ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ. ಟಿ. ಗಟ್ಟಿ ಪ್ರಾಮಾಣಿಕತೆಯನ್ನು ಪರೀಕ್ಷಿಸಹೊರಟಂತೆ ತೋರುತ್ತದೆ..

ಕೃಪೆ: ಅತ್ರಿ ಬುಕ್ ಸೆಂಟರ್

ಸ್ನೇಹಿತರೇ

ಕೆ. ಟಿ. ಗಟ್ಟಿಯವರು ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ಸರ್ಕಾರ (ಸಂಸ್ಕೃತಿ ಇಲಾಖೆ) ಕೆಲವು ಕ್ಷುಲ್ಲಕ ಕಾರಣಕ್ಕಾಗಿ ತಿರಸ್ಕರಿಸಿದೆ.

ಅವರು ಸರ್ಕಾರಕ್ಕೆ ಬರೆದ ಈ ಪತ್ರವನ್ನು ಓದಿದರೆ ಕರುಳು ಹಿಂಡಿದಂತಾಗುತ್ತದೆ.

ನಾವು ಸಾಹಿತಿ / ಕಲಾವಿದರುಗಳನ್ನು ಬೆಂಬಲಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಹೇಳಲಾರೆ ಅದು ಮಾನವೀಯತೆಯ ಪ್ರಶ್ನೆ.

ಅವರ ಪತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಇದರಿಂದಲಾದರೂ ಸರ್ಕಾರ ಅವರ ಅಸಹಾಯಕತೆಯ ಕಡೆಗೆ ಕಣ್ಣು ಹರಿಸುವಂತಾಗಲಿ.

ನಿಮ್ಮ ವಿಶ್ವಾಸದ
ಗಿರಿಜಾ ಶಾಸ್ತ್ರಿ 

ಕೃಪೆ: ಅತ್ರಿ ಬುಕ್ ಸೆಂಟರ್

ಕೃಪೆ: ಅತ್ರಿ ಬುಕ್ ಸೆಂಟರ್

 

ಕೆ. ಟಿ. ಗಟ್ಟಿ,

ವನಶ್ರೀ ಉಜಿರೆ-574240

ಫೋ: 9481755368, 08256-236416

ನಿರ್ದೇಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಬೆಂಗಳೂರು

ಸನ್ಮಾನ್ಯರೇ,

ವಿಷಯ: 4260-00 ರುಪಾಯಿ ಮೊತ್ತದ ನನ್ನ ವೈದ್ಯಕೀಯ ಚಿಕಿತ್ಸೆಯ ವೆಚ್ಚ ಪಾವತಿಗಾಗಿ
ನೀಡಿರುವ ಅರ್ಜಿ ವಾಪಾಸು ಬಂದಿರುವ ಬಗ್ಗೆ–

ಸರಕಾರಿ ಉದ್ಯೋಗಸ್ಥರು ವೆಚ್ಚದ ಬಿಲ್ ನೀಡಿ ಸರಕಾರದಿಂದ ವೈದ್ಯಕೀಯ ಚಿಕಿತ್ಸೆಯ ವೆಚ್ಚದ ಮೊತ್ತವನ್ನು ಪಡೆಯುತ್ತಾರೆ. ನನ್ನ ನಂಬಿಕೆಯಂತೆ, ಸರಕಾರಿ ಉದ್ಯೋಗಸ್ಥರು ಹೇಗೆ ಸಮಾಜದ ಸೇವಕರೋ, ಹಾಗೆಯೇ ಕಲಾವಿದರು ಮತ್ತು ಸಾಹಿತಿಗಳು ಕೂಡ ಸಮಾಜದ ಸೇವಕರು ಎಂಬ ಅರ್ಥದಲ್ಲಿ ಅವರಿಗೆ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ನೀಡಬೇಕೆಂದು ಅದಕ್ಕೆ ಅರ್ಹರಾದ ಕಲಾವಿದರು/ಸಾಹಿತಿಗಳಿಗೆ ಗುರುತು ಚೀಟಿ ನೀಡುವ ಕ್ರಮವನ್ನು ಸರಕಾರ ಸುಮಾರು ಮೂರು ದಶಕಗಳ ಹಿಂದೆ ಆರಂಭಿಸಿ ಅವರಿಗೆ ಗುರುತು ಚೀಟಿಯನ್ನು ನೀಡಿತು.

ಆಗ ನಾನು ಕೂಡ ಗುರುತು ಚೀಟಿ ಪಡೆದಿದ್ದೆ (ಗುರುತು ಸಂಖ್ಯೆ 18. ಪಡೆದ ದಿನ 01-08-1991).

ಈ ತನಕ ವೈದ್ಯಕೀಯ ಚಿಕಿತ್ಸೆಯ ವೆಚ್ಚದ ಪಾವತಿ ಬಯಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡುವ ಅರ್ಜಿಯಲ್ಲಿ ತನ್ನ ಗುರುತು ಸಂಖ್ಯೆ ಮತ್ತು ವೈದ್ಯಕೀಯ ವೆಚ್ಚದ ಬಿಲ್ ನೀಡಿ, ನಿಗದಿತ ಅರ್ಜಿಯಲ್ಲಿ ತನ್ನ ವಾರ್ಷಿಕ ಆದಾಯವನ್ನು ನಮೂದಿಸಿದರೆ ಸಾಕಾಗುತ್ತಿತ್ತು. ತಹಶಿಲ್ದಾರರಿಂದ ಅಥವಾ ಯಾವುದೇ ಮೂಲದಿಂದ ಆದಾಯ ದೃಢೀಕರಣ ಪತ್ರ ನೀಡಬೇಕೆಂಬ ನಿಯಮ ಇರಲಿಲ್ಲ. ಈಗ ಆದಾಯ ದೃಢೀಕರಣ ಪತ್ರ ಕಳಿಸಲು ಸೂಚಿಸಿದ್ದೀರಿ.

ಇದು ಕಲಾವಿದ/ಸಾಹಿತಿಯ ಅರ್ಹತೆ ಏನು, ಆತ ಯಾವ ಸ್ಥಿತಿಯಲ್ಲಿದ್ದಾನೆ ಎಂಬ ವಿಚಾರವನ್ನು ಬದಿಗೊತ್ತಿ, ಆತನ ಪ್ರಾಮಾಣಿಕತೆಯನ್ನು ಪರೀಕ್ಷಿಸಹೊರಟಂತೆ ತೋರುತ್ತದೆ.

ಕಳೆದ ಸುಮಾರು ಮೂವತ್ತು ವರ್ಷಗಳಲ್ಲಿ ನಾನು ನಾಲ್ಕೈದು ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಪಡೆದಿರುತ್ತೇನೆ. ಅರ್ಜಿಯಲ್ಲಿ ಪ್ರತಿ ಸಲವೂ ನನ್ನ ಗುರುತು ಚೀಟಿ ಸಂಖ್ಯೆಯನ್ನು ನಮೂದಿಸಿ, ನನ್ನ ವಾರ್ಷಿಕ ಆದಾಯವನ್ನು ಕೂಡ ಇಂತಿಷ್ಟು ಎಂದು ಬರೆದಿರುತ್ತೇನೆ.

ಯಾವ್ಯಾವಾಗಲೋ ಬರುವ ಅಲ್ಪಪ್ರಮಾಣದ ರಾಯಧನವೇ ನನ್ನ ಮುಖ್ಯ ಆದಾಯ. ಜೊತೆಗೆ, ಬ್ಯಾಂಕಿನಲ್ಲಿರುವ ಸ್ವಲ್ಪ ನಿರಖು ಠೇವಣೆಯಿಂದ ಬರುವ ಬಡ್ಡಿ. ಇದರ ಹೊರತು ನನಗೆ ಪಿಂಚಣಿಯಾಗಲಿ, ಯಾವುದೇ ಮೂಲದ ಇತರ ಆದಾಯವಾಗಲಿ ಇಲ್ಲ.

ಸರಕಾರಿ ಆಫೀಸಿನಿಂದ ಆದಾಯ ದೃಢೀಕರಣ ಪತ್ರವನ್ನು ಪಡೆಯುವುದು ಎಷ್ಟು ತ್ರಾಸದ ಕೆಲಸ ಎಂದು ನನಗೆ ಗೊತ್ತಿದೆ. ಅದಕ್ಕೆ ಹಲವು ಬಾರಿ ಗ್ರಾಮ ಕರಣಿಕರ ಆಫೀಸು, ಕಂದಾಯ ಇನ್ಸ್ಪೆಕ್ಟರರ ಆಫೀಸು, ಮತ್ತು ತಹಶಿಲ್ದಾರರ ಆಫೀಸಿಗೆ ಪಯಣ ಬೆಳೆಸಬೇಕಾಗುತ್ತದೆ.

ಈಗ ನನಗೆ ಎಂಬತ್ತು ವರ್ಷ. ಆರೋಗ್ಯ ಚೆನ್ನಾಗಿಲ್ಲ. ಆಫೀಸುಗಳಿಗೆ ಹೋಗುವ ತ್ರಾಣ ಇಲ್ಲ. ಆದುದರಿಂದ ನಾನು ವೈದ್ಯಕೀಯ ವೆಚ್ಚವನ್ನು ಪಡೆಯುವ ಇಚ್ಛೆಯನ್ನು ತೊರೆದಿರುತ್ತೇನೆ. ನಾನು ಈಗಾಗಲೇ ದೇಹದಾನದ ಅಪೇಕ್ಷೆಯನ್ನು ದಾಖಲಿಸಿರುವುದರಿಂದ, ಪ್ರಾಣದ ಮೇಲೆ ಹೆಚ್ಚು ಆಸೆ ಇಟ್ಟುಕೊಂಡಿಲ್ಲ.

ಇಂತಿ ತಮ್ಮ ವಿಶ್ವಾಸದ,
ಕೆ. ಟಿ. ಗಟ್ಟಿ

‍ಲೇಖಕರು avadhi

4 March, 2017

8 Comments

  1. Dr. Prabhakar M. Nimbargi

    ಸರಕಾರಿ ಅಧಿಕಾರಿಗಳು ಮೊದಲು ತಾವೆಷ್ಟು ಪ್ರಾಮಾಣಿಕರು ಎನ್ನುವುದನ್ನು ಪ್ರಮಾಣೀಕರಿಸಲಿ. ನಂತರ ಕೆ.ಟಿ. ಗಟ್ಟಿಯಂಥ ಸಾಹಿತಿಗಳ ಪ್ರಾಮಾಣಿಕತೆಯನ್ನು ಪ್ರಶ್ನಿಸಲಿ. ಲೇಖಕರಲ್ಲೂ ‘ಸೇಲೇಬಲ್‍’ ವರ್ಗದ ಲೇಖಕರಿದ್ದಾರೆ, ಅವರ ಪುಸ್ತಕಗಳು ಹೇಗೇ ಇರಲಿ, ಬಿಸಿ ದೋಸೆಯಂತೆ ಖರ್ಚಾಗುತ್ತವೆ. ಕನಿಷ್ಠ ಪಕ್ಷ ಅವರ ಪುಸ್ತಕವನ್ನು ಟೀಕಿಸಲಿಕ್ಕಾದರೂ ವಿರೋಧಿಗಳು ಖರೀದಿಸಬೇಕಲ್ಲವೇ? ಕೆ.ಟಿ. ಗಟ್ಟಿಯಂಥವರು ‘ರೀಡೇಬಲ್‍ ಮತ್ತು ಥಿಂಕೇಬಲ್‍’ ಲೇಖಕರೇ ಹೊರತು ‘ಸೇಲೇಬಲ್’ ಅಲ್ಲ.
    ಸರಕಾರಿ ಅಧಿಕಾರಿಗಳಿಗೆ ಶಾಸಕರ ಮಂತ್ರಿಗಳ ಟಿಎ ಬಿಲ್‍, ಆರೋಗ್ಯ ವೆಚ್ಚ, ಇತ್ಯಾದಿಗಳನ್ನು ಪ್ರಶ್ನಿಸುವ ಸಾಮರ್ಥ್ಯವಿಲ್ಲ. ಐದೈದು ವರ್ಷಗಳಿಗೊಮ್ಮೆತಮ್ಮ ಸಂಭಾವನೆ, ಭತ್ತೆಗಳನ್ನು ಹೆಚ್ಚಿಸಿಕೊಳ್ಳುವ, ದೊಡ್ಡ ಅಧಿಕಾರಿಗಳಷ್ಟೇ ಏಕೆ ಬಡ ಸಿಪಾಹಿಗಳ ವರ್ಗಾವಣೆಗೂ ಹಣ ಪೀಕಿಸಲು ಹಚ್ಚುವ, ಸರಕಾರಿ ವಾಹನಗಳಲ್ಲಿ ಮತ್ತು ವೆಚ್ಚದಲ್ಲಿ ಪ್ರವಾಸ ಮಾಡಿದ್ದು ಖಚಿತವಿದ್ದಾಗ್ಯೂ ಟಿಎ ಬಿಲ್ಲುಗಳನ್ನು ಪಡೆಯುವವರನ್ನು ಅವರು ಪ್ರಶ್ನಿಸಲಾರರು. ಆದರೆ, ಕೆ.ಟಿ. ಗಟ್ಟಿಯಂಥವರು ಜುಜುಬಿ 4260 ರೂಪಾಯಿಗಳ ಬಿಲ್ಲುಗಳನ್ನು ಪ್ರಶ್ನಿಸುತ್ತಾರೆ. ಪ್ರಸ್ತುತ ಇಲಾಖೆಯ ಮಂತ್ರಿಗಳೇ ಕಲಾವಿದರು. ಅವರಿಗೂ ಈ ವಿಷಯ ಅರ್ಥವಾಗಲಿಲ್ಲವೇ?

  2. Sangeeta Kalmane

    ಕೊನೆಯ ವಾಖ್ಯ ಓದಿ ಖೇದವಾಯಿತು. ತಮ್ಮ ಜೀವಿತಾವಧಿಯ ಉದ್ದಕ್ಕೂ ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯುತ್ತಮ ಬರಹ ನೀಡಿ ಕನ್ನಡದ ತೇರು ಎಳೆದ ಮೇರು ಸಾಹಿತಿಯವರಿಗೆ ಹೀಗೆ…!!!?? ಇದು ಖಂಡನೀಯ. ಸರಕಾರ ಇವರ ಮನವಿ ಕೂಡಲೆ ಮನ್ನಿಸಬೇಕು. ಸಾಹಿತಿಗಳೆಲ್ಲ ಅವರ ಬೆಂಬಲಕ್ಕೆ ನಿಲ್ಲಬೇಕು. ಸರ್ ನಿಮಗೆ ನನ್ನ ಪ್ರಣಾಮಗಳು.

  3. Sathyakama Sharma Kasaragodu

    ಕೆ ಟಿ ಗಟ್ಟಿ ಯವರು ನಟ ಕಮ್ ಸಚಿವ ರಾಗಿದ್ದಲ್ಲಿ ಅವರಿಗೆ ವಿದೇಶಿ ಚಿಕಿತ್ಸೆಯ ಭಾಗ್ಯ ಒಲಿಯುತ್ತಿತ್ತೇನೋ? ಅವರು ಬರೆಹಗಾರರು ತಾನೇ? ಕನ್ನಡಕ್ಕೆ ‘ಕೊಡುಗೆ’ ನೀಡುವವರು, ಬಂಗಲೆಗಳಲ್ಲಿ ಐಷಾರಾಮಿ ಜೀವನ ನಡೆಸುವ ಚಿತ್ರನಟರು! ಬರೆಹಗಾರರು ಅಲ್ಲ ತಾನೇ?

  4. C. N. Ramachandran

    ಮಾನ್ಯರೆ: ನಾನು ಪ್ರೊ. ಕೆ. ಟಿ. ಗಟ್ಟಿಯವರನ್ನು ಬಲ್ಲೆ; ಮಂಗಳೂರಿನಲ್ಲಿದ್ದಾಗ ಅವರ ನಿಕಟ ಪರಿಚಯವೂ ಇತ್ತು. ಪ್ರಾಮಾಣಿಕತೆ ಅವರ ವ್ಯಕ್ತಿತ್ವದಲ್ಲಿಯೇ ಹಾಸುಹೊಕ್ಕಾಗಿದೆ. ಅನೇಕಾನೇಕ ಉತ್ತಮ ಕಾದಂಬರಿಗಳನ್ನು ಬರೆದು ಸಾವಿರಾರು ಅಭಿಮಾನಿಗಳನ್ನು ಪಡೆದ, ಸರಕಾರವೇ ರಾಜ್ಯೋತ್ಸ್ವವ ಪ್ರಶಸ್ತಿಯನ್ನು ನೀಡಿ ಗೌರವಿಸಿದ ಸಾಹಿತಿಯೊಬ್ಬರು ತಮ್ಮ ಆದಾಯ ದೄಢೀಕರಣ ಪತ್ರವನ್ನು ಕೊಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ಸರಕಾರಕ್ಕೂ ನಮಗೂ ಕೂಡಿಯೇ ನಾಚಿಕೆಯಾಗಬೇಕು. ಪ್ರಾಯಃ, ಅವರು ಚಿಕಿತ್ಸಾ ಬಿಲ್‍ಅನ್ನು ೭೦,೦೦೦/ ಅಥವಾ ಒಂದು ಲಕ್ಷಕ್ಕೆ ಕೊಟ್ಟಿದ್ದರೆ ಅದನ್ನು (ತಮ್ಮ ಕಮೀಶನ್ ಮುರಿದುಕೊಂಡು) ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪಾಸ್ ಮಾಡುತ್ತಿದ್ದರು ಎಂದು ಕಾಣುತ್ತದೆ. ಸರಕಾರಕ್ಕೆ ಇದನ್ನು ತಿಳಿಯಪಡಿಸುವುದು ಹೇಗೆ ಎಂದು ಗೊತ್ತಾಗುತ್ತಿಲ್ಲ. ತುಂಬಾ ನೋವಾಗುತ್ತಿದೆ. ಸಿ. ಎನ್. ರಾಮಚಂದ್ರನ್

  5. kvtirumalesh

    ಶ್ರೀ ಗಟ್ಟಿಯವರಿಗೆ ಹೀಗೆ ಆಗಬಾರದಿತ್ತು. ಹಿರಿಯ ನಾಗರಿಕರ ಮೇಲೆ ಈ ದೃಢೀಕರಣಪತ್ರದ ಹೊರೆಯನ್ನು ಹೊರಿಸುವುದು ಸರಿಯಲ್ಲ. ಕೂಡಲೇ ಮೇಲಧಿಕಾರಿಗಳು ಈ ಪ್ರಮಾದವನ್ನು ಸರಿಪಡಿಸಬೇಕು.
    ಕೆ.ವಿ. ತಿರುಮಲೇಶ್

  6. ಹಜರತಅಲಿ ದೇಗಿನಾಳ

    ಮಹಾನ್ ದಯಾಳು ಕರುಣಾಳು ಮತ್ತು ನ್ಯಾಯಪರತೆಗೆ ತುಂಬಾ ಹೆಸರುವಾಸಿಯಾಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಹಿರಿಯರಾದ ಶ್ರೀ.ಕೆ ಟಿ ಗಟ್ಟಿಯವರ ವೈಧ್ಯಕೀಯ ವೆಚ್ಚವನ್ನು ಆದಷ್ಟು ಶೀಘ್ರವಾಗಿ ಪಾವತಿಸುತ್ತಾರೆಂದು ನಿರೀಕ್ಷಿಸೋಣ!

  7. Shyamala Madhav

    ಕೆ. ಟಿ. ಗಟ್ಟಿ ಅವರು ನ್ಯಾಯಯುತವಾಗಿ ಸರಕಾರದಿಂದ ತಮಗೆ ಬರಬೇಕಾದ್ದನ್ನು ಮಾತ್ರ ಅಪೇಕ್ಷಿಸಿದ್ದರು. ಹಾಗೆಂದರೆ ಅವರು ಸಂಕಷ್ಟದಲ್ಲಿದ್ದಾರೆಂದು ಅರ್ಥವಲ್ಲ. ರಾಜ್ಯೋತ್ಸವ ಪ್ರಶಸ್ತಿ ನೀವಿದ ಸರಕಾರವೇ ಅವರಿಂದ ಧೃಧೀಕರಣ ಪತ್ರ ಕೇಳುವುದು ಮಾತ್ರ ಬರೀ ಅಸಮಂಜಸ. ಸಿ. ಎನ್..ರಾಮಚಂದ್ರನ್ ಅವರಂದಂತೆ .ನಾಚಿಕೆಗೇಡು. ಗಟ್ಟಿ ಅವರೋ ಸ್ಥಿತಪ್ರಜ್ಞರು; ನಿಸ್ಪೃಹರು .. ಇನ್ನೀಗ ಸರಕಾರ ಕೊಟ್ಟರೂ ತೆಗೆದು ಕೊಳ್ಳುವವರು ಅವರಲ್ಲ. ಅಭಿಮಾನಧನರೂ , ಮಹಾಮಾನವರೂ ಆದ ಈ ಶಿಕ್ಶಣ ತಜ್ಞ, ವಿಚಾರವಾದಿ ಸಾಹಿತಿಶ್ರೇಷ್ಠರನ್ನು ನಮ್ಮ ವಿಶ್ವವಿದ್ಯಾಲಯಗಳು ಎನ್ದೋ ಗೌರವ ದಾಕ್ಟರೇಟ್ ನೀಡಿ ಗೌರವಿಸಬೇಕಿತ್ತು

  8. ಪ್ರೇಮಲತ ಬಿ.

    ಕನ್ನಡನಾಡಲ್ಲಿ ಎಲ್ಲ ನಿಯಮಗಳು ಬಹುಶಃ ಬರೀ ಶ್ರೀಸಾಮಾನ್ಯರಿಗೆ ಮಾತ್ರ ಅನ್ವಯವಾಗುತ್ತದೇನೋ? ಎಂಭತ್ತು ವರ್ಷದವರು ಆಫೀಸುಗಳಿಗೆ ಎಡತಾಕಿದರೂ ಲಂಚವಿಲ್ಲದೆ ದ್ರುಡೀಕರಣ ಪತ್ರ ಸಿಗದು!! ಕನ್ನಡ ಸಂಸ್ಕೃತಿ ಇಲಾಖೆಗೆ ನಾಚಿಕೆಯಾಗಬೇಕು.
    ಅವಧಿ ಪತ್ರಿಕೆ ಗಟ್ಟಿಯವರ ಬ್ಯಾಂಕ್ ವಿವರ ಕೊಟ್ಟಲ್ಲಿ ಕನ್ನಡದ ಓದುಗರಾದ ನಾವು ಇದನ್ನು ಭರಿಸಬಹುದಲ್ಲವೇ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading