ಪೆರುವಿನಲ್ಲಿ ಮತ್ತೆ ಬದಲಾವಣೆ…

ಮ ಶ್ರೀ ಮುರಳಿ ಕೃಷ್ಣ

ದಕ್ಷಿಣ ಅಮೆರಿಕಾದ ಪಶ್ಚಿಮ ಭಾಗದಲ್ಲಿರುವ ಪೆರು ಒಂದು ಸಣ್ಣ ದೇಶ. ಸುಮಾರು 3.4 ಕೋಟಿ ಜನಸಂಖ್ಯೆಯಿರುವ ಈ ದೇಶದ ಉತ್ತರದಲ್ಲಿ ಈಕ್ವೆಡಾರ್ ಮತ್ತು ಕೊಲಿಂಬಿಯಾ. ಪೂರ್ವದಲ್ಲಿ ಬ್ರೆಝಿಲ್, ಆಗ್ನೇಯದಲ್ಲಿ ಬೊಲೀವಿಯಾ, ದಕ್ಷಿಣದಲ್ಲಿ ಚಿಲಿ ದೇಶಗಳಿವೆ. ಇಲ್ಲಿ ಆ್ಯಂಡೀಸ್ ಪರ್ವತ ಶ್ರೇಣಿ ಮತ್ತು ಅಮೆಝಾನ್ ಮಳೆಗಾಡುಗಳು ಸಹ ಇವೆ. 

ಇಂಕಾ ನಾಗರಿಕತೆಯ ಮಾಚುಪಿಚ್ಚು ಕೋಟೆ ಇರುವ ಪ್ರದೇಶವನ್ನು UNESCO ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಿದೆ. ಇದಲ್ಲದೇ ಅಲ್ಲಿ ಇನ್ನು ಕೆಲವು ವಿಶೇಷ ಪುರಾತತ್ವ ತಾಣಗಳೂ ಇವೆ. ಪೆರುವಿನ ಆರ್ಥಿಕತೆ ವಿಶ್ವದಲ್ಲಿ 48ನೇ ಸ್ಥಾನವನ್ನು ಪಡೆದಿದೆ. ವಿಶ್ವ ಬ್ಯಾಂಕ್ ಅದರ ವರಮಾನದ ಮಟ್ಟವನ್ನು ಮೇಲ್ಮಧ್ಯಮ ಎಂದು ಗುರುತಿಸಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಇದು ಸರಾಸರಿಗಿಂತ ಮೇಲಿನ ಸ್ಥಾನದಲ್ಲಿದೆ.

ಇತ್ತೀಚೆಗೆ ಪೆರುವಿನಲ್ಲಿ ಅಧ್ಯಕ್ಷೀಯ ಚುನಾವಣೆ ಜರುಗಿತು. ಅದರಲ್ಲಿ ‘ಪೆರು ಲಿಬ್ರೆ’ ಪಕ್ಷದ ಅಭ್ಯರ್ಥಿ ಪೆಡ್ರೊ ಕ್ಯಾಸ್ಟಿಲೊ ವಿಜಯಶಾಲಿಗಳಾಗಿದ್ದಾರೆ (ಆದರೆ ಅವರು ಆ ಪಕ್ಷದ ಸದಸ್ಯರಲ್ಲ!). ಅವರು ಶೇ 50.13ರಷ್ಟು ಮತಗಳನ್ನು ಪಡೆದಿದ್ದಾರೆ. ಮತಗಳ ಅಂತರ ಕೇವಲ 44,263. ಅವರ ಪ್ರತಿಸ್ಪರ್ಧಿಯಾಗಿದ್ದವರು ‘ದಿ ಪಾಪ್ಯುಲರ್ ಫೋರ್ಸ್ʼ ಪಕ್ಷದ ಕೀಕೊ ಫ್ಯೂಜಿಮೋರಿ. ಆಕೆಯ ತಂದೆ ಅಲ್ಬರ್ಟೊ ಫ್ಯೂಜಿಮೋರಿ. ಪೆರುವಿನ ಮಿಲಿಟರಿ ಬೆಂಬಲದಿಂದ ಸರ್ವಾಧಕಾರಿ ಮತ್ತು  ಅಧ್ಯಕ್ಷರಾಗಿದ್ದರು. ಅವರ ಮೇಲೆ ಕೆಲವು ಗಂಭೀರ ಆರೋಪಗಳಿದ್ದವು. ಅವು ಸಾಬೀತಾದವು ಕೂಡ.

ಈ ಪಕ್ಷ ಮುಖ್ಯವಾಗಿ ಪೆರುವಿನ ಗಣ್ಯರ ಹಿತಾಸಕ್ತಿಯನ್ನು ಕಾಪಾಡುವ ಪಕ್ಷವಾಗಿದೆ. ಅದು ಈ ಚುನಾವಣೆಯ ಸಮಯದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಕ್ಯಾಸ್ಟಿಲೊ ಒಬ್ಬ ರ್ಯಾಡಿಕಲ್ ಕಮ್ಯುನಿಸ್ಟ್ ಎಂದು ಪ್ರಚಾರವನ್ನು ಮಾಡಿತು.  ಅಲ್ಲದೆ ಚುನಾವಣೆಯ ತರುವಾಯ ಕೀಕೊ ತಮ್ಮ ಪಕ್ಷದಿಂದ ಮತಗಳನ್ನು ಕಳುವು ಮಾಡಲಾಗಿದೆ ಎಂದು ಆರೋಪಿಸಿದರು. ಆದರೆ ಚುನಾವಣಾ ಅಧಿಕಾರಿಗಳು ಆಕೆಯ ಆಧಾರರಹಿತ ಆಪಾದನೆಯನ್ನು ತಳ್ಳಿ ಹಾಕಿದರು.

ಪೆರು ಲಿಬ್ರೆ ಮಾರ್ಕ್ಸಿಸ್ಟ್- ಲೆನಿನಿಸ್ಟರ ನಿಲುವು ಮತ್ತು ಅದಕ್ಕೆ ಸಂಬಂಧಿಸಿದ ತತ್ವಗಳನ್ನು ಅನುಸರಿಸುವ ರಾಜಕೀಯ ಪಕ್ಷ. ಒಂದು ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಕ್ಷೇತ್ರಗಳನ್ನು ರಾಷ್ಟ್ರೀಕರಿಸಬೇಕೆಂಬ ಬದ್ಧತೆಯ ಆಶಯ ಈ ಪಕ್ಷಕ್ಕಿದೆ ಎನ್ನಲಾಗಿದೆ. ಈ ಪಕ್ಷದ ಅಧ್ಯಕ್ಷ ವ್ಲಾಡಮಿರ್ ಸೆರ್ರನ್. ಅವರು ಪ್ರಾಂತೀಯ ರಾಜ್ಯಪಾಲರಾಗಿದ್ದರು. ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿದ್ದವು.  ಅವು ಸಾಬೀತಾದವು. ಹೀಗಾಗಿ ಅವರು ಚುನಾಚಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. 

ಪೆಡ್ರೊ ಕ್ಯಾಸ್ಟಿಲೊ ಒಂದು ಬಡ ಕುಟುಂಬದಲ್ಲಿ, ಖನಿಜ ಸಮೃದ್ಧ ಕಜಮರ್ಕ ಎಂಬ ಪ್ರದೇಶದಲ್ಲಿ ಜನಿಸಿದರು. ಒಬ್ಬ ಶಿಕ್ಷಕರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿ ಅವರು ಸಮಾಜವಾದಿ (ಎಡಪಂಥೀಯ) ವಿಚಾರಧಾರೆಗೆ ತೆರೆದುಕೊಂಡರು. ಅವರಿದ್ದ ಪ್ರಾಂತ್ಯದಲ್ಲಿ ಶೈನಿಂಗ್ ಪಾಥ್ ಎಂಬ ಮಾವೋವಾದಿ ಸಂಘಟನೆ ಪ್ರಬಲವಾಗಿತ್ತು. ಒಬ್ಬ ಸಾಮಾಜಿಕ ಕಾರ್ಯಕರ್ತರಾಗಿ ಅವರಿಗೆ ಈ ಉಗ್ರ ಸಂಘಟನೆಯ ಬಗೆಗೆ ಭಿನ್ನಾಭಿಪ್ರಾಯಗಳಿದ್ದವು. ಆದುದರಿಂದ ಅದನ್ನು ಎದುರಿಸಿದರು. ನಂತರ ಅವರು ಶಿಕ್ಷಕರ ಸಂಘಗಳನ್ನು ಕಟ್ಟುವುದರಲ್ಲಿ ಶ್ರಮಿಸಿದರು. 

2017ರಲ್ಲಿ ಶಿಕ್ಷಣ ಕ್ಷೇತ್ರದ ಸಂಘಗಳು ಸಂಬಳದ ಹೆಚ್ಚಳಕ್ಕಾಗಿ ಮತ್ತು ಬಡ್ಜೆಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಆಗ್ರಹಿಸಿ ಮುಷ್ಕರವನ್ನು ಹೂಡಿದವು. ಇದರಲ್ಲಿ ಪೆಡ್ರೊ ಕ್ಯಾಸ್ಟಿಲೋರ ಪಾತ್ರ ಗಮನಾರ್ಹವಾಗಿತ್ತು. ಈ ಮುಷ್ಕರ ಪೆರುವಿನಾದ್ಯಂತ ಹಬ್ಬಿತು. ಕೊನೆಗೆ ಅಂದಿನ ಅಧ್ಯಕ್ಷರಾಗಿದ್ದ ಕುಯಿನ್ಸ್ಕಿಮಾತುಕತೆ ನಡೆಸಿ ಶಿಕ್ಷಕರಿಗೆ ಕೆಲವು ಆರ್ಥಿಕ ಸವಲತ್ತುಗಳನ್ನು ನೀಡಿದರು.

ಕೂತುಹಲದ ವಿಷಯವೆಂದರೆ ಪಿಡ್ರೊ ಕ್ಯಾಸ್ಟಿಲೊ ತಮಗೆ ಕಮ್ಯುನಿಸಂ ಜೊತೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾರೆ.  ಆದರೆ ಅವರು ಆರ್ಥಿಕ ಪುನರ್ಹಂಚಿಕೆಗೆ ಸಂಬಂಧಿಸಿದಂತೆ ಕೆಲವು ನಿಲುವುಗಳನ್ನು ತಗೆದುಕೊಂಡಿದ್ದಾರೆ. ಆದರೆ ಅವರು ಸಾಮಾಜಿಕವಾಗಿ ಸಾಂಪ್ರದಾಯಿಕ ನಿಲುಮೆಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. 2006ರಲ್ಲಿ ಒಲ್ಲಾಂಟ ಹ್ಯುಮಲ ಎಂಬ ಜನಪ್ರಿಯ ಅಭ್ಯರ್ಥಿ ಎಡಪಂಥೀಯ ವೇದಿಕೆಯನ್ನು ಬಳಸಿಕೊಂಡು, ಚುನಾವಣೆಯಲ್ಲಿ ವಿಜಯಶಾಲಿಯಾಗಿ ಅಧ್ಯಕ್ಷರಾದರು. ನಂತರ ಅವರು ರಾಜಕೀಯವಾಗಿ ಸೆಂಟ್ರಿಸ್ಟಾಗಿ ನವಉದಾರ ನೀತಿಗಳಿಗೆ ಮಣೆಯನ್ನು ಹಾಕಿದರು. ಅವರು ಭ್ರಷ್ಟಾಚಾರದ ಆರೋಪಗಳಿಗೆ ಗುರಿಯಾದರು.

ಪೆಡ್ರೊ ಕ್ಯಾಸ್ಟಿಲೊ ಪೆರುವಿನ ಉಚ್ಚ ವರ್ಗದ ಗಣ್ಯರಿಗೆ ಸೊಪ್ಪು ಹಾಕುವುದಿಲ್ಲ ಎಂದಿದ್ದಾರೆ. ಆದರೆ ಅವರು ಸಂವಿಧಾನ ಸಭೆಯ ಮೂಲಕ ಸಾಂವಿಧಾನಿಕ ಸುಧಾರಣೆಗಳನ್ನು ಜಾರಿ ಮಾಡಿ, ಆರ್ಥಿಕತೆಯಲ್ಲಿ ಪ್ರಭುತ್ವಕ್ಕೆ ಹೆಚ್ಚಿನ ಪಾತ್ರ ಮತ್ತು ಖಾಸಗಿ ಕ್ಷೇತಕ್ಕೆ ಅನ್ವಯವಾಗುವಂತೆ ಸಮತೂಕದ ನಡೆಯನ್ನು ಅನ್ವಯಿಸಲಾಗುವುದು ಎಂದೂ ತಿಳಿಸಿದ್ದಾರೆ. ಇದನ್ನು ಬೊಲೀವಿಯಾದ ಅಧ್ಯಕ್ಷರಾಗಿದ್ದ ಇವೊ ಮೊರಾಲಿಸ್ ತೆಗೆದುಕೊಂಡ ನಿಲುವಿಗೆ ಹೋಲಿಸಬಹುದು.

ಕೋವಿಡ್ ಪೆರು ದೇಶವನ್ನು ಕಾಡಿದೆ. ಅಲ್ಲಿ ಇದರಿಂದ ಸಾವಿಗೀಡಾದವರ ಸಂಖ್ಯೆಯೂ ಜಾಸ್ತಿ ಇದೆ. ಅರ್ಥಿಕ ಕ್ಷೇತ್ರವೂ ನಲುಗಿದೆ.  2020ರ ಎರಡನೇ ತ್ರೈಮಾಸಿಕದ ಅಂತ್ಯದಲ್ಲಿ ಜಿಡಿಪಿ ಶೇ 30.2ರಷ್ಟು ಇಳಿಯಿತು. ಇವೆಲ್ಲ ಕಾರಣಗಳಿಂದ ಅಲ್ಲಿನ ಜನತೆ ಮಧ್ಯಮ (ಸೆಂಟ್ರಿಸ್ಟ್) ರಾಜಕೀಯ ಪಕ್ಷಗಳ ಬಗೆಗೆ ಅಸಮಾಧಾನಗೊಂಡಿದ್ದರು. ಅಂಚಿನಲ್ಲಿರುವವರ ಬೆಂಬಲ ಪೆಡ್ರೊ ಕ್ಯಾಸ್ಟಿಲೊ ಪರ ವಾಲಿತು. ಹೀಗಾಗಿ, ಅವರು ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದರು. ಪ್ರಜಾಸತ್ತಾತ್ಮಕ ಪರಿಯಲ್ಲಿ ಆಡಳಿತದ ಮೂಲಕ ಆರ್ಥಿಕ ಮರುಹಂಚಿಕೆ ನೀತಿಗಳನ್ನು ಪಾಲಿಸಿಕೊಂಡು ಹೋಗುವುದು ಒಂದು ದೊಡ್ಡ ಸವಾಲೇ ಸರಿ. ಈ ತರಹದ ನಡಿಗೆ ಈಕ್ವೆಡಾರ್ ಮತ್ತು ಬೊಲೀವಿಯಾದಲ್ಲಿ ಭಾಗಶಃ ಯಶಸ್ವಿಯಾಗಿದೆ.

2010ರ ದಶಕದ ಮೊದಲ ಕೆಲವು ವರ್ಷಗಳಲ್ಲಿ ದಕ್ಷಿಣ ಅಮೆರಿಕಾದಲ್ಲಿ ಅರ್ಜೈಂಟೈನ, ಬ್ರೆಝಿಲ್, ವೆನಿಝೂಲ ಮತ್ತು ಇನ್ನು ಕೆಲವು ದೇಶಗಳಲ್ಲಿ ಎಡಪಂಥದತ್ತ ವಾಲಿದ ಸರ್ಕಾರಗಳು ಅಸ್ತಿತ್ವಕ್ಕೆ ಬಂದವು. ಇದನ್ನು ‘ಪಿಂಕ್ ಅಲೆ’ ಎಂದು ಬಣ್ಣಿಸಲಾಯಿತು. ಆದರೆ 2010ರ ದಶಕದಲ್ಲಿ ಪುನಃ ‘ಸಾಂಪ್ರದಾಯಿಕ ಅಲೆ’ ತಲೆದೋರಿ ಬಲಪಂಥೀಯ ಸರ್ಕಾರಗಳು ಆಡಳಿತದ ಚುಕ್ಕಾಣಿಯನ್ನು ಹಿಡಿದವು. ‘ಇಪ್ಪತ್ತೊಂದನೇ ಶತಮಾನದ ಸಮಾಜವಾದ’ದ ಹೊಸ ಧ್ವಜಧಾರಕರಾಗಿ ಪೆಡ್ರೊ ಕ್ಯಾಸ್ಟಿಲೊ ಸಫಲರಾಗುತ್ತಾರೆಯೇ ಎಂಬುದನ್ನು ಕಾಲವೇ ತಿಳಿಸುತ್ತದೆ.

‍ಲೇಖಕರು Admin

August 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭ ಕಠಾರಿ

    ಪೆರು ದೇಶದ ಭೌಗೋಳಿಕ ವಿವರಣೆಯೊಂದಿಗೆ, ಆ ದೇಶದ ಜನರ ಹಿಂದಿನ ಮತ್ತು ಇಂದಿನ ರಾಜಕೀಯದ ಬದಲಾದ ಮನಸ್ಥಿತಿಯನ್ನು ಲೇಖನ ಕಟ್ಟಿಕೊಡುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: