ಕೆ ನಲ್ಲತಂಬಿ ಅನುವಾದ ಸರಣಿ- ಉಪ್ಪು ಕಳ್ಳಸಾಗಾಣಿಕೆ

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

10

ಸುಂಕದ ತಡೆ ಬೇಲಿ ಎಂದು ಹೆಸರಿಡಲಾದ ಈ ಉದ್ದನೆಯ ಬೇಲಿ ಭಾರತವನ್ನು ಎರಡಾಗಿ ಬೇರ್ಪಡಿಸತೊಡಗಿತು. ಇದರಿಂದ, ಉಪ್ಪು, ಸಕ್ಕರೆ, ಧಾನ್ಯಗಳು, ಎಣ್ಣೆ ಮುಂತಾದ ಸಾಮಗ್ರಿಗಳ ಸಾಗಾಣಿಕೆ ಸರಕಾರದ ನಿಗರಾಣಿಯೊಳಗಿತ್ತು. ಈ ಸುಂಕದ ಕಟ್ಟೆಗಳಲ್ಲಿ ತೆರಿಗೆ ವಸೂಲಿ ಮಾಡಲಾಯಿತು. ಅದನ್ನು ಉಲ್ಲಂಘಿಸುವವರನ್ನು ಕಳ್ಳಸಾಗಣಿಕೆಗಾರರು ಎಂದು ಸರಕಾರ ಅಪರಾಧ ಹೊರಸಿ ಅವರನ್ನು ಜೈಲಿನಲ್ಲಿಡಲಾಯಿತು. 

ಈ ಪರಿಸ್ಥಿತಿಯಲ್ಲಿ 1867-ರಲ್ಲಿ ಸುಂಕ ಇಲಾಖೆಯ ಅಧಿಕಾರಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು. ಆಲನ್ ಆಕ್ಟೋವಿಯನ್ ಹ್ಯೂಮ್ (Allan Octavian Hume). ಇವರೇ, ಮುಂದೆ ಕಾಂಗ್ರಸ್ ಸಂಸ್ಥೆ ರೂಪುಗೊಳ್ಳಲು ಕಾರಣವಾದವರು. ಸುಂಕ ತಡೆ ಬೇಲಿ ನಿರ್ಮಾಣವಾಗುವುದಕ್ಕೂ ಅದನ್ನು ಪರಾಮರಿಸಲು ಎಷ್ಟು ಖರ್ಚಾಗಬಹುದೆಂದು ಹ್ಯೂಮ್ ಅಧ್ಯಯನ ಮಾಡಿದರು. ವರಮಾನದಲ್ಲಿ ಅರ್ಧ, ಪರಾಮರಿಸಲು ಖರ್ಚು ಮಾಡಲಾಗುತ್ತದೆ ಎಂದು ಕಂಡುಹಿಡಿದರು.

ಅಡ್ಡಗೋಡೆಗಳಿಗೆ ಬದಲಾಗಿ ಎತ್ತರಕ್ಕೆ ಬೆಳೆಯುವ ಮುಳ್ಳುಗಳಿಂದ ತುಂಬಿದ ಎಲಚಿನ ಗಿಡಗಳನ್ನು ನೆಡಲು ಆಜ್ಞೆ ಮಾಡಿದರು. ಎಂಟು ಅಡಿ ಎತ್ತರ ನಾಲ್ಕು ಅಡಿ ಅಗಲ ದಟ್ಟವಾಗಿರುವ ಗಿಡಗಳನ್ನು ಬೆಳಸಲಾಯಿತು. ಎಲಚಿನ ಗಿಡ ಬೆಳೆಯಲಾಗದ ಸ್ಥಳಗಳಲ್ಲಿ ಮುಳ್ಳು ಗಿಡಗಳನ್ನು ಬೆಳೆಯಲಾಯಿತು. ಅವೂ ಬೆಳೆಯದ ಜಾಗಗಳಲ್ಲಿ ಕಾಡು ಮುಳ್ಳಿನ ದೊಡ್ಡ ಬೇಲಿಯನ್ನು ಹಾಕಲಾಯಿತು. ವಿಷ ತುಂಬಿರುವ ಹಾವುಗಳು, ಚೇಳುಗಳು ತುಂಬಿರುವ ಆ ಬೇಲಿಗಳನ್ನು ದಾಟಿ ಹೋಗಲು ಕಠಿಣವಾಯಿತು.

ಒಂದು ಮೈಲಿಗೆ ಒಂದು ಜಕಾತಿ ಕಟ್ಟಿಗಳನ್ನು ನಿರ್ಮಾಣ ಮಾಡಲಾಯಿತು. ಮುಳ್ಳು ಬೇಲಿಯನ್ನು ರಾತ್ರಿ ಹಗಲೂ 14,000 ಕಾವಲುಗಾರರು ಕಾಯುತ್ತಿದ್ದರು. ತಡೆ ಬೇಲಿಯನ್ನು ಊರಿನವರು ವಿರೋಧಿಸಕೂಡದು ಎಂಬುದಕ್ಕಾಗಿ ತಲೆಗೊಂದು ಸೇರು ಉಪ್ಪನ್ನು ತೆರಿಗೆ ವಿನಾಯಿತಿಯೊಂದಿಗೆ ತೆಗೆದುಕೊಂಡುಹೋಗಲು ಅನುಮತಿ ನೀಡಲಾಯಿತು.  1727 ಚೆಕ್ ಪೋಸ್ಟ್-ಗಳು, 136 ಉನ್ನತ ಅಧಿಕಾರಿಗಳು, 11,288 ಕಾವಲುಗಾರರು ಇದ್ದ ನೀಳವಾದ ಮುಳ್ಳು ಬೇಲಿಯ ಮೂಲಕ 1869-70ರಲ್ಲಿ ದೊರಕಿದ ಉಪ್ಪು ತೆರಿಗೆ 12ಲಕ್ಷ ರೂಪಾಯಿಗಳು. ಇದರೊಂದಿಗೆ ಒಂದು ಮಿಲಿಯನ್ ರೂಪಾಯಿಗಳನ್ನು ಸಕ್ಕರೆ ಮತ್ತು ಇತರ ಸಾಮಗ್ರಿಗಳ ಮೂಲಕ ವಸೂಲಿ ಮಾಡಲಾಯಿತು. 

ತಡೆ ಬೇಲಿ ಕಾವಲು ಕೆಲಸಕ್ಕೆ ಬರಲು  ಜನ ಹಿಂಜರಿದರು. ಅಲೆಮಾರಿ ಬಂಜಾರ ಜನಗಳ ಜತೆ ಜಗಳವಾಡಬೇಕೆಂಬ ಭಯವಿತ್ತು. ಅದಕ್ಕಾಗಿಯೇ ಉಳಿದೆಲ್ಲ ಕೆಲಸಕ್ಕಿಂತಲೂ ಎರಡು ಪಟ್ಟು ಹೆಚ್ಚು ಸಂಬಳವನ್ನು ಸುಂಕದ ಕಟ್ಟೆಯ ಕೆಲಸಕ್ಕೆ ನೀಡಲಾಯಿತು. ಅಂದರೆ, ಒಬ್ಬ ಆಳಿಗೆ ತಿಂಗಳಿಗೆ ಸಂಬಳ ಐದು ರೂಪಾಯಿ. ಅದು ಒಬ್ಬ ರೈತ ಆರು ತಿಂಗಳಿಗೆ ಗಳಿಸುವ ಆಧಾಯಕ್ಕಿಂತಲೂ ಹೆಚ್ಚು. ಒಬ್ಬ ಅಧಿಕಾರಿಯ ನಿಗರಾಣಿಯ ಕೆಳಗೆ  10 ರಿಂದ 40 ಸುಂಕದ ಕಟ್ಟೆಗಳಿದ್ದವು. 

ಅಧಿಕಾರಿಗಳು ಉಳಿದುಕೊಳ್ಳಲು ಸುಂಕದ ಕಟ್ಟೆಯ ಪಕ್ಕದಲ್ಲೇ ಟೆಂಟ್-ಗಳನ್ನು ನಿರ್ಮಾಣಮಾಡಲಾಯಿತು. ಚೂಪಾದ  ಮುಳ್ಳು ಬೇಲಿಗಳನ್ನು ದಾಟಿ ಬಂಜಾರ ಜನಾಂಗದ ಜನ ಉಪ್ಪನ್ನು ಕಳ್ಳಸಾಗಣಿಗೆ ಮಾಡಿದರು. ಉಪ್ಪನ್ನು ಕಳ್ಳಸಾಗಣಿಕೆ ಮಾಡುವ ಒಂದು ಗುಂಪು, ಒಂದು ಕಡೆ ನಿಂತು ಅದನ್ನು ಎತ್ತಿ ಎಸೆಯುವರು, ಮರು ಪಕ್ಕ ನಿಂತಿರುವ ಗುಂಪು ಅದನ್ನು ತೆಗೆದುಕೊಳ್ಳುವುದು. ಇದಕ್ಕಾಗಿ, ಜೇನುನೊಣಗಳನ್ನು ಒಂದು ಸಣ್ಣ ಬುಟ್ಟಿಯಲ್ಲಿ ತಂದು ಸುಂಕದ ಕಟ್ಟೆಯ ಬಳಿ ತೆರೆದುಬಿಟ್ಟು, ಆ ಅವಕಾಶವನ್ನು ಬಳಸಿಕೊಂಡು ಉಪ್ಪನ್ನು ಕಳ್ಳಸಾಗಣಿಕೆ ಮಾಡುವುದು ನಡೆಯುತ್ತಿತ್ತು. ಕೆಲವು ಅಧಿಕಾರಿಗಳು ಲಂಚ ಪಡೆದುಕೊಂಡು ಅನುಮತಿ ನೀಡಿದರೂ ಸಹ. ಮುಳ್ಳುಬೇಲಿಗಳ ದಾರಿಯಲ್ಲಿ ಲಂಚವೂ, ಅಧಿಕಾರ ದುಷ್ಪ್ರಯೋಗವೂ, ಅತ್ಯಾಚಾರವೂ ಹೆಚ್ಚಾಗ ತೊಡಗಿತು. 

ಬಿಹಾರಿನಲ್ಲಿ ನಿರ್ಮಾಣ ಮಾಡಲಾದ ಮುಳ್ಳು ಬೇಲಿಯನ್ನು ದಾಟಿ ಉಪ್ಪನ್ನು ಕಳ್ಳಸಾಗಣಿಕೆ ಮಾಡಲು ಪ್ರಯತ್ನಿಸಿದ 112 ಜನರ ಒಂದು ಗುಂಪನ್ನು ಕಾವಲುಗಾರರು ತಡೆದು ನಿಲ್ಲಿಸಿದಾಗ ಅವರು ಆಯುಧಗಳಿಂದ ದಾಳಿ ಮಾಡಿ ಕಾವಲುಗಾರರನ್ನು ಕೊಂದು ಹಾಕಿ, ಉಪ್ಪನ್ನು ಸಾಗಾಣಿಕೆ ಮಾಡಿದ ಘಟನೆ ನಡೆದಿದೆ. 

ಬಂಜಾರ ಜನಗಳ ವಿರೋಧವನ್ನು ಕಟ್ಟಿಕೊಳ್ಳಲು ಆಗದು ಎಂದು, 800ಕ್ಕೂ ಹೆಚ್ಚಿನ ಕಾವಲುಗಾರರು ಕೆಲಸವನ್ನು ಬಿಟ್ಟರು. 115 ಕಾವಲುಗಾರರು ಹೊಡೆದಾಟದಲ್ಲಿ ಸತ್ತುಹೋದರು. 276 ಜನ ಉಪ್ಪು ಕಳ್ಳಸಾಗಣಿಕೆ ಮಾಡಲು ನೆರವಾದರೆಂದು ಕೆಲಸದಿಂದ ವಜಾಮಾಡಲಾಯಿತು. 30 ಜನ ಕೆಲಸದಿಂದ ಹೇಳದೇ ಕೇಳದೇ  ಓಡಿಹೋದರು. 23 ಜನರನ್ನು ನಾಲಾಯಕ್ ಎಂದು ಕೆಲಸದಿಂದ ತೆಗೆದುಹಾಕಿದರು. ಸುಂಕದ ಕಟ್ಟೆಯ ಮೂಲಕ ಉಪ್ಪು ಕಳ್ಳಸಾಗಣಿಕೆ ಮಾಡಿದರೆಂದು 1873ರಲ್ಲಿ ಸಿಕ್ಕಿಹಾಕಿಕೊಂಡವರ ಸಂಖ್ಯೆ 3,271. ಅದೇ 1877ರಲ್ಲಿ 6,077. 

ಕಾವಲುಗಾರರಿಗೆ ಭಾನುವಾರ ಸಹ ರಜೆ ಇಲ್ಲ. ಬಿಡುವಿಲ್ಲದೆ ಎರಡು ಹಗಲು – ಒಂದು ರಾತ್ರಿ ಎಂದು ಒಬ್ಬ ಕಾವಲುಗಾರ ಕೆಲಸ ಮಾಡಬೇಕು ಎಂಬುದು ನಿಯಮಯಾಗಿತ್ತು. ಹೀಗೆ ಒಂದು ಸೈನ್ಯವೇ ಸೇರಿಕೊಂಡು ಅಡಗಿಸುವ ಮಟ್ಟಿಗೆ ಉಪ್ಪಿನಿಂದ ಆಧಾಯವಿತ್ತು. 

ಭೂಮಿಗೆ ತೆರಿಗೆ ವಿಧಿಸುವ ಮೂಲಕ, ಜಮೀನ್ದಾರರು ತೊಂದರೆಗೆ ಒಳಗಾದರು. ಅವರ ವಿರೋಧದ ದನಿ ಲಂಡನ್ –ವರೆಗೆ ಕೇಳಿಸಿತು. ಆದರೆ, ಉಪ್ಪಿಗೆ ತೆರಿಗೆ ಹಾಕುವುದನ್ನು ವಿರೋಧಿಸಿದ ಸಾಮನ್ಯರ ದನಿ ಇಂಗ್ಲೆಂಡನ್ನು ಮುಟ್ಟಲೇ ಇಲ್ಲ. ಬದಲಾಗಿ, ಮುಂದೆ ಬಂದ ಗವರ್ನರ್-ಗಳೆಲ್ಲರೂ ಉಪ್ಪಿನ ಮೂಲಕ ಆಧಾಯವನ್ನು ಹೆಚ್ಚಿಸುವುದು ಹೇಗೆಂಬುದರಲ್ಲೇ ಗುರಿಯಾಗಿದ್ದರು.

ಕಳ್ಳಸಾಗಾಣಿಕೆಯ ಮೂಲಕ ವಶಪಡಿಸಿಕೊಂಡ ಉಪ್ಪನ್ನು ಸುಂಕದ ಕಟ್ಟೆಯ ನೌಕರರು ಸರಕಾರದ ಗಮನಕ್ಕೆ ತರದೆ ತಾವಾಗಿಯೇ ಕಡಿಮೆ ಬೆಲೆಗೆ ಮಾರಿದರು. ಅದಲ್ಲದೆ ಕಳ್ಳಸಾಗಣಿಯವರೊಂದಿಗೆ ಒಪ್ಪಂದ ಮಾಡಿಕೊಂಡು ಲಂಚ ಪಡೆಯುವುದನ್ನು ವಾಡಿಕೆಯಾಗಿಸಿಕೊಂಡರು. ಆದ್ದರಿಂದ ಆ ಮುಳ್ಳುಬೇಲಿಯ ಬಿಗಿ ತಪ್ಪಿತು. ಅದರಂತೆಯೇ ಅದರ ನಿರ್ವಹಣೆಯ ಖರ್ಚು ಹೆಚ್ಚಾಯಿತು. ನೌಕರರ ಸಂಖ್ಯೆಯನ್ನು ಕಡಿಮೆ ಮಾಡಬೇಕೆಂಬ ಕಂಪನಿಯ ಸಲಹೆಯ ಕಾರಣ, 4000 ಕಾರ್ಮಿಕರನ್ನು ತೆಗೆದು ಹಾಕಲಾಯಿತು. 

1876ರಲ್ಲಿ ಪದವಿಗೆ ಬಂದ ಮಾಯೋ ಪ್ರಭು (Richard Southwell Bourke Mayo) ಉಪ್ಪು ವ್ಯಾಪಾರದ ಕುರಿತು ಅಂದಿನ ದೇಶದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ತೀರ್ಮಾನಕ್ಕೆ ಬರಬಹುದೆಂದು ಹೇಳಿದರು. ಅದರ ನಂತರ, ಅಧಿಕಾರ ವಹಿಸಿಕೊಂಡ ನಾರ್ತ್ ಬ್ರೂಕ್ ಪ್ರಭು (Thomas George Baring Northbrook). ಈ ಮುಳ್ಳು ಬೇಲಿಯ ಮೂಲಕ ಬಹಳ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತಿದೆ, ಆದ್ದರಿಂದ, ಅದರ ಮೇಲಿನ ತೆರಿಗೆಯನ್ನು ವಜಾಮಾಡೋಣ’ ಎಂಬ ತೀರ್ಮಾನವನ್ನು ಮುಂದಿಟ್ಟರು. 

1876ರಲ್ಲಿ ಉಂಟಾದ ಬಂಗಾಳದ ಬರಗಾಲದ ಸಮಯದಲ್ಲೂ ಸಹಾ, ಉಪ್ಪಿನ ಮೇಲಿನ ತೆರಿಗೆಯನ್ನು ಸಂಪೂರ್ಣವಾಗಿ ವಜಾ ಮಾಡಲಿಲ್ಲ. ಅದಲ್ಲದೆ, ಬಂಗಾಳಕ್ಕೆ ಅಗತ್ಯವಾದ ಆಹಾರ ಸಾಮಗ್ರಿಗಳನ್ನು ಕೊಂಡುಹೋಗಲು ಈ ಮುಳ್ಳಿನ ಬೇಲಿ ಅಡ್ಡಿಯಾಗಿದೆ ಎಂಬ ಧ್ವನಿ ಏಳಲು ಪ್ರಾರಂಭವಾಯಿತು. ಆದರೂ ಸಹ, ಉಪ್ಪಿನ ಮೂಲಕ ದೊರಕುವ ವರಮಾನವನ್ನು ಕಳೆದುಕೊಳ್ಳಲು ಬ್ರಿಟೀಷ್  ಸರಕಾರ ಬಯಸಲಿಲ್ಲ. 

ಲಿಟ್ಟನ್ ಪ್ರಭು (Edward Robert Bulwer-Lytton) ಅವರ ಪ್ರಯತ್ನದಿಂದ, ಉಪ್ಪಿಗೆ ನಿಗದಿತ ಬೆಲೆ ನಿರ್ಣಯಿಸಿ, ಅದಕ್ಕಾದ ತೆರಿಗೆಯನ್ನು ಸುದಾರಿಸಲಾಯಿತು. 1880ರಲ್ಲಿ ಸುಂಕದ ಕಟ್ಟೆಗಳನ್ನು ಮುಚ್ಚಲಾಯಿತು. 1882ರಲ್ಲಿ ರಿಪ್ಪನ್ ಪ್ರಭು (George Robinson Ripon) ಭಾರತ ಇಡೀ ಒಂದು ಮೂಟೆಗೆ ನಿಗದಿತ ಬೆಲೆಯನ್ನು ನಿರ್ಧರಿಸಿ ಆಜ್ಞೆ ಹೊರಡಿಸಿದರು. ಆದರೂ ಭಾರತದ ಗಡಿ ಪ್ರದೇಶಗಳಲ್ಲಿ ಉಪ್ಪಿಗೆ ತೆರಿಗೆಯನ್ನು ವಿಧಿಸುತ್ತಲೇ ಬಂದರು. 

ಉಪ್ಪಿನ ತೆರಿಗೆಯಿಂದ ಉಂಟಾದ ಪರಿಣಾಮಗಳ ಬಗ್ಗೆ, ಪ್ರೇಮ್ ಚಂದ್ ಒಂದು ಕತೆಯನ್ನು ಬರೆದಿದ್ದಾರೆ. ‘ನಮಕ್ ಕಾ ದಾರೋಗ (नमक का दारोगा) ಎಂಬ ಕತೆಯಲ್ಲಿ ಶ್ರೀಮಂತ ಉಪ್ಪು ವ್ಯಾಪಾರಿಯೊಬ್ಬನ  ಬಂಡಿಗಳನ್ನು ಸುಂಕದ ಕಟ್ಟೆಗಳಲ್ಲಿ ವಶಪಡಿಸಿಕೊಳ್ಳುವ ಉಪ್ಪು ಇನ್ಸ್ಪೆಕ್ಟರ್ (Salt Inspector) ಹೇಗೆ ಕೆಲಸದಿಂದ ತೆಗೆದುಹಾಕಲ್ಪಟ್ಟು, ಅದೇ ಸಾಹುಕಾರನ  ಬಳಿ ನೌಕಾರನಾಗಿ ಸೇರಿಕೊಳ್ಳುತ್ತಾನೆ ಎಂಬುದನ್ನು ಹೇಳುತ್ತದೆ.

ಉಪ್ಪು ಸಾಮಾನ್ಯ ಜನಗಳ ದಿನನಿತ್ಯದ ಅಗತ್ಯದ ಪದಾರ್ಥ. ದಿನನಿತ್ಯದ ಬಳಕೆಯ ಆಹಾರ ಸಾಮಗ್ರಿಗಳು ಸುಲಭವಾಗಿ ಊರಿನಲ್ಲೇ ದೊರಕುತ್ತದೆ. ಆದರೆ ಉಪ್ಪು ಹೊರಗಿನಿಂದ ಬರಬೇಕು. ಅದಕ್ಕೆ ಉಪ್ಪಿನ ವ್ಯಾಪಾರಿಗಳನ್ನು ಅವಲಂಭಿಸಿ ಇರಬೇಕು. ಆ ವ್ಯಾಪಾರವನ್ನು ಏಕಸ್ವಾಮಿತ್ವ ಮಾಡಿಕೊಂಡು ಕಾಲೊನಿಯ ಸರಕಾರ ಹಣ ಸಂಪಾದನೆಗೆ ಇಳಿಯಿತು. ಇದರಿಂದ ಸಾಮಾನ್ಯ ಜನ ತೊಂದರೆಗೆ ಒಳಗಾದರು. ಉಪ್ಪಿಲ್ಲದಿದ್ದರೇ ಆಹಾರವೇ ಇಲ್ಲ ಎಂಬ ಕಾರಣದಿಂದ, ಉಪ್ಪನ್ನು ಪಡೆಯಲು ಅವರು ಹೆಚ್ಚು ಬೆಲೆ ಕೊಡಲು ಮುಂದಾದರು. ಪ್ರಜೆಗಳ ಮೂಲಭೂತ ಅಗತ್ಯವಾದ  ಉಪ್ಪನ್ನು  ಮೋಸಮಾಡಿ ವಶಪಡಿಸಿಕೊಂಡು ಬ್ರಿಟೀಷ್ ಸರಕಾರ ಹಣ ಸಂಪಾದನೆ ಮಾಡಿತು. 

ಅಡೆತಡೆಯಿಲ್ಲದ ಉಪ್ಪಿನ ವ್ಯಾಪಾರಕ್ಕೆ ಬದಲಾಗಿ, 1930, ಫೆಬ್ರವರಿ ತಿಂಗಳು, ಭಾರತೀಯರಿಂದ ಉತ್ಪಾದನೆಯಾಗುವ  ಉಪ್ಪಿಗೆ ಬ್ರಿಟೀಷ್  ಸರಕಾರ ಮತ್ತೆ ತೆರಿಗೆ ವಿಧಿಸಿತು. ಉಪ್ಪನ್ನು ಸರಕಾರ ಸಂಸ್ಥೆಗಳಿಗೆ ಮಾತ್ರವೇ ಮಾರಾಟ ಮಾಡಬೇಕೆಂದು ಉಪ್ಪಲಿಗರನ್ನು ಒತ್ತಾಯ ಮಾಡಿತು. 

ಆ ಆಜ್ಞೆಯನ್ನು ಹಿಂದೆ ಪಡೆಯಬೇಕೆಂದು ಬ್ರಿಟೀಷ್ ಸರಕಾರವನ್ನು ಗಾಂಧೀಜಿ ಮನವಿ ಮಾಡಿಕೊಂಡರು. ಅದನ್ನು ನಿರಾಕರಿಸಲಾಯಿತು. ಉಪ್ಪಿನ ಇತಿಹಾಸವನ್ನು ಅರಿತಿದ್ದ ಗಾಂಧಿ, ಅದು ಸಾಮಾನ್ಯ ಜನರ ಮೂಲಭೂತ ಸಮಸ್ಯೆ. ಅದಕ್ಕೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು ಎಂದು ಸತ್ಯಾಗ್ರಹ ಮಾರ್ಗದಲ್ಲಿ ಹೋರಾಟ ಮಾಡಲು ತೀರ್ಮಾನಿಸಿದರು. ಮಾರ್ಚ್ 12, 1930ರಂದು 78 ಸತ್ಯಾಗ್ರಹಿಗಳ ಜತೆಯಲ್ಲಿ ಅಹಮದಾಬಾದಿನಿಂದ ಗುಜರಾತಿನ ಸಮುದ್ರ ತೀರದಲ್ಲಿರುವ ದಂಡಿ ಕಡೆ, 240 ಮೈಲಿ ನಡೆ ಪಯಣವನ್ನು ಕೈಗೊಂಡರು. ಆಗ ಗಾಂಧಿಗೆ 61 ವರ್ಷ ವಯಸ್ಸು. 

24 ದಿನಗಳ ನಡೆಪಯಣದ ಅಂತ್ಯದಲ್ಲಿ, ದಂಡಿ ಸಮುದ್ರ ತೀರದಲ್ಲಿ ಸಮುದ್ರದ ನೀರನ್ನು ಕಾಯಿಸಿ ಉಪ್ಪು ತಯಾರಿಸಿ ಬ್ರಿಟೀಷ್ ಸರಕಾರದ ಕಾನೂನನ್ನು ಉಲ್ಲಂಘಿಸಿದರು. ತನ್ನಂತೆಯೇ ಉಳಿದವರನ್ನು ಉಪ್ಪು ಕಾಯಿಸುವ ಕಾರ್ಯದಲ್ಲಿ ತೊಡಗುವಂತೆ  ಹೇಳಿದರು. ಅದನ್ನು ತಡೆಯಲು ಪ್ರಯತ್ನಿಸಿದ ಪೋಲೀಸರ ಲಾಟಿಯ ದಾಳಿಗೆ ಒಬ್ಬ ಸತ್ಯಾಗ್ರಹಿಯ ತಲೆಗೆ ಪೆಟ್ಟು ಬಿದ್ದು ರಕ್ತ ಸೋರಿತು. ಆ ರಕ್ತದ ವೇಗ ಇಡೀ ಭಾರತಕ್ಕೆ  ಹರಡಿತು. ಅಂದು ಗಾಂಧಿಯ ಮುಷ್ಟಿಯಲ್ಲಿ ಇದ್ದದ್ದು ಕೇವಲ ಉಪ್ಪಲ್ಲ, ಅದು ಭಾರತದ ಪ್ರಜೆಗಳ ನಂಬಿಕೆ. ಉಪ್ಪು ಸತ್ಯಾಗ್ರಹದಿಂದ ಸಾವಿರಾರು ಜನ ಸೆರೆಯಲ್ಲಿ ಬಂಧಿಯಾದರು. ಇದನ್ನು ನಿಯಂತ್ರಿಸಲು ದಾರಿ ಕಾಣದೆ ಬ್ರಿಟೀಷ್ ಸರಕಾರ ಉಪ್ಪಿನ ಮೇಲಿನ ತೆರಿಗೆಯನ್ನು ತೆಗೆದುಹಾಕಿತು. 

ಉಪ್ಪು ಸತ್ಯಾಗ್ರಹ ಎಂಬುದು ಧರ್ಮಯುದ್ಧ ಮಾತ್ರವಲ್ಲ. ಅದು ಒಂದು ಮಹತ್ತರವಾದ ಇತಿಹಾಸದ ಪಾಠ. ಭಾರತದ ಪ್ರಜೆಗಳನ್ನು ಉಪ್ಪಿನ ಹೆಸರಿನಲ್ಲಿ ಮೊಸ ಮಾಡುತ್ತಿದ್ದ ಬ್ರಿಟೀಷ್ ಸರಕಾರಕ್ಕೆ ನೀಡಿದ ಅಂತಿಮ ಎಚ್ಚರಿಕೆ. ಸಾಮಾನ್ಯ ಜನಗಳ ಜೀವನದ ಹಕ್ಕನ್ನು ಅಪಹರಿಸಿಕೊಳ್ಳುವುದಕ್ಕೆ ವಿರೋಧವಾಗಿ ಕೆರಳಿದ ಕ್ರಾಂತಿ. ಅಧಿಕಾರದ ರಾಜಕೀಯವನ್ನು ಎದುರಿಸಲು ಉಪ್ಪನ್ನೂ ಸಹ ಆಯುಧವಾಗಿ  ಬಳಸಲು ಗಾಂಧಿಯಿಂದ ಸಾಧ್ಯವಾಯಿತು. ಉನ್ನತ ಮನುಷ್ಯರೇ ಉನ್ನತ ದಾರಿಗಳನ್ನು ರೂಪಿಸಿ ತೋರಿಸುತ್ತಾರೆ ಎಂಬುದನ್ನು ಗಾಂಧಿ ನಿರೂಪಿಸಿದರು. 

ಉಪ್ಪು ಸಾಗಣಿಯನ್ನು ತಡೆಯಲು ನಿರ್ಮಾಣ ಮಾಡಿದ ಮುಳ್ಳು ಬೇಲಿಯನ್ನು ಹುಡುಕಿ ಅಲೆದು ಜಗತ್ತಿಗೆ ತೋರಿಸಿದ ರಾಯ್ ಮಾರ್ಕ್ಸ್ ಹ್ಯಾಮ್, (Roy Moxham) ಅದಕ್ಕಾಗಿ ಭಾರತ ಪೂರ್ತಿಯಾಗಿ ತಿರುಗಿದ್ದಾರೆ. ಲಂಡನ್ ಪತ್ರಾಗಾರದಲ್ಲಿ ಇರುವ ದಾಖಲೆಗಳನ್ನು ದಿನಗಟ್ಟಲೇ ಓದಿದ್ದಾರೆ. ಅಲೆಮಾರಿಯಂತೆ ಶ್ವಾಸಕೋಶದಲ್ಲಿ ಧೂಳು ತುಂಬಿಕೊಂಡು ಹುಡುಕಾಡಿದರೂ ಮುಳ್ಳುಬೇಲಿಯನ್ನು ಕಂಡುಹಿಡಿಯಲು ಆಗಲಿಲ್ಲ. ಹೊಸ ಹೆದ್ದಾರಿಗಳು, ರೈಲು ಹಾದಿಗಳು  ನಿರ್ಮಾಣವಾದದ್ದು ಸುಂಕದಬೇಲಿಯನ್ನು ಗುರುತಿಲ್ಲದಂತೆ ಮಾಡಿದೆ. 

ಉತ್ತರ ಪ್ರದೇಶದಲ್ಲಿ ಎಡವಾ ಜಿಲ್ಲೆಯಲ್ಲಿ ಇರುವ ಒಂದು ಗ್ರಾಮದಲ್ಲಿ, ಹೂಳು ತುಂಬಿದ ಮುಳ್ಳುಬೇಲಿಯ ಒಂದು ಭಾಗವನ್ನು ಒಬ್ಬ ಕಳ್ಳ ಅವರಿಗೆ ತೋರಿಸಿದನು. ಅದೊಂದೇ ಉಪ್ಪಿಗಾಗಿ ನಿರ್ಮಾಣ ಮಾಡಿದ ಮುಳ್ಳುಬೇಲಿಗೆ ಪುರಾವೆ. ಈ ಪುರಾವೆಯೊಂದಿಗೆ ತನ್ನ ಉಪ್ಪು ತೆರಿಗೆಯ ಬಗ್ಗೆಯ ತನ್ನ ಅಧ್ಯಯನವನ್ನು ಸಂಕಲಿಸಿ, ಬ್ರಿಟೀಷ್ ಸರಕಾರ ಭಾರತವನ್ನು ಹೇಗೆ ಶೋಷಣೆ ಮಾಡಿತು ಎಂದು ಹಲವು ಸಾಕ್ಷ್ಯಾಧಾರಗಳೊಂದಿಗೆ ವಿವರಿಸಿ ಬರೆದಿದ್ದಾರೆ. 

ಉಪ್ಪು ವ್ಯಾಪಾರದಲ್ಲಿ ಅಂದು ಕಾಲೊನಿಯ ಸರಕಾರ ಕೈಗೊಂಡ ಅದೇ ಯುಕ್ತಿಗಳನ್ನು ಇಂದಿನ ವಾಣಿಜ್ಯ ಸಂಸ್ಥೆಗಳು ಆಯೋಡಿನ್ (Iodine)  ಬೆರೆಸಿದ ಉಪ್ಪು ಎಂದು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿವೆ. ಎಕನಾಮಿಕ್ಸ್ ಟೈಮ್ಸ್ ನಲ್ಲಿ ಒಂದು ವರದಿ ಪ್ರಕಟವಾಗಿದೆ. ಅದರ ಪ್ರಕಾರ, ಒಂದು ಕಿಲೋ ಉಪ್ಪು ಉತ್ಪಾದನೆ ಮಾಡಲು ಆಗುವ ಖರ್ಚು ರೂ. 1.40. ಅದರ  ಪೇಕಿಂಗ್ ಖರ್ಚು 50 ಪೈಸೆ. ಸಾಗಾಣಿಕೆ ಖರ್ಚು 90 ಪೈಸೆ. ತೆರಿಗೆಗಳು 30 ಪೈಸೆ. ಇತರ ಖರ್ಚುಗಳು 40 ಪೈಸೆ ಎಂದರೆ, ಮಾರಾಟ ಮಾಡಬೇಕಾದ ಬೆಲೆ ರೂ. 3.30. ಆದರೆ ಮಾರುವ ಬೆಲೆ ರೂ 11 ರಿಂದ 13. ದೊಡ್ಡ ವ್ಯಾಪಾರ ಸಂಸ್ಥೆಗಳು ಒಂದು ಕಿಲೋ ಉಪ್ಪಿನ ಮೂಲಕ ಕನಿಷ್ಟ 9 ರೂಪಾಯಿಗಳನ್ನು ಲಾಭವಾಗಿ ಗಳಿಸುತ್ತವೆ. ಇತಿಹಾಸ ಗುರುತಿಸಿ ಹೇಳುವ ಸರಳವಾದ ಸತ್ಯ. ಉಪ್ಪಿನ ಹೆಸರಿನಲ್ಲಿ ಇಂದಿಗೂ ಭಾರತದ ಪ್ರಜೆಗಳನ್ನು ಮೊಸಮಾಡುತ್ತಿದ್ದಾರೆ ಎಂಬುದೇ ನಿಜ! 

| ಇನ್ನು ನಾಳೆಗೆ |

‍ಲೇಖಕರು Admin

August 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: