲರು ಉರ್ದುವಿನಲ್ಲಿ ಅಭೂತಪೂರ್ವ ಭಾಷಣ ಮಾಡಿದ್ದು… ಮಹಮದಾಲಿ ಅನ್ನುವ ಅಂದಿನ ಸಚಿವರೊಬ್ಬರು ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದ್ದು… ಇಬ್ರಾಹಿಂ ಸಾಹೇಬರು ತಮ್ಮ ಎಂದಿನ ಶೈಲಿಯಲ್ಲಿ ನಡು ನಡುವೆ ವಚನಗಳನ್ನು ಉದ್ಧರಿಸುತ್ತಾ ಇಂದಿರಾಗಾಂಧಿಯನ್ನು ಹಾಗೂ ಕಾಂಗ್ರೆಸನ್ನು ಲೇವಡಿ ಮಾಡುತ್ತಾ ಅಚ್ಚ ಕನ್ನಡದಲ್ಲಿ ಸೊಗಸಾಗಿ ಭಾಷಣ ಮಾಡಿದ್ದು… ಇದೇ ಸ್ಥಳದಲ್ಲಿ… ಆ ಎಲೆಕ್ಷನ್‌ನಲ್ಲಿ ಎಂ.ಎಸ್. ಕೃಷ್ಣರವರೇ ಗೆದ್ರು… ಶ್ರೀನಿವಾಸರವರು ಸೋತರು.

ಆ ವಿಚಾರ ಬಿಡು… ನಾನು ಇದೇ ಸಂದರ್ಭದಲ್ಲೇ ನಾಗಮಂಗಲದ ಸಾರ್ವಜನಿಕ ಗೋಡೆಗಳ ಮೇಲೆ ಇಜ್ಲು ಬಳಸಿ ಜನತಾ ಗಾಳಿಗೆ ಇಂದಿರಾ ಗಾಂಧಿಯವರು ತೂರಿ ಹೋಗುತ್ತಿರುವಂತೆ ವ್ಯಂಗ್ಯ ಚಿತ್ರ ಬರೆಯುತ್ತಿದ್ದೆ. ಅಂತಹದೇ ಒಂದು ರಾತ್ರಿ ನಾಗಮಂಗಲದ ಕಾಂಗ್ರೆಸಿನ ಮುಂದಾಳು… ನನ್ನ ಅಪ್ಪಾಜಿಯ ಮಿತ್ರರೂ ಆದ ನಜೀರ್‌ಸಾಬರ ಕೈಗೆ ಸಿಕ್ಕಾಕ್ಕಿಕೊಂಡಿದ್ದೆ… ‘ಏಯ್… ತುಮ್… ಕೌನ್ರೇ ಯಾರಯ್ಯಾ ನೀನು… ಇಂಗೆಲ್ಲಾ ಚಿತ್ರ ಬರುದ್ರೇ ನಿಂಗೆ ಪೊಲೀಸ್‌ಗೇಳಿ ಲಾಕಪ್‌ನಲ್ಲಿ ಹಾಕಿಸ್ಬಿಡ್ತೀನಿ ನೋಡು’ ಎಂದು ಅವರು ಹೆದರಿಸಿದ್ದರು.

ಎಂ.ಆರ್.ಎನ್. ಶಾಸ್ತ್ರೀಗಳ ಮಹಡಿಯಲ್ಲಿ ಸೇರಿದ ಅಂದಿನ ಮಂಡ್ಯ ಜಿಲ್ಲೆಯ ಜನತಾ ಪರಿವಾರದ ತುಂಬಿದ ಸಭೆಯಲ್ಲಿ ‘ನಜೀರ್ ಸಾಹೇಬರು ನನಗೇಳಿದ್ದ… ಬೆದರಿಸಿದ್ದ ಮಾತನ್ನು ಹೇಳಿಬಿಟ್ಟಾಗ… ಸಿಂಗಾರಿ ಗೌಡರು ಬಹಳ ಸೌಮ್ಯ ಧನಿಯಲ್ಲಿ ‘ಯಾರಯ್ಯಾ ಸ್ವಾಮಿ… ಹಾಗೆಂದದ್ದು ನಜರ‍್ನಾ… ನೀನು ಹೆದರಬೇಡ… ನಾವಿದ್ದೀವಿ’ ಎಂದು ನನ್ನ ಮೈದಡವಿದ್ದರು… ಶಾಸ್ತ್ರೀಗಳು ಎಂದಿನಂತೆ ಕೆಂಡಾಮಂಡಲವಾಗಿದ್ದರು. ತಮ್ಮ ಬ್ರಾಹ್ಮಣರ ಶುದ್ಧ ಕನ್ನಡದಲ್ಲಿ ನಜೀರ್ ಸಾಬರನ್ನು ಬೈದಿದ್ದರು… ಶ್ರೀಧರ್ ಎಂಬ ಯುವ ನೇತಾರರಂತೂ ಅಪ್ಪಟ ಮಂಡ್ಯಗನ್ನಡದಲ್ಲಿ ನಾಗಮಂಗಲದ ಇಡೀ ಕಾಂಗ್ರೆಸ್ ಕುಲವನ್ನು ಜಾಲಾಡಿ… ವಾಚಮ ಗೋಚರವಾಗಿ ಪ್ರಶಂಸಿಸಿ… ‘ಇವತ್ತು ರಾತ್ರಿ ನಾನೂ ನಿಮ್ಜೊತೆ ಬರ್ತೀನಿ… ಅದ್ಯಾವೋನು ಬತ್ತೋನೋ ರ‍್ರೀ ನೋಡೋಣʼ ಎಂದು ನನಗೆ ಒತ್ತಾಸೆಯಾಗಿ ನಿಂತನು… ಇವೆಲ್ಲ ನೆನಪು ಚಿತ್ರಗಳು ಇವರೇ…

ಇದೇನು ಕುಸುಮವೇ ನಾನು ನಿಮಗೆ ನನ್ನ ನಾಗಮಂಗಲದ ಕಥೆಯನ್ನು ಹರುಹುತ್ತಿದ್ದರೂ ನೀವು ಮಾತ್ರ ಸುಮ್ಮನೆ ಮೌನವಾಗಿ ಬರುತ್ತಿರುವಿಯೆಲ್ಲಾ ನನ್ನೊಡನೆ… ತುಟಿ ತೆರೆದು ಏನಾದರೂ ಮಾತನಾಡಬಾರದೇ… ಹಾಂ… ಹೂಂ… ಆದರೂ ಬೇಡವೇ… ಹೋಗಲಿ ಕೊನೆಗೊಂದು ಉದ್ಗಾರ!!!

ನಾನೇಕೆ ನಿಮಗೆ ಈ ಘಟನೆಗಳನ್ನೆಲ್ಲಾ ಹೇಳಿದೆನೆಂದರೇ… ನನಗೆ ಆ ಕಾಲಕ್ಕೆ ಈ ನಾಡಿನ ಘಟಾನುಘಟಿ ನಾಯಕರ ನಂಟಿತ್ತು… ಅವರ ಪರಿಚಯವಿತ್ತು…. ಎಂಬುದು ನಿಮಗೆ ತಿಳಿಯಲಿ ಎಂದು.

ನಾನು ‘ಮಹಾಯಾನ’ದ ಇವತ್ತಿನ ಪಯಣದ ನೆನಪುಗಳನ್ನು ಮರುಚಿತ್ರಿಸುತ್ತಿರುವ ಈ ಸಮಯದಲ್ಲಿ ಸ್ವರ್ಗಲೋಕದಿಂದ ಅಶರೀರ ವಾಣಿಯೊಂದು ತೇಲಿ ಬಂತು… ದನಿಯೊಂದು ನನ್ನೆದುರು ನಿಂತಿತು.

ಹಾಂ… ಅದು ಅವಳದೇ ದನಿ…

ನನ್ನ ಗಂಗಳದ್ದೇ ದನಿ…

ರೀ… ನಾನೂ, ನೀವು ಬರೆಯುತ್ತಿರುವ ‘ನಮ್ಮ ಬದುಕಿನ ಮಹಾಯಾನ’ವನ್ನು ಓದುತ್ತಿರುವೆ… ಈಗ ಆ ಕುರಿತು ಏನೂ ಹೇಳುವುದಿಲ್ಲ… ಮುಂದೇದಾರೂ ಮತ್ತೆ ನನಗೆ ಬರಬೇಕೆನಿಸಿದಾಗ ದನಿಯ ರೂಪದಲ್ಲಿ ಅಥವಾ ನಿಮ್ಮ ಮನದೊಳಗೆ ಓಡಿ ಬಂದು ‘ಮಹಾಯಾನ’ದ ಕುರಿತು ಮಾತಾಡೇನು… ನೀವು ನನಗೆ ಪಿ.ಯು.ಸಿ.ಯಲ್ಲಿ ನೀವು ಡುಮ್ಕಿ ಹೊಡೆದ ಮೇಲೆ ತಂಗವೇಲು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದರಲ್ಲಾ… ಇದೇನು ಈಗ ಮೊದಲೇ ನೀವು ಪೇಪರ್ ಹಾಕಿದ… ಬಸ್‌ಸ್ಟಾಂಡ್‌ನಲ್ಲಿ ಪೇಪರ್ ಮಾರಿದ ಕತೆ ಹೇಳುವ ನೆಪದಲ್ಲಿ ಸಿಂಗಾರಿ ಗೌಡ್ರು ಬೆನ್ನು ನೇವರಿಸಿದರು. ಶಾಸ್ತ್ರೀಗಳು ಬೇಷ್ ಅಂದ್ರು… ದೇವೇಗೌಡ್ರುಗೆ ಕಾಫಿ ತಿಂದ್ಕೊಟೆ… ಪಾಟೀಲ್‌ರು ಹಿಂಗ್ ಮಾತಾಡಿದ್ರೂ… ಅದೆಲೆಲ್ಲೋ ಚಿತ್ರ ಬರ‍್ದೆ… ಇಬ್ರಾಹಿಂ ಸಾಹೇಬರು ವಚನ ಹೇಳಿದರು ಅಂತಾ… ಇಂತಿಂತಾ ದೊಡ್ಡವರ ಜೊತೆಯಲ್ಲೇ ಇದ್ದೇ ಅಂತಾ ಜಂಬಾ ಕೊಚ್ಕೊಳ್ತಾ ಇದೀರಲ್ವಾ… ಇದೆಲ್ಲಾ ಬಿಟ್ಟು ತುಂಗವೇಲು ಅಂಗಡಿಲಿ ಕಸಗುಡಿಸಿದ್ದು ಹೇಳಿ… ಮಣಿ ಸ್ಟುಡಿಯೋದಲ್ಲಿ ಡಾರ್ಕ್ ರೂಂ ಕ್ಲೀನ್ ಮಾಡಿದ್ದು ಹೇಳಿ… ಆನಂತರ ಮುಂದಿನ ಕತೆಗೆ ಹೋಗಿ… ತಿಳೀತಾ ಮಹಾಮನೆಯವರೇ ಹಾಂ… ಇನ್ನೊಂದು ಮಾತು… ನಿಮ್ಮ ನಾಗಮಂಗಲದ ಕತೆಯನ್ನು ನಿಮ್ಮ ‘ಪೂರ್ವಯಾನ’ದಲ್ಲಿ ಸವಿಸ್ತಾರವಾಗಿ ಬರೆಯುವಿರಂತೆ ಈಗ ಆ ಮೆಳ್ಳಗಣ್ಣಿಯನ್ನು ಕರೆದುಕೊಂಡು ನಿಮ್ಮ ಮನೆಗೆ ಹೋಗಬಹುದಲ್ಲವೇ ಎಂದಿತು ಆ ದನಿ.

ಆ ಧ್ವನಿಯ ರೂಪ ಅದೃಶ್ಯವಾಯಿತು.

ಆ ಧ್ವನಿ ನನಗೆ ಸತ್ಯದರ್ಶನ ಮಾಡಿಸಿತು…

ದೊಡ್ಡವರ ಜೊತೆಗೆ ಇದ್ದುದನ್ನು ಹೈಲೈಟ್ ಮಾಡದೇ… ಅದಷ್ಟನ್ನೇ ಪ್ರೊಜೆಕ್ಟ್ ಮಾಡದೇ ಸಾಮಾನ್ಯರ ಜೊತೆಗೆ ಇದ್ದದನ್ನು ಹೇಳು… ನೀನು ಸಣ್ಣ ಪುಟ್ಟ ಕೆಲಸ ಮಾಡಿದ್ದನ್ನು ಓದುಗರಿಗೆ ತಿಳಿದು… ಎಂಬ ಸಂದೇಶವನ್ನು ಸಾರಿತು ನನ್ನವಳ… ನನ್ನ ಗಂಗಳ ದನಿ.

ಸುಮವೇ… ಕುಸುಮವೇ ಕೇಳು… ನನ್ನ ಮುಂದಿನ ಕತೆಯ… ನಾನು ನಿನಗೆ ನಾಗಮಂಗಲದ ನನ್ನ ಮೊದಲ ‘ಕಾಯಕದಾಣ’ವನ್ನು ಪರಿಚಯಿಸುತ್ತೇನೆ… ಎಂದಾಗ ಆ ಬಾಲೆಯು… ಮನೆಗೆ ಹಣ್ಣು-ಹೂವು-ಸ್ವೀಟ್ಸ್ ಏನಾದರೂ ತೊಗೊಂಡು ಹೋಗೋದು ಬೇಡ್ವೇ ಎಂದು ಮೆಲ್ಲಗೆ ನುಡಿದಾಗ ನಾನು ಇದೇ ನಜೀರ್ ಸಾಬರ ತಮ್ಮನ ಅಂಗಡಿಯಲ್ಲಿ ಹಣ್ಣನ್ನು… ಕೇಶವ ಸ್ವೀಟ್‌ಸ್ಟಾಲ್‌ನಲ್ಲಿ ಕಾಯ್ ಮಿಟಾಯಿ ಹಾಗೂ ಜಿಲೇಬಿಯನ್ನು… ಗೌಸ್‌ನ ಹೂವಿನಂಗಡಿಯಿಂದ ಮಲ್ಲಿಗೆ ಹೂವನ್ನು ತೆಗೆದುಕೊಂಡು ಮುಂದೆ ಹೆಜ್ಜೆ ಹಾಕಿದೆ ಕಣ್ರೀ…

ಸುಮವೆ… ಇದೇ ನೋಡು… ‘ತಂಗವೇಲ’ರ ವಾಚ್ ರಿಪೇರಿ ಅಂಗಡಿ… ಇದರ ಮೇಲಿರುವುದೇ ತಂಗವೇಲರ ತಮ್ಮ ‘ಮಣಿ’ಯ ಪೋಟೋ ಸ್ಟುಡಿಯೋ… ನಾನು ಪಿ.ಯು.ಸಿ. ಡುಮ್ಕಿ ಹೊಡೆದ ನಂತರ ಮೊದಲಿಗೆ ಇಲ್ಲಿಯೇ ಕೆಲಸ ಮಾಡಲು ಪ್ರಾರಂಭಿಸಿದ್ದು… ಇಲ್ಲಿ ಹಗಲೊತ್ತು ಕೆಲಸ ಮಾಡುತ್ತಲೇ ಒಂದು ತಿಂಗಳು ರಾತ್ರಿ ಪಾಳೆಯದಲ್ಲಿ ‘ರೋಡ್‌ಸರ್ವೆ’ ಕೆಲಸ ಮಾಡಿದ್ದೇನು… ನನಗೆ ಮೊದಲ ಸಂಪಾದನೆಯನ್ನು ತಂದುಕೊಟ್ಟ ಮೊದಲ ಕಾಯಕವೇ ಅದು… ಒಂದು ತಿಂಗಳು ಇಡೀ ರಾತ್ರಿ ನಾಗಮಂಗಲದ ಟಿ.ಬಿ.ಯ ಮುಂದೆ ಕುಳಿತು ತುಮಕೂರು, ಮೈಸೂರು ರಸ್ತೆ ಕಾಯುತ್ತಾ ಆ ರಾತ್ರಿ ಆ ರಸ್ತೆಯಲ್ಲಿ ಓಡಾಡುವ ವಾಹನಗಳ ಸರ್ವೇಯ ಹಾಗೂ ನೋಂದಣಿ ಮಾಡಿದ್ದು ನನ್ನ ಮೊದಲ ಕೆಲಸ. ಸಂಪಾದನೆ ನಲವತ್ತೆರಡು ರೂಪಾಯಿಗಳು… ನನಗೆ ದೊಡ್ಡ ಮೊತ್ತವೇ ಅದು.

ನಂತರದ್ದೇ ತಂಗವೇಲು ಅಂಗಡಿಯ ಕಸ ಗುಡಿಸುವ ಕೆಲಸ ಮಣಿಯ ಸ್ಟುಡಿಯೋದ ಅಂಗಡಿಯ ಕಸ ಗುಡಿಸುವ ಕೆಲಸ… ಮಣಿಯ ಸ್ಟುಡಿಯೋದ ಡಾರ್ಕ್ ರೂಮಿನ ಕೆಲಸ… ಕಸ ಗುಡಿಸುತ್ತಲೇ ವಾಚ್ ರಿಪೇರಿ ಮಾಡುವುದನ್ನು ಕಲಿತೆ… ಡಾರ್ಕ್ ರೂಮಿನ ಕೆಲಸ ಮಾಡುತ್ತಲೇ ಫೋಟೋಗ್ರಫಿಯನ್ನು ಕಲಿತೆ.

ಇವರೇ… ತಂಗವೇಲು ಹಾಗೂ ಮಣಿ ಇಬ್ಬರೂ ಅಣ್ಣತಮ್ಮಂದಿರು ಬದುಕನರಸಿ-ಕೇರಳದ ಕಡೆಯಿಂದ ಬಂದು ನಾಗಮಂಗಲ ಸೇರಿದ್ದ ಕೇರಳದ ತಮಿಳಿಗರು… ಆಹಾ… ಅವರ ಮನೆಯಲ್ಲಿ ಮಾಡುತ್ತಿದ್ದ ಕೇರಳ ಸ್ಟೆöÊಲಿನ ಅಡಿಗೆ ಆ ರುಚಿ… ಅದನ್ನು ಅನುಭವಿಸೇ ತೀರಬೇಕು. ಅದರಲ್ಲೂ ಹಲಸಿನ ಹಣ್ಣಿನ ಪಾಯಸ… ಆಹಾ… ಆಹಾ… ಅದೆಂತಾ ಸ್ವಾದ… ಅಮೋಘ. ನೀವೇಂದಾದರೂ ಮಲೆಯಾಳಿಗಳ ಮನೆಯಲ್ಲಿ ಊಟ ಮಾಡಿದ್ದೀರಾ ಎಂದು ಆಕೆಯನ್ನು… ನನ್ನೊಡನೆ ಮನೆಯಡೆಗೆ ಹೆಜ್ಜೆ ಹಾಕುತ್ತಿದ್ದವಳನ್ನು ಕೇಳಿದೆ… ಅವಳು ನಸು ನಕ್ಕು ತಲೆಯಲ್ಲಾಡಿಸಿ ಇಲ್ಲವೆಂದು ಸೂಚಿಸಿದಳು ರೀ… ನನ್ನ ಪ್ರೀತಿಯ ಓದುಗರೇ… ಊಟ ಮಾಡಿದ್ದೀರಾ…? 

ನೀವೇಂದಾದರೂ ಮಲೆಯಾಳಿಗಳ ಮನೆಯಲ್ಲಿ ಊಟ ಮಾಡಿದ್ದೀರ… ತಮಿಳ್ಗಿರ ಮನೆಯಲ್ಲಿ ತೆಲುಗವಾಳ್ಳು ಎಂಟ್ಲು…? ಮರಾಠಿಗಳ ಮನೆಯಲ್ಲಿ…? ಬಂಗಾಲಿ… ಗುಜರಾತಿಗಳ ಮನೆಯಲ್ಲಿ…? ಇಲ್ವಾ… ರೀ ಹೋಗ್ರಿ… ಮೊದಲು ಹೋಗ್ರಿ… ಅವರುಗಳ ಮನೆಯಲ್ಲಿ ಊಟ ಮಾಡಿ ಬನ್ನಿ. ಹೋಗ್ಲಿ… ನಮ್ಮ ಉತ್ತರ ಕರ್ನಾಟಕದ ಯಾರದಾದ್ರೂ ಮನೆಯಲ್ಲಿ ಕಡಕ್ ರೊಟ್ಟಿ… ಸಜ್ಜೆ ರೊಟ್ಟಿ ತಿಂದಿದ್ದೀರಾ… ನಿಮಗೆ ಬದುಕಿನ ರುಚಿ ಗೊತ್ತಾಗ್ಬೇಕು ಅಂದ್ರೆ ಬೇರೆ ಬೇರೆ ಪ್ರದೇಶದ ಜನರ ಪರಿಚಯ… ಸ್ನೇಹ ಇರಬೇಕು… ಅವರ ಮನೆಗಳಲ್ಲಿ ಊಟ ಮಾಡಿರಬೇಕು ಕಣ್ರಪ್ಪಾ…

‘ಕುಸುಮವೇ… ನಿಮಗೆ ಅಡಿಗೆ ಮಾಡಕ್ಕೆ ಬರುತ್ತದೆಯೇ’ ಎಂದೇ ಅವಳು ‘ನಸು ನಕ್ಕು’ ತಲೆ ಗುಮಕಾಗಿ ಬರುತ್ತೆ ಎಂದಳು.

ರಾಗಿರೊಟ್ಟಿ ಹುಚ್ಚಳ್‌ಚಟ್ನೀ…?

ರಾಗಿಮುದ್ದೆ ಉಪ್ಪೆಸ್ರೂ…?

ಅಕ್ಕಿರೊಟ್ಟಿ ಕಾಯ್‌ಚಟ್ನೀ…?

ಮಾಲ್ದಿ, ಪಾಯ್ಸಾ…?

ಕಾಯಾಲು? ಒಬ್ಬಟ್ಟು…?

ಚಕ್ಲಿ… ಕಜ್ಜಾಯಾ… ಕೋಡ್ಬಳೆ…?

ನಿಪ್ಪಟ್ಟು… ತಂಟಾ…?

ರವೆ ಉಂಡೆ… ಕಡಲೇಉಂಡೆ…

ಕೋಸಂಬ್ರಿ… ಉಪ್ಪಿನಕಾಯಿ…?

ಇಷ್ಟರಲ್ಲಾಗಲೇ ನನ್ನ ಮತ್ತು ಅವಳ ನಡುವೆ ಸಲುಗೆ ಬೆಳೆದಿತ್ತು… ಆ ಸಲುಗೆಯಿಂದಲೇ ಅವಳನ್ನು ಛೇಡಿಸುತ್ತಾ ನಡೆಯುತ್ತಿದ್ದೆ. ಮಹಾನುಭಾವರೇ… ತಾವು ಓದುಗರು… ಇದೇನು ಈ ಹುಡುಗಿಯ ಜೊತೆಗೆ ಹೀಗೆ ತಮಾಷೆ ಮಾಡಿಕೊಳ್ಳುತ್ತಿದ್ದಾರೆ ಎಂದುಕೊಳ್ಳ ಬೇಡ್ರಪ್ಪಾ…

ನಾನು, ಏನು ಕೇಳಿದರೂ ಆ ಮೆಳ್ಳಗಣ್ಣಿ ನಸುನಗುತ್ತಲೇ ಹೆಜ್ಜೆ ಹಾಕಿದಳು…

ಮನೆ ಬಂದಿತು…

ಅಮ್ಮ ನಮ್ಮನ್ನು ಎದುರುಗೊಂಡರು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಬಹಳ ಸ್ವಾರಸ್ಯವಾಗಿದೆ ಸರ್ ನಿಮ್ಮ ಮೆಳ್ಳಗಣ್ಣಿ ಬಾಲೆಯೊಡನೆ ನಿಮ್ಮ ಏಕಪಾತ್ರಾಭಿನಯ 🙂 🙂 🙂 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: